28/11/14

ನೆನಪಿನಂಗಳದಿಂದ-2

ಅಮ್ಮನಂತೆ  ತಾಳ್ಮೆ ಇರುವ ಅಪ್ಪನಿಗೆ
ಅಪ್ಪನಂತೆ ಧೈರ್ಯ ಇರುವ ಅಮ್ಮನಿಗೆ ಈ ಪುಟ ಅರ್ಪಣೆ
       "ಬೇಗ ಹೊರಡು " ಅಪ್ಪನ ಬಾಯಿಯಿಂದ ಈ ಮಾತು ಹೊರಡುತ್ತಿದಂತೆ  ನನ್ನ ಅಂತರಾಳದಲ್ಲಿ ದಿಗಿಲು ಶುರುವಾಯಿತು .   
                                ಜನನೀ ಜನ್ಮ ಭೂಮಿಶ್ಚ 
                                 ಸ್ವರ್ಗಾದಪಿ  ಗರಿಯಸೀ ।।
ಎಂಬ ಮಾತಿದೆ,ಆದರೆ ಅಂದು ನಾನು ಹೆತ್ತ ತಾಯಿ ಹೊತ್ತ ಭೂಮಿ ಎರಡನ್ನೂ ಬಿಟ್ಟು ಬರುವ ಬರುವ ದುಃಖದಲ್ಲಿದ್ದೆ . ಒಂದು ಹಕ್ಕಿ ಅದರ ಮರಿಗೆ ಹಾರಲು ಕಲಿಸುವಾಗ ಗೂಡಿನಿಂದ ಕೆಳಕ್ಕೆ ತಳ್ಳುತ್ತದೆ ,ನನಗೂ ಅದೇ ರೀತಿ ಅನುಭವ ಆಗುತಿತ್ತು . ನನ್ನ ಕನಸಿಗೆ ರೆಕ್ಕೆ-ಪುಕ್ಕ ಬಂದಿತ್ತು ,ಹಾರಲು ಕೂಡ ಸಿಧ್ದನಾಗಿದ್ದೆ ,ಆದರೆ ಗೂಡು ಬಿಟ್ಟು ಹೋಗಬೇಕಲ್ಲ !. ಒಂದು ರೀತಿಯ ಮಿಶ್ರ ಭಾವನೆ ಎದುರಿಸುತ್ತಿದ್ದೆ . ಹೊರಡುವ  ಸಮಯ ಬಂದರೂ ಮತ್ತೊಮ್ಮೆ ,ಮಗದೊಮ್ಮೆ ಮನೆಯನ್ನು ನೋಡಬೇಕು ಅನಿಸುತ್ತಿತ್ತು . ಹಾಗೇ ಮನೆಯನ್ನು ಸುತ್ತಾಡಿ ಕೊಂಡು ಬಂದೆ ,ಆಹಾ !ಖುಷಿಯೋ ಅಥವಾ ದುಃಖವೋ ಹೇಳಲಾರೆ . ಒಂದು ರೀತಿ ಮರಣ ದಂಡನೆಗೆ ಗುರಿಯಾದ ಕೈದಿಯ ತರ ನನಗೆ ಭಾಸವಾಗುತಿತ್ತು . ಯಾವಾಗಲೂ ನಾನು ಪ್ರಯಾಣವನ್ನು ಇಷ್ಟಪಡುವವನು ,ಆದರೆ ಅಂದು ಬೇಸರವೆನಿಸುತ್ತಿತ್ತು . ಕ್ಷಣ -ಕ್ಷಣಕ್ಕೂ ನನ್ನ ಊರು ದೂರವಾಗುತಿತ್ತು . 
      ಕೊನೆಗೂ ಮೈಸೂರಿಗೆ ಬಂದೆ . ಅವತ್ತು ನನಗೆ ಮೈಸೂರು ಹಳೇ ಗುಜುರಿ ಅಂಗಡಿಯ ತರಹ ಕಂಡಿದ್ದು ಸುಳ್ಳಲ್ಲ . 
ಶಿವಮೊಗ್ಗದಲ್ಲಿ ನನ್ನ ಮನೆ ಪಿ. ಜಿ ಅಷ್ಟೇ ದೊಡ್ಡದಿತ್ತು ,ಆದರೆ ಇಲ್ಲಿ ಅಂಗೈಯಗಲ ಜಾಗ ತೋರಿಸಿ ಇದೇ ನಿನ್ನ ರೂಮು ಎಂದಾಗ ನನಗೆ ಹೇಗಾಗಿರಬೇಡ !. 
      ಮೊದಲ ದಿನದ ಇಂಜಿನಿಯರಿಂಗ್ ಖುಷಿಗಿಂತ ಹೆಚ್ಚು ಭಯವನ್ನೇ ತರಿಸುತ್ತದೆ . ನನಗೆ ಸ್ವಲ್ಪ ಜಾಸ್ತಿನೇ ಭಯವಾಗಿತ್ತೇನೋ ?. ಅವತ್ತು ನಾನು 'ಆಲ್ ಅಲೋನ್ ' , ನನಗೆ ಯಾರೊಬ್ಬರ ಪರಿಚಯವೂ ಇರಲಿಲ್ಲ . 
     ಈ ಮಂಡ್ಯ ,ಮೈಸೂರು ಭಾಗದ 'ಕೂಳೆ ','ಕ್ವಾಟಲೆ' ಭಾಷೆ ನನಗೆ ಏಲಿಯನ್ ಗಳ ಭಾಷೆ ಎಂದೆನಿಸುತ್ತಿತ್ತು . 
     'ಟೈಮ್ ಹೀಲ್ಸ್ ಆಲ್ ವೂಂಡ್ '  ಎನ್ನುವಂತೆ ಕೊನೆಗೆ ನನಗೆ ಇದೆಲ್ಲ ಅಭ್ಯಾಸವಾಯಿತು . 
ಆದರೆ ಒಂದು ದಿನ ನಾನು ಇದನ್ನೂ ಬಿಟ್ಟು ಹೋಗಲೇಬೇಕು. ಏಕೆಂದರೆ  ನಾನು ನನ್ನ ವಸ್ತುಗಳ ಜೊತೆ ಕೆಲವೊಂದು ಕನಸುಗಳನ್ನೂ ಹೊತ್ತು ತಂದಿದ್ದೇನೆ . ಅವು ಪುಸ್ತಕದಿಂದ ಆಗಾಗ್ಗೆ ಇಣುಕಿ ನೋಡಿ ನಗುತ್ತಿರುತ್ತದೆ . ಭೇಟಿ   ಆಕಸ್ಮಿಕ ,ಅಗಲಿಕೆ ಅನಿವಾರ್ಯ , ಪರಿವರ್ತನೆ ಜಗದ ನಿಯಮ  

4/11/14

ದಿ ಎಂಡ್ ?!!

ಹೌದು ಮಾರಾಯ್ತಿ,  ನೀವು ಹೆಂಗಸರೇ ಹೀಗೆ !
ಅಡಿಗೆ ಮನೆಯಲ್ಲಿ ಅನ್ನದ ಜೊತೆ ಬೇಯುತ್ತಾ
ಹುಳಿಯ ಜೊತೆಯಲ್ಲಿ ಕುದಿಯುತ್ತಾ
ಇದ್ದು ಬಿಡುತ್ತೀರಿ
ಹೊರಬರುವುದು ಒಗ್ಗರಣ್ಣೆಯ ಘಾಟು
ಅಟ್ಟಿದಾಗ ಮಾತ್ರ
ಕನಸುಗಳ ಹಳೇ ಹುಣ್ಣಿಗೆ ಗಂಡ ತಂದ
ಬ್ಯಾಂಡೇಜ್ ಸುತ್ತಿಕೊಂಡು
ಏನೂ ಆಗದವರಂತೆ ನಟಿಸುತ್ತೀರಿ
ವ್ಯಾನಿಟಿ ಬ್ಯಾಗ್ ನ ಮೂಲೆಯಲ್ಲಿ
ಡಿಗ್ರಿ ಸರ್ಟಿಫಿಕೆಟ್ ತುರುಕಿ ಬಿಡುತ್ತೀರಿ
ಹುಟ್ಟಿದ ಮಕ್ಕಳ ಭವಿಷ್ಯದಲ್ಲಿ ನಿಮ್ಮ
ಭವಿಷ್ಯ ಕಾಣುತ್ತಾ ಉಳಿದು ಬಿಡುತ್ತೀರಿ
ಹೌದು ಮಾರಾಯ್ತಿ, ನೀವು ಹೆಂಗಸರೇ ಹೀಗೆ !