28/5/21

ಭರವಸೆ 

ಮುಂದೆ ಒಂದು ಮಾರು ಸಹ ಕಾಣದಷ್ಟು ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಗಾಯತ್ರಿ ಒಬ್ಬಳೇ ನಡೆದುಕೊಂಡು ಬರುತ್ತಿದ್ದಳು. ಆದರೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದ ಮಳೆ, ಮನೆ ತಲುಪುವ ಅವಳ ನಂಬಿಕೆಯನ್ನು ಕಡಿಮೆ ಮಾಡುತಿತ್ತು. ಮನೆಯ ಬಳಿ ಬಂದರೂ ಬಾಗಿಲು ದಾಟದೇ ಮಳೆಯಲ್ಲಿ ನೆನೆಯುತ್ತಾ ಬಾಗಿಲಲ್ಲೇ ನಿಂತು ಕಣ್ಮುಚ್ಚಿದಳು. ಒಳಗೆ ಅಡಿಗೆ ಮಾಡುತ್ತಿದ್ದ ಸಾವಿತ್ರಕ್ಕ ಏನೋ ಶಬ್ಧ ಎಂದು ಬಂದವಳು, ಬಾಗಿಲಲ್ಲೇ ತೋಯುತ್ತ ನಿಂತಿದ್ದ ಗಾಯತ್ರಿಯನ್ನು "ಏಯ್ ಒಳಗೆ ಬಾರೆ" ಎಂದು ಬೈದು ಒಳಗೆ ಕರೆದು ಕೂರಿಸಿದಳು. ಇಷ್ಟಾದರೂ ಒಂದೇ ಒಂದು ಮಾತೂ ಸಹ ಗಾಯತ್ರಿಯ ಬಾಯಿಂದ ಹೊರ ಬರಲಿಲ್ಲ. ಜಗುಲಿಯ ಮೇಲೆ ಕೂತಿದ್ದ ಜಾಗದಲ್ಲೇ ಕೂತಿದ್ದಳು. ಸಾವಿತ್ರಕ್ಕನೇ ಒಳಗಿನಿಂದ ಒಣ ಟವೆಲ್ ತಂದು ಅವಳ ತಲೆ ಒರೆಸಿ " ಹುಂ, ಈಗ ಸ್ನಾನಕ್ಕೆ ಹೋಪಲೆ ಅಡ್ಡಿಲ್ಲೆ" ಎಂದಳು. ಅದಕ್ಕೂ ಸಹ ಅವಳು ತುಟಿಕ್ ಪಿಟಿಕ್ ಎನ್ನದೆ ಬಚ್ಚಲ ಮನೆಯ ಕಡೆ ನಡೆದು ಹೋದಳು. ಜಗುಲಿಯಲ್ಲೇ ಕೂತಿದ್ದ ಸಾವಿತ್ರಕ್ಕನ ಗಂಡ ಚಂದ್ರಯ್ಯ ಏನು ಮಾಡುವುದೆಂದು ತಿಳಿಯದೆ ಕತ್ತರಿಸಿದ ಅಡಿಕೆ ಹೋಳನ್ನು ಬಾಯಿಗೆ ಎಸೆದುಕೊಂಡು ವೀಳ್ಯದೆಲೆ ಸುತ್ತಿದರು. " ಎಂತಾರು ಮಾಣಿ ಹತ್ರ, ಗಣಪತಿ ಮಾವಂಗೆ ಹೇಳಿ ಒಂದು ಹೋಮ ಮಾಡಿಸದೇ ಸೈ " ಎಂದು ಸಾವಿತ್ರಕ್ಕ ಮತ್ತೆ ಅಡುಗೆ ಮನೆ ಸೇರಿದಳು. 

ಸ್ನಾನ ಮಾಡಿ ಸೀರೆಯುಟ್ಟು ಬಂದ ಗಾಯತ್ರಿ ಏನೂ ಆಗೇ ಇಲ್ಲವೆಂಬಂತೆ ಸಿದ್ಧವಾಗಿದ್ದ ಅನ್ನ ಹುಳಿ ಪ್ಲೇಟಿಗೆ ಹಾಕಿಕೊಂಡು ಟಿವಿ ನೋಡುತ್ತಾ ಕುಳಿತಳು. ಅಷ್ಟರಲ್ಲಿ ವೈದೀಕದ ಮನೆಗೆ ಹೋಗಿದ್ದ ಅವಳ ಗಂಡ ರವಿ ಮನೆಗೆ ಬಂದ. ಅಪ್ಪ ಅಮ್ಮನ ಮುಖದ ಮೇಲೆ ಇದ್ದ ಪ್ರಶ್ನಾರ್ಥಕ ಚಿನ್ಹೆ ಅವನಿಗೆ ಅರ್ಥವಾಯಿತು. ಮೂವರೂ ರೂಮು ಸೇರಿ ಬಾಗಿಲು ಹಾಕಿಕೊಂಡರು. 

ಚಂದ್ರಯ್ಯನೇ  ಮಾತು ಶುರು ಮಾಡಿದ, "ಅಲ್ದೊ ನಮ್ಮ ಕಡೆ ಹೆಣ್ಣು ಸಿಗದಿಲ್ಲೆ ಅಂತ ಬಯಲು ಸೀಮೆ ಕಡೆ ಇಂದ ಹೆಣ್ಣು ತಂದ್ರೆ ಇದೆಂತ ಕಥೆ ಆತೋ". ರವಿಗೆ ಈ ಮಾತು ಹಿಡಿಸಿತಾದರೂ, ಹೆಂಡತಿಯ ಮೋಹವೇನೂ ಕಡಿಮೆ ಇರಲಿಲ್ಲ. ಐವತ್ತರ ಆಸುಪಾಸಿನ ಅವನಿಗೆ ಪುರೋಹಿತನೆಂಬ ಕಾರಣಕ್ಕೆ ಮದುವೆ ವಿಳಂಬವಾಗಿತ್ತು. ಕೊನೆಗೂ ಯಾರೂ ಸಿಗದೇ ದಲ್ಲಾಳಿಯೊಬ್ಬನನ್ನು ಹಿಡಿದು ಗುರುತು ಪರಿಚಯವಿಲ್ಲದ ದೂರದ ಬಯಲು ಸೀಮೆಯಿಂದ ಹೆಣ್ಣು ತಂದು ಮದುವೆ ನೆರವೇರಿತ್ತು. ಇಪ್ಪತ್ತರ ಗಾಯತ್ರಿಯ ತುಂಟತನ ಅವನಿಗೆ ಹಿಡಿಸಿತ್ತು. ಆದರೆ ಸಂಪ್ರದಾಯದಲ್ಲಿ ಬಿಗುವಿದ್ದ ಸಾವಿತ್ರಕ್ಕನಿಗೆ ಸೊಸೆ ಹಿಡಿಸಿರಲಿಲ್ಲ. ಅಡಿಗೆಗೆ ಹೆಚ್ಚು ಬಳಸುವ ಈರುಳ್ಳಿ, ಬೆಳ್ಳುಳ್ಳಿ ಕೋಪ ತರಿಸುತ್ತಿತ್ತು. ಭಾಷೆಯಲ್ಲೂ ವ್ಯತ್ಯಾಸ, ಸಂಸ್ಕೃತ ಜ್ಞಾನ ಸೊನ್ನೆ. ದಂಪತಿ ಸಮೇತ ಪೂಜೆಗೆ ಕುಳಿತಾಗ ಗಾಯತ್ರಿಗೆ ಪಂಚಪಾತ್ರೆಯಿಂದ ಗಂಡನ ಕೈಗೆ ನೀರು ಹಾಕಲೂ ಬರುತ್ತಿರಲಿಲ್ಲ. ಆರತಿ ಮಾಡುವಾಗ ಗಂಟೆಯೂ ಆರತಿಯೊಂದಿಗೆ ಸುತ್ತು ಹೊಡೆಯುತಿತ್ತು. ಯಲ್ಲವ್ವನಿಂದ ಗಾಯತ್ರಿ ಎಂದು ಹೆಸರು ಬದಲಾಗಿತ್ತೆ ಹೊರತು, ದೇಹದೊಳಗಿನ ರಕ್ತ ಮಾಂಸ, ಮಜ್ಜೆಯಲ್ಲ. 

ಇವೆಲ್ಲವನ್ನೂ ಹೇಗೋ ಸಹಿಸಿಕೊಂಡಿದ್ದ ಸಾವಿತ್ರಕ್ಕನಿಗೆ ಈಗ ನಡೆಯುತ್ತಿರುವ ಘಟನೆಗಳು ನುಂಗಲಾರದ ತುತ್ತಾಗಿತ್ತು. ಗಾಯತ್ರಿ ಹೇಳದೆ ಕೇಳದೆ ಮನೆಯಿಂದ ಹೊರಟು ಬಿಡುತ್ತಿದ್ದಳು. ಕಾಡು, ಗುಡ್ಡ, ಬೆಟ್ಟ ಹೀಗೆ ಎಲ್ಲೆಲ್ಲೂ ಒಬ್ಬಳೇ ಸುತ್ತುತ್ತಿದ್ದಳು. ರಸ್ತೆ ಕೆಲಸ ಮಾಡುವ ಬೋಯಿಗಳ ಜೊತೆ ಹೋಗಿದ್ದಾಗ ಊರಿನವರು ಯಾರೋ ಇವಳನ್ನು ಗುರುತಿಸಿ ಕರೆದುಕೊಂಡು ಬಂದಿದ್ದರು. ಕೇಳಿದರೆ, "ಅಲ್ಲೊಂದು ಅವ್ವಾರು ತಲೀಗೆ ಮಾಲಿಶ್ ಮಾಡ್ತಾರಾ. ಅದ್ಕೆ ಹೋಗಿದ್ನಿ" ಎನ್ನುತ್ತಿದ್ದಳು. ಈ 'ಅವ್ವಾರು' ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವುದು ಅವಳಿಗೆ ಮಾತ್ರ ಕಾಣಿಸುತಿತ್ತು. ಅಲ್ಲೆಲ್ಲೋ ಜೋಡು ರಸ್ತೆಯ ಜಂಕ್ಷನ್ ಬಳಿ, ಅರಳೀ ಕಟ್ಟೆಯ ಬುಡದಲ್ಲಿ, ಬಸ್ ಸ್ಟ್ಯಾಂಡಿನಲ್ಲಿ ಹೀಗೆ ಹಲವು ಕಡೆ ಅವಳು 'ಮಾಲಿಶ್' ಮಾಡಿಸಿಕೊಂಡಿದ್ದಳಾದರೂ ಊರವರ ಕಣ್ಣಿಗೆ ಯಾವ 'ಅವ್ವಾರೂ' ಕಾಣಿಸಿಕೊಂಡಿರಲಿಲ್ಲ. 

ಕೆಲವರು ಇದು ಮನೋರೋಗ ಎಂದರೆ, ಮತ್ತೆ ಕೆಲವರು "ಅದೇ ರಸ್ತೆ ಮಾಡ್ವಾಗ ಒಬ್ಬಳು ಗುಂಡಿಗೆ ಬಿದ್ದು ಸತೋಗಿದ್ದ ಅವಳೇ ಇದ್ದಿಕ್ಕ?" ಎಂದು ಸಂಶಯ ಮೂಡಿಸಿದರು. ರವಿ, ಅಪ್ಪ ಅಮ್ಮನ ಮಾತಿಗೆ ಮಣಿದು ಒಂದು ಹೋಮ ಮಾಡಿಸಲು ನಿರ್ಧರಿಸಿದ. ಮರುದಿನ ರವಿಯ ಸೋದರ ಮಾವನಾದ ಗಣಪತಿ ಭಟ್ಟರೇ ಮನೆಗೆ ಬಂದರು. ಚಿತ್ರ ವಿಚಿತ್ರ ರಂಗೋಲಿ ಬಿಡಿಸಿ, ಅದರ ಮೇಲೆ ಕಲಶಗಳನ್ನಿಟ್ಟು ಹೋಮ ಮಾಡಿದರು. ಪೂರ್ಣಾಹುತಿಯ ವೇಳೆ, ಗಾಯತ್ರಿ ಹ್ಞೂಕರಿಸುತ್ತಾ "ಸರಿ ನಾನಿನ್ನು ಹೋಗ್ತೀನಿ" ಎಂದು ಕೂಗಿದಳು. ಗಣಪತಿ ಭಟ್ಟರು ಎಲ್ಲವೂ ಸರಿಯಾಯಿತೆಂದು ಆಕಾಶ ನೋಡಿ ಕೈ ಮುಗಿದು ಕೃತಾರ್ಥರಾದರು. ಆದರೆ ಆ ತೃಪ್ತಿ ಕೆಲ ದಿನಗಳಿಗಷ್ಟೇ ಸೀಮಿತವಾಯಿತು. ಮತ್ತೆ ನಾಲ್ಕೇ ದಿನದಲ್ಲಿ ಅವಳು 'ಅವ್ವಾರನ್ನು' ಹುಡಿಕಿಕೊಂಡು ಗುಡ್ಡ, ಬೆಟ್ಟ ಅಲೆಯತೊಡಗಿದಳು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಊರೂರು ತಿರುಗತೊಡಗಿದಳು. 

ಆದರೆ ಈ ಬಾರಿ ಸಾವಿತ್ರಕ್ಕನ ಇನ್ನೊಂದು ಹೋಮ ಮಾಡಿಸುವ ಬೇಡಿಕೆಗೆ ರವಿ ಒಪ್ಪಿಗೆ ನೀಡಲಿಲ್ಲ. "ಶಿವಮೊಗ್ಗದಲ್ಲಿ ಸೈಕ್ಯಾಟ್ರಿಸ್ಟ್  ಹತ್ರ ಒಂದ್ಸಲ ತೋರ್ಸನ" ಎಂದು ಪಟ್ಟು ಹಿಡಿದ. ಶಿವಮೊಗ್ಗದ ಶ್ರೀಧರ ಡಾಕ್ಟರು ದೆವ್ವ ಭೂತ ಪಿಶಾಚಿಗಳೆಲ್ಲವನ್ನೂ ಒಂದೇ ಮಾತಿನಲ್ಲಿ ತೆಗೆದು ಹಾಕಿದರು. "ಛೆ ಈ ಕಾಲದಲ್ಲೂ ಇದನ್ನೆಲ್ಲಾ ನಂಬುತೀರಲ್ರಿ. ಒಂದೇ ಸಲ ಮನೆ, ಪರಿಸರ, ಸಂಸ್ಕ್ರತಿ ಎಲ್ಲ ಬದಲಾಗಿದೆ. ಹೊಸದಾಗಿ ಮದುವೆ ಆದ  ಹುಡುಗಿ ಬೇರೆ. ಒಂದಷ್ಟು ದಿನ ತವರು ಮನೆಗೆ ಕಳಿಸ್ರಿ " ಎಂದು ಬೈದರು. 

ಆಕೆ ಹೋದರೆ ಮತ್ತೆ ಬರುತ್ತಾಳೋ? ಇಲ್ಲೇನೋ ತೊಂದರೆ ಆಗಿ ವಾಪಾಸು ಹೋಗಲು ಈ ರೀತಿ ನಾಟಕ  ಮಾಡುತ್ತಿದ್ದಾಳೋ? ಎನ್ನುವ ಸಂಶಯದಲ್ಲೇ ರವಿ, ಗಾಯತ್ರಿಯ ಅಪ್ಪ ಅಮ್ಮನಿಗೆ ಹೇಳಿ ಕಳಿಸಿದ. ಮಗಳಿಗಾದ  ತೊಂದರೆ ಕೇಳಿ ಅವರು ಒಂದೇ ಉಸಿರಿನಲ್ಲಿ ಬಂದರು. "ಮೊದ್ಲು ಹೀಂಗೆ ಆಗಿಲ್ರಿ, ಇದಾ ಮೊದ್ಲು" ಎಂದು ಸಮಜಾಯಿಷಿ ನೀಡಿ ಮಗಳ ವೈವಾಹಿಕ ಜೀವನದ ತೊಂದರೆ ಸರಿಪಡಿಸಲು ಹೆಣಗಾಡಿದರು. ಬಡತನದಲ್ಲೇ ಹುಟ್ಟಿ ಬೆಳೆದ ಮಗಳು ಇಂಥತೊಂದು ಮನೆಗೆ ಸೇರಿರುವುದು ಅವರಿಗೂ  ಖುಷಿಯ ಸಂಗತಿಯಾಗಿತ್ತು. ಮಗಳನ್ನು ಊರಿಗೆ ಕರೆದುಕೊಂಡು ಹೋಗದೆ ಅಲ್ಲಿದ್ದೇ ಸಮಸ್ಯೆ ಪರಿಹರಿಸುವ ಯೋಚನೆಮಾಡಿದರಾದರೂ, ಗಾಯತ್ರಿಯೇ ಉಳಿಯುವ ಮನಸ್ಸು ಮಾಡಲಿಲ್ಲ. ಕೈ ಚೀಲ ಹಿಡಿದು ಹೊರಟ ಅಪ್ಪ ಅಮ್ಮನ ದಾರಿಹಿಡಿದು ಅವಳೂ ಮೆಟ್ಟಿಲು ಇಳಿಯತೊಡಗಿದಳು. ದಣಪೆ ತೆಗೆದು, ಏರು ಹತ್ತಿ ತಿರುವಿನಲ್ಲಿ ಮಾಯವಾಗುವವರೆಗೂ  ರವಿ ಅವಳನ್ನೇ ನೋಡುತ್ತಿದ್ದ....