23/8/15

ಹುಚ್ಗುದುರೆ-ಭಾಗ 1

ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಬಸ್ಸು ತಗ್ಗು ದಿಣ್ಣೆಗಳನ್ನು ಹತ್ತಿಳಿಯುತ್ತಾ ಸಾಗುತಿತ್ತು . ಆಗುಂಬೆಯಲ್ಲಿ ಅದಾಗಲೇ ಸೂರ್ಯ ತನ್ನ  ಮಗ್ಗುಲು ಬದಲಾಯಿಸುತಿದ್ದ . 'ಹೇರ್ ಪಿನ್ ಕರ್ವ್' ಗಳಲ್ಲಿ ಬಸ್ಸು ತಿರುಗುತ್ತಿದ್ದರೆ ಚಕ್ರದ ರಬ್ಬರ್ ಸುಟ್ಟ ವಾಸನೆ ಬಸ್ಸಿನ ತುಂಬೆಲ್ಲ ಹರಡುತಿತ್ತು  . ಕಾಡಿನ ಗವ್ವ್ ಎನ್ನುವ ಮೌನ ,ಸುತ್ತೆಲ್ಲ ಅಪರಿಚಿತರು !!. ನಮ್ಮೊಳಗಿರುವ 'ನಾನು ' ಪ್ರಕಟವಾಗುವುದೇ ಅಂತಹ ಸಂದರ್ಭಗಳಲ್ಲಿ . ವಿಶುವಿನ ಭುಜದ ಮೇಲೆ ತಲೆಯಾನಿಸಿಕೊಂಡು ಮಲಗಿದ್ದಳು ಅನು . ಮನಸ್ಸೆಂಬ ಹುಚ್ಗುದುರೆ ಎಲ್ಲೆಲ್ಲೊ ಅಲೆಯುತ್ತಿತ್ತು . ನಾನು ವಿಶುವನ್ನು ಪ್ರೀತಿಸುತ್ತೆನಾ ? ಮದುವೆಯಾಗುವಷ್ಟು ? . ಎಲ್ಲಾ ಪ್ರೀತಿಯೂ ಮದುವೆಯಲ್ಲಿಲೇ  ಕೊನೆಗೊಳ್ಳಬೇಕಾ  ? . ಹಾಗೆ ಮದುವೆಯೇ ಪ್ರೀತಿಗೆ ಅರ್ಥ ಕೊಡುವುದಾದರೆ ಪ್ರೀತಿ ಬಯಸುವುದು ಕೇವಲ ಕಾಮವನ್ನು ಎಂದಾಯಿತು ಅಲ್ಲವೇ ? . ಹಾಗಾದರೆ ಕಾಮ ನುಸುಳಿರುವ ಸ್ನೇಹವನ್ನೇ ಪ್ರೀತಿ ಎನ್ನುತ್ತಾರೆಯೇ ? .  ಈ ಪ್ರೇಮಕ್ಕೂ ,ಕಾಮಕ್ಕೂ ಯಾವ ಬಾದರಾಯಣದ ಸಂಬಂಧ ಎಂದು ತಿಳಿಯದೆ ಅನು ಸೀಟಿಗೆ ಒರಗಿ ಮಲಗಿದಳು .
ವಿಶು ಬಹಳ ವಿಹ್ವಲಗೊಂಡಿದ್ದ . ಇನ್ನು ಐದು ವರ್ಷ ಅನುವನ್ನು ಬಿಟ್ಟಿರುವುದು ಸಾಧ್ಯವೇ ಎಂದು ತಾರ್ಕಿಕ ಯೋಚನೆ ಮಾಡುತ್ತಿದ್ದ . ಇಲ್ಲ ಅಗಲಿಕೆ ಅನಿವಾರ್ಯ , ಪ್ರತಿ ಸಾವಿನಲ್ಲೂ ಹೊಸ ಹುಟ್ಟು ಅಡಗಿರುತ್ತದೆ . ಆದರೆ ನಾವು ಸಾಯಲು ತಯಾರಿರಬೇಕು ಅಷ್ಟೇ . ಈಗಿನ ತಂತ್ರಜ್ಞಾನ ಯುಗದಲ್ಲಿ  ಬಿಟ್ಟಿರುವುದು ಕಷ್ಟವೇನಲ್ಲ . ನಿಮಿಷಕ್ಕೊಮ್ಮೆ ಮೆಸೇಜ್ ಕುಟ್ಟಬಹುದು , ವೀಡಿಯೊ ಕಾಲ್ ಮಾಡಬಹುದು . ಅಷ್ಟೇ ಏಕೆ ಅವಳ ಫೋಟೋವನ್ನೇ ವಾಲ್ ಪೇಪರ್ ಮಾಡಿಕೊಂಡರಾಯಿತು ,ಅವಳೇ ನನ್ನ ಜೊತೆಗೆ ಇದ್ದಂತೆ ಅನಿಸುತ್ತದೆ . ಆದರೂ  ವಿರಹ ಸುಮ್ಮನೆ ಕೂರಬೇಕಲ್ಲ ? . ಅದನ್ನೆಲ್ಲ ಯೋಚಿಸುತ್ತಾ ಕುಳಿತರೆ ಈಗ ಸಮಯ ಹಾಳು . ಇನ್ನೇನು ಕೆಲವೇ ಘಂಟೆಗಳಲ್ಲಿ ಮಂಗಳೂರು ಬಂದು ಬಿಡುತ್ತದೆ , ಉಳಿದಿರುವ ಪ್ರತಿ ಕ್ಷಣಗಳನ್ನೂ ನಾನು ಅನುಭವಿಸಬೇಕು , ಆ ಪ್ರತಿ ಕ್ಷಣದ ನೆನಪನ್ನೂ ಬುತ್ತಿಯಲ್ಲಿ ತುಂಬಿಸಿಕೊಳ್ಳಬೇಕು . ಆ ಬುತ್ತಿಯಲ್ಲೆ ಐಧು ವರ್ಷ ಕಳೆಯಬೇಕು . ಅವನಿಗೆ ಗೊತ್ತು ಕನಸಿನ ಶಕ್ತಿ . ಇನ್ನು ಐದೇ ವರುಷ, ಆಮೇಲೆ ನನ್ನ ಹುಡುಗಿ ಡಾಕ್ಟರ್ ಅನು ! . ವಾಹ್  ನೆನಸಿ ಕೊಂಡರೆ ಎಂತಹ ಹೆಮ್ಮೆ ,ತಕ್ಷಣವೇ ಆತ ಮೊಬೈಲ್ ತೆಗದು ಅದರಲ್ಲಿ ಕೇವಲ ಅನು ಎಂದು ಸೇವ್ ಮಾಡಿಕೊಂಡಿದ್ದ ನಂಬರ್ ಅನ್ನು Dr. Anu  ಎಂದು ಬದಲಿಸಿಕೊಂಡ . 
ಬಸ್ಸು ಸೋಮೇಶ್ವರದಲ್ಲಿ ಯಾವುದೊ ಢಾಭಾದ ಎದುರಿಗೆ ನಿಂತಿತು . ಜಾವದಲ್ಲೇ ಎದ್ದು ಹೊರಟಿದ್ದ ಇಬ್ಬರಿಗೂ ತಾಳಲಾರದ ಹಸಿವೆಯಾಗುತಿತ್ತು . ಯಾವುದೋ  ಸಿಡಿಲು ಬಡಿದವಳಂತೆ ಅನು ಎದ್ದು ಕುಳಿತ್ತಿದ್ದಳು !!. ವಿಶು ಅವಳ ತಲೆ ನೇವರಿಸಿ , ಸಮಾಧಾನ ಪಡಿಸಿ , ಕೈ ಹಿಡಿದು ಬಸ್ಸಿನಿಂದ ಇಳಿಸಿದ . ಅನು ಸರಕ್ಕನೆ ಕೈ ಹಿಂದೆಗೆದು ಕೊಂಡಳು . ಅವಳಿಗೆ ಕೆಂಪುಗಣ್ಣಿನ ಅಪ್ಪ ನೆನಪಾಗಿದ್ದ . 
ಅನು ಮತ್ತು ವಿಶು , ಚಡ್ಡಿ ಕೆಳಗಿಳಿದರೆ ಮೇಲೆ ಎಳೆದುಕೊಳ್ಳಲು  ಬಾರದ್ದಿದಾಗಿಂದಲೂ ಸ್ನೇಹಿತರು . ಹೀಗಾಗಿಯೇ ಏನೋ ಇಬ್ಬರಿಗೂ ತಮ್ಮ ಪ್ರೀತಿಯನ್ನು ಅಭಿವ್ಯಕ್ತಪಡಿಸುವ ಗೋಜಿಗೇ  ಹೋಗಿರಲಿಲ್ಲ . ಆದರೂ ಅವಳು ಬೇರೆ ಯಾರೋ ಹುಡುಗನ ಜೊತೆಯಲ್ಲಿ ಕಂಡರೆ ,ಅಥವಾ ಇವನು ಬೇರೆ ಯಾರೋ ಹುಡುಗಿಯ ಜೊತೆಯಲ್ಲಿ ಕಂಡರೆ ಇಬ್ಬರಿಗೂ ಕೋಪ ಬರುತಿತ್ತು . ಹಾಗಾದರೆ 'ತನ್ನದು' ಅನ್ನುವ ಸ್ವಾರ್ಥವೇ ಪ್ರೀತಿಯಾ ? . ಅಥವಾ ' ತನ್ನದು' ಎಂಬ  ಹಕ್ಕು ಚಲಾವಣೆಯೇ  ಪ್ರೀತಿಯಾ ?.  
"ಏಯ್ ಅನು ನಮ್ಮನೆ ಹತ್ರ ಒಂದು ಭೂತದ ಮನೆ ಇದೆ ಗೊತ್ತ ?"
"ಹೋಗೋ ಭೂತನೂ ಇಲ್ಲ ಏನೂ ಇಲ್ಲ ಬರಿ ಹೆದರಿಸ್ತಿಯ ನೀನು ".
"ನಿಜ ಕಣೇ , ನನಗೆ ಕಾಣ್ತು , ಬಾ ನಿಂಗೂ ತೋರುಸ್ತೀನಿ ". 
ಮನೆಯೊಳಗೆ ಗಾಢ ಕತ್ತಲೆಯಿತ್ತು , ಇಬ್ಬರೂ ಒಂದೊಂದೇ ಹೆಜ್ಜೆ ಇಡುತ್ತ ಒಳಗಡೆ ಹೋದರು . ಇದ್ದಕಿದ್ದಂತೆ ಹೊರಗಡೆ ತೆಂಗಿನ ಗರಿ ಬಿದ್ದ ಶಬ್ದ ಕೇಳಿತು , ಇಬ್ಬರೂ ಅಲ್ಲಿಂದ ಓಟ ಕಿತ್ತರು .
ಮನೆಯ ಅಂಗಳದಲ್ಲಿ ಅಪ್ಪ ಪೇಪರ್ ಓದುತ್ತ ಕುಳಿತ್ತಿದರು
" ಅಪ್ಪ ಆ ಮನೇಲಿ ದೆವ್ವ ಇದೆ "
" ಮೊದ್ಲು ಅವ್ನ ಕೈ ಬಿಡು " ಗದರಿದ್ದರು ಅವಳಪ್ಪ . ಆ ಘಟನೆ ಇನ್ನೂ ಅವಳ ಮನಸಲ್ಲಿ ಉಳಿದು ಬಿಟ್ಟಿದೆಯೋ ಏನೋ ?.
ಬಸ್ಸು ಮಂಗಳೂರು ತಲುಪಿತ್ತು !. ಎಂದಿಗೂ ವಿಶು ಸಂಯಮದ ಜಲಪಾತ , ಆದರೆ ಆ ಕ್ಷಣದಲ್ಲಿ ವಿಶುವಿನ ಕಣ್ಣಿನಲ್ಲಿ ನೀರಾಡಿದ್ದು ಸುಳ್ಳಲ್ಲ . ಅನುಳ ನೋಟ ಎದುರಿಸಲಾಗದೆ ನೆಲ ನೋಡುತ್ತಾ ಮೊದಲ ಮಾತಾಡಿದ್ದ
ನಾನು ಅಮ್ಮನನ್ನು ಕಳೆದುಕೊಂಡು ಬಹಳ ವರ್ಷವೇ ಆಗಿ ಹೋಯಿತು , ನೀನೆ ನನ್ನ ಅಮ್ಮ . ನಾನು ಅತ್ತಾಗ ಸಂತೈಸಿ , ನಕ್ಕಾಗ ಮುತ್ತಿಟ್ಟು ನೋಡಿಕೊಳ್ತೀಯ ಅಲ್ವ ? ತ್ವ ಮೇವ ಮಾತಾ ಪಿತಾ ತ್ವ ಮೇವ ಎಂದೇ ನಾನು ನಂಬಿದೀನಿ .
ವಿಶುನ ಜೀವನದಲ್ಲಿ ಬೇರೆ ಯಾರೂ ಇರಲೇ ಇಲ್ಲ , ಅದರ ತುಂಬೆಲ್ಲ ಕೇವಲ ಅನು ಮತ್ತು ಅನು ಮಾತ್ರ .
ಅನು ಏನೂ ಮಾತಾಡದೆ ಹಾಸ್ಟೆಲ್ ಒಳಗೆ ಹೋದಳು . ವಿಶು ಮೈಸೂರು ಬಸ್ಸು ಹತ್ತಿದ್ದ .
ಇಬ್ಬರಿಗೂ ಆ ರೀತಿಯ secured feeling  ಬಂದು ಬಿಟ್ಟಿತ್ತು . ಅದು ನಂಬಿಕೆಯಾ ? ಪ್ರೇಮವಾ ? .
ಮಂಗಳೂರು ದೂರವಾಗುತ್ತಿತ್ತು , ಮೈಸೂರು ಹತ್ತಿರವಾಗುತಿತ್ತು ,,,,,,,,,,,,
                                                                                                 
(ಮುಂದುವರೆಯುವುದು ............... ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ