30/4/16

ಖಾರಾಬಾತು - 3 ( ಅಕ್ಷರ ಸಂತೆ )

ಮೈಸೂರಿನ ಮೂಲೆಯ ಕಾಲೇಜ್ ಒಂದರಲ್ಲಿ ಸಾಮಾನ್ಯ ಎಂಜಿನಿಯರಿಂಗ್ ವಿಧ್ಯಾರ್ಥಿ ಆಗಿದ್ದ ನನ್ನನ್ನು ಕನ್ನಡ ಸಾಹಿತ್ಯ ಲೋಕದ ಬಾಗಿಲಿಗೆ ತಂದು ನಿಲ್ಲಿಸಿದ್ದೀರಿ . ನಿಮ್ಮ ಅಭಿಮಾನ , ಪ್ರೀತಿಗೆ ಏನು ಹೇಳಬೇಕೋ ನನಗೆ ತಿಳಿಯುತ್ತಿಲ್ಲ . ನನಗೆ ಹೇಳಿಕೊಳ್ಳುವಷ್ಟರ  ಮಟ್ಟಿಗೆ ಸಂತೋಷವೇನು ಇಲ್ಲ . ಮೂಲತಃ ವಿಜ್ಞಾನದ ವಿಧ್ಯಾರ್ಥಿಯಾಗಿರುವ ನಾನು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದು , ಕನ್ನಡ ಸಾಹಿತ್ಯಕ್ಕೆ ಒದಗಿರುವ ದುರಂತವೇ ಸರಿ .ಅಸಾಹಿತ್ಯ ವಿಷಯಗಳನ್ನು ಸಾಹಿತ್ಯ ರೂಪದಲ್ಲಿ ಕೊಡುವುದು ನನ್ನ ಕನಸು . ಬರಿಯ ' ಮುಟ್ಟು ಒಬ್ಬಟ್ಟು ' ಸಾಹಿತ್ಯವನ್ನು ಕೊಡಬಾರದೆಂಬುದು ನನ್ನ ಇರಾದೆ . 
 ನವ್ಯ ಸಾಹಿತ್ಯದಲ್ಲಿ ಕುವೆಂಪು , ಕಾರಂತ ಹಾಗೂ ತೇಜಸ್ವಿಯವರನ್ನು ಬಿಟ್ಟರೆ ಅಧ್ಯಯನ ಮಾಡಬಹುದಾದ ಸಾಹಿತ್ಯವನ್ನು ಯಾರೂ ಕೊಡಲಿಲ್ಲ ಎನ್ನುವುದು ನಿಜ . ಸಾಹಿತ್ಯವನ್ನು ಅಭ್ಯಸಿಸಿ ಒಂದು ಉತ್ತಮ ಬರಹವನ್ನು ಕೊಡುವ ಲೇಖಕರ ಕೊರತೆ ಕನ್ನಡವನ್ನು ಕಾಡುತ್ತಿದೆ . ಅಧ್ಯಯನ ಯೋಗ್ಯ ಕೃತಿಗಳು ಇಲ್ಲವೆಂದಾದ ಮೇಲೆ ನಾನೇಕೆ ಓದಬೇಕು ? ಆಧುನಿಕ ಕವಿ ಪುಂಗವರ ಸಾಹಿತ್ಯದ ಕಗ್ಗಗಳನ್ನು ಓದುವುದನ್ನು ನಾನು ನಿಲ್ಲಿಸಿದ್ದೇನೆ . ಕೆಲವೊಂದು ವಿಚಾರಗಳನ್ನು ನಿಮ್ಮೊಡನೆ ನಾನು ಹಂಚಿಕೊಳ್ಳಲೇ ಬೇಕು . ನನ್ನ ಬರಹಗಳನ್ನು ಯಾರೋ ಓದುತ್ತಾರೆ ಎಂದು ನಾನು ಬರೆಯುವುದಿಲ್ಲ ಅಥವಾ ಹಟಕ್ಕೆ ಬಿದ್ದು ಇಂದು ಈ ಕಥೆಯನ್ನು ಮುಗಿಸಲೇ ಬೇಕು ಎಂದು ಬರೆಯುವುದಿಲ್ಲ .ಏನೋ ಒಂದು ವಿಷಯ ಮನದೊಳಗೆ ಕೊರೆಯಲು ಶುರು ಮಾಡಿ , ಬರೆಯದೇ ಬೇರೆ ದಾರಿಯೇ ಇಲ್ಲ ಅನಿಸಿದ ಮೇಲೆ ಲೇಖನಿ ಕೈಗೆತ್ತಿಕೊಳ್ಳುತ್ತೇನೆ .  ಸಮಯದ ಕೊರತೆ ಯಾರಿಗೆ ಇಲ್ಲ ಹೇಳಿ ?  . ಆದರೆ ಬರೆಯುವ ಹಂಬಲ ಗಟ್ಟಿಯಾಗಿ ಕುಳಿತುಬಿಟ್ಟರೆ ಸಮಯ ಅದು ಹೇಗೋ ಹೊಂದಿಕೆಯಾಗುತ್ತದೆ . 
ನನ್ನ ಯಾವುದೋ ಬರಹವನ್ನು ಒಬ್ಬರು ಓದುತ್ತಾರೆ ಎಂದಿಟ್ಟುಕೊಳ್ಳಿ . ಆತ ನನಗೆ ಗೊತ್ತಿಲ್ಲ , ಆದರೂ ಆತನಿಗೆ ನನ್ನ ಮನಸ್ಥಿತಿ , ಚಿಂತನಾ ಶೈಲಿ ಅರ್ಥವಾಗುತ್ತದೆ . ಅದೇ ಸಾಹಿತ್ಯದ ಶಕ್ತಿ . ಸಾಹಿತ್ಯವೆಂಬುದು ಕೇವಲ ಪದಗಳ ಜಾಲವಲ್ಲ . ಒಂದು ಸಾಹಿತ್ಯ ಸೃಷ್ಟಿಯಾಗುವುದು ಜೀವನದ ಅನುಭವದಿಂದ ಮಾತ್ರ . ನನಗೆ ಎಷ್ಟೋ ಜನ ತಾವು ಬರೆದ ಕಥೆ , ಕವನ ಕಳುಹಿಸಿ ಇದನ್ನು ತಿದ್ದಿ ಕೊಡಿ ಎಂದು ಕೇಳುತ್ತಾರೆ . ಕೇವಲ ಕಾಮಾ , ಫುಲ್ ಸ್ಟಾಪ್ ಗಳನ್ನು ಸರಿ ಮಾಡುವುದರಿಂದ ಒಳ್ಳೆಯ ಸಾಹಿತ್ಯ ಸಿಗಲಾರದು . ಕನ್ನಡದ ಮಟ್ಟಿಗೆ ವಿಮರ್ಶಕರ ಕೊರತೆ ಬಹಳವೇ ಇದೆ . ಜಿ.ಹೆಚ್. ನಾಯಕರು , ಟಿ.ಪಿ. ಅಶೋಕ ಇಂತಹ ಕೆಲವೇ ಕೆಲವು ವಿಮರ್ಶಕರು ನಮಗೆ ಸಿಗಬಹುದು . ಪುಂಡ ಪುಡಾರಿಗಳು ಬರಹಗಾರರಾಗುತ್ತಿದ್ದರೆ , ವಿಮರ್ಶೆ ರಾಜಕೀಯ ಬಣ್ಣ ಪಡೆಯುತ್ತಿದೆ . ಅದ್ಭುತ ಸಾಹಿತ್ಯ ಸೃಷ್ಟಿಯಾಗುವಲ್ಲಿ  ವಿಮರ್ಶೆಯ ಪಾತ್ರ ಬಹಳ ದೊಡ್ಡದು . ವಸ್ತು ನಿಷ್ಠ ವಿಮರ್ಶೆಯ ಅವಶ್ಯಕತೆ ಬಹಳವೇ ಇದೆ , ವಿಮರ್ಶೆ ಓದಿದ ನಂತರ ಮೂಗನಿಗೆ ಮಾತು ಬಂದಂತ ಅನುಭವ ಓದುಗನಿಗೆ ಆಗಬೇಕು . ವಿಮರ್ಶೆ ಎಂದರೆ ಅದು ಲೇಖಕನೋರ್ವನ ಜೀವನದ ವಿಮರ್ಶಯೇ ಸರಿ . ಒಬ್ಬ ವಿಮರ್ಶಕ ಯಾವುದೊ ಒಂದು ಕೃತಿಯನ್ನು ವಿಮರ್ಶಿಸಿ ಇದು ಸರಿಯಿಲ್ಲ ಎಂದು ಬೊಟ್ಟು ಮಾಡಿ ತೋರಿಸಿದಾಗ ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತು ಲೇಖಕನಿಗೆ ಇರಬೇಕು . ಕೆಲವರು ತಮ್ಮ ಬರಹದ ಶೈಲಿಯನ್ನು ಬದಲಿಸಿಕೊಳ್ಳಲು ಹೆಣಗುತ್ತಾರೆ . ನಮ್ಮ ಜೀವನದ ಶೈಲಿಯನ್ನು ಬದಲಾಯಿಸಿಕೊಂಡರೆ ನಮ್ಮ ಬರಹದ ಶೈಲಿ ತಾನಾಗಿಯೇ ಬದಲಾಗುತ್ತಾ ಹೋಗುತ್ತದೆ . 
ಇನ್ನು ಕನ್ನಡ ಭಾಷೆಯ ವಿಷಯಕ್ಕೆ ಬರೋಣ . ಹಿಂದಿ ನಮ್ಮ ರಾಷ್ಟ್ರ ಭಾಷೆಯೆಂದು ಎಲ್ಲೂ ಅಧಿಕೃತ ಲಿಖಿತ ದಾಖಲೆಯಿಲ್ಲ . ಆದರೂ ನಮ್ಮನ್ನು ಎರಡನೆಯ ದರ್ಜೆಯ ಪ್ರಜೆಗಳಾಗಿ ನೋಡುತ್ತಿದ್ದಾರೆ . ಹಾಗೆ ನೋಡಿದರೆ ಹಿಂದಿಗಿಂತ ಪ್ರಾಚೀನವಾದ , ಅತ್ಯಂತ ಸಮರ್ಥವಾದ ಭಾಷೆಗಳು ದಕ್ಷಿಣ ಭಾರತದಲ್ಲಿ ಇದೆ . ಹಿಂದಿ ತನ್ನ ಲಿಪಿಯನ್ನು ಸಂಸ್ಕೃತದಿಂದ ಪಡೆದಿದೆ , ತನ್ನದೇ ಆದ ಸ್ವಂತ ಲಿಪಿ ಅದಕ್ಕಿಲ್ಲ . ಹಾಗೂ ಎಷ್ಟೋ ಪದಗಳನ್ನು ಸಂಸ್ಕೃತದಿಂದಲೇ ಎರವಲು ಪಡೆದಿದೆ . ಪಂಪ ಕಾವ್ಯ ರಚನೆ ಮಾಡುವಾಗ ಹಿಂದಿ ಇನ್ನೂ ತೊಟ್ಟಿಲಲ್ಲಿ ಇತ್ತು . ಇಷ್ಟು ಸಮರ್ಥ ಭಾಷೆಯಾದ ಕನ್ನಡ ಇಂದು ಶೋಚನೀಯ ಸ್ಥಿತಿಯಲ್ಲಿದೆ . ಎಲ್ಲ ಸಾಮರ್ಥ್ಯವನ್ನು ಹೊಂದಿದ್ದ ಸಂಸ್ಕೃತವೇ ಉಳಿಯಲಿಲ್ಲ , ಕನ್ನಡದ ಬಗ್ಗೆ ಒಮ್ಮೊಮ್ಮೆ ಕಳವಳವಾಗುತ್ತದೆ . ಸಂಸ್ಕೃತ ಬ್ರಾಹ್ಮಣರ ಭಾಷೆಯಾಗಿತ್ತು ಅದಕ್ಕೇ ನಶಿಸಿ ಹೋಯಿತು ಎನ್ನುವ ವಾದ ಸುಳ್ಳು . ಅದರ ಬಳಕೆ ಕಡಿಮೆಯಾಗುತ್ತಾ ಹೋಯಿತು.  ಒಂದು ಭಾಷೆ ಜೀವಂತವಾಗಿರಬೇಕಾದರೆ ಬೇರೆ ಭಾಷೆಯ ಜೊತೆ ಕೊಳು-ಕೊಡುವಿಕೆ ಅತ್ಯಗತ್ಯ . ಇಂಗ್ಲೀಷಿನಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೆ ಪದಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತದೆ . ಅದು ಸಜೀವ ಭಾಷೆಯ ಲಕ್ಷಣ . ಕನ್ನಡ ಉಳಿಯಬೇಕೆಂದರೆ ಯಾವ ಮಹಾ ಹೋರಾಟವೂ ಬೇಕಿಲ್ಲ , ಬಳಕೆಯನ್ನು ಹೆಚ್ಚು ಮಾಡಿದರೆ ಸಾಕು . ಈಗೀನ ಸರ್ಕಾರಗಳ ಫಂಡ್ ಗಳು ಕನ್ನಡವನ್ನು ಉಳಿಸಲಾರವು . ಈ ರೀತಿಯ ಫಂಡ್ ಗಳಿಂದ ಯಾವ್ಯಾವುದೋ ಪುಸ್ತಕಗಳನ್ನು ತರಿಸಿ ನಮ್ಮ ಗ್ರಂಥಾಲಯಗಳನ್ನು ಗೊಬ್ಬರಗುಂಡಿ ಮಾಡಿದ್ದಾರೆ .  
ನನಗೆ ಒದಗಿದ ದೊಡ್ಡ ಸವಾಲೆಂದರೆ ವೈದಿಕ ಹಿನ್ನಲೆಯಿಂದ ಬಂದ ನನಗೆ ಬಂಡಾಯ , ದಲಿತ ಕಾವ್ಯಗಳನ್ನು ಅರ್ಥ ಮಾಡಿಕೊಳ್ಳುವುದು . ನನಗೆ ಇನ್ನೂ ಅರ್ಥವಾಗದ ವಿಷಯವೆಂದರೆ ಅಡಿಗರು , ಮಾಸ್ತಿ ಇವರೆಲ್ಲಾ ಬರೆದದ್ದು ' ಬ್ರಾಹ್ಮಣ ಸಾಹಿತ್ಯ ' ಅಲ್ಲವೆಂದಾದ ಮೇಲೆ , ಒಬ್ಬ ದಲಿತ ಬರೆದದ್ದು ಮಾತ್ರ ಹೇಗೆ ' ದಲಿತ ಕಾವ್ಯ ' ಎಂದಾಗುತ್ತದೆ ? .ಪಂಪ ನನಗೆ ಮಹಾನ್ ಎನಿಸುವುದು ಇದೇ  ಕಾರಣಕ್ಕೆ . ಒಂದು ಕಡೆ ಭಾಷೆಯ ಉಳಿವಿಗೆ ಹೋರಾಡುತ್ತಾ , ಸಮಾನತೆಯನ್ನು ಪ್ರತಿಪಾದಿಸುತ್ತಾನೆ . ಒಂದು ಭಾಷೆಯಲ್ಲಿ ಆದಿಕವಿ ಬಹಳ ಮುಖ್ಯ ಪಾತ್ರ ವಹಿಸುತ್ತಾನೆ . ಆತ ತನ್ನರ್ಧ ಭಾಗವನ್ನು ಭಾಷೆಗೆ ಕೊಟ್ಟು , ಭಾಷೆಯ ಅರ್ಧ ಭಾಗವನ್ನು ತಾನು ಪಡೆಯುತ್ತಾನೆ . ಆತ ' ಮನುಷ್ಯ ಜಾತಿ ತಾನೊಂದೆ ವಲಂ ' ಎಂದು ಹೇಳಿ , ಕುವೆಂಪುರವರಂತಹ ಶೂದ್ರ ಕಾವ್ಯ ರಚನೆ ಮಾಡಲು ಸಹಸ್ರಾರು ವರ್ಷಗಳೇ ಹಿಡಿಯಿತು . ಅದು ಈ ಸಮಾಜದ ಕ್ರೂರ ಮುಖ . ಸಾಹಿತ್ಯವೆನ್ನುವುದು ಧರ್ಮ , ಜಾತಿಗಳನ್ನು ಮೀರಬೇಕು . ಇಂದಿಗೂ ಕುವೆಂಪುರವರ ಕಾವ್ಯ ಪ್ರಸ್ತುತ ಅನಿಸಲು ಇದೇ ಕಾರಣ . ಅವರು ಬರೆದಿರುವುದು ಕೇವಲ ಒಕ್ಕಲಿಗ ಸಾಹಿತ್ಯವಲ್ಲ  . 
ನನ್ನನ್ನು ಈಗಲೂ ಬರೆಯುವಂತೆ ಪ್ರೇರೆಪಿಸುತ್ತಿರುವುದು ಕುವೆಂಪುರವರ ಕಲಾ ಸೃಷ್ಟಿ , ಕಾರಂತರ ಚಿಂತನಾ ಲಹರಿ , ತೇಜಸ್ವಿಯವರ ಜೀವನ ಶೈಲಿ ಹಾಗೂ ಲೋಹಿಯಾರವರ ತತ್ವ ಚಿಂತನೆ . ಯುರೋಪ್ ನಲ್ಲಿ ತತ್ವಚಿಂತನೆ ಬೆಳೆದಷ್ಟು ಭಾರತದಲ್ಲಿ ಬೆಳೆಯಲಿಲ್ಲ . ಕೆಲವು ಕೃತಿಗಳು ಬಂದರೂ ಅದು ಯುರೋಪ್ ನ ತತ್ವ ಚಿಂತಕರ ಪ್ರಭಾವ ಹೊಂದಿತ್ತು . ಇದಕ್ಕೆ ಕಾರಣ ನಮ್ಮಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದು ಬ್ರಾಹ್ಮಣರು . ಅದು ತಪ್ಪಲ್ಲ ಆದರೆ ವೈದಿಕ ಸಂಪ್ರದಾಯದಲ್ಲೂ ಸತಿ ಸಹಗಮನ , ಸ್ತ್ರೀ ಅಸಮಾನತೆ , ಬಾಲ್ಯ ವಿವಾಹ ಇಂತಹ ಕೊಳಕು ಆಚರಣೆಗಳಿವೆ . ಅದನ್ನು ಎತ್ತಿ ಹಿಡಿಯುವ ಕೆಲಸ ಅಥವಾ ಧೈರ್ಯವನ್ನು ಬ್ರಾಹ್ಮಣರು ಮಾಡಲಿಲ್ಲ . ಸಾಮಾಜಿಕ ಒತ್ತಡಗಳು ಇರಬಹುದು . ರಾಜಾ ರಾಮ್ ಮೋಹನ್ ರಾಯ್ ಕೂಡ ಬ್ರಾಹ್ಮಣರು ಅವರೇ ಕೆಲವು ಸುಧಾರಣೆಗಳನ್ನು ತಂದರು . ಮೊದಲಿಗೆ ಶೂದ್ರರನ್ನು ಮೇಲುತ್ತುವ ಕೆಲಸ ಮಾಡಿದ್ದು ಬ್ರಾಹ್ಮಣರೇ  ಎಂಬುದನ್ನು ನಾವು ಮರೆಯಬಾರದು . 
ಮೊದಲಿಂದಲೂ ನನಗೆ ಗಾಂಧೀಜಿಯವರ ತತ್ವಗಳ ಮೇಲೆ ಆಸಕ್ತಿಯಿರಲಿಲ್ಲ . ಆದರೆ ರಾಮ ಮನೋಹರ ಲೋಹಿಯಾ ಅವರ ತತ್ವ ಚಿಂತನೆ ಅದ್ಭುತವಾದದ್ದು . ಅವರ ಕೃತಿಗಳನ್ನು ಓದಿದ ಮೇಲೆ ನನಗೆ ಗಾಂಧೀಜಿಯವರ ಮೇಲೆ ಅಭಿಮಾನ ಮೂಡಿತು . ಆದರೆ ಈಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಇಕಾಲಜಿಯನ್ನು ನಂಬುತ್ತೇನೆ . ಲೋಹಿಯಾರವರು ಎಲ್ಲ ಮನುಷ್ಯರು ಸಮಾನರು ಎಂದರೆ , ಇಕಾಲಜಿ ಸಮಸ್ತ ಜೀವ ಜಾಲವೇ ಸಮಾನ ಎನ್ನುತ್ತದೆ . ಇಕಾಲಜಿಯಾ ಧರ್ಮ ಸೂಕ್ಷ್ಮಗಳನ್ನು ಅರಿತುಕೊಳ್ಳಲು ಮತ್ತೆ ನನಗೆ ಸವಾಲಾಗಿದ್ದು ವೈದಿಕ ಹಿನ್ನಲೆ . ನನ್ನ ಕುಟುಂಬದವರು ಕೃಷಿಯ ಹಿನ್ನಲೆಯವರಾದರೂ ಕೆಲವು ವಿಷಯಗಳು ನಮಗೆ ಅರ್ಥವಾಗುವುದಿಲ್ಲ . ಉದಾಹರಣೆಗೆ ' ಮಲೆಗಳಲ್ಲಿ ಮಧುಮಗಳು ' ಕೃತಿಯಲ್ಲಿ ಬರುವ ನಾಯಿ ಗುತ್ತಿಯ ಪಾತ್ರ . ಗುತ್ತಿ ಮತ್ತು ಹಾಗೂ ಹುಲಿಯನ ಮಧ್ಯೆ ಇದ್ದ ಆ ಸಂಬಂಧ ನನಗೆ ಅರ್ಥವಾಗಿರಲಿಲ್ಲ . ಕೊನೆಯಲ್ಲಿ ಗುತ್ತಿ ತೆಪ್ಪದಲ್ಲಿ ಮುಂದೆ ಹೋಗುತ್ತಾನೆ , ನಾಯಿ ಪ್ರವಾಹದಲ್ಲಿ ತೇಲಿ ಹೋಗುತ್ತದೆ . ಈ ಘಟನೆಯನ್ನು ನಾನು ನನ್ನ ಬ್ರಾಹ್ಮಣ್ಯವನ್ನು ಮರೆತು ಓದಬೇಕಾಯಿತು . ಈಗಲೂ ನನಗೆ ಪ್ರವಾಹ ನೋಡಿದರೆ ನಾಯಿ ಗುತ್ತಿ ನೆನಪಾಗುತ್ತಾನೆ . 
ಕುವೆಂಪುರವರ ' ಶೂದ್ರ ತಪಸ್ವಿ ' ಕೃತಿಯೂ ಅಷ್ಟೇ , ನನ್ನ ಬ್ರಾಹ್ಮಣ್ಯಕ್ಕೆ ಸವಾಲು ಒಡ್ಡಿತು . ಮೂಲ ರಾಮಾಯಣದ ಕಥೆ ಈ ರೀತಿ ಇದೆ . ಶಂಬೂಕ ಎನ್ನುವ ಶೂದ್ರ ತಪಸ್ಸನ್ನು ಆಚರಿಸುತ್ತಿರುತ್ತಾನೆ , ಇದರಿಂದ ಒಬ್ಬ ಬ್ರಾಹ್ಮಣನ ಮಗ ಸತ್ತು ಹೋಗುತ್ತಾನೆ . ಆಗ ಬ್ರಾಹ್ಮಣ ಶ್ರೀರಾಮನನ್ನು ಬೇಡಿಕೊಳ್ಳುತ್ತಾನೆ . ರಾಮ ಶಂಬೂಕನನ್ನು ವಧಿಸುತ್ತಾನೆ , ಬ್ರಾಹ್ಮಣನ ಪ್ರಾಣ ವಾಪಸು ಬರುತ್ತದೆ . ಆದರೆ ಕುವೆಂಪು ಅವರ ಕೃತಿಯಲ್ಲಿ ರಾಮ ಬಿಟ್ಟ ಬಾಣ ಶಂಬೂಕನನ್ನು ಪ್ರದಕ್ಷಿಣೆ ಹಾಕುತ್ತದೆ , ಬ್ರಾಹ್ಮಣನ ಪ್ರಾಣವನ್ನೇ ತೆಗೆಯಲು  ಮುನ್ನುಗ್ಗಿ ಬರುತ್ತದೆ . ಈ ರೀತಿ ಮೂಲ ಕಥೆಯನ್ನು ತಿರುಚಿದ್ದು ಎಷ್ಟು ಸರಿ ? . ಅಡಿಗರು , ಮಾಸ್ತಿ ಇದರ ಬಗ್ಗೆ ವಿಮರ್ಶಿಸಿ ಪುರಾಣ ಕಥೆಗಳನ್ನು ತಿರುಚುವುದು ತಪ್ಪು , ಅದರ ಬದಲು ಕುವೆಂಪುರವರು ಬೇರೆ ಕಥೆ ಬರೆಯಲಿ ಎಂದು ಹೇಳಿದ್ದರು . ಈ ವಾದ ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನಗೆ ಗೊತ್ತಿಲ್ಲ . ಏಕೆಂದರೆ ರನ್ನ , ಕುಮಾರವ್ಯಾಸ ಇವರೂ ಸಹ ತಾವು ಬರೆಯುವಾಗ ಕಥೆಗಳನ್ನು ಬದಲಾಯಿಸಿಕೊಂಡಿದ್ದಾರೆ . ರನ್ನನ ' ಗಧಾಯುಧ್ಧ್ದ'ದಲ್ಲಿ  ಭೀಮನೇ ನಾಯಕನಾಗಿ ಮಿಂಚುತ್ತಾನೆ . 
ಕುವೆಂಪುರವರು ಜಾತೀಯತೆಯನ್ನು ಬಹಳವೇ ದ್ವೇಷಿಸುತ್ತಿದರು . ಆದರೆ ಅವರಿಗೂ ಅದನ್ನು ಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಲಿಲ್ಲ . ಕೊನೆ ಕೊನೆಗೆ ಅವರು ಎಷ್ಟರ ಮಟ್ಟಿಗೆ ಬೇಸರ ಪಟ್ಟುಕೊಂಡರೆ ಎಂದರೆ , " ನನ್ನೆಲ್ಲ ಕೃತಿಗಳನ್ನು ಒಲೆಗೆ ಹಾಕಿ , ವಿಶ್ವಮಾನವ ಸಂದೇಶವನ್ನು ಮಾತ್ರ ಇಟ್ಟುಕೊಳ್ಳಿ ಸಾಕು " ಎನ್ನುತ್ತಿದ್ದರು . ಒಂದನ್ನು ನೆನಪಿಡಿ ಭಾರತೀಯ ಸಂಸ್ಕೃತಿಯೂ ಪರಿಪೂರ್ಣವಲ್ಲ . ಯಾವ ಧರ್ಮವೂ ಮಾದರಿಯುತ ಧರ್ಮವಲ್ಲ . ಧರ್ಮದ ಅನಗತ್ಯ ಕಟ್ಟುಪಾಡುಗಳಿಗೆ ಜೋತು ಬೀಳದೆ , ನಮ್ಮ ಅನುಭವಗಳಿಂದ ಜೀವನ ಸಾಗಿಸಬೇಕು . ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ , ಅಷ್ಟು ಧರ್ಮ ಹುಟ್ಟಿಕೊಳ್ಳಬೇಕು . ಆಗ ಮಾತ್ರ ಮಾನವೀಯತೆ ಎದ್ದು ನಿಲ್ಲಲು ಸಾಧ್ಯ . ನಾನೂ ಸಹ ಮೀಸಲಾತಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತೇನೆ . ಮೀಸಲಾತಿ ಎನ್ನುವುದು ವೋಟ್ ಬ್ಯಾಂಕ್ ರಾಜಕಾರಣದ ಕೀಲಿ ಕೈ ಆಗುತ್ತಿದ್ದೆ . ಹಿಂದೆದ್ದೋ ತಪ್ಪು ಮಾಡಿದ್ದಾರೆ ಎಂದು ಈಗ ಬ್ರಾಹ್ಮಣರನ್ನು ತುಳಿಯುವುದು ದೊಡ್ಡ ಮೂರ್ಖತನ . 
ನಾನು ಬ್ರಾಹ್ಮಣ ದ್ವೇಷಿಯೂ ಹೌದು , ದಲಿತ ವಿರೋಧಿಯೂ ಹೌದು . ಯಾವುದೊ ಒಂದು ಜಾತಿಗೋ ಅಥವಾ ಧರ್ಮಕ್ಕೋ ಕಟ್ಟಿ ಹಾಕಿಕೊಂಡು ಬರೆಯುವುದು ಅತಿ ಕೆಳ ಮಟ್ಟದ ಸಾಹಿತ್ಯ . ನಮ್ಮಲ್ಲಿ ಈ ರೀತಿಯ ಬಹಳ ದೊಡ್ಡ ಗುಂಪೇ ಇದೆ , ಈ ಲೋಫರ್ ಬಳಗಕ್ಕೆ ಸೇರುವ ಬದಲು ನಾನು ಹಸ್ತ ಸಾಮುದ್ರಿಕ , ಜ್ಯೋತಿಷ್ಯದ ಪುಸ್ತಕ ಬರೆದು ಜೀವನ ಸಾಗಿಸುವುದು ಲೇಸು .
 

28/4/16

ಅಪೂರ್ಣ

 ಕಥೆಗಾರ ನಿಮಿತ್ತ ಮಾತ್ರ  . ಬೇಕಿದ್ದರೆ ನೀವೇ ಕಥೆಗಾರನನ್ನು ಕೇಳಿ ನೋಡಿ , ಒಂದು ಉತ್ತಮ ಕಥೆ ತಾನಾಗಿಯೇ ಬರೆಸಿಕೊಳ್ಳುತ್ತದೆ . ಕಥೆಗೆ ಆದಿಯೂ  ಇಲ್ಲ ಅಂತ್ಯವೂ ಇಲ್ಲ . ಕಥೆಯೆಂದರೆ ಜೀವನಕ್ಕೆ ಹಾಕಿದ ಚೌಕಟ್ಟು ಅಷ್ಟೇ . ಕಥೆ ಹೇಗೆ ಹುಟ್ಟುತ್ತದೆ ? . ಅನುಭವದಿಂದ ? ಕಲ್ಪನೆಯಿಂದ ? ಕನಸಿನಿಂದ ? ಸುಪ್ತ ಪ್ರಜ್ಞೆಯಿಂದ ? . ಇವೆಲ್ಲವೂ ಹೌದು ಅಥವಾ ಇವ್ಯಾವುದೂ ಅಲ್ಲ . ಕಥೆ ಹುಟ್ಟಲು ಕಾರಣಗಳು ಬೇಕಿಲ್ಲ .
ಓದಿದವರನ್ನು ಅಷ್ಟರ ಮಟ್ಟಿಗೆ ಸೆಳೆಯುವ , ಚಿಂತನೆಗೆ ಹಚ್ಚುವ ಕಥೆ , ಕಥೆಗಾರನ ಒಳಗಿದ್ದಾಗ ಅವನಿಗೆ ಎಷ್ಟು ಯಾತನೆ ಕೊಟ್ಟಿದ್ದಿರಬಹುದು ? ಎಷ್ಟರ ಮಟ್ಟಿಗೆ ಆತನನ್ನು ಚಿಂತನೆಗೆ ಹಚ್ಚಿರಬಹುದು ? . ಯಾವಾಗಲಾದರೂ ಯೋಚಿಸಿದ್ದಿರಾ ? . ಕಥೆಗಾರನಿಗೆ ಕಥೆಯೆಂಬುದು ವಿಷವಿದ್ದಂತೆ ಅದು ಆತನನ್ನೇ ಕೊಲ್ಲುತ್ತಾ ಹೋಗುತ್ತದೆ .
ಅವನೊಬ್ಬನಿದ್ದ , ಹೆಸರು ಅನವಶ್ಯಕ . ಆತ ಅದ್ಭುತ ಕಥೆಗಾರ ! . ಕಾಗದದ ಮೇಲೆ ಲೇಖನಿಯಿಟ್ಟರೆ ಸಾಕು ಅದ್ಭುತ ಕಥೆಗಳು ಸೃಷ್ಟಿಯಾಗುತ್ತಿತ್ತು . ಲೇಖನಿಯಿದ್ದರೆ ಸಾಕು , ಜಗತ್ತನ್ನೇ ಆಳುವ ಸಾಮರ್ಥ್ಯ ಅವನಿಗಿತ್ತು . ಒಂದಷ್ಟು ಕಥೆ , ಕವನಗಳನ್ನು ಬರೆದಾದ ಮೇಲೆ ತಲೆ ಖಾಲಿಯಾದಂತೆ ಅನಿಸತೊಡಗಿತು . ನಂತರದ ಅವನ ಬರಹಗಳು ಹೇಳಿದ್ದೆ ಹೇಳುವ ಕಿಸುಬಾಯಿ ದಾಸನಂತೆ ಆಗ ತೊಡಗಿತ್ತು . ಈ ರೀತಿ ಅವನಿಗಷ್ಟೇ ಅನಿಸಿದ್ದಲ್ಲ ಓದುಗರಿಗೂ ಅದು ಅನುಭವಕ್ಕೆ ಬರತೊಡಗಿತು . ಎಷ್ಟೇ ಶ್ರದ್ಧೆ , ಅಧ್ಯಯನದಿಂದ ಕಥೆ ಬರೆದರೂ ಅದೊಂದು ರೀತಿಯ ಅಪೂರ್ಣತೆ ಕಥೆಗಳನ್ನು ಕಾಡುತಿತ್ತು . ಆತ ಏನೇ ಮಾಡಿದರೂ ಒಳ್ಳೆಯ ಬರಹ ನೀಡಲು ಸಾಧ್ಯವೇ ಆಗಲಿಲ್ಲ .
ಒಂದು ದಿನ ಇದ್ದಕಿದ್ದಂತೆ ಏನೋ ಹೊಳೆಯಿತು . ನಗಲು ಶುರು ಮಾಡಿದ . ನಕ್ಕ , ಗಹ-ಗಹಿಸಿ ನಕ್ಕ . ಗಂಟೆ ಗಟ್ಟಲೆ , ದಿನಗಟ್ಟಲೇ ನಗತೊಡಗಿದ . ಅಪೂರ್ಣ ಜಗತ್ತು , ಢಾಂಬಿಕ ಜನರು , ಕಾಡು , ನದಿ , ಸಮುದ್ರ , ರಸ್ತೆ ಎಲ್ಲವೂ ಅವನ ಸ್ಮೃತಿ ಪಟಲದ ಮೇಲೆ ಹಾದು ಹೋದವು . ಈ ಜಗತ್ತು ಹಾಗೆ ತಾನೇ ? . ಯು ಹ್ಯಾವ್ ಟು ಕೋಪ್ ಅಪ್ ವಿಥ್ ದಿಸ್ ಇಂಪರ್ಫೆಕ್ಟ್ ವರ್ಲ್ಡ್ . ತನ್ನ ಬರಹಗಳೆಲ್ಲವೂ ಬಾಲಿಶವಾಗಿ ಕಾಣಿಸತೊಡಗಿತು . ಹೊಸತನ್ನೆನ್ನಾದರೂ ಕೊಡಬೇಕು , ನಿರ್ಧರಿಸಿದ . ಖಾಲಿ ಹಾಳೆಯೊಂದನ್ನು ತೆಗೆದುಕೊಂಡು ಬರೆದ ' ಈ ಹಾಳೆಯ ಹಿಂದೆ ಬರೆದಿರುವುದು ನಿಜ ' , ಇನ್ನೊಂದು ಬದಿ ಬರೆದ ' ಈ ಹಾಳೆಯ ಹಿಂದೆ ಬರೆದಿರುವುದು ಸುಳ್ಳು ' . ಆ ಹಾಳೆಯನ್ನು ದಾರಕ್ಕೆ ಸುರುವಿ ಅದನ್ನೇ ದಿಟ್ಟಿಸುತ್ತಾ ಕುಳಿತ ......  

26/4/16

ಬದುಕಿನಾಚೆ-೩

ಪೇಟೆ ಬೀದಿಯಲ್ಲಿ ಹಳೆಯ ತಾಮ್ರದ ಪಾತ್ರೆಗೆ ಕಲಾಯಿ ಹಾಕಿಸುತ್ತಾ ರಮೇಶ ಭಟ್ಟರು ಕುಳಿತಿದ್ದರು . ಅವರಿಗೆ ಮೂರ್ನಾಲ್ಕು ಎಕರೆ ತೋಟ ಸರ್ಕಾರದ ಪ್ರಕಾರ ಇದ್ದರೂ ಕಾನು ಮೂಲೆಯಲ್ಲಿ ಒಂದೆರಡು ಎಕರೆ ಕಾಡು ಸವರಿ ಅಲ್ಲಿಯೂ ಸಹ ಅಡಿಕೆ ಮರ ನೆಟ್ಟಿದ್ದರು . ಕೊಳೆ ಔಷಧಿ ಹೊಡೆಯಲು ಬಳಸುವ ತಾಮ್ರದ ಪಾತ್ರೆಗೆ ಪದೇ ಪದೇ ಕಲಾಯಿ ಹಾಕಿಸಬೇಕಿತ್ತು . ಭಟ್ಟರಿಗೆ ಅದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು . ಸಮಯ ಕಳೆಯಲೆಂದು ಕಲಾಯಿ ಸಾಬನ ಬಳಿ ಹರಟೆಗೆ ಕುಳಿತರು .
" ಅದೇನ್ ಕಲಾಯಿ ಹಾಕ್ತಿಯೋ , ದಿನಾ ನಿನ್ ಅಂಗಡಿಗೆ ಬಂದು ಬೆಂಚು ಬಿಸಿ ಮಾಡ್ಲ ? . ನಾ ಒಂದು ಹೊಸ ಸ್ಟೀಲ್ ಡ್ರಮ್ ತಗ ಬಿಡ್ತೀನಿ . ಈ ಸಮಸ್ಯೆ ಇರಲ್ಲ ನೋಡು "
" ಹಂಗ್ ಒಂದ್ ಮಾಡ್ಬೇಡಿ , ಈಗ್ಲೇ ಗಿರಾಕಿ ಇಲ್ದೆ ಯಾಪಾರ ಖೈದು ಮಾಡ ಸ್ಥಿತಿ ಬಂದದೆ . ಕೊಳೆ ಔಷಧಿನ  ಪಾತ್ರೆಗೆ ಹಾಕಿದ್ರೆ ಹಿಂಗೆಯಾ " ಎಂದು ಆತ ತನ್ನ ಸರ್ವ ಪ್ರಯತ್ನವನ್ನೂ ಮಾಡಿ ಗಿರಾಕಿಯನ್ನು ಉಳಿಸಿಕೊಳ್ಳುತ್ತಿದ್ದ .
ಅಷ್ಟರಲ್ಲಿಯೇ ರೈಲ್ವೇ ಕೆಲಸ ಮಾಡುತ್ತಿದ್ದ ಬೋಯಿಗಳು ಕಲಾಯಿ ಸಾಬನ ಬಳಿ ಬಂದರು .ಅವರನ್ನು ನೋಡಿದರೆ ಅವರು ಈ ಶತಮಾನದ ಮನುಷ್ಯರಂತೆ ಕಾಣುತ್ತಿರಲಿಲ್ಲ . ವ್ಯಕ್ತಿಯೊಬ್ಬನಿಗೆ ಇರುವ  ಸಮಾಜದ ಯಾವ ಒತ್ತಡಗಳೂ ಇಲ್ಲದೆ ಅಂದು ದುಡಿದದ್ದನ್ನು ಅಂದೇ ತಿಂದು , ಕುಡಿದು ಖಾಲಿ ಮಾಡಿಬಿಡುತ್ತಿದರು . ನವ ನಾಗರಿಕತೆಯ ಒಂದೇ ಒಂದು ಕುರುಹೂ ಸಹ ಅವರ ದೇಹದ ಮೇಲೆ ಕಾಣುತ್ತಿರಲಿಲ್ಲ . ಕತ್ತಿಯಲ್ಲಿಯೇ ಕತ್ತರಿಸಿಕೊಳ್ಳುವ ಅವರ ಕೂದಲು , ಉಗುರು ಎಲ್ಲವೂ ಅವರನ್ನು ಶಿಲಾಯುಗಕ್ಕೆ ಕರೆದೊಯ್ದಿತ್ತು .
" ಸ್ವಲ್ಪ ಈ ಹಂಡೆಗೆ ಕಲಾಯಿ ಹಾಕೊಡಿ ಸೋಮಿ " ಎನ್ನುತ್ತಾ ತಿಮ್ಮಾ ಬೋಯಿ ಅವನ ಬಿಡಾರದಿಂದ ತಂದಿದ್ದ ಮಸಿ ಹಿಡಿದ ತಾಮ್ರದ ಹಂಡೆ ಎದುರಿಗಿಟ್ಟ .
" ಹೋಗಯ್ಯ ಬಿಟ್ಟಿಯಾಗಿ ಕಲಾಯಿ ಹಾಕಕ್ಕೆ ನಾ ಏನ್ ನಿನ್ ಮಾವನ ಮಗನಾ ? . ದುಡ್ಡ್ ಕೊಡು " ಎಂದು ಕಲಾಯಿ ಸಾಬ ಅಸಡ್ಡೆ ತೋರಿದ . ಅವನ ಗುಣವೇ ಹಾಗೇ ಇಂಪೋರ್ಟೆಡ್ ಪ್ಯಾಂಟು , ಶರ್ಟು ಹಾಕಿಕೊಂಡು ಹೋದವರಿಗೆ ಜಾಗ ಸ್ವಚ್ಛ ಮಾಡಿ ಅಂಗಡಿಯಲ್ಲಿ ಕೂರಿಸಿಕೊಳ್ಳುತ್ತಿದ್ದ . ಕೊಳಕು ಪಂಚೆ , ಪಟಾ-ಪಟಿ ಚಡ್ಡಿ ಹಾಕಿಕೊಂಡು ಬರುವ ಗಿರಾಕಿಗಳಿಗೆ ಇವತ್ತು , ನಾಳೆ ಎಂದು ಸತಾಯಿಸುತ್ತಿದ್ದ . ಇಂದಿರಾ ಗಾಂಧಿಯವರ ' ಗರೀಭಿ ಹಟಾವೋ ' ಮಾತನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದ .
"  ಕಾಸು ಕೊಡ್ತೀನಿ ಸೋಮಿ , ಯಾವ್ ಬಡ್ಡಿ ಮಗ ತಾನೇ ಈಗ ಕಾಸಿಲ್ದೆ ಕಲಾಯಿ ಹಾಕ್ತಾನೆ ಹೇಳಿ " ಎಂದು ತಿಮ್ಮಾ ಬೋಯಿಯೂ ಸರಿಯಾಗೇ ತಿರುಗೇಟು ನೀಡಿದ .
" ಸರಿ ನಾಳೆ ಬಂದು ತಗಂಡ್ ಹೋಗು , ಮಾಡಿ ಇಟ್ಟಿರ್ತೀನಿ "
" ಅಯ್ಯೋ ನಾವೆಲ್ಲಾ ಇವತ್ತೇ ಹೋಯ್ತಾ ಇದೀವಿ ಸೋಮಿ , ಬೇಗ ಮಾಡಿಕೊಟ್ಬಿಡಿ " ತಿಮ್ಮ ಗೋಗರೆಯ ತೊಡಗಿದ .
" ಯಾಕ್ರೋ ರೈಲ್ವೆ ಕೆಲ್ಸ ಇಷ್ಟ್ ಬೇಗ ಮುಗ್ದ್ ಹೋಯ್ತಾ ? " ಭಟ್ಟರು ಕುತೂಹಲ ತಡೆಯಲಾಗದೆ ಕೇಳಿದರು .
" ಎಲ್ಲಿ ಮುಗೀತು ಸೋಮಿ , ನಮ್ ಯಜಮಾನರನ್ನ ಪೋಲಿಸಿನೋರು ಕರ್ಕಂಡ್ ಹೋಗ್ಬಿಟ್ರು . "
" ಯಾರು ? ಆ ಇಸ್ಮಾಯಿಲ್ ಮತ್ತೆ ಅವ್ನ ಚೇಲಾ ಇದಾರಲ್ಲ ಅವರೇನೋ ? . ಎಂತ ಕೇಸು ? ಗಂಧನೋ ? ಭಂಗಿ ಸೋಪ್ಪೋ ? "
" ಅವಲ್ಲ ಎಂತದೂ ಅಲ್ಲ ಸೋಮಿ , ಈ ರೈಲ್ವೆ ಕೆಲ್ಸಕ್ಕೆ ನಾವು ಗಣಪತಿ ದೇವಸ್ಥಾನದ ಹತ್ರ ಗುಂಡಿ ತೋಡಿದೀವಲ್ಲ ಅಲ್ಲಿ ನಮ್ಗೆ ನಿಧಿ ಸಿಕ್ತು ಅಂತ ಯಾರೋ ಮೂಗರ್ಜಿ ಬರ್ದ್ ಬಿಟ್ಟವ್ರೆ . ಅದ್ಕೆ ಪೋಲಿಸ್ನೋರು ಅವರನ್ನ ಕರ್ಕಂಡ್ ಹೋದ್ರು . ನಮ್ಮುನ್ನು ಕರ್ಕಂಡ್ ಹೋಗಿ ತಿಕದ್ ಮೇಲೆ ಎರಡು ಏಟು ಕೊಟ್ರು . ನಮ್ಗೆ ಯಾವ್ ನಿಧಿನೂ ಸಿಕ್ಕಿಲ್ಲ ಅಂತ ನಂಬ್ಸೋಕೆ ಸಾಕಾಗ್ಹೊತು . ಅಲ್ಲ ನಿಧಿ ಏನು ಎಲ್ಲರಿಗೂ ಸಿಕ್ಕೊಯ್ತದ ? ಹಂಗ್ ಸಿಕ್ಕಿದ್ರು ಅದ್ನ ಬಲಿ ಕೊಡದೆ ಮುಟ್ಟಕ್ಕೆ ಆಯ್ತದ ? . ಈ ಪೋಲಿಸ್ನೋರಿಗೆ ಸಿಗದು ನಮ್ಮನ್ತವ್ರೆಯ . ಅದ್ಕೆ ಈ ಊರಿನ್ ಸಾವಾಸವೇ ಬ್ಯಾಡ ಅಂತ ಕೆಲಸ ಖೈದು ಮಾಡಿ ಹೊರಟ್ವಿ ಸೋಮಿ " ಎಂದು ಒಂದೇ ಉಸಿರಲ್ಲೇ ವರದಿ ನೀಡಿದ .
ಭಟ್ಟರು ಮನಸೊಳಗೇ ನಕ್ಕರು .
*********************************************************************************
" ಅದ್ಯಾವ ಬೋಳಿ ಮಗ ಅರ್ಜಿ ಬರ್ದಿದಾನೋ ? ನನ್ ಕೈಗೆ ಸಿಗ್ಲಿ ಮಾಡ್ತೀನಿ " ಸ್ಟೇಷನ್ ಆಚೆ ನಿಂತು ಪರಾಸ್ಕ ಹಲ್ಲು ಕಡಿಯುತ್ತಿದ್ದ .
" ಏಯ್ ಸಣ್ಣಕೆ ಮಾತಾಡೋ ಪೋಲಿಸ್ನೋರಿಗೆ ಕೇಳಿದ್ರೆ ಮತ್ತೆ ಮುಕಳಿ ಕೆಂಪ್ ಆಗೋ ಹಂಗ್ ಹೊಡಿತಾರೆ " ಗಂಗಾಧರ ಎಚ್ಚರಿಕೆ ನೀಡಿದ .
" ನಮ್ ಜನಗಳಿಗೆ ಅರ್ಜಿ ಬರ್ಯೊ ಅಷ್ಟು ಧೈರ್ಯಾನೂ ಇಲ್ಲ , ಅಷ್ಟು ಅವರೂ ಓದೂ ಇಲ್ಲ . ನಂಗ್ಯಾಕೋ ಈ ಬ್ರಾಹ್ಮರ ಮೇಲೆ ಅನ್ಮಾನ " . ಷರ್ಲಾಕ್ ಹೋಮ್ಸ್ ನ ಅಪರಾವತಾರ ತಾನೇ ಎಂದು ತಿಳಿದಿದ್ದ ದಿನೇಶ ತನ್ನ ಮಾತು ತೇಲಿಸಿದ .
" ಇವ್ರಿಗೆ ಸರ್ಯಾಗ್ ಬುಧ್ದಿ ಕಲ್ಸಬೇಕು . ನಮ್ ಎಲ್ಲಾ ದಂಧೆಗೂ ಇವ್ರು ಮೂಗ್ ತೂರುಸ್ತಾರೆ . ನಮ್ ಪಾಡಿಗ್ ನಾವು ಕೆಲ್ಸ ಮಾಡ್ತಾ ಇದ್ರೆ ಇವ್ರಿಗೆ ಏನು ಅಂತೀನಿ ? . ಸುಮ್ನೆ ಘಂಟೆ ಅಲ್ಲಾಡ್ಸೋದು ಬಿಟ್ಟು ನಮ್ ಸುದ್ದಿಗ್ ಬಂದ್ರೆ ಸುಮ್ನೆ ಬಿಡ್ಬೇಕ ? " ತಂಡದ ನಾಯಕ ಇಸ್ಮಾಯಿಲ್ ನ ಮಾತಿಗೆ ಎಲ್ಲರೂ ತಲೆದೂಗಿದರು .


18/4/16

ಬದುಕಿನಾಚೆ - ೨

" ಈ ಕಾಂಟ್ರಾಕ್ಟ್ ಹಿಡಿಲೇ ಬೇಕಪ್ಪ " ಅರಳೀಕಟ್ಟೆಯ ಮೇಲೆ ಕುಳಿತಿದ್ದ ಇಸ್ಮಾಯಿಲ್ ಮಾತುದುರಿಸಿದ . ಉಳಿದ ದಿನೇಶ , ಗಂಗಾಧರ ಮತ್ತು  ಪರಾಸ್ಕ ಸರ್ವ ಸಮ್ಮತದಿಂದ ತಲೆಯಾಡಿಸಿದರು . ಫರ್ನಾಂಡೀಸ್ ಎನ್ನುವ ಹೆಸರು ಜನರ ಬಾಯಲ್ಲಿ ಪರಾಸ್ಕ ಆಗಿತ್ತು . ಜಂಬಗಾರಿನ ಇತಿಹಾಸದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಎಸ್.ಎಸ್.ಎಲ್.ಸಿ ಯ ಮುಖ ನೋಡಿದದವರು ಅವರೇ ನಾಲ್ಕು ಜನ . ಶಾಲೆಯ ಮುಖ ನೋಡಿದ್ದರಾದರೂ ಎಂದೂ ಅವರ ಸ್ವಂತ ಬಲದಿಂದ ಪಾಸಾದವರಲ್ಲ .   ಹತ್ತು ವರ್ಷಗಳಿಗೊಮ್ಮೆ ಹೈ ಸ್ಕೂಲು ಬೋರ್ಡಿನ ಪಾಠಗಳು ಬದಲಾದಾಗ , ಬೋರ್ಡಿನವರಿಗೆ ಇವರನ್ನು ಏನು ಮಾಡಬೇಕೆಂದು ತಿಳಿಯದೆ ಪಾಸು ಮಾಡಿದ್ದರು . ಅದೇ ಆಧಾರದ ಮೇಲೆ ಈ ನಾಲ್ಕು ಜನ ಅಬ್ಬಾಸ್ ಬೇರಿಯ ಕೆಳಗೆ ಸಬ್-ಕಂಟ್ರಾಕ್ಟರ್ ಗಳಾಗಿ ಸೇರಿಕೊಂಡಿದ್ದರು . ನಿಧಾನವಾಗಿ ಭೂಗತ ಜಗತ್ತಿಗೆ ತಮ್ಮನ್ನು ತೆರೆದುಕೊಂಡರು . ಮಲೆನಾಡಿನ ಗಂಧಕ್ಕೆ ಹೊರ ದೇಶಗಳಲ್ಲಿ  ಒಳ್ಳೆಯ ಬೆಲೆ ಇರುವುದನ್ನು ಕಂಡುಕೊಂಡ ಇವರು ಗಂಧವನ್ನು ಕದ್ದು ಸಾಗಿಸತೊಡಗಿದರು . ಹತ್ತರ ಜೊತೆ ಹನ್ನೊಂದು ಎನ್ನುವಂತೆ ಭಂಗಿ ಸೊಪ್ಪು ಬೆಳೆಯುವುದು , ಬೀಟೆ , ನೀಲಗಿರಿಯ ಕಳ್ಳ ಸಾಗಣೆ  ಶುರು ಮಾಡಿಕೊಂಡರು . ಇಷ್ಟೆಲ್ಲಾ ಮಾಡಿಯೂ ಒಮ್ಮೆ ಸಹ ಅವರು ಪೋಲಿಸ್ ಸ್ಟೇಷನ್ ನ ಮೆಟ್ಟಿಲು ಹತ್ತಲಿಲ್ಲ . ಅವರ ಅದೃಷ್ಟವೋ ಅಥವಾ ಪೋಲೀಸರ ಕುರುಡೋ ಗೊತ್ತಿಲ್ಲ . ಜನರೆಲ್ಲಾ ಇವರಿಗೆ ಶಾಸಕ ತಿರುಮಲೇಗೌಡರ ಕುಮ್ಮಕ್ಕು ಇದೆ ಎಂದೇ ತಿಳಿದುಕೊಂಡಿದ್ದರು . ಇವರೂ ಸಹ ಅದರ ಸದುಪಯೋಗ ಪಡೆದುಕೊಳ್ಳುತ್ತಿದರು .
ಜಂಬಗಾರಿಗೆ ಶತಮಾನಗಳಿಂದ ಬರುತ್ತಿದ್ದ ಎರಡು ಭೋಗಿಯ ರೈಲನ್ನು ತೆಗೆದು ಹಾಕಿ , ಮೀಟರ್ ಗೇಜ್ ಅನ್ನು ಬ್ರಾಡ್ ಗೇಜ್ ಮಾಡಲು ಸರ್ಕಾರ ಆದೇಶ ಹೊರಡಿಸಿತ್ತು . ಆ ಕಾಂಟ್ರಾಕ್ಟ್ ಹಿಡಿದರೆ ಸ್ವಲ್ಪ ಹಣವನ್ನು ಜೇಬಿಗೆ ಇಳಿಸಬಹುದೆಂದು ನಾಲ್ವರೂ ಉಪಾಯ ಹೂಡಿದರು . ಹಳ್ಳಿಗಳಲ್ಲಿ ಸಣ್ಣ ಪುಟ್ಟ ಸೇತುವೆ , ರಸ್ತೆ , ಶಾಲೆಯ ಕೆಲಸ ಮಾಡಿ ಪುಡಿ ಕಾಸು ಸಂಪಾದಿಸುವುದು ಅವರಿಗೆ ಬೇಸರ ಬಂದುಹೋಗಿತ್ತು . ಒಂದೇ ಏಟಿಗೆ ಶ್ರೀಮಂತರಾಗುವ ದಾರಿ ಅವರ ಕಣ್ಣು ಕುಕ್ಕುತಿತ್ತು .
ತಕ್ಷಣವೇ ಬೆಂಗಳೂರಿಗೆ ಹೋಗಿ ಕಾಂಟ್ರಾಕ್ಟ್ ಹಿಡಿದು ತಂದೇ ಬಿಟ್ಟರು .  ಸೆಂಟ್ರಲ್ ಗವರ್ನಮೆಂಟ್ ನ ಕೆಲಸವೆಂದರೆ ಏನು ಸಣ್ಣು ಮನೆ ಹೊಳೆಗೆ ಸಂಕ ಹಾಕಿದಂತೆಯೇ ? . ಆ ಮೂರ್ಖರಿಗೆ ರೈಲಿನ ಬಗ್ಗೆ ಏನು ಗೊತ್ತು ? . ಎರಡು ಕಬ್ಬಿಣದ ಹಳಿ ಫಿಟ್ ಮಾಡಿದರೆ ಆಯಿತು  ಎಂದು ತಿಳಿದುಕೊಂಡು ಕಾಂಟ್ರಾಕ್ಟ್ ತೆಗೆದುಕೊಂಡಿದ್ದರು . ಕೆಲಸ ಶುರು ಮಾಡದಿದ್ದರೆ ದಂಡ ಕಟ್ಟುವ ಪರಿಸ್ಥಿತಿ ಬರುತಿತ್ತು . ಬೇರೆ ದಾರಿ ಕಾಣದೆ ಎಂಜಿನಿಯರ್ ರನ್ನು ಹುಡುಕಿಕೊಂಡು ಊರೂರು ಅಲೆಯ ತೊಡಗಿದರು .
ಕೆಲಸದ ಪ್ರಗತಿ ತೋರಿಸಲು ಊರಿನ ತುಂಬೆಲ್ಲಾ ಗುಂಡಿ ತೋಡಿ , ಕಂಡ ಕಂಡಲ್ಲಿ ಜಲ್ಲಿ ಕಲ್ಲುಗಳನ್ನು ಇಳಿಸಿದ್ದರು . ಅವರ ಮೂರ್ಖತನದಿಂದ ಇತಿಹಾಸ ಪ್ರಸಿದ್ಧ ಜಂಬಗಾರು , ಗೂರಲು ಬಂದ ಮುದುಕಿಯಂತೆ ಕಾಣುತಿತ್ತು . ಆ ನಾಲ್ವರು ಶತ ಮೂರ್ಖರು ಗಣಪತಿ ದೇವಸ್ಥಾನದ ಸುತ್ತೆಲ್ಲಾ ಗುಂಡಿಗಳನ್ನು ತೋಡಿ , ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿ ಕಾಣಿಕೆ ಡಬ್ಬಿ ಖಾಲಿ ಹೊಡೆಯಲು ಶುರುವಾಯಿತು .

15/4/16

ಬದುಕಿನಾಚೆ - ೧

ನೀವೇನಾದರೂ ಮಲೆನಾಡಿನಲ್ಲಿ ಎತ್ತರದ ಬೆಟ್ಟವನ್ನೋ ಅಥವಾ ಮರವನ್ನೋ ಹತ್ತಿ ನೋಡಿದರೆ ತಿಳಿಯುತ್ತದೆ , ಕಾಡಿನ ಮಧ್ಯೆ ಹಳ್ಳಿಗಳು ಹುದುಗಿ ಹೋಗಿರುತ್ತವೆ . ಕಾಡಿನ ಅಂಚಿನಲ್ಲೋ ಅಥವಾ ಗುಡ್ಡದ ತಪ್ಪಲಿನಲ್ಲೋ ಹಳ್ಳಿಗಳು ಅಡಗಿಕೊಂಡಿರುತ್ತವೆ , ಅಮ್ಮನ ಮಡಿಲಿನಲ್ಲಿ ಮಗು ಮಲಗಿದಂತೆ . ಈ ಕಾಡುಗಳನ್ನೇ ಕಡಿದು ಅಡಿಕೆ ತೋಟ ಮಾಡಲಾಗಿದೆ , ಆದರೂ ನಿಮಗೆ ಕಾಡಿನ ಮಧ್ಯೆ ತೋಟ ಕಾಣಿಸುತ್ತದೆಯೇ ಹೊರತು , ತೋಟದ ಮಧ್ಯೆ ಕಾಡು ಕಾಣಿಸುವುದಿಲ್ಲ . ಅಲ್ಲಲ್ಲಿ ಟಾರಿನ ರಸ್ತೆ ಕಾಣಿಸಬಹುದು . ಗಂಟೆಗೊಂದು ವಾಹನ ಸಂಚಾರ . ಉಳಿದಂತೆಲ್ಲಾ ಕಾಡು ' ಗವ್ವ್ ' ಎನ್ನುವ ನಿರ್ಜೀವ ಜಡ ವಸ್ತುವಂತೆ ಕಾಣಿಸುತ್ತದೆ . ಮಲೆನಾಡಿನ ಜನಗಳಿಗೂ , ಕಾಡಿಗೂ ಅವಿನಾಭಾವ ಸಂಬಂಧವಿದೆ . ಶಿವಮೊಗ್ಗ , ಉತ್ತರಕನ್ನಡ , ದಕ್ಷಿಣಕನ್ನಡ ಈ ಮೂರೂ ಜಿಲ್ಲೆಗಳಲ್ಲಿ ಹವ್ಯಕರ ಸಂಖ್ಯೆ ಜಾಸ್ತಿಯಿದೆ . ಮಯೂರ ವರ್ಮ ಹವ್ಯಕರನ್ನು ಹೈಗುಂದ ಎನ್ನುವ ಸ್ಥಳದಿಂದ ( ಈಗೀನ ಉತ್ತರಾಖಂಡ್ ಪ್ರಾಂತ್ಯದ ನೈನೀತಾಲ್ ) ಯಜ್ಞ , ಯಾಗಾದಿಗಳನ್ನು ಮಾಡಲು ಕರೆದುಕೊಂಡು ಬಂದನಂತೆ . ಹವನ ಮಾಡುವವ , ಹವಿಕ ಕ್ರಮೇಣ ಹವ್ಯಕ ಆಗಿರಬಹುದು . ಪೌರೋಹಿತ್ಯ ಒಂದೇ ಹವ್ಯಕರ ಅಗತ್ಯ ಪೂರೈಸಲಾಗದೆ ಹವ್ಯಕರು ಕೃಷಿಯನ್ನು ಪ್ರಾರಂಭಿಸಿದರು . ಮೊದಲಿಗೆ ಅವರು ಬೆಳೆದದ್ದು ವೀಳ್ಯದೆಲೆ , ಕಾಳುಮೆಣಸು . ಈ ಬೆಳೆಗಳಿಗೆ ಆಶ್ರಯ ನೀಡಿದ್ದು ಅಘನಾಶಿನಿ , ಶರಾವತಿ ನದಿ ಗುಂಟ ಇರುವ ಅಭೇದ್ಯ ಕಾಡುಗಳು . ಕಾಡಿನ ದೈತ್ಯ ಮರಗಳನ್ನು ತಬ್ಬಿಕೊಂಡು ವೀಳ್ಯದೆಲೆ , ಕಾಳುಮೆಣಸು ಬೆಳೆಯುತ್ತಿತ್ತು . ಆದರೆ ಅಡ್ಡಾ-ದಿಡ್ಡಿ ಬೆಳೆದಿರುವ ಮರಗಳಿಗೆ ಬಳ್ಳಿ ಹಂಬಿಸಲು ಕಷ್ಟವಾಗಿರಬೇಕು , ಅದಕ್ಕೇ ನೆಟ್ಟಗೆ ಬೆಳೆಯುವ ಅಡಿಕೆ ಮರ ಕಾಲಿಟ್ಟಿತು . ಅಡಿಕೆ ಮರಕ್ಕೆ ಬಳ್ಳಿ ಹಂಬಿಸುವುದು ಸುಲಭವಾಗಿರುವುದರ ಜೊತೆಗೆ ಅಡಿಕೆಯನ್ನೂ ಮಾರಾಟ ಮಾಡಬಹುದಿತ್ತು . ಕ್ರಮೇಣ ಅಡಿಕೆಯೇ ಉಳಿದ ಬೆಳೆಯನ್ನು ಹಿಂದಿಕ್ಕಿತು . ಅಡಿಕೆ ತೋಟಗಳಿಂದ ಹವ್ಯಕರಲ್ಲದೆ ಇತರೆ ಜಾತಿಯವರಿಗೂ ಉದ್ಯೋಗ ಸಿಗುವಂತಾಯಿತು .
ಜಂಬಗಾರಿಗೆ ಸಾವಿರ ಸಾವಿರ ವರ್ಷಗಳ ಇತಿಹಾಸವಿದೆ . ವಿಜಯನಗರದ ಸಾಮಂತರಾದ ಕೆಳದಿ ಅರಸರು ಜಂಬಗಾರನ್ನು ಆಳಿದ್ದಕ್ಕೆ ಸಾಕ್ಷಿ ಗಣಪತಿ ದೇವಸ್ಥಾನ ಹಾಗೂ ಸದಾಶಿವ ಸಾಗರ ಎಂಬ ಕೆರೆ  . ಜಂಬಗಾರಿನ ವೈಶಿಷ್ಟ್ಯ ಇರುವುದು ಆ ಊರಿನಲ್ಲಿ ವಾಸವಾಗಿರುವ ಜಾತಿಗಳಲ್ಲಿ  . ಅಲ್ಲಿ ಯಾವ ಜಾತಿಯೂ ಇವತ್ತು , ನೆನ್ನೆ ಬಂದಿಲ್ಲ . ಆ ಎಲ್ಲಾ ಜಾತಿಗಳಿಗೂ ದೊಡ್ಡ ದೊಡ್ಡ ಇತಿಹಾಸವೇ ಇದೆ . ಪ್ರತಿಯೊಂದು ಜಾತಿಯೂ ಮತ್ತೊಂದು ಜಾತಿಯ ಮೇಲೆ ಅವಲಂಬಿತವಾಗಿದೆ .
ಜಂಬಗಾರಿನ ಬ್ರಾಹ್ಮಣರ ಕೇರಿಯ ತುದಿಯಲ್ಲಿ ವಿಷ್ಣುವಿನ ದೇವಸ್ಥಾನವಿದೆ . ಇತರೆ ಜಾತಿಯವರು ಊರಿನ ಹೊರಗೆ ಇದ್ದಾರೆ . ಸಾಮಾನ್ಯವಾಗಿ ವಿಷ್ಣುವಿನ ದೇವಾಲಯ ಊರಿನ ಮಧ್ಯದಲ್ಲಿಯೇ ಇರುತ್ತದೆ . ಕೇವಲ ಬ್ರಾಹ್ಮಣ ಕೇರಿಯೊಂದೆ ಊರು ಎಂದಾದರೆ ವಿಷ್ಣು ದೇವಾಲಯ ಊರ ಹೊರಗೆ ಆಯಿತಲ್ಲವೇ ? . ಆದ್ದರಿಂದ ನಾವೂ ಸಹ ಜಂಬಗಾರಿಗೆ ಸೇರುತ್ತೇವೆ ಎನ್ನುವುದು ಇತರೆ ಪೈಕಿಯವರ ವಾದ . ಆದರೆ ಕೆಲವು ಬ್ರಾಹ್ಮಣ ಕೇರಿಗಳು ಶರಾವತಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ , ನಂತರ ಮುಸ್ಲಿಂ ಆಕ್ರಮಣದಿಂದ ಬ್ರಾಹ್ಮಣರು ಚೆಲ್ಲಾಪಿಲ್ಲಿಯಾದರು ಎನ್ನುವ ಇತಿಹಾಸವನ್ನು ಒಬ್ಬ ಬ್ರಿಟಿಷ್ ಅಧಿಕಾರಿ ಬರೆದಿದ್ದಾನೆ . ಈಗಲೂ ಗಣಪತಿ ದೇವಸ್ಥಾನದ ಪಕ್ಕವೇ ಒಂದು ಮಸೀದಿ , ಮದರಸ ಇದೆ . ಹೈದರಾಲಿಯ ಸೈನಿಕರು ಜಂಬಗಾರಿನಲ್ಲೇ ನೆಲೆಸಿದರು ಎನ್ನಲಾಗಿದೆ .
ಜಂಬಗಾರು ಜಾತಿ ಕಲಹ , ಕೋಮು ಗಲಭೆ , ಒಳಜಗಳ , ಶೀತಲ ಸಮರದಿಂದ ಹೊರತಾಗಿಲ್ಲ ............
                                                                                                           ( ಮುಂದುವರೆಯುವುದು.................)

3/4/16

ಖಾರಾಬಾತು - 2 ( ಕೃಷ್ಣಾ ........ ಎನಬಾರದೇ ? )

ಪರ ಸ್ತ್ರೀ ವ್ಯಾಮೋಹ ಏನು ಇಂದು , ನಿನ್ನೆಯದೇ ? . ತ್ರೇತಾಯುಗದ ಕಾಲಾದಿಂದಲೂ ಇದೆ . ನನ್ನನ್ನು ಹೆಚ್ಚಾಗಿ ಕಾಡುವ ಪಾತ್ರಗಳು ಕೃಷ್ಣ , ರಾಮ ಅಲ್ಲ , ಸೀತೆ ,ದ್ರೌಪದಿ , ಗಾಂಧಾರಿ, ಮಂಡೋದರಿ . ಇವರೆಲ್ಲರ ಪಾತ್ರಕ್ಕೆ ಅತಿ ಹೆಚ್ಚಿನ ಒತ್ತು ಕೊಟ್ಟಿದ್ದರೂ ಹೆಚ್ಚಿನ ಜನಗಳಿಗೆ ಆ ಪಾತ್ರಗಳ ಮಹತ್ವ ತಿಳಿಯುವುದೇ ಇಲ್ಲ .  ಅತಿ ಸೂಕ್ಷ್ಮವಾಗಿ ಗಮನಿಸಿದರೆ ಪುರುಷ ಪ್ರಧಾನ ಸಮಾಜದ ವಿರಾಟ್ ರೂಪ ನಮಗೆ ಅರ್ಥವಾಗುತ್ತದೆ .
ಸೀತಾ ಸ್ವಯಂವರದಲ್ಲಿ ರಾಮನ ಬದಲು ಯಾರಾದರು ಮುದುಕ ಶಿವ ಧನಸ್ಸನ್ನು ಎತ್ತಿದ್ದರೆ ? ದ್ರೌಪದಿಯ ಸ್ವಯಂವರದಲ್ಲಿ ಯಾರಾದರೂ ದುಷ್ಟ, 'ಮತ್ಸ್ಯಯಂತ್ರ' ಭೇದಿಸಿದ್ದರೆ ? . ಎಷ್ಟಾದರೂ ಆತ ಅಪ್ರತಿಮ ವೀರ ತಾನೇ ? . ಅವನಿಗೆ ವಯಸ್ಸಿನ ಮಿತಿ ಇಲ್ಲ .ವಧುವಿಗೆ ಆಯ್ಕೆಯೇ ಇಲ್ಲದಿದ್ದರೆ ಅದು ಸ್ವಯಂವರ ಹೇಗಾದೀತು ? .  ದ್ರೌಪದಿಯ ಇಷ್ಟ ಕಷ್ಟಗಳನ್ನು ಕೇಳಿದವರ್ಯಾರು ? . ದ್ರೌಪದಿಗೆ ಪಂಚ ಪಾಂಡವರ ಮೇಲೂ ಸಮನಾದ ಪ್ರೀತಿ ಇತ್ತು ಎಂದು ನಿಮಗೆ ಅನಿಸಿದರೆ , ನೀವು ಮಹಾಭಾರತವನ್ನು ಸರಿಯಾಗಿ ಓದಿಲ್ಲವೆಂದು ಅರ್ಥ . ದ್ರೌಪದಿಗೆ ಮಧ್ಯಮ ಪಾಂಡವ ಅರ್ಜುನನ ಮೇಲೆ ಹೆಚ್ಚು ಒಲವಿತ್ತು . ಗಾಂಧಾರಿಯ ಪಾಡೂ ಇದೇ . ಗಾಂಧಾರಿ ಈಗೀನ ಅಫ಼್ಗನ್ ಪ್ರದೇಶಕ್ಕೆ ಸೇರಿದವಳು . ಅವಳನ್ನು ಧೃತರಾಷ್ಟ್ರನಿಗೆ ಕೊಟ್ಟು ಮದುವೆ ಮಾಡುವಾಗ ಅವಳ ಅಭಿಪ್ರಾಯ ಕೇಳಿದ್ದರೆ ? . ಇಡೀ ಜೀವನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕತ್ತಲಲ್ಲೇ ಉಳಿದು ಬಿಟ್ಟಳು . ಕೆಟ್ಟ ಮಕ್ಕಳು , ಕುರುಡು ಗಂಡ , ಯುಧ್ದ . ಅವಳ ಮುಂದೆಯೇ ಕೌರವರನ್ನು ಸಾಯಿಸಿದರು . ಅದು ಹೇಗೆ ದುಃಖ ಸಹಿಸಿಕೊಂಡಳೋ ? . ಮಂಡೋದರಿಯಂತ ಹೆಂಡತಿಯನ್ನು ಇಟ್ಟುಕೊಂಡು ಸಹ ರಾವಣ ಸೀತೆಯನ್ನು ಮೋಹಿಸಿದ . ಮಂಡೋದರಿ ಪ್ರತಿಭಟಿಸಬಹುದಿತ್ತು , ಯಾವ ಹೆಂಡತಿ ತಾನೇ ಒಪ್ಪಿಯಾಳು ? . ಇಲ್ಲ ಆಕೆಗೆ ಆ ಹಕ್ಕಿಲ್ಲ , ಅವಳು ಹೆಣ್ಣು . ರಾಮ ಮಾಡಿದ್ದೇನು ಸಣ್ಣ ತಪ್ಪೇ ? . ಸೀತೆಯ ಪಾವಿತ್ರ್ಯತೆಯನ್ನು ಪರೀಕ್ಷಿಸುವ ಕೆಟ್ಟ ಚಾಳಿ ಅವನಿಗೆ ಯಾಕೆ ಬಂತೋ ? . ಸೀತೆ ತಿರುಗಿ ರಾಮನ ಪಾವಿತ್ರ್ಯತೆಯನ್ನೇ ಪ್ರಶ್ನಿಸಬಹುದಿತ್ತು , ಆತನೂ ಒಂಟಿಯಾಗೇ ಇದ್ದನಲ್ಲವೇ ? . ಹುಡುಕುತ್ತಾ ಹೋದರೆ ಇಂತಹ ಸಾವಿರ ಉದಾಹರಣೆಗಳನ್ನು ಕೊಡಬಹುದು . ಪಗಡೆಯಾಟದಲ್ಲಿ ಹೆಂಡತಿಯನ್ನೇ ಅಡವಿಡುವುದು ಕ್ರೌರ್ಯವಲ್ಲವೆ ? . ದ್ರೌಪದಿಯನ್ನು ನೋಡಿದರೆ ದುರ್ಯೋಧನನಿಗೆ ತೊಡೆ ಕುಣಿಸಬೇಕೆನಿಸುತ್ತದೆ , ಕೀಚಕನಿಗೆ ಕಣ್ಣು ಹೊಡೆಯಬೇಕೆನಿಸುತ್ತದೆ , ದುಶ್ಯಾಸನನಿಗೆ ................ ಛೀ!!!!!!!!
ನನಗಿರುವ ಜಿಜ್ಞಾಸೆ ಅದಲ್ಲ , ವಸ್ತ್ರಾಪಹರಣ ಪ್ರಕರಣದಲ್ಲಿ ನಿಜವಾಗಿಯೂ ಕೃಷ್ಣ ಅಕ್ಷಯ ವಸ್ತ್ರದ ವರ ನೀಡಿದನೇ ? . ಮಹಾಭಾರತವನ್ನು ಸರಿಯಾಗಿ ಓದಿದರೆ ನಿಮಗೂ ಈ ಅನುಮಾನ ಬರಬಹುದು . ಓದಿದ್ದರೆ ಸನ್ನಿವೇಶವನ್ನು ನೆನಪಿಸಿಕೊಳ್ಳಿ . ದುರ್ಯೋಧನ ವಸ್ತ್ರಾಪಹರಣದ ಆದೇಶ ನೀಡುತ್ತಾನೆ , ಆಗ ದುಶ್ಯಾಸನ ದ್ರೌಪದಿಯನ್ನು ಕೂದಲು ಹಿಡಿದು ಎಳೆದುಕೊಂಡು ಬರುತ್ತಾನೆ . ಆಗ ಆಕೆ ರಜಸ್ವಲೆಯಾಗಿರುತ್ತಾಳೆ . ವ್ಯಾಸರು ಸ್ಪಷ್ಟವಾಗಿ ಬರೆದಿದ್ದಾರೆ , ದ್ರೌಪದಿ ರಕ್ತದ ಕಲೆಯ ಒಂಟಿ ವಸ್ತ್ರವನ್ನು ಧರಿಸಿದ್ದಳು . ಕೃಷ್ಣ ಅಕ್ಷಯ ವಸ್ತ್ರ ಕೊಟ್ಟನೆಂದೇ ಭಾವಿಸಿ , ಆದರೆ ವಸ್ತ್ರಾಪಹರಣದ ನಂತರವೂ ದ್ರೌಪದಿ ಅದೇ ವಸ್ತ್ರದಲ್ಲಿ ಇರುವ ಉಲ್ಲೇಖವಿದೆ . ನಿಜವಾಗಿಯೂ ಅಕ್ಷಯ ವಸ್ತ್ರ ನೀಡಿದ್ದರೆ ಅದು ಹೇಗೆ ಸಾಧ್ಯ ? .
ಕೃಷ್ಣನ ಪ್ರವೇಶವಾಗುವುದು ಸಭಾಪರ್ವದಲ್ಲಿ , ನಂತರ ಆತ ಮಹಾಭಾರತದ ಅನಭಿಷಿಕ್ತ ದೊರೆಯಾಗಿ ಮೆರೆಯುವುದು ನಿಸ್ಸಂದೇಹ . ಆದರೆ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನಿಗೂ , ಪಾಂಡವರಿಗೂ ಅಷ್ಟೇನೂ ಪರಿಚಯವಿರುವುದಿಲ್ಲ . ಒಂದು ಸಂಧರ್ಭದಲ್ಲಿ ಬಲರಾಮನೆ ಕೃಷ್ಣನನ್ನು ಪಾಂಡವರಿಗೆ ಪರಿಚಯಿಸುವ ಸನ್ನಿವೇಶ ವಸ್ತ್ರಾಪಹರಣದ ನಂತರ ಬರುತ್ತದೆ . ನಂತರವೂ ಸಹ ದ್ರೌಪದಿ ಎಲ್ಲಿಯೂ ಕೃಷ್ಣನನ್ನು ಅಣ್ಣ ಎಂದು ಸ್ವೀಕರಿಸಿಲ್ಲ . ಹಾಗೆ ನೋಡಿದರೆ ದ್ರೌಪದಿಗೂ , ಕೃಷ್ಣನಿಗೂ ಅಷ್ಟಕಷ್ಟೇ . ಕಾರಣ , ಮೊದಲೇ ಹೇಳಿದಂತೆ ದ್ರೌಪದಿಗೆ ಹೆಚ್ಚಿನ ಒಲವಿದ್ದದ್ದು ಅರ್ಜುನನ ಮೇಲೆ . ಆದರೆ ಕೃಷ್ಣ ಅರ್ಜುನನ ತಲೆ ಕೆಡಿಸಿದ್ದು ನಿಜ , ಅಷ್ಟಲ್ಲದೇ ತನ್ನ ತಂಗಿ ಸುಭದ್ರೆಯನ್ನೇ ಕೊಟ್ಟು ಮದುವೆ ಮಾಡಿದ . 'ಕೀಚಕ ವಧೆ' ಸನ್ನಿವೇಶದಲ್ಲೂ ದ್ರೌಪದಿ ಕೃಷ್ಣನನ್ನು ಸಹಾಯ ಬೇಡುವುದಿಲ್ಲ . ವಸ್ತ್ರಾಪಹರಣ ಸಂಧರ್ಭದಲ್ಲಿ ಮಾತ್ರ ' ಅಣ್ಣಾ ' ಎಂದು ಬೇಡುತ್ತಾಳೆ . ಇದು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ .
ವಸ್ತ್ರಾಪಹರಣ ಪ್ರಕರಣವು ಸುಮಾರು ಇಪ್ಪತ್ತೆರಡು ಪುಟಗಳಷ್ಟು ದೊಡ್ಡದಿದೆ , ಆದರೆ ಅಕ್ಷಯವಸ್ತ್ರ ನೀಡುವ ಸನ್ನಿವೇಶ ಕೇವಲ ಒಂದೇ ಪುಟದಲ್ಲಿ ಮುಗಿದು ಹೋಗುತ್ತದೆ . ಕಥೆಯ ಒಂದು ಮುಖ್ಯ ಘಟ್ಟವನ್ನು ವ್ಯಾಸರು ಇಷ್ಟು ಬೇಗ ಮುಗಿಸುವುದು ಸಾಧ್ಯವೇ ಇಲ್ಲ . ಹಾಗಾದರೆ ನಂತರದ ದಿನಗಳಲ್ಲಿ ಕೃಷ್ಣನ ಭಕ್ತರು ಇದನ್ನು ಕಲ್ಪಿಸಿಕೊಂಡು ಮಹಾಭಾರತಕ್ಕೆ ಸೇರಿಸಿದರೆ ? . ಉತ್ತರ ಸ್ಪಷ್ಟವಾಗಿ ಸಿಗುವುದು ಕಷ್ಟ .

ಅಕ್ಷಯವಸ್ತ್ರ ನೀಡಿಲ್ಲವೆಂದಾದರೆ , ದ್ರೌಪದಿ ಪಾರಾದದ್ದು ಹೇಗೆ ? . ಕೆಲವು ಸಂಶೋಧನೆಗಳ ಪ್ರಕಾರ ದ್ರೌಪದಿಯೇ ಕೌರವರನ್ನು ಹೆದರಿಸಿದಳು .ಅಂದು  ನಿಜವಾಗಿಯೂ ವಸ್ತ್ರಾಪಹರಣ ನಡೆದು ಹೋಗಿದ್ದರೆ , ಬೆತ್ತಲಾಗುತ್ತಿದದು ದ್ರೌಪದಿಯಲ್ಲ  . ಹೆಂಡತಿಯನ್ನು ಅಡವಿಟ್ಟ ಜಗತ್ತಿನ ಅಪ್ರತಿಮ ವೀರರ ಪುರುಷತ್ವ ಬೆತ್ತಲಾಗುತಿತ್ತು , ಅತ್ತಿಗೆಯನ್ನು ಕೆಟ್ಟ ದೃಷಿಯಲ್ಲಿ ನೋಡಿದ ಕೌರವರ ದುಷ್ಟ ಗುಣ ಬೆತ್ತಲಾಗುತಿತ್ತು , ಇಡೀ ಸಮಾಜವೇ ಬೆತ್ತಲಾಗುತಿತ್ತು .   ಅಕ್ಷಯವಸ್ತ್ರ ಹೇಗೆ ಗೊಂದಲಮಯವೋ ಅಷ್ಟೇ ಇದೂ ಗೊಂದಲಮಯ .
( ಭೈರಪ್ಪನವರೂ ಸಹ ಈ ವಿಷಯದ ಮೇಲೆ ಬರೆದಿದ್ದಾರೆ . ಅದನ್ನು ಓದಿ ಕುತೂಹಲಗೊಂಡು ನಾನೂ ಸಹ ಇನ್ನಷ್ಟು ಮಾಹಿತಿ ಓದತೊಡಗಿದೆ . ವಸುಧೇಂದ್ರ ಅವರೂ ಕೂಡ ಈ ವಿಷಯದ ಮೇಲೆ ಒಂದು ಲೇಖನ ಬರೆದಿದ್ದಾರೆ . 'ವ್ಯಾಸಭಾರತ'ದಲ್ಲಿ ಇನ್ನೂ ಹೆಚ್ಚಿನ ವಿವರಗಳು ನನಗೆ ದೊರೆತವು . ದ್ರೌಪದಿ ಕುಪ್ಪಸ ಹಾಕಿರಲಿಲ್ಲ ಎಂದು ವ್ಯಾಸರು ಬರೆದಿದ್ದಾರೆ , ಇಲ್ಲಿ ಅದು ಅನಗತ್ಯವಾದ್ದರಿಂದ ಉಲ್ಲೇಖಿಸಿಲ್ಲ , ಮೈಸೂರಿನ ಜಗನ್ಮೋಹನ ಆರ್ಟ್ ಗ್ಯಾಲರಿ ಯಲ್ಲಿ ನೀವು ವಸ್ತ್ರಾಪಹರಣದ ವರ್ಣ ಚಿತ್ರ ನೋಡಬಹುದು . ಪುರಾಣಗಳ ಮೇಲೆ ನನಗೆ ಯಾವ ದ್ವೇಷವೂ ಇಲ್ಲ , ' ಕೃಷ್ಣಂ ವಂದೇ ಜಗದ್ಗುರುಂ ' ಎಂದು ಭಾವಿಸಿದ್ದೇನೆ . ಈ ಲೇಖನವನ್ನು ಕೇವಲ ಸಂಶೋಧನೆಯ ದೃಷ್ಟಿಯಿಂದ ಓದಿಕೊಂಡರೆ ಒಳ್ಳೆಯದು . ಇದನ್ನು ಓದಿ ನಿಮಗೂ ನಮ್ಮ ಪುರಾಣಗಳನ್ನು ಓದುವ ಹಂಬಲ ಬಂದರೆ ನನ್ನ ಬರಹಕ್ಕೊಂದು ಸಾರ್ಥಕತೆ .ಮರೆತು ಹೋಗಿದ್ದ ಈ ವಿಷಯ ನನಗೆ ಮತ್ತೆ ನೆನಪಾಗಿದ್ದು ' ಛದ್ಮವೇಷ ' ಎಂಬ ಕಿರುಚಿತ್ರವನ್ನು ನೋಡಿ , ಕಿರುಚಿತ್ರ ನೋಡಲು ಕೆಳಗಿನ ಕೊಂಡಿ ಬಳಸಿ .
https://www.youtube.com/watch?v=cmopC1L76Qw )