ಕೆಲ ದಿನಗಳಿಂದ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಅಣು ಸ್ಥಾವರದ ಬಗೆಗಿನ ಚರ್ಚೆ ಹಾಗೂ ಹೋರಾಟ ಜೋರಾಗಿದೆ. ಸ್ಥಾವರ ನಿರ್ಮಾಣಕ್ಕೆ ಸಾಗರದ ಬೇಸೂರು ಸುತ್ತ ಮುತ್ತಲಿನ ಜಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಹಾಗೂ ಇದನ್ನು ತಡೆಯಬೇಕು ಎಂದು ಶಾಸಕರ ಸಮ್ಮುಖದಲ್ಲಿ ಸಭೆಯೂ ನಡೆಯಿತು. ಎಂದಿನಂತೆ ಫೇಸ್ಬುಕ್, ಇನ್ಸ್ಟಾಗ್ರಾಮ್ ತುಂಬೆಲ್ಲ ಅಣು ಸ್ಥಾವರದಿಂದ ಇಡೀ ತಾಲೂಕು ಸ್ಮಶಾನದಂತೆ ಆಗುವುದು, ಜನರೆಲ್ಲರಿಗೂ ಕ್ಯಾನ್ಸರ್ ಉಂಟಾಗಿ, ಹುಟ್ಟುವ ಮಕ್ಕಳೆಲ್ಲಾ ಊನವಾಗಿ ಹುಟ್ಟಿ ನೆಲವೇ ಹಾಳಾಗುತ್ತದೆ ಎಂಬರ್ಥದ ಲೇಖನ, ವಿಡಿಯೋಗಳು ಹರಿದಾಡುತ್ತಿವೆ. ಹೋರಾಟದ ಸಭೆಯಲ್ಲಿ ಸೇರಿದ್ದ ಹಲವು ಜನರ, ಗಣ್ಯರ ಅಭಿಪ್ರಾಯವೂ ಇದೇ ಆಗಿತ್ತು.
ವಿಜ್ಞಾನದಲ್ಲಿ ಅಲ್ಪ ಆಸಕ್ತಿ ಹೊಂದಿರುವ ನನಗೆ ಈ ಮೇಲಿನ ಆರೋಪಗಳೆಲ್ಲವೂ ಉತ್ಪ್ರೇಕ್ಷೆ ಎನಿಸುತ್ತದೆ. ಅಣು ಶಕ್ತಿಯ ವಿಚಾರ ಬಂದಾಗ ಸುಲಭವಾಗಿ ಎಲ್ಲರೂ ಅಡಗೂಲಜ್ಜಿ ಕಾಲದ ಚೆರ್ನೊಬಿಲ್ ಉದಾಹರಣೆ ನೀಡುತ್ತಾರೆ. ಅದು ನಡೆದದ್ದು ೧೯೮೬ರಲ್ಲಿ. ನಂತರದ ದಿನಗಳಲ್ಲಿ ಈ ವಿಭಾಗದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಿವೆ. ಈಗಿನ ಸ್ಥಾವರಗಳು Generation ।।। ಮತ್ತು ।।।+ ಶ್ರೇಣಿಯವು. ಅಪಘಾತದ ಸಮಯದಲ್ಲಿ ವಿದ್ಯುತ್ ಮೇಲೆ ಅವಲಂಬಿತವಾಗದೆ ಸಹಜ ಗುರುತ್ವಾಕರ್ಷಣೆ ಮೇಲೆ ಕೆಲಸ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀರು ಪ್ರವಾಹದಂತೆ ನುಗ್ಗಿ ಇಂಧನವನ್ನು ಶಾಂತಗೊಳಿಸುತ್ತದೆ. ಇದೆಲ್ಲದಕ್ಕೂ ಮೇಲಾಗಿ ಚೆರ್ನೊಬಿಲ್ ಸಹ ಅಲ್ಲಿನ ಆಡಳಿತ ವಿಫಲತೆಯಿಂದಾಗಿ ಸಂಭವಿಸಿದ ಘಟನೆಯೇ ಹೊರತು, ವಿಜ್ಞಾನದ ತಪ್ಪಿನಿಂದಲ್ಲ. ೧೨೦ ಕಿಲೋಮೀಟರು ವೇಗದಲ್ಲಿ ಚಲಿಸುತ್ತಾ, ಬೈಕಿನ ಹ್ಯಾಂಡಲ್ ಬಿಟ್ಟು, ಹೆಲ್ಮೆಟ್ ಬಿಸಾಕಿ, ಬೈಕಿನ ಮೇಲೆ ನಿಂತು ಸಾಹಸ ಮಾಡಿದ ವ್ಯಕ್ತಿಯೊಬ್ಬ ಬಿದ್ದು ಸಾಯುತ್ತಾನೆ. ಆಗ ನಾವು ಮುಂದೆಂದೂ ಬೈಕು ಮುಟ್ಟುವುದಿಲ್ಲವೇ? ಅದು ಕೇವಲ ಚಾಲಕನ ಅಜಾಗರೂಕತೆಯಷ್ಟೇ. ಬೈಕಿನ ಸಮಸ್ಯೆಯಲ್ಲ. ಚೆರ್ನೋಬಿಲ್ ನಲ್ಲಿ ಆಗಿದ್ದೂ ಸಹ ಅದೇ.
ಆಧುನಿಕ ಅಣು ಸ್ಥಾವರಗಳಲ್ಲಿ ಜಿರ್ಕೋನಿಯಂನಿಂದ ಮಾಡಿದ ನಿರ್ವಾತ ಟ್ಯೂಬಿನೊಳಗೆ ಅಣು ಇಂಧನವನ್ನು ಇರಿಸಲಾಗುತ್ತದೆ. ಹೋರಾಟದ ಸಭೆಯಲ್ಲಿ ಮಾತನಾಡಿದ ರೋಹಿತ್ ಈ ಇಂಧನ ಜಾರ್ಖಂಡ್ ನಿಂದಲೇ ಬರಬೇಕು, ಹಾಗೂ ಇದು ಮಾರ್ಗ ಮಧ್ಯೆ ಸಿಡಿಯಬಹುದು ಎಂದು ಘೋಷಿಸಿ ಬಿಟ್ಟರು. ಇದು ಸಂಪೂರ್ಣ ತಪ್ಪು ಕಲ್ಪನೆ. ಕಳೆದ ದಶಕದಲ್ಲಿ ಭಾರತವು ವಾಜಪೇಯಿಯವರ ಕಾಲದಲ್ಲಿ ಅಣು ಪರೀಕ್ಷೆ ನಡೆಸಿತ್ತು. ಈ ಕಾರಣಕ್ಕೆ ಭಾರತದ ಮೇಲೆ ನಿರ್ಬಂಧ ಹೇರಲಾಗಿತ್ತು. ಒಳ್ಳೆಯ ಅಣು ಇಂಧನವನ್ನು ಬೇರೆ ದೇಶಗಳಿಂದ ಖರೀದಿಸಲು ಸಾಧ್ಯವಿರಲಿಲ್ಲ. ಈ ಸಂಧರ್ಭದಲ್ಲಿ ನಿರ್ಮಿಸಿದ ಎಲ್ಲಾ ಅಣು ಸ್ಥಾವರಗಳು ಜಾರ್ಖಂಡ್ನ ಅಲ್ಲಿ ಸಿಗುವ ಕೆಳ ದರ್ಜೆಯ ಇಂಧನವನ್ನೇ ಬಳಸಬೇಕಿತ್ತು. ಈಗ ಬಹುಶಃ ಥೋರಿಯಂ ಬಳಸಬಹುದು. ಭಾರತದ ಬಹುತೇಕ ಸ್ಥಾವರಗಳಲ್ಲಿ ಬಳಸುವುದು ಯುರೇನಿಯಂ ಆಕ್ಸೈಡ್(U2O). ರೋಹಿತ್ ಅವರು ಹೇಳಿದಂತೆ ಅದನ್ನು ಸಾಗಣೆ ಮಾಡುವಾಗ ಬಾಂಬಿನಂತೆ ಸ್ಪೋಟಗೊಳ್ಳುವುದಿಲ್ಲ. ವೆಪನ್ ದರ್ಜೆಯ ಯುರೇನಿಯಂ ಶುದ್ಧತೆಗೂ, ಈ U2O ಗೂ ಬಹಳ ವ್ಯತ್ಯಾಸವಿದೆ. ವೆಪನ್ ದರ್ಜೆಯ ಯುರೇನಿಯಂ ಸಹ ಹಾಗೆ ಸುಲಭಕ್ಕೆ ಸಿಡಿಯುವುದಿಲ್ಲ. ವಿದಳನದ(ಫಿಷನ್) ಸರಪಳಿ ಕ್ರಿಯೆಯನ್ನು (ಚೈನ್ ರಿಯಾಕ್ಷನ್) ಪ್ರಚೋದಿಸುವುದು ಸುಲಭದ ತಂತ್ರಜ್ಞಾನ ಅಲ್ಲ. ಅಷ್ಟು ಸುಲಭವಿದ್ದಿದ್ದರೆ ಇಂದು ಜಗತ್ತಿನ ಹಲವು ರಾಷ್ಟ್ರಗಳು ಅಣು ಬಾಂಬ್ ಹೊಂದುತ್ತಿದ್ದರು. ಇದನ್ನು ಸಾಗಣೆ ಮಾಡುವ ಕಂಟೇನರ್ ಬೆಂಕಿಯನ್ನೂ ತಡೆಯಬಲ್ಲದು. ಈ ರೀತಿ ಸ್ಪೋಟಗೊಂಡ ದಾಖಲೆ ಮಾನವ ಇತಿಹಾಸದಲ್ಲಿಯೇ ಇಲ್ಲ. ಈ U2O ಅಪಾಯಕಾರಿ ವಸ್ತು ಅಲ್ಲ. ಇದರ ಪಕ್ಕವೇ ನಿಂತರೂ ನಮಗೆ ತೊಂದರೆ ಇಲ್ಲ. ಇದು ಪ್ರಕೃತಿಯಲ್ಲಿ ದೊರೆಯುವ ಸಹಜ ಖನಿಜ.
ಇನ್ನು ವಿಕಿರಣ ಸೋರಿಕೆಯ ವಿಷಯಕ್ಕೆ ಬರೋಣ. ಈ ಇಂಧನವನ್ನು ಹಲವು ಇಂಚು ದಪ್ಪವಿರುವ ಸ್ಟೀಲ್ ಪಾತ್ರೆಯೊಳಗೆ ಇರಿಸುತ್ತಾರೆ. ಇದರ ಸುತ್ತ ಹಲವು ಅಡಿಗಳಷ್ಟು ದಪ್ಪನೆಯ ಕಟ್ಟಡ ಕಟ್ಟಲಾಗುತ್ತದೆ. ಇದನ್ನು ರಿಯಾಕ್ಟರ್ ಕೋರ್ ಎನ್ನುತ್ತಾರೆ. ಇದು ಎಷ್ಟು ಗಟ್ಟಿಮುಟ್ಟಾಗಿ ಇರುತ್ತದೆ ಎಂದರೆ, ಇದರ ಮೇಲೆ ವಿಮಾನ ಪತನಗೊಂಡು ಬಿದ್ದರೂ ಕಟ್ಟಡ ಹಾನಿಯಾಗುವುದಿಲ್ಲ. ಒಂದು ಹಂತದ ಭೂಕಂಪ, ಪ್ರವಾಹಗಳನ್ನು ತಡೆದುಕೊಳ್ಳುವ ಶಕ್ತಿಯೂ ಈ ಕಟ್ಟಡಕ್ಕೆ ಇರುತ್ತದೆ. ಇದರಿಂದ ವಿಕಿರಣ ಹೊರ ಬರುವ ಸಾಧ್ಯತೆ ಬಹಳ ಕಡಿಮೆ. ಸ್ಥಾವರದ ಹತ್ತಿರವೇ ಬದುಕುವ ಒಬ್ಬ ಮನುಷ್ಯ ವರ್ಷಕ್ಕೆ ಸರಾಸರಿ ೦.೧ ಮೈಕ್ರೋ ಸಿವರ್ಟ್ಸ್ ನಷ್ಟು ವಿಕಿರಣಕ್ಕೆ ಒಡ್ಡಿಕೊಳ್ಳುತ್ತಾನೆ. ಇದು ಎಷ್ಟು ಕಡಿಮೆ ಎಂದರೆ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ-೪೦ ಎಂಬ ಧಾತು ಸಹ ಇಷ್ಟೇ ವಿಕಿರಣ ಸೂಸುತ್ತದೆ. ಒಂದು ವರ್ಷದ ಸ್ಥಾವರದ ಬಳಿಯ ಬದುಕು, ಒಂದು ಬಾಳೆಹಣ್ಣು ತಿಂದಷ್ಟು ವಿಕಿರಣಕ್ಕೆ ಸಮ. ಉಳಿದಂತೆ ಐದು ತಾಸಿನ ವಿಮಾನ ಪ್ರಯಾಣ ೪೦ ಮೈಕ್ರೋ ಸಿವರ್ಟ್ಸ್, ಎದೆಯ ಕ್ಷ ಕಿರಣ ೧೦೦ ಮೈಕ್ರೋ ಸಿವರ್ಟ್ಸ್, ಧೂಮಪಾನ ೧೬೦೦ ಮೈಕ್ರೋ ಸಿವರ್ಟ್ಸ್. ಇವೆಲ್ಲಾ ಹೋಗಲಿ ಸೂರ್ಯ ಸಹ ನಮ್ಮ ಮೇಲೆ ವರ್ಷಕ್ಕೆ ೩೦೦ ಮೈಕ್ರೋ ಸಿವರ್ಟ್ಸ್ ನಷ್ಟು ವಿಕಿರಣ ಸೂಸುತ್ತಾನೆ. ಸ್ಥಾವರದ ಗೇಟಿನ ಗಾರ್ಡ್ ಕಿಂತಲೂ, ಬಾಳೆಹಣ್ಣಿನ ಪಾಯಸ ತಿಂದ ಅಥವಾ ಬಿಸಿಲಿನಲ್ಲಿ ಕೆಲಸ ಮಾಡುವ ವ್ಯಕ್ತಿಗೇ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು!
ಸ್ಥಾವರದಲ್ಲಿ ನದಿಯ ನೀರನ್ನು ಬಳಸಿ, ವಿಕಿರಣಯುಕ್ತ ನೀರನ್ನು ವಾಪಸು ನದಿಗೆ ಬಿಡಲಾಗುತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟರು. ಆದರೆ ಇದೂ ಸಹ ಸುಳ್ಳು. ರಿಯಾಕ್ಟರ್ ಕೋರ್ ಭಾಗದಲ್ಲಿ ಸಾಮಾನ್ಯ ನೀರನ್ನು ಬಳಸುವುದಿಲ್ಲ. ಇದನ್ನು ಹೆವಿ ವಾಟರ್(D2O) ಎಂದು ಕರೆಯುತ್ತಾರೆ. ವಿದಳನದಿಂದ ಉತ್ಪತ್ತಿಯಾದ ಶಾಖದಿಂದ ಈ ನೀರನ್ನು ಬಿಸಿ ಮಾಡಿ, ಇದರ ಆವಿಯಿಂದ ಟರ್ಬೈನ್ ತಿರುಗಿಸಲಾಗುತ್ತದೆ. ನಂತರ ಈ ನೀರನ್ನು ಸ್ಥಾವರಕ್ಕೆ ಮರು ಪೂರಣ ಮಾಡಲಾಗುತ್ತದೆ. ಹೆವಿ ವಾಟರ್ ದುಬಾರಿ ವಸ್ತುವಾದ್ದರಿಂದ ಹಾಗೂ ಇದರಲ್ಲಿ ವಿಕಿರಣ ಇರುವುದರಿಂದ ಇದನ್ನು ಹೊರಗೆ ಬಿಡುವುದೇ ಇಲ್ಲ. ಈ ನೀರನ್ನು ತಣಿಸಲು ಸೆಕೆಂಡರಿ ನೀರನ್ನು ಬಳಸಲಾಗುತ್ತದೆ. ಈ ಎರಡೂ ಬಗೆಯ ನೀರು ಎಂದಿಗೂ ಸ್ಥಾವರದಿಂದ ಹೊರಗೆ ಬರುವುದೇ ಇಲ್ಲ. ಇದರ ಮರು ಬಳಕೆ ಮಾಡುತ್ತಲೆ ಇರುತ್ತಾರೆ. ಸೆಕೆಂಡರಿ ನೀರನ್ನು ತಣಿಸಲು ನದಿಯ ನೀರನ್ನು ಬಳಸುವುದು ನಿಜವಾದರೂ, ಈ ನೀರು ಅಣು ಇಂಧನವನ್ನು ಮುಟ್ಟುವುದೇ ಇಲ್ಲ. ನದಿಯ ನೀರು ರಾಸಾಯನಿಕವಾಗಿ ಬದಲಾಗುವುದಿಲ್ಲ. ಆದರೆ ತಾಪಮಾನ ೮-೧೦ ಡಿಗ್ರಿ ಯಷ್ಟು ಜಾಸ್ತಿಯಾಗುತ್ತದೆ. ಇದನ್ನು ವಾಪಸು ನದಿಗೆ ಬಿಡುವುದರಿಂದ ಜೀವಿಗಳಿಗೆ ತೊಂದರೆಯಾಗುತ್ತದೆ ಎಂದು, ಇದನ್ನು ಒಮ್ಮೆಲೇ ಅತಿ ಆಳಕ್ಕೆ ಬಿಡುತ್ತಾರೆ. ಇದೆಲ್ಲವನ್ನೂ ಮಾಪಿಸಲು ಹಲವು ಸೆನ್ಸರ್ ಗಳ ವ್ಯವಸ್ಥೆ ಸ್ಥಾವರದಲ್ಲಿ ಇರುತ್ತದೆ. ವಿಕಿರಣದ ಸಮಸ್ಯೆ ಇಲ್ಲವೆಂದ ಮೇಲೆ ರೂಪಾಂತರದ(ಮ್ಯುಟೇಷನ್) ಸಮಸ್ಯೆ ಸಹ ಇಲ್ಲವೆನ್ನಬಹುದು. ರೂಪಾಂತರ ಪ್ರಕೃತಿಯ ಒಂದು ರುದ್ರ ನಾಟಕ. ಸ್ಥಾವರ ಇರಲಿ ಬಿಡಲಿ ಇದು ನಡೆಯುತ್ತಲೇ ಇರುವ ಪ್ರಕ್ರಿಯೆ. ಇದು ಯಾವಾಗಲೂ ಕೆಟ್ಟದ್ದು ಎಂದು ಭಾವಿಸುವುದು ತಪ್ಪು. ಮನುಷ್ಯ ಹಲವು ಬಾರಿ ರೂಪಾಂತರ ಹೊಂದಿಯೇ ಮನುಷ್ಯನಾಗಿದ್ದು.
ಈಗಾಗಲೇ ಕೈಗಾ ಸ್ಥಾವರ ಕೆಲಸ ಮಾಡುತ್ತಿರುವುದರಿಂದ ಅದರ ಉದಾಹರಣೆ ತೆಗೆದುಕೊಳ್ಳೋಣ. ಕೈಗಾ ಇರುವುದು ಕಾರವಾರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಿರುವ ಕದ್ರಾ ಅಣೆಕಟ್ಟೆಯ ಪ್ರದೇಶದಲ್ಲಿ. ಇದರ ಸುತ್ತ ಮುತ್ತಲೂ ದಟ್ಟ ಕಾಡಿದೆ. ಅಣಶಿ ಹುಲಿ ಸಂರಕ್ಷಿತ ಪ್ರದೇಶ, ಹಾರ್ನ್ಬಿಲ್ ಸಂರಕ್ಷಿತ ಪ್ರದೇಶ ಕೇವಲ ಒಂದು ಕಿಲೋಮೀಟರು ದೂರವಷ್ಟೇ. ಕೈಗಾ ಪ್ರಾಂತ್ಯದಲ್ಲಿ ೪೫ ಎಂಡೆಮಿಕ್ ಪ್ರಭೇದದ ವನ್ಯ ಸಂಪತ್ತು ಇದೆ . ೧೬೦ ಬಗೆಯ ಪಕ್ಷಿಗಳಿವೆ. ಇವು ಯಾವುದಕ್ಕೂ ವಿಕಿರಣದಿಂದ ಸಮಸ್ಯೆಯಾದ ವರದಿಯಾಗಿಲ್ಲ. ಕೇವಲ ಸ್ಥಾವರದ ಆಡಳಿತವಲ್ಲದೇ ಕಾಲ ಕಾಲಕ್ಕೆ EIA, ಇನ್ನೂ ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳು ಸ್ಥಾವರದ ಸುತ್ತ ಮುತ್ತ 'ಆಡಿಟ್' ನಡೆಸುತ್ತಾರೆ. ಈ ವರದಿಗಳು ಅಂತರ್ಜಾಲದಲ್ಲಿ ಎಲ್ಲರಿಗೂ ಓದಲು ಲಭ್ಯವಿದೆ. ಆಸಕ್ತರು ಓದಬಹುದು. ವಿಶ್ವ ಸಂಸ್ಥೆ ಸಹ ಆಗಾಗ ಅದರ ತಂಡವನ್ನು ಕಳುಹಿಸಿ ಅಧ್ಯಯನ ನಡೆಸುತ್ತಾರೆ. ಕುರಿಯ ಥೈರಾಯಿಡ್ ಗ್ರಂಥಿ, ಹಾಲು, ನೀರು, ಬೆಳೆಗಳು, ವನ್ಯ ಸಂಪತ್ತಿನ ಮಾದರಿಗಳನ್ನು ಸಂಗ್ರಹಿಸಿ ಅದರಲ್ಲಿ ವಿಕಿರಣದ ಅಂಶ ಹುಡುಕುತ್ತಾರೆ. ಇಲ್ಲಿಯವರೆಗೂ ಕೈಗಾದ ಸುತ್ತ ಮುತ್ತಲಿನ ಮಾದರಿಗಳಲ್ಲಿ ರೇಡಿಯೋ ಆಕ್ಟಿವ್ ಟ್ರೀಟಿಯಂ ಅಂಶ ಮಿತಿಯನ್ನು ಮೀರಿದ ಉದಾಹರಣೆಗಳಿಲ್ಲ. ಟಾಟಾ ಮೆಮೋರಿಯಲ್ ಸಂಸ್ಥೆಯ ಅಧ್ಯಯನದ ಪ್ರಕಾರ ಕಾರವಾರ ತಾಲೂಕಿನಲ್ಲಿ ಕ್ಯಾನ್ಸರ್ ಸಂಖ್ಯೆ ೮೦ ರಿಂದ ೩೧೬ ಕ್ಕೆ ಏರಿಕೆಯಾಗಿರುವುದು ನಿಜ. ಆದರೆ ವಿಕಿರಣಕ್ಕೂ ಇದಕ್ಕೂ ಸಂಬಂಧ ಪತ್ತೆಯಾಗಿಲ್ಲ. ಇವೆಲ್ಲವೂ ಜೀವನ ಶೈಲಿಯಿಂದ, ಆಧುನಿಕ ವೈದ್ಯ ಪದ್ದತಿಯ ಉತ್ತಮ ಪತ್ತೆ ಹಚ್ಚುವಿಕೆಯಿಂದ ಏರಿಕೆಯಾದದ್ದು. ಮನುಷ್ಯನ ಜೀವಿತಾವಧಿ ಹೆಚ್ಚಾದಂತೆಲ್ಲ ಕ್ಯಾನ್ಸರ್ ಬರುವ ಸಾಧ್ಯತೆ ಸಹ ಹೆಚ್ಚಾಗುತ್ತದೆ. ಹಿಂದೆ ಭಾರತೀಯರ ಜೀವಿತಾವಧಿ ಕಡಿಮೆ ಇದ್ದ ಕಾರಣ ಕ್ಯಾನ್ಸರ್ ಪ್ರಮಾಣವೂ ಕಡಿಮೆ ಇತ್ತು. ಒಟ್ಟಿನಲ್ಲಿ ಇದಕ್ಕೂ ವಿಕಿರಣಕ್ಕೂ ಸಂಬಂಧವಿಲ್ಲ. ಹುಟ್ಟುವ ಮಕ್ಕಳ ಊನತೆ ಕೈಗಾ ಪ್ರದೇಶದಲ್ಲಿ ೦.೨%ರಷ್ಟಿದೆ, ಇದು ಜಾಗತಿಕ ೨-೩% ಕಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆ. ಯಾವ ಕಡೆಯಿಂದ ವಿಶ್ಲೇಷಿಸಿದರೂ ಸ್ಥಾವರದಿಂದ ಆದ ಸಮಸ್ಯೆಯ ಬಗ್ಗೆ ನಮಗೆ ವರದಿಗಳು ಸಿಗುವುದಿಲ್ಲ.
ವಿಜ್ಞಾನ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾ ಬೆಳೆಯುತ್ತದೆ. ಇಲ್ಲಿಯವರೆಗೆ ನಡೆದಿರುವ ಸಂಶೋಧನೆ, ವರದಿಗಳ ಪ್ರಕಾರ ಇದೇ ಸತ್ಯ. ಇದು ಯಾವ ಧರ್ಮ, ಪ್ರದೇಶ, ವ್ಯಕ್ತಿಗೂ, ಬದಲಾಗಲಾರದು. ಮುಂದೊಂದು ದಿನ ಇದೇ ವಿಜ್ಞಾನ ಸಂಶೋಧನೆಯ ತಪ್ಪನ್ನು ಎತ್ತಿ ತೋರಿಸಿದರೆ ಮಾತ್ರ ಮೇಲೆ ಹೇಳಿದ ವಿಷಯಗಳು ಸುಳ್ಳಾಗಬಹುದು. ಭಾರತದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಯಲ್ಲಿಯೂ ವೈಜ್ಞಾನಿಕ ಮನೋಭಾವ ಮೂಡಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ. ಆದರೆ ಸಭೆಯಲ್ಲಿನ ಗಣ್ಯರು ವಿಜ್ಞಾನವನ್ನು ಅರಿತುಕೊಳ್ಳದೆ ಜನರನ್ನು ಅನಗತ್ಯವಾಗಿ ಸ್ಥಾವರದ ಸುರಕ್ಷತೆಯ ಬಗ್ಗೆ ಮಾತನಾಡಿ ದಿಗಿಲುಗೊಳಿಸಿದರು.
ಫ್ರಾನ್ಸ್ ೭೦% ರಷ್ಟು ವಿದ್ಯುತ್ ಅಣು ಶಕ್ತಿಯಿಂದ ಪಡೆದರೆ, ಅಮೇರಿಕಾ ೨೦%, ಕೊರಿಯಾ ೨೦% ಹಾಗೂ ಈ ದಶಕದಲ್ಲಿ ಚೀನಾ ಅತೀ ಹೆಚ್ಚು ಸ್ಥಾವರಗಳನ್ನು ನಿರ್ಮಿಸುತ್ತಿದೆ. ಭಾರತ ಈಗಲೂ ೪೦-೪೫% ಕಲ್ಲಿದ್ದಲಿನ ಮೂಲಕ ವಿದ್ಯುತ್ ಉತ್ಪಾದಿಸುತ್ತಿದೆ. ಇದು ಅತೀ ಹೆಚ್ಚು ಮಾಲಿನ್ಯ ಉಂಟುಮಾಡುವ ಶಕ್ತಿಯ ಮೂಲ. ೧೨೦ಕೆಜಿ ಯುರೇನಿಯಂ ಇಂಧನದಿಂದ ೫ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು ಮತ್ತು ಇದು ಈ ಶತಮಾನದ ಅತ್ಯಂತ ಸ್ವಚ್ಛ ಶಕ್ತಿ. ಇದರಿಂದ ಮಾಲಿನ್ಯ ಇಲ್ಲವೇ ಇಲ್ಲ ಎನ್ನಬಹುದು. ಒಮ್ಮೆ ಸ್ಥಾವರದಲ್ಲಿ ಇಂಧನ ತುಂಬಿಸಿ ವಿದಳನ ಕ್ರಿಯೆ ಶುರು ಮಾಡಿಸಿದರೆ, ದಶಕಗಳ ಕಾಲ ಸ್ಥಾವರ ವಿದ್ಯುತ್ ಉತ್ಪಾದಿಸಬಲ್ಲದು. ಪ್ಯಾರಿಸ್ ಒಪ್ಪಂದದ ಪ್ರಕಾರ ಭಾರತ ಕಲ್ಲಿದ್ದಲಿನ ವಿದ್ಯುತ್ ನಿಂದ ಹೊರಗೆ ಬರಲೇ ಬೇಕು. ಇದೇ ಕಾರಣಕ್ಕೆ ಸರ್ಕಾರ ಹೊಸ ಸ್ಥಾವರ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ದೊಡ್ಡ ದೊಡ್ಡ ಸ್ಥಾವರ ನಿರ್ಮಾಣದ ಬದಲು ನೂರಾರು ಸಣ್ಣ ಪ್ರಮಾಣದ ಸ್ಥಾವರ ನಿರ್ಮಾಣ ಈ ಯೋಜನೆಯ ಮೂಲ ಉದ್ದೇಶ. ಜೊತೆಗೆ ಈಗ ಭಾರತದ ಮೇಲೆ ನಿರ್ಬಂಧವಿಲ್ಲದ ಕಾರಣ, ಹೊರ ದೇಶಗಳಿಂದ ಥೋರಿಯಂ ತರಿಸಿಕೊಂಡು ಬಳಸಬಹುದು. ಇದು ಯುರೇನಿಯಂಗಿಂತಲೂ ಹೆಚ್ಚು ಸಹಾಯಕಾರಿ.
ಇಷ್ಟೆಲ್ಲಾ ಇದ್ದರೂ ನನ್ನ ಅನಿಸಿಕೆ ಸ್ಥಾವರ ನಿರ್ಮಾಣವಾಗಬೇಕು ಎಂದೇನೂ ಅಲ್ಲ. ಈ ಸ್ಥಾವರ ಶರಾವತಿಯ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಾವಿರಾರು ಎಕರೆ ಅರಣ್ಯ ನಾಶ ಶತ ಸಿದ್ಧ. ಆಗಲೇ ಮುಳುಗಡೆಯಿಂದ ಅತಂತ್ರರಾಗಿಗುವ ಈ ಪ್ರದೇಶದ ಜನ ಇನ್ನಷ್ಟು ಭೂಮಿ ಕಳೆದುಕೊಳ್ಳುತ್ತಾರೆ. ಕೆಲ ಊರುಗಳ ಸ್ಥಳಾಂತರವೂ ನಡೆಯಬಹುದು. ಮುಳುಗಡೆಯ ಪರಿಹಾರವನ್ನೇ ಸರಿಯಾಗಿ ನೀಡದೆ, ಒಂದು ಸೇತುವೆ ನಿರ್ಮಿಸಲು ಆರು ದಶಕ ತೆಗೆದುಕೊಂಡ ಸರ್ಕಾರ ಈ ಹೊಸ ಸಂತ್ರಸ್ತರಿಗೆ ಸಹಾಯ ನೀಡುವ ಯಾವ ನಂಬಿಕೆಯೂ ಜನರಿಗೆ ಉಳಿದಿಲ್ಲ. ಇವೆಲ್ಲ ನೈತಿಕ, ರಾಜಕೀಯ ಸಮಸ್ಯೆ ಇದೆಯೇ ಹೊರತು, ಅಣು ಶಕ್ತಿಯ ಬಗ್ಗೆ ಅಪ ನಂಬಿಕೆ, ಸುರಕ್ಷತೆಯ ಬಗ್ಗೆ ಸಂದೇಹ ಬೇಡ.