30/12/14

ಎಂಥ ಸಾವು ಮಾರಾಯ್ರೇ?

"ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಕೇವಲ ಒಂದು ಸಾವು" , ಈ ತಲೆ ಬರಹ ನನ್ನ ತಲೆ ಕೆಡಿಸಿತು . 'ಕೇವಲ' ಪದ ನನ್ನನ್ನು ಕೊರೆಯುತ್ತಿತ್ತು . ಹಾಗಾದರೆ ಆ ಒಂದು ಜೀವಕ್ಕೆ ಬೆಲೆಯೇ ಇಲ್ಲವೇ ?ಅಥವಾ ಭಾರತದ ಕೋಟಿ ಕೋಟಿ ಜನೆಸಂಖ್ಯೆಯ ಮುಂದೆ ಕೇವಲ ಒಂದು ಎನ್ನುವ ಸಿಂಪಲ್ ಗಣಿತವೇ ? . ಎರಡು ನಿಮಿಷದ ಹಿಂದೆ ಇದ್ದ  ವ್ಯಕ್ತಿ ಈಗ ಇರುವುದಿಲ್ಲ . ಆದರೂ ನಾವೆಲ್ಲಾ ಚಿರಾಯುಗಳು ಎಂದು ಭಾವಿಸಿ ಬದುಕುತ್ತಿರುತ್ತೇವೆ . ಕೆಲವೊಮ್ಮೆ   ನಾವು ಮಾಡುವ ಕೆಲಸಗಳು ನಮಗೇ ನಗು ತರಿಸುತ್ತಿರುತ್ತವೆ . ರಾತ್ರಿ ಅಲಾರಂ ಇಡುವಾಗ ನಗು ಬರುತ್ತದೆ ನಾನು ಬೆಳಿಗ್ಗೆಯವರೆಗೂ ಇರುತ್ತೇನಾ ?......  ರೈಲು ಅಥವಾ ಬಸ್ಸಿಗೆ ಟಿಕೇಟ್ ಮುಂಚಿತವಾಗಿ ಬುಕ್ ಮಾಡುವಾಗ ನಗು ಬರುತ್ತದೆ...... .
ಮೃತ್ಯು ಎನ್ನುವುದು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ನಮ್ಮ ಮೇಲೆ ಎರಗಬಹುದು . ರಸ್ತೆಯ ಯಾವುದೋ ತಿರುವಿನಲ್ಲಿ ಮಲಗಿರಬಹುದು ,ಕಾರ್ ಸ್ಟೀರಿಂಗ್ ಮೇಲೇ  ಕುಳಿತಿರಬಹುದು ಅಷ್ಟೇ ಏಕೆ ತಲೆಯ ಮೇಲಿರುವ ಫ್ಯಾನ್ನಲ್ಲಿ ಅವಿತಿರಬಹುದು . ಅದಕ್ಕೇ ನಾನು ಬೆಳಿಗ್ಗೆ ಎದ್ದ ತಕ್ಷಣ ಪೇಪರಿನಲ್ಲಿ ಮೊದಲು ನಿಧನ ವಾರ್ತೆಯ ಕಾಲಂ ನೋಡುತ್ತೇನೆ ,ಅದರಲ್ಲಿ ನನ್ನ ಫೋಟೋ ಇಲ್ಲವಾದಲ್ಲಿ ಹಾಯಾಗಿ ಮತ್ತೆ ಮಲಗುತ್ತೇನೆ . 
ಮೊನ್ನೆ ಬಟ್ಟೆ ಅಂಗಡಿಯಲ್ಲಿ ಒಂದು ಹೆಂಗಸು ಕೇಳುತ್ತಿದಳು "ಸಾರ್ ಈ ಬಣ್ಣ ಪರ್ಮನೆಂಟಾ?" ,ನನಗೆ ನಗು ಬಂತು . ಇನ್ನೊಬ್ಬ ವೃಧ್ಧ ಲೈಫ್ ಟೈಮ್  ವ್ಯಾಲಿಡಿಟಿ ಸಿಮ್ ಕೇಳುತ್ತಿದ್ದ , ನಗು ಬಂತು . ಹೆಸರಾಂತ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಒಮ್ಮೆ ಒಬ್ಬ ಗಣ್ಯವ್ಯಕ್ತಿಯ ನಿಧನ ವಾರ್ತೆ ಪ್ರಕಟವಾಗಿತ್ತು ,  ಆದರೆ ಆ ವ್ಯಕ್ತಿ ಇನ್ನೂ ಬದುಕೇ ಇದ್ದರು ,ಮಾರನೇ ದಿನ  ಸಂಪಾದಕರು "ನಮ್ಮ ತಪ್ಪನ್ನು ಮನ್ನಿಸಿ ಅವರಿನ್ನೂ ಜೀವಂತವಾಗಿ ಇದ್ದಾರೆ ಎಂದು ಹೇಳಲು ವಿಷಾದಿಸುತ್ತೇವೆ ",ಎಂದು ಪ್ರಕಟಿಸಿದ್ದರು . ನನಗಂತೂ ನಕ್ಕೂ ನಕ್ಕೂ ಸಾಕಾಗಿತ್ತು . 
ಅಂದ ಹಾಗೆ ಇಂದು ನಾನು ಊರಿಗೆ ಹೊರಟಿದ್ದೇನೆ , ಯಾವ ಉಗ್ರರ ಬಾಂಬ್ ಗೂ ಸಿಗದೇ , ಯಾವ ಅವಘಡವೂ ಸಂಭವಿಸದೇ ಹೋದರೆ ,ನಾಳೆ ಖಂಡಿತ ಮನೆ ತಲುಪುತ್ತೇನೆ . ಬೆಳಿಗ್ಗೆ ನನ್ನ ಕಡೆಯಿಂದ ಗುಡ್ ಮಾರ್ನಿಂಗ್ ಮೆಸೇಜ್ ಬಂದರೆ ನಾನು ಬದುಕಿದ್ದೇನೆ ಎಂದೇ ಅರ್ಥ. 
ಈ ಲೇಖನ ಇಷ್ಟ ಆಗಿದ್ರೆ ಲೈಕ್ ಮಾಡಿ , ನನ್ನ ಸಾಯಿಸಬೇಕು ಅನಿಸಿದರೆ ಕಾಮೆಂಟ್ ಮಾಡಿ , ನೀವೂ  ಸಾಯಬೇಕು ಅನಿಸಿದರೆ ನನ್ನ ಬ್ಲಾಗ್ ಫಾಲೋ ಮಾಡಿ