10/8/16

ಖಾರಾಬಾತು - 6 ( ಶ್ರೀ ಟಾಕೀಸು )

ಒಂದರ್ಥದಲ್ಲಿ ಸಿನಿಮಾ ಎನ್ನುವುದು ಪಬ್ಲಿಕ್ ಪ್ರಾಪರ್ಟಿ . ಅದನ್ನು ನಾವು ಪಬ್ಲಿಕ್ ನ ಒಂದು ಭಾಗವಾಗಿ ನೋಡಿದಾಗ ಮಾತ್ರ ಸಿನಿಮಾ ನಮ್ಮದೇ ಆಗುತ್ತದೆ . ಇದೇ ಕಾರಣಕ್ಕೇ ಇನ್ನೂ ನಮ್ಮ ಬೆಡ್ ರೂಮಿನ ಬಾಗಿಲಲ್ಲಿ ರಾಜ್ಕುಮಾರ್ , ವಿಷ್ಣುವರ್ಧನ್ , ಅಮಿತಾಬ್ ರ ಫೋಟೋಗಳು ರಾರಾಜಿಸುತ್ತಿವೆ . ಮೊನ್ನೆ ಮೊನ್ನೆಯಷ್ಟೇ 'ಟೊರ್ರೆನ್ಟ್' ನಿಷೇಧವಾಯಿತು . ಸ್ವಲ್ಪ ದಿನಕ್ಕೆ ಮತ್ತೊಂದು ಹೆಸರಿಟ್ಟುಕೊಂಡು ಬಂದರೂ ಆಶ್ಚರ್ಯವಿಲ್ಲ . ಇತ್ತಿಚೀಗೆ ಸಿನಿಮಾ ಎನ್ನುವುದು ದೊಡ್ಡ ಸಂಗತಿಯೇ ಅಲ್ಲ , ಗಂಟೆಗಳೊಳಗೆ ಇಂಟರ್ನೆಟ್ ನಿಂದ ಇಳಿಸಿಕೊಂಡು ನೋಡಿ ಡಿಲೀಟ್ ಮಾಡುತ್ತೇವೆ . ಹೀಗೆಯೇ ಒಂದು ಹತ್ತು-ಹದಿನೈದು ವರ್ಷ ಹಿಂದೆ ಹೋಗೋಣ . ಮನೆಗೊಂದು ದೈತ್ಯಾಕಾರದ ಟಿವಿ ಅಷ್ಟೇ ಇದ್ದ ಕಾಲ . ಆ ಟಿವಿ ಎಷ್ಟೋ ವರ್ಷಗಳ ವಿಕಸನ ಹೊಂದಿ ಕಲರ್ ಕಾಣುವಷ್ಟು ಮುಂದುವರೆದಿತ್ತು . ಬ್ಲಾಕ್ ಅಂಡ್ ವೈಟ್ ಪರ್ವ ಮುಗಿದಿತ್ತು .  ಕನ್ನಡದ ಒಂದೋ ಎರಡೋ ಚಾನೆಲ್ ಬರುತಿತ್ತು . ದೂರದರ್ಶನದಲ್ಲಿ ಬರುತ್ತಿದ್ದ ರಾಮಾಯಣ ಹಾಗೂ ಮಹಾಭಾರತ ಎಲ್ಲರ ಹಾಟ್ ಫೇವರಿಟ್ . ಊರಿಗೆ ಊರೇ ಒಂದು ಕಡೆ ಜಮೆಯಾಗಿ ಟಿವಿ ನೋಡುತಿತ್ತು . ಇಂತಿಪ್ಪ ಕಾಲದಲ್ಲಿ ಸಾಗರದಲ್ಲಿ 'ಶ್ರೀ' ಎಂಬ ಟಾಕೀಸ್ ಇತ್ತು , ಈಗಲೂ ಇದೆ . ಮೊದಲಿಗೆ ಕೃಷ್ಣ , ಸಾಗರ್ ಎಂಬೆಲ್ಲಾ ಟಾಕೀಸ್ ಇದ್ದರೂ ನಡೆಸಲು ಆಗದೆ ಮುಚ್ಚಿದ್ದಾರೆ . ಈಗಲೂ ಆ ಕಟ್ಟಡಗಳು ಗತ ಕಾಲದ ವೈಭವ ಸಾರುತ್ತಾ ಹಾಗೆಯೇ ನಿಂತಿವೆ .
" ಕೃಷ್ಣಾ ಟಾಕೀಸ್ ಅಲ್ಲಿ ಯಾವ ಸಿನಿಮಾ ಓಡ್ತಾ ಇದೆ ? ಜೇಡರಬಲೆ , ಹ ಹ ಹ " ಎಂದು ಜೇಡರಬಲೆ ಕಟ್ಟಿದ ಕೃಷ್ಣಾ  ಟಾಕೀಸನ್ನು ಜನರು ಆಡಿಕೊಳ್ಳುತ್ತಿದ್ದರು . ನನಗೆ ಬುದ್ಧಿ ಬಂದ  ಕಾಲದಿಂದ ಸಾಗರದಲ್ಲಿ ಇದ್ದದ್ದು ಎರಡೇ ಟಾಕೀಸು 'ಶ್ರೀ' ಹಾಗೂ 'ಸಾಗರ್' . ಹೆಚ್ಚಾಗಿ ಹಾಕುತ್ತಿದ್ದದ್ದು ಕನ್ನಡ ಸಿನಿಮಾಗಳನ್ನು . ಯಾವುದೊ ಬಹಳ ಸುದ್ದಿ ಮಾಡಿದ ಅಥವಾ ಸ್ಟಾರ್ ನಟರ ಕೆಲವು ಪರಭಾಷಾ ಸಿನಿಮಾಗಳನ್ನು ಹಾಕುತ್ತಿದ್ದರು , ಅದೂ ಬೆಳಗಿನ ಒಂದು ಶೋ ಮಾತ್ರ . ಉಳಿದಂತೆ ನಾನು ಪೋಸ್ಟರ್ ನೋಡುತ್ತಿದ್ದದ್ದು ಕೇವಲ ಕನ್ನಡ ಮತ್ತು ಕನ್ನಡ ಸಿನಿಮಾ ಮಾತ್ರ . ಈ ಎರಡೂ ಟಾಕೀಸುಗಳು ನಾನು ಶಾಲೆಗೆ ಹೋಗುವ ರಸ್ತೆಯಲ್ಲೇ ಇದ್ದರಿಂದ ಪ್ರತಿ ದಿನ ಯಾವ ಸಿನಿಮಾ ಇದೆ ಎಂದು ಇಣುಕಿ ನೋಡದೆ ಹೋಗುತ್ತಿರಲಿಲ್ಲ . ಹೀಗೆ ಪ್ರತಿ ದಿನ ನೋಡಿ ಇಷ್ಟವಾದ ಸಿನಿಮಾದ ಸುದ್ದಿ ತಂದು ಮನೆಗೆ ಅರುಹುತ್ತಿದ್ದೆ . ಸಾಗರದಿಂದ ಹದಿನಾರು ಕಿಲೋಮೀಟರು ಇರುವ ನನ್ನೂರಿನಿಂದ ಅಪ್ಪ ಅಮ್ಮ ಇಲ್ಲದೆ ಸಿನಿಮಾ ನೋಡಲು ಸಾಧ್ಯವಿರಲಿಲ್ಲ , ಮನೆಯಲ್ಲಿ ಒಪ್ಪಿಗೆಯೂ ಸಿಗುತ್ತಿರಲಿಲ್ಲ . ಆದ್ದರಿಂದಲೇ ಒಳ್ಳೆಯ ಸಿನಿಮಾಗಳು ಬಂದಾಗ ಒಂದಕ್ಕೆ ಎರಡು ಸೇರಿಸಿ ಆ ಸಿನಿಮಾ ಹೊಗಳಿ , ಮನೆಯಲ್ಲಿ ಪೂಸಿ ಹೊಡೆದು ಸಿನೆಮಾಗೆ ಹೊರಡಿಸುತ್ತಿದ್ದೆ .
ಎಂಜಿನಿಯರಿಂಗ್ ಪದವಿ ಪಡೆದು , ಸಿನಿಮಾ ಪ್ರೊಜೆಕ್ಷನ್ ಕಲೆಯ ಹಿಂದಿನ ಮರ್ಮ ಅರ್ಥ ಮಾಡಿಕೊಂಡಿದ್ದರೂ ಇಂದಿಗೂ ನನಗೆ ಇದೊಂದು ಪವಾಡವಾಗಿ ಕಾಣುತ್ತದೆ . ಟಿಕೆಟು ಹರಿದು ನಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ದು ಬಿಡುವ ಟಾಕೀಸಿನ ಗೇಟ್ ಕೀಪರ್ ,ಸಿಬ್ಬಂದಿಗಳು ಎಲ್ಲರನ್ನೂ ನಾನು ಬೆರಗುಗಣ್ಣಿನಿಂದ ನೋಡುತ್ತೇನೆ . ನಾನು ಮೊದಲು ನೋಡಿದ ಸಿನಿಮಾ 'ಸೂರ್ಯವಂಶ ' . ವಿಷ್ಣುವರ್ಧನ್ ಕಟ್ಟಾ ಅಭಿಮಾನಿಯಾದ ನನಗೆ ಅವರನ್ನು ಮೊದಲಬಾರಿಗೆ ಅಷ್ಟು ಹತ್ತಿರದಿಂದ ನೋಡಿ ಖುಷಿಯೋ ಖುಷಿ . ಅವರು ಟಾಕೀಸಿನ ಹಿಂದೆ ಎಲ್ಲೋ ಇದ್ದಾರೆ ಎಂದು ನನಗನ್ನಿಸುತಿತ್ತು . ಆ ಜನ , ಸಿಳ್ಳೆ , ಚಪ್ಪಾಳೆ , ನಾನಂತೂ ರೋಮಾಂಚಿತನಾಗಿ ಹೋದೆ . ಅವತ್ತು ರಾತ್ರಿ ನನ್ನ ಕನಸಿನಲ್ಲಿ ವಿಷ್ಣುವರ್ಧನ್ ಬರದಿದ್ದರೆ ಕೇಳಿ . ಒಂದು ಸಿನಿಮಾ ನೋಡಿದ್ದು ನನಗೆ ಒಂದು ಚಿಪ್ಸ್ ತಿಂದ ಹಾಗೆ ಆಗಿತ್ತು . ಪ್ರತಿ ಬಾರಿ ಟಾಕೀಸಿನ ಮುಂದೆ ಹಾದು ಹೋಗುವಾಗ ಒಂದು ಪವಿತ್ರ ಭಾವನೆ ನನ್ನ ಮನಸ್ಸಿನಲ್ಲಿ ಮೂಡುತಿತ್ತು .
ವರುಷಗಳು ಉರುಳಿದಂತೆ ನಾನು ಒಬ್ಬನೇ ಸಿನಿಮಾ ನೋಡುವ ಧೈರ್ಯವೂ ಬಂದಿತು . ಜೊತೆಗೆ ಸಿನಿಮಾದಲ್ಲಿ ಅದು ಸರಿ ಇಲ್ಲ , ಇದು ಸರಿ ಇಲ್ಲ ಎಂದು ಬೊಟ್ಟು ಮಾಡುವ ಜಾಣ್ಮೆಯೂ ಬಂದಿತ್ತು . ಅಷ್ಟರಲ್ಲಾಗಲೇ ನಾನು ಅಮೃತಧಾರೆ , ಜೋಗಿ , ಆಪ್ತಮಿತ್ರ ಹೀಗೆ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ಟಾಕೀಸಿನಲ್ಲಿ ನೋಡಿದ್ದೆ .  ಮನೆಯಲ್ಲಿ ಹೀಗೆಯೇ ಪೂಸಿ ಹೊಡೆದು ಜೋಗಿ ಸಿನೆಮಾ ನೋಡಲು ಅಪ್ಪ ಅಮ್ಮನ ಜೊತೆ ಬಂದಿದ್ದೆ . ಆದರೆ ಅಂದು ಟಾಕೀಸು ಖಾಲಿ ಇತ್ತು , ಹತ್ತಿಪತ್ತು ಪ್ರೇಕ್ಷಕರು ಇದ್ದರೇನೋ ? . ಟಾಕೀಸಿನ ಕತ್ತಲೆಯೊಳಗೆ ಕಾಲಿಟ್ಟಾಯ್ತು . ಸೋಪು , ಶಾಂಪೂ , ಸರ್ಕಾರದ ಒಂದಷ್ಟು ಜಾಹೀರಾತುಗಳು , ಹೊಸ ಸಿನೆಮಾದ ಟ್ರೇಲರ್ ಎಲ್ಲವೂ ಒಂದರ ಹಿಂದೆ ಒಂದರಂತೆ ಬಂದು ಹೋಯ್ತು . ತಕ್ಷಣ ಮತ್ತೆ ಕತ್ತಲು ಆವರಿಸಿ ಸೆನ್ಸಾರ್ ಸರ್ಟಿಫಿಕೇಟ್ ತೆರೆಯ ಮೇಲೆ ಬಂದಿತು . ಸ್ವಲ್ಪ ತಿಳಿದವರು " ಒಹ್ , ಅಷ್ಟ್ ರೀಲ್ ಇದೆ ಇಷ್ಟ್ ಹೊತ್ತು ಆಗುತ್ತೆ " ಎಂದೆಲ್ಲಾ ಗುಸು ಗುಸು ಶುರುವಾಯಿತು . ಎಲ್ಲಾ ಸಿನೆಮಾದಂತೆಯೇ ಮೊದಲು ದೇವರನ್ನೇ ತೋರಿಸಿದರು , ದೇವರ ಮೂರ್ತಿ ಅದಕ್ಕೆ ಪೂಜೆ ಮಾಡಿ ಹಿಂದೆ ಒಂದು ಶ್ಲೋಕ ಹಾಕಿ ಪ್ರೊಡಕ್ಷನ್ ಹೌಸ್ ನ ಹೆಸರು ಎರಡು ಬಾರಿ ಗಾಳಿಯಲ್ಲಿ ತಿರುಗಿ ಬಂದಿತು . ಕೆಲವು ಬ್ಯಾನರ್ ಗಳು ತೆರೆಯ ಮೇಲೆ ಬಂದರೆ ಜನರು ಪುಳಕಿತಗೊಳ್ಳುತ್ತಾರೆ . ಹಿಂದಿಯ ಯಶ್ ರಾಜ್ ಬ್ಯಾನರ್ , ಹುಡುಗಿ ಬಣ್ಣದ ರಂಗೋಲಿ ಚೆಲ್ಲುವ ಯು ಟಿವಿ ಬ್ಯಾನರ್ . ಇಂಗ್ಲೀಷಿನ ಎಂ.ಜಿ.ಎಂ ನ ಸಿಂಹ , ಡಬ್ಲ್ಯೂ ಬಿ , ಡಿಸ್ನಿಯವರ ಕೋಟೆ . ಕನ್ನಡದ ವಜ್ರೇಶ್ವರಿ ಕಂಬೈನ್ಸ್ , ವೀರಸ್ವಾಮಿ , ರಾಕ್ ಲೈನ್ ಪ್ರೊಡಕ್ಷನ್ಸ್ . ಬಹುಶಃ ಕೊಟ್ಟ ಕಾಸಿಗೆ ಮೋಸವಿಲ್ಲ ಎಂಬ ಭರವಸೆ ಇರಬಹುದು . ನಂತರ ಟೈಟಲ್ ಕಾರ್ಡ್ ಬರುತ್ತಿತ್ತು . ಸಿನಿಮಾ ಮಾಡುವುದಕ್ಕಿಂತ ಟೈಟಲ್ ಹೇಗೆ ತೋರಿಸಬೇಕು ಎಂದೇ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ನಿರ್ದೇಶಕರಿದ್ದಾರೆ . ರವಿಚಂದ್ರನ್ ಸಹ ಇದರಲ್ಲಿ ಒಬ್ಬರೇನೋ . ಇದಕ್ಕೆ ಕೊಡುವ ಹಿನ್ನಲೆ ಸಂಗೀತವೂ ಅಂತಾದ್ದೇ . ಕೆಲವರು ಅದಕ್ಕೆಂದೇ ಸಂಗೀತ ಕಂಪೋಸ್ ಮಾಡಿದರೆ , ಮತ್ತೊಬ್ಬರು ಸಿನಿಮಾದ ಹಾಡನ್ನೇ ಬಳಸಿಕೊಳ್ಳುತ್ತಾರೆ . ಟೈಟಲ್ ಗೆ ಕೊಟ್ಟ ಮ್ಯೂಸಿಕ್ ಸಿನಿಮಾದ ಅಲ್ಲಲ್ಲಿ ಬರುವುದೂ ಸಹ ಉಂಟು . ಗಾಳಿಪಟ ಸಿನಿಮಾದಲ್ಲಿ ಗಣೇಶ್ ಹಾಗೂ ಸ್ನೇಹಿತರ ತರಲೆ ಮಾತುಗಳನ್ನೇ ಹಿನ್ನಲೆಗೆ ಬಳಸಿಕೊಂಡಿದ್ದಾರೆ . ಈಗೀಗ ಕೆಲವರು ಒಂದೆರಡು ಸೀನು ಆದ ಮೇಲೂ ಟೈಟಲ್ ಕಾರ್ಡ್ ತೋರಿಸುತ್ತಾರೆ . ನಂತರ ಒಂದೊಂದೇ ತಂತ್ರಜ್ಞರ ಹೆಸರು ಬಂದು ಕೊನೆಯಲ್ಲಿ ಸಂಗೀತ ತಾರಕಕ್ಕೆ ಏರಿ ನಿರ್ದೇಶಕ , ಪ್ರೊಡ್ಯೂಸರ್ , ಹೀರೋ ಹಾಗೂ ಅವರ ಬಿರುದುಗಳು ಕನ್ನಡ ಹಾಗೂ ಇಂಗ್ಲೀಷು ಎರಡರಲ್ಲೂ ಬಂದ ಮೇಲೆಯೇ ನಿಜವಾದ ಸಿನಿಮಾ ಶುರು . ಆದರೂ ಇವೆಲ್ಲವನ್ನೂ ನೋಡಲೇಬೇಕು ಆಗಲೇ ಸಂತೃಪ್ತಿ . ಬಸ್ಸು ತಪ್ಪಿಸಿಕೊಂಡು ಲೇಟಾಗಿ ಬಂದು ಕತ್ತಲಲ್ಲಿ ಸಿಕ್ಕ ಸಿಕ್ಕವರ ಕಾಲು ಮೆಟ್ಟಿ ಒಳ ಬಂದ ಪ್ರೇಕ್ಷಕ ಮೊದಲು ಕೇಳುವುದೇ " ಟೈಟಲ್ ತೋರ್ಸಿ ಆಯ್ತಾ ? " ಆಗಿಲ್ಲವೆಂದಾದರೆ ತೃಪ್ತಿ , ಆಗಿದೆ ಎಂದಾದರೆ ಏನೋ ಕಳೆದುಕೊಂಡ ದುಗುಡ . ಬಾಂಡ್ ಸಿನಿಮಾಗಳನ್ನು ನೋಡುವ ಮೊದಲು  ಆ ಹಿನ್ನಲೆ ಸಂಗೀತದೊಂದಿಗೆ ಅನಿಮೇಟೆಡ್ ಸೀಕ್ವೆನ್ಸ್ ನೋಡದಿದ್ದರೆ ಹೀಗೆ . ಚಿತ್ರರಂಗದಲ್ಲಿ ಈ ರೀತಿ ಹೆಸರು ಹಾಕಿಸಿಕೊಳ್ಳಲು ದೊಡ್ಡ ಲಾಬಿಯೇ ನಡೆಯುತ್ತದೆ . ಈಗೀಗ ಹಾಲಿವುಡ್ ಪ್ರಭಾವದಿಂದ ಹೆಸರುಗಳನ್ನು ಸಿನಿಮಾ ಮುಗಿದ ಮೇಲೆ ಹಾಕುವುದುಂಟು . ನಮ್ಮೂರಿಗೆ ಇದ್ದ ಕೊನೆಯ ಬಸ್ಸು ರಾತ್ರಿ ಎಂಟು ಗಂಟೆಗೆ , ಅದನ್ನು ಹಿಡಿಯುವ ಭರದಲ್ಲಿ ಯಾರೂ ಈ ಹೆಸರುಗಳನ್ನು ಕುಳಿತು ಓದುವುದಿಲ್ಲ .  ಕೆಲವೊಮ್ಮೆ ಸಿನಿಮಾದ ಎಂಡಿಂಗ್ ಊಹೆಗೆ ತಕ್ಕಂತೆ ಇದ್ದರೆ , ಉದಾಹರಣೆಗೆ ಸಮ್ಮಿಲನ , ಫೈಟ್ , ಹೀರೋ ಜಯ ಹೀಗೆ , ಅದನ್ನೂ ಸಹ ಬಿಟ್ಟು ಬಸ್ಸಿಗೆ ಓಡುತ್ತಾರೆ . ಮತ್ತೆ ಟಾಕೀಸಿನ ಒಳಗೆ ಕತ್ತಲು ಆವರಿಸುತ್ತದೆ .
ಆದರೆ ಪ್ರೇಕ್ಷಕರು ಇಲ್ಲದೆ ನೋಡಿದ ಜೋಗಿ ಸಿನಿಮಾ ಕಿಕ್ ನೀಡಲೇ ಇಲ್ಲ . ಪಬ್ಲಿಕ್ ನ ಭಾಗವಾಗಿ ನೋಡಿದಾಗ ಮಾತ್ರ ಸಿನಿಮಾ ನಮ್ಮದೇ ಆಗುತ್ತದೆ . ಮಿಣುಕು ಲ್ಯಾಪ್ಟಾಪ್ ಹಿಡಿದು ಕುರೋಸಾವ ಸಿನಿಮಾ ನೋಡಿ ವಿಮರ್ಶೆ ಬರೆಯುವ ಜಾಣ ವಿಮರ್ಶಕರು ಇದನ್ನು ಅರಿತುಕೊಳ್ಳಬೇಕು . ಸಿನಿಮಾ ಬೇರೆ ಪುಸ್ತಕ ಬೇರೆ . ಪುಸ್ತಕ ನಮ್ಮನ್ನು ಒಳಗೆ ಎಳೆದುಕೊಂಡು ಏಕಾಂತ ಸೃಷ್ಟಿಸುತ್ತದೆ . ಸಿನಿಮಾ ಒಂದು ಸಮುದಾಯ ಕಲೆ .

5/8/16

ವಿಕಾಸ'ವಾದ' -೨ ( ಲಿಟಲ್ ಆಲ್ಬರ್ಟ್ )

ಇಪ್ಪತ್ತನೇ ಶತಮಾನದ ಆದಿಕಾಲ, ವೈದ್ಯವಿಜ್ಞಾನ ಇನ್ನೂ ತೊಟ್ಟಿಲಲ್ಲಿತ್ತು. ಮನೋವಿಜ್ಞಾನವಂತೂ ಶಿಶು. ಹುಚ್ಚುಹಿಡಿದವರನ್ನು ಚರ್ಚಿಗೆ ಸೇರಿಸಲಾಗುತ್ತಿತ್ತು. ಅಲ್ಲಿ ಜನರಿಗೆ ಬೈಬಲ್ ಓದಿ ಹೇಳುತ್ತಾ "ಭಗವಂತಾ ಕರುಣೆ ತೋರು" ಎಂದು ಬೇಡಿಕೊಳ್ಳಲಾಗುತ್ತಿತ್ತು. ಆಗಿನ ಕಾಲಕ್ಕೆ ನಮಗೆ ತಿಳಿದಿದ್ದ ಮನೋವಿಜ್ಞಾನ ಅಷ್ಟೇ!!
             ನಂತರದ ದಿನಗಳಲ್ಲಿ ಬಂದ ಪಾವ್ ಲೋವ್ ಎಂಬ ವಿಜ್ಞಾನಿ 'Pavlovian conditioning' ಅಥವಾ 'classical conditioning' ಎಂಬುದನ್ನು ಕಂಡುಹಿಡಿದ. ಆಕಸ್ಮಿಕವಾಗಿ ಅದು ಆತನಿಗೆ ಅರ್ಥವಾಯಿತು. ಆತನ ಪ್ರಯೋಗಶಾಲೆಯಲ್ಲಿ ಸಾಕಿದ ನಾಯಿಗೆ ಪ್ರತಿದಿನ ಆತನೇ ಆಹಾರ ಕೊಡುತ್ತಿದ್ದ. ಆದರೆ Pavlov ಕೈಯಲ್ಲಿ ಆಹಾರವಿಲ್ಲದಿದ್ದರೂ ನಾಯಿ ಜೊಲ್ಲು ಸುರಿಸುತ್ತಿತ್ತು. ಮುಂದಿನ ದಿನಗಳಲ್ಲಿ ಆಹಾರ ಕೊಡುವಾಗ ಆತ ಒಂದು ಸಣ್ಣ ಬೆಲ್ ಬಾರಿಸುತ್ತಿದ್ದ. ಸ್ವಲ್ಪ ದಿನ ಕಳೆದ ಮೇಲೆ ಕೇವಲ ಬೆಲ್ ಹೊಡೆದರೆ ನಾಯಿ ಜೊಲ್ಲು ಸುರಿಸುತ್ತಿತ್ತು. ಇದು ಬಿಹೇವಿಯರಲ್ ಸೈಕಾಲಜಿಯ ಮಹತ್ವದ ಪ್ರಯೋಗವಾಗಿತ್ತು.

             ಇದೇ ತಳಹದಿಯ ಮೇಲೆ ಅಮೆರಿಕಾದಲ್ಲಿ ಡಾ.ವ್ಯಾಟ್ಸನ್ ಒಂದು ವಿಲಕ್ಷಣ ಪ್ರಯೋಗ ಮಾಡಿದ. ಅದು ಆತನಿಗೆ ಖ್ಯಾತಿಯ ಜೊತೆಗೆ ಕುಖ್ಯಾತಿಯನ್ನೂ ತಂದಿತು. John B. Watson ಹಾಗೂ ಆತನ ಶಿಷ್ಯ Rosalie Rayner 1920ರಲ್ಲಿ Journal of Experimental Psychology ಎಂಬ ಸರಣಿಯಲ್ಲಿ ಮೊದಲ ಬಾರಿಗೆ 'Little Albert Experiment' ಬಗ್ಗೆ ಉಲ್ಲೇಖಿಸಿದರು.
             ಒಂದು ಫೋಬಿಯಾ ಅಥವಾ ಹೆದರಿಕೆಯನ್ನು ಮಗುವಿನ ಮನಸ್ಸಿಗೆ ತರುವುದು ಅದರ ಗುರಿಯಾಗಿತ್ತು. ಅದಕ್ಕೋಸ್ಕರ ಅವರು ಒಂಬತ್ತು ತಿಂಗಳ ಶಿಶುವನ್ನು ಆಯ್ಕೆ ಮಾಡಿಕೊಂಡರು. ಅದಕ್ಕೆ 'Albert ' ಎಂದು ನಾಮಕರಣ ಮಾಡಲಾಯಿತು. Pavlov ಮಾಡಿದ ಪ್ರಯೋಗಗಳೇ ಇಲ್ಲೂ ಸಹ ನಡೆಯಿತು. ಆದರೆ ಇಲ್ಲಿ ಮನುಷ್ಯನ ಮೇಲೆಯೇ ಪ್ರಯೋಗ ನಡೆಯಿತು.
          ಆಲ್ಬರ್ಟ್ ಮುಂದೆ ಮೊದಲು ಒಂದು ಮೊಲ , ನಾಯಿಯನ್ನು ತರಲಾಯಿತು . ಯಾವುದೇ ಹೆದರಿಕೆ ಇಲ್ಲದೆ ಆಲ್ಬರ್ಟ್ ಅದರೊಡನೆ ಆಟವಾಡಿದ , ಕುಣಿದಾಡಿದ . ನಂತರ ಜೋರಾದ ಬೆಲ್ ಶಬ್ದ ಮಾಡಲಾಯಿತು . ಆಲ್ಬರ್ಟ್ ಹೆದರಿ ಅಳಲಾರಂಭಿಸಿದ . ನಿಧಾನವಾಗಿ ಆತನಿಗೆ ಒಂದು ಫೋಬಿಯ ಇಂಡ್ಯೂಸ್ ಮಾಡಲಾಯಿತು . ಪದೇ ಪದೇ ಆತನ ಎದುರಿಗೆ ನಾಯಿ , ಮೊಲ ತಂದು ಬಿಟ್ಟು ಜೋರಾದ ಶಬ್ದ ಮಾಡುತ್ತಿದ್ದರು . ವ್ಯಾಟ್ಸನ್ ನೀಡಿದ ಹೈಪೊಥೆಸಿಸ್ ನಿಜವಿತ್ತು . ಆಲ್ಬರ್ಟ್ ಗೆ ಫೋಬಿಯಾ ಶುರುವಾಯಿತು . ವ್ಯಾಟ್ಸನ್ ಪ್ರಸಿದ್ಧನಾದ , ಆದರೆ ಆಲ್ಬರ್ಟ್ ? . ಕೆಲವರು ಹೇಳುವ ಪ್ರಕಾರ ಕೇವಲ ನಾಯಿ , ಮೊಲಕ್ಕೆ ಈ ಪ್ರಯೋಗ ಸೀಮಿತವಾಗಿರಲಿಲ್ಲ . ಅಮ್ಮನ ಫೋಟೋ ತೋರಿಸಿ ಬೆಲ್ ಶಬ್ದ ಮಾಡುತ್ತಿದ್ದರು . ಪತ್ರಿಕೆಯೊಂದು ಆಲ್ಬರ್ಟ್ ಗೆ ಸಾಂತ ಕ್ಲಾಸ್ ಕಂಡರೂ ಹೆದರಿಕೆ ಎಂದು ವರದಿ ಮಾಡಿತು . ಮತ್ತೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಲ್ಬರ್ಟ್ ಯಾರು ಎಂಬುದನ್ನು ಸಂಶೋಧಿಸಿದರು . ವ್ಯಾಟ್ಸನ್ ನ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುವ ಒಬ್ಬ ನರ್ಸ್ ಮಗನೇ ಆಲ್ಬರ್ಟ್ ಎಂದು ನಂಬಲಾಯಿತು . ಅವಳಿಗೆ ತನ್ನ ಮಗನ ಮೇಲೆ ನಡೆಯುತ್ತಿದ್ದ ಪ್ರಯೋಗ ಗೊತ್ತೇ ಇರಲಿಲ್ಲ ಎಂದು ಕೆಲವರೆಂದರೆ , ಆಕೆಗೂ ಗೊತ್ತಿತ್ತು ಎಂದು ಕೆಲವರೆಂದರು . ಇವನೇ ಆಲ್ಬರ್ಟ್ ಎಂದು ಹತ್ತು ಹಲವು ಜನರೆಡೆಗೆ ಬೊಟ್ಟು ಮಾಡಿ ತೋರಿಸಿದರು . ಕೆಲವರ ಪ್ರಕಾರ ತಾಯಿಗೆ ವಿಷಯ ತಿಳಿದು ಮಗನ್ನನ್ನು ಕರೆದುಕೊಂಡು ದೂರ ಹೋದಳು . ಅದೇನೇ ಇರಲಿ ಆಲ್ಬರ್ಟ್ ತನ್ನ ಹೋರಾಟದಲ್ಲಿ ಏಕಾಂಗಿಯಾದ . ಜೀವನವಿಡೀ ಹೆದರಿಕೆಯಲ್ಲೇ ನಲುಗಿ ಹೋಗಿದ್ದಿರಬಹುದು ಆ ಜೀವ .
ನಂತರದ ದಿನಗಳಲ್ಲಿ ಈ ಪ್ರಯೋಗದ ಮೇಲೆ ತೀವ್ರ ತರವಾದ ಟೀಕೆಗಳು ಕೇಳಿ ಬಂದವು . ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಸಹ ಈ ಪ್ರಯೋಗ ನಡೆಸಿದ್ದು ತಪ್ಪು ಎಂದು ವರದಿ ನೀಡಿತು . ಅಷ್ಟೇ ಅಲ್ಲದೇ ಇನ್ನು ಮುಂದೆ ಮನುಷ್ಯರನ್ನು ಪ್ರಯೋಗಗಳಿಗೆ ಉಪಯೋಗಿಸಬಾರದು ಎಂಬ ನಿರ್ಬಂಧ ಹೇರಲಾಯಿತು .
ಆದರೆ ಈ ಪ್ರಯೋಗ ಬಿಹೇವಿಯರಲ್ ಸೈನ್ಸ್ ನ ಒಂದು ಮೈಲಿಗಲ್ಲು . ಮನೋವಿಜ್ಞಾನದ ದಿಕ್ಕನ್ನೇ ಬದಲಾಯಿಸಿದ ಪ್ರಯೋಗಕ್ಕೆ ಅರ್ಪಿಸಿಕೊಂಡ ಆಲ್ಬರ್ಟ್ ಗೆ ನಾವು ಋಣಿಗಳು . ಭಾರತದ ಮಟ್ಟಿಗೆ ಮನೋರೋಗ ಎಂದರೆ ಕೇವಲ ಹುಚ್ಚು ಎಂದಷ್ಟೇ . ಆದರೆ ನಮ್ಮ ನಗು ,ಅಳು ,ಕೋಪ ,ಪರಿತಾಪ ಎಲ್ಲವೂ ಮನೋರೋಗಗಳೇ ! . ಎಲ್ಲವೂ ಪೂರ್ವ ನಿರ್ಧರಿತ ನಿಯಮಗಳು , 'ಕ್ಲಾಸಿಕಲ್ ಕಂಡೀಶನ್ ' .

21/7/16

ಖಾರಾಬಾತು -5 (ಸಿಟಿ ಲೈಟ್ಸ್)

ಬೆಳಗಿನ ಜಾವ ಚುಮು-ಚುಮು ಚಳಿಯಲ್ಲಿ ಮಜೆಸ್ಟಿಕ್ ಗೆ ಬಂದಿಳಿದೆ . ಆ ಬೆಳಗಿನ ಜಾವದಲ್ಲೂ ಟ್ಯಾಕ್ಸಿ ಡ್ರೈವರ್ ಗಳು , ಆಟೋ ಡ್ರೈವರ್ ಗಳು ಗಡಿ-ಬಿಡಿಯಿಂದ ಓಡಾಡುತ್ತಿದ್ದರು . ತಮ್ಮ ಗಿರಾಕಿಗಳನ್ನು ತರ ತರದ ರೀತಿಯಲ್ಲಿ ಆಕರ್ಷಿಸುತ್ತಿದರು . ಇವರೆಲ್ಲರ ವ್ಯಾಪಾರಕ್ಕೆ ಬ್ರೇಕ್ ಹಾಕುತ್ತಾ ವೇಗವಾಗಿ ಸಿಟಿ ಬಸ್ಸೊಂದು ನನ್ನೆಡೆಗೆ ಬಂತು . ಬೆಳಕಿನ್ನೂ ಮೂಡಿಲ್ಲವಾದ್ದರಿಂದ ಬೋರ್ಡು ಕಾಣಿಸುತ್ತಿರಲಿಲ್ಲ , ಬಸ್ಸು ಹತ್ತಿ ಕಂಡಕ್ಟರ್ ಬಳಿ ಜಯನಗರದ ಕಡೆ ಹೋಗುತ್ತದೆಯೆ ? ಎಂದು ವಿಚಾರಿಸಿದೆ . ಆತ "ರೀ ಇದು ಜೆ.ಪಿ ನಗರ ಹೋಗುತ್ತೆ ರೂಟ್ ನಂಬರ್ ಹಾಕಿರೋದು ಕಾಣಲ್ವಾ " ಎಂದು ಸೌಜನ್ಯದಿಂದಲೇ ಬೈದು ಕೆಳಗಿಳಿಸಿದ . ಹತ್ತು ನಿಮಿಷ ಕಾದರೂ ಮತ್ತೊಂದು ಬಸ್ಸು ಬರಲೇ ಇಲ್ಲ , ಆದರೆ ಒಂದರ ಹಿಂದೆ ಒಂದರಂತೆ ಆಟೋ , ಕ್ಯಾಬ್ ಗಳು ಓಡಾಡುತ್ತಿದ್ದವು . ಒಂದು ಆಟೋಗೆ ಕೈ ಮಾಡಿ ನಿಲ್ಲಿಸಿದೆ ,
"ಜಯನಗರ ಬರ್ತೀರಾ ಸಾರ್ ?" ಕೇಳಿದೆ , " ಇಲ್ಲ ಕಣ್ರೀ ಹತ್ರದ್ ಏರಿಯಾ ಆದ್ರೆ ಬರ್ತೀನಿ ವಾಪಾಸು ಖಾಲಿ ಬರೋಕ್ ಆಗಲ್ಲ " ಎಂದು ನನ್ನ ಉತ್ತರಕ್ಕೂ ಕಾಯದೆ ಹೊರಟು ಹೋದ .
ಮತ್ತೊಂದು ಕ್ಯಾಬು ನಿಲ್ಲಿಸಿದೆ , " ಇಲ್ಲ ಕಣ್ರೀ ರಾಜಾಜಿನಗರ ಹೋಗ್ತಾ ಇದ್ದೀನಿ " ಎಂದ . ಅರ್ಧ ಗಂಟೆಗೂ ಹೆಚ್ಚು ಕಾಲ ಅಬ್ಬೆಪಾರಿಯಂತೆ ನಿಂತಿದ್ದ ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು . " ನೀವು ಎಲ್ಲಿಗೆ ಹೋಗ್ತೀರಾ ಅಲ್ಲೇ ಬಿಡಿ " ಎಂದೇ .
" ಅದೆಲ್ಲ ಆಗೋಲ್ಲ ಸಾರ್ , ಅಲ್ಲಿ ಪ್ರೀಪೈಡ್ ಆಟೋ ಸಿಗತ್ತೆ ಹೋಗಿ " ಎಂದ . ಪ್ರೀಪೈಡ್ ಕೌಂಟರ್ ಗೆ ಹೋಗಿ ಜಯನಗರ  ಫೋರ್ಥ್ ಟಿ ಬ್ಲಾಕ್ ಗೆ ಟಿಕೆಟು ಕೊಂಡುತಂದೆ . ಕೊನೆಗೂ ದೇವರು ಕಣ್ಣು ಬಿಟ್ಟ , ಆಟೋ ಹತ್ತಿ ಮೆಜೆಸ್ಟಿಕ್ ಬಿಟ್ಟೆ . ಕಳೆದ ಬಾರಿ ನಾನು ಬಂದಾಗ ಸಂಜೆಯಾಗಿತ್ತು , ರಸ್ತೆಯಲ್ಲಿ ವಾಹನಗಳು ಗಿಜಿ ಗುಟ್ಟುತಿತ್ತು . ಆದರೆ ಈಗ ರಸ್ತೆ ಖಾಲಿಯಾಗಿತ್ತು  , ಬಸ್ಸಿನಲ್ಲಿ ಮುಕ್ಕಾಲು ಗಂಟೆ ಆಗುತ್ತಿದ್ದ ಪ್ರಯಾಣ ಇಪ್ಪತ್ತೇ ನಿಮಿಷಕ್ಕೆ ಮುಗಿದು ಹೋಯಿತು .
" ಸಾರ್ ಯಾವ ಕ್ರಾಸ್ ಗೆ ಹೋಗ್ಬೇಕು ? " ಆಟೋದವನು ಕೇಳಿದ . " ಸ್ವಾದಿಷ್ಟ್ ಆಹಾರ್ ಹೋಟೆಲ್ ಇದ್ಯಲ್ಲ ಅದರ ಪಕ್ಕದ ಕ್ರಾಸ್ " ಎಂದೆ . ಎರಡು ರೌಂಡು ಇಡೀ ಜಯನಗರ ಸುತ್ತಿದರೂ ಹೋಟೆಲ್ ಸಿಗಲೇ ಇಲ್ಲ . ನನಗೆ 26th ಮೇನ್ ರೋಡ್ ಎಂದು ಗೊತ್ತಿದ್ದರೂ , ಅದೂ ಸಹ ಸಿಗಲಿಲ್ಲ . 25th ಆಗುತ್ತಿದ್ದ ಹಾಗೆ , 27th ಮೇನ್ ರೋಡ್ ಬರುತಿತ್ತು . ಹೀಗೆ ಇನ್ನೊಂದೆರಡು ರೌಂಡು ಹಾಕಿದ ಮೇಲೆ ರೋಡು ಸಿಕ್ಕಿತು . ಪ್ರೀಪೈಡ್ ಬಿಲ್ ನೋಡಿ ದುಡ್ಡು ಕೊಟ್ಟೆ .
" ಏನ್ಸಾರ್ ? ಇಷ್ಟೇನಾ , ಮೇಲೆ ಐವತ್ ರುಪಾಯಿ ಕೊಡಿ " ಎಂದ . " ಇದು ಪ್ರೀಪೈಡ್ ಅಲ್ವಾ ? ಇರಿ ಕಂಪ್ಲೇಂಟ್ ಮಾಡ್ತೀನಿ " ಎಂದು ನಾನು ಮೊಬೈಲ್ ತೆಗೆದೆ .
" ಅಯ್ಯೋ ಮಾಡ್ಕಳಿ ಸಾರ್ , ಅಡ್ರೆಸ್ಸ್ ಹುಡ್ಕಕ್ಕೆ ಐದ್ ರೌಂಡ್ ಹೊಡೀಲಿಲ್ವ ? . ಅವ್ರು ಬರಿ ಫೋರ್ಥ್ ಟಿ ಬ್ಲಾಕ್ ಗೆ ರೇಟು ಫಿಕ್ಸ್ ಮಾಡಿದಾರೆ . ಸುಮ್ನೆ ಐವತ್ ರುಪಾಯಿ ಜಾಸ್ತಿ ಮಡ್ಗಿ ಹೋಗಿ " ಎಂದು ಆತ ತಿರುಗಿ ಬಿದ್ದ . ನಮ್ಮ ಗಲಾಟೆಗೆ ವಾಕ್ ಮಾಡುತ್ತಿದ್ದ ಒಂದಷ್ಟು ಧಡೂತಿ ಜನರು ತಿರುಗಿ ನೋಡತೊಡಗಿದರು . ನನಗೆ ಪರಮ ನಾಚಿಕೆಯಾಗಿ ಮರು ಮಾತಾಡದೆ ದುಡ್ಡು ಕೊಟ್ಟು ಬಂದೆ .
 ನನ್ನಂತೆಯೇ ಭವಿಷ್ಯ ಅರಸಿ ಬೆಂಗಳೂರಿಗೆ ಬಂದಿಳಿದ ಅದೆಷ್ಟೋ ಜನರನ್ನು ಬೆಂಗಳೂರು ನೋಡಿದೆ . ನನಗೆ ಬೆಂಗಳೂರು ಹೊಸದು , ಬೆಂಗಳೂರಿಗೆ ನನ್ನಂತವರು ಹಳಬರು .

15/6/16

ಒಂದೂರಲ್ಲೊಂದಿನ

ಪ್ರವಾಸ ಕಥನಗಳನ್ನು ನಮ್ಮ ಕೆಲವು ಬರಹಗಾರರು ಕೇವಲ ಎಲ್ಲಿಗೆ ಹೋದೆ ? ಹೇಗೆ ಹೋದೆ ? ಏನೇನು ತಿಂದೆ ? ಇಷ್ಟಕ್ಕೇ ಸೀಮಿತಗೊಳಿಸಿಬಿಡುತ್ತಾರೆ . ಎಲ್ಲರಿಗೂ ಕಾಣುವ ವಿಷಯಗಳನ್ನು ಬರೆಯುವುದು ಅನಗತ್ಯ ಎಂಬುದು ನನ್ನ ಅನಿಸಿಕೆ . ಯಾವ ವ್ಯಕ್ತಿಗೆ ತಾನಿರುವ ಜಾಗದಲ್ಲೇ ಕುತೂಹಲವಿಲ್ಲವೋ, ಆತ ಪ್ರವಾಸ ಮಾಡುವುದು ಸಂಪನ್ಮೂಲದ ಪೋಲು ಅಷ್ಟೇ . ನಾನು ಬರೆಯುತ್ತಿರುವ ಈ ಪ್ರವಾಸ ಕಥನ ಮೈಸೂರಿನಿಂದ ಶುರುವಾಗುವುದಿಲ್ಲ . 'ಮೈಸೂರು ಟು ಊಟಿ' ಎಂದು ಗೂಗಲ್ ಮಾಡಿದರೆ ಅದೇ ನಿಮಗೆ ನಂಜನಗೂಡು , ಗುಂಡ್ಲುಪೇಟೆ ಮಾರ್ಗ  ತೋರಿಸುತ್ತದೆ . ಗುಂಡ್ಲುಪೇಟೆಯವರೆಗೂ ಸುಗಮವಾಗಿ ಸಾಗಿಬಿಡಬಹುದು . ಗುಂಡ್ಲುಪೇಟೆಯಿಂದ ಬಲಕ್ಕೆ ತಿರುಗಿದರೆ ಕೇರಳದ ವಯ್ನಾಡಿನ ಕಡೆಗೆ ಹೋಗುತ್ತದೆ , ನೇರವಾಗಿ ಸಾಗಿದರೆ ತಮಿಳುನಾಡಿನ ನೀಲಗಿರಿ ಜಿಲ್ಲೆ ತಲುಪುತ್ತೇವೆ .
ನನಗೆ ಈ ದಾರಿಯಲ್ಲಿ ಸಾಗಿದರೆ ಮೊದಲು ನೆನಪಾಗುವುದೇ ' ವೀರಪ್ಪನ್ ' . ನಾನು ಚಿಕ್ಕವನಿದ್ದಾಗ ಅಲ್ಲ ಮೊನ್ನೆ ಮೊನ್ನೆಯ ತನಕ ಒಬ್ಬ ವೀರಪ್ಪನ್ ನ ಹಿಡಿಯೋಕೆ ಆಗಿಲ್ವ ? ಎಂದೇ ಅನಿಸುತಿತ್ತು . ಒಮ್ಮೆ ಆ ಜಾಗಗಳಲ್ಲಿ ಓಡಾಡಿ ಬಂದ ಮೇಲೆ ನನ್ನ ಅಜ್ಞಾನದ ಅರಿವಾಯಿತು . ಗುಂಡ್ಲುಪೇಟೆ ದಾಟಿದ ಮೇಲೆ ಬಂಡೀಪುರ ರಿಸರ್ವ್ ಫಾರೆಸ್ಟ್ ಮೂಲಕ ನಾವು ಸಾಗಬೇಕು . ಕರ್ನಾಟಕ ,ತಮಿಳುನಾಡು ಹಾಗೂ ಕೇರಳ ಈ ಮೂರೂ ರಾಜ್ಯಗಳು ಇಲ್ಲಿ ಬಂದು ಸಂಧಿಸುತ್ತವೆ . ಪೂರ್ವಘಟ್ಟಗಳು ಮುಗಿದು ಪಶ್ಚಿಮಘಟ್ಟದ ಸುಂದರ ಸಹ್ಯಾದ್ರಿ ಪರ್ವತ ಶ್ರೇಣಿಗಳು ಶುರುವಾಗುವುದು ಇಲ್ಲಿಂದಲೇ . ಪಾಲಾರ್ ನದಿಯೇ ಕರ್ನಾಟಕ ಹಾಗೂ ತಮಿಳುನಾಡಿನ ಗಡಿ . ಇದೇ ನದಿಯಲ್ಲೇ ವೀರಪ್ಪನ್ ತನ್ನ ರಕ್ತ-ಸಿಕ್ತ ಕೈಗಳನ್ನು ತೊಳೆದುಕೊಂಡಿದ್ದ . ಹದಿನೆಂಟು ಸಾವಿರ ಹೆಕ್ಟೇರು ಕಾಡಿಗೆ ರಾಜನಂತೆ ಮೂವತ್ತಾರು ವರ್ಷ ಇಡೀ ಕಾಡನ್ನೇ ನಡುಗಿಸಿದ . ಇಲ್ಲಿನ ವನ್ಯ ಸಂಪತ್ತು ಎಷ್ಟಿದೆ ಎಂದರೆ ಈಗಲೂ ಕಾಡು ಪ್ರಾಣಿಗಳನ್ನು ರಸ್ತೆ ಬದಿಯಲ್ಲೇ ನೋಡಬಹುದು . ವೀರಪ್ಪನ್ ಕಾಲಕ್ಕೆ ಇನ್ನೆಷ್ಟು ಸಂಪತ್ತು ಇದ್ದಿರಬೇಡ ? . ಆತ ಒಬ್ಬನೇ ಸುಮಾರು ಎರಡು ಸಾವಿರ ಆನೆಗಳನ್ನು ಬೇಟೆ ಆಡಿದ , ಸುಮಾರು ನೂರತೊಂಬತ್ತನಾಲ್ಕು ಜನರನ್ನು ಸಾಯಿಸಿದ . ಆತನನ್ನು ಬಗ್ಗು ಬಡಿಯಲು ನಮ್ಮ ಸರಕಾರಗಳು ಬರೋಬ್ಬರಿ ಏಳುನೂರಾ ಎಂಬತ್ತು ಕೋಟಿ ವ್ಯಯಿಸಿದರು . ಏಷಿಯಾದ ನಂಬರ್ ಒನ್ ನರಹಂತಕ ಹುಟ್ಟಿ ಬೆಳೆದಿದ್ದು ಇಲ್ಲೇ . ಮಹದೇಶ್ವರ ಬೆಟ್ಟ , ಸತ್ಯಮಂಗಲ , ಮಧುಮಲೈ ಕಾಡುಗಳೇ ಅವನ ರಾಜ್ಯ . ಅಷ್ಟಕ್ಕೇ ನನ್ನ ಯೋಚನೆ ನಿಂತಿದ್ದರೆ ಸರಿ ಇತ್ತೇನೋ , ಆದರೆ ಮನದ ಹುಚ್ಗುದುರೆಗೆ ಲಗಾಮೆಲ್ಲಿ ? . ವೀರಪ್ಪನ್ ಗು ಹಿಂದೆ ಮುಮ್ಮಟ್ಟಿವಾಯನ್ ಎಂಬ ವ್ಯಕ್ತಿ ಈ ಕಾಡನ್ನು ಆಳಿದ್ದಾನೆ . ಅವನದೇ ಮೀಸೆಯಿಂದ ವೀರಪ್ಪನ್ ಇನ್ಸ್ಪೈರ್ ಆಗಿದ್ದಿರಬಹುದು . 
ಬಂಡೀಪುರದಿಂದ ಮುಂದೆ ಮಧುಮಲೈಗೆ ನಾವು ಹೋಗಬೇಕು . ಮಧುಮಲೈ ತಮಿಳುನಾಡಿಗೆ ಸೇರಿದೆ , ಇದೊಂದು ಹುಲಿ ಸಂರಕ್ಷಿತ ಪ್ರದೇಶ .ಏಷಿಯಾದ ಆನೆಗಳ ತವರು ಇದು , ವಿಶ್ವಸಂಸ್ಥೆ ಇದನ್ನು ಎನ್ಡೇಂಜರ್ಡ್ ಎಂದು ಘೋಷಿಸಿದೆ . ಕಳೆದ ದಶಕದಿಂದ ಇಲ್ಲಿಯವರಿಗೆ ಸುಮಾರು ಅರ್ಧದಷ್ಟು ಸಂತತಿ ನಶಿಸಿಹೋಗಿದೆ . ಕಾರಣ , ನಮ್ಮ ಎಕಾಲಜಿಯ ಪದ ' ಹ್ಯಾಬಿಟ್ಯಾಟ್ ಲಾಸ್ ' ಹಾಗೂ ಅತಿಯಾದ ಬೇಟೆ .  ಬಂಡೀಪುರದಿಂದ ಮಧುಮಲೈ ದಾಟುವವರೆಗೂ ವಾಹನ ನಿಲ್ಲಿಸುವ ಹಾಗಿಲ್ಲ , ಚೆಕ್ ಪೋಸ್ಟ್ ಒಂದನ್ನು ಬಿಟ್ಟು . ಹಾಗೆಯೇ ರಿಸರ್ವ್ ಫಾರೆಸ್ಟ್ ಒಳಗೆ ಓಡಾಡುವುದು ಅಪರಾಧ . ರಾತ್ರಿ ಒಂಬತ್ತರಿಂದ ಬೆಳಿಗ್ಗೆ ಆರರವರೆಗೆ ವಾಹನ ಸಂಚಾರ ನಿಷಿದ್ಧ . ರಾತ್ರಿ ಕೇವಲ ಎರಡು ಕರ್ನಾಟಕ ಸಾರಿಗೆ ಬಸ್ಸನ್ನು ಮಾತ್ರ ಬಿಡುತ್ತಾರೆ . 
ಕೆನೆತ್ ಆಂಡರ್ಸನ್ ಅವರ ಬೇಟೆ ಪುಸ್ತಕ ಓದಿದರೆ ನಿಮಗೆ ಈ ಕಾಡಿನ ಪರಿಚಯ ಚೆನ್ನಾಗೇ ಇರುತ್ತದೆ . ಇದೇ ಕಾಡಿನಲ್ಲಿ ಕೆನೆತ್ ಬಹಳಷ್ಟು ನರಭಕ್ಷಕ ಹುಲಿಗಳನ್ನು ಹೊಡೆದಿದ್ದಾರೆ . ಅಷ್ಟಿದ್ದ ಹುಲಿಗಳ ಸಂಖ್ಯೆ ಈಗ ನಾವೇ ಅವುಗಳನ್ನು ರಕ್ಷಣೆ ಮಾಡುವ ಹಂತ ತಲುಪಿದೆ . ಪ್ಲಾಸ್ಟಿಕ್ ಎಸೆಯುವುದು ನಿಷಿದ್ಧವಾದರೂ ಅಲ್ಲಲ್ಲಿ ಪ್ಲಾಸ್ಟಿಕ್ ಕಾಣಬಹುದು . ಮಧಿಮಲೈ ನಂತರ ಎರಡು ದಾರಿಯಿಂದ ಊಟಿಗೆ ಹೋಗಬಹುದು . ಮಧುಮಲೈ ಇಂದ ಗುಡಲೂರಿಗೆ ತಲುಪಿ ಅಲ್ಲಿಂದ ಊಟಿಗೆ ಹೋಗಬಹುದು . ಭಾರಿ ವಾಹನಗಳು , ಬಸ್ಸು ಎಲ್ಲವೂ ಇದೆ ದಾರಿಯಲ್ಲಿ ಸಾಗುತ್ತವೆ . ಇನ್ನೊಂದು ದಾರಿ ತೆಪ್ಪಕಾಡಿನ ಮೂಲಕ ಊಟಿ ಸೇರುತ್ತದೆ . ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷಿದ್ಧ . ಸಿಂಗಲ್ ರೋಡ್ ಆದ್ದರಿಂದ ವಾಹನ ಚಾಲನೆ ಕಷ್ಟ , ಆದರೆ ಇದೇ ಊಟಿಗೆ ಹತ್ತಿರದ ದಾರಿ . ನೀವೇನಾದರೂ ಕಾರು ಅಥವಾ ಬೈಕಿನಲ್ಲಿ ಹೋದರೆ ಇದೇ ದಾರಿಯಲ್ಲಿ ಹೋಗಿ . ಅತ್ಯಂತ ಸುಂದರ ಹಾಗೂ ಅಪಾಯಕಾರಿ ರಸ್ತೆ . ಮೂವತ್ತಾರು ಹೇರ್ ಪಿನ್ ತಿರುವುಗಳು , ಸುಮಾರು ಎಂಟು ಸಾವಿರ ಅಡಿಯ ಬೆಟ್ಟ ಹತ್ತಬೇಕು . ಭಯ ಬೇಡ ಪ್ರತಿ ತಿರುವುಗಳಲ್ಲೂ ಆಂಬುಲೆನ್ಸ್ ನಂಬರ್ , ಫ್ರೀ ಶವದ ವಾಹನದ ಸೌಲಭ್ಯವಿದೆ . ಅಕ್ಷರಶಃ ಸ್ವರ್ಗಕ್ಕೆ ಮೂರೇ ಗೇಣು . ಪ್ರತಿ ವರ್ಷ ಹದಿನೈದಕ್ಕೂ ಹೆಚ್ಚು ಅಪಘಾತಗಳು ಇಲ್ಲಿ ಸಂಭವಿಸುತ್ತದೆ . ಬೆಟ್ಟವನ್ನು ಹತ್ತುತಿದ್ದಂತೆಯೇ ಕುಳಿರ್ಗಾಳಿ ನಿಮ್ಮನ್ನು ಸ್ವಾಗತಿಸುತ್ತದೆ . ಕಲ್ಹತ್ತಿ ಎಂಬ ಸಣ್ಣ ಊರು ಸಿಗುತ್ತದೆ , ಮತ್ತೆ ಸುಮಾರು ಇಪ್ಪತ್ತು ಕಿಲೋಮೀಟರ್ ಮೇಲೆ ಹತ್ತಿದರೆ ಊಟಿ ತಲುಪುತ್ತೇವೆ . 

ಊಟಿ ಅಥವಾ ಉದಕಮಂಡಲ ಭಾರತದ ಟಾಪ್ ಐದು ಹಿಲ್ ಸ್ಟೇಷನ್ ಗಳಲ್ಲಿ ಒಂದು . ಊಟಿಯ ಇತಿಹಾಸದ ಮೊದಲ ದಾಖಲೆ ಸಿಗುವುದು ಹೊಯ್ಸಳರ ಕಾಲದಿಂದ . ವಿಷ್ಣುವರ್ಧನ ಆಳಿದ ದಾಖಲೆಗಳು ಸಿಗುತ್ತವೆ . ತೋಡ ಮತ್ತು ಬಡಗ ಎಂಬ ಎರಡು ಬುಡಕಟ್ಟು ಜನರು ಇಲ್ಲಿ ವಾಸಿಸುತ್ತಿದರು . ಇಂದಿಗೂ ಇಲ್ಲಿ ಬಡಗ ಭಾಷೆಯನ್ನು ಕೇಳಬಹುದು . ನಂತರ ಟಿಪ್ಪು ಸುಲ್ತಾನ್ ಊಟಿಯನ್ನು ಆಳಿದ . ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಊಟಿಯನ್ನು ವಶಪಡಿಸಿಕೊಂಡರು . ' ಹಿಲ್ ಸ್ಟೇಷನ್ ' ಎಂಬ ಪದ ಬಳಕೆ ಬಂದದ್ದೇ ಬ್ರಿಟೀಷರಿಂದ . ಊಟಿ  ಮದ್ರಾಸ್ ಪ್ರೆಸಿಡೆನ್ಸಿಯ ಬೇಸಿಗೆಯ ರಾಜಧಾನಿ ಆಯಿತು . ಇಲ್ಲಿಗೆ ಬಂದ ಎಷ್ಟೋ ಬ್ರಿಟಿಷ್ ಅಧಿಕಾರಿಗಳು ಊಟಿಯನ್ನು ಸ್ವಿಟ್ಜರ್ಲ್ಯಾಂಡ್ ಗೆ ಹೋಲಿಕೆ ಮಾಡಿ ತಮ್ಮ ಪತ್ರ , ಡೈರಿಯಲ್ಲಿ ಬರೆದುಕೊಂಡಿದ್ದಾರೆ . 
ಊಟಿ ಸಮುದ್ರ ಮಟ್ಟದಿಂದ  ಸುಮಾರು ಎರಡುಸಾವಿರದ ಐನೂರು ಮೀಟರ್ ಎತ್ತರದಲ್ಲಿ ಇದೆ . ಚಳಿಗಾಲದಲ್ಲಿ ತಾಪಮಾನ ಸೊನ್ನೆ ಡಿಗ್ರಿ ತಲುಪುತ್ತದೆ , ಆದರೆ ವಿಶೇಷವೆಂದರೆ ಇಲ್ಲಿ ಹಿಮಪಾತ ಆಗುವುದಿಲ್ಲ . ಊಟಿಯ ಆರ್ಥಿಕತೆ ಸಂಪೂರ್ಣವಾಗಿ ಕೃಷಿ ಹಾಗೂ ಪ್ರವಾಸೋದ್ಯಮದ ಮೇಲೆ ನಿಂತಿದೆ . ಊಟಿಯ ಬೋರ್ಡಿಂಗ್ ಸ್ಕೂಲ್ ಬಹಳ ಪ್ರಸಿದ್ಧಿ . ಶಾಲೆಗಳೂ ಸಹ ಅರ್ಥ ವ್ಯವಸ್ಥೆಗೆ ಸ್ವಲ್ಪ ಮಟ್ಟಿನ ಕೊಡುಗೆ ನೀಡುತ್ತದೆ . 
ನಾವು ಮೊದಲು ತಲುಪಿದ್ದು ಗವರ್ನಮೆಂಟ್ ಬೊಟೋನಿಕಲ್ ಗಾರ್ಡನ್ ಗೆ , ಬ್ರಿಟಿಷರು ಕಟ್ಟಿದ ಹಿಲ್ ಸ್ಟೇಷನ್ ಎಂದರೆ ಬೊಟೋನಿಕಲ್ ಗಾರ್ಡನ್ ಇರಲೇಬೇಕು . ಇದು ಸುಮಾರು ಇಪ್ಪತ್ತೆರಡು ಎಕರೆ ವಿಸ್ತೀರ್ಣ ಹೊಂದಿದೆ . ಸಾವಿರಕ್ಕೂ ಹೆಚ್ಚು ಪ್ರಬೇಧದ ಗಿಡ-ಮರಗಳನ್ನು ಇಲ್ಲಿ ಕಾಣಬಹುದು . ಪ್ರತಿ ವರ್ಷ ಮೇ ತಿಂಗಳಲ್ಲಿ  ಪ್ರದರ್ಶನ ಸಹ ಇರುತ್ತದೆ . ಇಪ್ಪತ್ತು ಮಿಲಿಯನ್ ವರ್ಷ ಹಳೆಯ ಮರದ ಪಳಿಯುಳಿಕೆ ಇಲ್ಲಿನ ಸೆಂಟರ್ ಆಫ್ ಅಟ್ರಾಕ್ಷನ್ . 
ನಂತರ ನಾವು ಹೋಗಿದ್ದು ' ದೊಡ್ಡ ಬೆಟ್ಟ ಪೀಕ್ ' ಗೆ . ಈ ಹೆಸರು ಕನ್ನಡದಿಂದಲೇ ಬಂದಿದೆ . ದೊಡ್ಡಬೆಟ್ಟ ಸಮುದ್ರ ಮಟ್ಟದಿಂದ ಎಂಟು ಸಾವಿರದ ಆರುನೂರಾ ಐವತ್ತು ಅಡಿ ಎತ್ತರದಲ್ಲಿದೆ . ಇದರ ಸುತ್ತ ಕೂಡ ರಿಸರ್ವ್ ಫಾರೆಸ್ಟ್ ಇದೆ , ಸಂಜೆ ಐದು ಗಂಟೆಯ ನಂತರ ಪ್ರವೇಶ ನಿಷಿದ್ಧ . ದಕ್ಷಿಣ ಭಾರತದ ನಾಲ್ಕನೇ ಹಾಗೂ ನೀಲಗಿರಿ ಜಿಲ್ಲೆಯ ಮೊದಲನೇ ಪೀಕ್ ಪಾಯಿಂಟ್ . ಇದು ಎಷ್ಟು ಎತ್ತರದಲ್ಲಿ ಇದೆ ಎಂದರೆ , ಇದರ ಮೇಲೆ ಕಟ್ಟಿರುವ ಟೆಲಿಸ್ಕೋಪ್ ಟವರ್ ಹತ್ತಿದರೆ ನಮಗೆ ಮೈಸೂರಿನ ಚಾಮುಂಡಿ ಬೆಟ್ಟ ಕಾಣಿಸುತ್ತದೆ . ಸಂಜೆಯ ಹೊತ್ತಿಗೆ ಜಾಕೆಟ್ ಇಲ್ಲದೆ ಮೇಲೆ ಹೋದರೆ , ಮೇಲೇ ಹೋಗುವುದು ಖಂಡಿತ . 

ಊಟಿಯ ಪ್ರಮುಖ ಆಕರ್ಷಣೆ ನೀಲಗಿರಿ ರೈಲ್ವೇಸ್ . ಊಟಿ ಹಾಗೂ ಮೇಟುಪಾಳಿಯಂ ಮಧ್ಯೆ ನ್ಯಾರೋ ಗೆಜಿನ ರೈಲು ಓಡುತ್ತದೆ . ಇದನ್ನು ಯುನೆಸ್ಕೋ ' ವರ್ಲ್ಡ್ ಹೆರಿಟೇಜ್ ಸೈಟ್ ' ಎಂದು ಗುರುತಿಸಿದೆ . ಭಾರತದ ಅತಿ ಪ್ರಾಚೀನ ಮೌಂಟನ್ ರೈಲ್ವೆ ಇದು . ಸಾವಿರದ ಎಂಟುನೂರಾ ಎಂಬೆತ್ತರಡರಲ್ಲಿ ಆರ್ಥರ್ ಎಂಬ ಸ್ವಿಸ್ ಇಂಜಿನಿಯರ್ ಈ ರೈಲಿನ ನೀಲ ನಕ್ಷೆ ಸಿದ್ಧಪಡಿಸಿದ . ಕುನ್ನೂರು ಹಾಗೂ ಮೇಟುಪಾಳಿಯಂ  ಮಧ್ಯೆ ಸಾವಿರದ ಎಂಟುನೂರಾ ತೊಂಬತ್ತಒಂಬತ್ತರಲ್ಲಿ ರೈಲು ಓಡಾಡಲು ಶುರುವಾಯಿತು . ಸಾವಿರದ ಒಂಬೈನೂರ ಮೂರರಲ್ಲಿ ಭಾರತ ಸರ್ಕಾರ ಇದನ್ನು ಖರೀದಿಸಿ ಊಟಿಯವರೆಗೂ ಮುಂದುವರೆಸಲಾಯಿತು . ಇದಕ್ಕೆ ' ಟಾಯ್ ಟ್ರೈನ್ ' ಎಂಬ ಅಡ್ಡ ಹೆಸರಿದೆ . ಕೇವಲ ನಾಲ್ಕು ಭೋಗಿ ಇರುವ ಈ ರೈಲು ಮಕ್ಕಳ ಆಟಿಕೆಯಂತೆ ಕಾಣುತ್ತದೆ . ಊಟಿ ಹಾಗೂ ಕುನ್ನೂರಿನ ಮಧ್ಯೆ ಐದು ನಿಲ್ದಾಣಗಳಿಗೆ , ಎಲ್ಲಾ ನಿಲ್ದಾಣಗಳೂ ಸ್ವಚ್ಛ ಹಾಗೂ ನೀಲಿ ಬಣ್ಣದಿಂದ ಕಂಗೊಳಿಸುತ್ತದೆ . ಕೇವಲ ಹದಿನಾರು ಮೇಲಿನ ಈ ಪ್ರಯಾಣದಲ್ಲಿ ಹದಿನಾರು ಟನಲ್ ಗಳು , ಇನ್ನೂರ ಐವತ್ತು ಸೇತುವೆಗಳಿವೆ . ಸುಮಾರು ತೊಂಬತ್ತು ನಿಮಿಷಗಳಷ್ಟು ಪ್ರಯಾಣ ಇದು .  ಇದಕ್ಕೆ ನೀವು ಖರ್ಚು ಮಾಡಬೇಕಾಗಿರುವುದು ಕೇವಲ ಹತ್ತು ರೂಪಾಯಿ . ಪ್ರಯಾಣ ಮಾತ್ರ ಚಿರ ನೆನಪು . 'ಸ್ಪರ್ಶ' ಸಿನಿಮಾದಲ್ಲಿ ತೋರಿಸುವುದು ಇದೇ ರೈಲು .

ರೋಸ್ ಗಾರ್ಡನ್ ಹಾಗೂ ಪೈಕಾರ ಲೇಕ್ ಗಳಿಗೆ ಸಮಯದ ಅಭಾವದಿಂದ ಭೇಟಿ ನೀಡಲಾಗಲಿಲ್ಲ . ನೀವು ಹೋಗಬೇಕೆಂದರೆ ಬೇಸಿಗೆ ಹೇಳಿ ಮಾಡಿಸಿದ ಕಾಲ , ಚಳಿಗಾಲದಲ್ಲಿ ಹೋಗಬೇಕೆಂದರೆ ದಪ್ಪಗಿನ ವೂಲೆನ್ ಸ್ವೆಟರ್ ಬೇಕೇ ಬೇಕು  . ವೀಕ್ ಎಂಡ್ ಗಳಲ್ಲಿ ಹೋದರೆ ರೂಮು ಸಿಗುವುದು ಕಷ್ಟ . ಬೇಸಿಗೆಯ ವೀಕೆಂಡ್ ಗಳಲ್ಲಿ ಹತ್ತು ಸಾವಿರ ಕೊಟ್ಟರೂ ಒಂದೂ ರೂಂ ಸಿಗುವುದಿಲ್ಲ . ಹನಿಮೂನ್ ಗೆ ಆರ್ಡರ್ ಕೊಟ್ಟು ಮಾಡಿಸಿದ ಜಾಗ . ಮದುವೆ ಆಗಿರದಿದ್ದರೆ ಹನಿ ಜೊತೆ ಹೋಗಬಹುದು . 
ಹೋಂ ಮೇಡ್ ಚಾಕಲೇಟ್ ಕಡಿಮೆ ಬೆಲೆಗೆ ಸಿಗುತ್ತದೆ . ಜಾಕೆಟ್ , ಸ್ವೆಟರ್ ಗಳು ಚೀಪ್ ಅಂಡ್ ಬೆಸ್ಟ್ . ನೀಲಗಿರಿ ಟೀ ಜಗತ್ ಪ್ರಸಿದ್ಧ . ದೊಡ್ಡಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟೀ ಫ್ಯಾಕ್ಟರಿಗೆ ಭೇಟಿ ನೀಡಿ ಬಿಟ್ಟಿ ಚಹಾ ಕುಡಿದುಬರಬಹುದು . ಗ್ರೀನ್ ಟೀ , ಏಲಕ್ಕಿ ಟೀ , ಬ್ಲಾಕ್ ಟೀ ಯವುದನ್ನು ಬೇಕಿದ್ದರೂ ತೆಗೆದುಕೊಂಡು ಬರಬಹುದು . 

ಕಾರಿನಲ್ಲಿ ಅಥವಾ ಬಸ್ಸಿನಲ್ಲಿ ಹೋಗುವುದು ಉತ್ತಮ . ಬೈಕು ಅಷ್ಟು ಸೂಕ್ತವಲ್ಲ . ಹೋಗುವ ಮೊದಲು ವಾಹನವನ್ನು ಸರ್ವಿಸ್ ಮಾಡಿಸಿಕೊಳ್ಳಿ , ಇಲ್ಲದಿದ್ದರೆ ತೆಪ್ಪಕಾಡಿನ ಪ್ರಪಾತಕ್ಕೆ ನಿಮ್ಮ ಗಾಡಿಯನ್ನು ತಳ್ಳುವ ಪ್ರಮೇಯ ಬರಬಹುದು . ಸುಮಾರು ಐವತ್ತು ಅರವತ್ತು ಕಿಲೋಮೀಟರಷ್ಟು ದೂರ ಗ್ಯಾರೇಜು ಇರಲಿ ಮನೆ ಸಿಗುವುದೇ ಕಷ್ಟ . ಒಬ್ಬರೇ ಹೋದರೆ ಚಳಿ ಅಸಹನೀಯ , ಜೋಡಿ ಹಕ್ಕಿಗಳಾಗಿ ಹೋಗಿ . ಮುಂದೆ ನಿಮಗೆ ಬಿಟ್ಟಿದ್ದು . 

12/6/16

E=mc² (ಭಾಗ -2)

ವೈಜ್ಞಾನಿಕ ಲೇಖನಗಳಿಗೆ ಮುಖ್ಯ ತೊಡಕು ಭಾಷೆ .  ಎಲ್ಲಾ ಇಂಗ್ಲಿಷ್ ಪದಗಳನ್ನೂ ಕನ್ನಡಕ್ಕೆ ತರ್ಜುಮೆ ಮಾಡಿದರೆ ಓದುಗರಿಗೆ ಅರ್ಥವೇ ಆಗುವುದಿಲ್ಲ ಅದೇ ಕಾರಣದಿಂದ ಹಲವು ಪದಗಳನ್ನು ಹಾಗೆಯೇ ಬಿಟ್ಟಿದ್ದೇನೆ . ನನ್ನ ಮುಖ್ಯ ಉದ್ದೇಶ ಸಂಹವನ ಅಷ್ಟೇ . ನಿಮಗೆ ಈ ಲೇಖನ ಅರ್ಥವಾದರೆ ಅದೇ ನನ್ನ ಬರಹದ ಸಾರ್ಥಕ್ಯ .
E=mc² , ಇದರ ಅನ್ವೇಷಣೆ ಶುರುವಾಗಿದ್ದು ಐನ್ಸ್ಟೀನ್ ಹುಟ್ಟುವ ಎಷ್ಟೋ ಮೊದಲು . ಎನರ್ಜಿ ಎಂಬ ಅನ್ವೇಷಣೆಯಿಂದ . ಹತ್ತೊಂಬತ್ತೆನೆಯ ಶತಮಾನದ ವಿಜ್ಞಾನಿಗಳು ಎನರ್ಜಿ ಅಥವಾ ಶಕ್ತಿಯ ಬಗ್ಗೆ ಹೆಚ್ಚು ಮಾತನಾಡಿಲ್ಲ . ಆಗ ಕೇವಲ ಫೋರ್ಸ್ ಅಥವಾ ಪವರ್ ಎಂದಷ್ಟೇ ಮಾತನಾಡುತ್ತಿದರು . ಪವರ್ ಆಫ್ ವಿಂಡ್ , ವಸ್ತು ಕೆಳಗೆ ಬಿದ್ದ ಫೋರ್ಸ್ ಇಷ್ಟೇ . ಒಬ್ಬ ಹಸಿದ ಬಡ ಹುಡುಗ  ಇಡಿಯ ವಿಜ್ಞಾನದ ದಿಕ್ಕನ್ನೇ ಬದಲಾಯಿಸಿದ .
ಮೈಕಲ್ ಫ್ಯಾರಡೆಗೆ  ತನ್ನ ಕೆಲಸದ ಮೇಲೆ ಜಿಗುಪ್ಸೆ ಬಂದಿತ್ತು , ಆತ ಶಿಕ್ಷಣದಿಂದ ವಂಚಿತನಾಗಿದ್ದ . ಆತ ಬುಕ್ ಬೈಂಡಿಂಗ್ ಮಾಡುವ ಕೆಲಸ ಮಾಡುತಿದ್ದ , ಅದೇ ವರವಾಯಿತು . ಕೈಗೆ ಸಿಕ್ಕ ಎಲ್ಲಾ ಪುಸ್ತಕಗಳನ್ನೂ ಆತ ಓದುತ್ತಿದ್ದ . ವಿಜ್ಞಾನದ ಭಾಷಣಗಳನ್ನು ಕೇಳುತ್ತಿದ್ದ . ಒಮ್ಮೆ ಸರ್ ಹಂಫ್ರಿ ಡೇವಿ ಅವರ ಉಪನ್ಯಾಸ ಕೇಳಲು ಹೋಗಿದ್ದ . ಹತ್ತೊಂಬತ್ತನೆಯ ಶತಮಾನದ ವಿಜ್ಞಾನಿಗಳು ಸೆಲೆಬ್ರಿಟಿಯ ತರ ಇರುತ್ತಿದರು , ಅವರ ಉಪನ್ಯಾಸದ ಟಿಕೆಟುಗಳು ಬಿಸಿ ಬಿಸಿ ಬೋಂಡ ಮಾರಾಟವಾದಂತೆ ಬಿಕರಿಯಾಗುತಿತ್ತು . ಡೇವಿ ಅವ್ಯಾಹತವಾಗಿ ನೈಟ್ರಸ್ ಆಕ್ಸೈಡ್ ಸೇವಿಸುತ್ತಿದ್ದ , ಮದ್ಯ ಕೊಡುವ ಅದೇ ಕಿಕ್ ನೈಟ್ರಸ್ ಆಕ್ಸೈಡ್ ಕೊಡಬಲ್ಲದು , ಹ್ಯಾಂಗ್ ಓವರ್ ಇಲ್ಲದೆ ! . ಡೇವಿ ಮಾಡಿದ ಅತೀ ದೊಡ್ಡ ಅನ್ವೇಷಣೆ  ' ಫ್ಯಾರಡೆ ' .
ಫ್ಯಾರಡೆ ಸ್ವತಃ ತನ್ನ ನೋಟ್ಸ್ ಸಿದ್ಧ ಪಡಿಸಿ ತಾನೇ ಬೈಂಡಿಂಗ್ ಮಾಡಿಕೊಳ್ಳುತ್ತಿದ್ದ . ಅದೇ ನೋಟ್ಸ್ ಆತನಿಗೆ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಕೊಡಿಸಿತ್ತು . ಫ್ಯಾರಡೆ ಅತ್ಯಂತ ಶ್ರಧ್ಧೆಯಿಂದ ಎಲ್ಲವನ್ನೂ ಕಲಿಯುತ್ತಿದ್ದ . ಗುರುವನ್ನೂ ಮೀರಿಸುವ ಶಿಷ್ಯನಾಗಿ ಆತ ಬೆಳೆಯಲಿದ್ದ .
ಬ್ಯಾಟರಿ ಆಗಷ್ಟೇ ಅನ್ವೇಷಣೆಗೊಂಡಿತ್ತು . ಎಲೆಕ್ಟ್ರಿಸಿಟಿ ಕುತೂಹಲದ ಕೇಂದ್ರಬಿಂದುವಾಗಿತ್ತು . ಆದರೆ ಯಾರೊಬ್ಬರಿಗೂ ಎಲೆಕ್ಟ್ರಿಸಿಟಿ ಒಳಗಿನ ನಿಗೂಢ ಶಕ್ತಿ ಯಾವುದೆಂದು ತಿಳಿದಿರಲಿಲ್ಲ . ಎಲೆಕ್ಟ್ರಿಸಿಟಿ ಎಂದರೆ ದ್ರವ ಹರಿದಂತೆ ಎಂದು ನಂಬಲಾಗಿತ್ತು . ಡ್ಯಾನಿಷ್ ಅನ್ವೇಷಕನೊಬ್ಬ ಕರೆಂಟ್ ಹರಿಯುವ ವೈರ್ ಪಕ್ಕದಲ್ಲಿ ಇಟ್ಟ ಕಂಪಾಸು ಅದುರುವುದನ್ನು ಕಂಡುಹಿಡಿದ . ಮೊದಲ ಬಾರಿಗೆ ಎಲೆಕ್ಟ್ರಿಸಿಟಿ , ಮ್ಯಾಗ್ನೆಟ್  ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಾಯಿತು . ಎರಡು ಸಂಪೂರ್ಣ ಬೇರೆ ಎಂದು ತಿಳಿದಿದ್ದ ಎಂಟಿಟಿಗಳು ಒಂದರೊಳಗೊಂದು ಸಮ್ಮಿಳಿತ ಎಂದು ತಿಳಿಯುವ ಮೊದಲ ಹೆಜ್ಜೆ ಅದಾಗಿತ್ತು .
ಯಾವ ದಿಕ್ಕಿನಲ್ಲಿ ವಿದ್ಯುತ್ ಹರಿಯುತ್ತಿದೆಯೋ ಅದರ ವಿರುಧ್ಧ ದಿಕ್ಕಿನಲ್ಲಿ ಕಂಪಾಸು ತಿರುಗುತಿತ್ತು . ಬ್ಯಾಟರಿಯ ಟರ್ಮಿನಲ್ ಉಲ್ಟಾ ಮಾಡಲಾಯಿತು ಅಂದರೆ ಮೊದಲು ಹರಿಯುತ್ತಿದ್ದ ವಿದ್ಯುತ್ತಿನ ವಿರುಧ್ದ ದಿಕ್ಕಿನಲ್ಲಿ ವಿದ್ಯುತ್ ಹರಿಯುತಿತ್ತು . ಆಗ ಕಂಪಾಸು ಮೊದಲು ತಿರುಗಿದ್ದ ವಿರುಧ್ದ ದಿಕ್ಕಿಗೆ ತಿರುಗಿತು . ಫ್ಯಾರಡೆ ಹೊಸ ಕಲ್ಪನೆ ಮುಂದಿಟ್ಟ , ಕರೆಂಟ್ ಹರಿಯುವಾಗ ಅದು ತನ್ನ ಸುತ್ತ ಮ್ಯಾಗ್ನೆಟಿಕ್ ಫೀಲ್ಡ್ ಹೊರ ಸೂಸುತ್ತದೆ ಎಂದು . ಸಹ ವಿಜ್ಞಾನಿಗಳು ನಕ್ಕು ಬಿಟ್ಟಿದ್ದರು .
ಫ್ಯಾರಡೆಗೆ ಮದುವೆ ನಿಶ್ಚಯವಾಗಿತ್ತು , ಆತನಿಗೆ ಕಂಪಾಸಿನ ಸಮಸ್ಯೆ ಒಬ್ಸೆಶನ್ ಆಗಿತ್ತು . ಮದುವೆಯ ಉಂಗುರದಿಂದ ಹೊಸ ಐಡಿಯಾ ಹೊಳೆದಿತ್ತು . ನಿಮ್ಮ ಕೈ ಬೆರಳು ವೈರ್ ಎಂದುಕೊಂಡರೆ , ಅದರೊಳಗೆ ಕರೆಂಟ್ ಹಾಯಿಸಿದಾಗ ಉಂಗುರದಂತೆ , ಅಂದರೆ ಬೆರಳ ಸುತ್ತ ಮ್ಯಾಗ್ನೆಟಿಕ್ ಫೀಲ್ಡ್ ಹುಟ್ಟಿಕೊಳ್ಳುತ್ತದೆ . ಆ ಕಣ್ಣಿಗೆ ಕಾಣದ ಶಕ್ತಿ ಅಥವಾ ಈಗ ನಾವು ಕರೆಯುವ ಎಲೆಕ್ಟ್ರಿಕ್ ಫೀಲ್ಡ್ ಲೈನ್ಸ್ ವೃತ್ತಾಕಾರವಾಗಿರುತ್ತದೆ ಎಂದು ಇದರಿಂದ ತಿಳಿಯಿತು . ಅಂದು ಫ್ಯಾರಡೆ ಅಕ್ಷರಶಃ ಕುಣಿದಾಡಿದ್ದ . ನಂತರ ವೈರ್ ಒಂದನ್ನು ಸ್ಟಾಟಿಕ್ ಮ್ಯಾಗ್ನೆಟ್ ಮುಂದೆ ಇಟ್ಟ ಅದು ತಿರುಗತೊಡಗಿತು . ಶತಮಾನದ ಪ್ರಯೋಗ ಅದಾಗಿತ್ತು , ಎಲೆಕ್ಟ್ರಿಕ್ ಮೋಟಾರ್ ಕಂಡು ಹಿಡಿಯುವಲ್ಲಿ ಮೊದಲ ಹೆಜ್ಜೆ ! .
ಮೊದಲ ಬಾರಿಗೆ ಶಕ್ತಿ ಅಥವಾ ಎನರ್ಜಿಯ ಕಲ್ಪನೆ ಮೂಡಿತ್ತು . ಬ್ಯಾಟರಿ ಕೆಮಿಕಲ್ ಎನರ್ಜಿಯನ್ನು , ಎಲೆಕ್ಟ್ರಿಕ್ ಎನರ್ಜಿಯಾಗಿ ಪರಿವರ್ತಿಸುತ್ತದೆ , ಅದರಿಂದ ಬಂದ ಎಲೆಕ್ಟ್ರಿಸಿಟಿಯನ್ನು ಮ್ಯಾಗ್ನೆಟ್ ನೊಂದಿಗೆ  ಸೇರಿಸಿ ಮೋಶನ್ ಅಥವಾ ಚಲನೆಯನ್ನು ಉತ್ಪಾದಿಸಬಹುದು ಎಂಬುದು ಇದರಿಂದ ತಿಳಿಯಿತು . ಇದೆಲ್ಲದರ ಹಿಂದೆ ಇದ್ದದ್ದು ಒಂದೇ ಎನರ್ಜಿ ! .
ಡೇವಿ ಫ್ಯಾರಡೆ ಮೇಲೆ ಸುಳ್ಳು ಆರೋಪ ಹೊರಿಸಿದ . ಫ್ಯಾರಡೆ ಯಾರೋ ಬ್ರಿಟಿಷ್ ವಿಜ್ಞಾನಿಯ ಥಿಯರಿ ಕದ್ದಿದ್ದಾನೆ ಎಂದು ಸುದ್ದಿ ಹಬ್ಬಿಸಿದ . ಪಬ್ಲಿಶ್ ಮಾಡಿಸಿದ ಪೇಪರ್ ವಾಪಾಸು ತೆಗೆದುಕೊಳ್ಳುವಂತೆ ಆಜ್ಞಾಪಿಸಿದ . ಆದರೆ ಫ್ಯಾರಡೆ ಒಪ್ಪಲಿಲ್ಲ . ಡೇವಿ ತಾನೇ ಕಲಿತ ನೈಟ್ರಸ್ ಆಕ್ಸೈಡ್ ವಿದ್ಯೆಯ ದೆಸೆಯಿಂದ ಐದು ವರ್ಷದ ನಂತರ ಸತ್ತು ಹೋದ . ಫ್ಯಾರಡೆ ರಾಯಲ್ ಸೊಸೈಟಿಗೆ ಆಯ್ಕೆಯಾದ . ಅದೇ ಐನ್ಸ್ಟೀನ್ ಹೇಳುವ ಎನರ್ಜಿ , ಫ್ಯಾಕ್ಟರ್ E .

7/6/16

ಡಿಟೆಕ್ಟಿವ್ ಜಿಕೆ : ಕಲೆ ( ಮುಕ್ತಾಯ )

ನಿಧಾನವಾಗಿ ಕಣ್ಣು ತೆರೆದೆ , ಎದ್ದು ಕೂರಲು ಆಗದಷ್ಟು ಬೆನ್ನು ನೋಯುತ್ತಿತ್ತು . ಕೆಲ ಹೊತ್ತಿನಲ್ಲಿ ವಿಕ್ರಮ್ ಹಾಗೂ ಡಾಕ್ಟರ್ ನನ್ನೆದುರು ಬಂದು ಕುಳಿತರು . ಆ ನೋವಿನಲ್ಲೂ ನನಗೆ ಆತ ಯಾರು ? ಯಾಕೆ ಬಂದ ಎಂಬ ಪ್ರಶ್ನೆಗಳೇ ಕಾಡುತಿತ್ತು . ಆತನೂ ಅದೇ ಆಸ್ಪತ್ರೆಯಲ್ಲಿ ಇದ್ದಾನಂತೆ , ಇನ್ನೂ ಪ್ರಜ್ಞೆ ಬಂದಿರಲಿಲ್ಲ . ಎದ್ದು ಹೋಗಿ ಅವನನ್ನು ಎಬ್ಬಿಸಿಬಿಡುವ ಎನಿಸುತಿತ್ತು . ಔಪಚಾರಿಕ ಮಾತು-ಕತೆ ಮುಗಿಸಿ ವಿಕ್ರಮ್ ಹೊರಟು ಹೋದರು , ಮತ್ತೆ ಮೌನ ಆವರಿಸಿತು . ನನಗೆ ಮತ್ತೆ ನಿದ್ದೆ ಹತ್ತಿತು . 
ಹೀಗೆ ಎರಡು ದಿನ ಕಳೆದೆ , ಈಗ ನನಗೆ ನೋವು ಕಡಿಮೆಯಾಗಿತ್ತು . ಎದ್ದು ಓಡಾಡುತ್ತಿದ್ದೆ , ಹತ್ತೋ ಇಪ್ಪತ್ತೋ ಪುಶ್ ಅಪ್ಸ್ ಮಾಡಿದೆ . ಮೊದಲಿನಂತೆ ಆಗದಿದ್ದರೂ ಸ್ವಲ್ಪ ಚೈತನ್ಯ ಬಂತು . ಆತನಿಗೂ  ಪ್ರಜ್ಞೆ ಬಂತು ಎಂದು ವಿಕ್ರಮ್ ತಿಳಿಸಿದರು . ಇಬ್ಬರೂ ನನ್ನ ವಾರ್ಡಿನಿಂದ ಹೊರ ಬಿದ್ದೆವು . 
ಆತ ಎದ್ದು ಕುಳಿತಿದ್ದ , ವಿಕ್ರಮ್ ಇನ್ಟರಾಗೆಶನ್ ಶುರು ಮಾಡಿದರು . ನೇರ ಪ್ರಶ್ನೆಗಳು 
" ಯಾರು ನೀನು ? ಯಾಕೆ ಹೀಗ್ ಮಾಡ್ದೆ ? "
ಆತ ಕಿಟಕಿಯ ಆಚೆ ನೋಡುತ್ತಿದ್ದ , ಯಾವುದೇ ಪ್ರತಿಕ್ರಿಯೆ ನೀಡದೆ . ನಾನು ವಿಕ್ರಮ್ ಅವರ ಮುಖ ನೋಡಿದೆ . ಅವರಿಗೆ ಅರ್ಥವಾಯಿತು . ಅವರು ಆಚೆ ಎದ್ದು ಹೋದರು . ನಾನು ನನ್ನ ಪಿಸ್ಟಲ್ ಲೋಡ್ ಮಾಡಿಕೊಂಡೆ . ಸೀದಾ ಆತನ ಹಣೆಗೆ ಗುರಿಯಿಟ್ಟೆ . ಆತನಿಗೆ ಆಗಿದ್ದ ಗಾಯದ ಮೇಲೆ ಗುದ್ದಿದ್ದೆ , ಆತ ನೋವಿನಿಂದ ಚೀರಿದ . 
" ನನ್ ಮೇಲೆ ಯಾವ ಕೇಸು ನಡೆಯೋಲ್ಲ , 0.6mm ಬುಲೆಟ್ ಹತ್ತಿರದಿಂದ ಹೊಡೆದರೆ ನಿನ್ನ ಮೆದುಳು ಸೀಳಿ ಆಚೆ ಇಂದ ಹೊರಗ್ ಹೋಗುತ್ತೆ . ಪೋಸ್ಟ್ ಮಾಟಂ ಸಹ ಮಾಡಿಸ್ದೆ ದಫ಼ನ್ ಮಾಡ್ತೀನಿ " ಎಂದು ಘರ್ಜಿಸಿದೆ . ಆಗ ಬಾಯಿ ಬಿಟ್ಟ . 
ಆತನ ಹೆಸರು ವಿವೇಕ್ , ಆತನೂ ಸಹ ಬಳ್ಳಾರಿಯಲ್ಲಿ ಮೆಡಿಕಲ್ ಓದುತ್ತಿದವ . ಸ್ನೇಹಾಳ ಗೆಳೆಯ . ಬಾಲ್ಯ ಸ್ನೇಹಿತ . ಅದಾಗಲೇ ಸ್ನೇಹ ಪ್ರೀತಿಗೆ ತಿರುಗಿತ್ತು . ಆದರೆ ಮೆಡಿಕಲ್ ಸೇರಿದ ಮೇಲೆ ಸ್ನೇಹಾಳಿಗೆ ಚಿರಾಗ್ ಸಂಬಂಧ ಹೆಚ್ಚಾಗಿತ್ತು .ಬಡತನದಲ್ಲೇ ಬೆಳೆದ ಅವಳಿಗೆ ಸಹಜವಾಗೇ ಶ್ರೀಮಂತಿಕೆಯ ಮೇಲೆ ಮೋಹ ಶುರುವಾಗಿತ್ತು . ಚಿರಾಗ್ ಸಹ ಅವಳನ್ನು ಬಳಸಿಕೊಳ್ಳುತ್ತಿದ್ದ , ನಿಜವಾಗಿಯೂ ಪ್ರೀತಿಸುತ್ತಿದ್ದನಾ ಗೊತ್ತಿಲ್ಲ ? . ಆದರೆ ಆತನ ಡೈಮಂಡ್ ಸ್ಮಗ್ಲಿಂಗ್ ಗೆ ಒಂದು ಹುಡುಗಿ ಬೇಕಿತ್ತು . ಚಿರಾಗ್ ಆಕೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಳ್ಳುತ್ತಿದ್ದನಂತೆ . ಇದರಿಂದ ಆತನ ಮೇಲಿನ ಅನುಮಾನ ಕಡಿಮೆ ಆಗುತಿತ್ತು . ಫ್ಯಾಮಿಲಿ ಎಂದಾಗ ಪೊಲೀಸರು ಹೆಚ್ಚು ಅನುಮಾನಿಸುವುದಿಲ್ಲ . 
ಆದರೆ ವಿವೇಕ್ ವ್ಯಗ್ರನಾಗುತ್ತಾ ಹೋದ . ಹಿ ಹ್ಯಾಸ್ ದಿ ಮೊಟಿವೆಶನ್ . ಆತ ಬೆಂಗಳೂರಿಗೆ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ . ಅವಕಾಶವನ್ನು ಬಳಸಿಕೊಂಡಿದ್ದ , ಕಿಚನ್ ನೈಫ್ ಬಳಸಿ ಕೊಲೆ ಮಾಡಿದ್ದ . ನಂತರ  ನನ್ನ ಹೇಳಿಕೆಯಿಂದ ತಲೆ ಕೆಡಿಸಿಕೊಂಡಿದ್ದ . ನನ್ನನ್ನೇ ಮುಗಿಸುವುದು ಒಂದೇ ಅವನಿಗೆ ಉಳಿದದ್ದು . 
ವಿವೇಕ್ ಗೆ ವಜ್ರದ ವಿಷಯ ಗೊತ್ತೇ ಇರಲಿಲ್ಲ . ವಜ್ರದ ಬಗ್ಗೆ ಸವಿವರವಾಗಿ ರಾ ಸಂಸ್ಥೆಗೆ ಬರೆದೆ . ಕುರೇಷಿಯೊಂದಿಗೆ ನಾನು ಒಬ್ಬನೇ ಏನೂ ಮಾಡಲು ಸಾಧ್ಯವಿರಲಿಲ್ಲ . ಆತ ಭಾರತಕ್ಕೆ ಕಾಲಿಟ್ಟಿದ್ದು ಕಳವಳಕಾರಿ ಬೆಳವಣಿಗೆ . 
ಆಸ್ಪತ್ರೆಯಿಂದ ಹೊರಬಿದ್ದೆ ಪತ್ರಕರ್ತರ ಕ್ಯಾಮೆರಾ ಸದ್ದು ಮಾಡಿತು . ನಾನು ಗುಂಡು ಬಿದ್ದ ಜಾಗದಲ್ಲಿ ಆಗಿದ್ದ ಕಲೆಯನ್ನು ಮುಟ್ಟಿಕೊಂಡೆ . 

4/6/16

ಖಾರಾಬಾತು -4 (ಎಲ್ಲಿ ನನ್ನ ಮೇರಿ ?)

ಈಗೀನ ಶಿಕ್ಷಣ ಪದ್ಧತಿಯ ಕಟ್ಟಾ ವಿರೋಧಿ ನಾನು . ಪರೀಕ್ಷೆ ಸಮೀಪಿಸಿದಾಗ ನಾಲಕ್ಕು ಪಾಠ ಉರು ಹೊಡೆದು , ಪರೀಕ್ಷೆಯಲ್ಲಿ ವಾಂತಿ ಮಾಡಿ ಮೊದಲಿಗರಾಗುವ ನನ್ನ ಕೆಲವು ಸ್ನೇಹಿತರ ಪರಮ ವೈರಿ ನಾನು . ನನ್ನ ಎಷ್ಟೋ ಸ್ನೇಹಿತರು ಇನ್ನೂ ವಿವೇಕಾನಂದರ ಜೀವನ ಚರಿತ್ರೆಯನ್ನೇ ಓದಿಲ್ಲವಂತೆ . ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ನಿಕೋಲ ಟೆಸ್ಲಾ ಕೂಡ ವಿವೇಕಾನಂದರ ಪುಸ್ತಕಗಳನ್ನು ಓದುತ್ತಿದ್ದರು . ಕಲಿತ ಶಿಕ್ಷಣಕ್ಕೆ ಒಂದು ಅರ್ಥ ಬರುವುದು ನಮ್ಮ ಜೀವನ ದೃಷ್ಟಿ ಬದಲಾದಾಗ . ಶಿಕ್ಷಣದಿಂದ ಬಂದ ಜ್ಞಾನ ನಮ್ಮ ಯೋಚನಾ ಲಹರಿಗೆ ಆಹಾರವಿದ್ದಂತೆ . ವಿಧ್ಯಾರ್ಥಿಗಳನ್ನು ಬಿಡಿ , ಪಾಠ ಮಾಡುವವರಿಗೇ ಅದರ ಹಿಂದಿನ ಕಥೆ , ಯಾಕೆ ಈ ಥಿಯರಿ ಬಂತು ? ಎನ್ನುವಂತಹ ವಿಷಯಗಳು ಗೊತ್ತಿರುವುದಿಲ್ಲ . ಪ್ರತಿ ದಿನ ನಾನು ನನ್ನ ಕ್ಲಾಸಿನ ಬೋರ್ಡ್ ಮೇಲೆ 'ಕೋಟ್' ಬರೆಯುತ್ತೇನೆ . ಪರೀಕ್ಷೆಯ ಹಿಂದಿನ ದಿನ ಎಡಿಸನ್ ಹೇಳಿದ " Tomorrow is my exam but I won't study . Because a single sheet of paper can't determine my intelligence " ಎಂದು ಬರೆದಿದ್ದೆ . ಉಪನ್ಯಾಸಕರು ಅದನ್ನು ನೋಡಿ ಕೆಂಡಾಮಂಡಲವಾದರು . " ಇರೋದನ್ನ ಓದ್ಕೊಳ್ರಯ್ಯ ಸಾಕು " ಎಂದು ಬೈದರು . ಇರೋದನ್ನ ಅಷ್ಟೇ ಓದಿಕೊಂಡಿದ್ದಕ್ಕೆ ನೀವು ಇಲ್ಲೇ ಇರೋದು ಎಂದು ನಾನು ಮನಸ್ಸಿನಲ್ಲೇ ಬೈದುಕೊಂಡೆ . ನಾನು ಎಂಜಿನಿಯರಿಂಗ್ ಮಾಡುತ್ತಿದ್ದೇನೆ ಅಷ್ಟನ್ನೇ ಓದಿಕೊಳ್ಳುತ್ತೇನೆ ಎಂದರೆ ನಮಗಿಂತ ಮೂರ್ಖರು ಇನ್ನೊಬ್ಬರಿಲ್ಲ . ಯೋಚನೆ ಪ್ರಭುದ್ದತೆ ಪಡೆದುಕೊಳ್ಳಲು ಬರಿಯ ಥಿಯರಿ ಸಾಲುವುದಿಲ್ಲ . ಸರ್ ಸಿ.ವಿ ರಾಮನ್ ಅವರಿಗೆ ತತ್ವಶಾಸ್ತ್ರದ ಆಳ ಜ್ಞಾನವಿತ್ತು . ಐನ್ಸ್ಟೀನ್ ಸುಮಧುರವಾಗಿ ವಯೊಲಿನ್ ನುಡಿಸುತ್ತಿದ್ದರು . ಅವರು ತಮ್ಮ ಕಲ್ಪನೆಗೆ ವಿಜ್ಞಾನದ ರೂಪ ಕೊಟ್ಟವರು . ನಮ್ಮ ವಿಜ್ಞಾನ ಎಷ್ಟು ಮುಂದುವರೆದಿದೆಯೆಂದರೆ , 'ಗೂಗಲ್ ' ನಿಮ್ಮ ಮನೆಯ ಮುಂದಿನ ರಸ್ತೆಯ ಟ್ರಾಫಿಕ್ ಬಗ್ಗೆ ಕ್ಷಣಾರ್ಧದಲ್ಲಿ ತಿಳಿಸಬಲ್ಲದು . ಆದರೂ ಇಂದಿಗೂ ನಮ್ಮ ಬಹುತೇಕ ಶಾಲೆಗಳಲ್ಲಿ  ಚಾಕ್ ಪೀಸ್ ಹಿಡಿದು ಬರುತ್ತಾರೆ . " Imagine in 3-dimension " ಎಂದು ಬಡಿದುಕೊಂಡರೆ ನಮಗೆ ತಿಳಿಯುತ್ತದೆಯೇ ? . ವೀಡಿಯೊ ಅಥವಾ ಮಾಡೆಲ್ ತಂದು ತೋರಿಸಲು ಸಾಧ್ಯವಿಲ್ಲವೇ ? . ಪ್ರತಿಯೊಂದು ಆವಿಷ್ಕಾರದ ಹಿಂದೆಯೂ ಹಲವಾರು ಕಥೆ ಇದೆ , ವ್ಯಥೆ ಇದೆ , ಜೀವನ ಸಂಗ್ರಾಮವೇ ಇದೆ . ಮೇರಿ ಕ್ಯೂರಿ ರೇಡಿಯಂ ಕಂಡು ಹಿಡಿದಳು ಎಂದಷ್ಟೇ ನಾವು ಓದಿಕೊಂಡಿದ್ದೇವೆ . ಆದರೆ ಆಕೆಯ ಜೀವನ ಇವೆಲ್ಲವನ್ನೂ ಮೀರಿದ್ದು , ತರ್ಕಕ್ಕೆ ನಿಲುಕದ್ದು .
ಪರಾಡಳಿತದ ಪದತಳಕ್ಕೆ ತುಳಿಯಲ್ಪಟ್ಟ ಪೋಲೆಂಡ್ ನಲ್ಲಿ ಮೇರಿ ಹುಟ್ಟಿದಳು . ಆಕೆಯ ತಂದೆ ವಿಜ್ಞಾನದ ಶಿಕ್ಷಕರಾಗಿದ್ದರು , ಆದರೆ ಪೋಲಿಷ್ ಜನರಿಂದ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಯಿತು . ಆಗ ಶಾಲೆಯಲ್ಲಿದ್ದ ಉಪಕರಣಗಳನ್ನು ಮನೆಗೆ ತಂದು ಆತ ಮಕ್ಕಳಿಗೆ ಪಾಠ ಮಾಡುತ್ತಿದ್ದ . ಸಹಜವಾಗೇ ಮೇರಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿತು . ಒಮ್ಮೆ ಆಕೆ ಓದುತ್ತಾ ಕುಳಿತಿದ್ದಾಗ ಆಕೆಯ ಸಹಪಾಠಿಗಳು ಆಕೆಯ ಸುತ್ತ ಕುರ್ಚಿಗಳನ್ನು ಪೇರಿಸಿ ಇಟ್ಟಿದ್ದರಂತೆ . ಆಕೆ ಓದುತ್ತಲೇ ಇದ್ದಳಂತೆ ತಮಾಷೆ ನೋಡಲು ನಿಂತ ಸಹಪಾಠಿಗಳಿಗೆ ಬೇಸರ ಮೂಡಿ ಅವರು ಹೊರಟು ಹೋದರು . ಬಹಳ ಹೊತ್ತಿನ ನಂತರ ಈಕೆ ಎದ್ದಾಗ ಎಲ್ಲಾ ಕುರ್ಚಿಗಳು ಇವಳ ಮೇಲೆ ಬಿದ್ದವಂತೆ . ಈಕೆ ತಲೆ ಕೆಡಿಸಿಕೊಳ್ಳದೆ ಮತ್ತೆ ಓದುತ್ತಾ ಕುಳಿತಳು . ಸಾಯುವ ಕೊನೆ ಕ್ಷಣದವರೆಗೂ ಮೇರಿಗೆ ಈ ರೀತಿಯ ಶ್ರಧ್ಧೆ ಇತ್ತು .
ಪ್ರಾಥಮಿಕ ಶಿಕ್ಷಣ ಸಿಕ್ಕಿದಷ್ಟು ಸುಲಭವಾಗಿ ಮುಂದೆ ಆಕೆಗೆ ಶಿಕ್ಷಣ ಸಿಗಲಿಲ್ಲ . ಮನೆಯಲ್ಲಿ ಬಡತನ , ಪೋಲಿಷ್ ಜೊತೆಗೆ ಒಂದು ಹೆಣ್ಣು . ಶಿಕ್ಷಣ ಮರೀಚಿಕೆಯೇ ಆಗಿತ್ತು . ಮೇರಿಯ ಸಹೋದರಿ ಮೆಡಿಕಲ್ ಓದಬೇಕೆಂಬ ಆಸೆ ಇಟ್ಟುಕೊಂಡಿದ್ದಳು . ಮೇರಿ ಆಕೆಗೆ ಆರ್ಥಿಕವಾಗಿ ನೆರವಾದಳು . ವರ್ಷಗಳ ಕಾಲ ಬೇರೆಯವರ ಮನೆಯಲ್ಲಿ ಮೇಡ್ ಆಗಿ ಕೆಲಸ ಮಾಡಿದಳು . ಮಕ್ಕಳಿಗೆ ಟ್ಯೂಶನ್ ಮಾಡಿ ಹಣ ಕೂಡಿಟ್ಟು ಮೆಡಿಕಲ್ ಓದಲು ನೆರವಾದಳು . ಇಷ್ಟರ ಮಧ್ಯೆ ಪ್ರೇಮ ವೈಫಲ್ಯ ಕೂಡ ಆಕೆಯನ್ನು ಕಾಡುತಿತ್ತು . ಮೇರಿ ಕೆಲಸ ಮಾಡುವ ಮನೆಯ ಹುಡುಗ ಹಾಗೂ ಈಕೆ ಪ್ರೀತಿಸಿದ್ದರು ಆದರೆ ಕುಟುಂಬದ ಸಮಸ್ಯೆಯಿಂದ ಸಂಬಂಧ ಮುರಿದು ಬಿದ್ದಿತ್ತು .
ಮೇರಿಯ ಸಹೋದರಿ ಮೆಡಿಕಲ್ ಮುಗಿಸಿ ಮದುವೆಯಾಗಿ ಪ್ಯಾರಿಸ್ ಗೆ ಹೋದಳು . ಮೇರಿಯನ್ನು ಪ್ಯಾರಿಸ್ ಯೂನಿವರ್ಸಿಟಿ ಸೇರಲು ಕರೆದಳು , ಆದರೆ ಮೇರಿಯ ಕೈ ಖಾಲಿಯಾಗಿತ್ತು . ಆಕೆ ಮತ್ತೆ ಸೊನ್ನೆಯಿಂದ ಶುರುಮಾಡಿದಳು , ಮತ್ತೆ ಒಂದೂವರೆ ವರ್ಷ ದುಡಿದು ಹಣ ತೆಗೆದುಕೊಂಡು ಪ್ಯಾರಿಸ್ ಗೆ ಬಂದಳು . ಅಲ್ಲಿ ಆಕೆಯ ಹೋರಾಟದ ಬದುಕು ಶುರುವಾಯಿತು . ಊಟಕ್ಕೆ ದುಡ್ಡಿದ್ದರೆ ಪುಸ್ತಕಕ್ಕೆ ದುಡ್ಡಿಲ್ಲ , ಪುಸ್ತಕ ತೆಗೆದುಕೊಂಡರೆ ಊಟವಿಲ್ಲ . ದಿನಕ್ಕೆ ಕೇವಲ ಎರಡು ತುಂಡು ಬ್ರೆಡ್ಡು ತಿಂದು ಬದುಕಿತ್ತು ಆ ಜೀವ . ಯುರೋಪ್ ದೇಶಗಳಲ್ಲಿ ಚಳಿಗೆ ಮನೆಯ ಮಧ್ಯೆ ಬೆಂಕಿ ಉರಿಸುತ್ತಾರೆ , ಅದನ್ನೂ ಆಕೆಗೆ ಉರಿಸುವ ಆರ್ಥಿಕ ಶಕ್ತಿ ಇರಲಿಲ್ಲ . ರಾತ್ರಿಯೆಲ್ಲಾ ಚಳಿಯಲ್ಲಿ ನಡುಗುತ್ತಾ ಅಧ್ಯಯನ ಮಾಡುತ್ತಿದ್ದಳಂತೆ . ಒಬ್ಬ ಹೆಂಗಸು ತಮ್ಮ ಸಮಕ್ಕೆ ನಿಲ್ಲುವುದು ಕೆಲವರಿಗೆ ಹಿಡಿಸಲಿಲ್ಲ . ಇದೆಲ್ಲಾ ಗಲಾಟೆಯ ಮಧ್ಯವೇ ಆಕೆ ಓದಿದಳು , ಕೇವಲ ಓದಲಿಲ್ಲ ಮೊದಲಿಗಳಾದಳು . ಪಿಯರಿ ಆಕೆಯ ಜೀವನದಲ್ಲಿ ಕಾಲಿಟ್ಟ . ಅಲ್ಲಿಂದ ಮುಂದೆ ನಡೆದದ್ದು ಇತಿಹಾಸ .
ನಾನು ಯಾವಾಗಲೂ ಯೋಚಿಸಿರುತ್ತೇನೆ . Made for each other ಎನ್ನುವದಕ್ಕೆ ಅವರೇ ಉದಾಹರಣೆ . ಇಬ್ಬರೂ ಒಂದೇ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರು . ಹೆಂಡತಿಯ ಪಕ್ಕದಲ್ಲೇ ಗಂಡ . ಗಂಡ " ನಿಂಗೆ ಇದೆಲ್ಲ ಅರ್ಥ ಆಗೋಲ್ಲ " ಎಂದು ಸಿಡುಕುವುದಿಲ್ಲ . ಹೆಂಡತಿ " ನಿಮ್ದು ಯಾವಾಗ್ಲೂ ಇದಿದ್ದೆ " ಎಂದು ಗೊಣಗುವುದಿಲ್ಲ . ನಾನು ಕೆಲವೊಮ್ಮೆ ನಗೆಪಾಟಲಿಗೆ ತುತ್ತಾಗಿದ್ದೇನೆ , ಆದರೂ ಹೇಳುತ್ತೇನೆ ನನಗೆ ಮೇರಿಯಂತ ಸಂಗಾತಿ ಬೇಕು .  ಇಬ್ಬರೂ ಸೇರಿ ಹೊಸದೊಂದು ಮೂಲಧಾತುವನ್ನು ಕಂಡು ಹಿಡಿದರು . ಪಿಯರಿ ಕೇಳಿದ " ಏನೆಂದು ಹೆಸರಿಡೋಣ " ? .
" ಪೊಲೋನಿಯಂ " ಮೇರಿ ತಕ್ಷಣಕ್ಕೆ ಉತ್ತರ ನೀಡಿದಳು . ತನ್ನ ತಾಯ್ನಾಡು ಪೋಲೆಂಡ್ ಬಗ್ಗೆ ಆಕೆಗೆ ಅದಮ್ಯ ಭಕ್ತಿ , ಹೆಮ್ಮೆ ಇತ್ತು . ಪೋಲೆಂಡ್ ನೆನಪಿಗೆ ಪೊಲೋನಿಯಂ ಹೆಸರು ನೀಡಿದಳು . ನೋಬೆಲ್ ಬಹುಮಾನವನ್ನು ಗಂಡ ಹೆಂಡತಿ ಹಂಚಿಕೊಂಡರು .
ಮುಂದಿನ ಹಾದಿ ಇನ್ನೂ ಕಷ್ಟವಾಗಿತ್ತು . ಇಷ್ಟೆಲ್ಲಾ ಆದರೂ ಬಡತನ ಕಿತ್ತು ತಿನ್ನುತ್ತಿತ್ತು . ಮೇರಿಗೆ ರೇಡಿಯಂ ಎಂಬ ಮೂಲಧಾತು ಇರುವುದರ ಬಗ್ಗೆ ಸಂಶಯವಿತ್ತು . ಅದರ ಅನ್ವೇಷಣೆಗೆ ಆಕೆ ನಿಂತಳು . ಮುರುಕು ಕೊಟ್ಟಿಗೆಯಲ್ಲಿ ಟನ್ನುಗಟ್ಟಲೆ ಜಿಂಕ್ ಬ್ಲೆಂಡೆ ಎನ್ನುವ ವಸ್ತು ತಂದು ಬಾಣಲೆಯಲ್ಲಿ ಕಾಯಿಸಿ , ಸೋಸಿದಳು . ಆಕೆ ನೂರಕ್ಕೆ ಒಂದು ಕಣ ರೇಡಿಯಂ ಇರಬಹುದು ಎಂದು ಭಾವಿಸಿದ್ದಳು . ಆದರೆ ಹತ್ತು ಸಾವಿರಕ್ಕೆ ಒಂದು ಕಣ ರೇಡಿಯಂ ಅದರಲ್ಲಿತ್ತು , ಪಟ್ಟು ಬಿಡದೆ ತನ್ನ ಜೀವಮಾನವನ್ನೇ ಮುಡಿಪಿಟ್ಟು ಕಾಯಿಸಿ , ಸೋಸಲು ಮುದಿಪಿಟ್ಟಲು . ವಿಧಿ ತನ್ನ ಕ್ರೂರ ಕೈ ಚಾಚಿತ್ತು , ಪಿಯರಿ ಅಪಘಾತದಲ್ಲಿ ಮೃತನಾದ .
ಸಹಾಯ ಹಸ್ತವಿಲ್ಲದೆ , ಸ್ಪೂರ್ತಿ ಇಲ್ಲದೆ ಮೇರಿ ಹೈರಾಣಾಗಿ ಹೋದಳು . ಒಬ್ಬಳೇ ಕುಳಿತು ಬಿಕ್ಕಿದಳು , ಕಷ್ಟಪಟ್ಟು ಅನ್ವೇಷಣೆ ಮುಂದುವರಿಸಿದಳು . ಕೊನೆಗೂ ಹೊಳೆಯುವ ರೇಡಿಯಂ ಸಿಕ್ಕಿತು . ರೇಡಿಯೋ ಆಕ್ಟಿವಿಟಿ ಎಂಬ ಹೊಸ ವಿಭಾಗಕ್ಕೆ ನಾಂದಿ ಹಾಡಿದಳು . ಎರಡನೇ ಬಾರಿ ನೊಬೆಲ್ ಬಂದಿತ್ತು . ಆದರೆ ಹಂಚಿಕೊಳ್ಳಲು ಪಿಯರಿ ಇರಲಿಲ್ಲ .
ಯಾವ ಅನ್ವೇಷಣೆಗೂ ಮೇರಿ ಪೇಟೆಂಟ್ ಮಾಡಿಸಲಿಲ್ಲ . ಇಂದಿಗೂ ರೇಡಿಯೋ ಆಕ್ಟಿವಿಟಿ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗುತ್ತದೆ . ಆಕೆ ಸುಲಭವಾಗಿ ದುಡ್ಡು ಮಾಡಬಹುದಿತ್ತು . ಒಳಗೆ ಬರಲೇ ಎಂದು ಕೇಳಿದ ಬಿಲಿಯನ್ ಗಟ್ಟಲೆ ದುಡ್ಡನ್ನು ಒದ್ದು ಆಚೆ ಹಾಕಿದಳು .
ಮೊದಲ ವಿಶ್ವಯುಧ್ಧದಲ್ಲಿ  X-ray ವಾಹನವನ್ನು ತೆಗೆದುಕೊಂಡು ಸೈನಿಕರ ಆರೈಕೆಮಾಡಿದಳು . ಪ್ಯಾರಿಸ್ ನಲ್ಲಿ ರೇಡಿಯೋ ಆಕ್ಟಿವಿಟಿ ಬಳಸಿ ವೈದ್ಯಕೀಯ ಅನ್ವೇಷಣೆ ಮಾಡುವ ಕೇಂದ್ರವನ್ನು ಸ್ಥಾಪಿಸಿದಳು .  ಆಕೆಯ ವರ್ಕ್ ಶೀಟ್ ಗಳನ್ನು ಇಂದಿಗೂ ಪ್ಯಾರಿಸ್ ನ ಕ್ಯೂರಿ ಮ್ಯೂಸಿಯಂ ನಲ್ಲಿ ಕಾಣಬಹುದು . ಆ ಹಾಳೆಗಳೂ ಸಹ ವಿಕಿರಣ ಸೂಸುತ್ತವೆ . ವಿಕಿರಣದ ಮಧ್ಯೆಯೇ ಕೆಲಸ ಮಾಡಿದ ಮೇರಿಯ ದೇಹ ಕ್ಯಾನ್ಸರ್ ಗೆ ಒಳಗಾಗಿತ್ತು . ವಿಕಿರಣ ತನ್ನ ಕಬಂಧ ಬಾಹುಗಳಿಂದ ಮೇರಿಯನ್ನು ಅಪ್ಪಿಕೊಂಡಿತ್ತು . ಸಾವಿರದ ಒಂಬೈನೂರಾ ಮೂವತ್ತಾಲ್ಕರಲ್ಲಿ ಮೇರಿ ಅಸುನೀಗಿದಳು .
ಈಗಲೂ ನಾನು ಯೋಚಿಸುತ್ತೇನೆ , ಆಕೆಗೆ ತನ್ನ ಗಂಡನ ಜೊತೆ ನೊಬೆಲ್ ತೆಗೆದುಕೊಳ್ಳುವಾಗ ಎಷ್ಟು ಸಂತೋಷವಾಗಿದ್ದಿರಬಹುದು ? . ಹೊಳೆಯುವ ರೇಡಿಯಂ ಸಿಕ್ಕಿದಾಗ ? ಅದು ತನ್ನ ಹತ್ತಿರವಿದ್ದ ಎಲ್ಲ ವಸ್ತುಗಳನ್ನೂ ರೇಡಿಯೋ ಆಕ್ಟಿವ್ ಮಾಡುತಿತ್ತು . ಪಿಯರಿ ಸತ್ತಾಗ ಎಷ್ಟು ಅತ್ತಿದ್ದಳೋ ? . ಒಂದು ದಿನವೂ ನೆಟ್ಟಗೆ ಊಟ ಮಾಡದೆ ರಕ್ತ ಹೀನ ಆಕೆಯ ಕಣ್ಣುಗಳನ್ನು ನೋಡಿದರೆ ನನಗೆ ಅವಳ ಎಲ್ಲಾ ಕಥೆ ಕಣ್ಣೆದುರು ಬರುತ್ತದೆ . ಆಕೆಯ ಬಗ್ಗೆ ತಿಳಿದುಕೊಳ್ಳಲು ಇನ್ನೂ ಬಹಳಷ್ಟಿದೆ , ಬರೆಯಲು ಕುಳಿತರೆ ನನ್ನ ಜೀವನವೇ ಮುಗಿದೀತು . ಸಾಧ್ಯವಾದರೆ ಕೆಳಗಿನ ಪುಸ್ತಕಗಳನ್ನು ಓದಿ .
ಬೆಳಕಿನೊಂದು ಕಿರಣ ಮೇರಿ ಕ್ಯೂರಿ  - ನೇಮಿಚಂದ್ರ
Radiation and modern life-Alan Walter
Marie Curie-Philip steel
Obsessive genius-Barbara Goldsmith
Something out of nothing-Carla Killough