13/12/16

ಶಾಲ್ಮಲಾ

ಶಿರಸಿಯಿಂದ ಹೊರಟ ಬಸ್ಸು ಪ್ರತಿ ತಿರುವಿನಲ್ಲೂ 'ಕೀಯ್' ಎಂದು ಶಬ್ದ ಮಾಡುತ್ತಾ ಸಾಗುತ್ತಿತ್ತು. ಬ್ರೇಕ್ ಆಯಿಲ್ ಹಾಕಿ ಎಷ್ಟು ವರ್ಷಗಳಾಗಿತ್ತೋ ಏನೋ? ತಿರುವು ತಿರುವಿಗೂ ಕಣ್ಣಿಗೆ ರಾಚುವ ಅಡಿಕೆಮರಗಳು. ನನ್ನ ಪಕ್ಕ ಕುಳಿತಿದ್ದವನಿಗೆ 'ತಟ್ಟಿಕಾನು' ಬಂದಾಗ ಹೇಳಿ ಎಂದು ಸೂಚಿಸಿದ್ದೆ. ಬಸ್ಸು ನಿಂತ ಕಡೆಯೆಲ್ಲಾ ಇದೇ ತಟ್ಟಿಕಾನು ಎನಿಸಿ ನಾನು ಅವನ ಮುಖ ನೋಡುತ್ತಿದ್ದೆ. 'ಇನ್ನೂ ಮುಂದೆ' ಎಂದು ಅವನು ಸಂಜ್ಞೆ ಮಾಡುತ್ತಲೇ ಇದ್ದ. ಬಸ್ಸಿನ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಾ ಹೋಯಿತು. ಒಂದು ಹಂತದಲ್ಲಿ ಉಳಿದದ್ದು ನಾವಿಬ್ಬರೇ. ನಂತರ ಆತನೂ ಇಳಿದು, "ಮುಂದಿನ ಶ್ಟಾಪಲ್ಲಿ ಇಳ್ಕಳಿ" ಎಂದ. ನಾನು ಮುಂದಿನ ಸ್ಟಾಪಿನಲ್ಲಿ ಇಳಿದೆ.
         ರಸ್ತೆಯ ಎಡಗಡೆ ದೊಡ್ಡ ಬೆಟ್ಟ, ಬಲಗಡೆ ಆಳವಾದ ಪ್ರಪಾತ, ಅದರೊಳಗೆ 'ಜುಳು-ಜುಳು' ಎಂದು ಸದ್ದು ಮಾಡುತ್ತಾ ಹರಿಯುವ ಶಾಲ್ಮಲಾ ನದಿ. ಏಕಾಂತತೆ ಭಯ ತರಿಸುವಷ್ಟು ಅಸಹನೀಯವಾಗಿತ್ತು. ಆ ಮೌನವನ್ನು ಸೀಳಿ ಧ್ವನಿಯೊಂದು ಬಂತು, "ಹೋಯ್, ಸುಭಾಷ್ ಅಲ್ಲವಾ?" ನಾನು ಬೆಚ್ಚಿ ತಿರುಗಿ ನೋಡಿದೆ. ದೂರದಲ್ಲಿದ್ದ ಆತನ ಮುಖ ಅಸ್ಪಷ್ಟವಾಗಿ ಕಾಣುತ್ತಿತ್ತು. ಬಿಳಿ ಅಡ್ಡಪಂಚೆ, ಮಾಸಲು ಅಂಗಿ, ಬಾಯಿತುಂಬಾ ಕೆಂಪುಕವಳ! ಹತ್ತಿರ ಬಂದಮೇಲೆ ಆತ ಸುಬ್ರಾಯ ಎಂದು ಗೊತ್ತಾಯಿತು. "ಬನ್ನಿ" ಎನ್ನುತ್ತಾ ನನ್ನ ಬ್ಯಾಗು ಹಿಡಿದುಕೊಂಡು ಮುಂದೆ ನಡೆದ, ನಾನು ಹಿಂಬಾಲಿಸಿದೆ.
         ಅರ್ಧ ಮೈಲಿನ ಕಾಲ್ನಡಿಗೆಯಷ್ಟೇ. ತೋಟ ದಾಟಿ ಒಂದು ಸಣ್ಣ ಗುಡ್ಡ ಹತ್ತಬೇಕು. ಮೂರ್ನಾಲ್ಕು ಹೆಸರಿಲ್ಲದ ಹೊಳೆಗಳನ್ನು ದಾಟಬೇಕು. ಗುಡ್ಡ ಇಳಿಯುತ್ತಿದ್ದಂತೆ ಮನೆಯ ಅಂಗಳ ಸಿಕ್ಕಿಬಿಡುತ್ತದೆ. ಕೆಸರಿನಿಂದ ಪಾರಾಗಲು ಅಡಿಕೆ ಮರದ ದಬ್ಬೆಗಳನ್ನು ಅಂಗಳದಲ್ಲಿ ಹಾಕಿದ್ದರು. ಅದರ ಮೇಲೆ ನಡೆದು ಮನೆ ಸೇರಿಕೊಂಡೆ. ಐವತ್ತರವತ್ತು ವರ್ಷ ಹಳೆಯ ಮನೆ. ರೆಡ್ ಆಕ್ಸೈಡ್ ನೆಲ, ಸೂರಿಗೆ ಹಲಗೆಯ ಮುಚ್ಚಿಗೆ.
           "ಬಾರೋ" ಎನ್ನತ್ತಾ ಶಾಲ್ಮಲಾ ಅಡಿಗೆ ಮನೆಯಿಂದ ಬಂದಳು. ಫೋಟೋದಲ್ಲಿ ಇದ್ದ ಹಾಗೇ ಇದ್ದಾಳೆ ಎನಿಸಿತು ನನಗೆ. ನಾನು ಕೈಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಊಟಕ್ಕೆ ಸಿದ್ಧವಾಗಿತ್ತು. ನನಗೂ ಸುಬ್ರಾಯನಿಗೂ ಶಾಲ್ಮಲಾಳೇ ಊಟ ಬಡಿಸಿದಳು. ಊಟ ಮುಗಿಸಿ ಹೊರಡುವಷ್ಟರಲ್ಲಿ ಸುಬ್ರಾಯ ಹೊರಟು ನಿಂತ. ಶಾಲ್ಮಲಾ ಅವನನ್ನು ಕಳಿಸಿ ಬಂದಳು.
          "ಇವರು ಅಡಿಗೆ ಕಾಂಟ್ರಾಕ್ಟ್ ಮಾಡ್ತಾರೆ. ಇನ್ನೊಂದೆರಡು ದಿನ ಕುಮಟಾದಲ್ಲಿ ಕಾಂಟ್ರಾಕ್ಟ್ ಹಿಡಿದಿದ್ದಾರೆ" ಎನ್ನುತ್ತಾ ಒಳಗೆ ಸೇರಿದಳು. ಆಕೆಯೇ ಮಾಡಿಕೊಟ್ಟ ಹಾಸಿಗೆಯ ಮೇಲೆ ನಾನು ಒರಗಿದೆ. ಪ್ರಯಾಣದ ಸುಸ್ತಿಗೆ ಸಣ್ಣ ಜೊಂಪು ಆವರಿಸಿತು.
           ಎದ್ದಾಗ ಸೂರ್ಯ ಪಶ್ಚಿಮಕ್ಕೆ ವಾಲಿದ್ದ. ನನ್ನೆದುರಿಗಿದ್ದ ಕಾಫಿಯನ್ನು 'ಚೊರ್' ಎಂದು ಹೀರುತ್ತಾ, "ನನ್ನನ್ನು ಶಾಲ್ಮಲಾ ನದಿತೀರಕ್ಕೆ ಕರ್ಕೊಂಡು ಹೋಗ್ತೀಯಾ" ಎಂದೆ. ಆಕೆ ಪ್ರತಿಕ್ರಿಯಿಸದೆ ಸುಮ್ಮನೆ ನಕ್ಕಳು.
          ಎರಡು ಶಾಲ್ಮಲೆಯನ್ನು ಜೊತೆಯಲ್ಲೇ ನೋಡುವ ಭಾಗ್ಯ ನನ್ನದಾಯ್ತು. ಬೆಟ್ಟದ ಮೇಲಿಂದ, ಕಲ್ಲುಗಳನ್ನು ನುಸುಳಿ, ಒಮ್ಮೆ ಬಾಗಿ-ತೂಗಿ 'ಜುಳು-ಜುಳು' ಶಬ್ದಮಾಡುವ ಶಾಲ್ಮಲೆ; ಉದ್ದನೆಯ ಕಡುಗಪ್ಪು ಕೂದಲು, ಖಾದಿ ಟಾಪು, ಕಂಡೂ ಕಾಣದಂತಿರುವ ಹಣೆಯ ಬೊಟ್ಟು, ಕೈಗೆ ಒಂದೇ ಬಳೆಯ ಸರಳ ಸುಂದರ ರೂಪದ ಈ ಶಾಲ್ಮಲೆ! ಸಹಸ್ರಲಿಂಗವನ್ನು ತೋರಿಸಿದಳು. ಗುಡ್ಡದ ಮೇಲಿಂದ ಹರಿದುಬರುವ ನೀರು ಕಲ್ಲನ್ನು ಕೊರೆದು ಲಿಂಗದ ಆಕಾರಕ್ಕೆ ತಿರುಗಿತ್ತು. ಸಾವಿರಾರು ಲಿಂಗಗಳು!
        ಶಾಲ್ಮಲೆಯನ್ನು ದಿಟ್ಟಿಸುತ್ತಾ ಕೇಳಿದೆ, "ಯಾಕೆ ಹೀಗೆ ಮಾಡಿದೆ?" ನನಗೆ ಗೊತ್ತಿತ್ತು ಆಕೆಯ ಬಳಿ ಉತ್ತರವಿಲ್ಲ. ಆಕೆಗಿಂತ ಹುಚ್ಚುತನ ಮಾಡುವವನು ನಾನು. ಬಿ.ಟೆಕ್ ಮುಗಿಸಿ ಯಾರ ಮಾತೂ ಕೇಳದೆ ದೇಶ-ವಿದೇಶ ಸುತ್ತುತ್ತಿದ್ದೇನೆ. ಅವಳು ಜರ್ನಲಿಸಂ ಮುಗಿಸಿ ತನ್ನೂರಿನಲ್ಲೇ ಬೇರುಬಿಟ್ಟಳು.
( ಸಶೇಷ .................)