20/11/15

ನನ್ನ ದೇಶ ನನ್ನ ಜನ -೪(ಇಕ಼್ಬಾಲ್ ಸಾಬಿಯ ತೋಟಾ ಕೋವಿ )

ನೀವು ಕಾಡನ್ನು , ಜೀವ-ಜಂತುಗಳನ್ನು ಇಷ್ಟಪಡದೇ  ಹೋದರೆ ಮಲೆನಾಡು ಎರಡೇ ದಿನಕ್ಕೆ ಬೇಸರ ಮೂಡಿಸುತ್ತದೆ . ಆದರೂ ಈ ಕಾಡು ಪ್ರಾಣಿಗಳಿಂದ ನಾವು ಅನುಭವಿಸುವ ಕಾಟ ಅಷ್ಟಿಷ್ಟಲ್ಲ . ಮಂಗನಿಂದ ಹಿಡಿದು ಕಾಡೆಮ್ಮೆಯವರೆಗೆ ದಿನಾ ಒಂದಲ್ಲ ಒಂದು ಕಾಟ ಇದ್ದೇ ಇರುತ್ತದೆ . ಅಡಿಕೆಯನ್ನು ಮಂಗಗಳಿಂದ ಕಾಪಾಡುವುದೇ ದೊಡ್ಡ ಸಾಹಸ .
ಅಡಿಕೆ ಹುಟ್ಟಿದ್ದು ಮೂಲಾ ನಕ್ಷತ್ರದಲ್ಲಂತೆ , ಅದನ್ನು ಬೆಳೆದವನಿಗೂ , ವ್ಯಾಪಾರ ಮಾಡುವವನಿಗೂ ಅದು ದಕ್ಕುವುದಿಲ್ಲವಂತೆ . ಅದೇನೇ ಇರಲಿ , ಈ ಮಂಗನನ್ನು ಓಡಿಸಲು ನಾನು ಎಲ್ಲವನ್ನೂ ಮಾಡಿ ಸೋತಿದ್ದೆ . ಕೊನೆಗೆ ಹಳೆ ಹೆಂಡತಿಯ ಪಾದವೇ ಗತಿ ಎಂದು ಒಂದು ತೋಟಾ ಕೋವಿಯನ್ನು ಕೊಂಡುತಂದೆ . ನಮ್ಮ ಇಡಿಯ ತಾಲೂಕಿಗೆ ತೋಟಾ ಕೋವಿ ರಿಪೇರಿ ಮಾಡುವವನು ಇಕ಼್ಬಾಲ್ ಸಾಬಿ ಒಬ್ಬನೇ . ಈ ಅಧಿಕ ಪ್ರಸಂಗಿ ನಾಗ ಯಾವಾಗಲೂ ಏನಾದರೊಂದು ಮಾಡಿ ಕೋವಿ ಹಾಳು  ಮಾಡಿ ಇಡುತ್ತಿದ್ದ . ಪ್ರತಿ ಸಲ  ಅದನ್ನು ಸರಿ ಮಾಡಿಸಿದಾಗಲೂ ಅದರ ರೂಪ ಬದಲಾಗುತ್ತಿತ್ತು . ಅದು ಯಾವ ಮಟ್ಟ ತಲುಪಿತ್ತೆಂದರೆ , ಬಾಯೊಳಗೇ ಇಟ್ಟು ಗುಂಡು ಹಾರಿಸಿದರೂ ಯಾವ ಗಾಯವನ್ನು ಮಾಡಲೂ ಅದು ಸೋಲುತಿತ್ತು . ಆ ಕೋವಿಯಿಂದ ಯಾವ ಪ್ರಾಣಿ ಸತ್ತಿದ್ದೂ ಸಹ ನಾನು ನೋಡಿರಲಿಲ್ಲ . ಸಾಯಿಸುವ ಉದ್ದೇಶವೂ ನನಗೆ ಇರಲಿಲ್ಲ .
ಅವು ನಮ್ಮ ಜಾಗಕ್ಕೆ ಬಂದಿಲ್ಲ , ನಾವೇ ಅವುಗಳ ಜಾಗ ಆಕ್ರಮಿಸಿಕೊಂಡಿದ್ದೇವೆ . ಕಾಡಿನಲ್ಲಿ ಹಣ್ಣು-ಹಂಪಲು ತಿಂದು ಹಾಯಾಗಿ ಇರುತ್ತಿದ್ದ ಮಂಗಗಳ ಊಟಕ್ಕೆ ಕುತ್ತು ತಂದವರೇ ನಾವು . ಮಶಿ ಮಂಗಗಳು ( ಅಥವಾ ಕರಿ ಮೂತಿಯ ಮಂಗ ) ಕೆಂಪು ಮೂತಿಯ ಮಂಗಗಳನ್ನು ಬೇಟೆ ಆಡಿ ತಿನ್ನುತ್ತಿದವು . ಆದರೆ ಈ ಮಶಿ ಮಂಗಗಳನ್ನು ಮನುಷ್ಯರು ಬೇಟೆ ಆಡತೊಡಗಿದರು . ಜೀವ ಜಾಲದ ಸಮತೋಲನ ತಪ್ಪತೊಡಗಿತು . ಮಶಿ ಮಂಗಗಳ ಸಂತತಿ ನಶಿಸಿ ಹೋಯಿತು . ಕೆಂಪು ಮೂತಿ ಮಂಗಗಳ ಉಪದ್ರ ಹೆಚ್ಚಾಯಿತು . ಮೂಲ ಸಮಸ್ಯೆ ಹುಟ್ಟಿದ್ದೇ ನಮ್ಮಿಂದ , ಬೇಟೆಯಾಡುವುದು ತಪ್ಪು ಎಂದು ಪ್ರತಿಪಾದಿಸುವವನು ನಾನು .
ಆದರೆ ಈ ನಾಗ ಬಿಡಬೇಕಲ್ಲ . ಎಕಾಲಜಿಯ ಧರ್ಮ ಸೂಕ್ಷ್ಮಗಳನ್ನು ಅವನಿಗೆ ಅರ್ಥ ಮಾಡಿಸುವುದು ನನ್ನಿಂದ ಸಾಧ್ಯವಿಲ್ಲ . ' ಕೊಂದ ಪಾಪ ತಿಂದರೆ ಹೋಗುತ್ತದೆ ' ಎನ್ನುವುದು ಅವನ ವಾದ . ಕೈಯಲ್ಲಿ ಕೋವಿ ಹಿಡಿದು ನಾನು , ನಾಗ ಹಾಗೂ ಮಂಜ ಕಾಡು ಅಲೆಯುವುದು ನಮ್ಮ ನೆಚ್ಚಿನ ಹವ್ಯಾಸ .
" ತೋಟಕ್ಕೆ ಮಂಗ ಬಂದಿದೆ ಕಣೋ ನಾಗ " ಎಂದು ನಾನು ಹೇಳಿ ಬಾಯಿ ಮುಚ್ಚುವುದರೊಳಗೆ ನಾಗ ಕೋವಿ ಹಿಡಿದು ಸಿದ್ಧನಾಗಿದ್ದ . ಮೂರೂ ಜನ ತೋಟ ಇಳಿದೆವು . ನಮ್ಮ ಜೊತೆಗೆ ನಾಗ ಸಾಕಿದ್ದ ಕಂತ್ರಿ ನಾಯಿಯೂ ಸಹ ಬಂದಿತ್ತು . ನಾಗ ಅದಕ್ಕೆ ಒಂದು ದಿನವೂ ಊಟ ಹಾಕಿದ್ದು ನೋಡಿರಲಿಲ್ಲ , ಅದರೂ ಸಹ ಅದು ಅವನ ಹಿಂದೆಯೇ ಬಾಲ ಅಲ್ಲಾಡಿಸುತ್ತಾ ಬರುತಿತ್ತು . 
ನಾಗ ಮುಂದೆ ಕೋವಿ ಹಿಡಿದು ನಡೆಯುತ್ತಿದರೆ , ನಾನು ಅವನ ಹಿಂದೆ ಮತ್ತು ಮಂಜ ನನ್ನ ಹಿಂದೆ ಬರುತ್ತಿದ್ದ . ಕೋವಿಯ ಟ್ರಿಗರ್ ಗೆ ಬಳ್ಳಿಯೊಂದು ಸಿಕ್ಕಿತು ನಾಗ ಕೋವಿಯನ್ನು ಮುಂದೆ ಎಳೆದುಕೊಂಡ . ನಳಿಕೆ ನಮ್ಮ ಕಡೆಗೆ ಗುರಿಮಾಡುತಿತ್ತು . ಢಂ ಎಂಬ ಆಸ್ಪೋಟನೆಯೊಂದಿಗೆ ಗುಂಡು ಹಾರಿತು . ಮಂಜನ ಮುಖದ ಪಕ್ಕವೇ ಗುಂಡು 'ಸುಯ್ಯ್ ' ಎಂದು ಸದ್ದು ಮಾಡುತ್ತಾ ಹೋಯಿತು . ಎಂದೂ ಸರಿ ಕೆಲಸ ಮಾಡದ ಇಕ಼್ಬಾಲ್ ಸಾಬಿಯ ಕೋವಿ ಅಂದು ಕೆಲಸ ಮಾಡಿತ್ತು .
ಮಂಜ ನಂತರ ಎರಡು ದಿನ ಜ್ವರ ಬಂದು ಮಲಗಿದ್ದನಂತೆ . 
                                                                              ( ಮುಂದುವರೆಯುವುದು ......................)

16/11/15

ನನ್ನ ದೇಶ ನನ್ನ ಜನ -೩(ನಾಗ ನೃತ್ಯ )

ಹೇಳಿ ಕಳಿಸಿ ಹದಿನೈದು ದಿನವಾದ ನಂತರ ನಾಗ ಬಂದಿದ್ದ . ನನ್ನನು ನೋಡಿದ ಕೂಡಲೇ ಕಿವಿಯವರೆಗೆ ಹಲ್ಲು ಕಿಸಿದ .
" ಅಯ್ಯೋ ನನ್ನ್ ಕಥೆ ಏನ್ ಕೇಳ್ತಿರ ಸೋಮಿ " ಎಂದು ತನ್ನ ಉದ್ದ ರಾಗ ತೆಗೆದ . ಅವನ ಕಥೆ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು . ಪ್ರತಿ ಸಲವೂ ತಪ್ಪಿಸಿಕೊಳ್ಳಲು ಒಂದೊಂದು ಕಥೆ ಹೇಳುತ್ತಿದ್ದ  .
ಕೆಲ ದಿನಗಳ ಹಿಂದೆ ನಾಗ ಬನದಲ್ಲಿ ಕಳೆ ಸವರುತ್ತಿದ್ದನಂತೆ , ಇವನ ಕತ್ತಿ ಒಂದು ನಾಗರ ಹಾವಿಗೆ ತಾಗಿ ಅದಕ್ಕೆ ಗಾಯವಾಯಿತಂತೆ . ಇವನು ತಕ್ಷಣ ಕೆಲಸ ಖೈದು ಮಾಡಿ ಮನೆಗೆ ಓಡಿ ಬಂದನಂತೆ . ಆ ಹಾವು ಅದಾಗಲೇ ಇವನ ಮನೆ ಮುಂದೆ ಇತ್ತಂತೆ . ಇವನಿಗೆ ಆ ಹಾವು ಎಲ್ಲೆಂದರಲ್ಲಿ ಬಂದು ಕಾಡಲು ಶುರು ಮಾಡಿತಂತೆ . ಯಾವುದೋ ಶಾಸ್ತ್ರಿ ಹಿಡಿದು ಶಾಂತಿ ಎಲ್ಲಾ ಮಾಡಿಸಿದನಂತೆ , ಆದರೆ ಅವನು ಮಾಡಿದ ಶಾಂತಿಯಲ್ಲಿ ಲೋಪವಿತ್ತಂತೆ . ಆ ಹಾವಿಗೆ ಇನ್ನೂ ಕೋಪ ಜಾಸ್ತಿಯಾಯಿತಂತೆ . ನಂತರ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಸರ್ಪ ಶಾಂತಿ ಮಾಡಿ ಬಂದನಂತೆ .
" ನನ್ ಜೀವ ಬಾಯಿಗೆ ಬಂದಿತ್ತು ಸೋಮಿ , ದುಡ್ಡಿನ ಮಖ ನೋಡಕ್ಕೆ ಆಯ್ತದ , ಅದ್ಕೆ ಎಷ್ಟ್ ಕರ್ಚ್ ಆದ್ರು ಸರಿ ಅಂತ ಸುಬ್ರಮಣ್ಯಕ್ಕೆ ಹೋದೆ ಸೋಮಿ " ಎಂದ . ನಾನೇನು ತಾನೇ ಬೈಯಲಿ ಅವನಿಗೆ , ಸುಮ್ಮನೆ ತಲೆಯಾಡಿಸುವುದೊಂದೇ ನನಗೆ ಉಳಿದ ಆಯ್ಕೆಯಾಗಿತ್ತು . 
ಅದೇ ಹೊತ್ತಿಗೆ ಮಂಜ ನಮ್ಮ ಮನೆಗೆ ಬಂದ . ಮಂಜ ಹಾಗೂ ನಾಗ ಸೇರಿದರೆ ಮುಗಿದೇ ಹೋಯ್ತು . ಅವರ ಪುಂಡಾಟಕ್ಕೆ ಕೊನೆಯೇ ಇಲ್ಲ . ದಿನವಿಡೀ ಹೇಳಿದರೂ ಖಾಲಿಯಾಗದ ಪೋಲಿ ಜೋಕುಗಳ ಮಾಲೀಕರು ಇವರು .
" ಏನೋ ಅವತ್ತು ನನ್ ಕ್ಷೌರ ನಾನೇ ಮಾಡಿಕೊಳ್ಳೋ ಹಾಗೆ ಮಾಡಿದ್ಯಲ್ಲೋ " ಎಂದು ಗದರಿದೆ .
" ಅದು ಹಂಗೆ ಆಗೋಯ್ತು ಸೋಮಿ , ಆ ಫಾತಿಮಂಗು ನಂಗು ಸಂಬಂಧ ಕಟ್ಟಿ ಜನ ಮಾತಾಡ್ತಾ ಇದಾರೆ . ಅವ್ರು ಎಲ್ರಿಗೂ ಬುದ್ಧಿ ಕಲಿಸಿ ಬರೋಕೆ ಹೊತ್ತಗೋಯ್ತು ಸೋಮಿ . ಬೇಜಾರ್ ಮಾಡ್ಕ್ಯ ಬೇಡಿ , ಮುಂದಿನ ಸಲ ನೀವು ಅರ್ಧ ದುಡ್ಡ್ ಕೊಡಿ ಸಾಕು " ಎಂದು ಬಿಟ್ಟಿ ಆಫ಼ರ್ ನೀಡಿದ .
" ಅಲ್ಲ ಸೋಮಿ ನನ್ ತರ ಶ್ರೀರಾಮ್ ಚಂದ್ರನ ಮೇಲೆ ಹಿಂಗೆ ಹೇಳ್ತಾರಲ ಸೋಮಿ ಇವ್ರು . ನನ್ ಜಾತಿ ಯಾವ್ದು , ಅವಳ ಜಾತಿ ಯಾವ್ದು , ಇವ್ರಿಗೆ ಏನು ಬುದ್ಧಿ -ಗಿದ್ಧಿ ಐತ ? "
" ಸುಮ್ನೆ ಇರಿ ಸೋಮಿ ಇವ ಏನ್ ಶ್ರೀರಾಮ್ ಚಂದ್ರ ಅಲ್ಲ , ಕೆಸರು ಕಂಡಲ್ಲಿ ತುಳಿತಾನೆ , ನೀರ್ ಕಂಡಲ್ಲಿ ತೊಳಿತಾನೆ . ಇಲ್ಲಿ ಬಂದು ದೊಡ್ಡ ಸಾಚಾ ತರ ಮಾತಾಡ್ತಾನೆ ಅಷ್ಟೆ " ಎಂದು ನಾಗ ಅವನನ್ನು ಕೆಣಕಿದ .
" ಏಯ್ ನಾಗ ಸ್ವಲ್ಪ ನೋಡ್ಕಂಡು ಮಾತಾಡು , ನನ್ನ ಏನು ಕಂಡಕ್ಟರ್ ಗೋಪಾಲ ಅಂದ್ ಕಂಡ್ಯ ? ಹೆಂಗಸ್ರು ಮಕ್ಕಳು ಅಂತ  ನೋಡ್ದೆ ಎಲ್ರ ತಿಕ ಮುಟ್ಟಿ ಸ್ವಲ್ಪ ಮುಂದೆ ಹೋಗ್ರಿ ಅಂತ ಹೇಳೋಕೆ "
ಇವರಿಬ್ಬರ ಮಾತು ಹಿಡಿತ ತಪ್ಪುತ್ತಿತ್ತು . ನನ್ನ ಮನೆಯ ಮುಂದೆ ಪಂಚಾಯ್ತಿ ಮಾಡುವುದು ನನಗೆ ಇಷ್ಟವಿರಲಿಲ್ಲ .
" ನಾಗ , ಆ ಮಾವಿನ್ ಮರದಲ್ಲಿ ಎರಡು ಕಾಯಿ ಕೊಯ್ದು ಕೊಡೊ ಮಾರಾಯ " ಎಂದು ಮಾತು ಬದಲಿಸಿದೆ .
" ಆ ಮರದ್ ಕಾಯಿ ಹುಳಿ , ಅದ್ನ ತಿಂದ್ ಏನ್ ಮಾಡ್ತೀರಾ ? "
" ಸುಮ್ನೆ ಹೇಳಿದಷ್ಟು ಮಾಡು " ಎಂದು ಗದರಿದೆ .
ಎರಡು ಮಾರು ಹತ್ತಿದವನೇ , ಅರಚುತ್ತಾ ನೆಲಕ್ಕೆ ಹಾರಿದ . ಹಾರಿದವನೇ ಪಂಚೆ , ಚಡ್ಡಿ ಎಲ್ಲ ತೆಗೆದೊಗೆದು ಓಡ ತೊಡಗಿದ .
ಚಿಕಳಿಯ (ಒಂದು ಜಾತಿಯ ಇರುವೆ ) ಗೂಡಿನ ಮೇಲೆ ಕಾಲಿಟ್ಟರೆ ಅದು ಸುಮ್ಮನೆ ಬಿಡುತ್ತದೆಯೆ ? . ನಾನು ಅವನ ನಾಗ ನೃತ್ಯ ನೋಡಲಾಗದೇ  ಕಣ್ಣು ಮುಚ್ಚಿಕೊಂಡೆ .
                                                                  (ಮುಂದುವರೆಯುವುದು.......................................)


7/11/15

ಮಾರಾಟಕ್ಕಿದೆ

 ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ ....................
ಕಣ್ಣ ಹನಿಯೊಂದು ಕೆನ್ನೆಗೆ ಇಳಿದಿತ್ತು . ಛೇ ! ನಾನು ಹುಡುಗ ,ತಟ್ಟನೆ ಕಣ್ಣೊರಸಿಕೊಂಡೆ . ಮತ್ತೆ ಮತ್ತೆ ಕರೆವ ,ಕೊರೆವ ,ಕೆರೆವ ನೆನಪುಗಳ ಸಿಡಿಲಿಗೆ ನನ್ನ ಮನದ ಹೆಮ್ಮರ ಸುಟ್ಟು ಬೂದಿಯಾಗಿದೆ . ಅವಳೇ ನೆಟ್ಟ ಗಿಡವಾಗಿತ್ತಲ್ಲವೇ ಅದು ? ಆದರೆ ನೀರೆರದಿದ್ದು ನಾನು , ಕನಸಿನ ಪನ್ನೀರು . ಎಷ್ಟು ದೊಡ್ಡದಾಗಿ ಬೆಳೆದಿತ್ತು ಅದು ? ನನ್ನೆಲ್ಲಾ ಅವಲಕ್ಷಣಗಳ ಮರೆಮಾಚಿ ನಿಂತಿತ್ತು . ನನ್ನೆಲ್ಲಾ ಕೆಟ್ಟತನಗಳ ಹೀರಿ , ಸಿಹಿ ಫಲ ಕೊಡುತ್ತಿತ್ತು .
ಭೂಮಿ ನನ್ನ ಮಗಳು , ಅಲ್ಲಲ್ಲ ನಮ್ಮ ಮಗಳು . ಎಂತ ಮುಗ್ಧ ಮಗು ಅವಳು . ಅರ್ಧ ಚಂದ್ರದ ಹಾಲುಗಲ್ಲ , ತುಟಿಯಂಚಿನ ಕಿಲ-ಕಿಲ ನಗು , ಬಟ್ಟಲು ಕಣ್ಣುಗಳು . ಅಮ್ಮನಿಗಿಂತ ಅಪ್ಪನೇ ಇಷ್ಟವಂತೆ ! . ಅವಳಿಗೆ ಕಥೆ ಹೇಳಬೇಕೆಂದು ಎಷ್ಟು ಪುಸ್ತಕ ಓದಿದೆ ನಾನು ? ಉಹುಂ ಲೆಕ್ಕವಿಲ್ಲ . ಈ ಆಫೀಸು ,ಕೆಲಸ ಇವೆಲ್ಲದರಿಂದ ದಣಿದು ಬರುತ್ತಿದ್ದ ನನಗೆ ಅವಳ ನಗುವೇ ಮದ್ದು . ಕಾಫಿಯನ್ನೂ ಕುಡಿಯಲು ಬಿಡದೆ ಬೆನ್ನು ಹತ್ತಿ ಕುಳಿತು ಬಿಡುತ್ತಿದ್ದಳಲ್ಲವೇ ? . 
ನನ್ನ ಪ್ರೀತಿಯಲ್ಲಿ ಅದ್ಯಾವ ತಪ್ಪಿತ್ತು ? . ಅದೆಷ್ಟು ಮಳೆಗಾಲ ನಿನಗೆ ಕೊಡೆಯಾಗಿರಲಿಲ್ಲ ನಾನು . ನನ್ನ ಭೂಮಿ ಭೂಮಿಗೆ ಬರುವ ಮುಂಚೆಯೇ ನನ್ನ ಬಿಟ್ಟು ಓಡುವ ಜರೂರತ್ತು ನಿನಗೇನಿತ್ತು ? . ನಿನ್ನನ್ನು ನನ್ನ ಕಣ್ಣ ರೆಪ್ಪೆಯಲ್ಲಿಟ್ಟು ಕಾಪಾಡಿದ್ದು ತಪ್ಪೇ ? 
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ 
ನೀರಿನಾಳ ತಿಳಿಯಿತೇನು ಹಾಯಿದೋಣಿಗೆ ? ....................
ನನ್ನ ಪ್ರೀತಿಯ ಆಳ ತಿಳಿಯುವ ಗೋಜಿಗೇ ಹೋಗಲಿಲ್ಲ ನೀನು . ಪ್ರಯತ್ನ ಮಾಡಿದ್ದರೂ ನಿನಗೆ ತಿಳಿಯುತ್ತಿರಲಿಲ್ಲ ಬಿಡು . ನಿನಗೆಲ್ಲಿತ್ತು ಅಷ್ಟು ಆಳಕ್ಕೆ ಇಳಿಯುವ ತಾಕತ್ತು ? . ನನ್ನ ಬಿಟ್ಟು ಹೋಗುವ ಕಾರಣವೇನಿತ್ತು ? ಅದ್ಯಾವ ಕಾರಣ ? 
ನಾನು ನಿನಗೆ ಎರಡನೆಯವನೋ , ಮೂರನೆಯವನೋ ಅಂತೆ , ಆದರೆ ಏನು ? . ಎಲ್ಲಾ ನೋವನ್ನೂ ಮರೆಸುವ ಸಾಮರ್ಥ್ಯ ನನಗಿತ್ತು , ಎಲ್ಲರನ್ನೂ ಎಲ್ಲವನ್ನೂ ಮರೆಸುವ ಶಕ್ತಿ ನನಗಿತ್ತು . 
ಪ್ರೀತಿ ತೆಗೆದುಕೊಳ್ಳುವುದಲ್ಲ , ಕೊಡುವುದು . ಹೇಗೆ ತಿಳಿಸಲಿ ನಿನಗೆ ? . ನದಿ ಹೇಗೆ ಹರಿದರೂ ಕೊನೆಗೆ ಸೇರುವುದು ಸಮುದ್ರವನ್ನೇ ತಾನೇ ? . ನನಗೆ ಕೇಳುವ ಅಧಿಕಾರವಿದೆ , " ನನ್ನ ಭೂಮಿಯನ್ನು ನನಗೆ ಕೊಡು , ಅವಳಿಗಾಗಿ ತಂದಿಟ್ಟ ಗೆಜ್ಜೆಗಳಿಗೆ ಸದ್ದು ಕೊಡು " . 
ಇಲ್ಲ ನೀನು ವಾಪಾಸು ಬರಲಾರೆ . ನನ್ನ ಭೂಮಿಯ ಮುಗಿಸಿಬಿಟ್ಟೆ ನೀನು . ಭೂಮಿಯೇ ಇಲ್ಲದ ಮೇಲೆ ಅವಳಿಗಾಗಿ ತಂದಿಟ್ಟ ಪಾದರಕ್ಷೆ ಇಟ್ಟುಕೊಂಡು ನಾನು ಏನು ಮಾಡಲಿ ? ಅದನ್ನು ನೋಡಿ ಮತ್ತೆ ಮತ್ತೆ ಬಿಕ್ಕಲೇ ? ಬೇಡ ನನಗದು ಬೇಡ . 
' ಮಾರಾಟಕ್ಕಿದೆ , ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ .' 
(ಇದು ಬ್ಲಾಗಿಗರ ಖೋ-ಖೋ ಆಟ . ' ಮಾರಾಟಕ್ಕಿದೆ , ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ ' ಎಂಬ Ernst Hemmingway ಅವರ ಕುಡಿಗಥೆಯ ಸುತ್ತ ಹೆಣೆದ ಕತೆ ಇದು.  ನನ್ನ ಸರದಿ ಮುಗಿದಿದೆ,  ನಾನು ಸ್ನೇಹಿತೆ ರಾಧೆಗೆ ಖೋ ಕೊಡುತ್ತೇನೆ.  ನೋಡೋಣ ಮುಂದೇನಾಗುತ್ತೋ? .   )
    

3/11/15

ವೈರಾಗ್ಯ

ಅಂದುಕೊಂಡಿದ್ದೆಲ್ಲಾ ಆಗುವಂತಿದ್ದರೆ ,ಬಯಸಿದ್ದೆಲ್ಲಾ ಸಿಗುವಂತಿದ್ದಿರೆ ಬಹುಶಃ ಮನುಷ್ಯ ಯಾವುದಕ್ಕೂ ಕೊರುಗುತ್ತಿರಲಿಲ್ಲವೇನೋ. ಗಣಿತದ Probability ವಿಭಾಗದ ಅಗತ್ಯವೇ ಇರುತ್ತಿರಲಿಲ್ಲ. ನೆನಪುಗಳೇ ನಮ್ಮನ್ನು ಮತ್ತೆ ಮತ್ತೆ ಕಾಡದಿದ್ದರೆ ಎಲ್ಲರೂ ಸಂನ್ಯಾಸಿಗಳಂತೆ ಬದುಕಿಬಿಡಬಹುದಿತ್ತು. ಇಲ್ಲ, ಎಲ್ಲವೂ ನಮ್ಮ ಎಣಿಕೆಯಂತೇ ಆದರೆ ಜೀವನದಲ್ಲಿ ಮಜವಿರುತ್ತದಾ? ಹಸಿದರೆ ಮಾತ್ರ ಊಟದ ಬೆಲೆ ಗೊತ್ತಾಗುವುದಲ್ಲವೇ? . ಭೌತಶಾಸ್ತ್ರದ ಪ್ರಕಾರ No mass is lost , energy can neither be created nor be destroyed . ಹಾಗಾದರೆ ನಾವು ಪಡೆದುಕೊಂಡದ್ದೂ ಏನೂ ಇಲ್ಲ, ಕಳೆದುಕೊಂಡಿದ್ದೂ ಏನೂ ಇಲ್ಲ. ಆದರೂ ನಾವು ಕೊರಗುವುದೇಕೆ, ಎಲ್ಲಾ ಇದ್ದರೂ ಏನೂ ಇಲ್ಲದ ಶೂನ್ಯತ್ವ ನಮ್ಮನ್ನು ಏಕೆ ಕಾಡುತ್ತದೆ. ನಮ್ಮ ದೇಹದ ಅದ್ಯಾವ ಜಾಗದಲ್ಲಿ ನಮ್ಮ ಮನಸ್ಸು ಅಡಗಿ ಕುಳಿತಿದೆ, ಅಥವಾ ಮನಸ್ಸು ಕೇವಲ hypothetical assumption ಅಷ್ಟೆಯಾ? . ಸೈಕಾಲಜಿಯೇ ಅಲ್ಲವೇ mind is everywhere although it is nowhere ಎಂದು ಹೇಳಿಕೊಟ್ಟದ್ದು.
ಥತ್ ಈ ವಯಸ್ಸಲ್ಲೇ ವೈರಾಗ್ಯ ...........

2/11/15

ನನ್ನ ದೇಶ ನನ್ನ ಜನ -೨(ನಾಗ ನೃತ್ಯ )

ಭತ್ತದ ಗದ್ದೆಯಲ್ಲಿ ತೋಟ ಮಾಡಿದ್ದರಿಂದ ದಿನಕ್ಕೊಂದು ಸಮಸ್ಯೆ ತಲೆದೋರುತಿತ್ತು . ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು , ತಕ್ಷಣವೇ ಅಡಿಕೆಗೆ ಔಷಧಿ ಸಿಂಪಡಿಸಬೇಕಿತ್ತು . ನಾರ್ವೆಯ ನಾಗನಿಗೆ ಹೇಳಿ ಕಳಿಸಿ ಹದಿನೈದು ದಿನವೇ ಆಗಿ ಹೋಗಿತ್ತು ,ಅದ್ಯಾವ ಹುತ್ತದಲ್ಲಿ ಅವನು ಅಡಗುತ್ತಾನೋ ದೇವರೇ ಬಲ್ಲ . ಅವ ಅಡಗಿದನೆಂದರೆ ದೇವರಿಗೂ ಅವನು ಸಿಗುವ ಆಸಾಮಿಯಲ್ಲ . ನನ್ನ ತೋಟ ದಿನದಿಂದ ದಿನಕ್ಕೆ  ಶೋಚನೀಯ ಸ್ಥಿತಿ ತಲುಪುತ್ತಿತ್ತು . ಎಲ್ಲಿ ಏನೇನು ಆಗಿದೆ ಎಂದು ನೋಡಲು ದಿನವೂ ತೋಟ ಸುತ್ತುವುದು ನನ್ನ ಹವ್ಯಾಸ . ನಿಜ ಹೇಳಬೇಕು ಎಂದರೆ ಅದು ನೆಪ ಮಾತ್ರ , ನಾನು ಪೇಟೆ ಬಿಟ್ಟು ಮಲೆನಾಡಿಗೆ ಬಂದಿದ್ದೇ ಹೇಗೆ ಬೇಕೋ ಹಾಗೆ ಕಾಡು ಅಲೆದುಕೊಂಡು ಯಾವುದೇ ಚಿಂತೆ ಇಲ್ಲದೆ ಬದುಕಬಹುದೆಂದು . 30X40 ಸೈಟಿನಲ್ಲಿ ಮನೆ ಕಟ್ಟಿ ಕಿಟಕಿಗಳನ್ನು ರಸ್ತೆಗೇ ತೆರೆದು ಕುಳಿತುಕೊಳ್ಳುವ ಸಿಟಿಯ ಆ ಯಾಂತ್ರಿಕ ಜೀವನ ನನ್ನಿಂದ ಆಗದು .
ಇಲ್ಲಿ ನನ್ನೆಲ್ಲಾ ಇಂತಹ ಹುಚ್ಚುತನಕ್ಕೆ ಜೊತೆಯಾಗುತ್ತಿದ್ದವನು ನಾಗ . ಅವನ ಬಗ್ಗೆ 'ಇದಂ ಇತ್ತಂ ' ಎಂದು ಹೇಳುವುದು ಕಷ್ಟ . ಆತ ಹೇಳುವ ಪ್ರಕಾರ ಆತನ ವಯಸ್ಸು ನೂರೈವತ್ತು ವರ್ಷ ಇರಬಹುದು , ನನ್ನಜ್ಜ ಮಗುವಾಗಿದ್ದಾಗಲೇ ಅವನಿಗೆ ಗಡ್ಡ ಬಂದಿತ್ತಂತೆ .ಆದರೆ ಆತ ಗಿಡ-ಮೂಲಿಕೆ ಔಷಧಗಳ ಭಂಡಾರ . ಅವನ ಕೆಲವೊಂದು ಪ್ರಸಂಗಗಳು ನನ್ನ ಮನಸ್ಸಿನಲ್ಲಿ ಇನ್ನೂ ನಗು ತರಿಸುತ್ತವೆ .
ಒಮ್ಮೆ ಅವನು ಕೆಲಸಕ್ಕೆ  ಬಂದವನೇ ಬಾಲ ಸುಟ್ಟ  ಬೆಕ್ಕಿನಂತೆ ಆಡುತ್ತಿದ್ದ . ಯಾವಾಗಲೂ ಕಾಪಿ ಎಂದು ಕುಣಿಯುವವನು ಅವತ್ತು ಕಾಪಿಯೇ ಬೇಡ ಎನ್ನುವುದೇ ! .
"ಏನಾಯ್ತೋ ನಾಗ " ಎಂದರೂ ಬಾಯಿ ಬಿಡುತ್ತಿಲ್ಲ . ನಂತರ ನಿಧಾನವಾಗಿ ಬಾಯಿ ಬಿಡಿಸಿದೆ .
ಪ್ರತಿ ದಿನ ಅವನು ಬೂದಿಯಲ್ಲಿ ಹಲ್ಲು ತಿಕ್ಕುವುದಂತೆ , ಅಂದೂ ಸಹ ಬೆಳಿಗ್ಗೆ ಎದ್ದವನೇ ನಿದ್ದೆಗಣ್ಣಿನಲ್ಲಿ ಬೂದಿಗೆ ಕೈ ಹಾಕಿದನಂತೆ . ಬೂದಿ ಮೇಣ ಮೇಣವಾಗಿ ಅನಿಸಿತಂತೆ . ಮಗಳಿಗೆ ಕೇಳಿದಾಗ
" ಹೊನ್ನೆ ಮರದ್ ಕಟ್ಗೆ ಕಾಣ್ತಿತೆ , ಸುಮ್ನೆ ಹಲ್ ತಿಕ್ಕು " ಎಂದಳಂತೆ . ಹಲ್ಲು ತಿಕ್ಕಿದ ಮೇಲೆ ಬೆಕ್ಕು ಒಲೆಯೊಳಗೆ ಹೇತಿದ್ದು ಕಾಣಿಸಿತಂತೆ . ಆಸಾಮಿ ಎರಡು ದಿನ ಊಟ ಮುಟ್ಟಲಿಲ್ಲ .
ಇನ್ನು ಅವನ ಭಾಷೆಯೋ ? ಅದನ್ನು ಪದಗಳಲ್ಲಿ ವಿವರಿಸುವುದು ಕಷ್ಟ ಬಿಡಿ . ಒಮ್ಮೆ ಆತ ಅಡಿಕೆ ಮರ ಹತ್ತಿದ್ದ , ಮೇಲಿನಿಂದ
" ಪಿಂಗ ಕೊಡಿ ಸೋಮಿ " ಎಂದು ಬಡಿದುಕೊಳ್ಳತೊಡಗಿದ . ಅದ್ಯಾವ ಭಾಷೆ ಎಂದು ನನಗೂ ಅರ್ಥವಾಗಲಿಲ್ಲ . ಬಹುಷಃ ಗೂಗಲ್ ಟ್ರಾನ್ಸ್ಲೇಟರ್ ಸಹ ಇದಕ್ಕೆ ಉತ್ತರ ನೀಡಲಾರದು . ಸಿಟ್ಟಿನಿಂದ ಆತ ಮರದಿಂದ ಇಳಿದು ಬಂದು
" ಏ ಅವಾಗಿಂದ ಕೂಗ್ತಾ ಇದೀನಿ ಪಿಂಗ ಕೊಡಿ " ಎಂದು ನನ್ನ ಕೈಲಿದ್ದ ಪ್ಲಾಸ್ಟಿಕ್ ಪ್ಯಾಕೆಟ್ ತೆಗೆದುಕೊಂಡು ಹೋದ . ಅವತ್ತೇ ನನ್ನ ಡೈರಿಯಲ್ಲಿ ಬರೆದುಕೊಂಡೆ
ಪಿಂಗ=ಪ್ಯಾಕೆಟ್ .
ತೋಟದ ಬೇಲಿಗಳಲ್ಲಿ ಅಲ್ಲಲ್ಲಿ ನೇಣಿನ ಕುಣಿಕೆಗಳು ನನಗೆ ಕಾಣಿಸಿತು . ಚಿಟ್ಟು ಕೋಳಿಗಳನ್ನು ಹಿಡಿಯಲು ಆದಿವಾಸಿಗಳು ಈ ನೇಣಿನ ಕುಣಿಕೆ ಹಾಕುತ್ತಾರೆ . ನಾನು ಅದರ ಬಗ್ಗೆ ಕಂಪ್ಲೇಂಟ್ ಕೊಟ್ಟೂ ಕೊಟ್ಟು ಸುಸ್ತಾಗಿದ್ದೆ . ಕೊನೆ ಕೊನೆಗೆ ಪೋಲಿಸರೇ ನನಗೆ ಸಲಹೆ ನೀಡುತ್ತಿದ್ದರು .
" ಬಿಡ್ರಿ ಪಾಪ ಏನೋ ಹೊಟ್ಟೆ ಪಾಡು ಅವ್ರುದ್ದು " ಎಂದು .
ಆದರೂ ಅವರು ಎಷ್ಟರ ಮಟ್ಟಿಗೆ ಬೇಟೆ ಆಡುತ್ತಾರೆ ಎಂದರೆ ನಮ್ಮೂರಿನಲ್ಲಿ ಈಗ ಚಿಟ್ಟು ಕೋಳಿಗಳು  ಅಪರೂಪವೇ ಆಗಿ ಹೋಗಿದೆ . ನಮ್ಮ ಚಿಟ್ಟು ಕೋಳಿಗಳು , ಡೋಡೋ ಪಕ್ಷಿಗಳ ಹಾದಿ ಹಿಡಿಯದೆ ಹೋದರೆ ಅಷ್ಟೇ ಸಾಕು .
ನನ್ನ ತೋಟದ ಅಂಚಿನಲ್ಲೇ ಮಂಜನ ಮನೆ , ಅವನ ಹೆಂಡತಿ  ರಸ್ತೆಯಲ್ಲಿ ಹೋಗುತ್ತಿದ್ದಳು ,
" ಎಲ್ಲಮ್ಮ ನಿನ್ನ ಗಂಡ ಅವತ್ತು ನನಗೆ ತಿರುಪತಿ ಕ್ಷೌರ ಮಾಡಿದ ಮೇಲೆ ಪತ್ತೆ ಇಲ್ಲ " ಎಂದು ಕೇಳಿದೆ . ಧಾರಾಕಾರವಾಗಿ ಅವಳು ಅಳಲು ಶುರುಮಾಡಿದಳು .
" ಅವತ್ತಿನ ಜಗಳದಲ್ಲಿ ಹೊಡ್ದಾಡ್ಕಂಡು ,ಜೈಲಿನಾಗೆ ಹಾಕಿದಾರೆ ಸೋಮಿ ಅವನ್ನ " , ಎಂದು ಕಣ್ಣೊರಸಿ ಕೊಂಡಳು .
" ಒಂದ್ ತಿಂಗಳು ಒಳಗೆ ಇಟ್ಗಂಡು ಆಮೇಲೆ ಬಿಟ್ಟ್ ಕಳಿಸ್ತಾರೆ ,  ಚಿಂತೆ ಮಾಡ್ಬೇಡ " ಎಂದು  ಸಮಾಧಾನಿಸಿದೆ .
" ಆ ಶನಿ ಮುಂಡೆಗಂಡಂಗೆ ನೀವೇ ಸ್ವಲ್ಪ ಬುಧ್ಧಿ ಹೇಳಿ ಒಡೆಯ " ಎಂದು ದುಂಬಾಲು ಬಿದ್ದಳು . ಗಂಡನಿಗೆ ಮುಂಡೆಗಂಡ ಎಂದು     ಬೈದರೆ ತನಗೆ ತಾನೇ ಬೈದು ಕೊಂಡಂತೆ ಆಯಿತು ಅಲ್ಲವೇ ? . ಅದೆಲ್ಲಾ ಸೂಕ್ಷ್ಮಗಳು ಇವರಿಗೆ ತಿಳಿಯದು , ಇವರು ಕನ್ನಡದ ಕೊರಳು ಪಟ್ಟಿ ಹಿಡಿದುಕೊಂಡು ದುಡಿಸಿಕೊಳ್ಳುತ್ತಾರೆ . ಅವನು ನನ್ನ ಮಾತು ಕೇಳುತ್ತಾನೆಯೇ ? . ಉಹುಂ ಸಾಧ್ಯವೇ ಇಲ್ಲ . ಅದೂ ಅಲ್ಲದೇ ಅವನ ಸಂಸಾರದಲ್ಲಿ ವಿನಾಕಾರಣ ಮೂಗು ತೂರಿಸುವುದು ನನಗೆ ಇಷ್ಟವಿರಲಿಲ್ಲ . ಸುಮ್ಮನೆ ಬಾಯಿ ಮಾತಿಗೆ , " ಆಯ್ತಮ್ಮ ಹೇಳಿ ನೋಡ್ತೀನಿ " ಎಂದು ಮನೆ ಕಡೆ ತಿರುಗಿದೆ .
ಮನೆಯ ಜಗುಲಿಯಲ್ಲಿ ನಾಗ ಕಾಫಿ 'ಚೊರ್' ಎಂದು ಹೀರುತ್ತ್ತಾ ಕುಳಿತಿದ್ದ , ಕೊನೆಗೂ ನಾಗ ಹುತ್ತದಿಂದ ಮೇಲೆದ್ದು ಬಂದಿದ್ದ .
                                                                                                 ( ಮುಂದುವರೆಯುವುದು.....................)