30/8/15

ಹುಚ್ಗುದುರೆ ಭಾಗ-2

ಬಸ್ಸಿನಿಂದ ಇಳಿದವನೇ ವಿಶು ಸೀದಾ ಅವನ ಕುವೆಂಪು ನಗರದ ರೂಮಿಗೆ ಹೋದ . ಗಡಿಯಾರ ಐದು ಗಂಟೆ ತೋರಿಸುತಿತ್ತು . ಆಕಾಶದಲ್ಲಿ ಅದಾಗಲೇ ಕೆಂಪು ಸೂರ್ಯ ಉದಯಿಸುತ್ತಿದ್ದ .
ವಕ್ರ ತುಂಡ ಮಹಾ ಕಾಯ , ಕೋಟಿ ಸೂರ್ಯ ಸಮ ಪ್ರಭ ........  ವಿಶು ಗಟ್ಟಿಯಾಗಿ ಶ್ಲೋಕ ಹೇಳಿ ಕೊಳ್ಳುತ್ತಿದ್ದರೆ ಅದು ಮಂಗಳೂರಿನ ಮೆಡಿಕಲ್ ಕಾಲೇಜ್ ಲೇಡೀಸ್ ಹಾಸ್ಟೆಲ್ ನಲ್ಲಿ ಗುನುಗುತಿತ್ತು . ಅನು ಕೂಡ ಶ್ಲೋಕ ಹೇಳಿಕೊಳ್ಳುತ್ತಿದ್ದಳಾ ?
ಅವನ ಕಾಲೇಜು ಶುರುವಾಗಿ ಅದಾಗಲೇ ತಿಂಗಳು ಉರುಳಿತ್ತು . ಅಂದು ಅವನ ಸೆಮಿನಾರ್ ಬೇರೆ ಇತ್ತು . ಶ್ರದ್ದೆ ಇಂದ ಓದ ತೊಡಗಿದ , ಅವನ ಶ್ರದ್ಧೆಯೇ ಅಂತಾದು  , ಅವನಿಗೆ ಪರ್ವತದಂತಹ ತಾಳ್ಮೆ .
ಅದೇಕೋ ಅವನಿಗೆ ಫಸ್ಟ್ ಬೆಂಚ್ ಎಂದರೆ ಪ್ರಾಣ , ಅಂದು ಸಹ ಅಲ್ಲೇ ಕೂತಿದ್ದ .
" ಹೇ , ಏನೋ ಸಕತ್ ಸೆಮಿನಾರ್ ಕೊಟ್ಟು ಏನೂ ಗೊತ್ತಿಲದ ಹಾಗೆ ಕೂತಿದಿಯ " ಹಿಂದಿನಿಂದ ಬಂದ ರಿಯಾಳ  ಧ್ವನಿಗೆ ವಿಶು
ತಿರುಗಿ ನೋಡಿದ .
ರಿಯಾ ಕೊಡಗಿನ ಹುಡುಗಿ , ತುಂಬಾ ಬೋಲ್ಡ್ ಹುಡುಗಿ ಎಂದು ಕಾಲೇಜಿನಲ್ಲಿ ಪ್ರಖ್ಯಾತೆ . ಯಾವುದಾದರು ಹುಡುಗ ಚುಡಾಯಿಸಿದರೆ ,ನಿಮಗೆ  ರಿಯಾ ಅವನ ಕೊರಳ ಪಟ್ಟಿ ಹಿಡಿದು ಎಳೆಯುವ ದೃಶ್ಯ ನೋಡಲು ಸಿಗುತ್ತದೆ  .  ಆಕೆಯ ಬಾಯಿಂದ ಸಿಗರೇಟಿನ ವಾಸನೆ ಬರುತಿತ್ತು . ತಾನೇನು ಹುಡುಗರಿಗೆ ಕಮ್ಮಿ ಎಂದು ಕಲಿತ ಚಟವದು . ಅಪರೂಪಕ್ಕೆ ಸೇದಲು ಶುರುಮಾಡಿದವಳು , ಕೊನೆಗೆ ವಾರಕ್ಕೊಂದು ,ದಿನಕ್ಕೊಂದು , ಗಂಟೆಗೊಂದು ಆಗಿತ್ತು . Airthmetic progression  ನಲ್ಲಿ ಶುರುವಾದ ಸಿಗರೇಟು Geometric progression ಆಗಿ ಬದಲಾಗಿತ್ತು . ಮೊದಲ ವರ್ಷದ ಇಂಜಿನಿಯರಿಂಗ್ ನಲ್ಲಿ ಎಲ್ಲರಿಗೂ workshop ಕಡ್ಡಾಯ . ಆಕೆಗೆ ಸಹಾಯ ಮಾಡಲು ಎಲ್ಲಾ ಹುಡುಗರು ಓಡಿ ಬರುತ್ತಿದ್ದರು , ಆದರೆ ಒಂದು ದಿನವೂ ಆಕೆ ಯಾರ ಸಹಾಯವನ್ನೂ ತೆಗೆದುಕೊಂಡವಳಲ್ಲ .
ಅನು ಬಿಳಿಯ ಸಲ್ವಾರ್ ತೊಟ್ಟು ನಡೆಯುತ್ತಿದರೆ ಇಡೀ ಕಾಲೇಜೇ ಅವಳೆಡೆಗೆ ನೋಡುತ್ತಿತ್ತು . ಆದರೆ ಆಕೆಯದು  ತುಂಬಾ reserved ಎನಿಸುವ ವ್ಯಕ್ತಿತ್ವ . ಬಹಳ ಎನಿಸುವಷ್ಟು ಅಂತರ್ಮುಖಿ . ಅದು ಹುಟ್ಟಿನಿಂದ ಬಂದಿದೆಯೋ ಅಥವಾ ಯಾರೋ ಅವಳಲ್ಲಿ induce ಮಾಡಿದರೋ ? ನನಗೂ ಗೊತ್ತಿಲ್ಲ . ಅಥವಾ ಅದನ್ನೇ ನಾವು ಸಂಸ್ಕಾರವಂತ ಹುಡುಗಿ ಎನ್ನುತ್ತೇವೋ ಏನೋ ? . ಮೊದಲ ಅನಾಟಮಿ ಕ್ಲಾಸ್ ನಲ್ಲಿ ಎಲ್ಲರೂ ವಾಂತಿ ಮಾಡಿ ಕೊಂಡವರೇ , ಆದರೆ ಅನು ಮಾತ್ರ ನಾರ್ಮಲ್ ಎನ್ನುವಂತೆ behave ಮಾಡಿದ್ದಳು . ಭಾವನೆಗಳನ್ನು ಅದುಮಿಟ್ಟು ಕೊಳ್ಳುವುದು ಆಕೆಗೆ ಅಭ್ಯಾಸವಾಗಿ  ಹೋಗಿರಬಹುದು .
ಸಂಜೆ ಬಂದವಳೇ ವಿಶುಗೆ "ನಾನಿನ್ನು ಬದ್ಕೇ ಇದೀನಿ ಕಣೋ " ಎಂದು ಮೆಸೇಜ್ ಕಳಿಸಿ ಸುಮ್ಮನಾಗಿ ಬಿಟ್ಟಳು . ವಿಶು ತುಂಬಾ disturbed ಆಗಿ ಬಿಟ್ಟಿದ್ದ . ಅನುಗೆ  diversion ಆಗಬಾರದು ಎಂಬ ಕಾರಣಕ್ಕಷ್ಟೇ ವಿಶು ಅವಳಿಗೆ ಮೆಸೇಜ್ ಮಾಡಬಾರದು ಎಂದು ನಿರ್ಧರಿಸಿದ್ದ , ಬಹುಶಃ ಅದನ್ನೇ ಆಕೆ ಬಲಹೀನತೆ ಎಂದು ಕೊಂಡಿರಬಹುದು . ವಾಸ್ತವದಲ್ಲಿ ಅವನು ಅನುವನ್ನು ಬಿಟ್ಟಿದ್ದರೆ  ತಾನೇ  ಮೆಸೇಜ್ ಮಾಡುವ ಅಗತ್ಯತೆ ಇದ್ದುದು ! . ಆದರೂ "ಇವತ್ತು ಏಕೋ ಊಟಾನೇ ಸೇರಲಿಲ್ಲ ಕಣೇ  , ನಿಂಗೆ ಚಿತ್ರಾನ್ನ ಇಷ್ಟ ಅಲ್ವ , ನಿನ್ನ ಬಿಟ್ಟು ತಿನ್ನೋಕೆ ಮನಸೆ ಬರ್ಲಿಲ್ಲ . " ಎಂದು ಟೈಪಿಸಿ ಕಳುಹಿಸಿದ. ಅನುಳ ಕೆನ್ನೆಯ ಮೇಲೆ ನೀರಿಳಿಯುತ್ತಿತ್ತು ............


 (ಮುಂದುವರೆಯುವುದು.......... )

23/8/15

ಹುಚ್ಗುದುರೆ-ಭಾಗ 1

ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಬಸ್ಸು ತಗ್ಗು ದಿಣ್ಣೆಗಳನ್ನು ಹತ್ತಿಳಿಯುತ್ತಾ ಸಾಗುತಿತ್ತು . ಆಗುಂಬೆಯಲ್ಲಿ ಅದಾಗಲೇ ಸೂರ್ಯ ತನ್ನ  ಮಗ್ಗುಲು ಬದಲಾಯಿಸುತಿದ್ದ . 'ಹೇರ್ ಪಿನ್ ಕರ್ವ್' ಗಳಲ್ಲಿ ಬಸ್ಸು ತಿರುಗುತ್ತಿದ್ದರೆ ಚಕ್ರದ ರಬ್ಬರ್ ಸುಟ್ಟ ವಾಸನೆ ಬಸ್ಸಿನ ತುಂಬೆಲ್ಲ ಹರಡುತಿತ್ತು  . ಕಾಡಿನ ಗವ್ವ್ ಎನ್ನುವ ಮೌನ ,ಸುತ್ತೆಲ್ಲ ಅಪರಿಚಿತರು !!. ನಮ್ಮೊಳಗಿರುವ 'ನಾನು ' ಪ್ರಕಟವಾಗುವುದೇ ಅಂತಹ ಸಂದರ್ಭಗಳಲ್ಲಿ . ವಿಶುವಿನ ಭುಜದ ಮೇಲೆ ತಲೆಯಾನಿಸಿಕೊಂಡು ಮಲಗಿದ್ದಳು ಅನು . ಮನಸ್ಸೆಂಬ ಹುಚ್ಗುದುರೆ ಎಲ್ಲೆಲ್ಲೊ ಅಲೆಯುತ್ತಿತ್ತು . ನಾನು ವಿಶುವನ್ನು ಪ್ರೀತಿಸುತ್ತೆನಾ ? ಮದುವೆಯಾಗುವಷ್ಟು ? . ಎಲ್ಲಾ ಪ್ರೀತಿಯೂ ಮದುವೆಯಲ್ಲಿಲೇ  ಕೊನೆಗೊಳ್ಳಬೇಕಾ  ? . ಹಾಗೆ ಮದುವೆಯೇ ಪ್ರೀತಿಗೆ ಅರ್ಥ ಕೊಡುವುದಾದರೆ ಪ್ರೀತಿ ಬಯಸುವುದು ಕೇವಲ ಕಾಮವನ್ನು ಎಂದಾಯಿತು ಅಲ್ಲವೇ ? . ಹಾಗಾದರೆ ಕಾಮ ನುಸುಳಿರುವ ಸ್ನೇಹವನ್ನೇ ಪ್ರೀತಿ ಎನ್ನುತ್ತಾರೆಯೇ ? .  ಈ ಪ್ರೇಮಕ್ಕೂ ,ಕಾಮಕ್ಕೂ ಯಾವ ಬಾದರಾಯಣದ ಸಂಬಂಧ ಎಂದು ತಿಳಿಯದೆ ಅನು ಸೀಟಿಗೆ ಒರಗಿ ಮಲಗಿದಳು .
ವಿಶು ಬಹಳ ವಿಹ್ವಲಗೊಂಡಿದ್ದ . ಇನ್ನು ಐದು ವರ್ಷ ಅನುವನ್ನು ಬಿಟ್ಟಿರುವುದು ಸಾಧ್ಯವೇ ಎಂದು ತಾರ್ಕಿಕ ಯೋಚನೆ ಮಾಡುತ್ತಿದ್ದ . ಇಲ್ಲ ಅಗಲಿಕೆ ಅನಿವಾರ್ಯ , ಪ್ರತಿ ಸಾವಿನಲ್ಲೂ ಹೊಸ ಹುಟ್ಟು ಅಡಗಿರುತ್ತದೆ . ಆದರೆ ನಾವು ಸಾಯಲು ತಯಾರಿರಬೇಕು ಅಷ್ಟೇ . ಈಗಿನ ತಂತ್ರಜ್ಞಾನ ಯುಗದಲ್ಲಿ  ಬಿಟ್ಟಿರುವುದು ಕಷ್ಟವೇನಲ್ಲ . ನಿಮಿಷಕ್ಕೊಮ್ಮೆ ಮೆಸೇಜ್ ಕುಟ್ಟಬಹುದು , ವೀಡಿಯೊ ಕಾಲ್ ಮಾಡಬಹುದು . ಅಷ್ಟೇ ಏಕೆ ಅವಳ ಫೋಟೋವನ್ನೇ ವಾಲ್ ಪೇಪರ್ ಮಾಡಿಕೊಂಡರಾಯಿತು ,ಅವಳೇ ನನ್ನ ಜೊತೆಗೆ ಇದ್ದಂತೆ ಅನಿಸುತ್ತದೆ . ಆದರೂ  ವಿರಹ ಸುಮ್ಮನೆ ಕೂರಬೇಕಲ್ಲ ? . ಅದನ್ನೆಲ್ಲ ಯೋಚಿಸುತ್ತಾ ಕುಳಿತರೆ ಈಗ ಸಮಯ ಹಾಳು . ಇನ್ನೇನು ಕೆಲವೇ ಘಂಟೆಗಳಲ್ಲಿ ಮಂಗಳೂರು ಬಂದು ಬಿಡುತ್ತದೆ , ಉಳಿದಿರುವ ಪ್ರತಿ ಕ್ಷಣಗಳನ್ನೂ ನಾನು ಅನುಭವಿಸಬೇಕು , ಆ ಪ್ರತಿ ಕ್ಷಣದ ನೆನಪನ್ನೂ ಬುತ್ತಿಯಲ್ಲಿ ತುಂಬಿಸಿಕೊಳ್ಳಬೇಕು . ಆ ಬುತ್ತಿಯಲ್ಲೆ ಐಧು ವರ್ಷ ಕಳೆಯಬೇಕು . ಅವನಿಗೆ ಗೊತ್ತು ಕನಸಿನ ಶಕ್ತಿ . ಇನ್ನು ಐದೇ ವರುಷ, ಆಮೇಲೆ ನನ್ನ ಹುಡುಗಿ ಡಾಕ್ಟರ್ ಅನು ! . ವಾಹ್  ನೆನಸಿ ಕೊಂಡರೆ ಎಂತಹ ಹೆಮ್ಮೆ ,ತಕ್ಷಣವೇ ಆತ ಮೊಬೈಲ್ ತೆಗದು ಅದರಲ್ಲಿ ಕೇವಲ ಅನು ಎಂದು ಸೇವ್ ಮಾಡಿಕೊಂಡಿದ್ದ ನಂಬರ್ ಅನ್ನು Dr. Anu  ಎಂದು ಬದಲಿಸಿಕೊಂಡ . 
ಬಸ್ಸು ಸೋಮೇಶ್ವರದಲ್ಲಿ ಯಾವುದೊ ಢಾಭಾದ ಎದುರಿಗೆ ನಿಂತಿತು . ಜಾವದಲ್ಲೇ ಎದ್ದು ಹೊರಟಿದ್ದ ಇಬ್ಬರಿಗೂ ತಾಳಲಾರದ ಹಸಿವೆಯಾಗುತಿತ್ತು . ಯಾವುದೋ  ಸಿಡಿಲು ಬಡಿದವಳಂತೆ ಅನು ಎದ್ದು ಕುಳಿತ್ತಿದ್ದಳು !!. ವಿಶು ಅವಳ ತಲೆ ನೇವರಿಸಿ , ಸಮಾಧಾನ ಪಡಿಸಿ , ಕೈ ಹಿಡಿದು ಬಸ್ಸಿನಿಂದ ಇಳಿಸಿದ . ಅನು ಸರಕ್ಕನೆ ಕೈ ಹಿಂದೆಗೆದು ಕೊಂಡಳು . ಅವಳಿಗೆ ಕೆಂಪುಗಣ್ಣಿನ ಅಪ್ಪ ನೆನಪಾಗಿದ್ದ . 
ಅನು ಮತ್ತು ವಿಶು , ಚಡ್ಡಿ ಕೆಳಗಿಳಿದರೆ ಮೇಲೆ ಎಳೆದುಕೊಳ್ಳಲು  ಬಾರದ್ದಿದಾಗಿಂದಲೂ ಸ್ನೇಹಿತರು . ಹೀಗಾಗಿಯೇ ಏನೋ ಇಬ್ಬರಿಗೂ ತಮ್ಮ ಪ್ರೀತಿಯನ್ನು ಅಭಿವ್ಯಕ್ತಪಡಿಸುವ ಗೋಜಿಗೇ  ಹೋಗಿರಲಿಲ್ಲ . ಆದರೂ ಅವಳು ಬೇರೆ ಯಾರೋ ಹುಡುಗನ ಜೊತೆಯಲ್ಲಿ ಕಂಡರೆ ,ಅಥವಾ ಇವನು ಬೇರೆ ಯಾರೋ ಹುಡುಗಿಯ ಜೊತೆಯಲ್ಲಿ ಕಂಡರೆ ಇಬ್ಬರಿಗೂ ಕೋಪ ಬರುತಿತ್ತು . ಹಾಗಾದರೆ 'ತನ್ನದು' ಅನ್ನುವ ಸ್ವಾರ್ಥವೇ ಪ್ರೀತಿಯಾ ? . ಅಥವಾ ' ತನ್ನದು' ಎಂಬ  ಹಕ್ಕು ಚಲಾವಣೆಯೇ  ಪ್ರೀತಿಯಾ ?.  
"ಏಯ್ ಅನು ನಮ್ಮನೆ ಹತ್ರ ಒಂದು ಭೂತದ ಮನೆ ಇದೆ ಗೊತ್ತ ?"
"ಹೋಗೋ ಭೂತನೂ ಇಲ್ಲ ಏನೂ ಇಲ್ಲ ಬರಿ ಹೆದರಿಸ್ತಿಯ ನೀನು ".
"ನಿಜ ಕಣೇ , ನನಗೆ ಕಾಣ್ತು , ಬಾ ನಿಂಗೂ ತೋರುಸ್ತೀನಿ ". 
ಮನೆಯೊಳಗೆ ಗಾಢ ಕತ್ತಲೆಯಿತ್ತು , ಇಬ್ಬರೂ ಒಂದೊಂದೇ ಹೆಜ್ಜೆ ಇಡುತ್ತ ಒಳಗಡೆ ಹೋದರು . ಇದ್ದಕಿದ್ದಂತೆ ಹೊರಗಡೆ ತೆಂಗಿನ ಗರಿ ಬಿದ್ದ ಶಬ್ದ ಕೇಳಿತು , ಇಬ್ಬರೂ ಅಲ್ಲಿಂದ ಓಟ ಕಿತ್ತರು .
ಮನೆಯ ಅಂಗಳದಲ್ಲಿ ಅಪ್ಪ ಪೇಪರ್ ಓದುತ್ತ ಕುಳಿತ್ತಿದರು
" ಅಪ್ಪ ಆ ಮನೇಲಿ ದೆವ್ವ ಇದೆ "
" ಮೊದ್ಲು ಅವ್ನ ಕೈ ಬಿಡು " ಗದರಿದ್ದರು ಅವಳಪ್ಪ . ಆ ಘಟನೆ ಇನ್ನೂ ಅವಳ ಮನಸಲ್ಲಿ ಉಳಿದು ಬಿಟ್ಟಿದೆಯೋ ಏನೋ ?.
ಬಸ್ಸು ಮಂಗಳೂರು ತಲುಪಿತ್ತು !. ಎಂದಿಗೂ ವಿಶು ಸಂಯಮದ ಜಲಪಾತ , ಆದರೆ ಆ ಕ್ಷಣದಲ್ಲಿ ವಿಶುವಿನ ಕಣ್ಣಿನಲ್ಲಿ ನೀರಾಡಿದ್ದು ಸುಳ್ಳಲ್ಲ . ಅನುಳ ನೋಟ ಎದುರಿಸಲಾಗದೆ ನೆಲ ನೋಡುತ್ತಾ ಮೊದಲ ಮಾತಾಡಿದ್ದ
ನಾನು ಅಮ್ಮನನ್ನು ಕಳೆದುಕೊಂಡು ಬಹಳ ವರ್ಷವೇ ಆಗಿ ಹೋಯಿತು , ನೀನೆ ನನ್ನ ಅಮ್ಮ . ನಾನು ಅತ್ತಾಗ ಸಂತೈಸಿ , ನಕ್ಕಾಗ ಮುತ್ತಿಟ್ಟು ನೋಡಿಕೊಳ್ತೀಯ ಅಲ್ವ ? ತ್ವ ಮೇವ ಮಾತಾ ಪಿತಾ ತ್ವ ಮೇವ ಎಂದೇ ನಾನು ನಂಬಿದೀನಿ .
ವಿಶುನ ಜೀವನದಲ್ಲಿ ಬೇರೆ ಯಾರೂ ಇರಲೇ ಇಲ್ಲ , ಅದರ ತುಂಬೆಲ್ಲ ಕೇವಲ ಅನು ಮತ್ತು ಅನು ಮಾತ್ರ .
ಅನು ಏನೂ ಮಾತಾಡದೆ ಹಾಸ್ಟೆಲ್ ಒಳಗೆ ಹೋದಳು . ವಿಶು ಮೈಸೂರು ಬಸ್ಸು ಹತ್ತಿದ್ದ .
ಇಬ್ಬರಿಗೂ ಆ ರೀತಿಯ secured feeling  ಬಂದು ಬಿಟ್ಟಿತ್ತು . ಅದು ನಂಬಿಕೆಯಾ ? ಪ್ರೇಮವಾ ? .
ಮಂಗಳೂರು ದೂರವಾಗುತ್ತಿತ್ತು , ಮೈಸೂರು ಹತ್ತಿರವಾಗುತಿತ್ತು ,,,,,,,,,,,,
                                                                                                 
(ಮುಂದುವರೆಯುವುದು ............... ) 

14/8/15

ಮಳ್ಗವಿತೆ-3


ಮರೆತಿಲ್ಲವಿನ್ನು ಅವಳ ಮುಂಗುರುಳು
ಅದ ಸೋಕಿದ ಬೆರಳುಗಳು
ತುಕ್ಕು ಹಿಡಿದ ಬದುಕಲ್ಲಿ
ನಸುನಗುವ ನೆನಪುಗಳು
ಗುಜುರಿ ಸೇರಿರುವ ಕನಸುಗಳು
ಕೆತ್ತದೆ ಬಿಟ್ಟ ಗಡ್ಡಗಳು
ಹೇಳದ ಮಾತುಗಳು
ಕೇಳುವ ಧ್ವನಿಗಳು
ಗೀಚುವ ಮಳ್ಗವಿತೆಗಳು
ಇನ್ನಿಲ್ಲದ ನಾಳೆಗಳು
ಮೌನದ ಮಾತುಗಳು
ಮರೆತಿಲ್ಲವಿನ್ನು ........

10/8/15

ಮರೆಯದ ನೆನಪು


ಅವರ ಕೈಯಲ್ಲಿ ಆಯುಧಗಳಿರಲಿಲ್ಲ ,ಅಸಲಿಗೆ ಅಲ್ಲೇನಾಗಬಹುದು ಎಂಬ ಸಣ್ಣ ಸುಳಿವು ಸಹ ಅವರಿಗಿರಲಿಲ್ಲ. ಅವರು ಉಗ್ರರಲ್ಲ, ಕೊಳ್ಳುಬಾಕರಲ್ಲ, ಆದರೂ ನೋವುಂಡರು ........
ಅಂದು ಆಗಸ್ಟ್ 9 ,ಅಮೇರಿಕಾದ ಯುದ್ಧ ವಿಮಾನದ ಪೈಲಟ್ ಗಳು, ವಿಮಾನವನ್ನು ಜಪಾನ್ ಕಡೆಗೆ ತಿರುಗಿಸಿ ಕುಳಿತು ಬಿಟ್ಟಿದ್ದರು. ಅವರು ಗಾಳಿಯಲ್ಲಿ ತೂರಿದ ಫ್ಯಾಟ್ಮ್ಯಾನ್ ಹಾಗು ಲಿಟಲ್ ಬಾಯ್ ಎಂಬ ಎರಡು ಅಣು ಬಾಂಬ್ ಗಳು ಹಿರೋಶಿಮಾ ಹಾಗು ನಾಗಾಸಾಕಿ ನಗರಗಳನ್ನು ಪುಡಿ ಪುಡಿ ಮಾಡಿತ್ತು . ಲಕ್ಷಾಂತರ ಮುಗ್ಧ ಜನರು ಅಕ್ಷರಶಃ ನಿಂತಲ್ಲೇ ನೆಟ್ಟಗಾಗಿ ಹೋದರು . ಒಂದೆಡೆ ಅಮೇರಿಕಾ ವಿಜಯದ ರಣಕೇಕೆ ಹಾಕುತ್ತಿದ್ದರೆ ,ಇನ್ನೊಂದೆಡೆ ಜಪಾನ್ ಅಮೇರಿಕಾದ ಮುಂದೆ ಮಂಡಿಯೂರಿ ಕುಳಿತು ಕಂಬನಿಗರೆಯುತ್ತಿತ್ತು .ಜಗತ್ತು ದಿಗ್ಭ್ರಾಂತವಾಗಿತ್ತು . ಹಿರೋಶಿಮಾ ಹಾಗು ನಾಗಾಸಾಕಿಯ ಅಕ್ಕ-ಪಕ್ಕದ ಸಣ್ಣ-ಪುಟ್ಟ ಪಟ್ಟಣಗಳೂ ಸಹ ಅಣುಬಾಂಬ್ ನ ವಿಕಿರಣಗಳಿಗೆ ಸಿಲುಕಿ ನಲುಗ ತೊಡಗಿತ್ತು .
ಯುದ್ಧದ ಹಪಹಪಿ ಯಾರನ್ನೂ ಬಿಡುವುದಿಲ್ಲವೇನೋ ?......... ನಾ ಮುಂದು ತಾ ಮುಂದು ಎಂದು ಎಲ್ಲಾ ರಾಷ್ಟ್ರಗಳು ಅಣ್ವಸ್ತ್ರ ತಯಾರಿಕೆಯಲ್ಲಿ ತೊಡಗಿದವು . ಭಾರತ ಕೂಡ ಪೋಖರಣ್ ನಲ್ಲಿ ಅಣ್ವಸ್ತ್ರ ಪರೀಕ್ಷೆ ಮಾಡಿ ,ಆ ರಾಷ್ಟ್ರಗಳ ಪಟ್ಟಿಗೆ ಸೇರಿತು . ನಂತರ ಆರು ತಿಂಗಳ ಆರ್ಥಿಕ ದಿಗ್ಭಂಧನ ಎದುರಿಸ ಬೇಕಾಯಿತು .
ಒಮ್ಮೆ ನಾನು ಕಾಡಿನಲ್ಲಿ ಅಲೆಯುವಾಗ ತುಂಡಾಗಿದ್ದ ಬಹಳ ಟೊಂಗೆಗಳನ್ನು ನೋಡಿದೆ . ಅದು ಯಾರದೋ ಕೈಯಲ್ಲಿ ಕತ್ತಿ ಹಿಡಿದವರ ಕೆಲಸವಾಗಿತ್ತು ,ವಿನಾಕಾರಣ ಕಂಡಿದ್ದಕೆಲ್ಲಾ ಕತ್ತಿ ಏಟು ಹಾಕುತ್ತಾ ಹೋಗಿದ್ದರು . ಈ ಆಯುಧಗಳೇ ಹೀಗೆ ಇರಬೇಕು , ಸುಮ್ಮನೆ ಇಟ್ಟುಕೊಳ್ಳುವುದು ಕಷ್ಟ . ಬರೀ ಕತ್ತಿ ಹಿಡಿಯುವ ನಮಗೇ ಹೀಗಾಗದರೆ ,ಅಣ್ವಸ್ತ್ರ ಹೊಂದಿರುವ ಬಲಿಷ್ಠ ರಾಷ್ಟ್ರಗಳ ನಾಯಕರುಗಳ ಮನಸ್ಥಿತಿ ಹೇಗಿರಬೇಡ ? ನೆನಸಿ ಕೊಂಡರೆ ಭಯವಾಗುತ್ತದೆ .
ಇನ್ನೆಂದೂ ಜಪಾನ್ ನ ಆ ಘಟನೆ ಮರುಕಳಿಸದಿರಲಿ ,ನಿನ್ನೆಗೆ ಬಾಂಬ್ ದಾಳಿ ನಡೆದು ಎಪ್ಪತ್ತು ವರ್ಷ !!!!!
ಆದರೂ ಮರೆತಿಲ್ಲ ಇನ್ನೂ ಮುಗ್ಧ ಜನಗಳ ಬಿಸಿರಕ್ತದೋಕುಳಿ ...........