30/3/16

ಖಾರಾಬಾತು - 1

ಮನದಲ್ಲಿ ಮಿಂಚಿದ ಮಾತೊಂದು ಹೊರಬರದೆ ಮನದೊಳಗೇ ಉಳಿದುಬಿಡುತ್ತದೆ . ಎಲ್ಲರೆದುರಿಗೆ ಕೆರೆದುಕೊಳ್ಳಲೂ ನಮಗೆ ಮುಜುಗರ . ಆದರೆ ಇಂತಹ ಅಡೆ-ತಡೆಗಳನ್ನು , ಮುಜುಗರವನ್ನು ಒಬ್ಬ ಬರಹಗಾರ ಮೀರಬೇಕಾಗುತ್ತದೆ . ನನಗೂ ಸಹ ಕೆಲವು ವಿಷಯಗಳನ್ನು ಬರೆಯಲು ಮುಜುಗರವೆನಿಸಿತುತಿತ್ತು . ಆದರೆ ಕುಶ್ವಂತ್ ಸಿಂಗ್ ಅವರ ಬರಹಗಳನ್ನು ಓದಿ ನಾನು ಬಹಳಷ್ಟು ತಿಳಿದುಕೊಂಡೆ . ತೊಂಬತ್ತರಾರ ವಯಸ್ಸಿನಲ್ಲಿಯೂ ಅವರು ಹಸಿ-ಹಸಿ  ಕಾಮದ ಬಗ್ಗೆ ಬರೆಯುತ್ತಿದ್ದರು .
ಒಬ್ಬ ಬರಹಗಾರನಿಗೆ ಇನ್ನೊಂದು ದೊಡ್ಡ ಸವಾಲೆಂದರೆ ತನ್ನದೇ ಆದ ಓದುಗರ ಬಳಗವನ್ನು ಸೃಷ್ಟಿಸಿಕೊಳ್ಳುವುದು . ಬರಹಗಳ ಪ್ರಕಟಣೆ ಅತಿ ಮುಖ್ಯ ಪಾತ್ರ ವಹಿಸುತ್ತದೆ . ಪ್ರಕಟಿಸುವುದಕ್ಕಿಂತ ಸುಲಭವಾದ ಕೆಲಸವೆಂದರೆ ನೀರಿನ ಮೇಲೆ ನಡೆಯುವುದು . ನೀವು ರಾಷ್ಟ್ರಪತಿಯ ಮಗನಾದರೂ ಪತ್ರಿಕೆಯವರು  ನಿಮ್ಮನ್ನು ಕಾಯಿಸದೇ ಬಿಡುವುದಿಲ್ಲ . "ನಿಮ್ಮ ಬರಹ ಚೆನ್ನಾಗಿದೆ , ಇದನ್ನು ಪ್ರಕಟಿಸುತ್ತೇವೆ " ಎಂದು ಹೇಳಿದವರು ಮಾಯವಾಗಿ ಬಿಡುತ್ತಾರೆ .ಒಂದು ದಿನ ಆಕಸ್ಮಿಕವಾಗಿ  ಬೋಂಡ ಅಂಗಡಿಯವನು ಬೋಂಡ ಕಟ್ಟಿಕೊಟ್ಟ ಪೇಪರ್ ನಲ್ಲಿ ನಮ್ಮ ಲೇಖನ ಕಾಣಿಸುತ್ತದೆ . ಒಬ್ಬ ಪತ್ರಕರ್ತನಿಗೆ ಅದೆಷ್ಟು ಒತ್ತಡಗಳಿರುತ್ತವೋ ? ನನಗೆ ಗೊತ್ತಿಲ್ಲ . ನಾನು ಸುದ್ದಿ ಮನೆಯಲ್ಲಿ ಕೆಲಸ ಮಾಡಿಲ್ಲ.
ಕಾವ್ಯಾತ್ಮಕ ಬರಹಗಳಿಗೂ , ಪತ್ರಿಕೆಗೆ ಬರೆಯುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ . ಸಾಹಿತ್ಯವನ್ನು ಒಂದು ವರ್ಗದ ಜನ ಮಾತ್ರ ಓದುತ್ತಾರೆ ಆದರೆ ಪತ್ರಿಕೆಯನ್ನು ಎಲ್ಲಾ ವರ್ಗದ ಜನ , ವಯಸ್ಸಿನ ಮಿತಿಯಿಲ್ಲದೆ ಓದುತ್ತಾರೆ . ನಾನು ಒಬ್ಬ ಪತ್ರಕರ್ತನಾಗಬೇಕು ಎಂದು ಕನಸು ಕಟ್ಟಿದ್ದೆ , ಈಗಲೂ ಅದು ಜೀವಂತ ಕೂಡ . ಪತ್ರಕರ್ತನಾಗುವುದಕ್ಕೆ ಕೆಲ ಸಿದ್ದತೆಗಳನ್ನೂ ಮಾಡಿಕೊಂಡಿದ್ದೆ , ಮಾಡಿಕೊಳ್ಳುತ್ತಿದ್ದೇನೆ ಕೂಡ .
'ಖಾರಾಬಾತು' ಎನ್ನುವುದು ನನ್ನ ಹೊಸ ಕಲ್ಪನೆ . ನಾನು ಪ್ರಯತ್ನಿಸಿದ ಕೆಲವು ಲೇಖನಗಳು , ಪತ್ರಿಕೆಗಳು ರಿಜೆಕ್ಟ್ ಮಾಡಿದ ನನ್ನ ಕೆಲವು ಬರಹಗಳನ್ನು ಈ ಸರಣಿಯಲ್ಲಿ ನಿಮ್ಮ ಮುಂದಿಡುತ್ತೇನೆ . ತಿರಸ್ಕರಿಸಲು ಬಹಳ ಕಾರಣಗಳಿವೆ . ಸಣ್ಣ ಕಾಲಂ ಒಂದಕ್ಕೆ ದೊಡ್ಡ ಲೇಖನ ಬರೆದಿರಬಹುದು , ದೊಡ್ಡ ಕಾಲಂಗೆ ಸಣ್ಣ ಲೇಖನ ಬರೆದಿರಬಹುದು , ಸಬ್ಜೆಕ್ಟ್ ವಿವಾದತ್ಮಕವಾಗಿರಬಹುದು , ಇನ್ಫ್ಲುಯೆನ್ಸ್ ಕೊರತೆಯಿರಬಹುದು , ಟೂ ಮಚ್ ಇಂಟಲೆಕ್ಚುಯಲ್ ಆಗಿರಬಹುದು ಹೀಗೆ ....
ಈ ಅಂಕಣಕ್ಕೆ ಆದಿ , ಅಂತ್ಯ ಎರಡೂ ಇಲ್ಲ . ದೇಶ , ಭಾಷೆ ಕಾಲ ಮಿತಿಗಳ ಚೌಕಟ್ಟಿಲ್ಲ . ಮೊದಲ ಬರಹ ಪತ್ರಿಕೋದ್ಯಮದಿಂದಲೇ ಶುರು ಮಾಡಿಬಿಡುತ್ತೇನೆ .
ನಾನು ದಿನವೂ ತಪ್ಪದೇ ಮೂರರಿಂದ ನಾಲ್ಕು ಪತ್ರಿಕೆಗಳನ್ನು ಓದುತ್ತೇನೆ . ನನಗೆ ಸುದ್ದಿಯ ಮೇಲಿನ ಆಸಕ್ತಿ ಇದೆ ಎಂದಲ್ಲ , ಪತ್ರಿಕೆಯ ವರದಿಗಳಲ್ಲಿರುವ ದೋಷಗಳು , ಅವುಗಳಲ್ಲಿರುವ ತಮಾಷೆಗಳು , ಅಪ್ರಯತ್ನಪೂರ್ವಕವಾಗಿ ಸಿಡಿಯುವ ಹಾಸ್ಯಗಳನ್ನು ನಾನು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ . ಕೆಲವರು ಹಾಸ್ಯ ನಶಿಸಿ ಹೋಗುತ್ತಿದೆಯೆಂದು ಅಳಲು ತೋಡಿಕೊಳ್ಳುತ್ತಾರೆ . ಅವರೆಲ್ಲರಿಗೂ ಪ್ರಾಮಾಣಿಕವಾಗಿ ಪತ್ರಿಕೆ ಓದಿ ಎಂದು ಹೇಳುತ್ತೇನೆ . ಯಾರೂ ಸಹ ಬೇಕೆಂದೇ ತಪ್ಪುಗಳನ್ನು ಮಾಡುವುದಿಲ್ಲ , ಅಚಾನಕ್ ಆಗಿ ತಪ್ಪುಗಳು ಆಗಿ ಬಿಡುತ್ತವೆ , ಇದರಲ್ಲಿ ಪತ್ರಕರ್ತ ಎತ್ತಿದ ಕೈ .
ಕೆಲ ವರ್ಷಗಳ ಹಿಂದೆ ಪ್ರಿಯಾಂಕ ಗಾಂಧಿಯವರು ಗಂಡು ಮಗುವಿಗೆ ಜನನ ನೀಡಿದರು . ಆಗ ಪ್ರಿಯಾಂಕ ಗಾಂಧಿಯವರಿಗೆ  ಎಲ್ಲಾ ಕಾಂಗ್ರೆಸ್ ಆಡಳಿತದಲ್ಲಿರುವ ಮುಖ್ಯಮಂತ್ರಿಗಳು ಶುಭಕೋರಿದ್ದರು . ಆಗಿನ ಸಿಎಂ ಎಸ್. ಎಂ ಕೃಷ್ಣ ಸಹ ಶುಭಕೋರಿದ್ದರು . ಈ ವಿಷಯವನ್ನು ಎಲ್ಲಾ ಪತ್ರಿಕೆಗಳೂ ಪ್ರಕಟಗೊಳಿಸಿದ್ದವು .ಇದನ್ನು ವರದಿ ಮಾಡಿದ  ಕನ್ನಡದ ಪತ್ರಿಕೆಯೊಂದು - ' ಪ್ರಿಯಾಂಕಾಗೆ ಗಂಡು ಮಗು ಜನನ , ಕೃಷ್ಣ ಪುಳಕ ' ಎಂಬ ಶೀರ್ಷಿಕೆ ನೀಡಿತ್ತು . ಪ್ರಿಯಾಂಕಾಗೆ ಮಗುವಾದರೆ ಇವರಿಗೇಕೆ ಪುಳಕ ? ಎಂದು ನಾನು ನಕ್ಕಿದ್ದೆ . ಮರು ದಿನ 'ಕೃಷ್ಣ ಪುಳಕಗೊಂಡಿಲ್ಲ' ಎಂದು ಸ್ಪಷ್ಟನೆ ನೀಡಿದರೂ ನೀಡಿರಬಹುದು , ನನಗೆ ಗೊತ್ತಿಲ್ಲ .
ಇನ್ನೂ ಬಹಳ ದೊಡ್ಡ ತಪ್ಪೆಂದರೆ ಬದುಕಿರುವರನ್ನು ಸಾಯಿಸುವುದು . ಸುದ್ದಿ ಮನೆಯಲ್ಲಿ ಸಾವಿನ ಬಗ್ಗೆ ಬಂದ ವರ್ತಮಾನವನ್ನು ಎರಡು ಬಾರಿ ಖಚಿತಪಡಿಸಿಕೊಂಡು ನಂತರ ಪ್ರಕಟಿಸುತ್ತಾರೆ . ಇತ್ತೀಚಿಗೆ ಕನ್ನಡದ ಪತ್ರಿಕೆಯೊಂದು ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಶೆಟ್ಟಿಯವರನ್ನು ಸಾಯಿಸಿ , ನಂತರ ಕ್ಷಮೆ ಕೇಳಿತು .
ಪತ್ರಕರ್ತರು ಬೇರೆ ವೃತ್ತಿಯ ಮೇಲೆ , ವ್ಯಕ್ತಿಗಳ ಮೇಲೆ ಕಟೂಕ್ತಿಯಿಂದ ಕಾಲೆಳೆಯುವುದು , ಲೇವಡಿ ಮಾಡುವುದು , ಕುಚೋದ್ಯ ಮಾಡುವುದು ಸಾಮಾನ್ಯ . ಆದರೆ ಪತ್ರಕರ್ತರ ಮೇಲೆಯೇ ಯಾಕೆ ಕುಚೋದ್ಯ ಮಾಡಬಾರದು ? . ಒಂದು ಕೈ ನೋಡೇ ಬಿಡೋಣ .....
* ಪತ್ರಕರ್ತರು ನಾಯಿಯಿದ್ದಂತೆ , ಏನಾದರೂ ಚಲಿಸಿದರೆ ಸಾಕು  ಬೊಗಳುತ್ತಾರೆ - ಶೋಪನ್ ಹೋವರ್
* ಜಗತ್ತಿನಲ್ಲಿ ಏನಾಗುತ್ತಿದೆ ಎಂದು ಪತ್ರಿಕೆಗಳ ಮೂಲಕ ತಿಳಿಯುವುದೆಂದರೆ , ಸೆಕೆಂಡಿನ ಮುಳ್ಳಿನಿಂದ ಸಮಯ ನೋಡಿದಂತೆ - ಬೆನ್ ಹೆಚ್
* ಈ ಬಾರು ಎಷ್ಟು ಕಿಕ್ಕಿರಿದಿತ್ತೆಂದರೆ ಒಬ್ಬ ಪತ್ರಕರ್ತನಿಗೆ ಒಂದು ಬಿಯರ್ ತರಲು ನಲವತ್ತೈದು ನಿಮಿಷ ಬೇಕಾಯಿತು - ಡೇವ್ ಬೆರ್ರಿ
* ಪತ್ರಿಕೋದ್ಯಮ ಒಂದು ಆರ್ಗನೈಜ್ಡ್ ಗಾಸಿಪ್ - ಎಡ್ವರ್ಡ್ ಎಗ್ಗ್ಲೆಸ್ತೊನ್
* ಪತ್ರಿಕೋದ್ಯಮವೆಂದರೆ ಲಾರ್ಡ್ ಜೇಮ್ಸ್ ಬದುಕಿದ್ದನೆಂದು ಗೊತ್ತಿರದ ಜನರಿಗೆ ' ಲಾರ್ಡ್ ಜೇಮ್ಸ್ ವಿಧಿವಶ ' ಎಂದು ಸುದ್ದಿ ನೀಡುವುದು . - ಜಿ. ಕೆ . ಚೆಸ್ಟೆರೋನ್
* ಏನನ್ನೂ ಓದದ ವ್ಯಕ್ತಿ , ಬರೀ ಪತ್ರಿಕೆಯನ್ನು ಓದುವವನಿಗಿಂತ ಮೇಲು - ಥಾಮಸ್ ಜೆಫರ್ಸನ್
* ನಾನು ಸಮಾನತೆಯಲ್ಲಿ ನಂಬಿಕೆ ಹೊಂದಿದ್ದೇನೆ . ವರದಿಗಾರರು ಹಾಗೂ ಫೋಟೋಗ್ರಾಫರ್ ಗಳನ್ನು ಹೊರತು ಪಡಿಸಿ - ಮಹಾತ್ಮ ಗಾಂಧಿ .
* ಪತ್ರಿಕೆಗಳು ನೀಡುವ ಸುದ್ದಿಯ ಮೇಲೆ ಅವಲಂಬಿತವಾಗಬಾರದೆಂದು ನಾನು ಪತ್ರಕರ್ತನಾದೆ - ಕ್ರಿಸ್ಟೋಫರ್ ಹಿತ್ಚೇನ್ಸ್ .
*ಬೇರೆಯವರ ಪತ್ರಿಕೆಯನ್ನು ಓದುವುದೆಂದರೆ ಬೇರೆಯವರ ಪತ್ನಿಯ ಜೊತೆ ಮಲಗಿದಂತೆ . ಯಾವುದು ಎಲ್ಲೆಲ್ಲಿ , ಹೇಗಿವೆಯೆಂಬುದು ಗೊತ್ತಾಗುವುದಿಲ್ಲ - ಮಾಲ್ಕಂ ಬ್ರಾಡ್ ಬರಿ .
* ಕಾದಂಬರಿಕಾರನಾಗುವಷ್ಟು ಬುಧ್ಧಿವಂತನಲ್ಲದಿದ್ದರೆ , ವಕೀಲನಾಗುವಷ್ಟು ಚಾಲಾಕಿಯಲ್ಲದಿದ್ದರೆ , ಆಪರೇಷನ್ ಮಾಡಲು ಕೈ ನಡುಗುತ್ತಿದರೆ , ಕೊನೆಗೆ ಬೇರೆ ದಾರಿ ಕಾಣದೆ ಪತ್ರಕರ್ತನಾಗುತ್ತಾನೆ - ನಾರ್ಮನ್ ಮೇಲರ್



26/3/16

ಅಮ್ಮನಾ ಕೈ ರುಚಿ

" ಎಲ್ಲಾರೂ ಮಾಡುವುದು ಹೊಟ್ಟೆಗಾಗಿ , ಗೇಣು ಬಟ್ಟೆಗಾಗಿ " ಎಂದು ದಾಸರು ಹಾಡಿದ್ದಾರೆ . ಬಾಯಲ್ಲಿ ದೊಡ್ಡ ದೊಡ್ಡ ಮಾತಾಡಿದರೂ ನಾವೆಲ್ಲಾ ಹಳ್ಳಿ ಬಿಟ್ಟು , ಪಟ್ಟಣ ಸೇರಿರುವುದೂ ಹೊಟ್ಟೆಪಾಡಿಗಾಗಿ ತಾನೇ ? . ಕನಸುಗಳ ಬೆನ್ನತ್ತಿ ಊರು ಬಿಟ್ಟು ,ಸಿಟಿ ಸೇರಿದ ನನ್ನಂತ ಕಾರ್ಪೊರೇಟ್ ಸಂನ್ಯಾಸಿಗಳಿಗೂ ಒಮ್ಮೊಮ್ಮೆ ಅಮ್ಮನ ಕೈ ರುಚಿ ನೆನಪಾಗಿ ಬಿಡುತ್ತದೆ . ನಾನು ಇಷ್ಟೆಲ್ಲಾ ಮಾಡುತ್ತಿರುವುದು ಹೊಟ್ಟೆಗಾಗಿಯೇ , ಆದರೂ ಒಳ್ಳೆಯ ಊಟ ಸಿಗದಾಗ ಜೀವನದ ಮೇಲೆಯೇ ಜಿಗುಪ್ಸೆ ಬಂದು ಬಿಡುತ್ತದೆ .
ಅಮ್ಮ ,ಅಡಿಗೆ ಮಾಡುತ್ತಿದ್ದಾಗ ಕೇಳಿಸುತ್ತಿದ್ದ ಗೆಜ್ಜೆಯ ಸಪ್ಪಳ , ಒಗ್ಗರಣೆಯ 'ಚಟ-ಪಟ' ಇವೆಲ್ಲವೂ ಅಡಿಗೆಯ ರುಚಿಯನ್ನು ಹೆಚ್ಚುಗೊಳಿಸುತ್ತದೆ . ಹೊಟ್ಟೆಯನ್ನು ಯಾರು ಬೇಕಾದರೂ ತುಂಬಿಸಬಹುದು ಆದರೆ ತಿಂದವನ ಮನಸ್ಸು ತುಂಬಿದರೆ ಮಾಡಿದ ಅಡುಗೆಗೆ ಒಂದು ಸಾರ್ಥಕತೆ .
 ಹೋಟೆಲ್ ಗಳಲ್ಲಿ ಯಾವುದೇ ಕಾರಣಕ್ಕೂ ಅಡುಗೆಮನೆಯೊಳಗೆ ನಮಗೆ ಪ್ರವೇಶವಿಲ್ಲ . ( ಎಷ್ಟು ಸಲ ಬೇಕಾದರೂ ಟಾಯ್ಲೆಟ್ ಗೆ ಹೋಗಿಬರಬಹುದು , ಆದರೆ ಅಡುಗೆಮನೆಗೆ ಪ್ರವೇಶವಿಲ್ಲ . ) . ಇದಕ್ಕೆ ಅಪವಾದವೆಂಬಂತೆ ಕೆಲ ಹೋಟೆಲ್ ಗಳು ಶುಚಿ-ರುಚಿಯಾದ ಊಟ ನೀಡುತ್ತಿರಬಹುದು . ಊಟ ಬಲ್ಲವನಿಗೆ ರೋಗವಿಲ್ಲ , ನಮ್ಮ ಅನಾರೋಗ್ಯದ ಬೀಜಗಳನ್ನು ಮತ್ತೆಲ್ಲೂ ಹುಡುಕಬೇಕಾಗಿಲ್ಲ . ನಮ್ಮ ಬರ್ತ್ ಡೇ ಕೇಕ್ ನಲ್ಲೇ ಅಡಗಿದೆ , ಆಂಬುಲೆನ್ಸ್ ಹಿಂದಿಕ್ಕಿ ವೇಗವಾಗಿ ಹೋಗುವ ಪಿಜ್ಜಾ ಡೆಲಿವರಿ ಬೈಕ್ ಗಳಲ್ಲೇ ಇದೆ .
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರತಿಷ್ಟಿತ ಕಂಪನಿಯೊಂದು ತನ್ನ ಪಿಜ್ಜಾ ಮಾರಾಟ ಮಳಿಗೆಯನ್ನು ತೆರೆದಾಗ ನಮ್ಮ ರೈತರು ಪ್ರತಿಭಟಿಸಿದ್ದರು . ನಿಮಗೆ ಆಶ್ಚರ್ಯವಾಗಬಹುದು , ಪಿಜ್ಜಾ ಮಾರಾಟದಿಂದ ರೈತರಿಗೆ ಲಾಭ ತಾನೆ ? . ಆದರೆ ಇಂತಹ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ರೈತರ ಬೆಳೆಗಳನ್ನು ಖರೀದಿಸುವುದಿಲ್ಲ . ಅವರೇ ಸಾವಿರಾರು ಹೆಕ್ಟೇರು ಭೂಮಿಯಲ್ಲಿ ಬೆಳೆಸುತ್ತಾರೆ . ಇಲ್ಲಿ ರೈತ ಅಕ್ಷರಶಃ ಕಂಪನಿಯ ಗುಲಾಮ . ಒಂದು ಹೆಸರಾಂತ ಕಂಪನಿಯ ಈ ರೀತಿಯ ಫಾರ್ಮ್ ಅನ್ನು ನೀವು ಪಂಜಾಬಿನಲ್ಲಿ ನೋಡಬಹುದು . ಇಟಲಿಯ ಒಂದು ಸಾಮಾನ್ಯ ರೊಟ್ಟಿಗೆ ತರ ತರದ ಜಾಹೀರಾತು ಸೃಷ್ಟಿಸಿ , ವೈಭವೀಕರಿಸಿ ಆರ್ಟಿಫಿಷಿಯಲ್ ಪ್ರಸಿಧ್ಧಿ ನೀಡಿದ್ದಾರೆ ಅಷ್ಟೇ .
ಪಿಜ್ಜಾದಲ್ಲಿ ಹಾನಿಕಾರಕ ಅಜಿನೋಮೊಟೋ ಇರುವುದು ಎಂದೋ ಸಾಬೀತಾದ ವಿಷಯ . Preservatives ಅಂತೂ ಇರಲೇ ಬೇಕು , ಇಲ್ಲದಿದ್ದರೆ ಪಧಾರ್ಥ ಕೆಟ್ಟು ಹೋಗುತ್ತದೆ . ಬೊಜ್ಜು , ಹೃದಯ ಸಂಬಂಧಿ ಕಾಯಿಲೆಗಳು , ಕ್ಯಾನ್ಸರ್ ಇವೆಲ್ಲಾ ಬೋನಸ್ .
ಒಂದೆಡೆ ನಮ್ಮ ಆರೋಗ್ಯ ಹಾಳಾಗುತ್ತ ಹೋದರೆ ಇನ್ನೊಂದೆಡೆ ನಮ್ಮ ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಿದೆ . ಭಾರತೀಯ ಹೋಟೆಲ್ , ರೆಸ್ಟೋರಂಟ್ ಗಳಲ್ಲಿ ಹೋದ ತಕ್ಷಣವೇ ಟೇಬಲ್ ಮೇಲೆ ಒಂದು ಪೂರ್ತಿ ಲೋಟ ನೀರು ತಂದಿಡುತ್ತಾರೆ . ಅದು ಸಂಪೂರ್ಣ ಉಚಿತ . ನನ್ನ ಹೈ ಸ್ಕೂಲ್ ದಿನಗಳಲ್ಲಿ ಬಾಯಾರಿಕೆಯಾದಾಗ ಹೋಟೆಲ್ ಹೊಕ್ಕು ಬರಿ ನೀರು ಕುಡಿದು ವಾಪಸು ಬಂದದ್ದಿದೆ , ಎಂದೂ ನನಗೆ ಹೋಟೆಲ್ ನವರು ಬೈದಿಲ್ಲ .
ನೀರಿನ ಬೆಲೆ ತಿಳಿದಿದ್ದು ನನಗೆ ದಿಲ್ಲಿಗೆ ಹೋದಾಗಲೇ , ದಿಲ್ಲಿಯ ಒಂದು ಪ್ರಸಿದ್ಧ ರೆಸ್ಟೋರಂಟ್ ನಲ್ಲಿ  ನಿಮಗೆ ಬಿಟ್ಟಿ ನೀರು ಸಿಗುವುದಿಲ್ಲ  , ನಾವು ನೀರು ಕೇಳಿದರೆ ಅಲ್ಲಿಯ ವೈಟರ್ " Sparkling or Ice water , sir ? "ಎಂದು ನಮಗೇ ಮರು ಪ್ರಶ್ನೆ ಎಸೆದ .
" ಅಪ್ಪ , ಐಸ್ ವಾಟರ್ ಕುಡಿದರೆ ಬಾಯಾರಿಕೆ ಹೋಗಲ್ಲ " ಎಂದು ಹೇಳಬೇಕು ಎನಿಸಿತು . ಆ ರೆಸ್ಟೋರಂಟ್ ನ ಹತ್ತಿರದಲ್ಲೇ ಒಂದು ಗುರುದ್ವಾರವಿತ್ತು ಅಲ್ಲಿ ಸ್ವಯಂ ಸೇವಕರು ಉಚಿತವಾಗಿ ನೀರು ಕೊಡುತ್ತಿದರು . ನಿಮಗೆ ನಾನು ಹೇಳುತ್ತಿರುವುದು ಅತಿರೇಖವೆನಿಸಬಹುದು , ಒಮ್ಮೆ ಅನುಭವಕ್ಕೆ ಬಂದರೆ ಮಾತ್ರ ಇದರ ಗಂಭೀರತೆ ನಿಮಗೆ ಅರ್ಥವಾಗಬಹುದು .
ಈಗೀನ ಬಹುರಾಷ್ಟ್ರೀಯ ಪಿಜ್ಜಾ ಮಾರಾಟ ಕೇಂದ್ರದಲ್ಲಿ ಖಂಡಿತಾ ನಿಮಗೆ ಬಿಟ್ಟಿಯಾಗಿ ನೀರು ಸಿಗಲಾರದು . ಇನ್ನೊಂದು ಗಮನಿಸುವ ಅಂಶವೆಂದರೆ ಇಲ್ಲಿ ನೀರಿಗಿಂತ ಕಡಿಮೆ ಬೆಲೆಗೆ ಕೋಲಾ ಸಿಗುತ್ತದೆ . ಗ್ರಾಹಕ ಸ್ವಾಭಾವಿಕವಾಗಿ ಕೋಲಾ ಖರೀದಿಸುತ್ತಾನೆ . ಇವರ ಮುಖ್ಯ ಗುರಿ ಎಂದರೆ ಮಕ್ಕಳು ಹಾಗೂ ಯುವ ಜನತೆ . ಒಮ್ಮೆ ಇವರು ಈ ಜಾಲದಲ್ಲಿ ಬಿದ್ದರೆ , ಈ ಬಹುರಾಷ್ಟ್ರೀಯ ಕಂಪನಿಗಳ ಖಾಯಂ ಗ್ರಾಹಕರು .
ಒಮ್ಮೆ ಯೋಚಿಸಿ , ನಮ್ಮ ಹಣ ಕೊಳ್ಳುಬಾಕರ ಪಾಲಾಗುತ್ತಿದೆ . ನಮ್ಮ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ . ಅನಾರೋಗ್ಯ ಕಾಮನ್ ಎನಿಸಿ ಬಿಟ್ಟಿದೆ . ಎಳನೀರು , ಕಬ್ಬಿನಹಾಲು ಮಾಯವಾಗಿ ಕೋಲಾ ಕಾಣಿಸುತ್ತಿದೆ . ಬಾಳೆಕಾಯಿ , ಆಲೂಗಡ್ಡೆ ಚಿಪ್ಸ್ ಹೋಗಿ ಲೇಸ್ , ಕುರ್ಕುರೆ ಆಗಿದೆ . ಜೋಳದ ರೊಟ್ಟಿ , ಚಪಾತಿಯನ್ನು ಪಿಜ್ಜಾ ನುಂಗಿ ಹಾಕಿದೆ .
ಕೇವಲ ಪ್ರತಿಷ್ಠೆಗೆ ಪಿಜ್ಜಾ ತಿನ್ನುವುದು ಬಿಡಿ , ಪಿಜ್ಜಾ ತಿನ್ನುವುದು ಅಪರಾಧವಲ್ಲ . ಇತಿ-ಮಿತಿಯೊಳಗೆ ಇದ್ದರೆ ಒಳಿತು . ಅತಿಯಾದರೆ ಅಮೃತವೂ ವಿಷ .

21/3/16

ಮಲೆನಾಡ ತಪಸ್ವಿ

ದೊಗಲೆ ಪ್ಯಾಂಟು , ದೊಗಲೆ ಶರ್ಟ್ , ಹೆಗಲಿಗೊಂದು ಕ್ಯಾಮೆರಾ ಹಾಕಿಕೊಂಡು ಸ್ಕೂಟರ್ ಹತ್ತಿ ಹೊರಟರೆಂದರೆ ಇಡೀ ಕರ್ನಾಟಕವೇ ಕಿಂದರಿ ಜೋಗಿಯ ಹಿಂದೆ ಹೋಗುವ ಇಲಿಗಳಂತೆ ಹೊರಡುತ್ತಿತ್ತು . ತೇಜಸ್ವಿಯ ಬಗ್ಗೆ ಬರೆಯುವ ಜರೂರತ್ತೆ ಇಲ್ಲ ಬಿಡಿ . ಯಾರಿಗೆ ಅವರು ಗೊತ್ತಿಲ್ಲ ? . ಆದರೆ ಅವರ ವ್ಯಕ್ತಿತ್ವವನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಲೇಖನಗಳನ್ನು ಓದಿದೆ , ಅದಕ್ಕೇ ಈ ಲೇಖನ ಬರೆಯಬೇಕೆಂದು ಮನಸ್ಸಾಯಿತು .


" ಏನಪ್ಪಾ ಅವರು ಮೀನು ಹಿಡೀತಿದ್ರು , ಫೋಟೋನೂ ತೆಗಿತಿದ್ರು " ಎಂದು ಎಷ್ಟೋ ಜನ ಅವರನ್ನು ಸರಳ , ಸೀಮಿತಗೊಳಿಸಿ ಬಿಡುತ್ತಾರೆ . ಅವರ ವ್ಯಕ್ತಿತ್ವವೇ ಅಂತದ್ದು , ಅದು ಅರ್ಥ ಮಾಡಿಕೊಳ್ಳಲು ಕಷ್ಟ . ಅವರ ಮೌನವೇ ಒಂದು ಮಾತು ಎಂಬುದನ್ನು ನಾವು ಅರಿತುಕೊಳ್ಳದಾದೆವು . ಕನ್ನಡಕ್ಕೆ ಕುವೆಂಪು ಕೊಟ್ಟ ಶ್ರೇಷ್ಠ ಕೃತಿ ಎಂದರೆ ಅದು ' ಪೂರ್ಣಚಂದ್ರ ತೇಜಸ್ವಿ ' . ಅಪ್ಪನ ನೆರಳಿನಿಂದ ಸಂಪೂರ್ಣ ಆಚೆ ಬಂದು ತಮ್ಮದೇ  ಛಾಪು ಮೂಡಿಸುವುದು ಸುಲಭವಲ್ಲ .

ಒಂದೆಡೆ ಕುವೆಂಪು ವಿಶ್ವಮಾನವರಾಗಿ ಎಂದು ಕರೆ ಕೊಟ್ಟರೆ , ತೇಜಸ್ವಿ ಕಾಡಿನಲ್ಲಿ ಒಂಟಿಯಾಗಿ ಅಲೆದಾಡಿದರು  . ಕುವೆಂಪು ಎತ್ತರಕ್ಕೆ ಏರಿದಂತೆಲ್ಲಾ , ತೇಜಸ್ವಿ ಆಳಕ್ಕೆ ಆಳಕ್ಕೆ ಇಳಿಯುತ್ತಾ ಹೋದರು . ಕುವೆಂಪು ತಾವು ಬಾಲ್ಯದಲ್ಲಿ ಅಥವಾ ರಜಾ ದಿನಗಳಲ್ಲಿ ಕಂಡ ಮಲೆನಾಡನ್ನು ಧ್ಯಾನಿಸಿ ಬರೆದರು , ಆದರೆ ತೇಜಸ್ವಿ ಸ್ವತಃ ಅದೇ ವಾತಾವರಣದಲ್ಲಿದ್ದುಕೊಂಡು ಬರೆದರು . ಆದ್ದರಿಂದಲೇ ಅವರಿಗೆ ಮಂದಣ್ಣನಂತಹ ವ್ಯಕ್ತಿ ಅರ್ಥವಾಗಿದ್ದು .

ವಿಜ್ಞಾನ ಬದುಕಿಗೆ ಅನಿವಾರ್ಯ , ಸಾಹಿತ್ಯ ಬದುಕಿಗೆ ಅನಿವಾರ್ಯ . ಅವೆರಡರ ಹದವಾದ ಮಿಶ್ರಣವೇ ತೇಜಸ್ವಿ ಅವರ ಬರಹಗಳು . ಧರ್ಮಕ್ಕೆ ಸಮನಾಗಿ ಏನಾದರು ಇದ್ದರೆ ಅದು ವಿಜ್ಞಾನ ಮಾತ್ರ . ಆದರೆ ಎಲ್ಲರಿಂದ ದೂರವಾಗಿ ದೂರದ ಮೂಡಿಗೆರೆಯಲ್ಲಿ ತೋಟ ಮಾಡುವ ಅವರ ನಿರ್ಧಾರ ಪ್ರಶ್ನೆಯಾಗೇ ಉಳಿಯಿತು . ಸಮಾಜದಿಂದ ವಿಮುಖಗೊಳ್ಳುವ ನಿರ್ಧಾರವಾಗಿರಲಿಲ್ಲ ಅದು . ಅವರೇ ಕೆಲವು ಕಡೆ ಹೇಳಿಕೊಂಡಿದ್ದಾರೆ " ನಾನು ಪೇಟೆ ಬೇಜಾರಾಗಿ ಹಳ್ಳಿಗೆ ಬಂದವನಲ್ಲ , ಕೃಷಿ ಮೇಲೆ ಆಸಕ್ತಿ ಇದ್ದು ಬಂದವನಲ್ಲ . ಸುಮ್ನೆ ಕಾಡಿನಲ್ಲಿ ಅಲೆದಾಡಿಕೊಂಡು ಇರಲು ಬಂದವನು " ಎಂದು .
ಅವರ ನಡವಳಿಕೆಗಳೂ ಅದೇ ರೀತಿ ಇತ್ತು . ಮನೆಗೆ ಬಂದ ಮೇಸ್ತ್ರಿಯ ಜೊತೆ ಗಂಟೆಗಟ್ಟಲೆ ಮಾತಾಡುತ್ತಾ ಕುಳಿತುಬಿಡುತ್ತಿದ್ದರಂತೆ  . ಮೂಡಿಗೆರೆಯಿಂದಲೇ ಹಲವು ಚಳವಳಿಗಳಲ್ಲಿ ಅವರು ಭಾಗವಹಿಸಿದರು . ನಿಮಗೆ   ಆಶ್ಚರ್ಯವೆನಿಸಬಹುದು ಕಾಫಿ ಬೋರ್ಡ್ ನ ನಿಯಮಗಳು ಆಂಗ್ಲರ ವಸಾಹತುಶಾಹಿಯ ನೀತಿಯನ್ತೆಯೇ ಇತ್ತು . ಅವರು ಹೇಳಿದ್ದೇ ರೇಟಿಗೆ ಮಾರಬೇಕಿತ್ತು . ಆಗ ತೇಜಸ್ವಿ " ನಾನು ನನ್ನ ಬೆಳೆಯನ್ನು ಸಂತೆ ಪೇಟೆಯಲ್ಲಿ ಇಟ್ಟು ಮಾರುತ್ತೇನೆ " ಎಂದು ಗುಡುಗಿದ್ದರಂತೆ .
ಪ್ರಶಸ್ತಿಗಳ ವಿಷಯದಲ್ಲಿ ಎಂದಿಗೂ ತೇಜಸ್ವಿಯವರದ್ದು ತಟಸ್ಥ ಭಾವನೆ . ಪಂಪ ಪ್ರಶಸ್ತಿ ಬಂದಾಗ " ನನಗ್ಯಾಕೆ ಕೊಡ್ತೀರ , ಬೇರೆ ಅವ್ರಿಗೆ ಕೊಡಿ " ಎಂದಿದ್ದರಂತೆ . ಅದನ್ನು ತೆಗೆದುಕೊಳ್ಳಲೂ ಅವರು ಹೋಗಲಿಲ್ಲ . ಕೊನೆಗೆ ಪ್ರಶಸ್ತಿಯನ್ನು ಮನೆಗೆ ತಂದು ಇಡಬೇಕಾಯಿತು .
ಟೀಕಾಕಾರರೇನು ಕಡಿಮೆಯೇ ? ಅವರು  ತೆಜಸ್ವಿಯನ್ನೂ ಬಿಟ್ಟಿಲ್ಲ . " ಅದೇನ್ ಕ್ರಿಯೇಟಿವ್ ರೈಟಿಂಗ್ ಅಲ್ರಿ " ಎಂದು ಬಿಡೋರು . " ಎಲ್ಲವೂ ಹಾಸ್ಯದಲ್ಲೇ ಕಳೆದು ಹೋಗುತ್ತದೆ " ಎನ್ನುತ್ತಿದರು . ಆದರೆ ತೇಜಸ್ವಿ ತಮ್ಮ ಶೈಲಿ ಬದಲಿಸಿಕೊಳ್ಳಲಿಲ್ಲ . " ನಾವು ಬರಿ ರನ್ನ , ಪಂಪ ಅಷ್ಟನ್ನೇ ಓದಿಕೊಂಡಿದ್ರೆ ಗೂಬೆಗಳಾಗ್ತೀವಿ " ಎಂದು ಬೈಯುತ್ತಿದ್ದರಂತೆ .
ಅವರನ್ನು ಅನುಸರಿಸಿಕೊಂಡು ಹೋಗುವ ಶಿಷ್ಯವರ್ಗ ಅವರಿಗೆ ಸಿಗದೇ ಹೋಯ್ತು . ಯಾರಾದರೂ ಅವರ ಬಳಿ ನಿಮಗೆ ಆ ಪ್ರಶಸ್ತಿ ಸಿಗಬೇಕಿತ್ತು , ಇದು ಸಿಗಬೇಕಿತ್ತು ಎಂದರೆ , ಕಾರಂತರ ಒಂದು ಪತ್ರ ತೆಗೆದು ತೋರಿಸುತ್ತಿದ್ದರಂತೆ . ಕಾರಂತರು ಹಾಗೂ ತೇಜಸ್ವಿ ಇಬ್ಬರೂ ಅಲೆಮಾರಿಗಳು , ಸತತವಾಗಿ ಹೊಸದನ್ನು ಹುಡುಕುತ್ತಾ ಹೋಗುವವರು . ಮರಳಿ ಮಣ್ಣಿಗೆ ಕೃತಿ ಕೇವಲ ಮೂವತ್ತು ದಿನಗಳಲ್ಲಿ ಬರೆದದ್ದು , ಸರಸಮ್ಮನ ಸಮಾಧಿ ಕಥೆಯನ್ನು ಕೇವಲ ಐದೇ ದಿನದಲ್ಲಿ ಮುಗಿಸಿದ್ದರು . ಕಾರಂತರು ಆಗಿನ ಕಾಲಕ್ಕೇ ಎನ್ಸೈಕ್ಲೋಪೀಡಿಯಾ ಮಾಡಿದವರು .  ಕೈಯಲ್ಲೇ ಹಕ್ಕಿಗಳ ಚಿತ್ರಗಳನ್ನು ಬಿಡಿಸಿ ಮುದ್ರಣ ಮಾಡಿದವರು . ಅದನ್ನು ತೇಜಸ್ವಿಯವರು ಮುಂದುವರೆಸಿದರು . ಕಾರಂತರು "YOU ARE REALLY A GREAT WRITER THAN I AM "  ಎಂದು ಹೇಳಿದ್ದರು . ಅವರಿಬ್ಬರೂ ಮೊದಲೇ ಪರಿಚಯ ಬೆಳೆಸಿಕೊಳ್ಳಬೇಕಿತ್ತು . ಕಾರಂತರು ಸಾಯುವ ಒಂದು ತಿಂಗಳ ಮೊದಲಷ್ಟೇ ನಿರುತ್ತರ ಗೆ ಭೇಟಿ ನೀಡಿದ್ದರು .

ಸಾಮಾನ್ಯವಾಗಿ ಪರಿಸರವಾದಿಗಳು ಅಭಿವೃದ್ದಿಯನ್ನು ವಿರೋಧಿಸುತ್ತಾರೆ , ಆದರೆ ತೇಜಸ್ವಿ ಅದಕ್ಕೆ ಅಪವಾದ . ಕುವೆಂಪು ತಂತ್ರಾಂಶ ಎಂಬ ಕನ್ನಡ ಸಾಫ್ಟ್ವೇರ್ ರಚನೆಗೆ ಕೈ ಜೋಡಿಸಿದರು . ಕರ್ನಾಟಕದ ಯಾವ ಸಾಹಿತಿಗೂ ಕಂಪ್ಯೂಟರ್ ಗೊತ್ತಿಲದ ಕಾಲದಲ್ಲಿಯೇ ಅವರು ಕಂಪ್ಯೂಟರ್ ಬಳಸುತ್ತಿದ್ದರು .
ಆದರೆ ಕುವೆಂಪು ಕೈ ಬರಹದ ರಾಮಾಯಣ ದರ್ಶನಂ ಮುದ್ರಿಸಿದ್ದು ಅವರ ಹಾಗೂ ಲಂಕೇಶ್ ಅವರ ಮಧ್ಯೆ ಮನಸ್ತಾಪಕ್ಕೆ ಕಾರಣವಾಯಿತು .
ತೇಜಸ್ವಿಯವರ ವ್ಯಕ್ತಿತ್ವ ಮೊಗೆದಷ್ಟೂ ನಮ್ಮೆದುರು ಅನಾವರಣಗೊಳ್ಳುತ್ತಲೇ ಹೋಗುತ್ತದೆ .' ಕರ್ವಾಲೋ ' ಸೀಮೆ ಎಣ್ಣೆಯ ಬುಡ್ಡಿ ದೀಪದಲ್ಲಿ ತಯಾರಾದ ಕಾದಂಬರಿ , ಅದು ಜಪಾನೀಸ್ ಭಾಷೆಗೂ ಅನುವಾದಗೊಂಡಿದೆ . ತಬರನ ಕಥೆ , ಕುಬಿ ಮತ್ತು ಇಯಾಲ , ಚಿದಂಬರ ರಹಸ್ಯ , ಅಬಚೂರಿನ ಪೋಸ್ಟಾಪೀಸು , ಕಿರಗೂರಿನ ಗಯ್ಯಾಳಿಗಳು ತೆರೆಯ ಮೇಲೆ ಮೂಡಿ ಬಂದಿವೆ . ಒಮ್ಮೆ ಗಿರೀಶ್ ಕಾಸರವಳ್ಳಿಯವರ ಅಸೋಸಿಯೇಟ್ ತೇಜಸ್ವಿಯವರ ಬಳಿ ಸಂಭಾಷಣೆ ಬರೆದು ಕೊಡಲು ಕೇಳಿದರಂತೆ " ಹೋಗಯ್ಯ ನಂಗೆ ಮೀನ್ ಹಿಡೀಬೇಕು " ಎಂದು ತೇಜಸ್ವಿ ಹೊರಟು ಹೋದರಂತೆ .

ಇನ್ನೂ ಹೇಳದ ಹಲವು ವಿಷಯಗಳಿವೆ . ತೇಜಸ್ವಿಯವರು ಮುದ್ರಣಾಲಯ ಮಾಡಿದ್ದರು , ಹೈಡೇನ್ ಬರ್ಗ್ ನಿಂದ ಯಂತ್ರಗಳನ್ನು ತರಿಸಿದ್ದರು . ಕನ್ನಡದಲ್ಲಿ ಮೊದಲ ಬಾರಿಗೆ ಲೇಸರ್ ಮುದ್ರಣ ಮಾಡಿದ ಲೇಖಕರು ತೇಜಸ್ವಿ . ಅವರ ಕನಸಿನ ಕೂಸೇ ' ಪುಸ್ತಕ ಪ್ರಕಾಶನ ' .
ಕೆಂಜಿಗೆ ಪ್ರದೀಪ ಅವರಿಗೆ " ಪ್ಯಾಪಿಲಾನ್ ಕಥೆನ ತರ್ಜುಮೆ ಮಾಡಯ್ಯ " ಎಂದಿದ್ದರಂತೆ . ಆದರೆ ಪ್ರದೀಪ ಅವರ ಹೆಸರು ಒಂದೆ ಇದ್ದರೆ ಪುಸ್ತಕ ಮಾರಾಟ ಕದಿಮೆಯಾಗೇತು ಎಂದು ಪ್ರದೀಪ ನಿಮ್ಮ ಹೆಸರನ್ನೂ ಹಾಕ್ತೀನಿ ಸರ್ ಎಂದರಂತೆ . " ನಾನು ತರ್ಜುಮೆ ಮಾಡದೆ ಹೆಂಗೆ ಹಾಕ್ತಿಯ , ಇರು ನಾನು ಸ್ವಲ್ಪ ತರ್ಜುಮೆ ಮಾಡ್ತೀನಿ " ಎಂದು ಸ್ವಲ್ಪ ಭಾಗ ಅವರು ತರ್ಜುಮೆ ಮಾಡಿದರು .
ಇಂದು ನಮ್ಮ ಜೊತೆ ಅಣ್ಣ ಇರಬೇಕಿತ್ತು . ನನ್ನ ಸಾಹಿತ್ಯದ ಗುರುಗಳು ತೇಜಸ್ವಿಯವರು . ನಾನು ಅವರನ್ನು ನೋಡಲು ಸಾಧ್ಯವಾಗಲೇ ಇಲ್ಲ . ಈಗ ನಿರುತ್ತರಕ್ಕೆ ಒಮ್ಮೆ ಭೇಟಿ ನೀಡಬೇಕು . ಕೈಯಲ್ಲಿ ಕಾರಿನ ಕೀ ಇದೆ , ಆದರೆ ತೇಜಸ್ವಿಯಿಲ್ಲ . ತೇಜಸ್ವಿ ಇಲ್ಲದ ಮೌನ ಸಹಿಸಲಸಾಧ್ಯ . ಕೊನೆಯ ಪಕ್ಷ ಅವರು ಓಡಾಡಿದ ಜಾಗವನ್ನಾದರೂ ನೋಡಿ ಬರಬೇಕು . ಮತ್ತೆ ತೇಜಸ್ವಿಯಂತ ಬರಹಗಾರರು ಸಿಗುವುದು ಸಾಧ್ಯವಿಲ್ಲ . ನೂರು ದೇವರನ್ನು ನೋಡುವ ಮೊದಲು ಒಮ್ಮೆ ಕುಪ್ಪಳಿಯನ್ನು ನೋಡಿ ಬರಬೇಕು . ನನ್ನ ಪ್ರತಿ ಬರಹದಲ್ಲೂ ತೇಜಸ್ವಿಯವರನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತೇನೆ .


    

13/3/16

ಮಳ್ಗವಿತೆ‬ - ಸಾವು

‪‬ಜೀಕುವೆನು ಅನಂತಕೆ
ಇಹ-ಪರದ ಯೋಚನೆ ತೊರೆದು
ಈಜುವೇನು ಆಚೆ
ಬರುವ ಯೋಚನೆಯಿಲ್ಲ ........
ಪ್ರೇತಾತ್ಮದ ಬದುಕಿದು
ತೂಗುತಿದೆ ಮನಸು
ಒಮ್ಮೆ ಈಚೆ ಒಮ್ಮೆ ಆಚೆ
ಹುಯ್ದಾಟವೀ ಬದುಕು
ಬೆಂಕಿಯ ಜೊತೆ ಹೊಗೆಯಾಗಿ
ನೀರಿನ ಜೊತೆ ಚಿತಾಭಸ್ಮವಾಗಿ
ಹಾರುವೆನು, ಈಜುವೆನು
ಕುಣಿಯುವೆನು
ಶಾಂತಿ ಸಿಗಬಹುದು ಅಲ್ಲಿ
ನನ್ನಾತ್ಮಕೆ, ಅಂತರಂಗಕೆ
ಒಳಗಿಂದ ಬೈಯುತಿದೆ
ಥೂ ! ನಿನ್ನದೂ ಒಂದು ಬದುಕೇ?
ಹಸಿ ಸೌದೆ ಹಾಕಬೇಡ್ರೋ
ನಿಮ್ಮ ದಮ್ಮಯ್ಯ
ನನಗಾಗುವುದಿಲ್ಲ ಕೆಮ್ಮು

ಗಯ್ಯಾಳಿಗಳು

ಹೇಳಿ ಕೇಳಿ ನಾನು ತೇಜಸ್ವಿಯವರ ಭಕ್ತ ' ಕಿರಗೂರಿನ ಗಯ್ಯಾಳಿಗಳು ' ನೋಡದೆ ಇರಲು ಸಾಧ್ಯವೇ ? . ಸಿನೆಮಾಗೂ , ಪುಸ್ತಕಕ್ಕೂ ವ್ಯತ್ಯಾಸವಿದೆ . ನಿರ್ದೇಶಕ ( ಇಲ್ಲಿ ನಿರ್ದೇಶಕಿ ಸೂಕ್ತ ) ಕೆಲವೊಮ್ಮೆ ಕತೆಯಲ್ಲಿ  ಬದಲಾವಣೆಗಳನ್ನು ತರಬೇಕಾಗುತ್ತದೆ . ಅದನ್ನೇ ತೇಜಸ್ವಿಯವರು ಹಲವು ಬಾರಿ ಹೇಳುತ್ತಿದರು ಕೂಡ . ಮೂಲ ಕತೆಗೆ ಗೂಟ ಬಡಿದುಕೊಂಡು ಕೂರುವ ಅವಶ್ಯಕತೆಯಿಲ್ಲ .

ನಾನು ' ಕಿರಗೂರಿನ ಗಯ್ಯಾಳಿಗಳು ' ಪುಸ್ತಕವನ್ನು ನಾಲ್ಕನೇ ತರಗತಿಯಲ್ಲಿ ಇದ್ದಾಗಿನಿಂದ ಓದಿಕೊಂಡು ಬಂದಿದ್ದೇನೆ . ಆದರೆ ಪುಸ್ತಕಕ್ಕೆ ಹೋಲಿಸಿ ನಾನು ಈ ಸಿನೆಮಾದ ವಿಮರ್ಶೆ ಬರೆದರೆ ತಪ್ಪಾಗುತ್ತದೆ . ತೇಜಸ್ವಿಯವರ ಕತೆ ಓದುತ್ತಿದ್ದರೆ ಸಿನಿಮಾ ನೋಡಿದಂತೆಯೇ ಅನಿಸುತ್ತದೆ . ಆದರೆ ಅವರ ಕತೆಗಳನ್ನು ಸಿನಿಮಾ ಮಾಡುವುದು ಕಷ್ಟದ ಕೆಲಸ , ಅದನ್ನು ತೆರೆಯ ಮೇಲೆ ತೋರಿಸುವುದು ಕಷ್ಟದ ಕೆಲಸ .
ಹಳ್ಳಿ , ಮೇಲೆ ನೋಡಲು ಜಡವಾಗಿ ಕಂಡರೂ , ಅದು ಒಳಗೆ ಕುದಿಯುವ ಲಾವಾ . ಪ್ರತಿಯೊಂದು ಹಳ್ಳಿಯೂ ವಿಭಿನ್ನ , ವಿಶಿಷ್ಟ . ಕನ್ನಡ ಸಿನೆಮಾಗಳಲ್ಲಿ ಹಳ್ಳಿ ಕತೆಗಳಿಗೇನೂ ಬರವಿಲ್ಲ  . ಆದರೆ ಇಂದಿನವರೆಗೆ ಹಳ್ಳಿಯನ್ನು ಮೌಡ್ಯತೆಯ ಗೂಡಾಗಿ , ಅನಕ್ಷರಸ್ಥರ ಕಾಡಾಗಿ ತೋರಿಸಿದ್ದೇ ಹೆಚ್ಚು . ಮಧ್ಯದಲ್ಲಿ ಎಲ್ಲೋ ಒಳ್ಳೆಯ ಸಿನಿಮಾಗಳು ಬಂದರೂ ಹಳ್ಳಿಗಾಡಿನ ಆಂತರ್ಯವನ್ನು ಹೊಕ್ಕು ಸಿನೆಮಾ ಮಾಡಿರಲಿಲ್ಲ . ಈ ಸಿನಿಮಾದ ಮತ್ತೊಂದು ಕ್ಲಿಷ್ಟದ ಕೆಲಸವೆಂದರೆ ಕತೆಗೊಂದು ನೀಟಾದ ಅಂತ್ಯ ಕೊಡುವುದು . ತೇಜಸ್ವಿಯವರ ಕತೆಗಳಿಗೆ  ಹೆಚ್ಚಾಗಿ ಓಪನ್ ಎಂಡಿಂಗ್ ಇದೆ . ಆದರೆ ನಾವು ಸಿನೆಮಾಗಳಲ್ಲಿ ಒಂದು ಕನ್ಕ್ಲೂಶನ್  ಹುಡುಕುತ್ತೇವೆ . ಅದನ್ನು ಅಗ್ನಿ ಶ್ರೀಧರ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ . ಸುಮನಾ ಕಿತ್ತೂರು ಅವರ ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ .
ಸೆನ್ಸಾರ್ ಮಂಡಳಿಯವರ ಕೆಲಸದ ಬಗ್ಗೆ ನನಗೆ ಅತೀವ ಕೋಪವಿದೆ . ಈ ಸಿನೆಮಾದ ಜೀವಾಳವೇ ಹಳ್ಳಿಯ ಸೊಗಡಿನ ಭಾಷೆ . ಸೆನ್ಸಾರ್ ಮಂಡಳಿಯವರು ಸೆನ್ಸ್ ಇಲ್ಲದೆ ಕಂಡ ಕಂಡಲ್ಲಿ ಮ್ಯೂಟ್ ಮಾಡಿದ್ದಾರೆ . ಸುಮ್ಮನೆ ಮೆಕ್ಯಾನಿಕಲ್ ಆಗಿ ತಿ* , ಬೋ_ಳಿಮಗ , ರಂ@ ಇದನ್ನೆಲ್ಲಾ ಕತ್ತರಿಸಿದ್ದಾರೆ . ಆ ಪದಗಳು ಅಶ್ಲೀಲವೆನಿಸಬಹುದು , ಆದರೆ ಈ ಕತೆಗೆ ಅದು ಬೇಕೇ ಬೇಕು . ವಿಸ್ಕಿಯಲ್ಲಿ ಆಲ್ಕೋಹಾಲ್ ಪ್ರಮಾಣವನ್ನು ಕಡಿಮೆ ಮಾಡಿದಂತೆ ಅನಿಸುತ್ತದೆ . ನಾನೇ ಎಷ್ಟೋ ಬಾರಿ ಅಂತಹ ಪದಗಳನ್ನು ಕೇಳಿದ್ದೇನೆ . ನಮ್ಮ ಮನೆಯ ಆಳಿನ ಹೆಂಡತಿ ಅವನಿಗೆ ಮುಂಡೆಗಂಡ ಎಂದು ಬೈಯುತ್ತಿದಳು , ಅವನೂ ಕಡಿಮೆಯಿರಲಿಲ್ಲ ಹೆಂಡತಿಗೆ ರಂಡೆ ಎಂದು ಬೈಯುತ್ತಿದ್ದ . ಅದು ಅಶ್ಲೀಲವೇನೂ ಅಲ್ಲ . ಐಟಂ ಸಾಂಗ್ ಗಳಿಗಿಂತ ಹೋಲಿಸಿದರೆ ಇದು ಎಷ್ಟೋ ಪಾಲು ಮೇಲು .
ಸಿನೆಮಾದಲ್ಲಿ ಎಲ್ಲೂ ಅನವಶ್ಯಕ ಎನಿಸುವ ಹಾಡುಗಳಿಲ್ಲ ( ಹಾಡುಗಳೇ ಇಲ್ಲ ಬಿಡಿ ) . ನಾನು ಗಮನಿಸಿದ ಕೆಲವು ತಪ್ಪುಗಳೆಂದರೆ ಕಾಳೇಗೌಡ ಎಂಬ ಪಾತ್ರ ಭಾಗ್ಯ ಎಂಬ ಪಾತ್ರದ ಜೊತೆ ಇರುವ ಸೀನ್ ಗಮನಿಸಿ . ಅದರಲ್ಲಿ ಭಾಗ್ಯ ಎಂಬ ಪಾತ್ರದ ಉಗುರುಗಳು ನೀಟಾಗಿ ಶೇಪ್ ಆಗಿವೆ ಹಾಗೂ ನೇಲ್ ಪಾಲಿಶ್ ಕಾಣಿಸುತ್ತದೆ . ಈ ಕತೆ ನಡೆಯುವ ಕಾಲದಲ್ಲಿ ಹಳ್ಳಿಗಳಿಗೆ ನೇಲ್ ಪಾಲಿಶ್ ಲಗ್ಗೆ ಇಟ್ಟಿತ್ತಾ ?
ಹಾಗೆಯೇ ಲೂಸ್ ಮಾದ ಯೋಗಿಯ ಕೈ ಮೇಲೆ ಕುಂಗ್ ಫು ಟ್ಯಾಟೂ ಕಾಣಿಸುತ್ತದೆ . ಅದು ಸರಿಯಾ ? ನನಗೂ ಗೊತ್ತಿಲ್ಲ .
ಕೆಲವೆಡೆ ನಟನೆ ನೈಜತೆಯನ್ನು ಕಳೆದುಕೊಂಡಿದೆ .
ಯುವ ಜನತೆ ಇಂತಹ ಸಿನಿಮಾ ನೋಡುವುದಿಲ್ಲ ಎನ್ನುವುದೆಲ್ಲಾ ತಪ್ಪು . ನಾನು ನೋಡಿದ ಶೋ ನಲ್ಲಿ ಅರ್ಧದಷ್ಟು ಜನ ಯುವಕ , ಯುವತಿಯರು . ತೇಜಸ್ವಿಯವರು ದಶಕಗಳ ಹಿಂದೆ ಬರೆದ ಕತೆ ಇಂದಿಗೂ ಪ್ರಸ್ತುತ . ಒಮ್ಮೆ ಥೀಯೇಟರ್ ಕಡೆ ಹೋಗಿ ಸಿನೆಮಾ ನೋಡಿಬನ್ನಿ . ಇಂತಹ ಸಿನೆಮಾಗಳು ಸ್ವಾಗತಾರ್ಹ .