27/1/17

ಖಾರಾಬಾತು - ೭ ( ಲೈಟ್ಸ್ ಕ್ಯಾಮರಾ ಆಕ್ಷನ್ )



        ಅಮ್ಮ-ಅಪ್ಪನಿಗೆ ಗೌರವ ಕೊಡಬೇಕು, ಪ್ರಸ್ಥಕ್ಕೆ ಹೋಗುವಾಗ ಹೆಣ್ಣು ಫೆವಿಕಾಲಿನಂತ ಹಾಲು ತೆಗೆದುಕೊಂಡು ಹೋಗಬೇಕು, ಆಪರೇಷನ್ ಥಿಯೇಟರ್ ಮುಂದೆ ಶತಪಥ ತಿರುಗಾಡಬೇಕು, ಇಂಥದ್ದನ್ನೆಲ್ಲಾ ನಮಗೆ ಯಾರೂ ಹೇಳಿಕೊಡುವುದಿಲ್ಲ. ಇವುಗಳನ್ನು ಸಿನಿಮಾಗಳಲ್ಲಿ ತೋರಿಸಿ ತೋರಿಸಿ ನಮ್ಮ ಮನಸ್ಸಿಗೆ ಇಂಡ್ಯೂಸ್ ಮಾಡಿಬಿಟ್ಟಿದ್ದಾರೆ. ಸಿನಿಮಾಗಳಲ್ಲಿನ ದೃಶ್ಯಗಳು ಎಷ್ಟೇ ಕಪೋಲಕಲ್ಪಿತ ಎಂದು ನಾವು ಅರಚಿಕೊಂಡರೂ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬಿದ್ದೇಬೀರುತ್ತದೆ. ಲೆನಿನ್ ಸಹ ಚಿತ್ರ ಮಾಧ್ಯಮಗಳಿಂದ ಕ್ರಾಂತಿ ಪಸರಿಸಬಹುದೆಂದು ಚಿಂತನೆ ನಡೆಸಿದ್ದ. ಬಾಳೆಹಣ್ಣಿನ ಜೊತೆ ಮಾತ್ರೆ ತಿನ್ನಿಸಿದಂತೆ, ಸಿನಿಮಾ ಬಳಸಿಕೊಂಡು ಜನರನ್ನು ಚಿಂತನೆಗೆ ಹಚ್ಚುವ ಕೆಲಸವನ್ನು ಬಹಳಷ್ಟು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆ ರೀತಿ ಗ್ರೇಟ್‌ ಎನಿಸಿಕೊಂಡ ಸಿನಿಮಾಗಳ ಸ್ಪೂರ್ತಿ ಇಟ್ಟುಕೊಂಡು ಇಂದಿಗೂ ಹಲವು ಸಿನಿಮಾಗಳು ಬರುತ್ತಿವೆ. 'ಅಕಿರಾ ಕುರುಸೋವಾ' ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆ. ಆತನ ಏಳು ಸಿನಿಮಾಗಳನ್ನು ಸರಿಯಾಗಿ ಅಧ್ಯಯನ ಮಾಡಿದರೆ ಯಾರಾದರೂ ನಿರ್ದೇಶಕರಾಗಬಹುದೇನೋ!
 
         ಕುರುಸೋವಾ ಹುಟ್ಟಿದ್ದು ಮಾರ್ಚ್ ೨೩, ೧೯೧೦, ಟೋಕಿಯೋ ಪಟ್ಟಣದಲ್ಲಿ. ಈತ ಮೂವತ್ತು ಸಿನಿಮಾಗಳನ್ನು ನಿರ್ದೇಶಿಸಿದ್ದಾನೆ. ೧೯೩೬ರಲ್ಲಿ ಒಬ್ಬ ಪೇಂಟರ್ ಆಗಿ ಜಪಾನೀ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಈತ ಸುಮಾರು ಐವತ್ತು ವರ್ಷಗಳ ಕಾಲ ಸಿನಿಮಾ ಜಗತ್ತನ್ನು ಆಳಿದ. ೧೯೪೩, ಎರಡನೇ ಮಹಾಯುದ್ಧದ ಸಮಯದಲ್ಲಿ ಈತನ ಮೊದಲ ಸಿನಿಮಾ 'ಸನ್ಶೀರೋ ಸುಗಾಟಾ' ತೆರೆಕಂಡಿತು. ನಂತರ 'ಡ್ರಂಕನ್ ಏಂಜೆಲ್' ಸಿನಿಮಾದಲ್ಲಿ 'ತೊಶಿರೊ ಮಿಫುನೆ' ಎಂಬ ನಟನನ್ನು ಪರಿಚಯಿಸಿದ. ಇವರಿಬ್ಬರ 'ಜೊತೆ' ಹದಿನೈದು ಸಿನಿಮಾಗಳಲ್ಲಿ ಕಾಣಬಹುದು.

         ಕುರುಸೋವಾನ ಅಪ್ಪ-ಅಮ್ಮನಿಗೆ ಎಂಟು ಮಕ್ಕಳು. ಅಪ್ಪ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ. ಕುರುಸೋವಾಗೆ ಬಾಲ್ಯದಿಂದಲೂ ಸಿನಿಮಾ ನೋಡುವ ಹುಚ್ಚು. ಶಾಲೆಯಲ್ಲಿ ಕ್ಯಾಲಿಗ್ರಫಿ ಕಲಿತನಾದರೂ ಅದು ಉಪಯೋಗಕ್ಕೆ ಬಂದಿದ್ದು ಅಷ್ಟಕ್ಕಷ್ಟೇ.

        ಕುರುಸೋವಾನ ಜೀವನ ತಿರುವು ಕಂಡಿದ್ದು ೧೯೨೩ರ ಭೂಕಂಪದಿಂದ. ಭೂಕಂಪದ ಹೊಡೆತಕ್ಕೆ ಟೋಕಿಯೋ ನಲುಗಿಹೋಗಿತ್ತು. ತನ್ನ ಅಣ್ಣ 'ಹೀಗೋ' ಜೊತೆ ಹೊರಟ ಹದಿಮೂರರ ಪೋರ ಕುರುಸೋವಾನ ಕಣ್ಣಿಗೆ ಎಲ್ಲೆಲ್ಲೂ ಶವಗಳು ಕಾಣುತ್ತಿತ್ತಂತೆ. ಕುರುಸೋವಾ ಶವಗಳನ್ನು ನೋಡಲು ಹೆದರಿಕೊಂಡರೆ, 'ಹೀಗೋ' ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದ್ದನಂತೆ.

       ಹೀಗೋ ಚೆನ್ನಾಗಿ ಓದುತ್ತಿದ್ದನಾದರೂ ಆತನಿಗೆ ಶಾಲೆಯಲ್ಲಿ ಸೀಟ್ ಸಿಗದೇಹೋಯಿತು. ಆ ಕಾಲದಲ್ಲಿ ಮೂಕಿ ಚಿತ್ರಗಳನ್ನು ಅರ್ಥ ಮಾಡಿಸಲು ಟಾಕೀಸಿನಲ್ಲಿ ಒಬ್ಬರು ಇರುತ್ತಿದ್ದರಂತೆ. ಆ ಕೆಲಸ ಹೀಗೋಗೆ ದೊರಕಿತು. ಕುರುಸೋವಾ ಪೇಂಟರ್ ಆದ. ಆದರೆ ಆತನ ಪೇಂಟಿಂಗ್ ಆತನ ಹೊಟ್ಟೆಹೊರೆಯಲು ಅಸಾಧ್ಯವಾಗಿತ್ತು. ಅದೇ ಸಮಯದಲ್ಲಿ ಮೂಕಿ ಚಿತ್ರಗಳು ಹಿಂದೆಸರಿದು, ಟಾಕಿ ಚಿತ್ರಗಳು ಬರಲು ಶುರುವಾದವು. ಹೀಗೋ ಕೂಡ ಕೆಲಸ ಕಳೆದುಕೊಂಡ. ಧೃತಿಗೆಟ್ಟ ಹೀಗೋ ಆತ್ಮಹತ್ಯೆಗೆ ಶರಣಾದ. ಬಹಳ ಕಷ್ಟದ ದಿನಗಳವು. ಕುರುಸೋವಾ ತನ್ನ ಆತ್ಮಕಥೆಯಲ್ಲಿ ಈ ಅಧ್ಯಾಯವನ್ನು 'ಎ ಸ್ಟೋರಿ ಐ ಡೋಂಟ್ ವಾಂಟ್ ಟು ಟೆಲ್' ಎಂದು ಬರೆದುಕೊಂಡಿದ್ದಾನೆ.

       ೧೯೩೫ರಲ್ಲಿ ಹೊಟ್ಟೆಪಾಡಿಗಾಗಿ ಸಿನಿಮಾ ಕ್ಷೇತ್ರಕ್ಕೆ ಐದು ವರ್ಷ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಹಲವು ನಿರ್ದೇಶಕರ ಕೆಳಗೆ ಕೆಲಸ ಮಾಡಿದ. 'ಯಮಮೋತೋ' ಕೆಳಗೆ ಹದಿನೇಳು ಸಿನಿಮಾಗಳಲ್ಲಿ ದುಡಿದ. ಅಲ್ಲಿಯೇ ಅವನಿಗೆ ತಿಳಿದದ್ದು, ಒಬ್ಬ ಒಳ್ಳೆಯ ನಿರ್ದೇಶಕ ಸ್ಕ್ರಿಪ್ಟ್ ರೈಟಿಂಗ್ ಅನ್ನು ಚೆನ್ನಾಗಿ ಕರಗತ ಮಾಡಿಕೊಳ್ಳಬೇಕು ಎಂದು. ನಿರ್ದೇಶಕನಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸಲು ಕುರುಸೋವಾನಿಗೆ ಸಿಕ್ಕಿದ್ದು 'ಸನ್ ಶೀರೋ ಸುಗಾಟ'. ನಂತರ ಆತ ಹಿಂತಿರುಗಿ ನೋಡಲಿಲ್ಲ.

        'ರಶೋಮಾನ್' ಎಂಬ ಮಾಸ್ಟರ್ಪೀಸ್ ಹುಟ್ಟಿದ್ದು ೧೯೫೦ರಲ್ಲಿ. ವೆನಿಸ್ ನ 'ಗೋಲ್ಡನ್ ಲಯನ್' ಪ್ರಶಸ್ತಿ ರಶೋಮಾನ್ ಗೆ ಬಂದಿತು. ಅಲ್ಲದೇ ಆ ಸಿನಿಮಾ ಯುರೋಪಿನಾದ್ಯಂತ ಮನ್ನಣೆ ಗಳಿಸಿತು. ಅಂತರಾಷ್ಟ್ರೀಯ ಮನ್ನಣೆ ಸಿಕ್ಕಮೇಲೆ ಆತನ ಸಿನಿಮಾಗಳು ಇನ್ನೂ ಹರಿತವಾದವು. ೧೯೫೨ರಲ್ಲಿ ತೆರೆಕಂಡ 'ಸೆವೆನ್ ಸಮುರಾಯ್‌' ಕನ್ನಡದ 'ಒಂದಾನೊಂದು ಕಾಲದಲ್ಲಿ' ಆಯಿತು. 'ರೆಕಾರ್ಡ್ ಆಫ್ ಎ ಲಿವಿಂಗ್ ಬೀಯಿಂಗ್' ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಷೇಕ್ಸ್ಪಿಯರ್ ನ ಮ್ಯಾಕ್ ಬೆತ್ ಕುರುಸೋವಾನ 'ಥ್ರೋನ್ ಆಫ್ ಬ್ಲಡ್' ಆಯಿತು. ಯೊಜಿಂಬೊ, ಇಕಿರು, ಕಗೆಮುಷಾ ಸಿನಿಮಾಗಳು ಆತನನ್ನು ಇನ್ನೂ ಉತ್ತುಂಗಕ್ಕೆ ಏರಿಸಿತು. ೧೯೭೭ರ ಮೆಗಾ ಹಿಟ್ ಸ್ಟಾರ್ ವಾರ್ಸ್ ಸಹ ಕುರುಸೋವಾನ ಹಿಡನ್ ಫೋರ್ಟ್ರೆಸ್ ಸಿನಿಮಾದಿಂದ ಸ್ಫೂರ್ತಿ ಪಡೆದಿವೆ.

        ಇಂದು ನಿರ್ದೇಶಕರಾಗಬೇಕೆಂದು ಗಾಂಧಿನಗರದಲ್ಲಿ ಸಾಲುಗಟ್ಟಿ ನಿಂತಿರುವವರು ಕುರುಸೋವಾನ ಸಿನಿಮಾಗಳನ್ನು ಅಧ್ಯಯನ ಮಾಡುವುದು ಒಳಿತು. 'ಸೆವೆನ್ ಸಮುರಾಯ್‌' ಮಾಡುವಾಗ ಕುರುಸೋವಾ ಏಳು ನೋಟ್ ಬುಕ್ ಮಾಡಿಟ್ಟಿದ್ದ. ಅದರಲ್ಲಿ ಸಮುರಾಯ್‌ ನ ಇತಿಹಾಸ, ಅವರು ಹಾಕಿಕೊಳ್ಳುವ ಬಟ್ಟೆ, ಆಹಾರ ಪದ್ಧತಿ, ನಡೆಯುವ ಶೈಲಿ, ಎಲ್ಲವನ್ನೂ ಬರೆದಿಟ್ಟುಕೊಂಡಿದ್ದ. ಆತನ ಸಿನಿಮಾಗಳಲ್ಲಿ ಸ್ಟಾಂಡರ್ಡ್ ಲೆನ್ಸ್ ಹಾಗೂ ಡೀಪ್ ಫೋಕಸ್ ಫೋಟೋಗ್ರಫಿ ಹೆಚ್ಚಾಗಿ ಕಂಡುಬರುತ್ತದೆ. ಮಲ್ಟಿಪಲ್ ಕ್ಯಾಮರಾ ಇಟ್ಟು ಸಹಜ ನಟನೆಗೆ ಒತ್ತುಕೊಟ್ಟಿದ್ದ. ಅತನೇ ಹೇಳುವ ಪ್ರಕಾರ ಆತ ಶೂಟ್ ಮಾಡುತ್ತಿದ್ದುದೇ ಎಡಿಟ್ ಮಾಡಲು. ಪ್ರಾಯಶಃ ಕುರುಸೋವಾ ಜಗತ್ತಿನ ಸರ್ವಶ್ರೇಷ್ಠ ಎಡಿಟರ್. ಆತನ ಸಿನಿಪಯಣದಲ್ಲಿ ಆತ ಕೆಲಸ ಮಾಡಿದ್ದು ಆತ ಕಟ್ಟಿಕೊಂಡಿದ್ದ ತಂಡದಲ್ಲಿ ಮಾತ್ರ! ಅದು 'ಕುರುಸೋವಾ ಗ್ರೂಪ್' ಎಂದು ಪ್ರಸಿದ್ಧವಾಯಿತು.

       ಕುರುಸೋವಾ ಅದೆಷ್ಟು ನಿರ್ದೇಶಕರಿಗೆ ಸ್ಫೂರ್ತಿಯೇನೋ! ಸತ್ಯಜಿತ್‌ ರೇ ರಶೋಮಾನ್ ಸಿನಿಮಾವನ್ನು ಮೂರು ಬಾರಿ ಹೋಗಿ ನೋಡಿದ್ದರಂತೆ. ನಮ್ಮ ಫಿಲ್ಮ್ ಇನ್ಸ್ಟಿಟ್ಯೂಟ್ ಗಳಲ್ಲಿ ಕುರುಸೋವಾನ ಬಗ್ಗೆ ಪಾಠಗಳನ್ನು ಇಟ್ಟಿರಬಹುದು. ಸ್ವಯಂಘೋಷಿತ ನಿರ್ದೇಶಕರು ಕುರುಸೋವಾನ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಆಗಲಾದರೂ ಕೇವಲ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದುಮಾಡುವ ಸಿನಿಮಾಗಳಿಗಿಂತ ಮನಸ್ಸಿನಲ್ಲಿ ಸದ್ದು ಮಾಡುವ ಸಿನಿಮಾಗಳು ಬರಬಹುದು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ