24/6/26

ಸ್ಥಾವರಕ್ಕಳಿವುಂಟು ವಿಜ್ಞಾನಕ್ಕಳಿವಿಲ್ಲ

ಕೆಲ ದಿನಗಳಿಂದ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಅಣು ಸ್ಥಾವರದ ಬಗೆಗಿನ ಚರ್ಚೆ ಹಾಗೂ ಹೋರಾಟ ಜೋರಾಗಿದೆ. ಸ್ಥಾವರ ನಿರ್ಮಾಣಕ್ಕೆ ಸಾಗರದ ಬೇಸೂರು ಸುತ್ತ ಮುತ್ತಲಿನ ಜಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಹಾಗೂ ಇದನ್ನು ತಡೆಯಬೇಕು ಎಂದು ಶಾಸಕರ ಸಮ್ಮುಖದಲ್ಲಿ ಸಭೆಯೂ ನಡೆಯಿತು. ಎಂದಿನಂತೆ ಫೇಸ್ಬುಕ್, ಇನ್ಸ್ಟಾಗ್ರಾಮ್ ತುಂಬೆಲ್ಲ ಅಣು ಸ್ಥಾವರದಿಂದ ಇಡೀ ತಾಲೂಕು ಸ್ಮಶಾನದಂತೆ ಆಗುವುದು, ಜನರೆಲ್ಲರಿಗೂ ಕ್ಯಾನ್ಸರ್ ಉಂಟಾಗಿ, ಹುಟ್ಟುವ ಮಕ್ಕಳೆಲ್ಲಾ ಊನವಾಗಿ ಹುಟ್ಟಿ ನೆಲವೇ ಹಾಳಾಗುತ್ತದೆ ಎಂಬರ್ಥದ ಲೇಖನ, ವಿಡಿಯೋಗಳು ಹರಿದಾಡುತ್ತಿವೆ. ಹೋರಾಟದ ಸಭೆಯಲ್ಲಿ ಸೇರಿದ್ದ ಹಲವು ಜನರ, ಗಣ್ಯರ ಅಭಿಪ್ರಾಯವೂ ಇದೇ ಆಗಿತ್ತು. 

ವಿಜ್ಞಾನದಲ್ಲಿ ಅಲ್ಪ ಆಸಕ್ತಿ ಹೊಂದಿರುವ ನನಗೆ ಈ ಮೇಲಿನ ಆರೋಪಗಳೆಲ್ಲವೂ ಉತ್ಪ್ರೇಕ್ಷೆ ಎನಿಸುತ್ತದೆ. ಅಣು ಶಕ್ತಿಯ ವಿಚಾರ ಬಂದಾಗ ಸುಲಭವಾಗಿ ಎಲ್ಲರೂ ಅಡಗೂಲಜ್ಜಿ ಕಾಲದ ಚೆರ್ನೊಬಿಲ್ ಉದಾಹರಣೆ ನೀಡುತ್ತಾರೆ. ಅದು ನಡೆದದ್ದು ೧೯೮೬ರಲ್ಲಿ. ನಂತರದ ದಿನಗಳಲ್ಲಿ ಈ ವಿಭಾಗದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಿವೆ. ಈಗಿನ ಸ್ಥಾವರಗಳು Generation ।।। ಮತ್ತು ।।।+ ಶ್ರೇಣಿಯವು. ಅಪಘಾತದ ಸಮಯದಲ್ಲಿ ವಿದ್ಯುತ್ ಮೇಲೆ ಅವಲಂಬಿತವಾಗದೆ ಸಹಜ ಗುರುತ್ವಾಕರ್ಷಣೆ ಮೇಲೆ ಕೆಲಸ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀರು ಪ್ರವಾಹದಂತೆ ನುಗ್ಗಿ ಇಂಧನವನ್ನು ಶಾಂತಗೊಳಿಸುತ್ತದೆ. ಇದೆಲ್ಲದಕ್ಕೂ ಮೇಲಾಗಿ ಚೆರ್ನೊಬಿಲ್ ಸಹ ಅಲ್ಲಿನ ಆಡಳಿತ ವಿಫಲತೆಯಿಂದಾಗಿ ಸಂಭವಿಸಿದ ಘಟನೆಯೇ ಹೊರತು, ವಿಜ್ಞಾನದ ತಪ್ಪಿನಿಂದಲ್ಲ. ೧೨೦ ಕಿಲೋಮೀಟರು ವೇಗದಲ್ಲಿ ಚಲಿಸುತ್ತಾ, ಬೈಕಿನ ಹ್ಯಾಂಡಲ್ ಬಿಟ್ಟು, ಹೆಲ್ಮೆಟ್ ಬಿಸಾಕಿ, ಬೈಕಿನ ಮೇಲೆ ನಿಂತು ಸಾಹಸ ಮಾಡಿದ ವ್ಯಕ್ತಿಯೊಬ್ಬ ಬಿದ್ದು ಸಾಯುತ್ತಾನೆ. ಆಗ ನಾವು ಮುಂದೆಂದೂ ಬೈಕು ಮುಟ್ಟುವುದಿಲ್ಲವೇ? ಅದು ಕೇವಲ ಚಾಲಕನ ಅಜಾಗರೂಕತೆಯಷ್ಟೇ. ಬೈಕಿನ ಸಮಸ್ಯೆಯಲ್ಲ. ಚೆರ್ನೋಬಿಲ್ ನಲ್ಲಿ ಆಗಿದ್ದೂ ಸಹ ಅದೇ. 

ಆಧುನಿಕ ಅಣು ಸ್ಥಾವರಗಳಲ್ಲಿ ಜಿರ್ಕೋನಿಯಂನಿಂದ ಮಾಡಿದ ನಿರ್ವಾತ ಟ್ಯೂಬಿನೊಳಗೆ ಅಣು ಇಂಧನವನ್ನು ಇರಿಸಲಾಗುತ್ತದೆ. ಹೋರಾಟದ ಸಭೆಯಲ್ಲಿ ಮಾತನಾಡಿದ ರೋಹಿತ್ ಈ ಇಂಧನ ಜಾರ್ಖಂಡ್ ನಿಂದಲೇ ಬರಬೇಕು, ಹಾಗೂ ಇದು ಮಾರ್ಗ ಮಧ್ಯೆ ಸಿಡಿಯಬಹುದು ಎಂದು ಘೋಷಿಸಿ ಬಿಟ್ಟರು. ಇದು ಸಂಪೂರ್ಣ ತಪ್ಪು ಕಲ್ಪನೆ. ಕಳೆದ ದಶಕದಲ್ಲಿ ಭಾರತವು ವಾಜಪೇಯಿಯವರ ಕಾಲದಲ್ಲಿ ಅಣು ಪರೀಕ್ಷೆ ನಡೆಸಿತ್ತು. ಈ ಕಾರಣಕ್ಕೆ ಭಾರತದ ಮೇಲೆ ನಿರ್ಬಂಧ ಹೇರಲಾಗಿತ್ತು. ಒಳ್ಳೆಯ ಅಣು ಇಂಧನವನ್ನು ಬೇರೆ ದೇಶಗಳಿಂದ ಖರೀದಿಸಲು ಸಾಧ್ಯವಿರಲಿಲ್ಲ.  ಈ ಸಂಧರ್ಭದಲ್ಲಿ ನಿರ್ಮಿಸಿದ ಎಲ್ಲಾ ಅಣು ಸ್ಥಾವರಗಳು ಜಾರ್ಖಂಡ್ನ ಅಲ್ಲಿ ಸಿಗುವ ಕೆಳ ದರ್ಜೆಯ ಇಂಧನವನ್ನೇ ಬಳಸಬೇಕಿತ್ತು. ಈಗ ಬಹುಶಃ ಥೋರಿಯಂ ಬಳಸಬಹುದು. ಭಾರತದ ಬಹುತೇಕ ಸ್ಥಾವರಗಳಲ್ಲಿ ಬಳಸುವುದು ಯುರೇನಿಯಂ ಆಕ್ಸೈಡ್(U2O). ರೋಹಿತ್ ಅವರು ಹೇಳಿದಂತೆ ಅದನ್ನು ಸಾಗಣೆ ಮಾಡುವಾಗ ಬಾಂಬಿನಂತೆ ಸ್ಪೋಟಗೊಳ್ಳುವುದಿಲ್ಲ. ವೆಪನ್ ದರ್ಜೆಯ ಯುರೇನಿಯಂ ಶುದ್ಧತೆಗೂ, ಈ U2O ಗೂ ಬಹಳ ವ್ಯತ್ಯಾಸವಿದೆ. ವೆಪನ್ ದರ್ಜೆಯ ಯುರೇನಿಯಂ ಸಹ ಹಾಗೆ ಸುಲಭಕ್ಕೆ ಸಿಡಿಯುವುದಿಲ್ಲ. ವಿದಳನದ(ಫಿಷನ್) ಸರಪಳಿ ಕ್ರಿಯೆಯನ್ನು (ಚೈನ್ ರಿಯಾಕ್ಷನ್) ಪ್ರಚೋದಿಸುವುದು ಸುಲಭದ ತಂತ್ರಜ್ಞಾನ ಅಲ್ಲ. ಅಷ್ಟು ಸುಲಭವಿದ್ದಿದ್ದರೆ ಇಂದು ಜಗತ್ತಿನ ಹಲವು ರಾಷ್ಟ್ರಗಳು ಅಣು ಬಾಂಬ್ ಹೊಂದುತ್ತಿದ್ದರು. ಇದನ್ನು ಸಾಗಣೆ ಮಾಡುವ ಕಂಟೇನರ್ ಬೆಂಕಿಯನ್ನೂ ತಡೆಯಬಲ್ಲದು. ಈ ರೀತಿ ಸ್ಪೋಟಗೊಂಡ ದಾಖಲೆ ಮಾನವ ಇತಿಹಾಸದಲ್ಲಿಯೇ ಇಲ್ಲ. ಈ U2O ಅಪಾಯಕಾರಿ ವಸ್ತು ಅಲ್ಲ. ಇದರ ಪಕ್ಕವೇ ನಿಂತರೂ ನಮಗೆ ತೊಂದರೆ ಇಲ್ಲ. ಇದು ಪ್ರಕೃತಿಯಲ್ಲಿ ದೊರೆಯುವ ಸಹಜ ಖನಿಜ. 

ಇನ್ನು ವಿಕಿರಣ ಸೋರಿಕೆಯ ವಿಷಯಕ್ಕೆ ಬರೋಣ. ಈ ಇಂಧನವನ್ನು ಹಲವು ಇಂಚು ದಪ್ಪವಿರುವ ಸ್ಟೀಲ್ ಪಾತ್ರೆಯೊಳಗೆ ಇರಿಸುತ್ತಾರೆ. ಇದರ ಸುತ್ತ ಹಲವು ಅಡಿಗಳಷ್ಟು ದಪ್ಪನೆಯ ಕಟ್ಟಡ ಕಟ್ಟಲಾಗುತ್ತದೆ. ಇದನ್ನು ರಿಯಾಕ್ಟರ್ ಕೋರ್ ಎನ್ನುತ್ತಾರೆ. ಇದು ಎಷ್ಟು ಗಟ್ಟಿಮುಟ್ಟಾಗಿ ಇರುತ್ತದೆ ಎಂದರೆ, ಇದರ ಮೇಲೆ ವಿಮಾನ ಪತನಗೊಂಡು ಬಿದ್ದರೂ ಕಟ್ಟಡ ಹಾನಿಯಾಗುವುದಿಲ್ಲ. ಒಂದು ಹಂತದ ಭೂಕಂಪ, ಪ್ರವಾಹಗಳನ್ನು ತಡೆದುಕೊಳ್ಳುವ ಶಕ್ತಿಯೂ ಈ ಕಟ್ಟಡಕ್ಕೆ ಇರುತ್ತದೆ. ಇದರಿಂದ ವಿಕಿರಣ ಹೊರ ಬರುವ ಸಾಧ್ಯತೆ ಬಹಳ ಕಡಿಮೆ. ಸ್ಥಾವರದ ಹತ್ತಿರವೇ ಬದುಕುವ ಒಬ್ಬ ಮನುಷ್ಯ ವರ್ಷಕ್ಕೆ ಸರಾಸರಿ ೦.೧ ಮೈಕ್ರೋ ಸಿವರ್ಟ್ಸ್ ನಷ್ಟು ವಿಕಿರಣಕ್ಕೆ ಒಡ್ಡಿಕೊಳ್ಳುತ್ತಾನೆ. ಇದು ಎಷ್ಟು ಕಡಿಮೆ ಎಂದರೆ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ-೪೦ ಎಂಬ ಧಾತು ಸಹ ಇಷ್ಟೇ ವಿಕಿರಣ ಸೂಸುತ್ತದೆ. ಒಂದು ವರ್ಷದ ಸ್ಥಾವರದ ಬಳಿಯ ಬದುಕು, ಒಂದು ಬಾಳೆಹಣ್ಣು ತಿಂದಷ್ಟು ವಿಕಿರಣಕ್ಕೆ ಸಮ. ಉಳಿದಂತೆ ಐದು ತಾಸಿನ ವಿಮಾನ ಪ್ರಯಾಣ ೪೦ ಮೈಕ್ರೋ ಸಿವರ್ಟ್ಸ್, ಎದೆಯ ಕ್ಷ ಕಿರಣ ೧೦೦ ಮೈಕ್ರೋ ಸಿವರ್ಟ್ಸ್, ಧೂಮಪಾನ ೧೬೦೦ ಮೈಕ್ರೋ ಸಿವರ್ಟ್ಸ್. ಇವೆಲ್ಲಾ ಹೋಗಲಿ ಸೂರ್ಯ ಸಹ ನಮ್ಮ ಮೇಲೆ ವರ್ಷಕ್ಕೆ ೩೦೦ ಮೈಕ್ರೋ ಸಿವರ್ಟ್ಸ್ ನಷ್ಟು ವಿಕಿರಣ ಸೂಸುತ್ತಾನೆ. ಸ್ಥಾವರದ ಗೇಟಿನ ಗಾರ್ಡ್ ಕಿಂತಲೂ, ಬಾಳೆಹಣ್ಣಿನ ಪಾಯಸ ತಿಂದ ಅಥವಾ ಬಿಸಿಲಿನಲ್ಲಿ ಕೆಲಸ ಮಾಡುವ ವ್ಯಕ್ತಿಗೇ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು!

ಸ್ಥಾವರದಲ್ಲಿ ನದಿಯ ನೀರನ್ನು ಬಳಸಿ, ವಿಕಿರಣಯುಕ್ತ ನೀರನ್ನು ವಾಪಸು ನದಿಗೆ ಬಿಡಲಾಗುತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟರು. ಆದರೆ ಇದೂ ಸಹ ಸುಳ್ಳು. ರಿಯಾಕ್ಟರ್ ಕೋರ್ ಭಾಗದಲ್ಲಿ ಸಾಮಾನ್ಯ ನೀರನ್ನು ಬಳಸುವುದಿಲ್ಲ. ಇದನ್ನು ಹೆವಿ ವಾಟರ್(D2O) ಎಂದು ಕರೆಯುತ್ತಾರೆ. ವಿದಳನದಿಂದ ಉತ್ಪತ್ತಿಯಾದ ಶಾಖದಿಂದ ಈ ನೀರನ್ನು ಬಿಸಿ ಮಾಡಿ, ಇದರ ಆವಿಯಿಂದ ಟರ್ಬೈನ್ ತಿರುಗಿಸಲಾಗುತ್ತದೆ. ನಂತರ ಈ ನೀರನ್ನು ಸ್ಥಾವರಕ್ಕೆ ಮರು ಪೂರಣ ಮಾಡಲಾಗುತ್ತದೆ. ಹೆವಿ ವಾಟರ್ ದುಬಾರಿ ವಸ್ತುವಾದ್ದರಿಂದ ಹಾಗೂ ಇದರಲ್ಲಿ ವಿಕಿರಣ ಇರುವುದರಿಂದ ಇದನ್ನು ಹೊರಗೆ ಬಿಡುವುದೇ ಇಲ್ಲ. ಈ ನೀರನ್ನು ತಣಿಸಲು ಸೆಕೆಂಡರಿ ನೀರನ್ನು ಬಳಸಲಾಗುತ್ತದೆ. ಈ ಎರಡೂ ಬಗೆಯ ನೀರು ಎಂದಿಗೂ ಸ್ಥಾವರದಿಂದ ಹೊರಗೆ ಬರುವುದೇ ಇಲ್ಲ. ಇದರ ಮರು ಬಳಕೆ ಮಾಡುತ್ತಲೆ ಇರುತ್ತಾರೆ. ಸೆಕೆಂಡರಿ ನೀರನ್ನು ತಣಿಸಲು ನದಿಯ ನೀರನ್ನು ಬಳಸುವುದು ನಿಜವಾದರೂ, ಈ ನೀರು ಅಣು ಇಂಧನವನ್ನು ಮುಟ್ಟುವುದೇ ಇಲ್ಲ. ನದಿಯ ನೀರು ರಾಸಾಯನಿಕವಾಗಿ ಬದಲಾಗುವುದಿಲ್ಲ. ಆದರೆ ತಾಪಮಾನ ೮-೧೦ ಡಿಗ್ರಿ ಯಷ್ಟು ಜಾಸ್ತಿಯಾಗುತ್ತದೆ. ಇದನ್ನು ವಾಪಸು ನದಿಗೆ ಬಿಡುವುದರಿಂದ ಜೀವಿಗಳಿಗೆ ತೊಂದರೆಯಾಗುತ್ತದೆ ಎಂದು, ಇದನ್ನು ಒಮ್ಮೆಲೇ ಅತಿ ಆಳಕ್ಕೆ ಬಿಡುತ್ತಾರೆ. ಇದೆಲ್ಲವನ್ನೂ ಮಾಪಿಸಲು ಹಲವು ಸೆನ್ಸರ್ ಗಳ ವ್ಯವಸ್ಥೆ ಸ್ಥಾವರದಲ್ಲಿ ಇರುತ್ತದೆ. ವಿಕಿರಣದ ಸಮಸ್ಯೆ ಇಲ್ಲವೆಂದ ಮೇಲೆ ರೂಪಾಂತರದ(ಮ್ಯುಟೇಷನ್) ಸಮಸ್ಯೆ ಸಹ ಇಲ್ಲವೆನ್ನಬಹುದು. ರೂಪಾಂತರ ಪ್ರಕೃತಿಯ ಒಂದು ರುದ್ರ ನಾಟಕ. ಸ್ಥಾವರ ಇರಲಿ ಬಿಡಲಿ ಇದು ನಡೆಯುತ್ತಲೇ ಇರುವ ಪ್ರಕ್ರಿಯೆ. ಇದು ಯಾವಾಗಲೂ ಕೆಟ್ಟದ್ದು ಎಂದು ಭಾವಿಸುವುದು ತಪ್ಪು. ಮನುಷ್ಯ ಹಲವು ಬಾರಿ ರೂಪಾಂತರ ಹೊಂದಿಯೇ ಮನುಷ್ಯನಾಗಿದ್ದು. 

ಈಗಾಗಲೇ ಕೈಗಾ ಸ್ಥಾವರ ಕೆಲಸ ಮಾಡುತ್ತಿರುವುದರಿಂದ ಅದರ ಉದಾಹರಣೆ ತೆಗೆದುಕೊಳ್ಳೋಣ. ಕೈಗಾ ಇರುವುದು ಕಾರವಾರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಿರುವ ಕದ್ರಾ ಅಣೆಕಟ್ಟೆಯ ಪ್ರದೇಶದಲ್ಲಿ. ಇದರ ಸುತ್ತ ಮುತ್ತಲೂ ದಟ್ಟ ಕಾಡಿದೆ. ಅಣಶಿ ಹುಲಿ ಸಂರಕ್ಷಿತ ಪ್ರದೇಶ, ಹಾರ್ನ್ಬಿಲ್ ಸಂರಕ್ಷಿತ ಪ್ರದೇಶ ಕೇವಲ ಒಂದು ಕಿಲೋಮೀಟರು ದೂರವಷ್ಟೇ. ಕೈಗಾ ಪ್ರಾಂತ್ಯದಲ್ಲಿ ೪೫ ಎಂಡೆಮಿಕ್ ಪ್ರಭೇದದ ವನ್ಯ ಸಂಪತ್ತು ಇದೆ . ೧೬೦ ಬಗೆಯ ಪಕ್ಷಿಗಳಿವೆ. ಇವು ಯಾವುದಕ್ಕೂ ವಿಕಿರಣದಿಂದ ಸಮಸ್ಯೆಯಾದ ವರದಿಯಾಗಿಲ್ಲ. ಕೇವಲ ಸ್ಥಾವರದ ಆಡಳಿತವಲ್ಲದೇ ಕಾಲ ಕಾಲಕ್ಕೆ EIA, ಇನ್ನೂ ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳು ಸ್ಥಾವರದ ಸುತ್ತ ಮುತ್ತ 'ಆಡಿಟ್' ನಡೆಸುತ್ತಾರೆ. ಈ ವರದಿಗಳು ಅಂತರ್ಜಾಲದಲ್ಲಿ ಎಲ್ಲರಿಗೂ ಓದಲು ಲಭ್ಯವಿದೆ. ಆಸಕ್ತರು ಓದಬಹುದು. ವಿಶ್ವ ಸಂಸ್ಥೆ ಸಹ ಆಗಾಗ ಅದರ ತಂಡವನ್ನು ಕಳುಹಿಸಿ ಅಧ್ಯಯನ ನಡೆಸುತ್ತಾರೆ. ಕುರಿಯ ಥೈರಾಯಿಡ್ ಗ್ರಂಥಿ, ಹಾಲು, ನೀರು, ಬೆಳೆಗಳು, ವನ್ಯ ಸಂಪತ್ತಿನ ಮಾದರಿಗಳನ್ನು ಸಂಗ್ರಹಿಸಿ ಅದರಲ್ಲಿ ವಿಕಿರಣದ ಅಂಶ ಹುಡುಕುತ್ತಾರೆ. ಇಲ್ಲಿಯವರೆಗೂ ಕೈಗಾದ ಸುತ್ತ ಮುತ್ತಲಿನ ಮಾದರಿಗಳಲ್ಲಿ ರೇಡಿಯೋ ಆಕ್ಟಿವ್ ಟ್ರೀಟಿಯಂ ಅಂಶ ಮಿತಿಯನ್ನು ಮೀರಿದ ಉದಾಹರಣೆಗಳಿಲ್ಲ. ಟಾಟಾ ಮೆಮೋರಿಯಲ್ ಸಂಸ್ಥೆಯ ಅಧ್ಯಯನದ ಪ್ರಕಾರ ಕಾರವಾರ ತಾಲೂಕಿನಲ್ಲಿ ಕ್ಯಾನ್ಸರ್ ಸಂಖ್ಯೆ ೮೦ ರಿಂದ ೩೧೬ ಕ್ಕೆ ಏರಿಕೆಯಾಗಿರುವುದು ನಿಜ. ಆದರೆ ವಿಕಿರಣಕ್ಕೂ ಇದಕ್ಕೂ ಸಂಬಂಧ ಪತ್ತೆಯಾಗಿಲ್ಲ. ಇವೆಲ್ಲವೂ ಜೀವನ ಶೈಲಿಯಿಂದ, ಆಧುನಿಕ ವೈದ್ಯ ಪದ್ದತಿಯ ಉತ್ತಮ ಪತ್ತೆ ಹಚ್ಚುವಿಕೆಯಿಂದ ಏರಿಕೆಯಾದದ್ದು. ಮನುಷ್ಯನ ಜೀವಿತಾವಧಿ ಹೆಚ್ಚಾದಂತೆಲ್ಲ ಕ್ಯಾನ್ಸರ್ ಬರುವ ಸಾಧ್ಯತೆ ಸಹ ಹೆಚ್ಚಾಗುತ್ತದೆ. ಹಿಂದೆ ಭಾರತೀಯರ ಜೀವಿತಾವಧಿ ಕಡಿಮೆ ಇದ್ದ ಕಾರಣ ಕ್ಯಾನ್ಸರ್ ಪ್ರಮಾಣವೂ ಕಡಿಮೆ ಇತ್ತು. ಒಟ್ಟಿನಲ್ಲಿ ಇದಕ್ಕೂ ವಿಕಿರಣಕ್ಕೂ ಸಂಬಂಧವಿಲ್ಲ. ಹುಟ್ಟುವ ಮಕ್ಕಳ ಊನತೆ ಕೈಗಾ ಪ್ರದೇಶದಲ್ಲಿ ೦.೨%ರಷ್ಟಿದೆ, ಇದು ಜಾಗತಿಕ ೨-೩% ಕಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆ. ಯಾವ ಕಡೆಯಿಂದ ವಿಶ್ಲೇಷಿಸಿದರೂ ಸ್ಥಾವರದಿಂದ ಆದ ಸಮಸ್ಯೆಯ ಬಗ್ಗೆ ನಮಗೆ ವರದಿಗಳು ಸಿಗುವುದಿಲ್ಲ. 

ವಿಜ್ಞಾನ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾ ಬೆಳೆಯುತ್ತದೆ. ಇಲ್ಲಿಯವರೆಗೆ ನಡೆದಿರುವ ಸಂಶೋಧನೆ, ವರದಿಗಳ ಪ್ರಕಾರ ಇದೇ ಸತ್ಯ. ಇದು ಯಾವ ಧರ್ಮ, ಪ್ರದೇಶ, ವ್ಯಕ್ತಿಗೂ, ಬದಲಾಗಲಾರದು. ಮುಂದೊಂದು ದಿನ ಇದೇ ವಿಜ್ಞಾನ ಸಂಶೋಧನೆಯ ತಪ್ಪನ್ನು ಎತ್ತಿ ತೋರಿಸಿದರೆ ಮಾತ್ರ ಮೇಲೆ ಹೇಳಿದ ವಿಷಯಗಳು ಸುಳ್ಳಾಗಬಹುದು. ಭಾರತದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಯಲ್ಲಿಯೂ ವೈಜ್ಞಾನಿಕ ಮನೋಭಾವ ಮೂಡಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ. ಆದರೆ ಸಭೆಯಲ್ಲಿನ ಗಣ್ಯರು ವಿಜ್ಞಾನವನ್ನು ಅರಿತುಕೊಳ್ಳದೆ ಜನರನ್ನು ಅನಗತ್ಯವಾಗಿ ಸ್ಥಾವರದ ಸುರಕ್ಷತೆಯ ಬಗ್ಗೆ ಮಾತನಾಡಿ ದಿಗಿಲುಗೊಳಿಸಿದರು. 

ಫ್ರಾನ್ಸ್  ೭೦% ರಷ್ಟು ವಿದ್ಯುತ್ ಅಣು ಶಕ್ತಿಯಿಂದ ಪಡೆದರೆ, ಅಮೇರಿಕಾ ೨೦%, ಕೊರಿಯಾ ೨೦%  ಹಾಗೂ ಈ ದಶಕದಲ್ಲಿ ಚೀನಾ ಅತೀ ಹೆಚ್ಚು ಸ್ಥಾವರಗಳನ್ನು ನಿರ್ಮಿಸುತ್ತಿದೆ. ಭಾರತ ಈಗಲೂ ೪೦-೪೫% ಕಲ್ಲಿದ್ದಲಿನ ಮೂಲಕ ವಿದ್ಯುತ್ ಉತ್ಪಾದಿಸುತ್ತಿದೆ. ಇದು ಅತೀ ಹೆಚ್ಚು ಮಾಲಿನ್ಯ ಉಂಟುಮಾಡುವ ಶಕ್ತಿಯ ಮೂಲ. ೧೨೦ಕೆಜಿ ಯುರೇನಿಯಂ ಇಂಧನದಿಂದ ೫ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು ಮತ್ತು ಇದು ಈ ಶತಮಾನದ ಅತ್ಯಂತ ಸ್ವಚ್ಛ ಶಕ್ತಿ. ಇದರಿಂದ ಮಾಲಿನ್ಯ ಇಲ್ಲವೇ ಇಲ್ಲ ಎನ್ನಬಹುದು. ಒಮ್ಮೆ ಸ್ಥಾವರದಲ್ಲಿ ಇಂಧನ ತುಂಬಿಸಿ ವಿದಳನ ಕ್ರಿಯೆ ಶುರು ಮಾಡಿಸಿದರೆ, ದಶಕಗಳ ಕಾಲ ಸ್ಥಾವರ ವಿದ್ಯುತ್ ಉತ್ಪಾದಿಸಬಲ್ಲದು. ಪ್ಯಾರಿಸ್ ಒಪ್ಪಂದದ ಪ್ರಕಾರ ಭಾರತ ಕಲ್ಲಿದ್ದಲಿನ ವಿದ್ಯುತ್ ನಿಂದ ಹೊರಗೆ ಬರಲೇ ಬೇಕು. ಇದೇ ಕಾರಣಕ್ಕೆ ಸರ್ಕಾರ ಹೊಸ ಸ್ಥಾವರ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ದೊಡ್ಡ ದೊಡ್ಡ ಸ್ಥಾವರ ನಿರ್ಮಾಣದ ಬದಲು ನೂರಾರು ಸಣ್ಣ ಪ್ರಮಾಣದ ಸ್ಥಾವರ ನಿರ್ಮಾಣ ಈ ಯೋಜನೆಯ ಮೂಲ ಉದ್ದೇಶ. ಜೊತೆಗೆ ಈಗ ಭಾರತದ ಮೇಲೆ ನಿರ್ಬಂಧವಿಲ್ಲದ ಕಾರಣ, ಹೊರ ದೇಶಗಳಿಂದ ಥೋರಿಯಂ ತರಿಸಿಕೊಂಡು ಬಳಸಬಹುದು. ಇದು ಯುರೇನಿಯಂಗಿಂತಲೂ ಹೆಚ್ಚು ಸಹಾಯಕಾರಿ. 

ಇಷ್ಟೆಲ್ಲಾ ಇದ್ದರೂ ನನ್ನ ಅನಿಸಿಕೆ ಸ್ಥಾವರ ನಿರ್ಮಾಣವಾಗಬೇಕು ಎಂದೇನೂ ಅಲ್ಲ. ಈ ಸ್ಥಾವರ ಶರಾವತಿಯ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಾವಿರಾರು ಎಕರೆ ಅರಣ್ಯ ನಾಶ ಶತ ಸಿದ್ಧ. ಆಗಲೇ ಮುಳುಗಡೆಯಿಂದ ಅತಂತ್ರರಾಗಿಗುವ ಈ ಪ್ರದೇಶದ ಜನ ಇನ್ನಷ್ಟು ಭೂಮಿ ಕಳೆದುಕೊಳ್ಳುತ್ತಾರೆ. ಕೆಲ ಊರುಗಳ ಸ್ಥಳಾಂತರವೂ ನಡೆಯಬಹುದು. ಮುಳುಗಡೆಯ ಪರಿಹಾರವನ್ನೇ ಸರಿಯಾಗಿ ನೀಡದೆ, ಒಂದು ಸೇತುವೆ ನಿರ್ಮಿಸಲು ಆರು ದಶಕ ತೆಗೆದುಕೊಂಡ ಸರ್ಕಾರ ಈ ಹೊಸ ಸಂತ್ರಸ್ತರಿಗೆ ಸಹಾಯ ನೀಡುವ ಯಾವ ನಂಬಿಕೆಯೂ ಜನರಿಗೆ ಉಳಿದಿಲ್ಲ. ಇವೆಲ್ಲ ನೈತಿಕ, ರಾಜಕೀಯ ಸಮಸ್ಯೆ ಇದೆಯೇ ಹೊರತು, ಅಣು ಶಕ್ತಿಯ ಬಗ್ಗೆ ಅಪ ನಂಬಿಕೆ, ಸುರಕ್ಷತೆಯ ಬಗ್ಗೆ ಸಂದೇಹ ಬೇಡ.  

12/5/26

ಕಳೆದುಹೋದ ಸ್ವರ್ಗ: ಡಿಯಾಗೋ ಗಾರ್ಸಿಯಾ

 ಅದು ಹದಿನಾರನೇ ಶತಮಾನದ ಆದಿಕಾಲ. ಯುರೋಪಿನ ದೇಶಗಳು ತಮ್ಮ ನಷ್ಟದ ಕೃಷಿ ಹಾಗೂ ಬೇಟೆಯನ್ನು ಬಿಟ್ಟು ಸಮುದ್ರಯಾನ ಮಾಡುತ್ತಾ ವ್ಯಾಪಾರ ಶುರು ಮಾಡಿದ್ದರು. ಆಧುನಿಕ ಹಡಗುಗಳು ಹಾಗೂ ಅವರಲ್ಲಿದ್ದ ಸ್ಫೋಟಕಗಳಿಂದ ಸಮುದ್ರದಿಂದಲೇ ನೆಲದ ಮೇಲೇ ದಾಳಿ ಮಾಡಬಹುದಿತ್ತು. ಯುರೋಪಿನ ದೇಶಗಳಾದ ಪೋರ್ಚುಗಲ್, ಫ್ರಾನ್ಸ್, ಸ್ಪೇನ್, ಇಂಗ್ಲೆಂಡ್, ಹಾಲೆಂಡ್ ಹೀಗೆ ಎಲ್ಲರೂ ನಾ-ಮುಂದು ತಾ-ಮುಂದು ಎಂದು ಸಮುದ್ರಕ್ಕೆ ಇಳಿಯತೊಡಗಿದರು. ಹೊಸ ಹೊಸ ನೆಲ, ದೇಶಗಳನ್ನು ಹುಡುಕಿ ಅವರ ಜೊತೆ ವ್ಯಾಪಾರ ಮಾಡಿ, ಸಾಧ್ಯವಾದರೆ ವಶಪಡಿಸಿಕೊಂಡು,ಅಲ್ಲಿಯೇ ನೆಲೆ ನಿಂತು ಕ್ರಿಶ್ಚಿಯನ್ ಮತ ಪ್ರಚಾರ ಮಾಡುವ ಇರಾದೆಯೂ ಅವರಿಗೆ ಇತ್ತು. ಸ್ಪೇನಿಗರು ದಕ್ಷಿಣ ಅಮೇರಿಕಾ ಕಡೆ ಹೋದರು. ಡಚ್ಚರು ದಕ್ಷಿಣ ಏಷ್ಯಾ ಕಡೆ ಹೊರಟರು. ಬೆಲ್ಜಿಯಂ ಹಾಗೂ ಫ್ರಾನ್ಸ್  ಆಫ್ರಿಕಾ ಕಡೆ ಹೊರಟರು. ಆದರೆ ಎಲ್ಲರ ಗಮ್ಯ ಭಾರತ ಹಾಗೂ ಚೀನಾ ಆಗಿತ್ತು. ಇಲ್ಲಿನ ಮಸಾಲ ಪದಾರ್ಥಗಳು, ವಜ್ರ, ಚಿನ್ನ, ರೇಷ್ಮೆ ಹಾಗೂ ಹತ್ತಿಯ ವಸ್ತುಗಳು ಅವರನ್ನು ಆಕರ್ಷಿಸಿತ್ತು. ಅವರು ಆಫ್ರಿಕಾವನ್ನು ದಾಟಿ ಹಿಂದೂ ಮಹಾಸಾಗರವನ್ನು ಅನ್ವೇಷಣೆ ಮಾಡತೊಡಗಿದರು. ಈ ಕಾಲಘಟ್ಟದಲ್ಲಿ ಯುರೋಪಿನ ವಸಾಹತುಶಾಹಿಗಳಿಗೆ ಹಲವಾರು ದ್ವೀಪಗಳು, ದೇಶಗಳು ದೊರಕಿತು. ಹೊಸ ಜಗತ್ತಿನ ಸಂಪರ್ಕವೇ ಇಲ್ಲದ ಹಲವು ದ್ವೀಪಗಳ ಬುಡಕಟ್ಟು ಜನಗಳು ಇವರ ದಾಳಿಗೆ ಹಾಗೂ ಇವರು ತಂದ ಸಾಂಕ್ರಾಮಿಕ ರೋಗಗಳಿಗೆ ಬಲಿಯಾದರು. ೧೫೩೨ರಲ್ಲಿ ಅನ್ವೇಷಣೆ ಜೋರಾಗಿದ್ದ ಕಾಲದಲ್ಲಿ ಪೋರ್ಚುಗೀಸರಿಗೆ ಜನವಸತಿ ಇಲ್ಲದ ದ್ವೀಪವೊಂದು ಹಿಂದೂ ಮಹಾಸಾಗರದಲ್ಲಿ ಸಿಕ್ಕಿತು. ಹತ್ತಿರದ ಭೂಮಿ ಎಂದರೆ ಸಾವಿರಾರು ಕಿ.ಮೀ. ದೂರದ ಆಫ್ರಿಕಾ ಅಥವಾ ಮಾಲ್ಡೀವ್ಸ್  ಮಾತ್ರವೇ. ಕೇವಲ ೪೪ ಚದರ ಕಿ.ಮೀ. ಇದ್ದ ದ್ವೀಪ ಅವರಿಗೆ ಹೆಚ್ಚೇನೂ ಲಾಭದಾಯಕವಾಗರಲಿಲ್ಲ. ‘ಚಾಗೋಸ್’ ದ್ವೀಪ ಸಮೂಹದ ಭಾಗವಾಗಿದ್ದ ಅದನ್ನು ಅವರ ಸೇನಾಪತಿ ‘ಡಾನ್ ಗರ್ಸಿಯಾ’ ಅವರ ನೆನಪಿನಲ್ಲಿ ‘ಡಿಯಾಗೋ ಗರ್ಸಿಯಾ’ ಎಂದು ಕರೆದರು.

ಲಕ್ಷದ್ವೀಪದಿಂದ ಶುರುವಾಗುವ ಈ ಚಾಗೋಸ್ ದ್ವೀಪಸಮೂಹಗಳು ಸಾವಿರಾರು ಕಿ.ಮೀ. ಹಬ್ಬಿದೆ. ಒಂದು ಜಿಲ್ಲೆಯಷ್ಟೇ ಅಗಲವಿರುವ ಈ ದ್ವೀಪಗಳಲ್ಲಿ ಆಗಿನ ಕಾಲಕ್ಕೆ ಜನವಸತಿಯೇ ಇರಲಿಲ್ಲ. ಭಾರತದ ಹಾಗೂ ಅರಬ್ ವರ್ತಕರು ಡಿಯಾಗೋ ದ್ವೀಪವನ್ನು ನಿಲ್ದಾಣದಂತೆ ಬಳಸುತ್ತಿದ್ದರು. ೧೫೯೮ರಲ್ಲಿ ಪೋರ್ಚುಗೀಸರು ಈ ದ್ವೀಪವನ್ನು ಫ್ರೆಂಚರಿಗೆ ಸೋತರು. ಅಷ್ಟು ಹೊತ್ತಿಗೆ ಯುರೋಪಿನ ವಸಾಹತುಶಾಹಿಗಳು ತಾವು ಆಕ್ರಮಿಸಿಕೊಂಡ ಭೂಮಿಗಳಲ್ಲಿ ಕೃಷಿಯನ್ನು ಶುರುಮಾಡಿದ್ದರು. ಚಹಾ, ಆಲೂಗಡ್ಡೆ, ಕೋಕೋ, ರಬ್ಬರ್ ಹೀಗೆ ಹಲವನ್ನು ಬೆಳೆದು ತಮ್ಮ ದೇಶಗಳಿಗೆ ರಫ್ತು ಮಾಡಿಕೊಳ್ಳುತ್ತಿದ್ದರು. ಬೇರೆ ಏನೂ ಬೆಳೆಯದ ಡಿಯಾಗೋ ದ್ವೀಪದಲ್ಲಿ ಫ್ರೆಂಚರು ತೆಂಗು ಹಾಗೂ ಹತ್ತಿಯನ್ನು ಬೆಳೆದರು. ಸುತ್ತಲೂ ಸಮುದ್ರವಿರುವುದರಿಂದ ಮೀನುಗಾರಿಕೆಯನ್ನೂ ಮಾಡಿದರು. ದ್ವೀಪದಲ್ಲಿ ಕೆಲಸ ಮಾಡಲೆಂದು ಸಾವಿರಾರು ಆಫ್ರಿಕನ್ ಜೀತದಾಳುಗಳನ್ನು ಎಳೆದು ತಂದರು. ಅವರು ನಿಧಾನವಾಗಿ ತೆಂಗು, ಹತ್ತಿ, ಮೀನುಗಾರಿಕೆಯನ್ನು ಕಲಿತು ದ್ವೀಪಕ್ಕೆ ಹೊಂದಿಕೊಂಡರು.

೧೭೯೪ರಲ್ಲಿ ಈ ದ್ವೀಪವನ್ನು ಫ್ರೆಂಚರು ಬ್ರಿಟೀಷರಿಗೆ ಸೋತರು. ಅಷ್ಟು ಹೊತ್ತಿಗಾಗಲೇ ಕಲ್ಲಿದ್ದಲನ್ನು ಇಂಧನವಾಗಿ ಬಳಸುವ ಹಡಗುಗಳು ಬಂದಿದ್ದವು. ಬ್ರಿಟಿಷರು ಈ ಡಿಯಾಗೋ ದ್ವೀಪವನ್ನೂ ಕಲ್ಲಿದ್ದಲು ತುಂಬಿಸಲು ಬಳಸಿಕೊಂಡರು. ದ್ವೀಪದ ಜನರ ಜೀವನ ಗುಣಮಟ್ಟ ಇದರಿಂದ ಉತ್ತಮವಾಯಿತು. ಹಲವು ಸ್ಥಳೀಯರು ಈ ‘ಕೋಲಿಂಗ್’ ಕೇಂದ್ರದಲ್ಲಿ ಕೆಲಸಕ್ಕೆ ಸೇರಿಕೊಂಡರು. ದ್ವೀಪದ ಶೇಕಡಾ ೯೦ರಷ್ಟು ಮಂದಿಯನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸಲಾಯಿತು. ದ್ವೀಪದಲ್ಲಿ ಒಂದು ರೀತಿಯ ಶಾಂತಿ ಸ್ಥಾಪನೆಯಾಯಿತು.

ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಹಲವು ದೇಶಗಳು ವಸಾಹತುಶಾಹಿಗಳ ಸಂಕೋಲೆಯನ್ನು ಬಿಡಿಸಿಕೊಳ್ಳತೊಡಗಿದರು. ಎರಡನೇ ವಿಶ್ವಯುದ್ಧದಿಂದ ಆರ್ಥಿಕ ಹೊಡೆತ ತಿಂದ ಯುರೋಪಿನ ಶಕ್ತಿಗಳು ತಮ್ಮ ವಿಸ್ತಾರವಾದ ಸಾಮ್ರಾಜ್ಯವನ್ನು ಮುಷ್ಠಿಯಲ್ಲಿ ಹಿಡಿದುಕೊಳ್ಳಲು ಸಾಧ್ಯವಾಗದೇ ಒಂದೊಂದೇ ದೇಶಗಳು ಸ್ವತಂತ್ರವಾದವು. ಚಾಗೋಸ್ ದ್ವೀಪದ ನಿಜ ಒಡೆಯನಾದ ಮಾರಿಷಸ್ ದೇಶಕ್ಕೆ ೧೯೬೮ರಲ್ಲಿ ಸ್ವಾತಂತ್ರ್ಯ ದೊರೆಯಿತು. ಇಂತಹ ಸಮಯದಲ್ಲಿ ಬ್ರಿಟೀಷರು ಕಿತಾಪತಿ ಮಾಡುವುದು ವಾಡಿಕೆ. ಭಾರತವನ್ನು  ಒಡೆದು ಪಾಕಿಸ್ತಾನವೆಂಬ ಶಾಶ್ವತ ಸಮಸ್ಯೆ ನಮಗೆ ತಂದಿಟ್ಟಂತೆ ಅಲ್ಲಿಯೂ ಒಂದು ತೊಂದರೆ ಒಡ್ಡಿದರು. ಚಾಗೋಸ್ ದ್ವೀಪಸಮೂಹವನ್ನು ಮಿಲಿಟರಿ ಲಾಂಚ್ ಪ್ಯಾಡ್ ಗಳಾಗಿ ಬಳಸಿಕೊಂಡರೆ ಏಷ್ಯಾ, ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಮೇಲೆ ಹಿಡಿತ ಸಾಧಿಸಬಹುದಿತ್ತು. ಮುಖ್ಯವಾಗಿ ಅವರಿಗೆ ಮಧ್ಯ ಪ್ರಾಚ್ಯದ ಪೆಟ್ರೋಲಿಯಂ ಮೇಲೆ ಕಣ್ಣು ಬಿದ್ದಿತ್ತು. ಡಿಯಾಗೋ ದ್ವೀಪವನ್ನು ಬಳಸಿಕೊಂಡು ತೈಲ ಉತ್ಪಾದಿಸುವ ದೇಶಗಳ ಮೇಲೆ ಹಾಗೂ ಅದನ್ನು ಸಾಗಿಸುವ ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸಬಹುದಿತ್ತು . ೧೯೬೦ ರಲ್ಲಿಯೇ ಅಮೇರಿಕಾ ಹಾಗೂ ಯುನೈಟೆಡ್ ಕಿಂಗ್ಡಮ್ ಈ ರೀತಿ ಒಂದು ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿತ್ತು. ಅದೇ ರೀತಿ ಮಾರಿಷಸ್ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಈ ಡಿಯಾಗೋ ಗರ್ಸಿಯ ಬ್ರಿಟನ್ ಬಳಿಯೇ ಉಳಿಯಿತು. ಈ ರೀತಿಯ ಹಲವು ದ್ವೀಪಗಳನ್ನು ಸೇರಿಸಿ 'ಬ್ರಿಟಿಷ್ ಇಂಡಿಯನ್ ಓಷನ್ ಟೆರಿಟರಿ' ಶುರು ಮಾಡಿದರು. 

ಡಿಯಾಗೋ ದ್ವೀಪದ ಜನಗಳಿಗೆ ದ್ವೀಪವನ್ನು ತೊರೆಯುವಂತೆ ಸೂಚಿಸಲಾಯಿತು. ನೂರಾರು ವರ್ಷಗಳಿಂದ ಅಲ್ಲಿಯೇ ಬೇರು ಬಿಟ್ಟಿದ್ದ ಅವರು ಇದಕ್ಕೆ ವಿರೋಧ ಒಡ್ಡಿದರು. ಸಾವಿರ ಚಿಲ್ಲರೆ ಇರುವ ಅವರು ಎರಡು ಬಲಿಷ್ಠ ರಾಷ್ಟ್ರಗಳ ವಿರುದ್ಧ ನಿಂತಾರೆಯೇ?. ಬ್ರಿಟನ್, ದ್ವೀಪಕ್ಕೆ ಬರುವ ಎಲ್ಲಾ ರೀತಿಯ ಸರಕುಗಳನ್ನು ನಿಲ್ಲಿಸಿಬಿಟ್ಟರು. ಜನಗಳು ಬೇರೆ ದಾರಿಯಿಲ್ಲದೇ ಊರನ್ನು ಬಿಟ್ಟು ಮಾರಿಷಸ್, ಆಫ್ರಿಕ ಹಾಗೂ ಇನ್ನಿತರ ದೇಶಗಳಿಗೆ ಓಡಿಹೋದರು. ಕೆಲವರಿಗೆ ಬ್ರಿಟನ್ ನಾಗರೀಕತ್ವ ಸಿಕ್ಕಿತು. ಹೀಗೆ ೧೯೭೩ ರಲ್ಲಿ ದ್ವೀಪ ಸಂಪೂರ್ಣ ಖಾಲಿಯಾಯಿತು. ದ್ವೀಪ ಸಂಪೂರ್ಣವಾಗಿ ಬ್ರಿಟನ್ ಹಾಗೂ ಅಮೇರಿಕಾ ವಶಕ್ಕೆ ಹೋಯಿತು. 

ಅಮೇರಿಕಾ ಮತ್ತು ಬ್ರಿಟನ್ ತಮ್ಮ ಮಿಲಿಟರಿ ಹಾಗೂ ನೌಕಾಪಡೆಯನ್ನು ಇಲ್ಲಿ ತಂದರು. ಸುಮಾರು ಐದು ಸಾವಿರ ಸೈನಿಕರು ದ್ವೀಪದಲ್ಲಿ ಇಳಿದರು. ಶೀತಲ ಸಮರ ಉಚ್ಛ್ಛ್ರಾಯ ಸ್ಥಿತಿಯಲ್ಲಿದ್ದ ಹೊತ್ತಿಗೆ ಅಮೇರಿಕಾ ಈ ದ್ವೀಪದಿಂದ ಬಹಳ ಲಾಭ ಪಡೆದುಕೊಂಡಿತು . ಸೋವಿಯತ್ ರಷ್ಯಾ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿತ್ತು. ಅಮೇರಿಕಾ ಹಾಗೂ ರಷ್ಯಾ ಅಫ್ಘಾನಿಸ್ತಾನದ ಅಂಗಳದಲ್ಲಿ ತೆರೆ ಮರೆಯ ಹೋರಾಟ ನಡೆಸಿದ್ದರು. ಅಮೇರಿಕಾಗೆ ಏಷ್ಯಾದ ಮೇಲೆ ಹಿಡಿತ ಸಾಧಿಸುವ ಇರಾದೆ ಶುರುವಾಯಿತು. ಅದು ಡಿಯಾಗೋ ದ್ವೀಪದ ಸಂಪೂರ್ಣ ಲಾಭ ಪಡೆದುಕೊಂಡಿತು. ಬಿ ೨ ಬಾಂಬರ್ ಗಳು, ಜಲಾಂತರ್ಗಾಮಿಗಳು, ಅಣು ಬಾಂಬ್ ಸಹ ಅಲ್ಲಿರಬಹುದೆಂದು ತಜ್ಞರು ಹೇಳುತ್ತಾರೆ. ಸ್ಯಾಟಲೈಟ್ ಚಿತ್ರಗಳು ದ್ವೀಪದಲ್ಲಿ ಉದ್ದದ ರನ್ವೇಗಳು ಇರುವುದನ್ನು ಗುರುತಿಸಿದೆ. ಹಲವಾರು ಮಿಲಿಟರಿ ಬ್ಯಾರಕ್ಕುಗಳನ್ನು ಸಹ ಚಿತ್ರದಲ್ಲಿ ನೋಡಬಹುದು. ಈ ದ್ವೀಪದಿಂದ ನೂರಾರು ಮಿಲಿಯನ್ ಡಾಲರ್ ಗಳ ಉಳಿತಾಯ ಅಮೇರಿಕಾ ಹಾಗೂ ಬ್ರಿಟನ್ ದೇಶಗಳಿಗೆ ಆಗಿದೆ. ಸುಮಾರು ಐದು ಸಾವಿರ ಸೈನಿಕರು ಈಗಲೂ ಆ ದ್ವೀಪದಲ್ಲಿ ಇದ್ದಾರೆ ಹಾಗೂ ಇವರನ್ನು ಬಿಟ್ಟರೆ ಬೇರೆ ಯಾವ ಜನರಾಗಲಿ ಅಥವಾ ಸರ್ಕಾರವಾಗಲಿ ಅಲ್ಲಿ ಇಲ್ಲ. ಕೆಲವೇ ನಿಮಿಷಗಳಲ್ಲಿ ಕ್ಷಿಪಣಿಗಳು ಡಿಯಾಗೋ ದ್ವೀಪದಿಂದ ಭಾರತವೂ ಸೇರಿದಂತೆ ಹಲವು ಏಷ್ಯಾದ ರಾಷ್ಟ್ರಗಳಿಗೆ ತಲುಪಬಲ್ಲದು. 

ವಿಯೆಟ್ನಾಂ ಯುದ್ಧ, ಅಫಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧದ ಕಾರ್ಯಾಚರಣೆ, ಇರಾಕ್ ಹಾಗೂ ಇರಾನ್ ಯುದ್ಧ, ಸದ್ದಾಮ್ ಹುಸೇನ್ ವಿರುದ್ಧದ ಕಾರ್ಯಾಚರಣೆ, ಸೂಯೆಜ್ ಕಾಲುವೆ ಮೇಲಿನ ಪಹರೆ ಹೀಗೆ ನೂರಾರು ಲಾಭಗಳನ್ನು ಅಮೇರಿಕಾ ಈ ದ್ವೀಪದಿಂದ ಪಡೆಯಿತು. ಜಗತ್ತಿನ ಅರ್ಧದಷ್ಟು ಬಿಕ್ಕಟ್ಟು ಯೂರೋಪಿನ ವಸಾಹತುಶಾಹಿಗಳಿಂದ ಸೃಷ್ಟಿಯಾಗಿದ್ದರೆ ಇನ್ನರ್ಧಧಷ್ಟು ಅಮೇರಿಕಾ ಹಾಗೂ ಅಂದಿನ ಸೋವಿಯೆತ್ ಒಕ್ಕೂಟದ ಶೀತಲ ಸಮರ ಹಾಗೂ ಅವರ ಕೊಳ್ಳುಬಾಕತನದಿಂದ ಸೃಷ್ಟಿಯಾದವುಗಳು.  

ಇಪ್ಪತ್ತನೇ ಶತಮಾನವನ್ನು ಅಮೆರಿಕಾದ ಪ್ರಾಬಲ್ಯ ಎಂದುಕೊಂಡರೆ, ಇಪ್ಪತ್ತೊಂದನೇ ಶತಮಾನವನ್ನು ಚೀನಾಗೆ ಬರೆದಿಡಬೇಕು. ಚೀನಾ ಹಾಗೂ ಮಾರಿಷಸ್ ಒಳ್ಳೆಯ ಸಂಬಂಧ ಹೊಂದಿದೆ. ಮಾರಿಷಸ್ ಡಿಯಾಗೋ ದ್ವೀಪದ ನಿಜ ಒಡೆಯ. ಚೀನಾ ಈ ವಿಷಯವನ್ನು ಎತ್ತಿಕಟ್ಟುತ್ತಿದೆ. ಇಲ್ಲಿ ಯಾರೇ ಗೆದ್ದರೂ ಭಾರತಕ್ಕೆ ನಷ್ಟ. ಶತ್ರುವೊಬ್ಬ ನೆರೆ ಮನೆಗೆ ಬಂದು ಕೂತಂತೆ. 

ಒಂದಿಷ್ಟು ಮೂಲ ನಿವಾಸಿಗಳು ಈ ವಿಚಾರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ೨೦೦೦ ರಲ್ಲಿ ಲಂಡನಿನಲ್ಲಿ ಕೇಸು ಹಾಕಲಾಗಿದೆ. ಬ್ರಿಟನ್ ಈ ಕೆಲವರಿಗೆ ನಾಗರೀಕತ್ವದ ಆಸೆ ತೋರಿಸಿದೆ. ೨೦೧೭ ರಲ್ಲಿ ವಿಶ್ವ ಸಂಸ್ಥೆ ದ್ವೀಪವನ್ನು ಮೂಲ ನಿವಾಸಿಗಳಿಗೆ ಹಿಂದಿರುಗಿಸಬೇಕೆಂದು ಆದೇಶ ನೀಡಿದೆ. ಆದೇಶ ಜಾರಿ ಮಾಡುವವರ್ಯಾರು? ಮನೆಯ ದೊಡ್ಡಣ್ಣನಿಗೆ ಮೂಗುದಾರ ಹಾಕುವವರ್ಯಾರು ? ಈಗಲೂ ದ್ವೀಪವನ್ನು ಅಮೇರಿಕಾ ಹಾಗೂ ಬ್ರಿಟನ್ ಇಟ್ಟುಕೊಂಡಿದೆ. ಮೂರು ಮಿಲಿಯನ್ ಪೌಂಡುಗಳಿಗೆ ಖರೀದಿಸಿದ ದ್ವೀಪವನ್ನು ಅವರು ಸುಲಭಕ್ಕೆ ಬಿಡುವವರಲ್ಲ. ಮಾರಿಷಸ್ ದೇಶಕ್ಕೆ ತಮ್ಮದೇ ಮನೆಯ ಜಾಗಕ್ಕೆ ಸಂಭಂದವೇ ಇಲ್ಲದ ವ್ಯಕ್ತಿಗಳು ಹೊಡೆದುಕೊಂಡಂತ ಭಾವ. ಒಟ್ಟಿನಲ್ಲಿ ಸಮಸ್ಯೆ ಜೀವಂತವಾಗಿದೆ... 

28/5/21

ಭರವಸೆ 

ಮುಂದೆ ಒಂದು ಮಾರು ಸಹ ಕಾಣದಷ್ಟು ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಗಾಯತ್ರಿ ಒಬ್ಬಳೇ ನಡೆದುಕೊಂಡು ಬರುತ್ತಿದ್ದಳು. ಆದರೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದ ಮಳೆ, ಮನೆ ತಲುಪುವ ಅವಳ ನಂಬಿಕೆಯನ್ನು ಕಡಿಮೆ ಮಾಡುತಿತ್ತು. ಮನೆಯ ಬಳಿ ಬಂದರೂ ಬಾಗಿಲು ದಾಟದೇ ಮಳೆಯಲ್ಲಿ ನೆನೆಯುತ್ತಾ ಬಾಗಿಲಲ್ಲೇ ನಿಂತು ಕಣ್ಮುಚ್ಚಿದಳು. ಒಳಗೆ ಅಡಿಗೆ ಮಾಡುತ್ತಿದ್ದ ಸಾವಿತ್ರಕ್ಕ ಏನೋ ಶಬ್ಧ ಎಂದು ಬಂದವಳು, ಬಾಗಿಲಲ್ಲೇ ತೋಯುತ್ತ ನಿಂತಿದ್ದ ಗಾಯತ್ರಿಯನ್ನು "ಏಯ್ ಒಳಗೆ ಬಾರೆ" ಎಂದು ಬೈದು ಒಳಗೆ ಕರೆದು ಕೂರಿಸಿದಳು. ಇಷ್ಟಾದರೂ ಒಂದೇ ಒಂದು ಮಾತೂ ಸಹ ಗಾಯತ್ರಿಯ ಬಾಯಿಂದ ಹೊರ ಬರಲಿಲ್ಲ. ಜಗುಲಿಯ ಮೇಲೆ ಕೂತಿದ್ದ ಜಾಗದಲ್ಲೇ ಕೂತಿದ್ದಳು. ಸಾವಿತ್ರಕ್ಕನೇ ಒಳಗಿನಿಂದ ಒಣ ಟವೆಲ್ ತಂದು ಅವಳ ತಲೆ ಒರೆಸಿ " ಹುಂ, ಈಗ ಸ್ನಾನಕ್ಕೆ ಹೋಪಲೆ ಅಡ್ಡಿಲ್ಲೆ" ಎಂದಳು. ಅದಕ್ಕೂ ಸಹ ಅವಳು ತುಟಿಕ್ ಪಿಟಿಕ್ ಎನ್ನದೆ ಬಚ್ಚಲ ಮನೆಯ ಕಡೆ ನಡೆದು ಹೋದಳು. ಜಗುಲಿಯಲ್ಲೇ ಕೂತಿದ್ದ ಸಾವಿತ್ರಕ್ಕನ ಗಂಡ ಚಂದ್ರಯ್ಯ ಏನು ಮಾಡುವುದೆಂದು ತಿಳಿಯದೆ ಕತ್ತರಿಸಿದ ಅಡಿಕೆ ಹೋಳನ್ನು ಬಾಯಿಗೆ ಎಸೆದುಕೊಂಡು ವೀಳ್ಯದೆಲೆ ಸುತ್ತಿದರು. " ಎಂತಾರು ಮಾಣಿ ಹತ್ರ, ಗಣಪತಿ ಮಾವಂಗೆ ಹೇಳಿ ಒಂದು ಹೋಮ ಮಾಡಿಸದೇ ಸೈ " ಎಂದು ಸಾವಿತ್ರಕ್ಕ ಮತ್ತೆ ಅಡುಗೆ ಮನೆ ಸೇರಿದಳು. 

ಸ್ನಾನ ಮಾಡಿ ಸೀರೆಯುಟ್ಟು ಬಂದ ಗಾಯತ್ರಿ ಏನೂ ಆಗೇ ಇಲ್ಲವೆಂಬಂತೆ ಸಿದ್ಧವಾಗಿದ್ದ ಅನ್ನ ಹುಳಿ ಪ್ಲೇಟಿಗೆ ಹಾಕಿಕೊಂಡು ಟಿವಿ ನೋಡುತ್ತಾ ಕುಳಿತಳು. ಅಷ್ಟರಲ್ಲಿ ವೈದೀಕದ ಮನೆಗೆ ಹೋಗಿದ್ದ ಅವಳ ಗಂಡ ರವಿ ಮನೆಗೆ ಬಂದ. ಅಪ್ಪ ಅಮ್ಮನ ಮುಖದ ಮೇಲೆ ಇದ್ದ ಪ್ರಶ್ನಾರ್ಥಕ ಚಿನ್ಹೆ ಅವನಿಗೆ ಅರ್ಥವಾಯಿತು. ಮೂವರೂ ರೂಮು ಸೇರಿ ಬಾಗಿಲು ಹಾಕಿಕೊಂಡರು. 

ಚಂದ್ರಯ್ಯನೇ  ಮಾತು ಶುರು ಮಾಡಿದ, "ಅಲ್ದೊ ನಮ್ಮ ಕಡೆ ಹೆಣ್ಣು ಸಿಗದಿಲ್ಲೆ ಅಂತ ಬಯಲು ಸೀಮೆ ಕಡೆ ಇಂದ ಹೆಣ್ಣು ತಂದ್ರೆ ಇದೆಂತ ಕಥೆ ಆತೋ". ರವಿಗೆ ಈ ಮಾತು ಹಿಡಿಸಿತಾದರೂ, ಹೆಂಡತಿಯ ಮೋಹವೇನೂ ಕಡಿಮೆ ಇರಲಿಲ್ಲ. ಐವತ್ತರ ಆಸುಪಾಸಿನ ಅವನಿಗೆ ಪುರೋಹಿತನೆಂಬ ಕಾರಣಕ್ಕೆ ಮದುವೆ ವಿಳಂಬವಾಗಿತ್ತು. ಕೊನೆಗೂ ಯಾರೂ ಸಿಗದೇ ದಲ್ಲಾಳಿಯೊಬ್ಬನನ್ನು ಹಿಡಿದು ಗುರುತು ಪರಿಚಯವಿಲ್ಲದ ದೂರದ ಬಯಲು ಸೀಮೆಯಿಂದ ಹೆಣ್ಣು ತಂದು ಮದುವೆ ನೆರವೇರಿತ್ತು. ಇಪ್ಪತ್ತರ ಗಾಯತ್ರಿಯ ತುಂಟತನ ಅವನಿಗೆ ಹಿಡಿಸಿತ್ತು. ಆದರೆ ಸಂಪ್ರದಾಯದಲ್ಲಿ ಬಿಗುವಿದ್ದ ಸಾವಿತ್ರಕ್ಕನಿಗೆ ಸೊಸೆ ಹಿಡಿಸಿರಲಿಲ್ಲ. ಅಡಿಗೆಗೆ ಹೆಚ್ಚು ಬಳಸುವ ಈರುಳ್ಳಿ, ಬೆಳ್ಳುಳ್ಳಿ ಕೋಪ ತರಿಸುತ್ತಿತ್ತು. ಭಾಷೆಯಲ್ಲೂ ವ್ಯತ್ಯಾಸ, ಸಂಸ್ಕೃತ ಜ್ಞಾನ ಸೊನ್ನೆ. ದಂಪತಿ ಸಮೇತ ಪೂಜೆಗೆ ಕುಳಿತಾಗ ಗಾಯತ್ರಿಗೆ ಪಂಚಪಾತ್ರೆಯಿಂದ ಗಂಡನ ಕೈಗೆ ನೀರು ಹಾಕಲೂ ಬರುತ್ತಿರಲಿಲ್ಲ. ಆರತಿ ಮಾಡುವಾಗ ಗಂಟೆಯೂ ಆರತಿಯೊಂದಿಗೆ ಸುತ್ತು ಹೊಡೆಯುತಿತ್ತು. ಯಲ್ಲವ್ವನಿಂದ ಗಾಯತ್ರಿ ಎಂದು ಹೆಸರು ಬದಲಾಗಿತ್ತೆ ಹೊರತು, ದೇಹದೊಳಗಿನ ರಕ್ತ ಮಾಂಸ, ಮಜ್ಜೆಯಲ್ಲ. 

ಇವೆಲ್ಲವನ್ನೂ ಹೇಗೋ ಸಹಿಸಿಕೊಂಡಿದ್ದ ಸಾವಿತ್ರಕ್ಕನಿಗೆ ಈಗ ನಡೆಯುತ್ತಿರುವ ಘಟನೆಗಳು ನುಂಗಲಾರದ ತುತ್ತಾಗಿತ್ತು. ಗಾಯತ್ರಿ ಹೇಳದೆ ಕೇಳದೆ ಮನೆಯಿಂದ ಹೊರಟು ಬಿಡುತ್ತಿದ್ದಳು. ಕಾಡು, ಗುಡ್ಡ, ಬೆಟ್ಟ ಹೀಗೆ ಎಲ್ಲೆಲ್ಲೂ ಒಬ್ಬಳೇ ಸುತ್ತುತ್ತಿದ್ದಳು. ರಸ್ತೆ ಕೆಲಸ ಮಾಡುವ ಬೋಯಿಗಳ ಜೊತೆ ಹೋಗಿದ್ದಾಗ ಊರಿನವರು ಯಾರೋ ಇವಳನ್ನು ಗುರುತಿಸಿ ಕರೆದುಕೊಂಡು ಬಂದಿದ್ದರು. ಕೇಳಿದರೆ, "ಅಲ್ಲೊಂದು ಅವ್ವಾರು ತಲೀಗೆ ಮಾಲಿಶ್ ಮಾಡ್ತಾರಾ. ಅದ್ಕೆ ಹೋಗಿದ್ನಿ" ಎನ್ನುತ್ತಿದ್ದಳು. ಈ 'ಅವ್ವಾರು' ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವುದು ಅವಳಿಗೆ ಮಾತ್ರ ಕಾಣಿಸುತಿತ್ತು. ಅಲ್ಲೆಲ್ಲೋ ಜೋಡು ರಸ್ತೆಯ ಜಂಕ್ಷನ್ ಬಳಿ, ಅರಳೀ ಕಟ್ಟೆಯ ಬುಡದಲ್ಲಿ, ಬಸ್ ಸ್ಟ್ಯಾಂಡಿನಲ್ಲಿ ಹೀಗೆ ಹಲವು ಕಡೆ ಅವಳು 'ಮಾಲಿಶ್' ಮಾಡಿಸಿಕೊಂಡಿದ್ದಳಾದರೂ ಊರವರ ಕಣ್ಣಿಗೆ ಯಾವ 'ಅವ್ವಾರೂ' ಕಾಣಿಸಿಕೊಂಡಿರಲಿಲ್ಲ. 

ಕೆಲವರು ಇದು ಮನೋರೋಗ ಎಂದರೆ, ಮತ್ತೆ ಕೆಲವರು "ಅದೇ ರಸ್ತೆ ಮಾಡ್ವಾಗ ಒಬ್ಬಳು ಗುಂಡಿಗೆ ಬಿದ್ದು ಸತೋಗಿದ್ದ ಅವಳೇ ಇದ್ದಿಕ್ಕ?" ಎಂದು ಸಂಶಯ ಮೂಡಿಸಿದರು. ರವಿ, ಅಪ್ಪ ಅಮ್ಮನ ಮಾತಿಗೆ ಮಣಿದು ಒಂದು ಹೋಮ ಮಾಡಿಸಲು ನಿರ್ಧರಿಸಿದ. ಮರುದಿನ ರವಿಯ ಸೋದರ ಮಾವನಾದ ಗಣಪತಿ ಭಟ್ಟರೇ ಮನೆಗೆ ಬಂದರು. ಚಿತ್ರ ವಿಚಿತ್ರ ರಂಗೋಲಿ ಬಿಡಿಸಿ, ಅದರ ಮೇಲೆ ಕಲಶಗಳನ್ನಿಟ್ಟು ಹೋಮ ಮಾಡಿದರು. ಪೂರ್ಣಾಹುತಿಯ ವೇಳೆ, ಗಾಯತ್ರಿ ಹ್ಞೂಕರಿಸುತ್ತಾ "ಸರಿ ನಾನಿನ್ನು ಹೋಗ್ತೀನಿ" ಎಂದು ಕೂಗಿದಳು. ಗಣಪತಿ ಭಟ್ಟರು ಎಲ್ಲವೂ ಸರಿಯಾಯಿತೆಂದು ಆಕಾಶ ನೋಡಿ ಕೈ ಮುಗಿದು ಕೃತಾರ್ಥರಾದರು. ಆದರೆ ಆ ತೃಪ್ತಿ ಕೆಲ ದಿನಗಳಿಗಷ್ಟೇ ಸೀಮಿತವಾಯಿತು. ಮತ್ತೆ ನಾಲ್ಕೇ ದಿನದಲ್ಲಿ ಅವಳು 'ಅವ್ವಾರನ್ನು' ಹುಡಿಕಿಕೊಂಡು ಗುಡ್ಡ, ಬೆಟ್ಟ ಅಲೆಯತೊಡಗಿದಳು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಊರೂರು ತಿರುಗತೊಡಗಿದಳು. 

ಆದರೆ ಈ ಬಾರಿ ಸಾವಿತ್ರಕ್ಕನ ಇನ್ನೊಂದು ಹೋಮ ಮಾಡಿಸುವ ಬೇಡಿಕೆಗೆ ರವಿ ಒಪ್ಪಿಗೆ ನೀಡಲಿಲ್ಲ. "ಶಿವಮೊಗ್ಗದಲ್ಲಿ ಸೈಕ್ಯಾಟ್ರಿಸ್ಟ್  ಹತ್ರ ಒಂದ್ಸಲ ತೋರ್ಸನ" ಎಂದು ಪಟ್ಟು ಹಿಡಿದ. ಶಿವಮೊಗ್ಗದ ಶ್ರೀಧರ ಡಾಕ್ಟರು ದೆವ್ವ ಭೂತ ಪಿಶಾಚಿಗಳೆಲ್ಲವನ್ನೂ ಒಂದೇ ಮಾತಿನಲ್ಲಿ ತೆಗೆದು ಹಾಕಿದರು. "ಛೆ ಈ ಕಾಲದಲ್ಲೂ ಇದನ್ನೆಲ್ಲಾ ನಂಬುತೀರಲ್ರಿ. ಒಂದೇ ಸಲ ಮನೆ, ಪರಿಸರ, ಸಂಸ್ಕ್ರತಿ ಎಲ್ಲ ಬದಲಾಗಿದೆ. ಹೊಸದಾಗಿ ಮದುವೆ ಆದ  ಹುಡುಗಿ ಬೇರೆ. ಒಂದಷ್ಟು ದಿನ ತವರು ಮನೆಗೆ ಕಳಿಸ್ರಿ " ಎಂದು ಬೈದರು. 

ಆಕೆ ಹೋದರೆ ಮತ್ತೆ ಬರುತ್ತಾಳೋ? ಇಲ್ಲೇನೋ ತೊಂದರೆ ಆಗಿ ವಾಪಾಸು ಹೋಗಲು ಈ ರೀತಿ ನಾಟಕ  ಮಾಡುತ್ತಿದ್ದಾಳೋ? ಎನ್ನುವ ಸಂಶಯದಲ್ಲೇ ರವಿ, ಗಾಯತ್ರಿಯ ಅಪ್ಪ ಅಮ್ಮನಿಗೆ ಹೇಳಿ ಕಳಿಸಿದ. ಮಗಳಿಗಾದ  ತೊಂದರೆ ಕೇಳಿ ಅವರು ಒಂದೇ ಉಸಿರಿನಲ್ಲಿ ಬಂದರು. "ಮೊದ್ಲು ಹೀಂಗೆ ಆಗಿಲ್ರಿ, ಇದಾ ಮೊದ್ಲು" ಎಂದು ಸಮಜಾಯಿಷಿ ನೀಡಿ ಮಗಳ ವೈವಾಹಿಕ ಜೀವನದ ತೊಂದರೆ ಸರಿಪಡಿಸಲು ಹೆಣಗಾಡಿದರು. ಬಡತನದಲ್ಲೇ ಹುಟ್ಟಿ ಬೆಳೆದ ಮಗಳು ಇಂಥತೊಂದು ಮನೆಗೆ ಸೇರಿರುವುದು ಅವರಿಗೂ  ಖುಷಿಯ ಸಂಗತಿಯಾಗಿತ್ತು. ಮಗಳನ್ನು ಊರಿಗೆ ಕರೆದುಕೊಂಡು ಹೋಗದೆ ಅಲ್ಲಿದ್ದೇ ಸಮಸ್ಯೆ ಪರಿಹರಿಸುವ ಯೋಚನೆಮಾಡಿದರಾದರೂ, ಗಾಯತ್ರಿಯೇ ಉಳಿಯುವ ಮನಸ್ಸು ಮಾಡಲಿಲ್ಲ. ಕೈ ಚೀಲ ಹಿಡಿದು ಹೊರಟ ಅಪ್ಪ ಅಮ್ಮನ ದಾರಿಹಿಡಿದು ಅವಳೂ ಮೆಟ್ಟಿಲು ಇಳಿಯತೊಡಗಿದಳು. ದಣಪೆ ತೆಗೆದು, ಏರು ಹತ್ತಿ ತಿರುವಿನಲ್ಲಿ ಮಾಯವಾಗುವವರೆಗೂ  ರವಿ ಅವಳನ್ನೇ ನೋಡುತ್ತಿದ್ದ....



29/6/20

ಮಳೆ - 1

"ಈಗೇನಂತೋ?" ಫೈಲುಗಳ ಅಭೇದ್ಯ ಕೋಟೆಯೊಳಗೆ ಹುದುಗಿಕೊಂಡಿದ್ದ ಈಶ್ವರ ನಾಯಕರು ತಮ್ಮ ಅಸಿಸ್ಟೆಂಟ್ ವಿಶ್ವನಾಥನ ಬಳಿ ಕೇಳಿದರು.

ಅವರ ಮಾತಿನಲ್ಲಿ ನಿರ್ಭಾವುಕತೆ, ಅಲಕ್ಷ , ನಿರ್ಲಿಪ್ತತೆ ಎಲ್ಲವೂ ಇತ್ತು. ತಹಶೀಲ್ದಾರ್ ಆಗಿದ್ದ ಹೊಸದರಲ್ಲಿ ಇಂತಹ ಸಣ್ಣ ಸಣ್ಣ ಪ್ರತಿಭಟನೆಗೂ ಅವರು ಹೋಗಿ ಅಹವಾಲು ಸ್ವೀಕರಿಸಿ, ಆಶ್ವಾಸನೆ ನೀಡುವ ಉಮೇದಿತ್ತು. ಸರ್ವಿಸಿನಲ್ಲಿ ಏಳು-ಬೀಳು ಕಂಡ ಮೇಲೆ ಪ್ರತಿಭಟನೆಗಳ ಒಳ ಮರ್ಮ ಅವರಿಗೆ ತಿಳಿಯಿತು. ದಿನಾ ಸಾಯುವವರಿಗೆ ಅಳುವವರ್ಯಾರು ಎಂಬ ಸಣ್ಣ ಅಲಕ್ಷವೂ ಬಂದಿದ್ದಿರಬಹುದು. 

"ಅರ್ಜಿ ಅಲ್ಲಿಟ್ಟು ಹೋಗ್ರಿ" ಎಂದು ಅವರು ಎಷ್ಟು ಬಾರಿ ಹೇಳಿದ್ದರೋ ಏನೋ? ಪ್ರತಿಭಟನೆಗಳು ಕಷ್ಟ ಪರಿಹಾರದ ಬದಲಾಗಿ ವೋಟು ಸೆಳೆದುಕೊಳ್ಳುವ ದಾರಿಯಾಗಿದೆ. ಈಗಂತೂ ಅದು ಕೇವಲ ವಿರೋಧ ಪಕ್ಷದ ಪಿತೂರಿಯೇ ಆಗಿರುತ್ತದೆ. ಒಂದು ಅರ್ಧ ಗಂಟೆ ಕೂಗಿ ಪತ್ರಕರ್ತರು ವರದಿ ಮಾಡಿದ ಮೇಲೆ ಹೋಗುತ್ತಾರೆ ಎಂದು ತಿಳಿದಿದ್ದ ನಾಯಕರಿಗೆ ಆಶ್ಚರ್ಯವಾಗುವಂತೆ ಘಟನೆಗಳು ನಡೆದವು. ಎರಡು ತಾಸಾದರೂ ಯಾರೂ ಹೊರಡಲೊಲ್ಲರು!.

ನಂತರವೇ ನಾಯಕರು ಅವರ ಧಿಕ್ಕಾರದ ಕೂಗಿಗೆ ಕಿವಿ ಹಚ್ಚಿದ್ದು. ದಿಲ್ಲಿಯ ದೊರೆಗಳಿಂದ ಹಿಡಿದು ವಿಎ ವರೆಗೆ ಯಾರಿಗೂ ಭೇದ-ಭಾವ ತೋರದೆ ಜನರು ಧಿಕ್ಕಾರ ಕೂಗುತ್ತಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಆಗುವವರೆಗೂ ಪ್ರತಿಭಟನೆ ತಣ್ಣಗಾಗುವ ರೀತಿ ಕಾಣಲಿಲ್ಲ.

ನಾಯಕರು ಇಪ್ಪತ್ತು ವರ್ಷಗಳಿಂದ ಸಾಗರದ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇಡೀ ರಾಜ್ಯದ ಮೂವತ್ತು ಪರ್ಸೆಂಟ್ ವಿದ್ಯುತ್ ಒದಗಿಸುವ ಸಾಗರಕ್ಕೇ ಕುಡಿಯುವ ನೀರಿನ ಸಮಸ್ಯೆ ಬರಬಹುದು ಎಂದು ಯಾರೂ ತಿಳಿದಿರಲಿಲ್ಲ. ನಾಯಕರು ಮೊದಲು ಬಂದಾಗ ಮಳೆ ನೋಡಿ ಭಯಗೊಂಡಿದ್ದರು. "ಮಾರಾಯಾ ಈ ಊರಲ್ಲಿ ಮಳೆ 'ಬೀಳಲ್ಲ', ಕೊಡದಿಂದ ಸುರಿದಂಗೆ ಸುರಿಯುತ್ತೆ" ಎಂದು ಚಟಾಕಿಯನ್ನೂ ಹಾರಿಸಿದ್ದರು.

ಸಾಗರವನ್ನು ನಗರವೆಂದರೆ ತಪ್ಪಾದೀತು. ಯಾವುದೋ ರಾಜಾನೋ, ಸಂಸ್ಥಾನವೋ ಸರಿಯಾದ ಪ್ಲಾನು ಹಾಕಿ ಕಟ್ಟಿದಂತೆ ಅದು ಕಾಣುತ್ತಿರಲಿಲ್ಲ. ಜಾಗವಿದ್ದಲ್ಲಿ ಮನೆ ಕಟ್ಟಿ, ಅಂಗಡಿ ಮಾಡಿ, ನಂತರ ಶಾಲೆ ಅದೂ-ಇದೂ ಕಟ್ಟಿ ರೂಪುಗೊಂಡಂತಿತ್ತು. ನಾಯಕರೂ ಸಹ ಹಾಗೆಯೇ ತಿಳಿದಿದ್ದರು. ಆದರೆ ಆಫೀಸಿನಲ್ಲಿ ಹಳೆ ಫೈಲು ಸಿಕ್ಕಾಗ ನಾಯಕರು ದಿಗ್ಬ್ರಾಂತರಾಗಿ ಹೋಗಿದ್ದರು. ಸಾಗರಕ್ಕೆ ಸಾವಿರ ಸಾವಿರ ವರ್ಷಗಳ ಇತಿಹಾಸವಿದೆ. ಕೆಳದಿಯ ಸದಾಶಿವ ನಾಯಕ ದೊಡ್ಡ ಕೆರೆಯೊಂದನ್ನು ಕಟ್ಟಿಸಿದ್ದ. ಆಗಿನ ಕಾಲಕ್ಕೆ ಅದನ್ನು ಸದಾಶಿವ ಸಾಗರ ಎಂದು ಕರೆಯುತ್ತಿದ್ದರು. ಅದರ ಗಾತ್ರವನ್ನು ನೋಡಿ ಜನ ಅದನ್ನು 'ಸಾಗರ' ಎಂದು ಉದ್ಗರಿಸುತ್ತಿದ್ದರು. ಅನ್ವರ್ಥ ನಾಮವೇ ಊರಿನ ಹೆಸರಾಯಿತು. ಕ್ರಮೇಣ ಕೆರೆಯ ಗಾತ್ರ ಕುಗ್ಗುತ್ತಾ ಹೋಯಿತು ಈಗ ಕೇವಲ ಹೆಸರಿಗೆ ಒಂದು ಕೆರೆಯಿದೆ ಅಷ್ಟೇ. ಅದನ್ನು ಗಣಪತಿ ಕೆರೆ ಎಂದು ಗುರುತಿಸುತ್ತಾರೆ.

ಅಷ್ಟು ವೈಭವೋಪೇತವಾಗಿದ್ದ  ಊರು ಈಗ ಹೀಗೇಕಾಗಿದೆ? ಎಂದು ನಾಯಕರು ಚಿಂತಿಸಿದ್ದರು. ಆದರೆ ಇದೇ ಕಾರಣ ಎಂಬ ಯಾವ ಉತ್ತರವೂ ಅವರಿಗೆ ಹೊಳೆದಿರಲಿಲ್ಲ. ಜನರ ಮನಸ್ಥಿತಿ ಇರಬಹುದು, ಆರ್ಥಿಕತೆಯಿರಬಹುದು, ಪರಕೀಯರ ದಾಳಿಯಿರಬಹುದು ಅಥವಾ ಇವೆಲ್ಲವೂ ಇರಬಹುದು. 

ಖುದ್ದು ನಾಯಕರೇ ಹೋಗಿ ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿದರು. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಸಾಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಅರ್ಜಿಯಲ್ಲಿ ಬರೆಯಲಾಗಿತ್ತು . ಈ ಜನಕ್ಕೆ ಬುದ್ಧಿಯೇ ಇಲ್ಲವೇ ? ಎಂದುಕೊಂಡರು ನಾಯಕರು. ಡ್ಯಾಮ್ ಕಟ್ಟುವಾಗಲೇ ಅದರ ಉಪಯೋಗವನ್ನು ಪೂರ್ವ ನಿಗದಿ ಮಾಡಲಾಗುತ್ತದೆ. ಲಿಂಗನಮಕ್ಕಿಯ ನೀರನ್ನು ವಿದ್ಯುತ್ ಉತ್ಪಾದನೆಗೆ ಅಷ್ಟೇ ಬಳಸಬೇಕು. ಅದರ ನೀರನ್ನು ನೀರಾವರಿಗೋ, ಕುಡಿಯಲೋ ಅದನ್ನು ಬಳಸಿದರೆ ಅದು ಅಪರಾಧ. ತಾವೇ ಎಷ್ಟೋ ಬಾರಿ ನೀರಾವರಿಗೆ ಹಾಕಿಕೊಂಡ ಅಕ್ರಮ ಪಂಪುಗಳನ್ನು ತೆಗೆಸಿ ಬಂದಿದ್ದರು. ಈಗ ಆ ಅರ್ಜಿಯನ್ನು ನೋಡಿ 'ಥತ್!' ಎಂಬ ಉದ್ಗಾರವಷ್ಟೇ ಅವರ ಬಾಯಿಂದ ಬಂದದ್ದು. 

"ಅಲ್ಲೋ ವಿಶ್ವನಾಥ ಈ ಜನಕ್ಕೆ ಏನು ಬಂದಿದೆ ಅಂತ? ಎಲ್ಲಿಂದಲೋ ನೀರು ತರಬೇಕಂತೆ. ಅದು ಆ ಊರವರ  ಹಕ್ಕಲ್ಲವೇನೋ?. ಅವರ ನೀರು ಕಿತ್ತು ಇವರಿಗೆ ಕೊಡಬೇಕೆ? ಐದಾರು ವರ್ಷದ ಹಿಂದೆ ಈ ಅಕೇಶಿಯಾ ಪ್ಲಾಂಟೇಶನ್ ಬೇಡವೇ ಬೇಡ ಎಂದು ನಾನು ಗಂಟಲು ಹರಿಯುವ ಹಾಗೆ ಕೂಗಿದ್ರೂ ಡಿಸಿ ಹತ್ರ ಹೋಗಿ ನನ್ನ ಮೇಲೆ ಪುಕಾರು ಮಾಡಿದ್ರು ಅಲ್ವ ಈ ಜನ. ಈಗ ಅನುಭವಿಸ್ತಾ ಇದಾರೆ ನೋಡು", ಈಶ್ವರ ನಾಯಕರು ತಮ್ಮ ಕೋಪವನ್ನು ವಿಶ್ವನಾಥನ ಮೇಲೆ ತೀರಿಸಿಕೊಂಡರು.

"ಸಾರ್, ಪ್ಲಾಂಟೇಷನ್ನಿಗೂ ನೀರಿಗೂ ಎಂಥಾ ಸಂಬಂಧ ಸಾರ್?", ಡಿಗ್ರಿ ಪಾಸಾಗದ ವಿಶ್ವನಾಥ ತನ್ನ ದಡ್ಡತನ ಪ್ರದರ್ಶಿಸಿದ. 

"ನಿಮ್ ತಲೇಲಿ ಏನಿದೆ? ಆ ಅಕೇಶಿಯಾ ನೋಡಿದೀಯಾ? ನಾಲ್ಕೇ ವರ್ಷದಲ್ಲಿ ಭೂತಾಕಾರಕ್ಕೆ ಬೆಳೆಯುತ್ತೆ. ನೀರು  ನಿಮ್ಮಪ್ಪ ಹಾಕ್ತಾನಾ? ಅದರ ಬೇರು ಆಳಕ್ಕೆ ಇಳಿದು ಅಂತರ್ಜಲ ಎಲ್ಲಾ ಹೀರುತ್ತೆ. ನಮ್ಮ ಸರ್ಕಾರದವರೇನು ಬಂಜರು ಭೂಮಿಯಲ್ಲಿ ಪ್ಲಾಂಟೇಶನ್ ಹಾಕ್ತಾರೆ ಅನ್ಕೊಂಡಿದೀಯ? ಇರೋ ಕಾಡು ಕಡಿದು ಅಲ್ಲೇ ಪ್ಲಾಂಟೇಶನ್ ಮಾಡ್ತಾರೆ.  ಅಷ್ಟು ವೈವೀದ್ಯ ಮರಗಳಿರೋ ಕಾಡು ಕಡಿದು ಒಂದೇ ಜಾತಿಯ ಮರ ಹಾಕಿದ್ರೆ ಇಕೋ ಸಿಸ್ಟಮ್ ಹಾಳಾಗಿ ಹೋಗುತ್ತೆ. ನಾನು ಇದ್ನೇಲ್ಲಾ ಎಷ್ಟು ಬಡಕೊಂಡ್ರು ಊರಿಗೊಂದು ಅರಣ್ಯ ಸಮಿತಿ ಮಾಡಿ ಸರ್ಕಾರದಿಂದ ಬರೋ ಫಂಡ್ ಎಲ್ಲಾ ನುಂಗಿ ಹಾಕಿದ್ರು." ಒಂದೇ ಉಸಿರಿಗೆ ನಾಯಕರು ಎಲ್ಲವನ್ನೂ ಹೇಳಿದರು.

"ನೀವ್ ಹೇಳಿದ್ದೆಲ್ಲಾ ಸರಿ ಸಾರ್. ಆದ್ರೆ ಜನ ಕೇಳ್ಬೇಕಲ್ಲ. ವೋಟು ಹಾಕಿಲ್ವ ನೀರು ಕೊಡಿ ಅಂತಾರೆ. ಎಲ್ಲಿಂದ ನೀರು  ತಂದೆ ಎಂದು ಅವರಿಗ್ಯಾಕೆ ಬೇಕು ಸಾರ್ ?" ವಿಶ್ವನಾಥ ತನ್ನ ಚಾಟಿ ಬೀಸಿದ.

ನಾಯಕರು, "ತಡಿ ಅವರ ಹತ್ರ ಮಾತಾಡಣ" ಎಂದು ಹೊರಗೆ ಬಂದರು.....

Add caption

8/12/18

ಮುಳುಗಡೆ

ಮದುವೆಯಾದ ಮೇಲೆ ಮನೆಗೆ ಹೋಗುವುದೆಂದರೆ ಅದು ಒಂದು ದೊಡ್ಡ ಹೋರಾಟ. ನನ್ನ ರಜೆಯನ್ನು ನೋಡಿಕೊಳ್ಳಬೇಕು, ಮಗನ ರಜೆಯನ್ನು ನೋಡಿಕೊಳ್ಳಬೇಕು, ಹಾಲಿನವನಿಗೆ, ಪೇಪರಿನವನಿಗೆ ಹೇಳಬೇಕು. ಬಸ್ಸೋ, ರೈಲೋ ಒಟ್ಟಿನಲ್ಲಿ ಸ್ಲೀಪರ್ ಕೋಚೇ ಆಗಬೇಕು. ಸೀಟು ಸಿಗಲಿಲ್ಲವೆಂದರೆ ಕಾರು ತೆಗೆದಕೊಂಡು ಹೋಗಬೇಕು. ಬ್ರಹ್ಮಚಾರಿ ಜೀವನದಲ್ಲಿ ಹಾಗಿರಲಿಲ್ಲ, ವೀಕೆಂಡ್ ಬಂದರೆ ಸಾಕಿತ್ತು. ಬ್ಯಾಗು ಹೆಗಲಿಗೇರಿಸಿ, ಸಿಕ್ಕ ಬಸ್ಸು ಅಥವಾ ರೈಲು ಹತ್ತಿ ಹೋಗಿಬಿಡುತ್ತಿದ್ದೆ. ಈಗ ಕಾಲ ಬದಲಾಗಿ, ಜವಾಬ್ದಾರಿಗಳು ಹೆಗಲಿಗೇರಿವೆ. ಆದ್ದರಿಂದ ಊರಿಗೆ ಹೋಗುವುದು ಕಡಿಮೆಯಾಗಿದೆ.
ನಾಗರಪಂಚಮಿ ಸೋಮವಾರ ಬಂದಿದ್ದರಿಂದ ಗೋಜಲುಗಳು ಕಡಿಮೆಯಾಗಿ ಊರಿಗೆ ಹೋಗುವ ಅವಕಾಶ ಸಿಕ್ಕಿತು. ಅಪ್ಪನಿಗೆ ಫೋನ್ ಮಾಡಿ ಬರುವುದನ್ನು ತಿಳಿಸಿದೆ. "ಬನ್ನಿ, ಎಲ್ಲರೂ ಸೇರಿ ಹಬ್ಬ ಮಾಡೋಣ" ಎಂದು ಹೇಳಿ ಸಂತೋಷದಿಂದಲೇ ಫೋನಿಟ್ಟ . ದಾರಿಯಲ್ಲಿ ಕಾರು ಕೆಟ್ಟುಹೋಗಿ ಊರು ತಲುಪುವುದು ಮಧ್ಯಾಹ್ನವಾಗಿ ಹೋಯಿತು. ಎಷ್ಟೇ ತಡವಾದರೂ ಅಪ್ಪ ಖುಷಿಯಿಂದಲೇ ಬರಮಾಡಿಕೊಂಡ.  ಖಾಲಿ ಖಾಲಿಯಾಗಿದ್ದ ಮನೆ ತುಂಬಿದ್ದರಿಂದ ಅಮ್ಮನಿಗೂ ಖುಷಿಯಾಯಿತು. ಹಲಸಿನ ಹಪ್ಪಳ, ಮಾವಿನಕಾಯಿ ತಂಬುಳಿ, ಪತ್ರೊಡೆ ಹೀಗೆ ಪ್ರಮುಖ ಐಟಮ್ಮುಗಳೇ ಮೆನುವಿನಲ್ಲಿತ್ತು. ನಮ್ಮೆಲ್ಲರಿಗೂ ಬಡಿಸಿ, ನಂತರ ಅಮ್ಮನೂ ಊಟಮಾಡಿ ಅಂಗಳದಲ್ಲಿ ಕಾಯುತ್ತಿದ್ದ ಯಲ್ಲನಿಗೂ ಬಡಿಸಿದಳು. ಯಲ್ಲನನ್ನು ಮಾತನಾಡಿಸುವ ಮನಸ್ಸಾದರೂ ಅವನಿಗೆ ಊಟ ಆಗುವವರೆಗೆ  ಕಾದೆ. ಅವನಿಗೆ ವಿಪರೀತ ನಾಚಿಕೆ.  ನಾನು ಹೋದರೆ ಊಟ ಮಾಡಲೂ ಸಂಕೋಚಪಟ್ಟುಕೊಂಡು ಅರೆಬರೆ ಊಟಮಾಡಿ ಬಿಡುತ್ತಾನೆ. ನಾನು ಚಿಕ್ಕವನಿದ್ದಾಗ ಸ್ನೇಹಿತರ ಜೊತೆ ಆಟವಾಡುವಾಗ ಇವನು ಅಲ್ಲೇನಾದರು ಬಂದಿದ್ದರೆ ನಾನೂ ಹಾಗೆಯೇ ಸಂಕೋಚದಿಂದ ಅಡಗಿ ಬಿಡುತ್ತಿದ್ದೆ .  ಎಲ್ಲರ ಮುಂದೂ ಅವನು ನನ್ನನ್ನು 'ಸಣ್ಣ ಹೆಗಡೇರೆ' ಎಂದು ಸಂಬೋಧಿಸುವುದು ನನಗೆ ವಿಪರೀತ ನಾಚಿಕೆ ಉಂಟುಮಾಡುತ್ತಿತ್ತು. ನನ್ನಪ್ಪನ ವಾರಿಗೆಯ ಅವನು ಇವತ್ತಿಗೂ ನನ್ನನ್ನು 'ಸಣ್ಣ  ಹೆಗಡೇರೆ' ಎಂದು ಸಂಬೋಧಿಸುತ್ತಾನೆ.  ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಅವನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನ ಅಪ್ಪ ಕಲ್ಲಮೆಟ್ಲು ಎಂಬ ಊರಿನಲ್ಲಿ ಜಮೀನು ಮಾಡಿಕೊಂಡು ಇದ್ದನಂತೆ. ನಂತರ ಸರ್ಕಾರ ಡ್ಯಾಮು ಕಟ್ಟಿ ಜಮೀನು ಮುಳುಗಡೆಯಾಯಿತು. ಪರಿಹಾರದ ಹಣವೂ ಸರಿಯಾಗಿ ಸಿಗದೇ ಯಲ್ಲನ ಅಪ್ಪ ಅದೇ ನೀರಿಗೆ ಹಾರಿ ಪ್ರಾಣ ಬಿಟ್ಟರಂತೆ. ಅವನ ತಾಯಿಯೂ ಅದೇ ಕೊರಗಿನಲ್ಲಿ ಕಣ್ಣು ಮುಚ್ಚಿದಳು.
ಅನಾಥನಾದ ಯಲ್ಲ ಹೊಟ್ಟೆಪಾಡಿಗೆ ಕೆಲಸ ಹುಡುಕಿಕೊಂಡು ಊರೂರು ಅಲೆಯುತ್ತಿರುವಾಗ , ನನ್ನ ಅಜ್ಜ ಅವನಿಗೆ ಕೆಲಸ ಕೊಟ್ಟಿದ್ದರಂತೆ . ಇನ್ನೂ ರಟ್ಟೆ ಬಲಿಯದ ಹುಡುಗ ಏನು ಕೆಲಸ ತಾನೇ ಮಾಡಿಯಾನು ? ಮೂರು ಹೊತ್ತು ಊಟ ಮಾಡಿಕೊಂಡು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದನಂತೆ . ಆದರೆ ಯೌವನಕ್ಕೆ ಕಾಲಿಟ್ಟಾಗ ಮೈ ಮುರಿದು ಕೆಲಸ ಮಾಡುತ್ತಿದ್ದ . ನಂತರ ಅಪ್ಪನೇ ಘಟ್ಟದ ಕೆಳಗಿನ ಹೆಣ್ಣೊಂದನ್ನು ಹುಡುಕಿ ಅವನ ಮದುವೆ ಮಾಡಿದ್ದರು . ಈಗ ಅವನಿಗೆ ಮುಪ್ಪು ಆವರಿಸಿದೆ . ಇದ್ದೊಬ್ಬ ಮಗಳನ್ನು ಘಟ್ಟದ ಕೆಳಗೆ ಮದುವೆ ಮಾಡಿಕೊಟ್ಟಿದ್ದಾನೆ . ಹೆಂಡತಿ ಕಾಲವಾಗಿದ್ದಾಳೆ . ಈಗ ಮತ್ತೆ ಅವನು ಯಾವ ಕೆಲಸವನ್ನೂ ಮಾಡಲಾರ . ನಮ್ಮ ಮನೆಗೂ ಅವನಿಗೂ ಯಾವುದೋ ಪೂರ್ವ ಜನ್ಮದ ಸಂಬಂಧವಿರಬೇಕು . ಆತನ ಜೀವನ ಎಷ್ಟೇ ಕವಲೊಡೆದು ಎಲ್ಲೇ ಹೋದರೂ ನಮ್ಮ ಮನೆಗೇ ಬಂದು ತಲುಪುತ್ತದೆ . ನನಗೆ ಇಷ್ಟೇ ಸಂಬಳ ಬೇಕು ಎಂದು ಅವನೆಂದೂ ಕೇಳಿಲ್ಲ . ನಮ್ಮ ಮನೆಯಲ್ಲೇ ಊಟ ಮಾಡುತ್ತಾ , ಕೊಟ್ಟಷ್ಟು ಸಂಬಳ ಪಡೆದು ನಮ್ಮ ಮನೆಯ ಸದಸ್ಯನೇ ಆಗಿದ್ದಾನೆ .
ನನಗೂ ಯಲ್ಲನಿಗೂ ಬಹಳ ದೋಸ್ತಿ . ನಾನು ಬಾಲ್ಯಾವಸ್ಥೆಯಲ್ಲಿದ್ದಾಗ ಅವನು ಮಧ್ಯ ವಯಸ್ಕ . ನಮ್ಮೂರಿನ ಕಾಡು ,ಬೆಟ್ಟ ,ಗುಡ್ಡ,ಝರಿ-ತೊರೆಗಳು ಅವನಿಗೆ ಚಿರಪರಿಚಿತ . ನನ್ನನ್ನು ಕಟ್ಟಿಕೊಂಡು ಕಾಡು ಅಲೆಯುತ್ತಿದ್ದ .ನಾನು ಸುಸ್ತು ಎಂದಾಗ ,ಉಂಬಳ ನೋಡಿ ಹೆದರಿದಾಗ ನನ್ನನ್ನು ಅನಾಮತ್ತು ಹೆಗಲ ಮೇಲೆ ಎತ್ತಿಕೊಂಡು ಹೋಗಿಬಿಡುತ್ತಿದ್ದ . ನೆಲ್ಲಿಕಾಯಿ ಕೊಯ್ಯುವುದು ,ಹೊಳೆ ದಾಸವಾಳದ ಹಣ್ಣು ಹೆಕ್ಕುವುದು ,ಈಜುವುದು ಇದನ್ನೆಲ್ಲಾ ಅವನಿಂದಲೇ ನಾನು ಕಲಿತದ್ದು . ಶರಾವತಿಯ ಹಿನ್ನೀರಿನ ಆಳದ ಗುಂಡಿಗಳಲ್ಲಿ ಅವನು ಈಜು ಕಲಿಸುವಾಗ "ಇಲ್ಲೇ ಹೆಗಡೇರೆ ನನ್ನಪ್ಪ ಮುಳುಗಿದ್ದು " ಎಂದು ಹೇಳುತ್ತಿದ್ದದ್ದು ನನಗೆ ಸ್ಪಷ್ಟವಾಗಿ ನೆನಪಿದೆ . ಅದರ ಹಿಂದಿನ ದುಃಖವನ್ನು ಅರ್ಥ ಮಾಡಿಕೊಳ್ಳುವಷ್ಟು ನಾನು ಬೆಳದಿಲ್ಲದಿದ್ದರಿಂದ "ಹಾಗಿದ್ರೆ ಹುಡ್ಕು ಸಿಕ್ಕಿದ್ರೂ ಸಿಗ್ಬೋದು " ಎನ್ನುತ್ತಿದ್ದೆ .ಆದರೆ ಅವನು ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ " ಶರಾವತಿ ಯಾರ್ನೂ ಬಿಡ್ಲ , ನಮ್ನ ಮುಳುಗುಸ್ಬುಟ್ಲು" ಎನ್ನುತ್ತಿದ್ದ . ಈಗ ಅವನ ಮಾತುಗಳನ್ನು ನೆನಿಸಿಕೊಂಡರೆ ಅದರ ಹಿಂದಿನ ದುಃಖ , ಆಧ್ಯಾತ್ಮಿಕತೆ ಎಲ್ಲವೂ ಅರ್ಥವಾಗುತ್ತದೆ . ನಮ್ಮೆಲ್ಲರ ಒಳಿತಿಗಾಗಿ ತಮ್ಮ ಜೀವನವನ್ನೇ ಮುಳುಗಿಸಿಕೊಂಡ ಸಾವಿರಾರು 'ಯಲ್ಲ'ರ ಧ್ವನಿ ನನ್ನ ಆಂತರ್ಯವನ್ನು ತಟ್ಟುತ್ತದೆ . ಜೀವನದ ಹಲವು ವರ್ಷಗಳನ್ನು ಒಂಟಿಯಾಗಿ ಕಳೆದ ಯಲ್ಲ ಒಬ್ಬ ಸಂತನಾಗಿ  ನನಗೆ ಕಾಣುತ್ತಾನೆ .
"ಏನೋ ಯಲ್ಲ ಕೂದಲೆಲ್ಲಾ ಹಣ್ಣಾಯ್ತಲ್ಲೋ ಅಂತೂ ಮುದುಕ ಆದೆ " ಎಂದು ನಾನು ಕಿಚಾಯಿಸಿದೆ . "ಹಂಗೇನಿಲ್ರ ಬೇಕಾರೆ ಇವತ್ತೂ ಪಂಡರಿಕೊಪ್ಪ ಗುಡ್ಡದ ನೆತ್ತಿ ಹತ್ನಿ" ಎಂದು ತನ್ನ ಶಕ್ತಿ ಪ್ರದರ್ಶನದ ಸವಾಲೆಸೆದ . ನನಗೂ ಅದೇ ಬೇಕಾಗಿತ್ತು . ಟ್ರಾಫಿಕ್ಕಿನ 'ಪೀಮ್-ಪಾಮ್' ,ಝಗಮಗಿಸುವ ಲೈಟುಗಳಿಂದ ದೂರ ಹೋಗಬೇಕಿತ್ತು . ಕುರುಕಲು ತಿಂಡಿ ತಿನ್ನುತ್ತಾ , ಆಟವೆಂದರೆ ಕೇವಲ ಕಂಪ್ಯೂಟರಿನೊಳಗೆ ಎಂದು ತಿಳಿದು ಬೆಳೆಯುತ್ತಿರುವ ನನ್ನ ಮಗ ಸುಮಂತನಿಗೆ ಒಂದಷ್ಟು ಕಾಡು ಸುತ್ತಿಸಬೇಕಿತ್ತು . ಅವನ ಹದಿನಾರನೇ ವರ್ಷಕ್ಕೆ ಬಂದ ಬೊಜ್ಜು ಸ್ವಲ್ಪ ಕರಗಬೇಕಿತ್ತು.
ಮೂವರೂ ನಮ್ಮ ನಾಗರೀಕತೆಯನ್ನು ಹಿಂದೆ ಬಿಟ್ಟು ಗುಡ್ಡ ಹತ್ತತೊಡಗಿದೆವು . ಕಾಲು ದಾರಿಯೆಲ್ಲವೂ ಗಿಡಗಳಿಂದ ಕಮಿದು ಹೋಗಿತ್ತು . ಹಿಂದೆಲ್ಲಾ ದನ ಕಾಯುವವರು , ಕೆಲ ಊರಿನ ಜನ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರಿಂದ ದಾರಿ ಚೊಕ್ಕಟವಾಗಿತ್ತು . ಯಲ್ಲ ಕತ್ತಿ ಹಿಡಿದು ದಾರಿ ಸ್ವಚ್ಛ ಮಾಡುತ್ತಾ ಮುಂದೆ ಸಾಗುತ್ತಿದ್ದರೆ , ನಾವು ಅವನನ್ನೇ ಹಿಂಬಾಲಿಸುತ್ತಾ ಹೋಗುತ್ತಿದ್ದೆವು . ಯಾವ್ಯಾವುದೋ ಬೇರುಗಳನ್ನು ,ಬಳ್ಳಿಗಳನ್ನು "ಇದು ಔಷಧಿಗೆ ಬತೈತಿ " ಎಂದು ಯಲ್ಲ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ . ವಯಸ್ಸಿನಲ್ಲಿ ಹಿರಿಯವನಾದ ಅವನು ಚಿಗರೆ ಮರಿಯಂತೆ ಮುಂದೆ ಸಾಗುತ್ತಿದ್ದರೆ ,ಕಿರಿಯವನಾದ ಸುಮಂತ ಮಾರು-ಮಾರಿಗೆ "ಡ್ಯಾಡಿ ಸುಸ್ತು" ಎಂದು ಕುಳಿತು ಬಿಡುತ್ತಿದ್ದ . ಒಮ್ಮೆ ಕಾಲ ಬಳಿಯಿದ್ದ ಪೊದೆಯಿಂದ ಮೊಲವೊಂದು ಮಿಂಚಿನಂತೆ ಓಡಿ ಕಾಡಿನ ಅಗಾಧ ಮೌನವನ್ನು ಸೀಳಿಕೊಂಡು ಅಂತರ್ಧಾನವಾಯಿತು . "ಒಹ್ , ಸೀ  ರ್ಯಾಬಿಟ್" ಎಂದು ಉದ್ಗರಿಸಿದ ನನ್ನ ಮಗನ ಮೂರ್ಖತನಕ್ಕೆ ನಾನು ನಕ್ಕೆ . ಮೊಲ , ಕಾಡು ಕೋಳಿಗಳನ್ನು ಹಿಡಿಯುವ ಉರುಳನ್ನು ಯಲ್ಲ ನಮಗೆ ತೋರಿಸಿ ಅವನದೇ ಭಾಷೆಯಲ್ಲಿ ಅದರ ಬಗ್ಗೆ ವಿವರಿಸಿದ .
ಮೂವರೂ ಘಟ್ಟದ ಚೌಕಕ್ಕೆ ಬಂದೆವು .ನನ್ನ ಇಷ್ಟದ ಜಾಗದಲ್ಲಿ ಘಟ್ಟದ ಚೌಕವೂ ಒಂದು . ಅದು ನಮ್ಮೂರಿನ ಎತ್ತರದ ಗುಡ್ಡದ ತುತ್ತ ತುದಿ . ಅದನ್ನು ಹತ್ತಿ ಆಚೆ ನೋಡಿದರೆ ಶರಾವತಿಯ ಹಿನ್ನೀರಿನ ನೀಲಿ ಬಣ್ಣ ಕಣ್ಣಿಗೆ ರಾಚುತ್ತದೆ . ಅಲ್ಲಿ ಸಿಗುವ ಅಲೌಖಿಕ ಸುಖವನ್ನು ನಾನು ಬಹವಳೇ ಅನುಭವಿಸಿದ್ದೇನೆ . ಕೆಲವೊಮ್ಮೆ ಬಯಲು ಸೀಮೆಯ ಬಾಳು ಬೇಸರವೆನಿಸಿದಾಗ ಮನದಲ್ಲಿಯೇ ಘಟ್ಟದ ಚೌಕ ನೆನೆಸಿಕೊಂಡು ಖುಷಿಪಟ್ಟಿದ್ದೇನೆ . ಚೌಕದ ಒಂದು ಮೂಲೆಯಲ್ಲಿ ಕಲ್ಲು ಮಂಟಪವಿದೆ . ಯಾರು ಕಟ್ಟಿಸಿದ್ದು ? ಎಷ್ಟು ವರ್ಷದ ಹಿಂದೆ ? ಮುಂತಾದ ಪ್ರಶೆಗಳಿಗೆ ಯಾರಲ್ಲೂ ಉತ್ತರವಿಲ್ಲ . ನಮ್ಮೆಲ್ಲರ ಹುಟ್ಟಿನ ಬಗ್ಗೆ ,ಇರುವಿಕೆಯ ಬಗ್ಗೆ ಹೇಗೆ ಉತ್ತರಗಳು ಸಿಗುವುದಿಲ್ಲವೋ ಹಾಗೆಯೇ ಅದರ ಹುಟ್ಟಿನ ಬಗ್ಗೆ ಉತ್ತರಗಳಿಲ್ಲ . ಯಲ್ಲನೂ ಸೇರಿದಂತೆ ಹಲವರು ಅದರ ಮೇಲೆ ಕಥೆ ಹೇಳುತ್ತಾರೆ .ಸೀತೆಯನ್ನು ಕಳೆದುಕೊಂಡ ರಾಮ ಇದೇ ಕಲ್ಲು ಮಂಟಪದ ಮೇಲೆ ಕುಳಿತು ತನ್ನ ಪತ್ನಿಗಾಗಿ ಪರಿತಪಿಸುತ್ತಾ ಕಣ್ಣೀರು ಸುರಿಸುತ್ತಿದ್ದನಂತೆ .ಇಂದಿಗೂ ಮಂಟಪದ ಪಕ್ಕವೇ ಒಂದು ಹೆಸರಿಲ್ಲದ ತೊರೆ ಹುಟ್ಟಿ ಶರಾವತಿಯನ್ನು ಸೇರುತ್ತದೆನ್ನುವುದು ನಿಜವಾದರೂ ,ಆ ಕಥೆಯ ಸತ್ಯಾಸತ್ಯತೆಯ ಬಗ್ಗೆ ನನಗೆ ತಿಳಿದಿಲ್ಲ . ನನ್ನ ಹಿರಿಯರಿಂದ ಬಂದ ಕಥೆಯನ್ನು ನಾನು ಯಥಾವತ್ತು ಕಿರಿಯರಿಗೆ ದಾಟಿಸುತ್ತಿದ್ದೇನೆ ಅಷ್ಟೇ .
ಮೊದಲಿದ್ದ ಚೈತನ್ಯ ಯಲ್ಲನಲ್ಲಿ ಕಾಣಲಿಲ್ಲ . ಸುಮಂತ ಮಾತ್ರ ಬಹಳ ಖುಷಿಯಲ್ಲಿದ್ದ.ಗುಡ್ಡದಲ್ಲಿ  ಮಳೆಯ ನೀರು ಸೃಷ್ಟಿಸಿದ ಅಸಂಖ್ಯ ಜಲಪಾತಗಳಲ್ಲಿ ಕಾಲಿಟ್ಟುಕೊಂಡು ಕುಣಿದಾಡುತ್ತಿದ್ದ .
"ಅಲ್ನೋಡು ಡ್ಯಾಮು ಎಷ್ಟು ಚೆನ್ನಾಗಿದೆ " ಎಂದು ಆಶ್ಚರ್ಯ ಸೂಚಿಸುತ್ತಿದ್ದ . "ನಮ್ಮ ಪಶ್ಚಿಮ ಘಟ್ಟ ಹಿಮಾಲಯಕ್ಕಿಂತಲೂ ಹಳೆಯದು . ಮನುಷ್ಯ ಮೊದಲು ಕಾಲಿಟ್ಟಿದ್ದು ಪಶ್ಚಿಮ ಘಟ್ಟದಲ್ಲೇ. ಇಲ್ಲಿ ಲಕ್ಷಾಂತರ ಜೀವ ಪ್ರಭೇದಗಳಿವೆ . ಇಂಥಾ ಕಾಡನ್ನ , ಇಲ್ಲಿನ ಜನರ ಬದುಕನ್ನು ಡ್ಯಾಮು ಮುಳ್ಗ್ಸಿದೆ " ಎಂದೆ . ಅದೊಂದೂ ಅವನಿಗೆ ಅರ್ಥವಾಗದೆ ಹೌದೆಂಬಂತೆ ತಲೆಯಾಡಿಸಿದೆ .
ಸುಮಂತನಿಗೂ ,ಯಲ್ಲನಿಗೂ ಅಜಗಜಾಂತರ ವ್ಯತ್ಯಾಸವಿತ್ತು . ಯಲ್ಲ ನನ್ನ ಜೊತೆ ಇದ್ದಷ್ಟು ಸಲುಗೆಯಿಂದ ,ಸುಮಂತನ ಜೊತೆ ಇರಲಿಲ್ಲ . ಸುಮಂತನ ಕನ್ನಡ ಮಿಶ್ರಿತ ಇಂಗ್ಲಿಷಿಗೂ , ಯಲ್ಲನ ಗ್ರಾಮ್ಯ ಕನ್ನಡಕ್ಕೂ ತಾಳಮೇಳವೇ ಇರಲಿಲ್ಲ . ನಾನೂ ಊರು ಬಿಟ್ಟು ,ನನ್ನ ಮಗವನ್ನು ಅವನದೇ ಊರಿನಲ್ಲಿ ಪರಕೀಯನಾಗುವಂತೆ ನಾನು ಮಾಡಿದ್ದೆ . ಸುಮಂತ ನಗರದ ಪ್ರತಿನಿಧಿಯಾದರೆ ,ಯಲ್ಲ ಗ್ರಾಮದ ಪ್ರತಿನಿಧಿಯಾಗಿದ್ದ . ನಾನು ಗ್ರಾಮದಲ್ಲೂ ಇರದೇ , ನಗರದಲ್ಲೂ ತೊಳಲಾಟ ಅನುಭವಿಸುತ್ತಾ ಅತಂತ್ರವಾಗಿದ್ದೆ . ನಾವು ಭಾರತದ ನಿನ್ನೆ , ಇಂದು ಮತ್ತು ನಾಳೆಗಳ ಪ್ರತಿನಿಧಿಯಾಗಿದ್ದೆವು . ಸೂರ್ಯ ನಿಧಾನವಾಗಿ ಕೆಳಗಿಳಿಯುತ್ತಿದ್ದ . ದಿಗಂತದವರೆಗೂ ಶರಾವತಿಯೇ ಕಾಣುತ್ತಿದ್ದಳು . ಕೆಂಪಗಿನ ಸೂರ್ಯನನ್ನೂ ಶರಾವತಿ ಮುಳುಗಿಸುತ್ತಿರುವಂತೆ ನನಗೆ ಅನಿಸತೊಡಗಿತು . "ಆಮೇಲೆ ಕಾಡೆಮ್ಮೆ ,ಹಂದಿ ಬತೈತೆ ಹೊಂಟೋಗನ ಬನ್ನಿ " ಎಂದು ಯಲ್ಲ ಗಡಿಬಿಡಿ ಮಾಡಿದ .
ನಾಗರ ಪಂಚಮಿ ಮುಗಿದೇ ಹೋಯಿತು . ನಾನು ,ಅಪ್ಪ ,ನನ್ನ ಮಗ ಮೂವರೂ ಮಡಿಯುಟ್ಟುಕೊಂಡು ನಮ್ಮ ತೋಟದ ಸುತ್ತಲೂ ಇರುವ ಹಲವು ನಾಗರ ಕಲ್ಲುಗಳಿಗೆ ಹಾಲೆರೆದು ,ಪಾಯಸ ನೈವೇದ್ಯ ಮಾಡಿ ಬಂದೆವು .ರಾತ್ರಿ ಮದರಂಗಿ ಹಚ್ಚಿಕೊಂಡು ಅದು ಕೆಂಪಗಾಗುವ ಮೊದಲೇ ನಾವು ಹೊರಟು ನಿಂತೆವು . ಯಾವಾಗಲೋ ಸಂರಕ್ಷಿಸಿ , ಬೆಳೆಸಿದ ಸಣ್ಣ ಹುಳಿ ಮುರುಗಲಿನ ಗಿಡವನ್ನು ಯಲ್ಲ ಕಾರಿನೊಳಗೆ ತುಂಬಿದ .
"ಅದ್ನ ನೆಡೋಕೆ ಅಲ್ಲಿ ಜಾಗ ಎಲ್ಲಿದ್ಯೋ ?" ಎಂದು ಚಿಂತೆಯಿಂದಲೇ ಢಿಕ್ಕಿ ಮುಚ್ಚಿದೆ . ತುಂಬಿದ ಮನೆ ಮತ್ತೆ ಖಾಲಿಯಾಯಿತು . ಎಲ್ಲರಿಗೂ ವಿದಾಯ ಹೇಳಿ ನಾವು ಹೊರಟೆವು . ಯಲ್ಲನನ್ನು ನಾನು ನೋಡಿದ್ದು ಅದೇ ಕೊನೆ ಬಾರಿ ನಂತರದ ದಿನಗಳಲ್ಲಿ ಅವನಿಗೆ ಹುಷಾರು ತಪ್ಪಿ ,ಘಟ್ಟದ ಕೆಳಗಿನ ಅವನ ಮಗಳ ಮನೆಗೆ ಹೋದ . ಅದಾಗಿ ಕೆಲ ತಿಂಗಳುಗಳ ನಂತರ ಅವನು ಸತ್ತ ಸುದ್ದಿ ಬಂತು . ನಮ್ಮ ಒಂದು ಋಣ ತೀರಿತ್ತು , ಭೂತಕಾಲದ ಒಂದು ಕೊಂಡಿ ಕಳಚಿತ್ತು . ಒಂದು ಕ್ಷಣ ನಾನು ಮೌನವಾದೆ . ಅವನು ಕೊಟ್ಟ ಹುಲಿ ಮುರುಗಲಿನ ಗಿಡ ಆಗಷ್ಟೇ ಹಣ್ಣು ಬಿಡತೊಡಗಿತ್ತು .














26/11/18

ಗಾಲಿ

 ಚಳಿಗಾಲದಲ್ಲಿ ಬೆಳ್ಳಂ-ಬೆಳ್ಳಿಗೆ ಗಾಂಧೀ ಬಜಾರಿನ ಕಡೆ ಹೋಗುವುದು ಮಜಬೂತು ಅನುಭವ . ಇಬ್ಬನಿಯ ಮಧ್ಯದಲ್ಲಿ ಮಫ್ಲರ್ , ಸ್ವಟ್ಟರ್ ಧರಿಸಿ ವ್ಯಾಪಾರ ಶುರು ಮಾಡುವ ಗೂಡಂಗಡಿಯವರು . ಚಳಿಯನ್ನೂ ಲೆಕ್ಕಿಸದೆ ಬಜಾರಿನ ತುಂಬೆಲ್ಲ ಓಡಾಡಿ ಸುವಾಸನೆ ಹರಡುವ ಹೂ ಮಾರುವವರು . ಇದನ್ನು  ತನ್ನ ಜೀವಮಾನವೆಲ್ಲಾ ರಾಚಯ್ಯ ನೋಡಿದ್ದಾನೆ . ಐದು ಗಂಟೆಗೇ ಕೆ ಆರ್ ಮಾರ್ಕೆಟ್ನ ಡಿಪೋ ತಲುಪಿ , ತನ್ನ ಬಸ್ಸನ್ನು ತೊಳೆದು ,ಎಂಜಿನ್ ಹೀಟ್ ಆಗಲೆಂದು ಎರಡು ಬಾರಿ ಗುರುಗುಟ್ಟಿಸಿ ಗಾಂಧೀ ಬಜಾರಿನ ಕಡೆಗೆ ಹೊರಡುತ್ತಾನೆ . ಅಲ್ಲೇ ವಿದ್ಯಾರ್ಥಿ ಭವನದ ಎದುರಿನ ಹೂವಿನ ಅಂಗಡಿಯಲ್ಲಿ ಎರಡು ಮೊಳ ಹೂವು ಖರೀದಿಸಿ ಬಸ್ಸಿನ ಡ್ಯಾಶ್ ಬೋರ್ಡಿನ ಮೇಲಿನ ಧರ್ಮಸ್ಥಳದ ಮಂಜುನಾಥನಿಗೂ , ಗ್ಲಾಸ್ ಮೇಲಿನ ಸಿಗಂದೂರು ಚೌಡೇಶ್ವರಿಗೂ ಸಮನಾಗಿ ಒಂದೊಂದು ಮೊಳ ಮುಡಿಸುತ್ತಾನೆ . ನಂತರ ವಾಡಿಯಾ ರಸ್ತೆಯಲ್ಲಿ ಎರಡು ಬಾಳೆಹಣ್ಣು ತೆಗೆದುಕೊಂಡು ಇಬ್ಬರಿಗೂ ನೈವೇದ್ಯ ಮಾಡಿ ತಾನೊಂದು ತಿಂದು ಕಂಡಕ್ಟರ್ ಗೆ  ಇನ್ನೊಂದು ಕೊಡುತ್ತಾನೆ . ಸುಮಾರು ಮೂವತ್ತು ವರ್ಷ ಇದು ಹೀಗೆ ನಡೆದಿದೆ . ರಾಚಯ್ಯನಿಗೂ ತನ್ನ ಜೀವನ ಬಸ್ಸಿನ ಗಾಲಿಯಂತೆ ಸುಲಲಿತವಾಗಿ ಸಾಗುತ್ತಿದೆ ಅನಿಸುತ್ತದೆ .
ನಲವತ್ತು ವರ್ಷಗಳ ಕೆಳಗೆ ಡಿಪ್ಲೋಮ ಸೇರಿ ಎರಡೇ ತಿಂಗಳಿಗೆ ಅವನಿಗೆ ಡ್ರೈವರ್ ಕೆಲಸ ಸಿಕ್ಕಿತ್ತು . "ಓದೋದೇ ಕೆಲಸ ಸಿಗ್ಲಿ ಅಂತ , ನಿಂಗೆ ಕೆಲಸ ಸಿಕ್ಕಿದ್ರು ಸುಮ್ನೆ ಯಾಕೆ ಓದ್ತಿಯ ?" ಎಂಬ ಊರಿನವರ ದೇಶಾವರಿ ಸಲಹೆಗೆ ಒಪ್ಪಿ ರಾಚಯ್ಯ ಕೆಲಸಕ್ಕೆ ಸೇರಿದ್ದ . ಮೊದಲಿಗೆ ಬೆಂಗಳೂರು ಹಾಗೂ ಚಿಕ್ಕಮಗಳೂರು ರೂಟಿಗೆ ಆತನನ್ನು ಡ್ರೈವರ್ ಆಗಿ ನೇಮಿಸಿದ್ದರು . ಹಗಲು ನಿದ್ದೆ , ರಾತ್ರಿ ಡ್ರೈವಿಂಗ್ . ಚಿಕ್ಕಮಗಳೂರಿನ ಘಾಟ್ ಸೆಕ್ಷನ್ ಗಳಲ್ಲಿ ಮಳೆಗಾಲದ ರಾತ್ರಿಯಲ್ಲಿ ಬಸ್ ಚಾಲನೆ ಮಾಡುವುದು ಸುಲಭದ್ದಾಗಿರಲಿಲ್ಲ . ಹಲವು ಸಲ ಕಾಡೆಮ್ಮೆ , ಆನೆ ಅಷ್ಟೇ ಏಕೆ ಕೆಲವೊಮ್ಮೆ ಹುಲಿ , ಚಿರತೆ ಕಂಡಿದ್ದೂ ಇದೆ . ಕಡಿದಾದ ತಿರುವುಗಳು , ಜಾರುವ ಕಾಂಕ್ರೀಟ್ ರಸ್ತೆ . ಮೂರ್ನಾಲ್ಕು ವರ್ಷವೇ ಆ ರೂಟಿಗೆ ಹೋಗಿದ್ದನೇನೋ . ನಂತರ ಬಿಟಿಎಸ್ ಗೆ ವರ್ಗವಾಗಿ ಮಾರ್ಕೆಟ್ಟಿನ ಡಿಪೋ ಸೇರಿದ್ದ . ನಂತರದ ವರ್ಷಗಳಲ್ಲಿ ಬೇರೆ ಬೇರೆ ರೂಟು ಸಿಕ್ಕಿದೆ . ಆದರೂ ರಾಚಯ್ಯ ಓಡಿಸಿದ್ದು ಆತನಿಗೆ ಮೊದಲು ಸಿಕ್ಕಿದ್ದ ಬಸ್ಸು ಮಾತ್ರ . ನಲವತ್ತು ವರ್ಷಗಳ ಕಾಲ ಒಂದೇ ಬಸ್ಸು ಓಡಿಸಿದ್ದರಿಂದ ಆತನಿಗೂ ಬಸ್ಸಿಗೂ ಒಂದು ವಿಶೇಷ ಸಂಬಂಧ ಏರ್ಪಟ್ಟಿತ್ತು . ಬೆಂಗಳೂರು ಸೇರಿದ ಮೇಲಂತೂ ಬಸ್ಸು ತಾನಾಗೇ ಚಲಿಸುತ್ತಿದೆ ಎಂದು ಅವನಿಗೆ ಅನಿಸುತಿತ್ತು . ಆತನ ವೃತ್ತಿ ಜೀವನದಲ್ಲಿ ಒಂದೂ ಅಪಘಾತ , ಯದ್ವಾ ತದ್ವ ಓಡಿಸುವುದು ಇಲ್ಲ . ಇದಕ್ಕೆಲ್ಲಾ ಆ ಬಸ್ಸೇ ಕಾರಣ ಎಂದು ಆತ ನಂಬಿದ್ದಾನೆ . ಒಂದು ತಿಂಗಳಿಗೇ ಆಯಿಲ್ ಚೇಂಜ್ ಮಾಡಿರೆಂದು ಡಿಪೋಗೆ ಬಿಟ್ಟಾಗ ಅವರು ಬೈದು ಕಳಿಸಿದ್ದಿದೆ . ಆಗ ರಾಚಯ್ಯ ತನ್ನ ಸ್ವಂತ ದುಡ್ಡು ಖರ್ಚು ಮಾಡಿ ರಿಪೇರಿ ಮಾಡಿಸಿದ್ದಾನೆ .
ಈಗ ಇದ್ದಕಿದ್ದಂತೆ ನಿವೃತ್ತಿ ಎಂಬ ಪೆಡಂಭೂತ ಅವನ ಎದುರಿಗೆ ನಿತ್ತಿತ್ತು . ಆತನಿಗೆ ಈಗ ದುಡ್ಡಿನ ಚಿಂತೆ ಇಲ್ಲದಿದ್ದರೂ ತನ್ನ ಬಸ್ಸನ್ನು ಬೇರೆಯವರು ಯದ್ವಾ-ತದ್ವಾ ಓಡಿಸಿಬಿಟ್ಟರೆ ಎಂಬ ಭಯ ಕಾಡುತಿತ್ತು . ಕೊನೆಯ ದಿನವಾದ್ದರಿಂದ ಎರಡು ರೂಪಾಯಿ ಹೆಚ್ಛೇ ಖರ್ಚು ಮಾಡಿ ಅದಕ್ಕೆ ಮೂರು ರೂಪಾಯಿ ಭಕ್ಷೀಸು ಕೊಟ್ಟು ಹೂವು ಖರೀದಿಸಿದ . ತನ್ನ ಬಸ್ಸಿನ ಖಾಯಂ ಪ್ರಯಾಣಿಕರಿಗೆ ಎಂದು ಹೆಚ್ಚು ಬಾಳೆಹಣ್ಣು ಖರೀದಿಸಿದ .
ಮಾರ್ಕೆಟ್ಟಿನಿಂದ ಕುವೆಂಪು ನಗರದ ತನಕವೂ ಪ್ರತಿಯೊಂದು ಸ್ಟಾಪಿನಲ್ಲೂ ಅವನಿಗೆ ಪರಿಚಯದವರಿದ್ದಾರೆ . ಹಾಗೆ ಹತ್ತಿದ ಎಲ್ಲರಿಗೂ ಒಂದೊಂದು ಹಣ್ಣು ಕೊಟ್ಟು ಹಣ್ಣು ಖಾಲಿಯಾಯಿತು . ಬೆಳಿಗ್ಗೆಯೆಲ್ಲಾ ಖುಷಿಯಿಂದ ಇದ್ದ ಅವನು ಸಂಜೆ ಹೊತ್ತಿಗೆ ಮಂಕಾಗಿದ್ದ . ಬಸ್ಸನ್ನು ಡಿಪೋಗೆ ಬಿಟ್ಟು ಬರುವಾಗಲಂತೂ ಕಣ್ಣೀರು ಇನ್ನೇನು ಬಿದ್ದೇ ಹೋಯಿತು ಎಂಬಷ್ಟು ಕಣ್ಣು ತೇವವಾಗಿತ್ತು . ಯಾರಿಗೂ ಅದನ್ನು ತೋರಗೊಡದೆ ಬಸ್ಸು ಹತ್ತಿ ಮನೆಗೆ ಬಂದು ಬಿಟ್ಟ . ಸಿಬ್ಬಂದಿಗಳಿಗೆ ಯಾವಾಗಲೂ ಟಿಕೆಟ್ ಕೊಳ್ಳುವ ಅಗತ್ಯವಿರಲಿಲ್ಲ , ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು . ಆ ರೀತಿ ಉಚಿತವಾಗಿ ಪ್ರಯಾಣಿಸಿವುದು ಇದೇ ಕೊನೆ ಎಂದು ಯೋಚಿಸಿ ಮತ್ತೆ ದುಃಖ ಉಮ್ಮಳಿಸಿ ಬಂತು . ಮನೆಗೆ ಬಂದು ಊಟ ಮಾಡದೆ ಹಾಗೆಯೇ ಹಾಸಿಗೆಯ ಮೇಲೆ ಅಡ್ಡಾದ . ಮರುದಿನ ಯಥಾ ಪ್ರಕಾರ ನಾಲ್ಕು ಗಂಟೆಗೆ ಎಚ್ಚರವಾಯಿತು . ಮತ್ತೆ ಎಷ್ಟೇ ಪ್ರಯತ್ನಪಟ್ಟರೂ ನಿದ್ದೆ ಬರಲೇ ಇಲ್ಲ . ಕೊನೆಗೆ ಬೇರೆ ದಾರಿಯೇ ಕಾಣದೆ ತನ್ನ ಬಸ್ಸನ್ನು ನೋಡಿ ಬರಲು ಡಿಪೋ ಕಡೆ ಹೊರಟ . ಮಾರ್ಕೆಟ್ಟಿನ ಬಸ್ಸು ಹತ್ತುತ್ತಿದ್ದಂತೆ ನಿರ್ವಾಹಕ ಬಂದು "ಎಲ್ಲಿಗ್ರಿ ? ಟಿಕೆಟ್ ತಗೋಳಿ " ಎಂದಿದ್ದದನ್ನು ಅರಗಿಸಿಕೊಳ್ಳುತ್ತಾ ದುಡ್ಡು ತೆಗೆದುಕೊಟ್ಟ . ಡಿಪೋದ ಮೂಲೆಯಲ್ಲಿ ಅನಾಥವಾಗಿ ಇವನ ಬಸ್ಸು ನಿತ್ತಿತ್ತು . ಜಾತ್ರೆಯಲ್ಲಿ ಅಪ್ಪನನ್ನು ಕಳೆದಕೊಂಡ ಮಗುವಿನಂತೆ ಅವನ ಬಸ್ಸು ನಿಂತಿರುವುದು ಅವನಿಗೆ ದಯನೀಯವಾಗಿ ಕಂಡಿತು . ಅಷ್ಟರಲ್ಲಿಯೇ ತಡವಾಗಿ ಹೋಯಿತೆಂದು  ಗಡಿಬಿಡಿಯಲ್ಲೇ  ಬಂದ ಶೇಖರ ಬಸ್ಸನ್ನು ಹತ್ತಿ ಸ್ಟಾರ್ಟ್ ಮಾಡಿದ .
"ಎರಡು ನಿಮಿಷ ತಾಳು ಎಂಜಿನ್ ಹೀಟ್ ಆಗ್ಲಿ " ಎಂದು ರಾಚಯ್ಯ ಕೊಟ್ಟ ಸಲಹೆಯನ್ನು ತಿರಸ್ಕೃತ ಭಾವನೆಯಿಂದಲೇ  ಶೇಖರ ಸ್ವೀಕರಿಸಿದ . ಮುಂದೇನು ಮಾಡಬೇಕೆಂದು ತಿಳಿಯದೆ ರಾಚಯ್ಯ ಬಸ್ಸು ಹತ್ತಿಬಿಟ್ಟ . ನೂರು ರೂಪಾಯಿಯ ದಿನದ ಪಾಸು ಖರೀದಿಸಿ ಮುಂದಿನ ಸೀಟಿನಲ್ಲಿಯೇ ಕುಳಿತ . ವರುಷಗಟ್ಟಲೇ ಪರಿಚಯವಿದ್ದ ಬೆಂಗಳೂರಿನ ರೋಡುಗಳು ಅಂದು ಅವನಿಗೆ ಅಪರಿಚಿತವೆನಿಸಿತು . ಡ್ಯಾಷ್ ಬೋರ್ಡಿನ ಮೇಲಿನ ಮಂಜುನಾಥ , ಸಿಗಂದೂರು ಚೌಡೇಶ್ವರಿಯನ್ನು  ಶೇಖರ ಉಪವಾಸ ಕೆಡವಿದ್ದು ನೋಡಿ ಸಿಟ್ಟು ನೆತ್ತಿಗೇರಿತು . ಶೇಖರ ಯಾವ ಮುಲಾಜೂ ಇಲ್ಲದೆ ಧಡ-ಧಡನೆ ಗೇರು ಬದಲಿಸುವ ರೀತಿ , ಒಂದೇ ಏಟಿಗೆ ಬ್ರೇಕು ಹಾಕುವುದನ್ನು ನೋಡಿ ಅವನಿಗೆ ತನ್ನ ಮಗುವಿಗೆ ಬೇರೆಯವರು ಹೊಡೆದಂತ ಭಾವನೆ ಬರತೊಡಗಿತು . ಒಂದು ಕ್ಷಣವೂ ಬಸ್ಸಿನಲ್ಲಿ ಕೂರಲಾಗದೆ ಶೇಖರ ಬಸ್ಸನ್ನು ನಿಲ್ಲಿಸಲು ನಿಧಾನ ಮಾಡುತ್ತಿದ್ದಾಗಲೇ ರಾಚಯ್ಯ ಹಾರಿಕೊಂಡ . ಇನ್ನೆಂದೂ ಅವನಿಗೆ ತನ್ನ ಬಸ್ಸನ್ನು ತಿರುಗಿ ನೋಡಬಾರದು ಎನಿಸಿತು .
ತಿಂಗಳುಗಳೇ ಉರುಳಿದವು  , ನಿಧಾನವಾಗಿ ರಾಚಯ್ಯನಿಗೆ ನಿವೃತ್ತಿ ಜೀವನ ಒಗ್ಗತೊಡಗಿತ್ತು . ಈಗ ಆತ ಕಷ್ಟಪಟ್ಟು ಐದು ಗಂಟೆಯವರೆಗೂ ಮಲಗಬಲ್ಲವನಾಗಿದ್ದ. ನಂತರ ಕಾಫಿ ಕುಡಿದು ವಾಕಿಂಗು , ಪೇಪರ್ ಓದುವುದು ಇತ್ಯಾದಿ . ಮಗನೂ ಅಷ್ಟಿಟ್ಟು ಓದಿ ಕೆಲಸಕ್ಕೆ ಸೇರಿದ್ದರಿಂದ ಸಂಸಾರ ಸುಲಭವಾಗಿ ಸಾಗುತಿತ್ತು . ಬೆಳಿಗ್ಗೆ ಆರು ಗಂಟೆಗೆ ಮಾಧವನ್ ಪಾರ್ಕಿನ ಬೆಂಚಿನ ಮೇಲೆ ಕುಳಿತು ಪೇಪರ್ ಓದುತ್ತಾ ಅವನ ಬಸ್ಸು ಹೋಗುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದ. ಸರಿಯಾಗಿ ಆರೂ ಐದಕ್ಕೆ ಶೇಖರ ಸುಯ್ಯನೆ ಬಸ್ಸು ಓಡಿಸಿಕೊಂಡು ಹೋಗುವುದನ್ನು ಕುತೂಹಲ ಮಿಶ್ರಿತ ಸಿಟ್ಟಿನಲ್ಲಿ ನೋಡುತ್ತಿದ್ದ . ಬೆಂಗಳೂರಿನ ಜೀವನ ಯಾಂತ್ರಿಕ ಎಂದು ಅನಿಸತೊಡಗಿತು . ಯಾವ ಪಾರ್ಕುಗಳು , ಶಾಪಿಂಗ್ ಕಾಂಪ್ಲೆಕ್ಸುಗಳು ಅವನನ್ನು ಒಂದು ಕಾಲಕ್ಕೆ ಆಕರ್ಷಿಸಿತ್ತೋ , ಇಂದು ಅವೇ ಅವನ ಬೇಸರಕ್ಕೆ, ಏಕತಾನತೆಗೆ ಕಾರಣವಾಗಿತ್ತು .  ದಿನವೂ ಬಸ್ಸನ್ನು ನೋಡುವುದು ಅವನಿಗೆ ಚಾಳಿ ಆಗಿಹೋಯಿತು . ಏಕತಾನತೆಯನ್ನು ಸೀಳಿಕೊಂಡು ಬರುತ್ತಿದ್ದ ಅವನ ಬಸ್ಸು ಒಂದೇ ರಾಚಯ್ಯನ ಜೀವನದಲ್ಲಿ ಆಶಾಕಿರಣವಾಗಿತ್ತು . ತನ್ನ ಬಸ್ಸು ಆರೋಗ್ಯವಾಗಿದೆ ಎಂಬ ಸಮಾಧಾನ !
ಹೀಗಿರುವಾಗ ಒಂದು ದಿನ ಎಷ್ಟು ಹೊತ್ತಾದರೂ ಬಸ್ಸು ಕಾಣಲೇ ಇಲ್ಲ . ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಕಾದರೂ ಬಸ್ಸು ಬರಲೇ ಇಲ್ಲ . ಅವನಿಗೆ ಆದ ಚಡಪಡಿಕೆ ಹೇಳತೀರದು . ಸತ್ಯಜಿತ್ ರೇ ಸಿನಿಮಾದ ಹೀರೋನಂತೆ ಈ ಜಗತ್ತೇ ನಶ್ವರ ಎಂದು ಚಿಂತಿಸತೊಡಗಿದ . ಚಡಪಡಿಕೆ ತಾಳಲಾರದೆ ಸಂಜೆ ಡಿಪೋಗೆ ಹೋದ. ಸ್ಕ್ರ್ಯಾಪು ವಾಹನಗಳ ಪಕ್ಕದಲ್ಲಿ ಇವನ ಬಸ್ಸು ಗ್ಲಾಸು ಒಡೆದುಕೊಂಡು ನಜ್ಜು ಗುಜ್ಜಾಗಿ ಬಿದ್ದಿತ್ತು . ತನ್ನ ತಂದೆ ಸತ್ತಾಗಲೂ ಅಳದ ರಾಚಯ್ಯ ಅಂದು ಗಳಗಳನೆ ಅತ್ತ .  ಡಿಪೋ ಮ್ಯಾನೇಜರ್ ಬಳಿ ಆದದ್ದನ್ನೆಲ್ಲಾ ಕೇಳಿ ತಿಳಿದುಕೊಂಡ .
"ಇನ್ ಏನ್ರಿ ಸರಿ ಮಾಡ್ಸೋದು ಅದ್ನ , ಬಾಳ ವರ್ಷ ಆಗಿದೆ ಅದುಕ್ಕೆ ಗುಜುರಿಗೆ ಹಾಕ್ತೀವಿ " ಎಂದದ್ದನ್ನು ಕೇಳಿ ಅವನಿಗೆ  ಜಂಗಾಬಲವೇ ಉಡುಗಿಹೋಯಿತು . ತಕ್ಷಣ ಸಾವರಿಸಿಕೊಂಡು
"ಸಾರ್  ಸ್ವಲ್ಪ ದಿನ ತಡೀರಿ ನಾನೇ ಅದನ್ನ ತಗೋತೀನಿ " ಎಂದು ಹೇಳಿ ಎದ್ದು ಬಂದ . ರಾಚಯ್ಯ ಒಂದು ರೀತಿ ಸ್ಥಿಮಿತ ತಪ್ಪಿದವರಂತೆ ವರ್ತಿಸತೊಡಗಿದ . ಮನೆಯ ಜಗುಲಿಯಲ್ಲಿ ಶತ-ಪಥ ತಿರುಗಿ ಯೋಚಿಸತೊಡಗಿದ . ಬಸ್ಸು ಖರೀದಿಸಲು ಸುಮಾರು ಮೂರ್ನಾಲ್ಕು ಲಕ್ಷವಾದರೂ ಬೇಕಿತ್ತು . ಎಲ್ಲಿಂದ ತರುವುದು ? . ಇರುವ ಎಲ್ಲಾ ಉಳಿವಿಕೆಯನ್ನು ಬಾಚಿ ಬಳಿದರೆ ಎರಡು ಲಕ್ಷವೂ ಆಗುವುದಿಲ್ಲ .
ಮರುದಿನವೇ ಬ್ಯಾಂಕಿಗೆ ಹೊರಟ . ತಾನು ಗುಜುರಿ ವ್ಯಾಪಾರ ಮಾಡುತ್ತೇನೆಂದು ಅದಕ್ಕೆ ಸಾಲ ಬೇಕು ಎಂದು ಅರ್ಜಿ ಗುಜಾರಿಯಿಸಿದ . ಅರವತ್ತು ದಾಟಿದ ಅವನಿಗೆ ಯಾವ ಸ್ಕೀಮಿನಲ್ಲೂ ಸಾಲ ಕೊಡುವುದು ಅಸಾಧ್ಯ ಎಂದು ಮ್ಯಾನೇಜರ್ ಅಲ್ಲಗೆಳೆದು ಬಿಟ್ಟರು . ನಂತರ ರಾಚಯ್ಯ ಯೋಚಿಸಿ , ತನ್ನ ಮನೆಯನ್ನು ಅಡವಿಟ್ಟು ಪರ್ಸನಲ್ ಲೋನ್ ಎತ್ತಿದ . ಇಪ್ಪತ್ತು ಬೈ ಮೂವತ್ತರ ಮನೆಗೆ ನಾಲ್ಕು ಲಕ್ಷದ ಮೇಲೆ ಒಂದು ಬಿಡಿಗಾಸೂ ಹುಟ್ಟಲಿಲ್ಲ .
ಹರಾಜಿನ ದಿನ ಬಂದೇ ಬಿಟ್ಟಿತು . ಡಿಪೋದ ಗ್ಯಾರೇಜಿನಲ್ಲಿ ದೊಡ್ಡ ಸಭೆ , ನೂರಾರು ಉದ್ದಿಮೆದಾರರು . ಅವರ ಮಧ್ಯೆ ರಾಚಯ್ಯ ಗುಲಗಂಜಿಯಂತೆ ಕಂಡ . ನೋಡನೋಡುತ್ತಲೇ ಹರಾಜಿನ ದರ ಐದು ಲಕ್ಷ ದಾಟಿ ಬಿಟ್ಟಿತು . ಅದಾಗಿ ಎರಡು ದಿನ ರಾಚಯ್ಯ ಮಲಗಲೇ ಇಲ್ಲ .
ಅವನ ಬಸ್ಸನ್ನು ಡಿಪೋದಿಂದ ಗುಜುರಿ ಅಂಗಡಿಗೆ ಸಾಗಿಸುವ ದಿನ ದೂರದಲ್ಲಿ ನಿಂತು ನೋಡುತ್ತಿದ್ದ . ಸಾಲು ಸಾಲು ಬಸ್ಸುಗಳು ಕ್ರಷರಿನ ಬೆಲ್ಟಿನ ಮೇಲೆ ಸಾಗಿ , ಒಂದು ಚೇಂಬರ್ ಒಳಗೆ ಹೋಗುತಿತ್ತು . ಹೋಗುತ್ತಿದ್ದಂತೆ ದೊಪ್ಪೆಂದು ಕ್ರಷರ್ ಅದನ್ನು ಒತ್ತಿ ಅಪ್ಪಚ್ಚಿ ಮಾಡುತಿತ್ತು . ತನ್ನ ಬಸ್ಸಿನ ಸಾವನ್ನು ನೋಡಲು ಧೈರ್ಯ ಸಾಲದೇ ರಾಚಯ್ಯ ಅಲ್ಲಿಂದ ಹೊರಟು ಬಿಟ್ಟ . ತನ್ನ ಬದುಕಿನ ಗಾಲಿಯ ಗಾಳಿ ಹೋದಂತೆ ಅವನಿಗೆ ಭಾಸವಾಯಿತು . ಆತ  ಹತ್ತಿದ ಸಿಟಿ ಬಸ್ಸು ಟ್ರಾಫಿಕ್ಕಿನಲ್ಲಿ ಲೀನವಾಯಿತು ........  

25/5/18

ಸುಬ್ಬಣ್ಣನ ಕವಳ

 ಮಲೆನಾಡಿನ ಮಳೆಗೆ ಎಲೆಕ್ಟ್ರಾನಿಕ್ ಉಪಕರಣಗಳು ಪತರುಗುಟ್ಟಿ ಹೋಗುತ್ತವೆ . ವಿದ್ಯುತ್ ತಂತಿಯ ಮೇಲೆ ಮರ ಬಿದ್ದೋ , ಟ್ರಾನ್ಸ್ ಫಾರ್ಮರ್ ಗೆ ಸಿಡಿಲು ಬಡಿದೋ , ಬಾವಲಿಗಳು ಸಿಕ್ಕಿ ಸತ್ತೋ ಕರೆಂಟು ಕೈ ಕೊಡುವುದರ ಜೊತೆಗೆ ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತದೆ . ಈ ಕಾರಣಗಳಿಂದಲೇ ಪ್ರತಿ ಮನೆಯಲ್ಲೂ ಹಾಳಾದ ಟಿವಿ , ಮಿಕ್ಸಿ ,ಫ್ರಿಡ್ಜು ಇರುವುದು ಸಾಮಾನ್ಯ . ಆದ್ದರಿಂದ ಮಲೆನಾಡಿನಲ್ಲಿ  ರಿಪೇರಿ ಕೆಲಸ ಮಾಡುವವರಿಗೆ ವಿಪರೀತ ಬೇಡಿಕೆ ಇದೆ . ಇದಕ್ಕೆ ತದ್ವಿರುದ್ಧವಾಗಿ ನಮ್ಮೂರಿನಲ್ಲಿ ರಿಪೇರಿಯವರು ಸಿಗುವುದು ಬಹಳವೇ ಕಷ್ಟ . ಸಿಕ್ಕಿದರೂ ಅವರು ತಲೆ ಬುಡ ತಿಳಿಯದ ಹವ್ಯಾಸಿ ರಿಪೇರಿಯವರೇ ಆಗಿರುತ್ತಾರೆ .
ಇದನ್ನೇ ಬಂಡವಾಳ ಮಾಡಿಕೊಂಡು ಕಳೆದ ಮೂವತ್ತು ವರುಷಗಳಿಂದ ಸುಬ್ಬಣ್ಣ ತನ್ನ ಅಂಗಡಿ ನಡೆಸುತ್ತಿದ್ದಾನೆ . ಆತನ ಅಂಗಡಿಯಲ್ಲಿ ಮರ್ಫಿ ರೇಡಿಯೋದಿಂದ ಹಿಡಿದು ಒನಿಡಾ ಓವೆನ್ ತನಕ ಎಲ್ಲವೂ  ಬೆಚ್ಚಗೆ ಮಲಗಿರುತ್ತದೆ . ಸುಬ್ಬಣ್ಣನೂ ಸಹ ಹವ್ಯಾಸದಿಂದಲೇ ಕೆಲಸ ಕಲಿತವನು . ಅವನ ಮಡಿಲಲ್ಲೇ ಎಷ್ಟೋ ರೇಡಿಯೋಗಳು ಪರಲೋಕ ಸೇರಿದೆ , ಅದೆಷ್ಟೂ ಟಿವಿಗಳಿಗೆ ಸುಬ್ಬಣ್ಣ ಮುಕ್ತಿ ಪ್ರಾಪ್ತಿ ಮಾಡಿದ್ದಾನೆ . ಗಿರಾಕಿಗಳು ಜಗಳ ಮಾಡಿ ಸುಬ್ಬಣ್ಣ ದಂಡವನ್ನೂ ಎಷ್ಟೋ ಬಾರಿ ತೆತ್ತಿದ್ದಾನೆ . ಆತನೇ ಹೇಳುವಂತೆ ಅವನು ಲಾಭಕ್ಕಾಗಿ ಆಗಲಿ , ದುಡ್ಡಿನ ಆಸೆಗೆ ಆಗಲಿ ಕೆಲಸ ಮಾಡುವುದಿಲ್ಲ . ಅವನ ಮಟ್ಟಿಗೆ ಆತ ಮಾಡುತ್ತಿರುವುದು ಸಮಾಜ ಸೇವೆ . ಅವನಿಲ್ಲದಿದ್ದರೆ ನಾವೆಲ್ಲರೂ ಶಿವಮೊಗ್ಗಕ್ಕೆ ಓಡಾಡಿ ಸುಸ್ತಾಗುತ್ತಿದ್ದೆವು ಎಂಬುದಂತೂ ನಿಜ .
ಈಗ ಕೆಲವು ವರ್ಷಗಳ ಹಿಂದೆ ನಾನು ಒಂದು ಕಾರ್ಡ್ಲೆಸ್ ಫೋನು ಖರೀದಿ ಮಾಡಿದ್ದೆ . ಮಳೆಗಾಲದಲ್ಲಿ ಮಳೆ ನೋಡುತ್ತಾ ಕೆನೋಪಿಯಲ್ಲಿ ಕುಳಿತು ಫೋನಿನಲ್ಲಿ ಮಾತಾಡುವುದು ನನ್ನ ಹವ್ಯಾಸ . ಇದೆ ಕಾರಣಕ್ಕೆ ಸ್ವಲ್ಪ ಹೆಚ್ಛೇ ಖರ್ಚಾದರೂ ಸರಿ ಎಂದು ಕಾರ್ಡ್ಲೆಸ್ ಫೋನು ಖರೀದಿಸಿದ್ದೆ . ಮೊನ್ನೆ ಮೊನ್ನೆ ಆಕಾಶವೇ ತೂತು ಬಿದ್ದಂತೆ ಜೋರು ಮಳೆ . ಜೊತೆಗೆ ಗುಡುಗು , ಸಿಡಿಲು . ಫೋನಿನ ಕನೆಕ್ಷನ್ನು ತಪ್ಪಿಸಿ ಇಟ್ಟಿದ್ದೆನಾದರೂ ರಿಸೀವರನ್ನು ಆಫ್ ಮಾಡಲು ಮರೆತಿದ್ದೆ . ಮರುದಿನ ಬೆಳಿಗ್ಗೆಯಿಂದ ರಿಸೀವರ್ ಕೆಲಸ ಮಾಡುತ್ತಿರಲಿಲ್ಲ . ನಾನೇ ಬಿಚ್ಚಿ ಸರಿ ಮಾಡಬಹುದಿತ್ತು ಆದರೆ ಅದಕ್ಕೆ ಬೇಕಾದ ಹತಾರಗಳು ಯಾವುವೂ ನನ್ನಲ್ಲಿ ಇರಲಿಲ್ಲ . ಮೇಲಾಗಿ ಬಿಚ್ಚಿ ತೊಂದರೆ ಹುಡುಕಿ ಕ್ಯಾಪಾಸಿಟರನ್ನೋ , ರೆಸಿಸ್ಟರನ್ನೋ ಹುಡುಕಿಕೊಂಡು ಬೀದಿ ಬೀದಿ ಅಲೆಯುವುದು ಇಷ್ಟವಿರಲಿಲ್ಲ . ಹಾಗಾಗಿ ವಿಧಿಯಿಲ್ಲದೆ ನಾನು ಸುಬ್ಬಣ್ಣನ ಅಂಗಡಿಗೆ ಹೋಗಬೇಕಾಯ್ತು .
ಹಾಗೆ ನೋಡಿದರೆ ನನಗೆ ಸುಬ್ಬಣ್ಣನ ಅಂಗಡಿಗೆ ಹೋಗುವುದು ಖುಷಿ . ಉಳಿದ ಅಂಗಡಿ ಮಾಲಿಕರಂತೆ ಸುಬ್ಬಣ್ಣ ಹೆಚ್ಚು ಮಾತನಾಡಿ ತಲೆ ತಿನ್ನುವುದಿಲ್ಲ . ಯಾವಾಗಲೂ ಕವಳ ಹಾಕಿಕೊಂಡು ಸುಮ್ಮನೆ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿರುತ್ತಾನೆ . ಆತ ಕವಳ ಉಗಿದು ಬಂದನೆಂದರೆ ನಾನು ಅಲ್ಲಿಂದ ಜಾಗ ಖಾಲಿ ಮಾಡುತ್ತೇನೆ . ಶಾಸ್ತ್ರೀಯವಾಗಿ ಎಲೆಕ್ಟ್ರಾನಿಕ್ಸ್ ಕಲಿಯದ ಸುಬ್ಬಣ್ಣ ಅವನ ಡೌಟ್ ಗಳನ್ನು  ನನ್ನ ಬಳಿಯೇ ಕೇಳುತ್ತಾನೆ . ಎಸ್ಸೆಸ್ಸೆಲ್ಸಿ ಪಾಸಾಗದ ಆತನಿಗೆ ಎಲೆಕ್ಟ್ರಾನಿಕ್ಸ್ ಹೇಳಿಕೊಡುವುದು ನನಗೆ ಅತಿ ತ್ರಾಸದಾಯಕ . ಇಡೀ ಸಾಗರದ ಪ್ರತಿ ಮನೆಯ ಆರ್ಥಿಕ ಸ್ಥಿತಿ ಗತಿ ಸುಬ್ಬಣ್ಣನ ಅಂಗಡಿಯಲ್ಲಿ ಕುಳಿತು ಲೆಕ್ಕ ಹಾಕಬಹುದು . ಹಳೆಯ ಡೂಮು ಟಿವಿಯನ್ನು ರಿಪೇರಿಗೆ ಕೊಟ್ಟಿದ್ದಾರೆ ಎಂದರೆ ಬಡವರೆಂದೂ , ಲ್ಯಾಪ್ಟಾಪು , ಓವೆನ್ ಕೊಟ್ಟಿದ್ದರೆ ಶ್ರೀಮಂತರೆಂದೂ ನಾನು ಲೆಕ್ಕ ಹಾಕುತ್ತಿದ್ದೆ . ನನಗೆ ತಿಳಿದ ಮಟ್ಟಿಗೆ ಸುಬ್ಬಣ್ಣನಿಗೆ ಕವಳ ಬಿಟ್ಟರೆ ಬೇರೆ ಕೆಟ್ಟ ಚಾಳಿ ಇಲ್ಲ . ಅದೂ ಕವಳ ಎಂದರೆ ಈಗೀನ ಗುಟ್ಕಾ ,ಜರದ ಅಲ್ಲ ತಾನೇ ಸ್ವತಃ ವೀಳ್ಯದೆಲೆ ಬೆಳೆದು ಅದನ್ನು ತಾನೇ ಕೊಯ್ದು , ಸುಣ್ಣವನ್ನೂ ,ತಂಬಾಕನ್ನೂ ತಾನೇ ಹದಮಾಡಿ ಕವಳ ಮಾಡಿಕೊಳ್ಳುತ್ತಾನೆ . ಆತನದು ಪಕ್ಕಾ 'ಮೇಕ್ ಇನ್ ಇಂಡಿಯಾ' ಕವಳ . ಒಮ್ಮೆ ತಂಬಾಕಿನ ಎಸಳನ್ನು ತೊಳೆದು ಒಣಗಿಸಲು ಹಗ್ಗದ ಮೇಲೆ ಹಾಕಿದ್ದನಂತೆ . ಸಂಜೆ ಸಂಧ್ಯಾವಂದನೆಗೆ ಹೋಗುವಾಗ ಅವನ ಅಜ್ಜ ಸ್ನಾನ ಮಾಡಿ ತನ್ನ ಲಂಗೋಟಿಯನ್ನೂ ತಂಬಾಕಿನ ಪಕ್ಕಕ್ಕೇ ಒಣಗಿಸಿದ್ದನಂತೆ . ಅಂಗಡಿಯಿಂದ ಬಂದ ಸುಬ್ಬಣ್ಣ ನಸುಗತ್ತಲಲ್ಲೇ ಲಂಗೋಟಿಯನ್ನು ತಂಬಾಕೆಂದು ತಿಳಿದು ತೆಗೆದುಕೊಂಡು ಹೋಗಿ ಅದನ್ನು ಕೊಚ್ಚಿ , ಕವಳ ಮಾಡಿಕೊಂಡು ತಿಂದಿದ್ದನಂತೆ . ಅಜ್ಜ ಬಂದು ತನ್ನ ಲಂಗೋಟಿ ಹುಡುಕಿ ಹುಡುಕಿ ಸುಸ್ತಾಗಿ ವಿಚಾರಿಸಿದ ಮೇಲೆಯೇ ಈ ವಿಷಯ ಬೆಳಕಿಗೆ ಬಂದಿತ್ತು . ಇಂತಹ ಹಲವು ವೃತ್ತಾಂತಗಳಿಂದ  ಸುಬ್ಬಣ್ಣನ ಕವಳ ಒಂದು ದಂತ ಕಥೆಯಾಗಿತ್ತು .
ಹೀಗೇ ಲೋಕಾಭಿರಾಮವಾಗಿ ಕುಳಿತು ಕಥೆ ಹೇಳಿ ನನ್ನ ಫೋನು ಸರಿ ಮಾಡೆಂದು ಹೇಳಿ ಕೊಟ್ಟು ಬಂದಿದ್ದೆ . ಎರಡು ವಾರವಾದರೂ ಆಸಾಮಿಯ ಸುದ್ದಿ ಇಲ್ಲ !!!
ನಾನೇ ವಿಚಾರಿಸಲು ಹೋದರೆ ಮೊನ್ನೆಯೇ ಆಯ್ತು ಮಾರಾಯ ಎಂದು ತೆಗೆದು ಕೊಟ್ಟ . ಗಡಿಬಿಡಿಯಲ್ಲಿದ್ದ ನಾನು ಹೆಚ್ಚು ಯೋಚಿಸದೆ ತೆಗೆದುಕೊಂಡು ಬಂದೆ . ಮನೆಗೆ ಬಂದು ಬ್ಯಾಟರಿ ಹಾಕಿ ಆನ್ ಮಾಡಿದರೆ ರಿಸೀವರ್ ಆನ್ ಆಗಬೇಕೇ ? ಉಹುಂ . ಕುಟ್ಟಿದೆ , ತಲೆ ಕೆಳಗು ಮಾಡಿದರೂ ಆನ್ ಆಗುತ್ತಿಲ್ಲ . ನಂತರ ಆದದ್ದು ಆಗಲಿ ಎಂದು ನಾನೇ ಬಿಚ್ಚಿದೆ . ಎಲ್ಲಾ ಐಸಿ ಗಳೂ ಕೆಂಪು ಬಣ್ಣಕ್ಕೆ ತಿರುಗಿತ್ತು . ನನಗೆ ಆದ ಅನಾಹುತ ಅರ್ಥ ಆಗಿತ್ತು .
ಬಗ್ಗಿ ಕೆಲಸ ಮಾಡುತ್ತಿದ್ದ ಸುಬ್ಬಣ್ಣನ ಕವಳ ನನ್ನ ಫೋನಿನ ರಿಸೀವರ್ ಒಳಗೆ ಬಿದ್ದಿತ್ತು . ಅದನ್ನು ಸರಿ ಮಾಡಲು ಆತ ಹಾರ ಸಾಹಸ ಪಟ್ಟಿದ್ದು ನನಗೆ ಸರಿಯಾಗಿ ಗೊತ್ತಾಗುತಿತ್ತು . ಏನೇ ಮಾಡಿದರೂ ಅದು ಸರಿಯಾಗುವ ಸಂಭವವೇ ಇಲ್ಲ ಎಂಬುದು ನನಗೆ ಗೊತ್ತಿದೆ . ಇರುವ ಒಂದೇ ದಾರಿ ಎಂದರೆ ಪೂರ್ತಿ ಸರ್ಕ್ಯೂಟ್ ಬದಲಿಸಬೇಕಿತ್ತು . ಇದು ತಕ್ಷಣಕ್ಕೆ ಆಗುವ ಕೆಲಸವಾಗಿರಲಿಲ್ಲ . ಒಟ್ಟಿನಲ್ಲಿ ಸುಬ್ಬಣನ ಕವಳ ನನ್ನ ಫೋನಿಗೆ ಮುಕ್ತಿ ಕೊಟ್ಟಿತ್ತು .
ಹೀಗೆ ಮಜಬೂತು ವ್ಯಕ್ತಿತ್ವ ಹೊಂದಿದ್ದ ಸುಬ್ಬಣ್ಣ ಈಗ ಅಂಗಡಿ ಮುಚ್ಚಿದ್ದಾನೆ . ಪ್ರತಿಯೊಂದು ಕಂಪನಿಯವರು ತಮ್ಮದೇ ಟೆಕ್ನೀಷಿಯನ್ನು ಇಟ್ಟು ಕೊಂಡಿದ್ದಾರೆ . ಮೇಲಾಗಿ ಈಗೀನ ಸ್ಮಾರ್ಟ್ ಉಪಕರಣಗಳನ್ನು ರಿಪೇರಿ ಮಾಡುವಷ್ಟು ಚಾಣಾಕ್ಷತೆ ಅವನಿಗಿಲ್ಲ . ಎಲ್ಲಾದರೂ ಅವನ ಊರಿನ ಕಡೆ ನಾನು ಹೋದಾಗ ಜಗಲಿಯ ಮೇಲೆ ಆತ ಕವಳ ಹಾಕಿಕೊಂಡು ಕೂತಿರುವುದು ಕಾಣುತ್ತದೆ . ಮಲೆನಾಡಿನ ಕಾಡು , ಪರಿಸರದಂತೆ ಆತನೂ ತನ್ನ ಅವಸಾನಕ್ಕೆ ಕಾದು ಕುಳಿತಿರುವಂತೆ ನನಗೆ ಭಾಸವಾಗುತ್ತದೆ .