7/8/26

ದೇವಭೂಮಿ

ಕನಸಿನ ಹಿಮಾಲಯ 

ಸುಮಾರು ಎರಡು ಮಿಲಿಯ ವರ್ಷಗಳ ಹಿಂದೆ ಸಹ ಮನುಷ್ಯ ಕಾಂಗ್ರಾ, ಸಿರ್ಸಾ, ಮಾರ್ಕಂಡ ಕಣಿವೆಗಳಲ್ಲಿ ಓಡಾಡಿದ ಕುರುಹುಗಳಿವೆ. ನಂತರ ಇದೇ ಪರ್ವತಗಳ ತಪ್ಪಲಿನಲ್ಲಿ ಸಿಂಧು ನಾಗರೀಕತೆಯ ಜನರೂ ಸಹ ವಾಸ ಮಾಡುತ್ತಿದ್ದರು. ಹಿಮಾಲಯದ ಸುಂದರ ಹಿಮಚ್ಛಾದಿತ ಪರ್ವತಗಳು ಆಯಾಯ ಕಾಲದ ಎಲ್ಲಾ ರಾಜರುಗಳನ್ನು ಆಕರ್ಷಿಸಿದೆ. ಮಂಗೋಲರು, ಗೋರ್ಖಾಗಳು, ಮೊಗಲರು, ರಜಪೂತರು, ಸಿಖ್ಖರು ಎಲ್ಲರೂ ತಮ್ಮ ಸೇನೆಯನ್ನು ಬಳಸಿ ಹಿಮಾಚಲದ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಬ್ರಿಟಿಷರೂ ಸಹ ಹೊರತಲ್ಲ. ಆದರೆ ಹಿಮಾಚಲದ ಹೆಚ್ಚಿನ ಬುಡಕಟ್ಟು ಜನರಿಗೆ ಇದರ ಬಿಸಿ ತಟ್ಟಲಿಲ್ಲ . ಪರ್ವತಗಳ ಮೇಲಿನ ಕುಳಿರ್ಗಾಳಿಯಲ್ಲಿ ತಣ್ಣಗೆ ಇದ್ದು ಬಿಟ್ಟರು. ಅದಕ್ಕೇ ಇರಬೇಕು ಭಾರತದ ಇತರೆ ಪ್ರದೇಶದ ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಸಹ ಈ ಜನಗಳು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಇರುವುದರಲ್ಲೇ ಸಮತಟ್ಟು ಜಾಗವಾದ ಮಂಡಿ, ಬಿಲಾಸ್ಪುರ್ ಪಟ್ಟಣದ ಜನರು ಒಂದಿಷ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಇದರ ಫಲವಾಗಿ ' ಹಿಮಾಚಲ ಪ್ರದೇಶ ' ಒಂದು ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿತು. ನಂತರ ಪಂಜಾಬಿಗೆ ಸೇರಿದ್ದ ಕೆಲವು ಗಿರಿಧಾಮಗಳನ್ನು ಸೇರಿಸಿಕೊಂಡು ಹಿಮಾಚಲ ಹೊಸ ರಾಜ್ಯವಾಗಿದ್ದು ಸಾವಿರದ ಒಂಬೈನೂರ ಎಪ್ಪತ್ತರಲ್ಲಿ. 

ಹಿಮಾಚಲ ನನಗೆ ಸಾಕ್ಷ್ಯ ಚಿತ್ರಗಳ ಮೂಲಕ ಪರಿಚಿತ. ಹಲವಾರು ನದಿಗಳ ಮೂಲವಾಗಿರುವ ಹಿಮಾಚಲ ಹಾಗೂ ಉತ್ತರ ಭಾರತದ ಫಲವತ್ತಾದ ಸಮತಟ್ಟು ಭೂಮಿಯಂತೂ ಪುಸ್ತಕಗಳಲ್ಲಿ ಓದಿ ಚಿರ-ಪರಿಚಿತ. ಹಿಮಾಲಯ ಪರ್ವತಗಳನ್ನು ಸುತ್ತಬೇಕು, ಅಲ್ಲಿನ ಜನ-ಜೀವನ, ಸಂಸ್ಕೃತಿ ತಿಳಿದುಕೊಳ್ಳಬೇಕೆಂಬುದು ನನ್ನ ಬಹಳ ವರ್ಷಗಳ ಕನಸು. ಈ ವರುಷ ಅದಕ್ಕೆ ಹಣ ಹಾಗೂ ಸಮಯ ಕೂಡಿ ಬಂದಿತ್ತು. ಜೊತೆಗೆ ಸಮಾನ ಮನಸ್ಕ ಗೆಳೆಯರೂ ಸೇರಿಕೊಂಡರು. ಈಗೇನೋ ಹಲವಾರು ' ಪ್ಯಾಕೇಜ್ ಟ್ರಿಪ್ ' ಗಳಿವೆ, ಮನೆಯ ಬಾಗಿಲಿಗೆ ಬಂದು ಕರೆದುಕೊಂಡು ಹೋಗಿ ಮನೆಗೇ ತಂದುಬಿಡುವ ವ್ಯವಸ್ಥೆಯೂ ಇದೆ. ಆದರೆ ಕೇವಲ ಪ್ರವಾಸಿ ತಾಣಗಳನ್ನು ತೋರಿಸಿ , ಅಲ್ಲಿ ನಾಲ್ಕು ಫೋಟೋ ಹೊಡೆದುಕೊಂಡು ಬರುವ ಸಾಮಾಜಿಕ ಜಾಲತಾಣ ಪ್ರವಾಸ ನಮಗೆ ಬೇಡವಾಗಿತ್ತು. ಬೇಕೆಂದ ಜಾಗದಲ್ಲಿ ಬೇಕಾದಷ್ಟು ಹೊತ್ತು ಕಳೆಯುವ, ಗಿಜಿಗುಡುವ ಪ್ರವಾಸಿಗರಿಂದ ದೂರವಿರುವ ಸ್ಥಳಗಳು ಬೇಕಿತ್ತು. ಇದಕ್ಕೆಂದೇ ಪರಿಚಯದ ಹೈದೆರಾಬಾದ್ ಮೂಲದ ಟೂರ್ ಕಂಪನಿ ಒಂದನ್ನು ಬುಕ್ ಮಾಡಿದ್ದೆವು. ಈ ಪ್ರವಾಸ ಚಂಡೀಗಢದಿಂದ ಪ್ರಾರಂಭವಾಗುತ್ತಿತ್ತು ಹಾಗೂ ಅಲ್ಲಿಗೆ ಹೋಗಿ ತಲುಪುವ ಜವಾಬ್ದಾರಿ ನಮ್ಮದೇ ಆಗಿತ್ತು. ಬೆಂಗಳೂರಿನಿಂದ ಚಂಡೀಗಢಕ್ಕೆ ನೇರ ವಿಮಾನಗಳು ಕಡಿಮೆ. ಇದ್ದರೂ ಟಿಕೇಟಿಗೆ ತುಸು ಜಾಸ್ತಿಯೇ ಕೊಡಬೇಕಾಗುತ್ತದೆ. ನಾವು ಬೆಂಗಳೂರಿನಿಂದ ಹೈದೆರಾಬಾದಿಗೆ ತಲುಪಿ ಅಲ್ಲಿಂದ ಚಂಡೀಗಢ ಸೇರಿಕೊಂಡೆವು. ಚಂಡೀಗಢ ಕೇಂದ್ರಾಡಳಿತ ಪ್ರದೇಶ, ಇದು ಪಂಜಾಬ್ ಹಾಗೂ ಹರಿಯಾಣದ ರಾಜಧಾನಿ. ಹೆಸರಿಗೆ ಅಂತರಾಷ್ಟ್ರೀಯ ನಿಲ್ದಾಣವಾದರೂ ಇರುವುದು ಎರಡೇ ಗೇಟು, ಒಂದೇ ರನ್ವೇ. ಇದು ಮಿಲಿಟರಿ ನಿಲ್ದಾಣವಾಗಿರುವುದರಿಂದ ಫೋಟೋ ತೆಗೆಯುವುದು ನಿಷಿದ್ಧ ಹಾಗೂ ಎರಡು ರನ್ವೇ ಅವರಿಗೇ ಮೀಸಲು. ನಾವು ಹೋಗುವ ದಿನವಷ್ಟೇ ಪಂಜಾಬಿನ ಚುನಾವಣೆ ಮುಗಿದು ಭಗವಂತ್ ಮಾನ್ ಆಯ್ಕೆಯಾಗಿದ್ದರು. ಇಲ್ಲಿನಂತೆಯೇ ಹಾದಿಗೊಂದು ಬ್ಯಾನರ್, ಶುಭ ಕೋರುವ ದೊಡ್ಡ ದೊಡ್ಡ ಪೋಸ್ಟರ್ ಹಾಕಿರಬಹುದೆಂದು ನಾನು ಎಣಿಸಿದ್ದೆ. ಆದರೆ ಅದು ಸುಳ್ಳಾಯಿತು, ಜನರು ಅದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿ ಕೊಂಡ ಹಾಗೆ ಕಾಣಲಿಲ್ಲ. ವಿಮಾನವಿಳಿದು ಕನ್ವೆಯರ್ ಬೆಲ್ಟ್ ನಿಂದ ಲಗೇಜು ತೆಗೆದುಕೊಂಡು, ಕಾರ್ ಪಾರ್ಕಿಂಗ್ ಕಡೆ ಹೊರಟೆವು. ಚಂಡೀಗಢವೇನು ಮಂಗಳ ಗ್ರಹದಲ್ಲಿ ಇಲ್ಲವಲ್ಲ, ಅಲ್ಲಿಯೂ ಇಲ್ಲಿನಂತೆ ಟ್ಯಾಕ್ಸಿ ಚಾಲಕರು ಮುಗಿಬೀಳುತ್ತಾರೆ. ಅದರಲ್ಲೂ ದೊಡ್ಡ ಬ್ಯಾಗು ಕಂಡರಂತೂ ಮುಗಿದೇ ಹೋಯಿತು. ನಮ್ಮ ನಿಗದಿತ ವಾಹನ ಮೊದಲೇ ಕಾಯ್ದಿರಿಸಿದ್ದರಿಂದ ನಾವು ಬೇರೆ ಟ್ಯಾಕ್ಸಿ ಹುಡುಕದೇ  ಸೀದಾ ನಮ್ಮ ಕಾರು ಹತ್ತಿದೆವು. ಚಂಡೀಗಢದಿಂದ ಶಿಮ್ಲಾ ಹೋಗಲು ರಾಷ್ಟ್ರೀಯ ಹೆದ್ದಾರಿಯಿದೆ. ದಾರಿಯುದ್ದಕ್ಕೂ ಪಂಜಾಬಿನ ಫಲವತ್ತಾದ ಹೊಲಗಳು. ಅದರಲ್ಲಿ ಬೆಳೆದು ನಿಂತ ಗೋಧಿ ಕಣ್ಣಿಗೆ ರಾಚುತ್ತದೆ. ಬಹುಶಃ ಭಾರತದಲ್ಲಿ ಇನ್ನೆಲ್ಲೂ ಅಷ್ಟರ ಮಟ್ಟಿಗಿನ ಕೃಷಿಯನ್ನು ನಾನು ನೋಡಿಲ್ಲ. ಪಂಜಾಬಿನ ರಸ್ತೆಗಳಲ್ಲಿ ಬೇರೆ ವಾಹನಗಳಿಗಿಂತ ಟ್ರಕ್ಕು, ಟ್ರಾಕ್ಟರ್ ಗಳೇ ಹೆಚ್ಚು ಕಾಣಸಿಗುತ್ತವೆ. ಪಂಜಾಬಿ ಢಾಬಾಗಳಂತೂ ರಸ್ತೆಗೇ ತೆರೆದುಕೊಂಡು ಬಿಸಿ-ಬಿಸಿ ತುಪ್ಪ, ಬೆಣ್ಣೆ ಹಾಕಿದ ರೊಟ್ಟಿಯ ಘಮವನ್ನು ಸೂಸುತ್ತಿರುತ್ತವೆ. ಈ ರೀತಿಯ ದೇಸಿ ಢಾಬಾದಲ್ಲೇ ತಿನ್ನಬೇಕೆಂದು ಮೊದಲೇ ಯೋಚನೆ ಮಾಡಿದ್ದ ನಾವು, ಏರ್ಪೋರ್ಟಿನ ಅಥವಾ ವಿಮಾನದಲ್ಲಿ ಕೊಡುವ ಯಾವ ಆಹಾರವನ್ನೂ ಸೇವಿಸಿರಲಿಲ್ಲ. ಸ್ಥಳೀಯನೇ ಆದ ನಮ್ಮ ಚಾಲಕನಿಗೆ ಢಾಬಾಗೆ ಕರೆದುಕೊಂಡು ಹೋಗು ಎಂದು ಹೇಳಿದೆವು. ಉತ್ತರ ಭಾರತದಲ್ಲಿ ನಮ್ಮಷ್ಟು ಬಗೆ-ಬಗೆಯ ಊಟ ಕಡಿಮೆ. ದಿನವೂ ರೊಟ್ಟಿ ಅದಕ್ಕೆ ಬೇರೆ ಬೇರೆ ತರನಾದ ದಾಲ್ ಗಳು. ನಾವು ರೊಟ್ಟಿ ಹೇಳಿದ್ದೆ ತಡ, ಕೆಂಡದ ಒಲೆಯ ಮೇಲೆ ರೊಟ್ಟಿ ಸುಟ್ಟು ಮೇಲಿಂದ ಒಂದು ಮುಷ್ಠಿ  ಬೆಣ್ಣೆ  ಇಟ್ಟು ತಂದು ಬಿಟ್ಟರು. ಎರಡು ರೊಟ್ಟಿಯ ಮೇಲೆ ಜೀವನದಲ್ಲೇ ಹೆಚ್ಚು ತಿನ್ನದ ನಾನು ಅವತ್ತು ಐದೋ-ಆರೋ ತಿಂದಿರಬೇಕು. ಪಂಜಾಬಿಗರೇ ಹಾಗೆ ತಿನ್ನಿಸುವುದರಲ್ಲೇ ಅವರಿಗೆ ಖುಷಿ. ನೀವು ಖಾಲಿ ಮಾಡುತ್ತಿದ್ದ ಹಾಗೆ ಅವರು ರೊಟ್ಟಿ ತಂದು ಹಾಕುತ್ತಿರುತ್ತಾರೆ. ಕೊನೆಯಲ್ಲಿ ಲೀಟರುಗಟ್ಟಲೆ ಲಸ್ಸಿ ತಂದಿಡುತ್ತಾರೆ. ಇದಿಷ್ಟನ್ನೂ ವಿಮಾನ ನಿಲ್ದಾಣದಲ್ಲಿ ತಿಂದಿದ್ದರೆ ನನ್ನ ಖಾತೆಯಲ್ಲಿರುವ ಅಷ್ಟೂ ಹಣ ಖಾಲಿಯಾಗಿ ಅಲ್ಲಿಗೇ ಪ್ರವಾಸ ನಿಲ್ಲಿಸಬೇಕಾಗುತಿತ್ತು. ಧಾಭಾದಲ್ಲಿ ಮೂವರಿಂದ ನಾನೂರು ರೂಪಾಯಿ ಬಿಲ್ಲು ಬಂತೆಂದು ನನ್ನ ನೆನಪು. ಒಂದು ರೊಟ್ಟಿಗೆ ಹತ್ತೇ ರೂಪಾಯಿಯಂತೆ.... 

Travel Infinity


ಚಂಡೀಗಢದಿಂದ ಶಿಮ್ಲಾ ಸುಮಾರು ನೂರಾ ಐವತ್ತು ಕಿಲೋಮೀಟರು ದೂರವಿದೆ ಅಷ್ಟೇ. ಆದರೂ ಪ್ರಯಾಣಕ್ಕೆ ನಾಲ್ಕೈದು ತಾಸು ಹಿಡಿಸುತ್ತದೆ. ಹಿಮಾಚಲದ ಸ್ವಾಗತ ಕಮಾನು ದಾಟುತ್ತಿದ್ದಂತೆಯೇ ಚಳಿ ಶುರುವಾಗುತ್ತದೆ. ಪಂಜಾಬಿನ ಸಮತಟ್ಟು ನೆಲ ಬಿಟ್ಟು ಹಿಮಾಲಯದ ಪರ್ವತಗಳನ್ನು ರಸ್ತೆ ಬಾಗಿ ಬಳುಕಿ ಸಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲೂ ಹಸಿರು ಹೊದ್ದ ಪರ್ವತಗಳು ಕಾಣಿಸುತ್ತವೆ. ರಸ್ತೆಯಂತೂ ನಮ್ಮ ಆಗುಂಬೆ ಘಾಟಿಯ ಹತ್ತರಷ್ಟು ತಿರುವು ಎಂದುಕೊಳ್ಳಿ, ಜೊತೆಗೆ ಕಿರಿದು ಬೇರೆ. ಎರಡು ಅಥವಾ ಮೂರನೇ ಗೇರಿನಲ್ಲಿ ಮಾತ್ರ ಪ್ರಯಾಣ ಮಾಡಬಹುದು. ಹಿಮಾಚಲ ಗಡಿಯೊಳಗೆ ಹೋಗುತ್ತಲೇ ನಮ್ಮ ಚಾಲಕ ಡೀಸಲ್ ತುಂಬಿಸಿಕೊಂಡ. ಒತ್ತಿ ಒತ್ತಿ ತುಂಬಿಸಿದ್ದು ನೋಡಿ ಯಾಕೆಂದು ಕೇಳಿದೆವು, ಹಿಮಾಚಲದಲ್ಲಿ ಪೆಟ್ರೋಲಿಯಂ ಮೇಲೆ ತೆರಿಗೆ ಕಡಿಮೆಯಂತೆ. ಒಂದು ಲೀಟರ್ ಪೆಟ್ರೋಲಿಗೆ ಹರಿಯಾಣಕ್ಕೂ ಅಲ್ಲಿಗೂ ಸುಮಾರು ಹತ್ತು ರೂಪಾಯಿ ವ್ಯತ್ಯಾಸವಿದೆಯಂತೆ. ಹೀಗೆ ಅದೂ ಇದೂ ಮಾತನಾಡುತ್ತ ಜೋಂಪು ಹತ್ತಿತಾದರೂ ಸುತ್ತಲಿನ ಸುಂದರ ಪ್ರಕೃತಿ ಮಲಗಲು ಬಿಡಲಿಲ್ಲ. ಅದಾಗಲೇ ಫೋಟೋ ತೆಗೆದೂ ತೆಗೆದೂ ಸಾಕಾಗಿತ್ತು. ಒಂದಕ್ಕಿಂತ ಒಂದು ಸುಂದರ ಪರ್ವತಗಳು. ತಲೆ ಎತ್ತಿ ನೋಡಿ ನೋಡಿ ಕತ್ತು ನೋವು ಬರುವಷ್ಟು ಎತ್ತರದ ಪರ್ವತಗಳು. 

ಶಿಮ್ಲಾ ಹಿಮಾಲಯದ ಒಂದು ಹಳ್ಳಿಯಾಗಿತ್ತು. ಸುತ್ತ-ಮುತ್ತಲಿನ ಊರುಗಳಿಗಿಂತ ದೊಡ್ಡ ಹಳ್ಳಿ. ಸಣ್ಣ ಪುಟ್ಟ ವ್ಯಾಪಾರವೂ ನಡೆಯುತ್ತಿದ್ದಿರಬೇಕು. ಗೋರ್ಖಾಗಳು  ಶಿಮ್ಲಾವನ್ನು ವಶಪಡಿಸಿಕೊಂಡರು ಅವರ ಕ್ರೂರ ಆಡಳಿತ ಸಹಿಸಿಕೊಳ್ಳಲಾಗದೆ ಹಲವು ಬುಡಕಟ್ಟು ಜನ ಬ್ರಿಟಿಷರ ಸಹಾಯ ಕೇಳಿದರು. ಬ್ರಿಟಿಷರೊಂದಿಗೆ ಕೈ ಜೋಡಿಸಿದ ಸ್ಥಳೀಯ ರಾಜರುಗಳು ಗೋರ್ಖಾಗಳನ್ನು ಸೋಲಿಸಿದರು. ಇದೆ ಕಾರಣಕ್ಕೆ ಹಿಮಾಚಲದ ಜನರು ಬ್ರಿಟಿಷರಿಗೆ ಕೊನೆಯವರಿಗೆ ನಿಯತ್ತಾಗೆ ಇದ್ದರು. ಸ್ವತಂತ್ರ ಹೋರಾಟದಲ್ಲಿ ಅಷ್ಟಾಗಿ ಭಾಗವಹಿಸಿದ್ದರ ಮಾಹಿತಿ ನಮಗೆ ಸಿಗುವುದಿಲ್ಲ. ಬ್ರಿಟಿಷರಿಗೆ ಶಿಮ್ಲಾವನ್ನು ನಗರವಾಗಿ ಬೆಳೆಸಿದರು. ಇಂಗ್ಲೆಂಡಿನಂತೆಯೇ ಇರುವ ಹವಾಮಾನ ಅವರಿಗೂ ಹಿತವೆನಿಸಿರಬೇಕು. ಶಿಮ್ಲಾವನ್ನು ಪೂರ್ತಿ ಪಂಜಾಬ್ ಪ್ರಾಂತ್ಯದ ರಾಜಧಾನಿಯಾಗಿ ಮಾಡಿದ್ದರು. ನಂತರ ಸ್ವತಂತ್ರ ಸಿಕ್ಕಿ ಅದು ಹಿಮಾಚಲದ ಬೇಸಿಗೆ ರಾಜಧಾನಿಯಾಯಿತು.

ಬ್ರಿಟಿಷರ ಕಾಲದಿಂದಲೂ ಶಿಮ್ಲಾ ಹಿಮಾಚಲದ ರಾಜಧಾನಿ. ಚಳಿಗಾಲದಲ್ಲಿ ಹಿಮ ಬಿದ್ದು ಶಿಮ್ಲಾ ಸ್ತಬ್ದವಾಗುವುದರಿಂದ ಬೇಸಿಗೆಯಲ್ಲಿ ಧರ್ಮಶಾಲಾ ರಾಜಧಾನಿಯಾಗುತ್ತದೆ. ಶಿಮ್ಲಾದಲ್ಲಿ ಬ್ರಿಟೀಷರ ಬಹಳಷ್ಟು ಕುರುಹುಗಳಿವೆ. ಇಲ್ಲಿನ ಸರ್ಕಾರಿ ಕಚೇರಿಗಳು ಇಂದಿಗೂ ಬ್ರಿಟಿಷ್ ವಾಸ್ತು ಶೈಲಿಯಲ್ಲಿಯೇ ಕಟ್ಟಲಾಗಿದೆ. ಕಿರಿದಾದ ರಸ್ತೆಗಳು, ಕಾರು ನಿಲ್ಲಿಸಲೂ ಜಾಗವಿಲ್ಲದಷ್ಟು ಕಿರಿದು. ಶಿಮ್ಲಾ ಪಟ್ಟಣದಲ್ಲಿ ಕಾರು ನಿಲ್ಲಿಸಲೆಂದೇ ಆರು ಮಹಡಿಯ ಕಟ್ಟಡವಿದೆ. ಇಲ್ಲಿನ ಮನೆಗಳೂ ಹಾಗೆ, ನಮ್ಮಲ್ಲಿಯಷ್ಟು ವಿಶಾಲವಲ್ಲ. ಗುಡ್ಡದ ಕೆಳಗೆ ಪಿಲ್ಲರ್ ಎಬ್ಬಿಸಿ ಮನೆ ಮಾಡಿ, ಅದರ ಎರಡನೇ ಮಹಡಿಯಲ್ಲಿ ಕಾರು ನಿಲ್ಲಿಸಲು ಜಾಗ ಮಾಡುತ್ತಾರೆ. ಕಾರು ಸೀದಾ ಮಹಡಿಯ ಮೇಲೆ ಹೋಗಿ ನಿಲ್ಲಬೇಕು. ಮನೆಯ ಮಾಳಿಗೆಯಲ್ಲಿ ಹಲವಾರು ಕೋಳುಗಳಿರುತ್ತವೆ. ಹಿಮ ಬಿದ್ದು ಭಾರ ಹೆಚ್ಚಾಗಿ ಮಾಳಿಗೆ ಬೀಳಬಾರದೆಂದು ಈ ಉಪಾಯ. ಶಿಮ್ಲಾ ಜಿಲ್ಲೆಯ ತುಂಬೆಲ್ಲಾ ದೇವದಾರು ಮರಗಳು. ಎಲ್ಲಿ ನೋಡಿದರೂ ಅದೇ! ಪರ್ವತದ ತುಂಬೆಲ್ಲಾ ಬರೀ ದೇವದಾರು. ಈ ಮರಗಳಿಂದ ಸೊಗಸಾದ ಪೀಠೋಪಕರಣಗಳನ್ನು ಮಾಡಬಹುದು, ತೊಗಟೆಯಿಂದ ಎಣ್ಣೆ  ತೆಗೆಯಬಹುದು. ಈ ಉದ್ಯಮ ಇಲ್ಲಿ ಸ್ಥಳೀಯವಾಗಿ ಉದ್ಯೋಗವನ್ನೂ ಸೃಷ್ಟಿಸಿದೆ. ಶಿಮ್ಲಾದಲ್ಲಿ ಮಾಲ್ ರೋಡ್ ಪ್ರಸಿದ್ಧ ಜಾಗ. ' ಶಾಪಿಂಗ್ ಸೆಂಟರ್' ಎಂದರೆ ತಪ್ಪಾಗಲಾರದು.  ಹತ್ತು ರೂಪಾಯಿ ಕೊಟ್ಟು ಕೆಳಗಿನ ರೋಡಿನಿಂದ ಮೇಲಿನ ಮಾಲ್ ರಸ್ತೆಗೆ ಲಿಫ್ಟ್  ಬಳಸಿ ಹೋಗಬೇಕು. ರಸ್ತೆಯಿಂದ ರಸ್ತೆಗೆ ಲಿಫ್ಟಿನಲ್ಲಿ ನಾನು ಹೋದದ್ದು ಅದೇ ಮೊದಲು. ತರಹೇವಾರಿ ಜಾಕೆಟ್ ಗಳು, ಕೈ ಗವಸುಗಳು, ಮಂಕಿ ಕ್ಯಾಪು, ಹಳೆಯ ಪುಸ್ತಕದ ಅಂಗಡಿಗಳು ಇಲ್ಲಿವೆ. ಹಿಮಾಚಲದ ವೈನ್ ಸಹ ಇಲ್ಲಿ ಸಿಗುತ್ತದೆ. ' ಇಂಗ್ಲಿಷ್ ವೈನ್ ಶಾಪ್' ಎಂದರೆ ಸಾಮಾನ್ಯ ಬಾರ್ ಎಂದು, ' ಹಿಮಾಚಲ ವೈನ್ಸ್ ' ಎಂದರೆ ಸ್ಥಳೀಯ ವೈನ್ ಅಂಗಡಿ. ಇದಿಷ್ಟೂ ಸುತ್ತುವ ಹೊತ್ತಿಗೆ ಸಂಜೆಯಾಯಿತು. ಸೂರ್ಯ ಬಾನಿನಲ್ಲಿ ಸ್ವಲ್ಪ ಇಳಿಯುತ್ತಲೇ ಚಳಿ ಮೂಳೆಗೆ ತಾಕುವಷ್ಟು ಬಿರುಸಾಯಿತು. ನೋಡ ನೋಡುತ್ತಲೇ ಮೈ ನಡುಗುವಷ್ಟು ಚಳಿ ಶುರುವಾಯಿತು. ನಾವು ತಡ ಮಾಡದೇ ಕಾರು ಹತ್ತಿದೆವು. ಅಂದು ನಾವು ಶಿಮ್ಲಾದಿಂದ ಆರೇಳು ಕಿಲೋಮೀಟರು ದೂರದ 'ಮಶೋಬ್ರಾ' ಎಂಬ ಊರಿನಲ್ಲಿ ತಂಗಲಿದ್ದೆವು. ಸಂಜೆ ಏಳು ಗಂಟೆಗೆಲ್ಲಾ ಕತ್ತಲೋ ಕತ್ತಲು. ಅಷ್ಟು ಸಣ್ಣ ರಸ್ತೆಯಲ್ಲಿ ಮಂದ ಬೆಳಕಿನಲ್ಲಿ ಅದು ಹೇಗೆ ವಾಹನ ಚಲಾಯಿಸುತ್ತಾರೋ ತಿಳಿಯದು. ಮಶೋಬ್ರಾ ತಲುಪಿ ಹೋಟೆಲಿಗೆ ಚೆಕ್ ಇನ್ ಆದೆವು. ರೂಮುಗಳು ವಿಶಾಲವಲ್ಲ. ವಿಶಾಲವಾಗಿ ಕಟ್ಟಲು ಜಾಗವೂ ಇಲ್ಲ. ಪರ್ವತಗಳ ಮಧ್ಯೆ ಕಿಷ್ಕಿಂದಿಯಂತೆ ಕಟ್ಟಡಗಳು ಅಷ್ಟೇ. ಅಪ್ಪಿ ತಪ್ಪಿ ತಣ್ಣೀರು ಕೈಯಲ್ಲಿ ಹಿಡಿದಿರೋ ಕಥೆ ಮುಗಿಯಿತು. ಅದಕ್ಕೇ ಅಲ್ಲಿನ ರೂಮುಗಳಲ್ಲಿ ಸಿಂಕಿಗೂ ಸಹ ಬಿಸಿ ನೀರು ಬರುವಂತೆ ಮಾಡಿರುತ್ತಾರೆ. ಮತ್ತೆ ರೊಟ್ಟಿ ದಾಲ್ ತಿಂದೆವು. ಜೊತೆಗೆ ಅನ್ನವಿತ್ತಾದರೂ ಮೊಸರು ಸಿಗುವುದಿಲ್ಲ. ಪರ್ವತಗಳಲ್ಲಿ ಹಾಲಿನ ಉತ್ಪನ್ನಗಳು ಒಂದು ಲಕ್ಸುರಿ. ಈರುಳ್ಳಿ, ಆಲೂಗಡ್ಡೆ ಸಹ ನಮ್ಮ ಜಾತಿಯದಲ್ಲ. ಪರ್ವತದಲ್ಲೇ ಬೆಳೆಯುವ ತರಕಾರಿ ಹಾಕಿ ಅಡುಗೆ ಮಾಡುತ್ತಾರೆ. ಅಷ್ಟು ಹೊತ್ತಿಗೆ ತಾಪಮಾನ ಸೊನ್ನೆ ಡಿಗ್ರಿ ತಲುಪಿತ್ತು. ಚಳಿಗೆ ಪ್ರಯಾಣದ ಸುಸ್ತಿಗೆ ದಿಂಬಿಗೆ ತಲೆ ಇಡುತ್ತಲೇ ನಿದ್ದೆ ಬಂತು.   

ಶಿಮ್ಲಾದ ಸಾಹಸ 

ರಾತ್ರಿ ಬೇಗನೆ ಮಲಗಿದ್ದಕ್ಕೋ ಏನೋ ಬೆಳಿಗ್ಗೆ ಬೇಗನೆ ಎಚ್ಚರವಾಯಿತು. ಅದಾಗಲೇ ಹಿಮಾಲಯನ್ ಬುಲ್ ಬುಲ್ ಹಕ್ಕಿಗಳು ಗಲಾಟೆ ಎಬ್ಬಿಸಿದ್ದವು. ಪಕ್ಷಿ ವೀಕ್ಷಕರಿಗೆ ಸಹ ಹಿಮಾಚಲ ಅದ್ಭುತ ಸ್ಥಳ. ಫ್ಲೈ ಕ್ಯಾಚರ್ ಗಳು, ವಾರ್ಬ್ಲರ್ ಗಳು, ಬುಲ್ ಬುಲ್ ಗಳು ಬೇಕಾದಷ್ಟಿವೆ. ಜನ ಸಂಖ್ಯೆ ಹೆಚ್ಚು ಇಲ್ಲದಿರುವುದರಿಂದ ಹಕ್ಕಿಗಳ ಸಂತಾನವೂ ಹಾಗೆಯೇ ಉಳಿದುಕೊಂಡು ಬಂದಿದೆ. ಕಿಟಕಿಯ ಕರ್ಟನ್ ಸರಿಸಿದೆ. ದೇವದಾರು ಮರಗಳ ಮರೆಯಲ್ಲಿ ಸೂರ್ಯ ಅದಾಗಲೇ ಹುಟ್ಟಿದ್ದ ತಡ ಮಾಡದೇ ತಿಂಡಿ ತಿಂದು ಹೊರಟೆವು. ಶಿಮ್ಲಾದ ಸಮೀಪವೇ 'ನಾಲ್ದೆರ' ಎಂಬ ಊರಿದೆ. ಇಲ್ಲಿ ಭಾರತದ ಅತೀ ಎತ್ತರದ ' ಗಾಲ್ಫ್ ಕೋರ್ಸ್' ಇದೆ. ಇದನ್ನೂ ಸಹ ಬ್ರಿಟಿಷರೇ ಕಟ್ಟಿಸಿದ್ದು. ಇದನ್ನು ಸಂಪೂರ್ಣ ನೋಡಬೇಕೆಂದರೆ ಐದು ಕಿಲೋಮೀಟರ್ ಸುತ್ತಬೇಕು. ಸಮ ತಟ್ಟು ಪ್ರದೇಶದಿಂದ ಹೋದ ನಮಗೆ ಅದು ಆಗುವ ಕೆಲಸವಲ್ಲ. ಅಷ್ಟು ಎತ್ತರದಲ್ಲಿ ಆಮ್ಲಜನಕ ಕಡಿಮೆ ಇರುವುದರಿಂದ ನಾಲ್ಕು ಹೆಜ್ಜೆ ಇಡುವಷ್ಟರಲ್ಲೇ ಸುಸ್ತಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಕುದುರೆ ಸವಾರಿಯ ಸೌಲಭ್ಯ ನೀಡುವ ಹಲವು ಜನರು ಅಲ್ಲಿದ್ದಾರೆ. ಅವರದೇ ಸಂಘವಿದೆ, ಸರ್ಕಾರ ಅವರಿಗಾಗೇ ಕಾನೂನು ಮಾಡಿದೆ. ದರವನ್ನೂ ಸಹ ಸರ್ಕಾರವೇ ನಿಗದಿ ಮಾಡುತ್ತದೆ. ಹಿಮಾಚಲದ ಯಾವುದೇ ಊರಿನಲ್ಲೂ ಕುದುರೆ ಸವಾರಿ ಮಾಡಬೇಕೆಂದರೆ ಐನೂರು ರೂಪಾಯಿಯ ನಿಗದಿತ ದರ ಕೊಡಬೇಕು. ಕುದುರೆಯ ಮೇಲೆ ಹಾಗೇ ಒಂದು ಸುತ್ತು ಹಾಕಿ ಬಂದೆವು. ನಮ್ಮನ್ನು ಕುದುರೆಯ ಮೇಲೆ ಕೂರಿಸಿ, ಅದರ ಯಜಮಾನ ಜೀನು ಹಿಡಿದು ನಡೆದೇ ಬರುತ್ತಾನೆ. ಕುದುರೆಯಷ್ಟೇ ವೇಗವಾಗಿ ನಡೆಯುತ್ತಾನೆ. ದಿನಕ್ಕೆ ಈ ರೀತಿ ಸುಮಾರು ಎಂಟು ಸುತ್ತು ಹಾಕುತ್ತಾನಂತೆ. ಅಂದರೆ ದಿನಕ್ಕೆ ಸುಮಾರು ನಲವತ್ತು ಕಿಲೋಮೀಟರ್. ಅದೂ ಆ ಎತ್ತರದಲ್ಲಿ. ನಾಲ್ದೆರದ ಪರ್ವತದ ತುದಿಯಿಂದ ಕುಲ್ಲು ಕಣಿವೆಯ ಹಿಮಚ್ಚಾದಿತ ಶಿಖರಗಳು ಕಾಣಿಸುತ್ತವೆ. ಇನ್ನೊಂದು ಕಡೆ 'ಸ್ಪಿತಿ' ಕಣಿವೆ ಹಾಗೂ ಅದರಾಚೆ ಟಿಬೆಟ್, ಚೀನಾ! ಎಲ್ಲವೂ ಮನೋಹರ ನೋಟ, ಒಂದು ಕ್ಷಣವೂ ಕಣ್ಣು ಮುಚ್ಚುವ ಮನಸ್ಸೇ ಆಗುವುದಿಲ್ಲ. ಅಲ್ಲಿಂದ ಇಳಿದುಬಂದು ಸಮೀಪದಲ್ಲೇ ಇರುವ ಸಾಹಸ ಕ್ರೀಡೆಗಳ ಕೇಂದ್ರದ ಒಳಗೆ ಹೊಕ್ಕೆವು. ಒಂದು ಗುಡ್ಡದಿಂದ ಇನ್ನೊಂದು ಗುಡ್ಡಕ್ಕೆ ಜಿಪ್ ಲೈನ್ ಮೂಲಕ ಸೊಯ್ಯನೆ ಹೋಗುವುದು ರೋಮಾಂಚನ. 'ಸ್ಕೀ' ಮಾಡುವ ಅವಕಾಶವೂ ಇಲ್ಲಿದೆ. ಅದಕ್ಕೆ ಬೇಕಾದ ವಸ್ತ್ರ, ಶೂ ಎಲ್ಲವನ್ನೂ ಅವರೇ ಕೊಡುತ್ತಾರೆ. ವಿಡಿಯೋಗಳಲ್ಲಿ ನೋಡಿದಷ್ಟು ಸುಲಭವಾಗಿ ಅದು ಮುಂದೆ ಹೋಗುವುದಿಲ್ಲ ಎಂದು ಆಮೇಲೆ ತಿಳಿಯಿತು. ಬಹಳ ಜಾಗರೂಕತೆ ಬೇಕು, ಸ್ವಲ್ಪ ಆಯ ತಪ್ಪಿದರೂ ಅಪಾಯ ಖಂಡಿತ. ನಮ್ಮ ಪ್ರವಾಸದಲ್ಲೇ ಈ ಸ್ಕೀ ದುಬಾರಿ ಖರ್ಚು. ಒಬ್ಬರಿಗೆ ಐದು ಸಾವಿರ, ಅದೂ ಕೇವಲ ಅರ್ಧಗಂಟೆ ಸ್ಕೀ ಮಾಡುವ ಅವಕಾಶ. ಜೀವನದಲ್ಲಿ ಒಮ್ಮೆ ಪ್ರಯತ್ನ ಪಡಬಹುದಾದ ಕ್ರೀಡೆ ಅದು. 



ಇದನ್ನೆಲ್ಲಾ ಮುಗಿಸಿ 'ಕುಫ್ರಿ' ಎಂಬ ಊರಿನ ಕಡೆ ಹೊರಟೆವು. ಕುಫ್ರಿಯಲ್ಲೂ ಸಹ ಪರ್ವತದ ತುದಿ ಮುಟ್ಟಬೇಕು. ಸದಾಕಾಲ ಈ ದಾರಿಯಲ್ಲಿ ಮೊಣಕಾಲುದ್ದ ಕೆಸರಿರುತ್ತದೆ. ನಡೆದು ಹೋಗುವುದು ಅಸಾಧ್ಯ. ಇಲ್ಲಿಯೂ ಕುದುರೆಯ ಮೇಲೆಯೇ ಹೋಗಬೇಕು. ಕುದುರೆಗೆ ಐನೂರು ರೂಪಾಯಿ ಕೊಡುವುದರ ಜೊತೆ ರಬ್ಬರ್ ಬೂಟುಗಳಿಗೆ ಇನ್ನೂರು ರೂಪಾಯಿ ಬಾಡಿಗೆ ಕೊಡಬೇಕು. ಇಲ್ಲದಿದ್ದರೆ ನಮ್ಮ ಚಪ್ಪಲಿ ವಾಪಸು ತರಲಾರದಷ್ಟು ಕೆಸರು ಮೆತ್ತಿಕೊಳ್ಳುತ್ತದೆ. ಕೌಂಟರಿನಲ್ಲಿ ಟಿಕೇಟು ಪಡೆದು, ಬೂಟು ಧರಿಸಿ ಕುದುರೆಯ ಬಳಿ ಬಂದೆವು. ಯಜಮಾನ ಕುದುರೆಯ ಮೇಲೆ ಹತ್ತಿಸಿದ. ಹಿಂದಿನಂತೆಯೇ ಆತನೇ ಜೀನು ಹಿಡಿದು ಕುದುರೆ ನಡೆಸುತ್ತಾನೆ ಎಂದು ಭಾವಿಸಿದ್ದೆ. ಆದರೆ ಇಲ್ಲಿ ಆದದ್ದೇ ಬೇರೆ! ಕುದುರೆ ಹತ್ತಿಸಿ ಆತ ಕುದುರೆಯನ್ನು ಬಿಟ್ಟು ಬಿಟ್ಟ. ಮುಂದೆ ಒಬ್ಬ ಚಿಕ್ಕ ಹುಡುಗನನ್ನು ಇನ್ನೊಂದು ಕುದುರೆಯ ಮೇಲೆ ಕೂರಿಸಿ ಇವರನ್ನು ಕರೆದುಕೊಂಡು ಹೋಗು ಎಂದು ಹೇಳಿ ತಾನು ಮಲಗಿಬಿಟ್ಟ. ಶ್ರೀರಂಗಪಟ್ಟಣದಲ್ಲಿ ಒಮ್ಮೆ ಕುದುರೆ ಹತ್ತಿದ್ದು ಬಿಟ್ಟರೆ ಇನ್ನೆಂದೂ ನನ್ನ ಜೀವನದಲ್ಲಿ ಕುದುರೆಯ ಬಳಿ ಹೋಗಿರಲಿಲ್ಲ. ಒಮ್ಮೆಲೇ ಜೀವ ಬಾಯಿಗೆ ಬಂದಂತಾಯಿತು. ಚಿಕ್ಕ ಹುಡುಗನ ಕುದುರೆ ಓಡುತ್ತಾ ಶಿಖರ ಹತ್ತುತಿದ್ದರೆ, ನನ್ನ ಕುದುರೆ ಮಾತ್ರ ಹಿಂದೆ ಹಿಂದೆ ಬರುತಿತ್ತು. ಮಧ್ಯದಲ್ಲಿ ನೀರು ಕಂಡಿದ್ದೆ ತಡ, ದಾರಿಯನ್ನು ಬಿಟ್ಟು ನೀರಿನ ಕಡೆಗೆ ಓಡಿತು. ಜೀನು ಎಳೆದೆ, ಕಾಲಿನಲ್ಲಿ ಒದ್ದೆ... ಉಹುಂ ನೀರು ಬಿಟ್ಟು ಬರಲೇ ಇಲ್ಲ. ದೂರದಲ್ಲಿದ್ದ ಹುಡುಗ 'ಏಡಿ ಮಾರೋ' ಎಂದು ಏನೋ ತೋರಿಸಿಕೊಟ್ಟ. ಕಾಲನ್ನು 'V' ಆಕಾರದಲ್ಲಿ ಕುದುರೆಗೆ ತಾಗಿಸಿ, ಜೀನು ಎಳೆದರೆ ಕುದುರೆ ಓಡುತ್ತದೆ. ಎಷ್ಟು ಜೋರಾಗಿ ಎಳೆಯುತ್ತೀರೋ ಕುದುರೆ ಅಷ್ಟು ಜೋರಾಗಿ ಓಡುತ್ತದೆ. ಈಗ ಕುದುರೆ ಸವಾರಿಯ ಮಜಾ ಬರತೊಡಗಿತು. ಗಟ್ಟಿಯಾಗಿ ಹೇಳಬೇಕೆಂದರೆ ಅವು ಶುದ್ಧ ಕುದುರೆಗಳಲ್ಲ. ಪರ್ವತಗಳಲ್ಲಿ ಅಸಾಧಾರಣವಾಗಿ ಓಡುವ 'ಮ್ಯೂಲ್' ಎನ್ನಬಹುದು. ಇವು ಪರ್ವತಗಳ ತಗ್ಗು ದಿಣ್ಣೆಗಳಲ್ಲಿ, ಕೆಸರಿನಲ್ಲಿ ಸುಲಭವಾಗಿ ಓಡುತ್ತವೆ. ಅದೇ ಸಮತಟ್ಟು ರಸ್ತೆಯ ಮೇಲೆ ಕುಂಟುತ್ತವೆ. ಸುಮಾರು ಅರ್ಧ ಗಂಟೆಯ ಸರ್ಕಸ್ ನಂತರ ಕುಫ್ರಿಯ ತುದಿ ತಲುಪಿದೆವು. ಅಲ್ಲೊಂದು ದೇವಸ್ಥಾನ, ಒಂದಷ್ಟು 'ಮ್ಯಾಗಿ' ಕೊಡುವ ಹೋಟೆಲ್ ಗಳು. ದೂರದಲ್ಲಿ ಲಡಾಖ್ ಕಾಣಿಸುತ್ತದೆ. ಕುಫ್ರಿಯ ಇನ್ನೊಂದು ಕಡೆ ಒಂದಷ್ಟು ಸೇಬಿನ ತೋಟಗಳಿವೆ. ಅಲ್ಲಿಗೆ ಜೀಪಿನಲ್ಲಿ ಮಾತ್ರ ಹೋಗಬಹುದು. ಸೇಬಿನ ತೋಟದ ಒಳಗೆ ಒಂದಿಷ್ಟು ಸಾಹಸ ಕ್ರೀಡೆಗಳಿವೆ. ಈ ರೀತಿ ನಾಲ್ಕೈದು ತೋಟಗಳಿರುವುದರಿಂದ ಅವರ ಮಧ್ಯೆಯೆ ಸ್ಪರ್ಧೆಯಿದೆ. ನಮಗೆ ಸಿಕ್ಕ ಏಜೆಂಟ್ ಒಬ್ಬ ಎಂಟು ನೂರು ರುಪಾಯಿಗೆ ಜೀಪು ಹತ್ತಿಸಿ, ತೋಟ ತೋರಿಸಿ, ಎರಡು ಸಾಹಸ ಕ್ರೀಡೆಯನ್ನೂ ಆಡಿಸುತ್ತೇನೆ, ಇಷ್ಟು ಕಡಿಮೆಗೆ ಕೊಟ್ಟಿದ್ದೇನೆ ಎಂದು ಯಾರಿಗೂ ಹೇಳಬೇಡಿ ಎಂದು ಮಾತು ಸಹ ತೆಗೆದುಕೊಂಡ. ಆತ ನಮಗೆ ಯಾವ ರೀತಿ ಉಂಡೆ ನಾಮ ಹಾಕಿದ್ದನೆಂದು ಮನಾಲಿಗೆ ಹೋಗುವಾಗ ನಮಗೆ ತಿಳಿಯಲಿತ್ತು. ಆದರೆ ಆ ಕ್ಷಣಕ್ಕೆ ಒಳ್ಳೆಯ ದರ ಎಂದು ಭಾವಿಸಿ ಹೋದೆವು. ಸೇಬಿನ ಮರಗಳು ಎಲೆ ಉದುರಿಸಿಕೊಂಡು ಬೋಳಾಗಿತ್ತು. ಒಂದು ಇಪ್ಪತ್ತು ಮರಗಳಿದ್ದವೇನೋ. ಅದನ್ನು ಸುತ್ತುವಷ್ಟರಲ್ಲಿ ಹಸಿವು ಶುರುವಾಗಿತ್ತು. ಪರ್ವತಗಳಲ್ಲಿ ಊಟವೆಂದರೆ ಬರಿ 'ಮ್ಯಾಗಿ' ಮಾತ್ರ. ಅದಕ್ಕೂ ನೂರು ರೂಪಾಯಿ ಕೊಡಬೇಕು, ಕೊಡದೆ ಬೇರೆ ದಾರಿ ಏನಿದೆ? ಕೊಡಲೇಬೇಕು. ಮ್ಯಾಗಿ ತಿಂದು ವಾಪಸು ಹೊರಟೆವು. ಬರುವಾಗ ಮತ್ತೆ ಕುದುರೆ ಸವಾರಿ... ಈ ಬಾರಿ ಸ್ವಲ್ಪ ಆತ್ಮ ವಿಶ್ವಾಸ ಬಂದಿತ್ತು. ನನ್ನ ಕುದುರೆಯ ಹೆಸರು 'ಜಾನಿ' ಎಂದು. ಜಾನಿ ಎಂದು ಕರೆದು 'ಬುರ್ರ್' ಎಂದು ಕೂಗಿದರೆ ಓಡುತಿತ್ತು. ಈಗ ಎಡಕ್ಕೆ, ಬಲಕ್ಕೆ ತೆಗೆದುಕೊಳ್ಳುವುದು ಗೊತ್ತಾಗಿತ್ತು. ಆದರೂ ಪರ್ವತ ಇಳಿಯುವುದು ತುಂಬಾ ತ್ರಾಸದಾಯಕ. ಕುದುರೆ ಕುಲುಕಿ ಕುಲುಕಿ ಬೆನ್ನು ನೋವು ತರಿಸುತ್ತದೆ. ಬಂದು ಹೋಟೆಲ್ ತಲುಪಿ, ಮಧ್ಯಾಹ್ನದ ಊಟವನ್ನೂ ಸೇರಿಸಿ ಗಡದ್ದು ತಿಂದು ಮಲಗಿದೆವು. ಮರುದಿನ 'ಮನಾಲಿ' ಕಡೆಗೆ ಹನ್ನೆರಡು ತಾಸಿನ ಪ್ರಯಾಣ ಮಾಡುವುದಿತ್ತು. ಪ್ರವಾಸದ ಎರಡನೇ ದಿನ ಮುಗಿದಿತ್ತು. ಮೂರನೇ ದಿನಕ್ಕೆ ಎದುರು ನೋಡುತ್ತಿದ್ದೆವು. 

ಮನಾಲಿಯೆಡೆಗೆ 

 ಶಿಮ್ಲಾದಿಂದ ಮನಾಲಿ ಸುಮಾರು ಇನ್ನೂರ ಐವತ್ತು ಕಿಲೋಮೀಟರು ದೂರವಿದೆ. ಈ ದೂರವನ್ನು ಕ್ರಮಿಸಲು ಸುಮಾರು ಹತ್ತರಿಂದ ಹನ್ನೆರಡು ತಾಸು ಹಿಡಿಯುತ್ತದೆ. ಪರ್ವತ ಹತ್ತಬೇಕು, ಇಳಿಯಬೇಕು ನಂತರ ಈ ಪರ್ವತದಿಂದ ಆ ಪರ್ವತಕ್ಕೆ ಕಿರಿದಾದ ಸೇತುವೆ ಮೂಲಕ ದಾಟಬೇಕು. ಮತ್ತದೇ ಪರ್ವತ ಹತ್ತುವ, ಇಳಿಯುವ ರಸ್ತೆ. ನಮ್ಮ ಚಾಲಕ ಹಿಂದಿನ ದಿನವೇ ' ರಾಸ್ತಾ ಖರಾಬ್ ಹೇ' ಎಂದು ಎಚ್ಚರಿಕೆ ನೀಡಿ, ಬೇಗ ಹೊರಡಲು ತಿಳಿಸಿದ್ದ. ಅಷ್ಟೊತ್ತಿಗೆ ನಮಗೂ ಹಿಮಾಚಲ ಒಂದಷ್ಟು ಹೊಂದಿಕೆಯಾಗಿತ್ತು. ತಿಂಡಿ ತಿಂದು, ಲಗೇಜು ತುಂಬಿಸಿ, ಚೆಕ್ ಔಟ್ ಮಾಡಿ ಬೇಗನೆ ಹೊರಟೆವು. 

ಶಿಮ್ಲಾದಿಂದ ಒಂದು ದಾರಿ 'ಕಿನ್ನೋರ್' ಕಡೆ ಹೋಗುತ್ತದೆ. ಕಿನ್ನೋರ್ ತಲುಪಿ ಅಲ್ಲಿಂದ ಮುಂದೆ 'ಚಂದ್ರತಾಲ್' ಎಂಬ ಸರೋವರದ ಪಕ್ಕದಲ್ಲಿ ಹಾದು 'ಸ್ಪಿತಿ' ಕಣಿವೆ ತಲುಪುತ್ತದೆ. ಸ್ಪಿತಿಯ ಆಚೆ ಟಿಬೆಟ್, ಚೀನಾ ಗಡಿ. ಭಾರತದ ಕೊನೆಯ ಢಾಬಾ ಸಹ ಇರುವುದು ಇಲ್ಲೇ ಅಂತೆ. ಶಿಮ್ಲಾದಿಂದ ಇನ್ನೊಂದು ರಸ್ತೆ 'ಜಿಭಿ' ಕಣಿವೆಯ ಕಡೆ ಹೋಗುತ್ತದೆ. ಈ ರಸ್ತೆ ಕೊನೆಗೆ ದಿಲ್ಲಿ-ಮನಾಲಿ ಹೈವೇಗೆ ಹೋಗಿ ತಲುಪುತ್ತದೆ. ನಾವು ಇದೆ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಶಿಮ್ಲಾದಿಂದ ಜಿಭಿಯವರೆಗೆ ಸುಂದರ ಪರ್ವತಗಳು ರಸ್ತೆಯುದ್ದಕ್ಕೂ ಕಾಣಿಸುತ್ತದೆ. ತಿರುವು ಮುರುವಿನ ರಸ್ತೆ. ಪ್ರತೀ ತಿರುವಿನಲ್ಲೂ ಶಿವನ ದೇವಸ್ತಾನವೋ, ಫೋಟೋವೋ ಇದ್ದೇ ಇರುತ್ತದೆ. ಹಿಮಾಚಲದಲ್ಲಿ ಶೇಖಡಾ ತೊಂಬತ್ತೈದರಷ್ಟು ಜನರು ಹಿಂದೂಗಳು, ಹಾಗೂ ಬಹಳಷ್ಟು ಜನ ಶಿವನನ್ನು ಪೂಜಿಸುತ್ತಾರೆ. ಅಲ್ಲಿನ ಕಠಿಣ ಭೂ ಪ್ರದೇಶ ದೇವರನ್ನು ನಂಬುವಂತೆ ಮಾಡಿದೆ. ಒಂದಲ್ಲಾ ಒಂದು ಅಪಘಾತದ ಸುದ್ದಿ ಕಿವಿಗೆ ಬೀಳುತ್ತಲೇ ಇರುತ್ತದೆ. ಅಪಘಾತವೆಂದರೆ ನಮ್ಮಲ್ಲಿನ ಹಾಗೆ ಸ್ವಲ್ಪ ತಾಗಿಸಿ, ಗಂಟೆಗಟ್ಟಲೆ ನಿಂದೇನು-ನಿಂದೇನು ಎಂದು ಜಗಳ ಮಾಡುವ ತರದ ಅಪಘಾತವಲ್ಲ. ವಾಹನಗಳು ಸೀದಾ ಪ್ರಪಾತಕ್ಕೆ ಉರುಳುತ್ತವೆ. ಉರುಳಿದರೆ ಶವ ಹುಡುಕಲು ಸಹ ಎರಡು ದಿನ ಬೇಕಾಗಬಹುದು. ಈ ಅಪಾಯದ ಜೊತೆಗೆ ಹಿಮಪಾತವಾಗುವುದು, ಬೆಟ್ಟಗಳಿಂದ ಬಂಡೆಗಳು ಉರುಳುತ್ತಿರುತ್ತವೆ. ಆದ್ದರಿಂದಲೇ ಇಲ್ಲಿನ ಜನ ದೇವರನ್ನು ಹೆಚ್ಚು ನಂಬುತ್ತಾರೆ. 

ಶಿಮ್ಲಾದಿಂದ ಹಲವು ಊರುಗಳಿಗೆ ರಾಜ್ಯ ಸಾರಿಗೆ ಬಸ್ ಸೌಲಭ್ಯವಿದೆ. ಆದರೆ ಬಹಳಷ್ಟು ಮಾರ್ಗಗಳಿಗೆ ಮುಂಗಡ ಟಿಕೆಟ್ ನೀಡುವುದಿಲ್ಲ. ಚಳಿಗಾಲದಲ್ಲಂತೂ ಈ ಬಸ್ಸುಗಳು ನಿಗದಿತ ಊರಿಗೆ ತಲುಪುವ ಸಾಧ್ಯತೆಗಳು ತೀರಾ ಕಡಿಮೆ. ಇದೆ ಕಾರಣಕ್ಕೆ ಬಸ್ಸು ಹತ್ತಿದರೂ ಒಂದೇ ಏಟಿಗೆ ಕೊನೆ ನಿಲ್ದಾಣದ ಟಿಕೆಟ್ ನೀಡುವುದಿಲ್ಲ. ಮೊದಲನೇ ನಿಲ್ದಾಣದವರೆಗೆ ಟಿಕೆಟ್ ನೀಡಿ, ಆ ಊರಿನಲ್ಲಿ ಇಳಿದು ಮುಂದಿನ ರಸ್ತೆಯ ಬಗ್ಗೆ ವಿಚಾರಿಸಿ ಮುಂದೆ ಸಾಗುತ್ತಾರೆ. ಹಿಮಪಾತವೋ, ಕಲ್ಲೋ ಬಿದ್ದು ರಸ್ತೆ ಬಂದ್ ಆಗಿದ್ದರೆ, ಬಸ್ಸು ಆ ನಿಲ್ದಾಣದಿಂದ ಮುಂದೆ ಹೋಗುವುದಿಲ್ಲ. ಇಲ್ಲಿಯ ಬದುಕು ಸಂಪೂರ್ಣವಾಗಿ ಪ್ರಕೃತಿಯ ಮೇಲೆ ನಿತ್ತಿದೆ. ಕೆಲವು ಊರುಗಳಿಗೆ ವರ್ಷದ ಆರೆಂಟು ತಿಂಗಳು ರಸ್ತೆ ಬಂದ್ ಇರುತ್ತದೆ. ಒಂದು-ಎರಡು ದಿನ ನಡೆದೇ ಇಂತಹ ಊರುಗಳಿಗೆ ತಲುಪಬೇಕು. ಸರ್ವ ಋತು ರಸ್ತೆಗಳನ್ನು ಮಾಡುವ ಕೆಲಸ ಭರದಿಂದ ನಡೆದಿದೆ. 

ಜಿಭಿಯಿಂದ ಮುಂದೆ 'ಮಂಡಿ' ಎಂಬ ಪಟ್ಟಣವಿದೆ. ಈ ಪಟ್ಟಣ ಇರುವುದರಲ್ಲೇ ಸ್ವಲ್ಪ ಸಮತಟ್ಟು ಪ್ರದೇಶದಲ್ಲಿ ಇದೆ. ಹಿಮಾಚಲದ ಹೆಚ್ಚಿನ ಕೈಗಾರಿಕೆಗಳಿರುವುದು ಮಂಡಿಯಲ್ಲಿ. ಇಲ್ಲಿ ಮೂರು ದೊಡ್ಡ ಸಿಮೆಂಟ್ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಮಂಡಿಯಲ್ಲಿದೆ. 'ಪಂಡೋ' ಎಂಬ ಅಣೆಕಟ್ಟನ್ನು 'ಬ್ಯಾಸ್' ಹಾಗೂ 'ಸಟ್ಲೆಜ್' ನದಿಗೆ  ಕಟ್ಟಲಾಗಿದೆ. ಇದು ನೀರು ಹಾಗೂ ವಿದ್ಯುತ್ ಒದಗಿಸುತ್ತದೆ. ಈ ಅಣೆಕಟ್ಟಿನ ಮೂಲಕವೇ ರಸ್ತೆ ಸಾಗುತ್ತದೆ. ಮೊದಲು ಅಣೆಕಟ್ಟಿನ ಹತ್ತಿರ ನಿತ್ತು ಫೋಟೋ ತೆಗೆಸಿಕೊಳ್ಳುವ ಅವಕಾಶವಿತ್ತಂತೆ. ಒಮ್ಮೆ ಹೈದೆರಾಬಾದಿನ ವಿದ್ಯಾರ್ಥಿಗಳ ಗುಂಪೊಂದು ಹೀಗೆಯೇ ನಿಂತಾಗ ಸ್ವಯಂ ನಿಯಂತ್ರಿತ ಕ್ರಸ್ಟ್ ಗೇಟುಗಳು ತೆರೆದುಕೊಂಡು ಇಪ್ಪತ್ತು ಜನ ಕೊಚ್ಚಿ ಹೋದರಂತೆ. ಈಗ ಅಲ್ಲಿ ನಿಲ್ಲಲು ಅವಕಾಶವಿಲ್ಲ. ಹಿಮಾಚಲದ ನದಿಗಳೆಲ್ಲವೂ ಹಿಮಾಲಯದಲ್ಲಿ ಹುಟ್ಟುತ್ತದೆ. ಈ ನದಿಗಳ ಮೂಲ ಮಂಜುಗಡ್ಡೆ. ಯಾವಾಗ ಹಿಮಪಾತವಾಗಿ ಅಥವಾ ಹಿಮ ಕರಗಿ ಮಂಜುಗಡ್ಡೆ ಒಡೆಯುತ್ತದೆ ಎಂದು ಹೇಳುವುದು ಕಷ್ಟ. ಯಾವ ಕ್ಷಣವಾದರೂ ಪ್ರವಾಹ ಕಾಣಿಸಿಕೊಳ್ಳಬಹುದು. ಈ ನದಿಗಳ ನೀರು ಸ್ಪಟಿಕದಷ್ಟು  ಶುಭ್ರವಾಗಿರುತ್ತದೆ ಹಾಗೂ ಕೊರೆಯುವಷ್ಟು ತಣ್ಣಗಿರುತ್ತದೆ. ಆಣೆಕಟ್ಟು ದಾಟಿ ಆಚೆ ಸ್ವಲ್ಪ ದೂರ ಬಂದರೆ ದಿಲ್ಲಿ ಮನಾಲಿ ಹೈವೇ ಸಿಗುತ್ತದೆ. ಇದು ನಾನು ಹಿಮಾಚಲದಲ್ಲಿ ನೋಡಿದ ದೊಡ್ಡ ರಸ್ತೆ. ಇದೂ ಸಹ ಹಲವು ಬಾರಿ ಬಂದ್ ಆಗುವುದುಂಟು. ಹೊಸ ರಸ್ತೆ ಕಾರ್ಯ ಶುರುವಾಗಿದೆ. ಗುಡ್ಡಗಳನ್ನು ದೈತ್ಯಾಕಾರದ ಡ್ರಿಲ್ಲರ್ಗಳಲ್ಲಿ ಒಡೆದು, ಅಲ್ಲೇ ಹರಡಿ ರಸ್ತೆ ಮಾಡುತ್ತಾರೆ. ಹಲವು ಸುರಂಗಗಳನ್ನೂ ಇಲ್ಲಿ ಕೊರೆಯುತ್ತಿದ್ದಾರೆ. ಒಮ್ಮೊಮ್ಮೆ ಗಂಟೆಗಟ್ಟಲೆ ವಾಹನಗಳನ್ನು ನಿಲ್ಲಿಸಿ, ಡೈನಾಮೈಟ್ ಇಟ್ಟು ಗುಡ್ಡಗಳನ್ನು ಒಡೆಯುತ್ತಾರೆ. 

ಈ ರಸ್ತೆಯಲ್ಲಿ 'ಬ್ಯಾಸ್' ನದಿ ನಮ್ಮ ಜೊತೆಗೇ ಸಾಗುತ್ತದೆ. ಒಂದು ಕಡೆ ಪ್ರಪಾತದಲ್ಲಿ ಕೊರೆಯುವ ಹಿಮನದಿ ಇದ್ದರೆ, ಇನ್ನೊಂದು ಬದಿ ಆಕಾಶದೆತ್ತರದ ಪರ್ವತಗಳು. ಪರ್ವತಗಳ ನೆತ್ತಿಯಲ್ಲಿ ಸಣ್ಣ ಊರುಗಳು. ಯಾವ ಊರಿಗೂ ರಸ್ತೆಯಿಲ್ಲ. ಎರಡು ದಿನ ಶಿಖರ ಹತ್ತಿ ಊರು ತಲುಪಬೇಕು. ಅಗತ್ಯ ವಸ್ತುಗಳಿಗೆ ರೋಪ್ ವೆ ಮಾಡಿಕೊಂಡಿದ್ದಾರೆ. ವರ್ಷದ ಆರು ತಿಂಗಳು ಹಿಮ ಬೀಳುತ್ತದೆ. ಆರು ತಿಂಗಳು ಮನೆಯಲ್ಲೇ ಬಂಧಿಯಾಗಿರಬೇಕು. ದಿನವೂ ಪ್ರಕೃತಿಯೊಡನೆ ಸೆಣಸಾಟ. ಆದರೂ ಇವರ್ಯಾರೂ ಮನೆ, ಊರು ಬಿಟ್ಟು ಬರುವವರಲ್ಲ. ಪರ್ವತದ ಮೇಲೆಯೇ ಸೇಬಿನ ಮರ ಹಾಕಿಕೊಂಡು, ಯಾಕ್ ಪ್ರಾಣಿ ಸಾಕಿಕೊಂಡು, ಔಷಧೀಯ ಸಸ್ಯ ಸಂಗ್ರಹಿಸುತ್ತಾ ಬದುಕು ದೂಡಿಬಿಡುತ್ತಾರೆ. ಸರ್ಕಾರದ ಹಲವು ಯೋಜನೆಗಳ ಲಾಭವನ್ನೂ ಪಡೆದುಕೊಳ್ಳುತ್ತಾರಂತೆ. ಕೆಲವರ ಪ್ರಕಾರ ಅಲ್ಲಿನ ಜನರೆಲ್ಲಾ ಕೋಟ್ಯಧಿಪತಿಗಳು. ಪರ್ವತ ಸೇಬು, ಕಿನ್ನೋ, ಈರುಳ್ಳಿ, ಬೆಳ್ಳುಳ್ಳಿಗೆ ಬಹಳಷ್ಟು ಬೇಡಿಕೆಯಿದೆ. ಖರ್ಚು ಕಡಿಮೆ, ಅದಕ್ಕೇ ಅವರು ಬೇರೆ ಎಲ್ಲೂ ಹೋಗುವ ಮನಸ್ಸು ಮಾಡುವುದಿಲ್ಲ. ಪರ್ವತದ ಮೇಲಾಗಲಿ, ಸಮುದ್ರದ ತಳದಲ್ಲಾಗಲಿ ಕೋಟಿ ಸಂಪಾದನೆ ಮಾಡಲು ಕೆಲಸವನ್ನಂತೂ ಮಾಡಲೇಬೇಕು. 

ಹಿಮಾಚಲದಲ್ಲಿ ನೀರಿನ ಸಮಸ್ಯೆ ಬಹಳವೇ ಇದೆ. ಪರ್ವತದಲ್ಲಿ ಮೇಲೆ ಮೇಲೆ ಹೋದಂತೆ ನೀರು ಸಿಗುವುದು ಕಷ್ಟ. ನದಿಗಳು ಕಣಿವೆಯಲ್ಲಿ ಮಾತ್ರ ಹರಿಯುತ್ತದೆ. 'ಬ್ಯಾಸ್' ನದಿ ಸಹ ಹಿಮಾಲಯದಲ್ಲೇ ಹುಟ್ಟುತ್ತದೆ. ನಂತರ ಇದು ಸತ್ಲುಜ್ ನದಿ ಸೇರಿ ಬೃಹದಾಕಾರವಾಗಿ ಬೆಳೆದು ದಕ್ಷಿಣದ ಕಡೆ ಹರಿಯುತ್ತದೆ. ಮನಾಲಿ ಹತ್ತಿರವಾದಂತೆಲ್ಲ ಹಿಮಾಲಯ ಶಿಖರಗಳು ಸ್ಪಷ್ಟವಾಗಿ ಗೋಚರಿಸಲು ಶುರುವಾಗುತ್ತದೆ. ಶಿಮ್ಲಾ ಕಡೆ ಕಾಣುವ ದೇವದಾರು ಮರಗಳು ಮನಾಲಿಯಲ್ಲಿ ಕಡಿಮೆ. ಶಿಮ್ಲಾದಲ್ಲಿ 'ಶಿವಾಲಿಕ' ತರದ ಹಿಮಾಲಯ ಪರ್ವತವಾದರೆ, ಮನಾಲಿಯಲ್ಲಿ ಹಿಮಾಚ್ಚಾದಿತ ಪರ್ವತಗಳು. ಕಾಡು ಕಡಿಮೆ, ಹಿಮವೇ ಜಾಸ್ತಿ. ರಸ್ತೆಯ ಇಕ್ಕೆಲಗಳಲ್ಲೂ ಸೇಬಿನ ಮರಗಳು. ನಾವು ಹತ್ತೇ ಹತ್ತು ಸೇಬಿನ ಮರ ನೋಡಲು ಎಂಟು ನೂರು ರೂಪಾಯಿ ಕೊಟ್ಟದ್ದು ನೆನಪಿಗೆ ಬಂತು. ಮನಾಲಿಯಿಂದ ಶುರುವಾಗುವ ಈ ಸೇಬಿನ ಗಿಡಗಳು ಲೇಹ್ ವರೆಗೆ ಹಬ್ಬಿದೆ. ಸೇಬು ಹಣ್ಣು ಬಿಡುವ ಸಮಯದಲ್ಲಿ ಬಂದರೆ ಸಾಕಷ್ಟು ಹಣ್ಣು ತಿನ್ನಬಹುದು. ಆದರೆ ಇಲ್ಲಿನ ಹಣ್ಣುಗಳು ಸ್ಥಳೀಯರಿಗೆ ಸಿಗುವ ಮೊದಲೇ ರಫ್ತಾಗಿರುತ್ತದಂತೆ. ಮರವನ್ನೇ ಹರಾಜು ಹಾಕಿ ಗುತ್ತಿಗೆ ನೀಡುತ್ತಾರಂತೆ. ಕೈಗೆ ಬಂದ ಹಣ್ಣು ಬಾಯಿಗೆ ಬರುವುದಿಲ್ಲ. ಒಂದು ಮರದಲ್ಲಿ ಸುಮಾರು ಇಪ್ಪತ್ತೈದು ಕ್ವಿಂಟಲ್ ಫಲ ಬರುತ್ತದಂತೆ. ಹತ್ತು ಮರವಿದ್ದರೆ ಸಾಕು ಬದುಕು ನಡೆಸಬಹುದು. ಒಂದು ಸೇಬಿನ ತೋಟ ಖರೀದಿ ಮಾಡಿಬಿಡೋಣವೆಂದು ತಮಾಷೆ ಮಾಡಿ  ವಿಚಾರಿಸಿದೆವು.   ಹಿಮಾಚಲದಲ್ಲಿ ಕೇವಲ ಹಿಮಾಚಲದವರು ಮಾತ್ರ ಭೂಮಿ ಖರೀದಿಸಬಹುದಂತೆ. ಹೊರಗಿನವರು ಕೇವಲ ಭೋಗ್ಯಕ್ಕೆ ಅಥವಾ ಗೇಣಿಗೆ ಪಡೆಯಬಹುದು. ರಾಜ್ಯದ ಭೂಮಿ ಕೇವಲ ರಾಜ್ಯದ ಜನರಿಗಷ್ಟೇ ಮೀಸಲು. ಇದರಿಂದ ಜಾಗ, ಭಾಷೆ, ಸಂಸ್ಕೃತಿ ಉಳಿಯುತ್ತದೆ. ಪ್ರವಾಸೋದ್ಯಮ ಹೆಚ್ಚಿರುವ ಪ್ರದೇಶದಲ್ಲಿ ಭೂ ಉದ್ಯಮವೇ ಹೆಚ್ಚಾಗುತ್ತದೆ. ನಮ್ಮ ಬೆಂಗಳೂರಿನ ಏಜೆಂಟರಿಗೆ ಸಿಕ್ಕಿದರಂತೂ, 'ಮೌಂಟನ್ ಫೇಸಿಂಗ್ ವಿಲ್ಲಾ' ಎಂದು ಒಂದಕ್ಕೆ ಹತ್ತು ರೇಟು ಮಾಡಿಬಿಡುತ್ತಾರೆ. ಅಂತಹ ಸುಂದರ ಪರಿಸರದಲ್ಲಿ ಹತ್ತು ಪಟ್ಟು ರೇಟು ಕೊಟ್ಟು ಖರೀದಿ ಮಾಡುವ ಜನರೂ ನಮ್ಮಲ್ಲಿದ್ದಾರೆ. ಹಾಗೆ ಬಂದವರು ಪರಿಸರವನ್ನೂ, ಅಲ್ಲಿನ ಸಂಸ್ಕೃತಿಯನ್ನು ಹಾಳುಗೆಡವಲೂ ಸಾಧ್ಯ. ಆದ್ದರಿಂದಲೇ ಹಿಮಾಚಲ ಸರ್ಕಾರ ಈ ಕಾನೂನು ತಂದಿದೆ. ಇದೇ ಕಾನೂನು ನಮ್ಮ ರಾಜ್ಯದಲ್ಲಿ ತಂದಿದ್ದರೆ ಹಲವು ಬೆಟ್ಟ, ಗುಡ್ಡ, ಕೆರೆಗಳು ಉಳಿದುಕೊಳ್ಳುತಿತ್ತು. ಬೆಂಗಳೂರಿನಲ್ಲಿ ಕನ್ನಡಿಗರೇ ಪರಕೀಯರಾಗುತ್ತಿರಲಿಲ್ಲ. ಭೂ ಉದ್ಯಮ ಕಳ್ಳರ ಸಂತೆಯಾಗುತ್ತಿರಲಿಲ್ಲ. ಜೊತೆಗೆ ಕನ್ನಡವೂ ಉಳಿದುಕೊಳ್ಳುತಿತ್ತು. 

ಇದೆಲ್ಲಾ ಯೋಚಿಸುವಾಗಲೇ 'ಕುಲ್ಲು; ಬಂದಿತು. ಕುಲ್ಲು ಹಾಗೂ ಮನಾಲಿ ಅವಳಿ ನಗರಗಳಿದ್ದಂತೆ. ನಲವತ್ತು ಕಿಲೋಮೀಟರು ದೂರವಷ್ಟೇ. ಆದರೆ ಹೆಚ್ಚಿನ ಪ್ರವಾಸಿಗರು 'ಕುಲ್ಲು'ವಿಗೆ ಭೇಟಿ ನೀಡುವುದಿಲ್ಲ. ನೋಡಲು ಅಲ್ಲಿ ಹೆಚ್ಚೇನೂ ಇಲ್ಲ. ವರ್ಷಕೊಮ್ಮೆ ದೊಡ್ಡ ಜಾತ್ರೆಯಾಗುತ್ತದೆ. ಹಿಮಾಚಲದ ಎಲ್ಲಾ ದೇವರುಗಳ ಪಲ್ಲಕ್ಕಿ ಅಲ್ಲಿಗೆ ತಲುಪಿ, ನಂತರ ಊರುಗಳಿಗೆ ವಾಪಾಸಾದ ಮೇಲೆಯೇ ಹಿಮ ಬೀಳುತ್ತದೆ ಎಂಬ ನಂಬಿಕೆಯಿದೆ. ನಾನು ಮೊದಲೇ ಹೇಳಿದಂತೆ ಹಿಮಾಚಲದ ಜನ ದೇವರನ್ನು ನಂಬುವವರು. ಕುಲ್ಲುವಿನಿಂದ ಸ್ವಲ್ಪ ಮುಂದೆ 'ಕಾಶ್ಮೀರಿ ಡ್ರೈ ಫ್ರೂಟ್ಸ್ ' ಮಳಿಗೆ ಇದೆ. ಉತ್ತಮ ಗುಣಮಟ್ಟದ ಪದಾರ್ಥಗಳು ಇಲ್ಲಿ ಸಿಗುತ್ತದಂತೆ. ನಮ್ಮ ಚಾಲಕ ಅಲ್ಲಿಗೆ ಕರೆದುಕೊಂಡು ಹೋದ. ನಾನು ಜೀವನದಲ್ಲೇ ನೋಡಿರದ ಹಣ್ಣುಗಳವು. ದುಂಡಗೆ ಇದ್ದ ಒಂದನ್ನು ತೋರಿಸಿ ಅದೇನು ಎಂದು ಕೇಳಿದೆ. ಅದು ಪರ್ವತದ ಬೆಳ್ಳುಳ್ಳಿಯಂತೆ. ಯಾವ ದಿಕ್ಕಿನಿಂದಲೂ ಅದು ಬೆಳ್ಳುಳ್ಳಿಯಂತೆ ಕಾಣುತ್ತಿರಲಿಲ್ಲ. ಒಮ್ಮೆ ಕಚ್ಚಿದೆ, ರುಚಿ ಮಾತ್ರ ಬೆಳ್ಳುಳ್ಳಿಯಂತೆ ಖಾರ. ಸೇಬಿನ ಚಿಪ್ಸ್  ಇತ್ತು. ಕಾಶ್ಮೀರದ ಕೇಸರಿ ಇತ್ತು, ಗೋಡಂಬಿ, ಬಾದಾಮಿ ಇನ್ನೂ ಹಲವು ನಮಗೆ ಗೊತ್ತಿರದ ಹಣ್ಣುಗಳು ಇದ್ದವು. ಅಂಗಡಿಯವ ನೀವು ಎಲ್ಲಿಯವರು ಎಂದು ಕೇಳಿದ. ಹೆಮ್ಮೆಯಿಂದ ಬೆಂಗಳೂರು ಎಂದೆವು. 'ತಮಿಳು ತೆರಿಯುಮ' ಎಂದು ಕೇಳಿದ. ಇಲ್ಲಪ್ಪ ನಾವು ಕನ್ನಡ ಮಾತನಾಡುತ್ತೇವೆ ಎಂದೆವು. ಆತ 'ಕೆನಡಾ'? ಎಂದು ಕೇಳಿದ. ಅಲ್ಲ ಕರ್ನಾಟಕ, ಕನ್ನಡ ಎಂದು ಮತ್ತೆ ಮತ್ತೆ ಹೇಳಿದೆವು. ಗೊತ್ತಿಲ್ಲವೆಂಬಂತೆ ತಲೆಯಾಡಿಸಿದ. ಆತನ ಸಾಮಾನ್ಯ ಜ್ಞಾನ ಪರ್ವತ ಬಿಟ್ಟು ಹೊರಗೆ ಬಂದೇ ಇಲ್ಲವೇನೋ. ಮಹರಾಯ ಮೊದಲು ಕಟ್ಟಿಕೊಂಡದ್ದಕ್ಕೆ ಬಿಲ್ ಹಾಕಿಕೊಡು ಸಾಕು ಎಂದು ಅಲ್ಲಿಂದ ಹೊರಬಿದ್ದೆವು. ಆಗಲೇ ಸೂರ್ಯ ಮುಳುಗಿದ್ದ. ಬೇಗನೆ ಮನಾಲಿ ತಲುಪಿ ರೂಮು ಹಿಡಿದೆವು. ಮುಂದಿನ ಮೂರು ದಿನ ಮನಾಲಿಯ ಸುತ್ತಮುತ್ತ ನೋಡುವ ಸ್ಥಳಗಳಿತ್ತು. ಅದೇ ಹೋಟೆಲಿನಲ್ಲಿ ತಂಗಲಿದ್ದೆವು. ಶಿಮ್ಲಾಗಿಂತ ಇಲ್ಲಿನ ರೂಮುಗಳು ವಿಶಾಲವಾಗಿದ್ದವು. ಲಗೇಜು ಜೋಡಿಸಿ, ಊಟ ಮಾಡಿ ಬಂದು ಮಲಗಿದೆ. ದೂರದಲ್ಲಿ, ಆ ಕತ್ತಲೆಯಲ್ಲೂ ಕೂಡ ಹಿಮ ಕಾಣಿಸುತಿತ್ತು. ಹಾಸಿಗೆಯ ಮೇಲೆ ಕೂತೆ ಹಿಮಾಲಯದ ಸುಂದರ ದೃಶ್ಯ ಸವಿಯಬಹುದಿತ್ತು. ಫೋಟೋ ತೆಗೆಯಲು ಪ್ರಯತ್ನಿಸಿದೆ. ಕತ್ತಲೆ ಇದ್ದುದರಿಂದ ಫೋಟೋ ಮಬ್ಬಾಗಿ ಬಂತು. ಬೇರೆ ಬೇರೆ ಸೆಟ್ಟಿಂಗ್ ಇತ್ತು ಫೋಟೋ ತೆಗೆದೆ. ಯಾವಾಗ ನಿದ್ದೆ ಬಂತೋ ಗೊತ್ತಿಲ್ಲ. ದಪ್ಪನೆ ಬೆಡ್ ಶೀಟ್ ಹೊದ್ದು ಮಲಗಿದೆ. ಕನಸಿನ ತುಂಬಾ ಕನಸು ಕಟ್ಟಿಕೊಂಡ ಹಿಮಾಲಯ.... 

ಪಹಾಡಿ ಸಂಸ್ಕೃತಿ 

ಹಿಂದಿನ ದಿನ ಹನ್ನೆರಡು ತಾಸಿಗೂ ಹೆಚ್ಚು ಪ್ರಯಾಣ ಮಾಡಿದ್ದೆವು. ಬಹಳ ಸುಸ್ತಾಗಿತ್ತು, ಬೆಳಿಗ್ಗೆ ತಡವಾಗೇ ಎದ್ದೆವು. ನಮ್ಮ ರೂಮಿನಿಂದಲೇ ಹಿಮಾಲಯದ ಶಿಖರಗಳು ಕಾಣಿಸುತಿತ್ತು. ಹೋಟೆಲಿನ ಪಕ್ಕವೇ ಸೇಬಿನ ತೋಟವಿತ್ತು. ಕುಫ್ರಿಯಲ್ಲಿ ಸೇಬಿನ ಮರ ನೋಡಲು ಎಂಟು ನೂರು ರೂಪಾಯಿ ಕೊಟ್ಟಿದ್ದು ನೆನಪಾಯಿತು. ಆಗ ನಮಗೆ ಆಗಿದ್ದ ಮೋಸದ ಅರಿವಾಯಿತು. ಬೆಳ್ಳಂ-ಬೆಳಿಗ್ಗೆ ಸೇಬಿಗೆ ಏನೋ ಔಷದಿ ಸಿಂಪಡಿಸುತ್ತಿದ್ದರು. ಒಂದಷ್ಟು ಹೊತ್ತು ಕುಳಿತು ಈ ಮನೋಹರ ದೃಶ್ಯ ಸವಿದೆವು. ನಮ್ಮ ಪ್ರವಾಸದ ಯೋಜನೆಯ ಪ್ರಕಾರ ಅಂದು ನಾವು 'ರೋಹತಾಂಗ್' ಪಾಸ್ ನೋಡಬೇಕಿತ್ತು. ಆದರೆ ಹೋಟೆಲಿನ ಸಿಬ್ಬಂದಿ, ಅಲ್ಲಿ ಅತಿಯಾದ ಹಿಮಪಾತವಾಗಿರುವುದರಿಂದ ರೋಹತಾಂಗ್ ಮುಚ್ಚಿದ್ದಾರೆ ಎಂದು ತಿಳಿಸಿದರು. ಸಾಮಾನ್ಯವಾಗಿ ಮಾರ್ಚ್ ಹೊತ್ತಿನಲ್ಲಿ ಹಿಮ ಕರಗಿ ರಸ್ತೆಗಳು ತೆರೆಯುತ್ತಿದ್ದವಂತೆ . ಆದರೆ ಪರ್ವತದ ಹವಾಮಾನವೇ ಹಾಗೆ ಊಹಿಸಲು ಅಸಾಧ್ಯ. ಇಂತಹ ಸನ್ನಿವೇಶಗಳಲ್ಲಿ ಮಾನವ ಸಣ್ಣವನಾಗುತ್ತಾನೆ ಹಾಗೂ ಹೆಚ್ಚೆಚ್ಚು ದೇವರನ್ನು ನಂಬುತ್ತಾನೆ. ಅದೇನೇ ಇರಲಿ, ಹವಾಮಾನದಿಂದ ನಮ್ಮ ಪ್ರವಾಸ ಅನಿರ್ಧಿಷ್ಟಾವಧಿಗೆ ಮುಂದೂಡಬೇಕಾಯಿತು. ಇಲ್ಲವೇ ಪ್ರವಾಸ ಅಲ್ಲಿಗೇ ಮುಗಿಸಿ ವಾಪಾಸು ಬರಬೇಕಾಗಿತ್ತು. ಒಂದಿಷ್ಟು ಸಾಹಸ ಕ್ರೀಡೆಯನ್ನಾದರೂ ಪ್ರಯತ್ನಿಸೋಣ ಎಂದು ವಿಚಾರಿಸಿದೆವು. ನಮಗೆ 'ಪ್ಯಾರಾ ಗ್ಲೈಡ್' ಮಾಡುವ ಬಹಳ ಹುಚ್ಚಿತ್ತು. ನಮ್ಮ ಅದೃಷ್ಟ ಸರಿ ಇರಲಿಲ್ಲ. ಮನಾಲಿಯ ಎಲ್ಲಾ ಸಾಹಸ ಕ್ರೀಡೆಗಳನ್ನು ಸರ್ಕಾರ ಮುಚ್ಚಿಸಿತ್ತು. ಗಣ್ಯರ ಮಗನೊಬ್ಬ ಪ್ಯಾರಾಶೂಟಿನಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದ. ಸರ್ಕಾರಕ್ಕೆ ಆಗ ಎಚ್ಚರವಾಗಿತ್ತು. ಹಲವು ಕಂಪನಿಗಳು ನಿಯಮಗಳನ್ನು ಗಾಳಿಗೆ ತೂರಿದ್ದರು. ಪರವಾನಗಿ ಸಿಕ್ಕಿರುವ ಎತ್ತರಕ್ಕೂ, ಇವರು ಹಾರಿಸುವ ಎತ್ತರ ಅಧಿಕವಿತ್ತು. ತರಬೇತಿ ಪಡೆಯದ ನೌಕರರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಇದೆಲ್ಲಾ ಕಾರಣ ಇರುವುದರಿಂದ ಸರ್ಕಾರ ಎಲ್ಲಾ ಸಾಹಸಕ್ರೀಡಾ ಕೇಂದ್ರಗಳನ್ನು ಮುಚ್ಚಿಸಿತ್ತು. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದನ್ನು ನಾನು ಓದಿದ್ದೆ. ಆದರೆ ಈ ಬಾರಿ ಗಣ್ಯರ ಮಗ ಪ್ರಾಣ ಕಳೆದುಕೊಂಡಿದ್ದ. ಮುಂದೆ ಮತ್ತೆ ಈ ಕೇಂದ್ರಗಳು ತೆರೆಯುತ್ತದೆ, ಮತ್ತೆ ಪ್ಯಾರಾಶೂಟ್ ಜೊತೆಗೆ ನಿಯಮಗಳನ್ನೂ ಗಾಳಿಗೆ ಹಾರಿಸುತ್ತಾರೆ. ಸಮಯ ಬೇಕಷ್ಟೆ... 

ಮುಂದಿನ ನಮ್ಮ ಪ್ರವಾಸ ಏನೆಂದು ಚಾಲಕನ ಬಳಿ ವಿಚಾರಿಸಿದೆವು. ಆತ ಸ್ಥಳೀಯನೇ ಆದುದರಿಂದ ಹಲವಾರು ಸ್ಥಳಗಳ ಪರಿಚಯ ಆತನಿಗೆ ಇತ್ತು. ಮನಾಲಿಯ ಸಮೀಪವೇ 'ಹಮ್ತ' ಪಾಸ್ ಇದೆ, ಇದೂ ಸಹ ರೋಹತಾಂಗ್ ನಷ್ಟೇ ಎತ್ತರದಲ್ಲಿದೆ ಮತ್ತು ಅಷ್ಟೇ ಸುಂದರವಾಗಿದೆ ಎಂದು ಆತ ತಿಳಿಸಿದ. ನಮಗಷ್ಟೇ ಸಾಕಿತ್ತು. ಕಾರು ತಿರುಗಿಸಲು ಹೇಳಿದೆವು. ಈ ಜಾಗಗಳು ಸಮುದ್ರ ಮಟ್ಟದಿಂದ ಬಹಳ ಎತ್ತರವಿರುವುದರಿಂದ ಅಲ್ಲಿ ಬಹಳಷ್ಟು ಚಳಿ ಇರುತ್ತದೆ. ಸದಾ ಕಾಲ ಹಿಮ ಇದ್ದೇ ಇರುತ್ತದೆ. ಸ್ವಲ್ಪ ಮಟ್ಟಿಗಿನ ಹಿಮ ಕರಗುವುದರಿಂದ ದಾರಿ ಪೂರ್ತಿ ಕೆಸರುಮಯವಾಗಿರುತ್ತದೆ. ನಾವು ಇಲ್ಲಿಂದ ತೆಗೆದುಕೊಂಡು ಹೋಗಿದ್ದ ಸ್ವಟರ್, ಜಾಕೆಟ್ ಗಳು ಅಲ್ಲಿ ನಿರುಪಯುಕ್ತವಾಗಿದ್ದವು. ಚಾಲಕನೇ ನಮಗೆ ಬಾಡಿಗೆ ವಸ್ತ್ರಗಳನ್ನು ಕೊಡಿಸಿದ. ಕಾಲಿನಿಂದ ಕುತ್ತಿಗೆಯವರೆಗೆ ನೀರು ನಿರೋಧಕ ಜಾಕೆಟ್ ಹಾಗೂ ಒಂದು ಜೊತೆ ರಬ್ಬರ್ ಬೂಟುಗಳಿಗೆ ಇನ್ನೂರು ರೂಪಾಯಿ ಬಾಡಿಗೆ. ಇದನ್ನೂ ಸಹ ಸರ್ಕಾರವೇ ನಿಗದಿ ಮಾಡಿದೆ. ಮನಾಲಿಯ ಯಾವುದೇ ಮೂಲೆಯಾದರೂ ಇಷ್ಟೇ ದುಡ್ಡು. ಹಮ್ತ ಪಾಸ್ ನ ರಸ್ತೆ ಹಾಳಾಗಿದೆ, ನಮ್ಮ ಸಾಮಾನ್ಯ ಕಾರುಗಳು ಹೋಗಲಾರವು. ಬಟ್ಟೆ ಬಾಡಿಗೆಗೆ ಕೊಟ್ಟ ಅಂಗಡಿಯವನೇ ವಾಹನದ ವ್ಯವಸ್ಥೆ ಮಾಡಿಕೊಟ್ಟ. ಮನಾಲಿಯಿಂದ ಹಮ್ತಗೆ ಐದು ಸಾವಿರ ರೂಪಾಯಿಗಳು. ಸುಮಾರು ಮೂವತ್ತು ಕಿಲೋಮೀಟರು ದೂರವಿರಬಹುದು. ಈ ರಸ್ತೆ ಅಲ್ಲಿನ ಜಲ ವಿದ್ಯುತ್ ಕೇಂದ್ರದ ಮೂಲಕ ಹಾದು ಹೋಗುತ್ತದೆ. ಆದ್ದರಿಂದ ನಮ್ಮ ಸ್ವಂತ ವಾಹನ ತೆಗೆದುಕೊಂಡು ಹೋಗಲು ಅನುಮತಿ ಬೇಕು. ಐದು ಸಾವಿರ ಕೊಡದೆ ನಮಗೆ ಬೇರೆ ದಾರಿ ಇರಲಿಲ್ಲ. ಮನಾಲಿಯ ಸ್ಥಳೀಯನೇ ಆದವನ 'ಆಲ್ಟೊ' ಕಾರು ಏರಿದೆವು. ಕಾರು ಮನಾಲಿ ಪಟ್ಟಣವನ್ನು ದಾಟಿ, ರಸ್ತೆಯನ್ನು ಏರತೊಡಗಿತು. ಚಾಲಕನನ್ನು ನಾವು ಮಾತಿಗೆಳೆದೆವು. ನಮ್ಮೆಲ್ಲರ ಪ್ರವಾಸದ ಹುಚ್ಚೇ ಅವನ ದಿನ ನಿತ್ಯದ ಅನ್ನ. ಹಿಮಾಚಲದಲ್ಲಿ ಇತರ ವೃತ್ತಿಗಳು ಕಡಿಮೆ. ಹಿಂದಿ ಅವರ ಮಾತೃ ಭಾಷೆಯಾಗಿರುವುದರಿಂದ ಸಹಜವಾಗಿ ಒಕ್ಕೂಟ ಸರ್ಕಾರದ ಹಲವು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಹಲವು ಮಂದಿ ಸೈನಕ್ಕೂ ಸೇರಿದ್ದಾರಂತೆ. ಮಾತೃ ಭಾಷೆ ಹಾಗೂ ಆಡಳಿತ ಭಾಷೆ ಒಂದೇ ಆಗಿರುವುದರಿಂದ ಅವರಿಗೆ ಅದು ಸುಲಭವಾಗಿದೆ. ಪರ್ವತಗಳ ಮೇಲೆ ಹಲವಾರು ಬೇರೆ ಭಾಷೆಗಳಿವೆ, ಅವನ್ನು 'ಪಹಾಡಿ' ಭಾಷೆ ಎಂದು ಸಂಗ್ರಹವಾಗಿ ಕರೆಯಬಹುದು. ಅಂತಹ ಭಾಷೆಗಳನ್ನು ಯಶಸ್ವಿಯಾಗಿ ಅವಸಾನದ ಅಂಚಿಗೆ ದೂಡಿರುವ ಶ್ರೇಯ ನಮ್ಮ ಸರ್ಕಾರಗಳಿಗೆ ಸೇರಬೇಕು. ಹಿಮಾಚಲದ ಸಣ್ಣ ಹಳ್ಳಿಗಳಲ್ಲಿ ಶಿಕ್ಷಣದ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಅಲ್ಲಿನ ಮಕ್ಕಳು ಮನಾಲಿ, ಶಿಮ್ಲಾ, ಚಂಡೀಗಢ ಅಥವಾ ದಿಲ್ಲಿಗೆ ಹೋಗಬೇಕು. ಚಿಕ್ಕ ವಯಸ್ಸಿನಲ್ಲೇ ಮನೆಯಿಂದ ದೂರವಾಗುವ ಅವರು, ಭಾಷೆ ಹಾಗೂ ಸಂಸ್ಕೃತಿಯಿಂದಲೂ ದೂರವಾಗುತ್ತಾರೆ. ಒಂದು ಸಂಪೂರ್ಣ ಪೀಳಿಗೆ ಈ ರೀತಿ ಊರಿನಿಂದ ಹೊರಬಿದ್ದರೆ, ಸರ್ಕಾರದ ಯಾವ ಅನುದಾನಗಳೂ ಭಾಷೆಯನ್ನು ಅಥವಾ ಸಂಸ್ಕೃತಿಯನ್ನು ಉಳಿಸಲಾರವು. ಜನ ಬಳಕೆಯಿಂದ ಭಾಷೆ ದೂರವಾದರೆ ಅದು ನಶಿಸಿದಂತೆಯೇ ಸರಿ. ಆಯಾ ಹಳ್ಳಿಗಳ ಜನರು ಅಲ್ಲೇ ನೆಲೆ ನಿಂತು, ಅಲ್ಲಿಯೇ ಶಿಕ್ಷಣ ಪಡೆದು ಉದ್ಯೋಗ ಮಾಡುವ ವ್ಯವಸ್ಥೆಯಾಗಬೇಕಿದೆ. 

ಕಾರು ಜಲ ವಿದ್ಯುತ್ ಕೇಂದ್ರದ ಚೆಕ್ ಪೋಸ್ಟ್  ದಾಟಿ ರಸ್ತೆಯಲ್ಲಿ ಮೇಲೆ ಏರತೊಡಗಿತು. ಮೇಲೆ ಏರಿದಂತೆಲ್ಲಾ ಮನಾಲಿ ಪಟ್ಟಣ ಸುಂದರವಾಗಿ ಕಾಣಿಸತೊಡಗಿತು. ಈ ರಸ್ತೆಯಲ್ಲಿ ಮೂವತ್ತಕ್ಕೂ ಹೆಚ್ಚು ಕಡಿದಾದ ತಿರುವುಗಳಿವೆ. ಎದುರಿನಿಂದ ಬರುವ ವಾಹನಗಳಿಗೆ ಜಾಗ ಬಿಡುವುದು ಕಷ್ಟ. ಸ್ವಂತ ವಾಹನ ತೆಗೆದುಕೊಂಡು ಹೋಗುವುದು ಅಪಾಯ. ದಾರಿ ಮಧ್ಯೆ ಒಂದು ಸಣ್ಣ ಹಳ್ಳಿ ಕಂಡಿತು. ಭೌದ್ಧ ಧರ್ಮೀಯರು ಹೆಚ್ಚಿರುವ ಹಳ್ಳಿಯೆಂದು ನೋಡಿದರೆ ತಿಳಿಯುತ್ತಿತ್ತು. ಹಿಮಾಚಲದಲ್ಲಿ ಎರಡನೇ ಹೆಚ್ಚಿರುವ ಧರ್ಮವೆಂದರೆ ಅದು ಭೌದ್ಧ ಧರ್ಮ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಬಹಳ ಕಡಿಮೆ. ಇಡೀ ಪ್ರವಾಸದಲ್ಲಿ ಒಂದೇ ಒಂದು ಚರ್ಚು ಅಥವಾ ಮಸೀದಿ ನೋಡಿದ ನೆನಪು ನನಗಿಲ್ಲ. 

ಹಮ್ತ ಸುಮಾರು ಹದಿನೈದು ಸಾವಿರ ಅಡಿ ಎತ್ತರದಲ್ಲಿದೆ. ಈಚೆಗೆ ಮನಾಲಿ ಪಟ್ಟಣವಾದರೆ, ಆಚೆ ಲಾಹೋಲ್ ಕಣಿವೆ ಇದೆ. ಕುಲ್ಲುವಿನಿಂದ ಕಾಲ್ನಡಿಗೆಯಲ್ಲಿ ಹಮ್ತ ಚಾರಣ ಮಾಡುವವರೂ ಇದ್ದಾರೆ. ಇದಕ್ಕೆ ಸುಮಾರು ನಾಲ್ಕು ದಿನಗಳು ಬೇಕು. ದಾರಿಯುದ್ದಕ್ಕೂ ಸುಂದರ ಜಲಪಾತಗಳು, ಹಸಿರು ಪೈನ್ ಮರಗಳು ಮುದ ನೀಡುತ್ತದೆ. ಹಿಮ ಕರಗಿದಂತೆಲ್ಲಾ ಮೇಲೆ ಮೇಲೆ ಹೋಗಬಹುದು. ಚಳಿಗಾಲದಲ್ಲಿ ಈ ಜಾಗಗಳು ಮುಚ್ಚಿರುತ್ತವೆ. ನನ್ನ ಜೀವನದಲ್ಲಿ ಅಷ್ಟು ಹಿಮವನ್ನು ನಾನು ನೋಡಿರಲಿಲ್ಲ. ಮನಸೋ ಇಚ್ಛೆ ಹಿಮದಲ್ಲಿ ಆಡಿದೆವು. ಗಂಟೆಗಟ್ಟಲೆ ಹಿಮದಲ್ಲಿ ಸುತ್ತಾಡಿದೆವು. ಶೂಗಳು ಬಾಡಿಗೆಯದ್ದಾಗಿರುವುದರಿಂದ ಅಷ್ಟೇನೂ ಒಳ್ಳೆಯ ಗುಣಮಟ್ಟದ್ದಾಗಿರಲಿಲ್ಲ. ಹಾಗೂ ನಮ್ಮ ಕಾಲು ಚೀಲಗಳು ಹಿಮಕ್ಕಾಗಿ ಮಾಡಿದ್ದಾಗಿರಲಿಲ್ಲ. ಕಾಲು ಮರಗಟ್ಟತೊಡಗಿತು, ಇನ್ನು ಸಾಧ್ಯವಿಲ್ಲವೆಂದು ನಿರ್ಧರಿಸಿ ವಾಪಾಸು ಹೊರಟೆವು. ಹಿಮದ ಸೌಂದರ್ಯದ ಹಿಂದಿನ ಅಪಾಯ ನಮಗೆ ಆಗ ಗೊತ್ತಿರಲಿಲ್ಲ. ಮುಂದೆ ಅದರಿಂದ ನಾವು ಕಷ್ಟವನ್ನು ಅನುಭವಿಸುವವರಿದ್ದೆವು. ವಾಪಾಸು ಮನಾಲಿಗೆ ಬಂದೆವು. ಹಸಿವೆ ಹೆಚ್ಚಿತ್ತು. ನಮ್ಮ ಚಾಲಕ ನಮ್ಮನ್ನು 'ಮಾಲ್ ರೋಡ್' ಗೆ ಕಳುಹಿಸಿದ. ಶಿಮ್ಲಾದಂತೆಯೇ ಮನಾಲಿಯಲ್ಲೂ ಮಾಲ್ ರಸ್ತೆಯಿದೆ. ಇಲ್ಲಿ ಶಿಮ್ಲಾಗಿಂತ ಅಗ್ಗವಾಗಿ ವಸ್ತುಗಳು ದೊರೆಯುತ್ತವೆ. ಸಮೀಪವೇ ಬಟ್ಟೆಯ ಕಾರ್ಖಾನೆಗಳಿರುವುದರಿಂದ ಇಲ್ಲಿ ಬಟ್ಟೆ, ಉಣ್ಣೆಯ ಉತ್ಪನ್ನಗಳು ಅಗ್ಗವಾಗಿ ದೊರೆಯುತ್ತದೆ. ಚಾಲಕ ಬಹಳಷ್ಟು ಹೋಟೆಲುಗಳಿವೆ ಹೋಗಿ ಎಂದು ಕಳುಹಿಸಿದ್ದ. ದಕ್ಷಿಣ ಭಾರತದಲ್ಲಿ ಓಡಾಡಿದ್ದ ನಮಗೆ ಅವುಗಳು ಏನೂ ಅಲ್ಲ. ಸಣ್ಣ ಹೋಟೆಲುಗಳು, ರೋಟಿ ದಾಲ್ ಬಿಟ್ಟು ಬೇರೆ ಏನೂ ಇವರ ಬಳಿ ಸಿಗುವುದಿಲ್ಲ. ಹೆಚ್ಚೆಂದರೆ ಜಿಲೇಬಿ ಸಿಗಬಹುದು. ಮಾಲ್ ರಸ್ತೆ ಪ್ರವಾಸಿ ಸ್ಥಳವಾಗಿರುವುದರಿಂದ ಹೋಟೆಲುಗಳು ಸದಾ ತುಂಬಿರುತ್ತದೆ. ಖಾಲಿ ಇದ್ದ ಟಿಬೆಟ್ ಹೋಟೆಲ್ ಒಂದರ ಒಳ ಹೊಕ್ಕೆವು. ಚೀನಾದ ಆಕ್ರಮಣಕ್ಕೆ ತುತ್ತಾದ ಟಿಬೆಟಿಯನ್ನರು ನಿರಾಶ್ರಿತರಾಗಿ ಭಾರತಕ್ಕೆ ಬಂದರು. ಕರ್ನಾಟಕದಲ್ಲೂ ಮುಂಡಗೋಡು, ಬೈಲುಕುಪ್ಪೆಯಲ್ಲಿ ಇವರ ವಸತಿ ಇದೆ. ಇವರ ಧರ್ಮಗುರು ದಲೈ ಲಾಮಾ ಇರುವುದು ಹಿಮಾಚಲದ ಧರ್ಮಶಾಲಾದಲ್ಲಿ. ಹೋಟೆಲ್ ಹೆಸರು ಹಾಗಿತ್ತು ಆದರೆ ಅಲ್ಲಿನ ಜನರ್ಯಾರೂ ಟಿಬೆಟಿಯನ್ನರಂತೆ ಕಾಣಿಸಲಿಲ್ಲ. ನಮ್ಮ ಊಟ ಮುಗಿಸಿ ಹಾಗೆಯೇ ಮಾಲ್ ರಸ್ತೆ ಒಂದು ಸುತ್ತು ಹಾಕಿ ಬಂದೆವು. ಅಲ್ಲಿಯೇ ಪಕ್ಕದಲ್ಲಿ ದೇವದಾರು ಮರಗಳ ಪಾರ್ಕ್ ಇದೆ. ಸಾಕಷ್ಟು ಪ್ರವಾಸಿಗರು ಇಲ್ಲಿ ಬರುತ್ತಾರೆ. ದೇವದಾರು ಮರಗಳ ಜೊತೆ ಇತರೆ ಜಾತಿಯ ಮರಗಳನ್ನೂ ಇಲ್ಲಿ ಬೆಳೆಸಲಾಗಿದೆ.  ರಾಕ್ಷಸಾಕಾರದ ದೇವದಾರು ಮರಗಳು ಆಕಾಶಕ್ಕೇ ಚಾಚಿಕೊಂಡಂತೆ ಕಾಣುತ್ತದೆ. ಇಡೀ ಉದ್ಯಾನ ಸುತ್ತಲೂ ಸುಮಾರು ಒಂದು ಗಂಟೆಯಾದರೂ ಬೇಕು. ಅಲ್ಲಿಂದ ಬರುವಾಗ ಒಂದು ಅಂಗಡಿಯಲ್ಲಿ ಒಳ್ಳೆಯ ದಪ್ಪ ಜಾಕೆಟ್ ನೋಡಿದೆ. ಐದು ಸಾವಿರದ ಜಾಕೆಟ್ ಮೂರು ಸಾವಿರಕ್ಕೆ ಎಂದು ಫಲಕ ಇತ್ತು. ಒಳ ಹೊಕ್ಕು ವಿಚಾರಿಸಿ ನಮ್ಮ ಸೈಜು, ಇಷ್ಟದ ಬಣ್ಣ ಆರಿಸಿದೆವು. ಖರೀದಿಯ ಮುಖ್ಯ ಹಂತವಿರುವುದೇ ಚೌಕಾಶಿಯಲ್ಲಿ. ಇದು ಸುತಾರಾಂ ನನಗೆ ಒಲಿಯುವ ಕಲೆಯಲ್ಲ. ನನ್ನ ಮಿತ್ರರೆಲ್ಲರೂ ನನ್ನನ್ನು ಚೌಕಾಶಿಗೆ ಅನರ್ಹನೆಂದೇ ಭಾವಿಸಿದ್ದಾರೆ. ಮೊದಲು ಇಷ್ಟೊಂದು ಕೊಡಲು ಸಾಧ್ಯವೇ ಇಲ್ಲ ಎನ್ನಬೇಕು, ಈ ವಸ್ತುವಿನ ಗುಣಮಟ್ಟ ಚೆನ್ನಾಗಿಲ್ಲ ಎಂದು ಹೇಳಬೇಕು, ನನ್ನ ಮುತ್ತಜ್ಜನ ಕಾಲದಿಂದಲೂ ಇಲ್ಲೇ ಖರೀದಿಸುತ್ತಿದ್ದೇವೆ ಎಂದು ರೈಲು ಬಿಡಬೇಕು. ನಂತರ ಈ ವಸ್ತುವೇ ಬೇಡವೆಂಬ ರಾಮ ಬಾಣ ಬಿಡಬೇಕು. ವ್ಯಾಪಾರದಾರನೂ ಇಂತಹ ಬೇಕಷ್ಟು ಜನರನ್ನು ನೋಡಿರುತ್ತಾನೆ. ಆತ ಇಂತಹ ವಸ್ತು ಜಗತ್ತಿನಲ್ಲೇ ಇಲ್ಲವೆಂದು, ಇಷ್ಟಕ್ಕೆ ಕೊಟ್ಟರೆ ಒಂದು  ರೂಪಾಯಿ ಸಹ ಲಾಭವಿಲ್ಲವೆಂದು ಆತ ಶುರು ಮಾಡುತ್ತಾನೆ. ದೇಶ-ವಿದೇಶಗಳ ಗಡಿ ಗಲಾಟೆಗಳು ಸಹ ಒಂದು ತಾರ್ಕಿಕ ಅಂತ್ಯ ಕಾಣಬಹುದೇನೋ, ಈ ಚೌಕಾಶಿ ಅದಕ್ಕೂ ಮೀರಿದ ಚರ್ಚೆ. ಮೂರು ಸಾವಿರದ ಜಾಕೆಟ್ಗೆ ಆರು ನೂರು ರೂಪಾಯಿಯಿಂದ ನಮ್ಮ ಆಟ ಶುರುಮಾಡಿ, ಅಂತೂ ಸಾವಿರ ರುಪಾಯಿಗೆ ತಂದು ನಿಲ್ಲಿಸಿದೆವು. ನಿಮಗೆ ಮಾತ್ರ ಇಷ್ಟು ಕಡಿಮೆ ಬೆಲೆಯಲ್ಲಿ ಕೊಡುತ್ತಿದ್ದೇನೆ ಎಂದು ಹೇಳುತ್ತಲೇ ಆತ ಪ್ಯಾಕ್ ಮಾಡಿ ಕೊಟ್ಟ. ಈ ಖರೀದಿ ಮುಗಿಸಿ ಹಾಗೆಯೇ ಸುತ್ತುತ್ತಿದ್ದೆವು. ಇದ್ದಕಿದ್ದಂತೆ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ಗಾಂಜಾ, ಚರಸ್, ಹಶೀಶ್ ಏನಾದರೂ ಬೇಕಿದ್ದರೆ ತಿಳಿಸಿ ಎಂದು ಕಿವಿಯಲ್ಲಿ ಉಸುರಿದ. ನನಗೆ ಭಯವಾಗಿ ಏನು ಹೇಳಬೇಕೆಂದೇ ತಿಳಿಯಲಿಲ್ಲ. ಆತ ನನ್ನ ಉತ್ತರಕ್ಕೆ ಕಾಯದೆ ಜನ ಸಂದಣಿಯಲ್ಲಿ ಅಂತರ್ಧಾನವಾಗಿ ಹೋದ. ನಂತರ ಅಲ್ಲಿ ಕಳೆದ ಎರಡು ತಾಸಿನಲ್ಲಿ ಮೂರ್ನಾಲ್ಕು ಇಂತದೇ ಜನರು ಸಿಕ್ಕಿದರು. ಇನ್ನು ಹೆಚ್ಚು ಹೊತ್ತು ಅಲ್ಲಿ ಕಳೆಯುವುದು ಅಪಾಯವೆಂದು ತಿಳಿದು ಅಲ್ಲಿಂದ ಕಾಲ್ಕಿತ್ತೆವು. 

ಮಾದಕ ವಸ್ತುಗಳ ಸಾಗಣೆ ಹಾಗೂ ಉಪಯೋಗದಲ್ಲಿ ಹಿಮಾಚಲದ ಹೆಸರು ಈಗೀಗ ಭಾರಿ ಸದ್ದು ಮಾಡುತ್ತಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಲಾವೋಸ್, ಮಯನ್ಮಾರ್ ಹೀಗೆ ಹಲವು ದೇಶಗಳಿಂದ ಕಳ್ಳ ಮಾರ್ಗವಾಗಿ ಇವು ನಮ್ಮ ದೇಶಕ್ಕೆ ಬಂದು ಬೀಳುತ್ತವೆ. ಅದರಲ್ಲೂ ಪಂಜಾಬ್ ಪ್ರಾಂತ್ಯದಲ್ಲಿ ಮಾದಕ ವಸ್ತುಗಳ ಸಾಗಣೆ ಮತ್ತು ಬಳಕೆ ಹೆಚ್ಚು. ಪಂಜಾಬಿನಲ್ಲಿ ಬಿಗಿ ಕಾನೂನು ತಂದಿರುವುದರಿಂದ ಈ ಜಾಲ ಪಕ್ಕದ ರಾಜ್ಯವಾದ ಹಿಮಾಚಲಕ್ಕೆ ಹಬ್ಬಿದೆ. ಇಂತಹ ಕಳ್ಳ ಕೆಲಸಗಳಿಗೆ ಹಿಮಾಚಲ ಸುಲಭದ ಜಾಗ. ಪರ್ವತದ ಮೂಲೆಯ ಹಳ್ಳಿಗಳಲ್ಲಿ ಕಳ್ಳ ದಂಧೆ ನಡೆದರೆ ಅಲ್ಲಿಗೆ ಹೋಗಿ ಹಿಡಿಯುವವರಾರು? ಹಿಮಾಲಯದ ಅಭೇದ್ಯ ಕಾಡುಗಳ ಮಧ್ಯೆ ಗಾಂಜಾ ಬೆಳೆದರೆ ಕಂಡು ಹಿಡಿಯುವುದು ಹೇಗೆ? ಇದರ ಜೊತೆಗೆ  ಬರುವ ಪ್ರವಾಸಿಗರ ದಂಡು ಈ ಮಾದಕ ವಸ್ತುಗಳಿಗೆ ಒಳ್ಳೆಯ ಮಾರುಕಟ್ಟೆ. ಬರೀ ಮಾರಾಟವೊಂದೇ ಅಲ್ಲ, ಇದರ ಬಳಕೆದಾರರು ಸಹ ಹಿಮಾಚಲದಲ್ಲಿ ಹೆಚ್ಚಾಗುತ್ತಿದ್ದಾರೆ. ಸರ್ಕಾರ ಒಂದಿಷ್ಟು ನಶಾಮುಕ್ತಿ ಕೇಂದ್ರಗಳನ್ನು ತೆರೆದಿದೆ. ಆದರೆ ಈ ಜಾಲದ ಆಳ ಅಗಲಗಳನ್ನು ಗಮನಿಸಿದರೆ ಸರ್ಕಾರದ ಕ್ರಮಗಳು ಏನೇನೂ ಸಾಲದು. ಇದರ ಸಹವಾಸವೇ ಬೇಡವೆಂದು ತಕ್ಷಣ ಅಲ್ಲಿಂದ ಹೊರಟೆವು. ನಮ್ಮ ಹೋಟೆಲ್ ಸಹ ಮನಾಲಿಯಲ್ಲಿಯೇ ಇತ್ತು. ಕಾರಿನಲ್ಲಿ ಹೆಚ್ಚೆಂದರೆ ಐದು-ಹತ್ತು ನಿಮಿಷದ ದಾರಿ. ಬೇಗನೆ ರೂಮು ಸೇರಿದೆವು. ಮಧ್ಯಾಹ್ನದ ಟಿಬೆಟಿಯನ್ ಊಟ ರುಚಿಸಿರಲಿಲ್ಲ. ಶಿಮ್ಲಾದಿಂದ ಬರುವ ದಾರಿಯಲ್ಲಿ ಹಣ್ಣುಗಳನ್ನು ಕೊಂಡಿದ್ದೆವು. ಸೇಬು, ಕಿನ್ನೋ, ದಾಳಿಂಬೆ ಮುಂತಾದ ಹಣ್ಣುಗಳ ಜೊತೆ ಹುರಿದ ಶೇಂಗಾ ಹಾಗೂ ಕೆಲವಷ್ಟು ಕುರುಕಲು ತಿಂಡಿಗಳು ಇತ್ತು. ಹಿಮಾಚಲದಲ್ಲಿ ನಾವು ಖರೀದಿಸಿದ ಕಿನ್ನೋ ಹಣ್ಣು ಬಹಳ ಸಿಹಿಯಾಗಿತ್ತು. ಕರ್ನಾಟಕದಲ್ಲಿ ಇಷ್ಟು ಸಿಹಿಯಾದ ಕಿನ್ನೋ ಹಣ್ಣನ್ನು ನಾನು ತಿಂದಿರಲಿಲ್ಲ. ನಮ್ಮಲ್ಲಿಯ ಹಾಗೆ ಸಂಜೆ ಕಾಫಿ, ಟೀ ಕುಡಿಯುವ ರೂಢಿಯನ್ನು ನಾನು ಹಿಮಾಚಲದಲ್ಲಿ ನೋಡಲಿಲ್ಲ. ರಾತ್ರಿಯ ಊಟದವರೆಗೆ ಸಮಯವಿತ್ತು, ಹಾಗೆಯೇ ಹೋಟೆಲಿನ ಸುತ್ತಮುತ್ತಲ ಜಾಗಗಳಲ್ಲಿ ಓಡಾಡಿದೆವು. ಸಮೀಪವೇ ಒಂದು ಜಲಪಾತವಿತ್ತು. ಹಿಮ ಕರಗಿ ಆ ಜಲಪಾತ ಸೃಷ್ಟಿಯಾಗಿತ್ತು. ಸಮಯ ಕಳೆದದ್ದು ತಿಳಿಯಲಿಲ್ಲ. ಊಟದ ಸಮಯ ಅದಾಗಲೇ ಬಂದಿತ್ತು. ಊಟ ಮಾಡಿ ಮಲಗಿದೆವು. ಮರುದಿನ ಅಟಲ್ ಸುರಂಗ ಹಾಗೂ ಇನ್ನಿತರ ಕೆಲವು ಸ್ಥಳೀಯ ದೇವಸ್ಥಾನವನ್ನು ನೋಡುವುದಿತ್ತು... 

ಹಿಮದ ಸಹವಾಸ  

ಮನಾಲಿಯ ಆಚೆಯ ಪ್ರಾಂತ್ಯಗಳಿಗೆ ಹೋಗಬೇಕೆಂದರೆ, ಹಿಮಾಲಯದ ಶಿಖರಗಳನ್ನು ಏರಿಯೇ ಹೋಗಬೇಕು. ಚಳಿಗಾಲದಲ್ಲಿ ಅತಿಯಾದ ಹಿಮ ಬೀಳುವುದರಿಂದ ರಸ್ತೆಗಳು ಮುಚ್ಚಿಕೊಳ್ಳುತ್ತವೆ. ಬೇಸಿಗೆಯಲ್ಲಿ ಹಿಮ ಕರಗಿ, ಕರಗಿದ ಹಿಮದ ಜೊತೆ ಕಲ್ಲು ಬಂಡೆಗಳೂ ಸಹ ಬೀಳುವುದುಂಟು. ಹಾಗಾಗಿ ಬೇಸಿಗೆಯಲ್ಲೂ ಪ್ರಯಾಣ ಕಷ್ಟ. ಈ ಪ್ರಾಂತ್ಯಗಳು ಚಳಿಗಾಲದಲ್ಲಿ ಹೊರಗಿನ ಜಗತ್ತಿನೊಂದಿಗೆ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಳ್ಳುತ್ತವೆ. ಶತಮಾನಗಳಿಂದ ಇದು ಹೀಗೆಯೇ ನಡೆದಿದೆ. ಇಲ್ಲಿನ 'ಪಹಾಡಿ' ಜನಗಳೂ ಸಹ ಇದಕ್ಕೆ ಒಗ್ಗಿಕೊಂಡಿದ್ದಾರೆ. ಸೀಸು, ಸ್ಪಿತಿಯಂತಹ ಪ್ರಾಂತ್ಯದ ಜನರು ವರ್ಷದ ಆರು ತಿಂಗಳು ಇದೆ ರೀತಿ ಸಂಪರ್ಕ ಕಡಿದುಕೊಳ್ಳುತ್ತಾರೆ. ಈ ಪ್ರದೇಶಗಳು ನಮ್ಮ ಭಾರತದ ಗಡಿ ಪ್ರದೇಶಗಳೂ ಹೌದು. ಮನಾಲಿಯಿಂದ ಲೇಹ್ ಪಟ್ಟಣಕ್ಕೆ ಸಹ ಇದೇ ರೀತಿ ಹೋಗಬೇಕು. ಇತ್ತೀಚಿಗೆ ನೆರೆಯ ರಾಷ್ಟಗಳ ಜೊತೆ ನಮ್ಮ ಗಡಿ ವಿಚಾರ ಬಿಗಡಾಯಿಸುತ್ತಿದೆ. ಈ ಗಡಿ ಪ್ರದೇಶಗಳು ವರ್ಷದ ಆರು ತಿಂಗಳು ದಿಲ್ಲಿಯೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತವೆ. ಆಚೆ ಚೀನಾ,  ತನ್ನ ಬದಿಯಿಂದ ರಸ್ತೆ, ಸೇತುವೆಗಳ ನಿರ್ಮಾಣ ಮಾಡುತ್ತಿದೆ . ಅತ್ಯಂತ ದುರ್ಗಮ ಪ್ರದೇಶಗಳಿಗೂ ಸಹ ಸಂಪರ್ಕ ಕಲ್ಪಿಸಿಕೊಳ್ಳುತ್ತಿದೆ. ಈ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಭಾರತ ದಶಕದ ಹಿಂದೆಯೇ ಯೋಜನೆಗಳನ್ನು ಮಾಡಿತ್ತು. ಈಚೆಯ ಮನಾಲಿಯಿಂದ ಆಚೆಯ ಸೀಸುಗೆ ಹಿಮಾಲಯ ಶಿಖರವನ್ನೇ ಕೊರೆದು ಸುರಂಗ ಮಾಡುವ ಯೋಜನೆ ಅದಾಗಿತ್ತು. ನಮ್ಮ ನಾಯಕರ ಇಚ್ಚಾ ಶಕ್ತಿಯ ಕೊರತೆಯಿಂದ ಅದು ಪೂರ್ಣಗೊಳ್ಳುವುದು ತಡವಾಯಿತು. ಈಚೆಗೆ ಎರಡು ವರ್ಷಗಳಲ್ಲಿ ಮತ್ತೆ ಕೆಲಸ ಚುರುಕಾಗಿ, ಈಗ ಸಂಪೂರ್ಣವಾಗಿದೆ. ಆ ಸುರಂಗಕ್ಕೆ 'ಅಟಲ್' ಸುರಂಗ ಎಂದು ಹೆಸರು. ಇದು ಮನಾಲಿಯಿಂದ ಸುಮಾರು ಮೂವತ್ತು ಕಿಲೋಮೀಟರು ದೂರದಲ್ಲಿದೆ. ಇದು ರೊಹತಂಗ್ ನಂತೆ ಚಳಿಗಾಲದಲ್ಲಿ ಮುಚ್ಚುವುದಿಲ್ಲ. ಪ್ರವಾಸಿಗರು ಸದಾ ಕಾಲ ಭೇಟಿ ಮಾಡಬಹುದಾಗಿರುವುದರಿಂದ, ಈಗ ಇದು ಮುಖ್ಯ ಪ್ರವಾಸಿ ತಾಣವಾಗಿದೆ. 

ಮನಾಲಿಯಿಂದ ಅರ್ಧ ಗಂಟೆಯ ಪ್ರಯಾಣ. ಅಟಲ್ ಸುರಂಗ ಸುಮಾರು ಹದಿಮೂರು ಸಾವಿರ ಅಡಿ ಎತ್ತರದಲ್ಲಿರುವುದರಿಂದ, ಅತಿಯಾದ ಚಳಿ ಇರುತ್ತದೆ. ಚಳಿಗೆ ಒಪ್ಪುವಂತಹ ದಪ್ಪನೆಯ ನೀರು ನಿರೋಧಕ ಕೋಟು, ಗಂ ಬೂಟುಗಳು ಬೇಕು. ಹೋಗುವ ದಾರಿಯಲ್ಲಿ ಸೋಲಾಂಗ್ ಕಣಿವೆ ಸಹ ನೋಡಬಹುದು. ಸೋಲಾಂಗ್ ಕಣಿವೆ ಸದಾಕಾಲ ಪ್ರವಾಸಿಗರಿಂದ ಗಿಜಿಗುಡುತ್ತಿರುತ್ತದೆ. ಹಿಮ ಕರಗಿ ಕೆಸರು ಮೂಡಿದರೂ, ಸಾಹಸ ಕ್ರೀಡೆಗಳು ನಡೆಯುತ್ತಲೇ ಇರುತ್ತದೆ. ನಾವು ಅದಾಗಲೇ ಸಾಹಸ ಕ್ರೀಡೆಗಳ ಸಹವಾಸ ಮಾಡಿದ್ದೆವು. ಸೋಲಾಂಗ್ ಒಂದು ಸುತ್ತುಹಾಕಿ, ಅಟಲ್ ಸುರಂಗದ ಕಡೆ ರಸ್ತೆ ಏರತೊಡಗಿದೆವು. ಹಿಮಾಚಲದ ಸಾಕಷ್ಟು ರಸ್ತೆಗಳನ್ನು ಅಲ್ಲಿನ ರಾಜ್ಯ ಸರ್ಕಾರ ನೋಡಿಕೊಳ್ಳುವುದಿಲ್ಲ. ಭಾರತೀಯ ಸೈನ್ಯದ ಒಂದು ಅಂಗವಾದ 'ಬಾರ್ಡರ್ ರೋಡ್ ಆರ್ಗನೈಜೇಷನ್' ಈ ಕೆಲಸ ಮಾಡುತ್ತದೆ. ನಮ್ಮ ಸೈನ್ಯಕ್ಕೆ ಬೇಕಾದ ಮದ್ದು, ಗುಂಡುಗಳನ್ನು, ಅಗತ್ಯ ವಸ್ತುಗಳನ್ನು ಇದೇ ರಸ್ತೆಯಲ್ಲಿ ತೆಗೆದುಕೊಂಡು ಹೋಗಬೇಕಾಗಿರವುದರಿಂದ ಹಾಗೂ ಭೌಗೋಳಿಕತೆಗಳ ಸವಾಲುಗಳಿರುವುದರಿಂದ ಸೈನ್ಯವೇ ರಸ್ತೆಗಳ ನಿರ್ಮಾಣ ಹಾಗೂ ದುರಸ್ಥಿ ಕಾರ್ಯ ಮಾಡುತ್ತದೆ. ಸುರಂಗ ಕೊರೆಯಲು, ರಸ್ತೆ ಮಾಡಲು ಬೇಕಾದ ವಸ್ತುಗಳನ್ನು ಅಲ್ಲಿಯೇ ತಯಾರಿಸಿರುವುದು ಕಾಣಿಸುತ್ತದೆ. ತಾತ್ಕಾಲಿಕವಾಗಿ ತೆರೆದುಕೊಂಡಿದ್ದ ಆ ಸಣ್ಣ ಕಾರ್ಖಾನೆಗಳು ಇಂದು ಮುಚ್ಚಿವೆ. ಹಾಳಾದ ದೈತ್ಯಾಕಾರದ ಯಂತ್ರೋಪಕರಣಗಳು ಇನ್ನೂ ಅಲ್ಲೇ ಬಿದ್ದಿವೆ. ರಸ್ತೆಯಲ್ಲಿ ಮೇಲೆ ಸಾಗುತ್ತಿದ್ದಂತೆ ಮರಗಳು ಕಡಿಮೆಯಾಗುತ್ತವೆ, ಅಲ್ಲಲ್ಲಿ ತಾತ್ಕಾಲಿಕ ಚಹಾ ಅಂಗಡಿಗಳೂ ಕಾಣಿಸುತ್ತವೆ. ಹಿಮಾಲಯದ ಚಹಾ ಅಂಗಡಿಗಳು ಯಾವುದೂ ಶಾಶ್ವತವಲ್ಲ. ಹಿಮ ಕರಗಿದಂತೆ ತಮ್ಮ ಅಂಗಡಿಗಳನ್ನು ಮೇಲೆ ಮೇಲೆ ಕೊಂಡೊಯ್ಯುತ್ತಾರೆ. ಪ್ರಕೃತಿ ವಿಕೋಪದ ಸಂಧರ್ಭಗಳಲ್ಲಿ ಅಂಗಡಿ ಕಿತ್ತು, ತಾವೂ ಆದಷ್ಟು ಬೇಗ ಜಾಗ ಖಾಲಿ ಮಾಡುತ್ತಾರೆ. ಈ ಚಹಾ ಅಂಗಡಿಗಳು ಹಿಮಾಲಯದ ಜೀವ ವಾಹಿನಿಗಳು. ಸದಾ ಬೆಳ್ಳಗಿನ ಹಿಮ, ಹಿಮಾಲಯದ ಮೌನವನ್ನೇ ನೋಡುವ ಜನಗಳಿಗೆ ಈ ಅಂಗಡಿಗಳು ಕಥೆ ಕೊಚ್ಚುವ ಕೇಂದ್ರಗಳು. ಲಾರಿ ಚಾಲಕರು, ಪ್ರವಾಸಿಗರು, ಸೈನಿಕರು, ಪಹಾಡಿ ಜನಗಳು ಎಲ್ಲರೂ ಕೂತು ಎಲ್ಲೆಲ್ಲಿ ರಸ್ತೆ ಮುಚ್ಚಿದೆ, ಯಾವ ಊರು ಮುಚ್ಚಿದೆ ಎಂದು ಮಾತನಾಡುತ್ತಿರುತ್ತಾರೆ. ಯಾವ ಕಾಲಕ್ಕೂ ಮುಗಿಯದ ಕಥೆಗಳಿವು. 

ಅಟಲ್ ಸುರಂಗದ ಮನಾಲಿ ಕಡೆಗಿನ ದ್ವಾರವನ್ನು ದಕ್ಷಿಣ ದ್ವಾರವೆಂದು ಕರೆಯುತ್ತಾರೆ. ನಮಗೆ ಸುರಂಗದ ಮೊದಲ ದರ್ಶನವಾಗುವುದು ಇಲ್ಲೇ. ಈ ದ್ವಾರದ ಮೂಲಕ ಒಳ ಹೊಕ್ಕರೆ ಅದು ಬೇರೆಯದೇ ಪ್ರಪಂಚ. ಹಿಮಾಲಯ ಶಿಖರದ ಒಳಗೆ ಇದ್ದೇವೆ ಎಂಬ ಸಣ್ಣ ಅಂಶವೂ ತಲೆಯಲ್ಲಿ ಬರುವುದಿಲ್ಲ. ಇಲ್ಲೇ ಪುಣೆಯ ಬಳಿ ಯಾವುದೋ ಸುರಂಗ ಹೊಕ್ಕಂತೆ ಅನಿಸುತ್ತದೆ. ಅಟಲ್ ಸುರಂಗ ಒಂಬತ್ತು ಕಿಲೋಮೀಟರು ಉದ್ದವಿದೆ, ಇದು ದೇಶದ ಉದ್ದದ ಹಾಗೂ ಎತ್ತರದ ಸುರಂಗ. ಸುರಂಗದ ಒಳಗೆ ಒಂದು ವಾಹನದ ಹಿಂದೆ. ಇನ್ನೊಂದು ವಾಹನ ಹೋಗಬೇಕು, ಹಿಂದಿಕ್ಕುವುದು ನಿಷೇದ. ಒಂದು ಹಾದಿ ಹೋಗುವವರಿಗೆ, ಇನ್ನೊಂದು ಬರುವವರಿಗೆ. ಅರವತ್ತು ಕಿಲೋಮೀಟರು ವೇಗದಲ್ಲೇ ಸಾಗಬೇಕು. ಮಧ್ಯ ಎಲ್ಲೂ ವಾಹನ ನಿಲ್ಲಿಸುವ ಹಾಗಿಲ್ಲ. ಒಂಬತ್ತು ಕಿಲೋಮೀಟರು ಹೋಗುವುದೇ ತಿಳಿಯುವುದಿಲ್ಲ. ಸುರಂಗದ ಲೇಹ್ ಬದಿಯ ದ್ವಾರ ಉತ್ತರ ದ್ವಾರ. ಈಚೆ ಹೊಕ್ಕು, ಆಚೆ ಹೊರಡುವುದು ವರ್ಮ್ ಹೋಲಿನಂತೆ. ಏಕೆಂದರೆ ಸುರಂಗದ ಆಚೆ ಬದಿ ಕೇವಲ ಅಚ್ಚ ಬಿಳಿಯ ಹಿಮವಷ್ಟೇ. ಯಾವ ಮರಗಳೂ ಅಷ್ಟಾಗಿ ಕಾಣಿಸುವುದಿಲ್ಲ. ರಸ್ತೆಯ ಪಕ್ಕ ಪ್ರಪಾತದಲ್ಲಿ 'ಚಂದ್ರಾ' ನದಿ ಹರಿಯುವುದು ಕಾಣಿಸುತ್ತದೆ. ಅದೇ ರಸ್ತೆಗುಂಟ ಸಾಗಿದರೆ ಅದು ಸ್ಪಿತಿ ಕಣಿವೆ ಸೇರುತ್ತದೆ. ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಸೀಸು ಮೂಲಕ ಲೇಹ್ ತಲುಪಬಹುದು. ಮನಾಲಿಯಲ್ಲಿ ಬಾಡಿಗೆ ಬೈಕುಗಳು ಸಿಗುತ್ತವೆ. ಇವನ್ನು ತೆಗೆದುಕೊಂಡು ಬಹಳಷ್ಟು ಸಾಹಸಪ್ರಿಯರು ಇದೇ ಮಾರ್ಗದಲ್ಲಿ ಲೇಹ್ ಪ್ರವಾಸ ಕೈಗೊಳ್ಳುತ್ತಾರೆ. ಅಟಲ್ ಸುರಂಗದ ಆಚೆಯ ದೃಶ್ಯ ಮನಮೋಹಕ. ನಿಂತು ಒಂದಷ್ಟು ಕಣ್ತುಂಬಿಕೊಳ್ಳುವ ಆಸೆ ನಮಗಿತ್ತು. ಸುರಂಗದ ಉತ್ತರ ದ್ವಾರದ ಬಳಿಯೇ ತೆಲುಗಿನ ಸಿನಿಮಾದ ಚಿತ್ರೀಕರಣವೊಂದು ನಡೆಯುತಿತ್ತು. ಹಲವಾರು ವಾಹನಗಳು ಆಗಲೇ ಅಲ್ಲಿ ಜಮಾವಣೆಯಾಗಿತ್ತು. ಪೊಲೀಸು ನಮ್ಮನ್ನು ಅಲ್ಲಿ ಇರಗೊಡದೆ ತಕ್ಷಣ ವಾಪಾಸು ಕಳುಹಿಸಿಬಿಟ್ಟರು. ಈಗಲೂ ಇದು ನನಗೆ ಬೇಸರದ ಸಂಗತಿ. ಸೀಸು ರಮಣೀಯ ಪ್ರದೇಶ, ಅಲ್ಲೊಂದು ಪ್ರಸಿದ್ಧ ಜಲಪಾತವೂ ಇದೆ. ಆದರೆ ಅದನ್ನೆಲ್ಲಾ ನೋಡಲು ನಮಗೆ ಸಮಯವಿರಲಿಲ್ಲ. ಹೋದ ದಾರಿಯಲ್ಲೇ ವಾಪಾಸು ಬಂದು ಮನಾಲಿಯ ಕಡೆ ಇಳಿಯ ತೊಡಗಿದೆವು. ಅಂದು ಮನಾಲಿ ಪಟ್ಟಣವನ್ನು ಸುತ್ತುವ ಯೋಜನೆಯಿತ್ತು. ಬ್ಯಾಸ್ ನದಿಯ ದಂಡೆಯ ಮೇಲೇ ಇರುವ ಬಾಡಿಗೆ ಬಟ್ಟೆ ಹಾಗೂ ಶೂ ಅಂಗಡಿಯಲ್ಲಿ ಅವರ ವಸ್ತುಗಳನ್ನು ವಾಪಾಸು ಮಾಡಿ, ಪಟ್ಟಣ ಸುತ್ತಲು ಶುರುಮಾಡಿದೆವು. 

ನಮ್ಮ ಚಾಲಕ ರಸ್ತೆ ಬದಿಯಲ್ಲಿನ ಒಂದು ಒರತೆಯಲ್ಲಿ ಬಾಟಲಿಗೆ ನೀರು ತುಂಬಿಸಿಕೊಳ್ಳಲು ಹೊರಟ. ಕುತೂಹಲ ಉಂಟಾಗಿ ನಾವೂ ಹೊರಟೆವು. ಅದರ ಹೆಸರು ನೆಹರೂ ಕುಂಡವಂತೆ. ಸ್ಪಟಿಕ ಶುಭ್ರ ನೀರು, ಎಲ್ಲಿಂದ ಬರುತ್ತಿತ್ತೋ ಗೊತ್ತಿಲ್ಲ. ತಣ್ಣಗೆ, ಬಹಳ ರುಚಿಯಾಗಿತ್ತು. ಹಲವು ಜನರು ಅದರಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದರು. ಅಲ್ಲಿಂದ ವಶಿಷ್ಠ ದೇವಸ್ಥಾನಕ್ಕೆ ಹೋದೆವು. ವಶಿಷ್ಠ ಎಂಬುದು ಹಳ್ಳಿಯ ಹೆಸರೂ ಹೌದು. ಇದು ಮನಾಲಿಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ. ಹಿಂದೂ ಪುರಾಣದಲ್ಲಿ ಬರುವ ಸಪ್ತರ್ಷಿಗಳಲ್ಲಿ ಒಂದಾದ ವಶಿಷ್ಠ ಋಷಿ ಇಲ್ಲಿ ಕೆಲಕಾಲ ಇದ್ದರಂತೆ. ಆದ್ದರಿಂದ ಹಳ್ಳಿಗೂ ಆ ಹೆಸರು ಬಂತು, ವಶಿಷ್ಠರ ಹೆಸರಿನಲ್ಲಿ ಒಂದು ದೇವಾಲಯವೂ ನಿರ್ಮಾಣವಾಯಿತು. ಪಕ್ಕದಲ್ಲೇ ರಾಮನ ಹಾಗೂ ಶಿವನ ದೇವಾಲಯವೂ ಇದೆ. ವಶಿಷ್ಠರ ಬಳಕೆಗಾಗಿ ಲಕ್ಷ್ಮಣ ಬಾಣ ಹೊಡೆದು ಬಿಸಿ ನೀರು ತರಿಸಿದನೆಂದು ಜನರು ನಂಬುತ್ತಾರೆ. ಇಂದಿಗೂ ದೇವಾಲಯದ ಪಕ್ಕ ಬಿಸಿ ನೀರಿನ ಬುಗ್ಗೆಯಿದೆ. ದೇವಾಲಯ ಸುಮಾರು ನಾಲ್ಕು ಸಾವಿರ ವರುಷ ಹಳೆಯದೆಂದು ಜನರು ಹೇಳುತ್ತಾರೆ. ಉತ್ತರ ಭಾರತದ ದೇವರುಗಳು, ದಕ್ಷಿಣದಷ್ಟು ಮಡಿ-ಮೈಲಿಗೆ ಆಚರಿಸುವುದಿಲ್ಲ. ದೇವರ ಮೂರ್ತಿಗಳು ಸಹ ಇಲ್ಲಿನಷ್ಟು ಎತ್ತರ ಅಥವಾ ಸೂಕ್ಷ್ಮ ಕೆತ್ತನೆಗಳಲ್ಲ. ಎಷ್ಟೋ ಕಡೆ ಮೂರ್ತಿಯೇ ಇರುವುದಿಲ್ಲ. ಮೂರ್ತಿಯ ಆಕಾರದ ಕಲ್ಲಿಗೋ, ರೇಷ್ಮೆ ಬಟ್ಟೆ ಸುತ್ತಿದ ಫೋಟೋಗೋ ಪೂಜೆ ಮಾಡುತ್ತಾರೆ. ಪೂಜೆಯೂ ನಮ್ಮಲ್ಲಿನಂತೆ ಶಿಸ್ತಿನದಲ್ಲ. ಅಂಗಿ, ಪ್ಯಾಂಟು ಧರಿಸಿಯೇ ಪೂಜೆ ಮಾಡಬಹುದು. ಇಲ್ಲಿನ ಹಾಗೆ ಅಂಗಿ ತೆಗೆದು, ಮಡಿಯುಟ್ಟು ಶಿವನಿಗೆ ಪೂಜೆ ಮಾಡ ಹೊರಟರೆ, ಚಳಿಗೆ ಮುರುಟಿ ಶಿವನ ಪಾದ ಸೇರುವುದು ಖಚಿತ. ಧರ್ಮ, ದೇವರು ಎಲ್ಲವೂ ಆಯಾಯ ಭೌಗೋಳಿಕತೆಗೆ, ಸಂಸ್ಕೃತಿಗೆ ಹೊಂದಿಕೊಂಡಿದೆ. ಇಲ್ಲಿನ ಪದ್ಧತಿಯನ್ನೇ ನೋಡಿ ಬೆಳೆದ ನಮಗೆ ಇದೇ ಸರಿ ಎನಿಸಿ, ಅಲ್ಲಿನ ದೇವಾಲಯಗಳಲ್ಲಿ ಭಾವನೆಗಳು ಉದ್ದೀಪನಗೊಳ್ಳುವುದು ಕಡಿಮೆ. ಆದರೂ ನಾವು ಅಷ್ಟೊಂದು ಮಡಿ-ಮೈಲಿಗೆ ಆಚರಿಸಿ ಪಡೆದದ್ದಾರೂ ಏನು ಅನಿಸುತ್ತದೆ. ಅಲ್ಲಿನ ದೇವರುಗಳು ಜನ ಸಾಮಾನ್ಯರ ಕೈಗೆಟುಕುವ ದೇವರುಗಳು. ಇಲ್ಲಿನ ಹಾಗೆ ಏಳೋ-ಎಂಟೋ ಬಾಗಿಲಿನ ಹಿಂದೆ ಇಷ್ಟೇ ಇಷ್ಟು ದರುಶನ ನೀಡುವ ದೇವರಲ್ಲ. 

ಅಲ್ಲಿಂದ ನಾವು 'ಹಿಡಿಂಬ' ದೇವಸ್ಥಾನ ನೋಡಲು ತೆರಳಿದೆವು. ಮಹಾಭಾರತದಲ್ಲಿ ಬರುವ ಹಿಡಿಂಬೆ ಎಂಬ ರಕ್ಕಸಿಯ ದೇವಸ್ಥಾನವಿದು. ವನವಾಸದ ಸಮಯದಲ್ಲಿ ಭೀಮ ಇಲ್ಲಿಗೆ ಭೇಟಿ ನೀಡಿ, ಹಿಡಿಂಬೆಯನ್ನು ಮದುವೆಯಾಗಿ ಘಟೋದ್ಗಜನಿಗೆ ಜನ್ಮ ನೀಡುತ್ತಾನೆ. ಹಿಡಿಂಬೆಯನ್ನು ಇಲ್ಲಿ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ಸುಮಾರು ಐನೂರು ವರ್ಷ ಹಳೆಯ ದೇವಾಲಯ. ಸಂಪೂರ್ಣವಾಗಿ ಕಟ್ಟಿಗೆಯಲ್ಲಿ ದೇವಸ್ಥಾನದ ನಿರ್ಮಾಣವಾಗಿದೆ. ಇಡೀ ದೇವಸ್ಥಾನ ಒಂದು ಬಂಡೆಯ ಮೇಲೆ ನಿಂತಿದೆ. ಒಳಗೆ ಪೂಜೆ ನಡೆಯುವುದು ಸಹ ಒಂದು ಕಲ್ಲಿಗೆ. ಈ ದೇವಸ್ಥಾನದ ಸ್ವಲ್ಪವೇ ದೂರದಲ್ಲಿ ಘಟೋದ್ಗಜನ ದೇವಸ್ಥಾನವೂ ಇದೆ. ಈ ದೇವಸ್ಥಾನಗಳ ಸುತ್ತ-ಮುತ್ತ ಇರುವ ಕಾಡಿನಲ್ಲಿಯೇ ಪಾಂಡವರು ವನವಾಸದ ಸಮಯದಲ್ಲಿ ತಿರುಗಾಡಿದ್ದರು ಎಂದು ಜನರು ನಂಬುತ್ತಾರೆ. ನವರಾತ್ರಿಯ ಸಮಯದಲ್ಲಿ ಇಲ್ಲಿ ಸಾಕಷ್ಟು ಜನರು ಸೇರುತ್ತಾರಂತೆ. ಉತ್ಸವ, ಮೆರವಣಿಗೆ ಜೋರಾಗಿಯೇ ನಡೆಯುತ್ತದಂತೆ. ಬಂಗಾಳದಲ್ಲಿ ಕಾಳಿ ಪೂಜೆ ನಡೆದರೆ, ಮೈಸೂರಿನಲ್ಲಿ ಚಾಮುಂಡಿ ಪೂಜೆ, ಇಲ್ಲಿ ಹಿಡಿಂಬೆಯ ಮೆರವಣಿಗೆ. ಭೌಗೋಳಿಕವಾಗಿ ಭಾರತ ಸಾವಿರಾರು ಕಿಲೋಮೀಟರ್ ಹಬ್ಬಿದ್ದರೂ ಆಚರಣೆಯ ಹುರುಳು ಒಂದೇ. 

ಈ ದೇವಸ್ಥಾನಗಳಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುವುದರಿಂದ, ಹತ್ತಿರವೇ ಬಹಳಷ್ಟು ಹೋಟೆಲ್, ಅಂಗಡಿಗಳು ತಲೆ ಎತ್ತಿವೆ. ನಮಗೆ ಆ ದಿನ ಹೆಚ್ಚು ಹಸಿವೆಯಾಗಿರಲಿಲ್ಲ. ಬ್ರೆಡ್ಡಿನ ಒಳಗೆ ಚನ್ನಾ ತೂರಿಸಿ ಏನೋ ಸ್ಥಳೀಯ ತಿಂಡಿ ಮಾಡಿದ್ದರು. ಅದನ್ನೇ ತಿಂದೆವು. ಪಾನಿ ಪೂರಿ ಸಹ ಇತ್ತು. ಆದರೆ ಇಲ್ಲಿನ ಸ್ವಾದವಲ್ಲ, ಉಚಿತವಾಗಿ ಪೂರಿಯನ್ನೂ ಇಲ್ಲಿ ಕೊಡುವುದಿಲ್ಲ. ಅಲ್ಲಲ್ಲಿ ಹೀಗೆ ತಿಂದಿದ್ದರಿಂದ ಹಸಿವೆ ಹಾರಿ ಹೋಯಿತು. ವಾಪಾಸು ಮನಾಲಿಯ ಮಾಲ್ ರಸ್ತೆ ತಲುಪಿದೆವು. ಅಲ್ಲಿಯೂ ಹೀಗೆ ಬ್ರೆಡ್ಡು ಅದೂ-ಇದೂ ತಿಂದದ್ದಾಯಿತು. ಪಕ್ಕದಲ್ಲೇ ಇದ್ದ ಭೌದ್ಧ ದೇವಾಲಯಕ್ಕೂ ಭೇಟಿ ನೀಡಿದೆವು. ಮನಾಲಿಯಲ್ಲಿ ಹೆಚ್ಚೇನೂ ನೋಡುವುದು ಉಳಿದಿರಲಿಲ್ಲ. ನಾವು ಹೀಗೆ ತಿರುಗಾಡುತ್ತಾ ಅದಾಗಲೇ ಐದಾರು ದಿನ ಕಳೆದಿತ್ತು. ಬೇಗನೆ ರೂಮು ತಲುಪಿ ವಿಶ್ರಾಂತಿ ಪಡೆಯುವ ಮನಸ್ಸಾಯಿತು. ರೂಮು ತಲುಪಿದ ಮೇಲೆ ನಮಗೆ ಹಿಮ ಹಾಗೂ ಎತ್ತರದ ತೆಳು ಗಾಳಿಯ ಪರಿಣಾಮ ತಿಳಿಯತೊಡಗಿತು. ಹಿಮದಲ್ಲಿ ಗಂಟೆ ಗಟ್ಟಲೆ ಆಟವಾಡಿದ್ದ ನನಗೆ, ಕಿವಿಯ ಮೇಲ್ಭಾಗದಲ್ಲಿ ಆಗಿದ್ದ ಹಳೆಯ ಗಾಯವೊಂದು ಒಡೆದು ರಕ್ತ ಜಿನುಗ ತೊಡಗಿತ್ತು. ಹಿಮದ ತಂಡಿ ಗಾಳಿಗೆ ನಮ್ಮ ಚರ್ಮದ ತೇವಾಂಶ ಬೇಗನೆ ಆರಿ, ಚರ್ಮ ಬಿರುಕು ಬಿಡುತ್ತದೆ. ಚರ್ಮದ ತೇವಾಂಶ ಹಲವು ಸೂಕ್ಷ್ಮ ಜೀವಿಗಳು ನಮ್ಮ ಚರ್ಮವನ್ನು ಹೊಕ್ಕು ಹಾಳುಮಾಡುವುದನ್ನು ತಡೆಗಟ್ಟುತ್ತದೆ. ಈ ರೀತಿ ತೇವಾಂಶ ಆರಿ ಹೋಗುವುದರಿಂದ ಚರ್ಮದ ಬಲ ಕುಗ್ಗಿ ಸೂಕ್ಷ್ಮ ಜೀವಿಗಳು ಸುಲಭವಾಗಿ ಒಳಹೊಕ್ಕು ಸೋಂಕು ಉಂಟು ಮಾಡುತ್ತದೆ ಅಥವಾ ಹಳೆ ಗಾಯಗಳು ಮತ್ತೆ ತೆರೆದುಕೊಳ್ಳುತ್ತವೆ. ಇದರ ಜೊತೆಗೆ ಸಣ್ಣಗೆ ತಲೆನೋವು ಸಹ ಶುರುವಾಗುತ್ತದೆ. ಗಾಳಿಯಲ್ಲಿ ಆಮ್ಲಜನಕ ಕಡಿಮೆ ಇರುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಹಸಿವೆ ಕಡಿಮೆಯಾಗಿ ಸುಸ್ತು ಆವರಿಸುತ್ತದೆ. ವಾಂತಿಯೂ ಆಗುವುದುಂಟು. ನನ್ನ ಸ್ನೇಹಿತನಿಗೆ ವಾಂತಿ ಶುರುವಾಯಿತು. ಇದು ಅಪಾಯಕಾರಿ ಕೂಡ. ದೇಹದಲ್ಲಿ ನೀರು, ಖನಿಜಗಳು ವಾಂತಿಯಿಂದ ನಷ್ಟವಾಗುತ್ತದೆ. ಮತ್ತು ಆ ಎತ್ತರದಲ್ಲಿ ಇದು ಇನ್ನಷ್ಟು ಆಪಾಯ ತಂದೊಡ್ಡಬಹುದು. 

ನಮ್ಮನ್ನು ರೂಮು ಸೇರಿಸಿ ಚಾಲಕ ಅದಾಗಲೇ ತನ್ನ ಸ್ನೇಹಿತನ ಮನೆ ಸೇರಿದ್ದ. ಆತನಿಗೆ ಫೋನಾಯಿಸಿ ಮತ್ತೆ ಕರೆಸಿಕೊಂಡು ವೈದ್ಯರ ಬಳಿ ಕರೆದುಕೊಂಡು ಹೋಗಬೇಕೆಂದು ಸೂಚಿಸಿದೆವು. ಸ್ಥಳೀಯರಿಗೆ ಇದು ಹೊಸದಲ್ಲ. ಅವರಿಗೆ ಇದು ಒಂದು ತಲೆಗೆ ಹಚ್ಚಿಕೊಳ್ಳುವ ಸಮಸ್ಯೆಯೂ ಅಲ್ಲ. ಸುತ್ತ-ಮುತ್ತ ಇರುವ ಅಂಗಡಿಯಲ್ಲಿ ಏನಾದರೂ ಮಾತ್ರೆ ಸಿಗಬಹುದೇ ಎಂದು ವಿಚಾರಿಸಿದೆವು. ಅಂಗಡಿಯವರು ಇದ್ಯಾವ ಮಹಾ ತೊಂದರೆಯೇನೂ ಅಲ್ಲ, ನಿಂಬೆ ಹಣ್ಣಿನ ಪಾನಕ ಕುಡಿದು ಮಲಗಿ ಎಂದು ಸಲಹೆ ನೀಡಿದರು. ಗೊತ್ತು ಗುರಿ ಇಲ್ಲದ ದೂರದ ಊರು, ಕಷ್ಟದ ಹವಾಮಾನ ಬೇರೆ, ನಮಗೆ ಭಯವಾಗಿತ್ತು. ಅಷ್ಟರಲ್ಲಿ ನಮ್ಮ ಚಾಲಕ ವಾಪಾಸು ಬಂದ. ಆತನ ಕಾರಿನಲ್ಲಿ ಸದಾ ಪ್ರಥಮ ಚಿಕಿತ್ಸೆಯ ಡಬ್ಬಿ ಇರುತ್ತದಂತೆ. ಅದರಿಂದ ಒಂದೆರಡು ಮಾತ್ರೆ ತೆಗೆದುಕೊಟ್ಟ. ಕಡಿಮೆಯಾಗಲಿಲ್ಲವೆಂದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದ. ನಮಗೆ ಒಂದಿಷ್ಟು ಧೈರ್ಯ ಬಂತು. ಅದೃಷ್ಟವಶಾತ್ ನಮಗೆ ಹೆಚ್ಚೇನೂ ಸಮಸ್ಯೆ ಎದುರಾಗಲಿಲ್ಲ. ಪರ್ವತ, ಹಿಮದ ಮೌನ ಸೌಂದರ್ಯದ ಹಿಂದಿರುವ ಅಪಾಯ ನಮಗೆ ಸ್ವಲ್ಪ ಮಟ್ಟಿಗೆ ಅರ್ಥವಾಯಿತು. ತಕ್ಕ ಮಟ್ಟಿಗೆ ಜೀವನ ಮಾಡಬಹುದಾದ ಹವಾಮಾನವಿರುವ ಇಲ್ಲಿಯೇ ಈ ಕಥೆಯಾದರೆ, ಜಗತ್ತಿನ ಅತೀ ಶೀತಲ ಪ್ರದೇಶವಾಗಿರುವ ಸೈಬೀರಿಯಾದಂತಹ ಪ್ರದೇಶದಲ್ಲಿ ಜನ ಹೇಗೆ ವಾಸಮಾಡುತ್ತಿರಬಹುದು? ಕೃಷಿ ಮಾಡಲು ಸಹ ಒಂದು ಹಿಡಿ ಮಣ್ಣು ಸಿಗದ ಜಾಗವದು. ಹೊಟ್ಟೆ ಪಾಡಿಗೆ ಭೇಟೆಯಾಡಿಕೊಂಡು ಊಟಕ್ಕೆ ಕೇವಲ ಸಪ್ಪೆ ಮಾಂಸ ತಿನ್ನುತ್ತಾ ಬದುಕಬೇಕು. ಈ ಕಷ್ಟಗಳು ನಗರಗಳಲ್ಲಿ ವಾಸ ಮಾಡುವ ನಮ್ಮಂತವರಿಗೆ ಅರ್ಥವಾಗುವುದು ಕಷ್ಟ. ಸಣ್ಣ ಸಣ್ಣ ವಿಷಯಗಳಿಗೆ ತಗಾದೆ ತೆಗೆಯುವ ನಮ್ಮ ಮನೆಗಳಲ್ಲಿ ನಲ್ಲಿ ತಿರುಗಿಸಿದರೆ ನೀರು ಬರುತ್ತದೆ, ಮೊಬೈಲು ತೆಗೆದರೆ ಹಣ್ಣು ತರಕಾರಿ ತಂದು ಮನೆ ಬಾಗಿಲಿಗೆ ಕೊಟ್ಟು ಹೋಗುತ್ತಾರೆ. ಶೀತಲ ಪ್ರದೇಶದ ಜೀವನ ಸುಲಭವಲ್ಲ. ಪರ್ವತಗಳ ಮೇಲಿನ ಜೀವನ ಸುಲಭವಲ್ಲ. ಕಣಿವೆಗಳಿಂದ ದಿನವೂ ಅಗತ್ಯ ವಸ್ತುಗಳನ್ನು, ನೀರನ್ನು ಸಹ ಹೊರಬೇಕು. ಸೂರ್ಯ ಕಣ್ಣು ಬಿಟ್ಟಾಗ ಕೃಷಿ ಮಾಡಿ, ಕಟ್ಟಿಗೆ ಹಾಗೂ ಮೇವು ಸಂಗ್ರಹಿಸಿಟ್ಟುಕೊಳ್ಳಬೇಕು. ಎಲ್ಲಾ ಕೆಲಸಗಳನ್ನು ಮುಗಿಸಿ ಚಳಿಗಾಲ ಬರುವುದರೊಳಗೆ ಮನೆ ಸೇರಿಕೊಳ್ಳಬೇಕು. ಚಳಿಗಾಲ ಬಂತೆಂದರೆ ಮುಗಿಯಿತು, ಎಲ್ಲವೂ ಸ್ಥಬ್ಧ!

ಪಾರ್ವತಿ ಕಣಿವೆ 

ನಮ್ಮ ಚಾಲಕ ಕೊಟ್ಟ ಮಾತ್ರೆಯಿಂದಾಗಿ ನಮ್ಮ ಆರೋಗ್ಯ ಸುಧಾರಿಸಿ ಮುಂದಿನ ಪ್ರಯಾಣ ಸುಗಮವಾಯಿತು. ಮನಾಲಿಯ ಹೋಟೆಲು ಖಾಲಿ ಮಾಡಿ, ಪಾರ್ವತಿ ನದಿ ಕಣಿವೆಯ ಒಂದು ಊರಾದ 'ಕಾಸೋಲ್' ಗೆ ನಾವು ಪ್ರಯಾಣ ಬೆಳೆಸಿದೆವು. ಮನಾಲಿಯಿಂದ ಕಾಸೋಲ್ ಹೆಚ್ಚು ದೂರವಿಲ್ಲ. ಎರಡು ತಾಸಿನ ಪ್ರಯಾಣವಷ್ಟೇ. ರಸ್ತೆಯ ಪಕ್ಕವೇ ಪ್ರಪಾತದಲ್ಲಿ ಪಾರ್ವತಿ ನದಿ ಹರಿಯುತ್ತಿರುತ್ತದೆ. ಈ ನದಿ ಗುಂಟವೇ ಐವತ್ತು ಕಿಲೋಮೀಟರು ಸಾಗಿದರೆ ಕಾಸೋಲ್ ತಲುಪಬಹುದು. 

ಕಾಸೋಲ್ ಯುವ ಜನರ ಪ್ರಿಯ ಸ್ಥಳ. ಅತೀ ಹೆಚ್ಚಿನ ಸಂಖ್ಯೆಯ ಇಸ್ರೇಲಿ ಪ್ರವಾಸಿಗರು ಇಲ್ಲಿ ಸಿಗುವುದರಿಂದ ಇದನ್ನು 'ಮಿನಿ ಇಸ್ರೇಲ್' ಎಂದು ಸಹ ಕರೆಯಲಾಗುತ್ತದೆ. 'ಹಿಪ್ಪಿ' ಸಂಸ್ಕೃತಿ ಇಲ್ಲಿ ಹೆಚ್ಚಾಗಿ ಹಬ್ಬಿರುವುದರಿಂದ ಎಲ್ಲಾ ಹೊಟೇಲುಗಳಲ್ಲಿ ಮದ್ಯ, ಹುಕ್ಕಾ ಸರ್ವೇ ಸಾಮಾನ್ಯ. ಈಗೀಗ ಮಾದಕ ವಸ್ತುಗಳೂ ಸೇರಿಕೊಂಡಿರುವುದರಿಂದ ಹೆಚ್ಚೆಚ್ಚು ಯುವ ಜನರನ್ನು ಕಾಸೋಲ್ ಆಕರ್ಷಿಸುತ್ತಿದೆ. ದಿಲ್ಲಿಯಿಂದ ನೇರ ಬಸ್ ಸಂಪರ್ಕವೂ ಇಲ್ಲಿಗಿದೆ. ಎರಡು ಮೂರು ದಿನ ಚಾರಣ ಮಾಡುವ ಶಕ್ತಿಯಿದ್ದರೆ 'ಖೀರ್ ಗಂಗಾ' ಚಾರಣ ಮಾಡಬಹುದು. ಪಾರ್ವತಿ ನದಿಯ ಹರಿವಿನಲ್ಲೇ ಸಾಗುವ ಈ ಚಾರಣ ಹಲವು ಹಳ್ಳಿಗಳ ಮೂಲಕ ಹಾದು ಹೋಗುತ್ತದಂತೆ. ಈ ಯಾವ ಹಳ್ಳಿಗಳಿಗೂ ರಸ್ತೆಯಿಲ್ಲ. ಕಾಸೋಲಿನ ನಿಜವಾದ ಸಂಸ್ಕೃತಿ ಬಹುಶಃ ಇಂತಹ ಹಳ್ಳಿಗಳಲ್ಲಿ ಮಾತ್ರ ಸಿಗಬಹುದೇನೋ. ನಾವು ಕೇವಲ ಕಾಸೋಲ್ ನೋಡಿ ಇಲ್ಲಿನ ಸಂಸ್ಕೃತಿ ಹೀಗೆ ಎಂದು ಅಳೆಯುವುದು ತಪ್ಪು. ನಮ್ಮ ಜನರ ಚಟಗಳಿಗೆ ತಕ್ಕಂತೆ, ಅದನ್ನೇ ಬಂಡವಾಳ ಮಾಡಿಕೊಂಡು ಹಲವು ಹೋಟೆಲುಗಳು ಅಲ್ಲಿ ತಲೆ ಎತ್ತಿವೆ. ಈ ಹೋಟೆಲುಗಳು ಅಲ್ಲಿನ ಸ್ಥಳೀಯರದ್ದೇ ಹೌದೋ ಅಲ್ಲವೋ ಎಂಬುದೇ  ಅನುಮಾನ. ಬೆಂಗಳೂರಿನಲ್ಲಿ ಕೋರಮಂಗಲಕ್ಕೂ, ನೆಲಮಂಗಲಕ್ಕೂ ಇರುವ ಸಂಸ್ಕೃತಿ ವ್ಯತ್ಯಾಸವೇ ಈ ಕಾಸೋಲಿಗು ಹಾಗೂ ಪಾರ್ವತಿ ಕಣಿವೆಯ ಇತರ ಹಳ್ಳಿಗಳಿಗೂ ಇವೆ. ಆದರೆ ಈ ವಿಪರೀತದ ಪ್ರವಾಸೋದ್ಯಮ ಈ ಹಳ್ಳಿಯ ಜನರ ಬದುಕು ಹಾಗೂ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವುದಂತೂ ನಿಜ. ಪ್ರವಾಸಿಗರಿಗಾಗಿ ಬಿಕರಿಯಾಗುವ ಮಾದಕ ವಸ್ತುಗಳು ಇಲ್ಲಿನ ಮಕ್ಕಳಿಗೂ ಸುಲಭವಾಗಿ ಸಿಗುತ್ತದೆ. ಅಥವಾ ಸುಲಭಕ್ಕೆ ಸಿಗುವ ಹಣಕ್ಕೆ ಮರುಳಾಗಿ ಇಲ್ಲಿನ ಜನ ಇದೇ ವೃತ್ತಿಗೆ ಇಳಿದಿರಲೂ ಸಾಕು. ಇಂತಹ ಹಣದಿಂದ ಕಟ್ಟಿದ ಸಮಾಜ ಎಂದಿಗೂ ಸ್ವಾಸ್ಥ್ಯವಾಗಿ ಇರಲಾರದು. 

ಕಾಸೋಲ್ ನಲ್ಲಿ ಕೇವಲ ಮಾದಕ ವಸ್ತುಗಳನ್ನು ಮಾರುವ ಹೋಟೆಲುಗಳು ಅಷ್ಟೇ ಅಲ್ಲ, ಇಲ್ಲಿ ಸಿಖ್ಖರ ಪವಿತ್ರ ಸ್ಥಳ 'ಗುರುದ್ವಾರ ಸಾಹಿಬ್' ಇದೆ. ಸಾವಿರಾರು ಸಂಖ್ಯೆಯ ಭಕ್ತರು ಪಂಜಾಬಿನಿಂದ ಕಾಸೊಲಿಗೆ ಸಣ್ಣ ಸಣ್ಣ ಬೈಕುಗಳಲ್ಲಿ ಧಾವಿಸುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳು ಇದ್ದಾಗಲಂತೂ ಕಾಸೋಲ್ ಸಿಖ್ಖರಿಂದ ತುಂಬಿ ತುಳುಕುತ್ತಿರುತ್ತದೆ. ಗುರು ನಾನಕರು ಇಲ್ಲಿ ಬಂದಾಗ ಜನರು ಗೋಧಿ ಹಿಟ್ಟು ದಾನ ಮಾಡಿದ್ದರಂತೆ. ಆದರೆ ರೊಟ್ಟಿ ಸುಡಲು ಬೆಂಕಿ ಸಿಗದೇ ಅವರ ಶಿಷ್ಯರು ಪರದಾಡುತ್ತಿದ್ದಾಗ ಗುರು ನಾನಕರು ಅಲ್ಲಿ ಬಿಸಿ ನೀರಿನ ಬುಗ್ಗೆ ಸೃಷ್ಟಿಸಿದರಂತೆ. ಇವತ್ತಿಗೂ ಇಲ್ಲಿನ ಲಂಗರಿನಲ್ಲಿ ಬಂದ ಎಲ್ಲಾ ಭಕ್ತರಿಗೂ ಜಾತಿ, ಧರ್ಮ ನೋಡದೆ ರೊಟ್ಟಿ ನೀಡಲಾಗುತ್ತದೆ. 

ಹಿಂದೂಗಳಿಗೂ ಇದು ಪವಿತ್ರ ಸ್ಥಾನ. ಮನು ಇಲ್ಲಿಯೇ ಮನುಷ್ಯರನ್ನು ಸೃಷ್ಟಿಸಿದನೆಂದು ಜನರು ನಂಬುತ್ತಾರೆ. ಶಿವ ಹಾಗೂ ಪಾರ್ವತಿ ಸಂಚಾರ ಮಾಡುತ್ತಿದ್ದಾಗ, ಪಾರ್ವತಿಯ ಆಭರಣ ಇಲ್ಲಿ ಬಿದ್ದಿತಂತೆ. ಅವನ್ನು ಶೇಷನಾಗ ಪಾತಾಳ ಲೋಕದಲ್ಲಿ ಬಚ್ಚಿಟ್ಟನಂತೆ. ನಂತರ ಶಿವ ಬಂದು ತಾಂಡವ ನೃತ್ಯ ಮಾಡಿದಾಗ ನಾಗ ಹೆದರಿ ಪಾರ್ವತಿ ನದಿಯಲ್ಲಿ ಮಣಿಯನ್ನು ವಾಪಾಸು ತೇಲಿಸಿದನಂತೆ. ಅದಕ್ಕೆ ಈ ಜಾಗಕ್ಕೆ 'ಮಣಿಕರಣ್' ಎಂಬ ಹೆಸರು ಬಂತು. ಬಿಸಿ ನೀರಿನ ಬುಗ್ಗೆಯನ್ನು ಹಿಂದೂಗಳು ಶಿವ ಹಾಗೂ ನಾಗನಿಗೆ ಹೋಲಿಸಿ ಕಥೆ ಹೇಳುತ್ತಾರೆ ಅದೇ ಬುಗ್ಗೆಯನ್ನು ಸಿಖ್ಖರು ಗುರು ನಾನಕರಿಗೆ ಹೋಲಿಸಿ ಕಥೆ ಹೇಳುತ್ತಾರೆ. ವಿಜ್ಞಾನ ಮಾತ್ರ ಇದಕ್ಕೆ ನಿಖರ ಕಾರಣ ನೀಡುತ್ತದೆ. ಭಾರತ ಉಪಖಂಡ ಏಷ್ಯಾ ಖಂಡಕ್ಕೆ ಸದಾ ಡಿಕ್ಕಿ ಹೊಡೆದು ತಿಕ್ಕಾಟ ನಡೆಸುತ್ತಲೇ ಇರುತ್ತದೆ. ಇದರಿಂದ ಉತ್ಪತ್ತಿಯಾಗುವ ಶಾಖಾದಿಂದ ನೀರು ಬಿಸಿಯಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಭೂಕಂಪಗಳೂ ಹೆಚ್ಚು. ಇದೇ ಕಾರಣಕ್ಕೆ ಟಿಬೆಟ್, ನೇಪಾಳದಿಂದ ಹಿಡಿದು ನಮ್ಮ ದಿಲ್ಲಿಯವರೆಗೆ ಆಗಾಗ ಭೂಮಿ ಕಂಪಿಸುತ್ತಲೇ ಇರುತ್ತದೆ. ನಮ್ಮ ಭೂಮಿಯ ರುದ್ರ ರೂಪವನ್ನು ನೆನಪಿಸಿಕೊಳ್ಳುತ್ತಲೇ ನಾನು ಗುರುದ್ವಾರದ ಒಳಗೆ ಹೋದೆ. ತಲೆಗೆ ಬಟ್ಟೆ ಕಟ್ಟಿಕೊಂಡೇ ಒಳಗೆ ಸಾಗಬೇಕು. ನಮ್ಮ ಬಳಿ ಅಂತಹ ಬಟ್ಟೆಯಿಲ್ಲದಿದ್ದರೆ ಉಚಿತವಾಗಿ ಅವರೇ ಬಟ್ಟೆ ನೀಡುತ್ತಾರೆ. ವಾಪಾಸು ಅದೇ ಜಾಗದಲ್ಲಿ ಮರಳಿ ಕೊಡುವ ಜವಾಬ್ದಾರಿ ನಮ್ಮದೇ. ಅದನ್ನು ಕಾಯಲು ಅಲ್ಲಿ ಯಾವ ಜನರೂ ಇರುವುದಿಲ್ಲ. ಧಾರ್ಮಿಕ ಕ್ಷೇತ್ರಗಳಲ್ಲಿ ಪಾರಮಾರ್ಥಿಕ ಭಯದಿಂದ ಹುಟ್ಟುವ ನಾಗರೀಕ ಪ್ರಜ್ಞೆ ಸದಾ ನಮ್ಮ ಮನಸ್ಸಿನಲ್ಲಿ ಉಳಿದಿದ್ದರೆ ಒಂದು ದೇಶವಾಗಿ ನಾವು ಬಹಳ ಮುಂದೆ ಹೋಗಬಹುದಿತ್ತು. 

ಗುರುದ್ವಾರದ ಒಳಗೆ ತೀರ್ಥಸ್ನಾನ ಮಾಡುವ ಅವಕಾಶವೂ ಇದೆ. ಗುರುದ್ವಾರದ ಪಕ್ಕದಲ್ಲಿಯೇ ಹಿಂದೂ ದೇವಾಲಯಗಳಿವೆ. ಒಂದೇ ನೀರಿನ ಬುಗ್ಗೆಯಿಂದ ನೀರು ಹರಿದು ದೇವಾಲಯ ಹಾಗೂ ಗುರುದ್ವಾರ ತಲುಪುತ್ತದೆ. ಇಲ್ಲಿನ ನೀರು ಎಷ್ಟು ಬಿಸಿ ಇರುತ್ತದೆಂದರೆ ಅಕ್ಕಿಯನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಇಳಿಬಿಟ್ಟರೆ ಎರಡು ಮೂರು ನಿಮಿಷದಲ್ಲಿ ಅನ್ನವಾಗುತ್ತದೆ. ಹಿಂದೂಗಳು ಇದನ್ನು ಶಿವನಿಗೆ ನೈವೇದ್ಯ ಒಪ್ಪಿಸಿ ಅನ್ನವನ್ನು ಪ್ರಸಾದವಾಗಿ ಸೇವನೆ ಮಾಡುತ್ತಾರೆ. 

ಕಾಸೋಲಿನಲ್ಲಿ ನಾವು ಟೆಂಟಿನಲ್ಲಿ ತಂಗಿದ್ದೆವು. ಇಲ್ಲಿ ಬಹುಶಃ ಹೋಟೆಲುಗಳು ಕಡಿಮೆ. ರಸ್ತೆಯಿಂದ ಕೆಲ ಅಡಿಗಳ ಮೇಲೆಯೇ ಈ ರೀತಿಯ ಹಲವಾರು ಟೆಂಟುಗಳು ಕಾಣಸಿಗುತ್ತವೆ. ಕೆಲವು ಟೆಂಟುಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತವೆ. ಇವಕ್ಕೆ ಪ್ರತ್ಯೇಕ ಬಚ್ಚಲು ಮನೆಯ ಸೌಲಭ್ಯವಿರುವುದಿಲ್ಲ. ಹತ್ತು ಹದಿನೈದು ಟೆಂಟುಗಳಿಗೆ ಎರಡೋ ಮೂರೋ ಬಚ್ಚಲು ಮನೆ ಕಟ್ಟಿರುತ್ತಾರೆ. ಇವೆಲ್ಲಕ್ಕೂ ಸೇರಿ ಒಂದು ಅಡಿಗೆ ಮನೆಯಿರುತ್ತದೆ. ಬೆಳಗಿನ ತಿಂಡಿ ಹಾಗೂ ರಾತ್ರಿಯ ಊಟ ಮಾತ್ರ ಇಲ್ಲಿ ಸಿಗುತ್ತದೆ. ಮಧ್ಯಾನ್ಹದ ಊಟ ಹಾಗೂ ಸಂಜೆಯ ಉಪಹಾರಕ್ಕೆ ನಾವು ಬೇರೆ ಹೋಟೆಲಿಗೆ ಹೋದೆವು. ಪಾರ್ವತಿ ನದಿಯ ಪಕ್ಕದಲ್ಲೇ ಇರುವ ಈ ಹೋಟೆಲುಗಳು ಅತ್ಯದ್ಭುತ ಅನುಭೂತಿ ನೀಡುತ್ತದೆ. ನಾವು ಹೋಗಿದ್ದ ಸಮಯ ಸಿಖ್ಖರ ಪವಿತ್ರ ಯಾತ್ರೆಯ ತಿಂಗಳು ಆಗಿದ್ದರಿಂದ ಬಹುತೇಕ ಎಲ್ಲವೂ ಜನರಿಂದ ತುಂಬಿ ತುಳುಕುತ್ತಿತ್ತು. 

ಕಾಸೋಲ್ ಪಟ್ಟಣವನ್ನು ಸುತ್ತಿ ರಾತ್ರಿ ನಾವು ನಮ್ಮ ಟೆಂಟಿಗೆ ವಾಪಾಸಾದೆವು. ಕೆಲ ಪಂಜಾಬಿ ಪ್ರವಾಸಿಗರು ಅದಾಗಲೇ ಮೋಜು ಮಸ್ತಿ ಶುರುವಿಟ್ಟುಕೊಂಡಿದ್ದರು. ದೊಡ್ಡ ದೊಡ್ಡ ಸ್ಪೀಕರುಗಳಲ್ಲಿ ಕರ್ಕಶವಾಗಿ ಪಂಜಾಬಿ ಹಾಡುಗಳನ್ನು ಹಾಕುತ್ತಿದ್ದರು. ಬೆಂಕಿ ಹಾಕಿ ಸುತ್ತಲೂ ಕಥೆ ಕೊಚ್ಚುತ್ತಾ, ಬೊಬ್ಬೆ ಹೊಡೆಯುತ್ತಾ ಕೂತಿದ್ದರು. ಅವರ ವರ್ತನೆಯಂತೂ ಇನ್ನೆಂದೂ ನಾನು ಪಂಜಾಬಿ ಹಾಡುಗಳನ್ನು ಕೇಳದ ಹಾಗೆ ಮಾಡಿದೆ. ವಾರಗಟ್ಟಲೇ ಮಾಡಿದ ಪ್ರವಾಸದಿಂದ ನಮಗೆ ನಿದ್ದೆ ಹತ್ತಿತೋ ಗೊತ್ತಿಲ್ಲ. ಸುತ್ತ ಗೋಡೆಗಳಿಲ್ಲದ ಕಾರಣ ಟೆಂಟಿನಲ್ಲಿ ಚಳಿ ಜೋರಾಗಿಯೇ ಹೊಡೆಯುತ್ತದೆ. ದಪ್ಪನೆ ಹೊದಿಕೆ ಹೊದ್ದಿದ್ದರಿಂದ ಒಳ್ಳೆಯ ನಿದ್ದೆ ಹತ್ತಿತು. 

ಬಾರದ ಮನ 

ನಾವು ಇನ್ನು ಯಾವುದೇ ಸ್ಥಳಗಳನ್ನು ನೋಡುವುದು ಬಾಕಿಯಿರಲಿಲ್ಲ. ಕಾಸೋಲಿನಿಂದ ಚಂಡೀಗಢ ತಲುಪಿ ಅಲ್ಲಿಂದ ಬೆಂಗಳೂರಿಗೆ ವಿಮಾನ ಹಿಡಿಯಬೇಕಾಗಿತ್ತು. ಕಾಸೋಲ್ ನಿಂದ ಚಂಡೀಗಢ ಸುಮಾರು ಹನ್ನೆರಡು ತಾಸಿನ ಪ್ರಯಾಣ. ಹೋಗುವಾಗ ಪ್ರಯಾಣ ಹೇಗಿತ್ತೋ ಈಗ ಅದರ ತದ್ವಿರುದ್ಧ ಅನುಭವ. ಚಳಿಯಿಂದ ಕೂಡಿದ ಕಿರಿದಾದ ಪರ್ವತದ ರಸ್ತೆಯಲ್ಲಿ ಮೊದಲು ಪ್ರಯಾಣ ಮಾಡಿ, ದಿಲ್ಲಿ-ಮನಾಲಿ ಹೈವೇ ತಲುಪಬೇಕು. ಹೈವೇ ಸಹ ಹಿಮಾಚಲದಲ್ಲಿ ತಕ್ಕ ಮಟ್ಟಿಗೆ ಕಿರಿದಾಗೇ ಇದೆ. ಅರ್ಧ ಸಿದ್ಧವಾಗಿರುವ ಸುರಂಗಗಳನ್ನು ಹಾದು ನಿಧಾನವಾಗಿ ಪಂಜಾಬಿನ ವಿಶಾಲ ಕೃಷಿ ಭೂಮಿಗೆ ಪ್ರವೇಶ ಪಡೆಯಬೇಕು. ಬರುವ ದಾರಿಯಲ್ಲಿ ಖೀರತ್ಪುರದ ಮೇಳ ನಡೆಯುತಿತ್ತು. ಇದು ಪಂಜಾಬಿನ ಪ್ರಸಿದ್ಧ ಮೇಳಗಳಲ್ಲಿ ಒಂದಾಗಿದೆ. ಒಳಗೆ ಹೋಗಲು ಸಾಧ್ಯವಾಗಲಿಲ್ಲ, ಆದರೆ ದೂರದಿಂದಲೇ ನೋಡುವ ಅವಕಾಶ ಸಿಕ್ಕಿತ್ತು. ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ಹೊರಟು ರಾತ್ರಿ ಸುಮಾರು ಎಂಟು ಗಂಟೆಗೆ ಚಂಡೀಗಢ ತಲುಪಿದೆವು. ನಮ್ಮ ವಿಮಾನ ಮರುದಿನ ಬೆಳಿಗ್ಗೆ ಆರು ಗಂಟೆಗೆ ಇತ್ತು. ರಾತ್ರಿಯನ್ನು ವಿಮಾನ ನಿಲ್ದಾಣದ ಲಾಂಜಿನಲ್ಲಿಯೇ ಕಳೆಯಬಹುದೆಂದು ನಾವು ಯೋಚಿಸಿದ್ದೆವು. ಚಾಲಕನಿಗೆ ವಿದಾಯ ಹೇಳಿ ನಮ್ಮ ಬ್ಯಾಗುಗಳನ್ನು ಇಳಿಸಿಕೊಂಡು ಕೈಯಲ್ಲಿ ಟಿಕೇಟು ಹಿಡಿದು ವಿಮಾನ ನಿಲ್ದಾಣದ ತಪಾಸಣೆ ಕೌಂಟರಿನ ಬಳಿ ಹೋದೆವು. ಸಾಮಾನ್ಯವಾಗಿ ಬೆಂಗಳೂರಿನಂತಹ ವಿಮಾನ ನಿಲ್ದಾಣದಲ್ಲಿ ಇಪ್ಪತ್ನಾಲ್ಕು ಗಂಟೆಗಳ ಮುಂಚಿಂತವಾಗಿಯೇ ಒಳಗೆ ಪ್ರವೇಶ ನೀಡುತ್ತಾರೆ. ಆದರೆ ಇಲ್ಲಿ ನಮಗೆ ಪ್ರವೇಶವನ್ನು ನೀಡಲಿಲ್ಲ ಅಲ್ಲಿಯೇ ಅರ್ಧ ಗಂಟೆಗಳ ಕಾಲ ಹಿಂದೆ ಮುಂದೆ ಓಡಾಡಿದೆವು. ಚಿಟ್ಟೆಗಳಂತ ಸೊಳ್ಳೆಗಳಿಂದ ಕಚ್ಚಿಸಿಕೊಂಡೆವು. ಪಕ್ಕದಲ್ಲೇ ವಾಯುನೆಲೆ ಇರುವ ಕಾರಣ ಅಲ್ಲಿಯೇ ಉಳಿಯುವುದು ಕಷ್ಟವಾಗಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ನಿಲ್ದಾಣವನ್ನು ಮುಚ್ಚಿ ಬೀಗ ಹಾಕಿಕೊಂಡು ಹೋಗುವ ಸರ್ವ ಲಕ್ಷಣಗಳೂ ನಮಗೆ ಕಾಣಿಸತೊಡಗಿತು. 

ತಕ್ಷಣವೇ ಸಿಕ್ಕ ಟ್ಯಾಕ್ಸಿಯನ್ನು ಹಿಡಿದು, ಪಕ್ಕದಲ್ಲೇ ಇದ್ದ ಹೋಟೆಲ್ ಒಂದನ್ನು ಹೊಕ್ಕೆವು. ಈ ರೀತಿಯ ಜನರನ್ನು ನೋಡಿದ್ದ ಅವರು ನಮಗೆ ರೂಮಿನ ಬದಲು ಡಾರ್ಮ್ ಗಳನ್ನು ನೀಡಿದರು. ಅದು ನಮಗೆ ಸಾಕಾಗಿತ್ತು. ಕೆಲ ಗಂಟೆಗಳಷ್ಟೇ ಅಲ್ಲಿ ಮಲಗಿ, ಬೆಳಿಗ್ಗೆ ಬೇಗನೆ ಎದ್ದು ಬೆಂಗಳೂರಿನ ವಿಮಾನ ಹಿಡಿದೆವು. ಎಂದಿನಂತೆ ಬೆಂಗಳೂರು ನಮ್ಮನ್ನು ಕೈ ಬೀಸಿ ಸ್ವಾಗತ ಮಾಡುತಿತ್ತು. 


ಹುಟ್ಟಿದ್ದು ಸಾಗರ ತಾಲೂಕಿನ ಹಂಸಗಾರಿನಲ್ಲಿ. ಓದಿದ್ದು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ವೃತ್ತಿಯಲ್ಲಿ ಸಾಫ್ಟ್ವೇರ್ ಕೂಲಿ. ತಲೆಯ ಮೇಲಿನ ಸೂರು ಅದರ ಮೇಲಿನ ಇಷ್ಟಗಲದ ಆಕಾಶ ನೋಡಿಕೊಂಡು ಬದುಕುತ್ತಿರುವವನು ನಾನು. ಆಗಾಗ ದೇಶ ಸುತ್ತುವೆನಾದರೂ, ಕೋಶ ಓದಲು ಖಾಯಂ ಗಿರಾಕಿ. ದಿನಕ್ಕೆ ಕಡಿಮೆ ಎಂದರೂ ಐದೋ ಆರೋ ಡಾಕ್ಯುಮೆಂಟರಿ ನೋಡುತ್ತೇನೆ. ಇತಿಹಾಸ ಹಾಗೂ ಇಕಾಲಜಿ ಇತ್ತೀಚಿಗೆ ಹತ್ತಿಕೊಂಡ ಗೀಳು. ಎಲ್ಲರಂತೆ ಕ್ರಿಕೆಟ್ಟು, ಸಿನಿಮಾ, ಸೋಶಿಯಲ್ ಮೀಡಿಯಾಗಳು ನನ್ನ ಸಮಯವನ್ನೂ ಹಾಳು ಮಾಡುತ್ತವೆ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ