28/5/16

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)

ಕೇಸಿನ ಬಗ್ಗೆ ಯೋಚಿಸಿದಷ್ಟೂ ಅದು ಕಗ್ಗಂಟಾಗುತ್ತಾ ಹೋಗುತಿತ್ತು . ಯಾವುದೇ ಸುಳಿವು ಹಿಡಿದು ಹೊರಟರೂ ಅದು ಕೊಲೆಗಾರನ ಬಳಿ ಹೋಗದೆ ಡೆಡ್ ಎಂಡ್ ತಲುಪುತ್ತಿತ್ತು . ನಾನು ತಿಪ್ಪರಲಾಗ ಹೊಡೆದರೂ ಇಪ್ಪತ್ನಾಲ್ಕು ಗಂಟೆಯೊಳಗೆ ಕೇಸು ಮುಗಿಸಲು  ಸಾಧ್ಯವೇ ಇರಲಿಲ್ಲ . ಆದರೆ ಒಂದೇ ಒಂದು ದಾರಿ ಮಾತ್ರ ನನಗೆ ಉಳಿದಿತ್ತು  , ಕೊಲೆ ಮಾಡಿ ವಜ್ರವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದ ಮೇಲೆ ಇದು ದುಡ್ಡಿಗಾಗಿ ನಡೆದ ಕೃತ್ಯವಲ್ಲ . ದ್ವೇಷಕ್ಕಾಗಿ ಎಂಬುದು ನೂರಕ್ಕೆ ನೂರರಷ್ಟು ಸ್ಪಷ್ಟ . ಒಬ್ಬ ಶಾಸಕ ಎಂದ ಮೇಲೆ ಶತ್ರುಗಳು ಇದ್ದೇ ಇರುತ್ತಾರೆ , ಒಂದು ಲೀಡ್ ನನಗೆ ಸಿಕ್ಕಿತು . ತಕ್ಷಣವೇ ನಾನು ಶಾಸಕರನ್ನು ಭೇಟಿ ಮಾಡಲು ಹೊರಟೆ .
ಮನೆಯ ಮುಂದೆ ಅದಾಗಲೇ ಕಾರು ಬಂದು ನಿಂತಿತ್ತು . ವಿಚಾರಿಸಿದಾಗ ಇನ್ಸ್ಪೆಕ್ಟರ್ ವಿಕ್ರಮ್ ಅವರು ನನ್ನನ್ನು ಕರೆದಿದ್ದರು . ಅವರಿಗೂ ಸಹ ಈ ಕೇಸಿನ ಬಗ್ಗೆ ಸಾಕಷ್ಟು ತಿಳಿದಿತ್ತು . ನನ್ನದು ಮೂರ್ಖ ಹೇಳಿಕೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು . ಎಷ್ಟಾದರೂ ನಾನು ಪ್ರೈವೇಟ್ ಡಿಟೆಕ್ಟಿವ್ ನನ್ನ ಮೇಲೆ ಪೊಲಿಟಿಕಲ್ ಪ್ರೆಷರ್ ಇರುವುದಿಲ್ಲ , ಆದರೆ ಅವರಿಗೆ ನನ್ನ ಹೇಳಿಕೆ ಪೀಕಲಾಟಕ್ಕೆ ಈಡು ಮಾಡಿತ್ತು . ಕೇಸು ಬಗೆಹರಿಯದಿದ್ದರೆ ಮೀಡಿಯಾ ಮಂದಿ ಅವರನ್ನು ಹುರಿದು ಮುಕ್ಕಿ ಬಿಡುತ್ತಾರೆ . ಮರು ಮಾತಾಡದೆ ಹತ್ತಿ ಕುಳಿತೆ . ಕಾರು ಹೊರಟಿತು . 
" ಏನಪ್ಪಾ ? ಇಲ್ಲಿ ಎಲ್ಲಿ ವಿಕ್ರಮ್ ಅವರ  ಆಫೀಸ್ ಇದೆ ? ಮಲ್ಲೇಶ್ವರಂ ತಾನೇ ? " 
" ಇಲ್ಲ ಸಾರ್ ಇದು ಅನ್-ಅಫಿಶಿಯಲ್ಲೂ , ನಿಮ್ಮ ಹತ್ರ ಅವರು ಪರ್ಸನಲ್ ಆಗಿ ಮಾತಾಡಬೇಕಂತೆ " 
ಕಾರು ನಿರ್ಜನ ಗೋರಿಪಾಳ್ಯದ ಸ್ಮಶಾನ ಸೇರಿತು .  ಸ್ಮಶಾನ ನನ್ನ ಮನಸ್ಸಲ್ಲಿ ಪ್ರಶ್ನೆಗಳನ್ನು ಮೂಡಿಸುತ್ತದೆ . ಒಂದಿಷ್ಟು ಗುಂಡಿಗಳನ್ನು ತೆಗೆದು ಇಟ್ಟಿದ್ದರು . ಮತ್ತೊಂದಿಷ್ಟು ಫ್ರೆಶ್ ಎನಿಸುವ ಗೋರಿಗಳು . ಕಾರಿಳಿದು ನಾನು ನಡೆದು ಹೊರಟೆ . ಒಂದೊಂದೆ ಗೋರಿಗಳನ್ನು ದಾಟುತ್ತಾ ಮುನ್ನಡೆದೆ . ಆತನೂ ಕಾರಿನಿಂದ ಇಳಿದ ಸಪ್ಪಳವಾಯಿತು , ತಿರುಗಿ ನೋಡಿದೆ ಆತನ ಕೈಯಲ್ಲಿ ರಿವಾಲ್ವಾರ್ ಇತ್ತು . ತಕ್ಷಣ ನನ್ನ ರಿಫ್ಲೆಕ್ಸ್ ಕೆಲಸ ಮಾಡಿತು , ಆತನ ಕೈಯಲ್ಲಿ ಇದ್ದದ್ದು ಚೈನಾ ಮೇಡ್ ರಿವಾಲ್ವಾರ್ ಅದಕ್ಕೆ ಆರು ಬುಲೆಟ್ ಹಾಕಬಹುದು . ರಿವಾಲ್ವಾರ್ ಹೆಸರು ಅದಕ್ಕೆ ಬಂದದ್ದು , ಬುಲೆಟ್ ಕೂರಿಸುವ ಬೇರಿಂಗ್ ತಿರುಗಿ ಗುಂಡು ಹಾರುತ್ತದೆ . ಚೈನಾ ಮೇಡ್ ರಿವಾಲ್ವಾರ್  ಆಗಿದ್ದಲ್ಲಿ ಟ್ರಿಗರ್ ಗೆ ಅಳವಡಿಸಿದ ಸ್ಪ್ರಿಂಗು ತೆಳುವಾಗಿರುತ್ತದೆ . ಹಾರಿಸಿದ ಗುಂಡು ಸ್ವಲ್ಪವೇ ಸ್ವಲ್ಪ ಎಡಕ್ಕೆ ವಾಲುತ್ತದೆ . ಕ್ಷಣಾರ್ಧದಲ್ಲಿ ಆತ ನನ್ನೆಡೆಗೆ ಗುಂಡು ಹಾರಿಸಿದ , ನಾನು ನನ್ನ 0.32 ಪಿಸ್ಟಲ್ ಗೆ ಕೈ ಹಾಕಿ , ಆತ ಹಾರಿಸಿದ ಗುಂಡು ಎಡಕ್ಕೆ ವಾಲುವುದರಿಂದ ನಾನು ಬಲಕ್ಕೆ ಸರಿದುಕೊಂಡೆ .  ಗುಂಡು ಸರಿಯಾಗಿ ಪಕ್ಕೆಲುಬಿಗೆ ತಗುಲಿತು . 
ನನಗೆ ಸಿಗುವುದು ಕೇವಲ ಮೂವತ್ತಾರು ಸೆಕೆಂಡ್ . ನಾನು ಸಾಯುವುದು ಎರಡೇ ಕಾರಣಕ್ಕೆ , ಗುಂಡು ಒಳಗಡೆ ಇರುವುದರಿಂದ ಮ್ಯಾಸಿವ್ ಇಂಟರ್ನಲ್ ಬ್ಲೀಡಿಂಗ್ ಆಗುತ್ತದೆ ಅದರಿಂದ ನಾನು ಸಾಯಬಹುದು ಅಥವಾ ಶಾಕ್ ನಿಂದ ಸಾಯಬಹುದು . ರಕ್ತಸ್ರಾವ ತಡೆಗಟ್ಟಲು ನನ್ನ ಎಡಗೈಯನ್ನು ಗಾಯದ ಮೇಲೆ ಒತ್ತಿ ಹಿಡಿದೆ . ಬಲಗೈಯಲ್ಲಿ ಪಿಸ್ಟಲ್ ತೆಗದು ಆತನ ಹೊಟ್ಟೆಗೆ ಫೈರ್ ಮಾಡಿದೆ . ಅದು ಮಾಮೂಲಿ  ಪೋಲಿಸನೊಬ್ಬನ  ಹೊಡೆತವಲ್ಲ . ಸರಿಯಾಗಿ ಅಭ್ಯಸಿಸಿದ ಕ್ಯಾಲ್ಕ್ಯುಲೇಟೆಡ್ ಹೊಡೆತ . ಆತನಿಗೆ ಆಗುವ ರಕ್ತಸ್ರಾವದಿಂದ ಆತ ಇನ್ನು ಎರಡು ದಿನ ಏಳಲಾರ , ಆದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ . 
ಆದರೆ ನನ್ನ ಜೀವದ ಬಗ್ಗೆ ಗ್ಯಾರಂಟಿ ಇಲ್ಲ . ಒಳಗೆ ರಕ್ತಸ್ರಾವ ಹೆಚ್ಚುತ್ತಿತ್ತು , ವಿಕ್ರಮ್ ಅವರಿಗೆ ಕಾಲ್ ಮಾಡಿ " ಗೋರಿ , ಗೋರಿಪಾಳ್ಯ" ಎಂದಷ್ಟೇ ಹೇಳಲು ನನ್ನಿಂದ ಸಾಧ್ಯವಾಯಿತು . ನಾನು ಶಾಕ್ ಗೆ ಒಳಗಾಗಿದ್ದೆ ಅದರಿಂದ ಹೊರಬರಲು ನಾನು ಸ್ಥಿತ ಪ್ರಜ್ನನಾಗಬೇಕು . ಬೇರೇನಾದರೂ ಯೋಚಿಸಬೇಕು . 
ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಸೇರಿದಾಗ ನನಗೆ 0.32 ಪಿಸ್ಟಲ್ ಕೊಟ್ಟರು . ನಾನು ನಕ್ಕು ಬಿಟ್ಟಿದ್ದೆ , ಸೇನೆಯಲ್ಲಿ ದೊಡ್ಡ ದೊಡ್ಡ ಆಯುಧ ಹ್ಯಾಂಡಲ್ ಮಾಡಿದ ನನಗೆ ಪಿಸ್ಟಲ್ ಕೊಡುತ್ತಿದ್ದಾರೆ ಎಂದು . ಆದರೆ ನಿಧಾನವಾಗಿ ನನಗೆ ಅದರ ಮಹತ್ವ ತಿಳಿಯಿತು . ಸೇನೆಯಲ್ಲಿ ಗುಪ್ತಚರ ಇಲಾಖೆಗೆ ಬೇಕಾಗುವಷ್ಟು ಚಾಕ-ಚಕ್ಯತೆ ಬೇಡ . ರೈಫಲ್ ಹಿಡಿದು " ಹರ ಹರ ಮಹಾದೇವ್ " ಎಂದು ಮುನ್ನುಗುವ ಭಂಡ ಧೈರ್ಯ ಸಾಕು . ಆದರೆ 'ರಾ'ದಲ್ಲಿ ಹಾಗಲ್ಲ ಕಂಡೂ ಕಾಣದ ಹಾಗೆ ಕೆಲಸ ಮುಗಿಸಬೇಕು . ಪಿಸ್ಟಲ್ ಅನ್ನು ಕಿವಿಯ ಹಿಂದಿನ ಮೆದು ಚರ್ಮದ ಮೇಲೆ ಇಟ್ಟು ಕುದುರೆ ಎಳೆದರೆ ವ್ಯಕ್ತಿ ಕಮಕ್-ಕಿಮ್ಮಕ್ ಎನ್ನದೆ ಶಿವನ ಪಾದ ಸೇರುತ್ತಾನೆ .   ಶಬ್ದವೇ ಇಲ್ಲದೇ ಕೆಲಸ ಮುಗಿದಿರುತ್ತದೆ . ದುಬೈಯ ಪಂಚತಾರಾ ಹೋಟೆಲ್ ಒಂದರಲ್ಲಿ                    ಲಷ್ಕರ್-ಎ-ತೈಬಾದ  ಮುಖಂಡ  ಅಲ್-ಆಜಂ-ಬುಕಾರಿಯನ್ನು ಇದೇ ರೀತಿ ಮುಗಿಸಿದ್ದೇನೆ . ಆತ ಮುಂಬೈ ಅಟ್ಯಾಕ್ ನಡೆಸಿದ ಮುಖ್ಯ ರೂವಾರಿ . ಪಂಚತಾರ ಹೋಟೆಲಿನ ಲಿಫ್ಟಿನಲ್ಲಿ ಆತನ ತಲೆ ಸವುರುತ್ತಾ ನಾನು ನಿಂತಿದ್ದೆ , ಆತ ನನ್ನ ಮುಂದೆ ಮಂಡಿಯೂರಿ ಕುಳಿತು ಪ್ರಾಣ ಭಿಕ್ಷೆ ಬೇಡುತ್ತಿದ್ದ . ಸೈಲೆಂಸೆರ್ ಅಳವಡಿಸಿದ ನನ್ನ ಪಿಸ್ಟಲ್ ಸದ್ದು ಮಾಡಲಿಲ್ಲ . ಬುಕಾರಿ ಅನಾಥ ಶವವಾಗಿ ಬಿದ್ದಿದ್ದ . 
" ಆಹ್ ......................................" ನಾನು ನೋವಿನಿಂದ ಚೀರಿದೆ , ಕೇಳಲು ಯಾರೂ ಇರಲಿಲ್ಲ . ನನ್ನ ಕಣ್ಣು ಮಂಜಾಗತೊಡಗಿತು . ಆತ ಯಾರು ? ನನ್ನನ್ನು ಯಾಕೆ ಮುಗಿಸಲು ಬಂದ ? , ಪ್ರಶ್ನೆಗಳು ಈಜಾಡುತ್ತಿದ್ದವು . ನನಗೆ ಪ್ರಜ್ಞೆ ತಪ್ಪಿತು . 
( ಮುಂದುವರೆಯುವುದು...................................)

25/5/16

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ-೨)

ರಿಪೋರ್ಟು ಬರುವ ತನಕ ನಾನು ಸುಮ್ಮನೆ ಕೂರುವ ಹಾಗಿರಲಿಲ್ಲ .  ತಡ ಮಾಡಿದಷ್ಟೂ ಕೊಲೆಗಾರ ಸಾಕ್ಷಿಗಳನ್ನು ನಾಶ ಮಾಡುತ್ತಾ ಹೋಗುತ್ತಾನೆ . ನನ್ನ ತಲೆ ಕೆಡಿಸಿದ್ದು ವಜ್ರದ ಹರಳು , ಅದನ್ನು ನೋಡಿದರೆ ಹೇಳಬಹುದು ಅದು ಆಫ್ರಿಕಾದ ಗಣಿಯಿಂದ ಬಂದದ್ದು . ಅಲ್ಲಿ ತೆಗೆದ ವಜ್ರಗಳನ್ನು ಪ್ರಪಂಚದ ತುಂಬೆಲ್ಲಾ ಕದ್ದು ಸಾಗಿಸುವ ದೊಡ್ಡ ಜಾಲವೇ ಇದೆ . ಇಸ್ರೇಲಿನ ಗುಪ್ತಚರದಳ ಇದರ ಜಾಲವನ್ನು ಪತ್ತೆ ಹಚ್ಚಿತ್ತು . ಆದರೆ ಭಾರತದಲ್ಲಿ ಇಂತಹ ವಜ್ರವನ್ನು ನಾನು ನೋಡಿದ್ದು ಇದೆ ಮೊದಲು . ಚಿರಾಗ್ ಏನಾದರೂ ಕ್ಯಾರಿಯರ್ ಆಗಿ ಕೆಲಸ ಮಾಡುತ್ತಿದನ ? . ವಜ್ರವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಸಾಗಿಸುವವರಿಗೆ ಕ್ಯಾರಿಯರ್ ಎನ್ನುತ್ತೇವೆ . ಆ ರೀತಿ ಕ್ಯಾರಿಯರ್ ಆಗಿ ನಂತರ ಅವರಿಗೇ ಚಳ್ಳೆ ಹಣ್ಣು ತಿನ್ನಿಸಲು ಹೋಗಿ ಇವನ ಕೊಲೆ ನಡೆಯಿತೇ ? . ಆದರೆ ಅವರು ಇಷ್ಟೆಲ್ಲಾ ಸದ್ದಾಗುವಂತೆ ಕೊಲೆ ಮಾಡುವುದಿಲ್ಲ . ಅವರನ್ನು ನಾನು ಕೋಲ್ಡ್ ಬ್ಲಡೆಡ್ ಕಿಲ್ಲರ್ಸ್ ಎಂದು ಗುರುತಿಸುತ್ತೇನೆ . ಕೊಲ್ಲುವುದರಲ್ಲಿ ಅವರು ನಿಸ್ಸೀಮರು, ಒಂದೇ ಏಟಿಗೆ ಶಿವನ ಪಾದ ಸೇರಿಸುತ್ತಾರೆ . ಆದರೆ ಇಲ್ಲಿ ಆ ರೀತಿ ಕೊಲೆಯಾಗಿಲ್ಲ .
ಈಗೀನ ಸೋಶಿಯಲ್ ಮೀಡಿಯಾಗಳು ನಮಗೆ ಬಹಳಷ್ಟು ಸಹಕಾರಿ . ನಿಜವಾಗಿಯೂ ದ್ವೇಷಕ್ಕೆ ಕೊಲೆ ನಡೆದಿದ್ದರೆ ಕೊಲೆಗಾರ ಖಂಡಿತವಾಗಿ ಧಮ್ಕಿ ಹಾಕುವ ಮೆಸೇಜ್ ಮಾಡಿರುತ್ತಾನೆ . ಅದಕ್ಕಿಂತ ಹೆಚ್ಚು ನನಗೆ ಚಿರಾಗ್ ಹಾಗು ಆತನ ಜೊತೆ ಬಂದಿದ್ದ ಸ್ನೇಹ ಎಂಬ ಹುಡುಗಿಯ ಮಧ್ಯೆ ಇದ್ದ ಸಂಬಂಧ ಎಂತದ್ದು ಎಂದು ನೋಡಬೇಕಿತ್ತು . ಅವರಿಬ್ಬರೂ ಪ್ರೇಮಿಗಳಾಗಿದ್ದರೆ ಬೇರೆ ಬೇರೆ ರೂಮು ಹಾಕುತ್ತಿರಲಿಲ್ಲ . ನನ್ನ ಕಂಪ್ಯೂಟರ್ ತೆರೆದುಕೊಂಡು ಕುಳಿತೆ , ' ಕಾಲಿ ಲಿನಕ್ಸ್ ' ಓಪನ್ ಮಾಡಿದೆ . ಈಗ ಹ್ಯಾಕರ್ಸ್ ಬಳಸುವ ತಂತ್ರಾಂಶ ಕಾಲಿ ಲಿನಕ್ಸ್ . ಅದರಲ್ಲಿ ಆತನ ಫೇಸ್ಬುಕ್ , ವಾಟ್ಸ್ ಅಪ್ ಎಲ್ಲವನ್ನು ಹ್ಯಾಕ್ ಮಾಡಬೇಕು . ಫೇಸ್ಬುಕ್ ಹ್ಯಾಕ್ ಮಾಡಲು ಫಿಶಿಂಗ್ ಎಂಬ ತಂತ್ರ ಬಳಸಬಹುದು , ಅಂದರೆ ಫೇಸ್ಬುಕ್ ಲಾಗ್ ಇನ್ ಪೇಜಿನ ನಕಲು ಸೃಷ್ಟಿಸಿ ಕಳುಹಿಸಬೇಕು . ಆತ ಪಾಸ್ವರ್ಡ್ ಟೈಪಿಸಿದಾಗ ನನ್ನ ಸ್ಕ್ರೀನಿನ ಮೇಲೆ ಅದು ಗೋಚರಿಸುತ್ತದೆ . ಆದರೆ ಇಲ್ಲಿ ನನ್ನ ವಿಕ್ಟಿಮ್ ಸತ್ತು ಹೋಗಿದ್ದಾನೆ  . ನನಗೆ ಉಳಿದದ್ದು ಬ್ರೂಟ್ ಫೋರ್ಸ್ ಅಟ್ಯಾಕ್ ಮಾತ್ರ , ಎಂದರೆ ಬೇರೆ ಬೇರೆ ಕಾಂಬಿನೇಶನ್ ಅನ್ನು ಪ್ರಯತ್ನಿಸುವುದು . ಬ್ರೂಟ್ ಫೋರ್ಸ್ ತಂತ್ರಾಂಶ ಗಣಿತದ ಪರ್ಮುಟೆಶನ್ ಕಾಂಬಿನೇಶನ್ ಮೇಲೆ ನಿಂತಿದೆ . ಕೆಲವೊಮ್ಮೆ ಪಾಸ್ವರ್ಡ್ ಕ್ರ್ಯಾಕ್ ಮಾಡಲು ತಿಂಗಳುಗಟ್ಟಲೆ ಹಿಡಿದದ್ದೂ ಇದೆ . ಆದರೆ ಇಲ್ಲಿ ನನಗೆ ಚಿರಾಗ್ ಬಗ್ಗೆ ಬಹಳಷ್ಟು ವಿಷಯ ಗೊತ್ತಿತ್ತು ಅದನ್ನೇ ಮೊದಲು ಪ್ರಯತ್ನಿಸಿದೆ . ಎರಡು ತಾಸಿನ ನಂತರ ಪಾಸ್ವರ್ಡ್ ದೊರಕಿತು , 'chiru@bel456' . ಆತನ ಫೇಸ್ಬುಕ್ ಖಾತೆ ತೆರೆದು ಆಕ್ಟಿವಿಟಿ ಲಾಗ್ ತೆಗೆದೆ . ಆತನ ಮೆಸೇಜ್ ಎಲ್ಲವನ್ನೂ ಓದಿದೆ . ಆತನಿಗೆ ಸ್ನೇಹ ಮೊದಲು ಸಿಕ್ಕಿದ್ದು ಫೇಸ್ಬುಕ್ ನಲ್ಲಿ . ಈತನೇ ಮೊದಲು ಮೆಸೇಜಿಸಿ ಆಕೆಯ ಮೊಬೈಲ್ ನಂಬರ್ ಸಂಪಾದಿಸಿದ್ದ . ಅದಕ್ಕಿಂತ ನನಗೆ ಮುಖ್ಯವಾಗಿ ಸಿಕ್ಕಿದ್ದು ' ಅಬ್ದುಲ್ ಖುರೇಷಿ ' ಎಂಬುವವನ ಪ್ರೊಫೈಲು , ಆತ ತನ್ನ ನಿಜವಾದ ಹೆಸರು ಇಟ್ಟುಕೊಳ್ಳುವುದಿಲ್ಲ ಅಮೀನಾ ಎಂಬ ಹೆಸರಿತ್ತು . ಆದರೆ ನಾನು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಅಮೀನಾ ಎಂಬ ಪ್ರೊಫೈಲ್ ಹ್ಯಾಕ್ ಮಾಡಿದ್ದೆ ಹಾಗೂ ಖುರೆಷಿಯ ಎಲ್ಲಾ ಪ್ರೊಫೈಲ್ ಮಾಹಿತಿಯೂ ನನಗೆ ಗೊತ್ತಿದೆ . ಆತ ಲಿಬಿಯಾದಿಂದ ವಜ್ರಗಳನ್ನು ದುಬೈಗೆ ಹಡಗಿನ ಮೂಲಕ ತರುತ್ತಾನೆ ನಂತರ ದುಬೈಗೆ ಕ್ಯಾರಿಯರ್ ಕರೆಸಿಕೊಂಡು ಅವರ ಹೊಟ್ಟೆಯಲ್ಲಿ ವಜ್ರ ತುಂಬಿಸಿ ಡೆಲಿವರಿ ಮಾಡುತ್ತಾನೆ . ಚಿರಾಗ್ ಗೆ ಆತನ ಸಂಪರ್ಕ ಇದ್ದದ್ದು ನಿಜವಾಗಿತ್ತು . ಚಿರಾಗ್ ಒಬ್ಬ ಕ್ಯಾರಿಯರ್ . ಈ ರೀತಿ ಕ್ಯಾರಿಯರ್ ಕೆಲಸ ಮಾಡುವುದು ಬಹಳ ಅಪಾಯ ಹೊಟ್ಟೆಯಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ವಜ್ರ ಇದೆಯೆಂದರೆ ಹೊಟ್ಟೆಯನ್ನೇ ಸೀಳಿ ವಜ್ರ ತೆಗೆದುಕೊಂಡು ಹೋಗುತ್ತಾರೆ . ಅಥವಾ ಖುರೆಷಿಯೇ ಕೆಲವೊಮ್ಮೆ ಸಾಕ್ಷಿ ಸಿಗಬಾರದೆಂದು ಕೊಲೆ ಮಾಡಿಸುತ್ತಾನೆ . ಆದರೆ ಆ ಮಾಹಿತಿಗಳು ಫೇಸ್ಬುಕ್ನಲ್ಲಿ ಇರಲಿಲ್ಲ . ವಾಟ್ಸ್ ಅಪ್ ಹ್ಯಾಕ್ ಮಾಡಬೇಕಿತ್ತು , ಅದು ನನಗೆ ಬಹಳ ಸುಲಭದ ಕೆಲಸ . ವಾಟ್ಸ್ ಅಪ್ ಬಳಸುವುದು ' md5 algorithm' with hash tag . ಎರಡೇ ನಿಮಿಷದಲ್ಲಿ ಅವನ ಮೆಸೇಜ್ ಎಲ್ಲವನ್ನೂ ನನ್ನ ಕಂಪ್ಯೂಟರ್ ಇಳಿಸಿಕೊಂಡಿತ್ತು . ಅಲ್ಲಿಯೂ ಸಹ ಖುರೆಷಿಯ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ , ಆದರೆ ಚಿರಾಗ್ ಮತ್ತು ಸ್ನೇಹ ಇಬ್ಬರೂ ಗೊಂದಲಗೊಂಡಿದ್ದರು . ಚಿರಾಗ್ ಆಕೆಯ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ . ಆದರೆ ಇಬ್ಬರೂ ಯಾವುದೇ ರಿಲೇಶನ್ಶಿಪ್ ನಲ್ಲಿ ಇರಲಿಲ್ಲ . ಈತನೇ ಆಕೆಯನ್ನು  ಪೀಡಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ . ಆಕೆ ಬಹಳ ಸಭ್ಯವಾಗೆ ವರ್ತಿಸಿದ್ದಳು , ಹನಿ ಟ್ರ್ಯಾಪಿಂಗ್ ಸಹ ಅಲ್ಲ . ಹಾಗಾದರೆ ಯಾಕೆ ಕೊಲೆ ನಡೆಯಿತು ? .
ಪೋಲಿಸು ಜೀಪು ನಮ್ಮ ಮನೆಯ ಮುಂದೆ ಬಂದಿತು ಅದನ್ನು ಹತ್ತಿ ಆಸ್ಪತ್ರೆಗೆ ನಡೆದೆ . ನನ್ನ ಊಹೆ ನಿಜವಾಗಿತ್ತು ಆದರೆ ರಿಪೋರ್ಟ್ ನೋಡಿ ನಾನೂ ಸಹ ಬೆಚ್ಚಿಬಿದ್ದೆ . ಆತನ ಹೊಟ್ಟೆಯಲ್ಲಿ ನಾಲ್ಕು ಕೋಟಿ ಬೆಲೆಬಾಳುವ ವಜ್ರ ಇತ್ತು ! . ಇಷ್ಟು ವಜ್ರ ಇಟ್ಟುಕೊಳ್ಳುವುದು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ . ಆತ ನಡೆದಾಡುವ ಬ್ಯಾಂಕ್ , ದರೋಡೆಕೋರರ ಹಾಟ್ ಫೇವರೆಟ್ . ಆದರೆ ಕೊಲೆ ಆದ ಮೇಲೂ ವಜ್ರ ಹೊಟ್ಟೆಯಲ್ಲೇ ಇದೆ , ಅಂದರೆ ಇದು ದುಡ್ಡಿನ ಆಸೆಗೆ ನಡೆದ ಕೊಲೆ ಅಲ್ಲ ಎಂಬುದು ಸ್ಪಷ್ಟ .
ಆಸ್ಪತ್ರೆಯಿಂದ ಹೊರ ಬರುವ ಹೊತ್ತಿಗೆ ಪತ್ರಕರ್ತರ ದಂಡೇ ನೆರೆದಿತ್ತು . ನನ್ನ ಮೇಲೆ ಬಹಳಷ್ಟು ಪೊಲಿಟಿಕಲ್ ಪ್ರೆಷರ್ ಇತ್ತು . ನೂರಾರು ಪ್ರಶ್ನೆಗಳನ್ನು ನನ್ನ ಮೇಲೆ ಎಸೆದರು . ನಾನು ಯಾವುದಕ್ಕೂ ಪ್ರತಿಕ್ರಿಯಿಸದೇ ,
" ಬಹಳ ಇಂಪಾರ್ಟೆಂಟ್ ಲೀಡ್ ಸಿಕ್ಕಿದೆ ಇನ್ನು ಇಪ್ಪತ್ನಾಲ್ಕು ಗಂಟೆಯೊಳಗೆ ಕೊಲೆಗಾರನನ್ನು ಹಿಡಿಯುತ್ತೇನೆ " ಎಂದು ಹೇಳಿಕೆ ನೀಡಿದೆ . ಆಗ ನನಗೆ ನನ್ನ ಮೂರ್ಖ ಹೇಳಿಕೆ ಜೀವಕ್ಕೇ ಕುತ್ತು ತರುತ್ತದೆ ಎಂದು ತಿಳಿದಿರಲಿಲ್ಲ .
( ಮುಂದುವರೆಯುವುದು........ )

22/5/16

ಡಿಟೆಕ್ಟಿವ್ ಜಿಕೆ : ಕಲೆ (ಭಾಗ-೧)

ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುವುದು ನನ್ನ ಅಭ್ಯಾಸ . ನಾನು ಸೇನೆ ಬಿಟ್ಟು ಹದಿನೈದು ವರ್ಷವೇ ಆದರೂ ಅಲ್ಲಿ ಕಲಿತ ಪಾಠಗಳನ್ನು ಇನ್ನೂ ಮರೆತಿಲ್ಲ . ಇಂದಿಗೂ ಇಪ್ಪತ್ತು ಮೈಲು ಓಡುವಷ್ಟು ಕಸು ನನ್ನಲ್ಲಿದೆ . ವ್ಯಾಯಾಮ ಮುಗಿಸಿ ಬರುವಷ್ಟರಲ್ಲಿ ನನ್ನ ಮೊಬೈಲಿಗೆ ಇಪ್ಪತ್ತೆರಡು ಮಿಸ್ ಕಾಲ್ ಬಂದು ಕುಳಿತಿತ್ತು . ಐಸಿಸ್ ನ ವೆಬ್ಸೈಟುಗಳನ್ನು ದ್ವಂಸ ಮಾಡಿದ ನನ್ನಂತಹ ಒಬ್ಬ ಸ್ಪೈ ಗೆ ಒಂದು ನಂಬರ್ ಪತ್ತೆ ಹಚ್ಚುವುದು ಕಷ್ಟವಲ್ಲ . ತಕ್ಷಣವೇ ಅದು ಬೆಂಗಳೂರಿನ ಮಲ್ಲೇಶ್ವರದ ಸರ್ಕಲ್ ಇನ್ಸ್ಪೆಕ್ಟರ್ ಅವರದು ಎಂದು ತಿಳಿದು ಹೋಯಿತು . ಹತ್ತೇ ನಿಮಿಷದಲ್ಲಿ ನನ್ನ ಮನೆಯ ಮುಂದೆ ಪೋಲಿಸ್ ಜೀಪ್ ಬಂದು ನಿಂತಿತು . ಹತ್ತಿ ಕುಳಿತೆ , ಜೀಪು ಹೊರಟಿತು .
ಪೋಲಿಸ್ ಸ್ಟೇಷನ್ ನಿಂದ ನಾನು ಹಾಗೂ ಇನ್ಸ್ಪೆಕ್ಟರ್ ಜೊತೆಗೇ ಹೊರೆಟೆವು . ' ಶ್ರೀ ವರದ ' ಎಂಬ ಲಾಡ್ಜ್ ನಲ್ಲಿ ಕೊಲೆಯೊಂದು ನಡೆದಿತ್ತು . ಪತ್ತೆ ಹಚ್ಚಲು ಬಹು ಕ್ಲಿಷ್ಟವಾದ ಕೇಸು ಅದಾಗಿತ್ತು . ಗೃಹಮಂತ್ರಿಯವರು ನನ್ನ ಹೆಸರು ಸೂಚಿಸಿದ್ದರಂತೆ . ಆದರೆ ಪೊಲೀಸರಿಗೆ ಅದು ಸ್ವಲ್ಪವೂ ಇಷ್ಟವಿರಲಿಲ್ಲ ಎಂಬುದು ಅವರ ನಡವಳಿಕೆಯಲ್ಲೇ ತಿಳಿಯುತ್ತಿತ್ತು . ಎಂಟು ಗಂಟೆಯ ಸುಮಾರಿಗೆ ಹೋಟೆಲಿನ ಲಾಬಿ ತಲುಪಿದೆ . ರೂಂ ನಂಬರ್ ಹದಿಮೂರರಲ್ಲಿ ಕೊಲೆ ನಡೆದಿತ್ತು . 'ಕ್ರೈಂ ಸೀನ್' ಇಲ್ಲಿ ಒಬ್ಬ ಪತ್ತೇದಾರ ಎಷ್ಟು ಬುಧ್ಧಿವಂತಿಕೆ ತೋರಿಸುತ್ತಾನೋ ಅಷ್ಟು ಕೇಸು ಸುಲಭವಾಗುತ್ತದೆ . ಮತ್ತೆ ಮತ್ತೆ ಕ್ರೈಂ ಸೀನ್ ಕ್ರಿಯೇಟ್ ಮಾಡುವುದು ಅಸಾಧ್ಯವಾದ್ದರಿಂದ ಚುರುಕುತನ ಹಾಗೂ ಆಳ ಜ್ಞಾನ ಬೇಕು . ಫೋಟೋಗ್ರಾಫರ್ ಅನ್ನು ಬರಲು ಹೇಳಿ ಇಂಚು ಇಂಚಿನ ಫೋಟೋ ತೆಗೆಯಲು ಹೇಳಿದೆ . ನಾನು ರೂಮಿನ ಮೂಲೆ ಮೂಲೆಯನ್ನೂ ಜಾಲಾಡತೊಡಗಿದೆ .
ನೀವು ಎಂದಾದರೂ ಕೊಲೆಯನ್ನು ನೋಡಿದ್ದೀರಾ ? ಮೊದಲ ಬಾರಿಗೆ ನೋಡಿದರೆ ಮೂರ್ಛೆ ಹೋಗಿ ಬಿಡುತ್ತೀರಿ . ನಾನೂ ಸಹ ಬಹಳ ಭಯಗೊಂಡಿದ್ದೆ , ಆದರೆ ಸೇನೆ ಎಲ್ಲವನ್ನೂ ಕಲಿಸಿಕೊಟ್ಟಿತ್ತು . ಮೊದಲ ಬಾರಿಗೆ ಶತ್ರು ಸೈನ್ಯದ ಗಾಯಾಳು ಸೈನಿಕ ನನ್ನ ಮುಂದೆ ಬಿದ್ದಿದ್ದ . ನಾನೇಕೆ ಆತನನ್ನು ಸಾಯಿಸಬೇಕು ? ಆತ ಯಾರೆಂದು ನನಗೆ ಗೊತ್ತಿಲ್ಲ , ನನಗೂ ಆತನಿಗೂ ಯಾವ ದ್ವೇಷವೂ ಇಲ್ಲ , ಆತನಿಗೂ ಒಂದು ಕುಟುಂಬ ಇರುತ್ತದೆ ಅಲ್ಲವೇ ? . ಆತನಿಗೆ ಏನೂ ಮಾಡದೇ ಮುಂದೆ ಹೋದೆ . ಆತನ ಗನ್ನು ಸದ್ದು ಮಾಡಿತು . ಅಂದು ನಾನು ಉಳಿದದ್ದೇ ಹೆಚ್ಚು , ಆತ ಗಾಯಗೊಂಡಿದ್ದರಿಂದ ಸರಿಯಾಗಿ ಗುರಿ ಹಿಡಿಯಲು ಸಾಧ್ಯವಾಗದೆ ಗುಂಡು  ನನ್ನ ಕಾಲಿಗೆ  ಬಡಿದಿತ್ತು . ನಾನು ತಿರುಗಿ ಸರಿಯಾಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ಕುದುರೆ ಎಳೆದೆ . ಹಣೆಯ ಮಧ್ಯೆ ಸರಿಯಾಗಿ ಗುಂಡು ಹೊಕ್ಕಿ ಮೆದುಳನ್ನು ಸೀಳಿ ಆಚೆ ಹೋಯಿತು . ಅಂದಿನಿಂದ ಹಿಂಸೆ , ಸಾವು , ಸಾಯಿಸುವುದರಲ್ಲಿ ವಿಲಕ್ಷಣ ಖುಷಿ ಅನುಭವಿಸುತ್ತೇನೆ .
ರಕ್ತ ಗಡ್ಡೆ ಗಡ್ದೆಯಾಗಿ ಹರಿದಿತ್ತು . ಕೊಲೆ ನಡೆದು ಮೂರ್ನಾಲ್ಕು ಗಂಟೆ ಆಗಿರುತ್ತದೆ . ಕೊಲೆಯಾದ ವ್ಯಕ್ತಿ ಬಲಶಾಲಿಯೇನೂ ಅಲ್ಲ , ಐದೂವರೆ ಅಡಿ ಇದ್ದ . ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು . ಕಿಚನ್ ನೈಫ್ ನಿಂದ ಕೊಲೆ ಮಾಡಲಾಗಿತ್ತು . ಸುಪಾರಿ ಕಿಲ್ಲರ್ ಗಳು ಮಾಡಿದ  ಕೊಲೆಯಲ್ಲ , ಅವರು ಈ ರೀತಿ ಕೆಲಸ ಮಾಡುವುದೇ ಇಲ್ಲ . ಗಾಯ ಹೆಚ್ಚು ಆಳವಾಗಿರಲಿಲ್ಲ , ಮತ್ತೆ ಮತ್ತೆ ಇರಿದು ಸಾಯಿಸಿದ್ದರು . ಕೊಲೆಗಾರನಿಗೆ ದ್ವೇಷವಿದ್ದರೆ ಈ ರೀತಿ ಕೊಲೆ ಮಾಡುತ್ತಾರೆ . ರೂಮು ಗ್ರೌಂಡ್ ಫ್ಲೋರಿನಲ್ಲೇ ಇದ್ದರಿಂದ ಕೊಲೆಗಾರ ಕಿಟಕಿಯನ್ನು ಒಡೆದು ಸುಲಭವಾಗಿ ಒಳಗೆ ಬಂದಿದ್ದ . ರೂಂ ಬಾಯ್ ಬಂದು ಬಾಗಿಲನ್ನು ಬಡಿದನಂತೆ , ಬಾಗಿಲು ತೆಗೆಯಲಿಲ್ಲ . ಬಹಳ ಹೊತ್ತಿನ ನಂತರ ಅನುಮಾನ ಬಂದು ರೂಮಿನ ಬಾಗಿಲು ಒಡೆದರಂತೆ . ಅಲ್ಲಿ ಕೊಲೆ ನಡೆದಿತ್ತು . ಹೋಟೆಲಿನ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆ ಮಾಡಿದೆ , ಎಲ್ಲರೂ ಗಾಬರಿಗೊಂಡಿದ್ದರು . ಅವರು ನನಗೆ ನಿಷ್ಪ್ರಯೋಜಕ , ಗಾಬರಿಗೆ ಅಡ್ರಿನಲಿನ್ ಉತ್ಪತ್ತಿಯಾಗಿ ಅವರಿಗೆ ಏನೂ ಮನಸ್ಸಿನಲ್ಲಿ ಉಳಿದಿರುವುದಿಲ್ಲ , ಸೂಕ್ಷ್ಮವಾಗಿ ನೋಡಿರುವುದಿಲ್ಲ . ಸಿಸಿಟಿವಿಯ ರೆಕಾರ್ಡ್ ತೆಗೆಸಿದೆ , ಆದರೆ ಕೊಲೆಗಾರ ಬಹಳ ಚಾಲೂಕು . ಕ್ಯಾಮೆರಾದ ಮೇಲೆ ಎರಡು ತುಂಡು ಮ್ಯಾಗ್ನೆಟ್ ಇಟ್ಟಿದ್ದ . ಈ ರೀತಿ ಮ್ಯಾಗ್ನೆಟ್ ಇಡುವುದರಿಂದ ಕ್ಯಾಮೆರಾ ಕೆಲಸ ಮಾಡುವುದಿಲ್ಲ . ಆ ದಾರಿಯೂ ನನಗೆ ಮುಚ್ಚಿಹೋಗಿತ್ತು .
ಕೊಲೆಯಾದ ಚಿರಾಗ್ ಬಳ್ಳಾರಿಯವ , ಆತನ ಜೊತೆ ಅವನ ಸ್ನೇಹಿತೆ ಸಹ ಅದೇ ಹೋಟೆಲಿನಲ್ಲಿ ರೂಮು ಹಾಕಿದ್ದಳು . ಆಕೆಯನ್ನು ಕರೆದು ಕೂರಿಸಿಕೊಂಡೆ , ನಿಧಾನಕೆ ಮಾತಿಗೆ ಎಳೆದೆ . ಇಬ್ಬರೂ ಒಟ್ಟಿಗೆ ಬಂದದ್ದಂತೆ , ಮೆಡಿಕಲ್ ಮಾಡುತ್ತಿದ್ದಾರೆ .ಆದರೆ ಚಿರಾಗ್ ಡ್ರಾಪ್ ಔಟು , ದುಶ್ಚಟ ಹತ್ತಿಸಿಕೊಂಡು ಓದಿಗೆ ಗುಡ್ ಬೈ ಹೇಳಿದ್ದ . ಆದರೆ ಸ್ನೇಹ ಮಾತ್ರ ಮುಂದುವರೆದಿತ್ತು . ಆಕೆ ಶಾಕ್ ಗೆ ಒಳಗಾಗಿದ್ದಳು , ಅವಳನ್ನು ಮನೆಗೆ ಕಳುಹಿಸಿಕೊಟ್ಟೆ .
ಇನ್ಸ್ಪೆಕ್ಟರ್ ವಿಕ್ರಮ್ ನನ್ನನ್ನು ತರಾಟೆಗೆ ತೆಗೆದು ಕೊಂಡರು . ಈ ಕೊಲೆಯ ಸಸ್ಪೆಕ್ಟ್ ಅವಳೇ , ಯಾಕೆ ಬಿಟ್ಟಿರಿ ಎಂದು ಆಕ್ರೋಶಗೊಂಡರು .
" ಆಕೇನ ನೋಡಿದೀರಾ ? ನಾಯಿಗೆ ಹೊಡೆಯುವ ಕೋಲಿನಂತೆ ಇದ್ದಾಳೆ , ಆಸ್ತಮಾ ಬೇರೆ . ಈ ಚಳಿಗಾಲದಲ್ಲಿ ಆಕೆ ಬೆಳಗಿನ ಜಾವ ಎದ್ದು ಬಂದು ಕೊಲೆಮಾಡುವುದು ಅಸಾಧ್ಯ . ಮೋಟಿವೇಶನ್ ಸಹ ಅವಳಿಗಿಲ್ಲ . ಕೊಲೆಯಾದವ ಶಾಸಕರ ಮಗ ಅವನನ್ನು ಕೊಲ್ಲುವಷ್ಟು ಧೈರ್ಯ , ಚಾಕಚಕ್ಯತೆ ಎರಡೂ ಅವಳಲ್ಲಿಲ್ಲ . ಅಷ್ಟಲ್ಲದೇ ಬೆಂಗಳೂರಿಗೆ ಕರೆದುಕೊಂಡು ಬಂದು ಸಾಯಿಸುವ ಅಗತ್ಯ ಇಲ್ಲವೇ ಇಲ್ಲ " ಎಂದು ವಾದಿಸಿದೆ .
ಅಷ್ಟರಲ್ಲಿ ಫೋಟೋಗ್ರಾಫರ್ ಬಂದು ಕರೆದ . ಆತನಿಗೆ ವಜ್ರದ ಹರಳೊಂದು ಸಿಕ್ಕಿತ್ತು . ನನಗೆ ಮನಸ್ಸಿನಲ್ಲಿ ಏನೋ ಹೊಳೆಯಿತು . ತಕ್ಷಣವೇ ದೇಹವನ್ನು ಸ್ಕ್ಯಾನ್ ಮಾಡಲು ಕಳುಹಿಸಿಕೊಟ್ಟೆ , ನಾನೂ ಸಹ ರಕ್ತದ ಸ್ಯಾಂಪಲ್ ತೆಗೆದುಕೊಂಡು , ಆಸ್ಪತ್ರೆಗೂ ಕಳುಹಿಸಿದೆ . ಕೇಸಿಗೆ ಹೊಸ ತಿರುವು ಸಿಕ್ಕಿತ್ತು .
ಅದೇ ಹೋಟೆಲಿನಲ್ಲಿ ತಿಂಡಿ ತಿಂದು , ವೈನ್ ಹೀರಿ ನನ್ನ ಸಿಗಾರಿಗೆ ಬೆಂಕಿ ಇಟ್ಟೆ . ಹಾಗೆಯೇ ಒಂದು ಜೊಂಪು ನನ್ನನ್ನು ಆವರಿಸಿಕೊಂಡಿತು . ವಿಕ್ರಂ , ಡಿಸಿ ಹಾಗೂ ಶಾಸಕರು ಬಂದಾಗ ನನಗೆ ಎಚ್ಚರವಾಯಿತು .
" ಸ್ವಲ್ಪ ಬೇಗನೆ ಸಾಲ್ವ್ ಮಾಡಿ ಸಾರ್ , ಪೊಲಿಟಿಕಲ್ ಪ್ರೆಷರ್ ಇದೆ " ಎಂದರು ಡಿಸಿ . ಬುಲ್ ಶಿಟ್ , ನನಗೆ ಇವೆಲ್ಲಾ ಹಿಡಿಸುವುದಿಲ್ಲ . ಸತ್ತವ ಯಾರೇ ಆದರೂ ಜೀವ ಜೀವವೇ ಅಲ್ಲವೇ . ಶಾಸಕನ ಮಗ ಎಂದು ಬೇಗ ಸಾಲ್ವ್ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ . ಸುಮ್ಮನೆ ಔಪಚಾರಿಕವಾಗಿ ಮಾತನಾಡಿಸಿ ಕಳುಹಿಸಿದೆ .
ಡಾಕ್ಟರ್ ರಿಪೋರ್ಟ್ ಗೆ ಕಾಯುತ್ತಾ ಕುಳಿತೆ .
(ಮುಂದುವರೆಯುವುದು ................................)

14/5/16

ಬದುಕಿನಾಚೆ - ೪

 ಎಲ್ಲರ ನೀರಿಕ್ಷೆಯನ್ನು ಹುಸಿ ಮಾಡಿ ಮಾಡಿ ಜಂಬಗಾರಿಗೆ ಮಳೆಗಾಲ ಬಹಳ ಬೇಗನೆ ಕಾಲಿಟ್ಟಿತು .  ಕರಿ ಮೋಡಗಳು ತಿರು-ತಿರುಗಿ ಧಾರಾಕಾರವಾಗಿ ಮಳೆ ಸುರಿಸಲಾರಂಭಿಸಿತು . ದಿನದಿಂದ ದಿನಕ್ಕೆ ಗಾಳಿಯ ರಭಸ ಹೆಚ್ಚಾಗ ತೊಡಗಿತು . ಗಾಳಿಗೆ ಸಿಲುಕಿದ ಅಡಿಕೆ ಮರಗಳು ತರ-ತರನೆ ಅಲುಗಿದವು . ಕಿಟಕಿಯಿಂದ ' ಸುಯ್ಯ್ ' ಎಂದು ಸಿಳ್ಳು ಬರುವಷ್ಟರ ಮಟ್ಟಿಗೆ ಗಾಳಿಯ ವೇಗ ಹೆಚ್ಚುತ್ತಾ ಹೋಗುತಿತ್ತು . ರಮೇಶ ಭಟ್ಟರ ಮನೆಗೆ ಕೆಲಸಕ್ಕೆಂದು ಸೈಕಲ್ ತುಳಿಯುತ್ತಾ ಹೋಗುತ್ತಿದ್ದ ಅಣ್ಣಪ್ಪನಿಗೆ ಮಳೆಯ ಹನಿಗಳು ಗುಂಡು ಸೂಜಿಯಂತೆ ಟಪ-ಟಪ ಎಂದು ಹೊಡೆಯುತ್ತಿತ್ತು . ಅಡಿಕೆಗೆ ಔಷದಿ ಹೊಡೆಯುವ ಯೋಚನೆಯನ್ನು ಆತ ಕೈ ಬಿಡುವ ಹಂತಕ್ಕೆ ಬರತೊಡಗಿದ . ಇದ್ದಕ್ಕಿದಂತೆ ಪ್ರಕೃತಿಯ ಮುಂದೆ ಮಾನವ ಏನೂ ಮಾಡಲಾಗದ ಹಸುಗೂಸಿನಂತೆ ಕಾಣಿಸತೊಡಗಿದ .
" ಇವತ್ತು ಔಷದಿ ಹೊಡಿಯದು ಬ್ಯಾಡ " ಎನ್ನುತ್ತಲೇ ಆತ ಸೈಕಲ್ ಸ್ಟಾಂಡ್ ಹಾಕಿದ . ಆದರೆ ಭಟ್ಟರಿಗೆ ಶತಾಯಗತಾಯ ಔಷದಿ ಹೊಡೆಸಲೇ ಬೇಕಿತ್ತು . ಇಲ್ಲದಿದ್ದರೆ ಕೆಲಸಕ್ಕೆ ಕರೆದ ಅಷ್ಟೂ ಆಳುಗಳಿಗೂ ಒಂದು ದಿನದ ಸಂಬಳ ಪುಕ್ಸಟ್ಟೆ ಕೊಡಬೇಕಾಗುತಿತ್ತು .   
"ಇಲ್ಲ ಇಲ್ಲ ಇವತ್ತು ಹೊಡಿಲೇಬೇಕು ಮಾರಾಯ , ಆ ಮೂಲೆ ಮರಕ್ಕೆ ಕೊಳೆ ಬಂದೋಗಿದೆ . ಬೇಗ ಔಷದಿ ಬಿದ್ದಿಲ್ಲ ಅಂದ್ರೆ ಇಡೀ ತೋಟಕ್ಕೆ ಹಬ್ಬತ್ತೆ " . 
" ಹಂಗಾರೆ ಒಂದ್ ಅರ್ಧ ದಿನ ಹೊಡಿಯನ ಆಮೇಲೆ ಮನೆಗೆ ಹೋದ್ರೆ ಆತು " , ಅಣ್ಣಪ್ಪನ ಸಲಹೆಗೆ ಎಲ್ಲರೂ ತಲೆದೂಗಿದರು . 
ಭಟ್ಟರು ತೋಟವಿಳಿದು ಎಲ್ಲೆಲ್ಲಿ ಭೂತವಿದೆ ? ಎಲ್ಲೆಲ್ಲಿ ನಾಗ ಬನವಿದೆ ? ಎಂದು ಆಳುಗಳಿಗೆ ತೋರಿಸತೊಡಗಿದರು . ಪ್ರತಿ ವರ್ಷ ತೋರಿಸಿದರೂ ಆ ಮೂರ್ಖರಿಗೆ ಅದು ಮರೆತು ಹೋಗುತಿತ್ತು . ಅಡಿಕೆಯನ್ನು ಕಳ್ಳ-ಕಾಕರಿಂದ ಉಳಿಸಿಕೊಳ್ಳಲು ಮಲೆನಾಡಿನಲ್ಲಿ ನಾಯಿಗಳಿಗಿಂತ ಹೆಚ್ಚು ಇಂತಹ ಭೂತ , ಪ್ರೇತಗಳನ್ನು ಬಳಸುತ್ತಾರೆ . 
ಎಲ್ಲರೂ ಸೇರಿ ತೋಟವಿಳಿದು ಕೆಲಸಕ್ಕೆ ಶುರುವಿಡುವ ಹೊತ್ತಿಗೆ ಹನ್ನೊಂದು ಗಂಟೆಯೇ ಆಗಿಹೋಯಿತು . ಆದರೂ ಸೂರ್ಯ ಅತ್ಯಂತ ಕ್ಷೀಣವಾಗಿ ಗೋಚರಿಸುತ್ತಿದ್ದ . ಭಟ್ಟರು ತಿಂಡಿ ತರಲು ಮನೆಗೆ ಹೋದರು . ಇತ್ತ ಅಣ್ಣಪ್ಪ ನಿಧಾನವಾಗಿ ಮರ ಏರತೊಡಗಿದ .  ಕೊನೆ ಹೊತ್ತ ಮರ ಅವನ ಭಾರ ತಾಳಲಾರದೆ ಗಾಳಿಗೆ ಅಲುಗಿತು . ನಿಧಾನವಾಗಿ ಎಲ್ಲಾ ಮರಗಳಿಗೂ ಔಷದಿ ಸಿಂಪಡಿಸತೊಡಗಿದ . ಒಂದರ್ಧ ಗಂಟೆಯ ನಂತರ ಭಟ್ಟರು ತಿಂಡಿ ತಂದರು .
" ಅಲ್ಲ್ರಯ್ಯ ಅಷ್ಟು ಹೇಳಿದೀನಿ ಆದರೂ ಆ ಭೂತ ಬನದ ಹತ್ರ ಎಲೆ-ಅಡಿಕೆ ಉಗುಳಿದಿರಲ್ಲೋ . ದಿನಾ ಪಂಚಗವ್ಯ ಹಾಕಿ ಶುಧ್ಧಿ ಮಾಡೋದೇ ನನ್ನ ಕೆಲ್ಸ ಆಗೋಯ್ತು " .
" ಇಲ್ಲ್ರಯ್ಯ ನಾವು ಆ ಬದಿಗೆ ಹೋಗಿಲ್ಲ " .
ಅದು ರಕ್ತ ಹೀರುವ , ಮಾಂಸ ಮಜ್ಜೆ ತಿನ್ನುವ ಭೂತವಾದರೆ ಯಾರದೋ ಉಗುಳಿಗೆ ಅಸಹ್ಯ ಪಟ್ಟುಕೊಳ್ಳುವ ಅಗತ್ಯವೇ ಇಲ್ಲ . ಒಂದು ವೇಳೆ ಅದು ಸೌಮ್ಯ ಭೂತವಾಗಿದ್ದರೆ ಅದಕ್ಕೆ ಕೋಪವೇ ಬರುವುದಿಲ್ಲ . ಆದರೂ ಸಹ ದೊಡ್ಡ ಅಪರಾಧವೇ ಆಗಿ ಹೋಯಿತೆಂದು ಎಲ್ಲರೂ ತಲೆ ಮೇಲೆ ಕೈ ಹೊತ್ತು ಕುಳಿತರು . ಈ ರಂಪಾಟ ಮುಗಿದು ಮತ್ತೆ ಮರ ಏರುವ ಹೊತ್ತಿಗೆ ಒಂದು ಗಂಟೆಯೇ ಆಗಿ ಹೋಯಿತು . ಗಾಳಿಯ ವೇಗ ದುಪ್ಪಟ್ಟು ಆಗಿತ್ತು .
ಮೂಲೆಯ ಮರವೊಂದಕ್ಕೆ ಔಷದಿ ಹೊಡೆಯುತ್ತಿದ್ದ ಅಣ್ಣಪ್ಪನ ಔಷದಿಯ ಧಾರೆ ಗಾಳಿಗೆ ವಾಲಿ ಬೆಟ್ಟದ ತಪ್ಪಲಿನಲ್ಲಿ ಗೂಡು ಕಟ್ಟಿದ್ದ ಹೆಜ್ಜೇನಿಗೆ ಹೋಗಿ ಬಡಿಯಿತು . ಕ್ಷಣಾರ್ಧದಲ್ಲೇ ನೂರಾರು ಸಾವಿರಾರು ಹುಳಗಳು ಮುಖ ಮೂತಿ ನೋಡದೆ ಕಚ್ಚತೊಡಗಿತು . ಮರದ ಕೆಳಗಿನ ಕೆಲಸಗಾರರು ಓಡಿ ಹೋದರು . ಆದರೆ ಅಣ್ಣಪ್ಪ ಮರದ ಮೇಲೆ ಬಂಧಿ ಆಗಿಹೋದ . ನೋವು ತಾಳಲಾರದೆ ಕೈ ಬಿಟ್ಟ . ಬಿಟ್ಟ ಮರುಕ್ಷಣವೇ ದೊಪ್ಪೆಂದು ನೆಲಕ್ಕೆ ಬಿದ್ದ . ಬಿದ್ದ ನಂತರವೂ ಅವನ ಮುಖವೂ ಕಾಣದಂತೆ ಹುಳಗಳು ಅವನನ್ನು ಮುತ್ತಿಕೊಂಡಿದ್ದವು . ಬಿದ್ದ ಎಷ್ಟೋ ಹೊತ್ತಿನ ನಂತರ ಅವನನ್ನು ಭಟ್ಟರ ಕಾರಿಗೆ ತಂದು ತುಂಬಿದರು .
" ಥೂ ಬಡ್ಡಿ ಮಕ್ಳ ಆ ಭೂತದ ತಂಟೆಗೆ ಹೋಗಬೇಡ್ರೋ ಅಂದ್ರೆ ನನ್ ಮಾತು ಎಲ್ಲಿ ಕೇಳ್ತಿರಾ ? " ಎನ್ನುತ್ತಾ ಭಟ್ಟರು ಕಾರಿನಲ್ಲಿ ಮಾಯವಾದರು .

2/5/16

ವಿಕಾಸ'ವಾದ' - ೧ ( ನಿದ್ದೆ ಬಂದಿಲ್ಲ )

" ಥೂ ಏನ್ ತಿಗಣೆ ಮಾರಾಯ . ರಾತ್ರಿ ನಿದ್ದೇನೆ ಬಂದಿಲ್ಲ ನಂಗೆ " , ಹೊಸದಾಗಿ ನನ್ನ ರೂಮಿಗೆ ಬಂದಿದ್ದ ಜೀವನ್ ತನ್ನ ಅಳಲು ತೋಡಿಕೊಳ್ಳುತ್ತಿದ್ದ .
" ನಿನ್ಕಿಂತ ಮೊದ್ಲೇ ಅವು ನನ್ ರೂಂ ಮೇಟ್ ಕಣಯ್ಯಾ " ಎಂದು ನಾನು ನಕ್ಕೆ . ಮೊದ-ಮೊದಲು ನನಗೂ ಹೀಗೆ ಆಗಿತ್ತು . ಹಾಸ್ಟೆಲ್ ಸೇರುವ ಮೊದಲು ನಾನು ತಿಗಣೆಗಳನ್ನು ನೋಡಿಯೇ ಇರಲಿಲ್ಲ . ಒಂದು ರಾತ್ರಿ ಏನೋ ಕಚ್ಚಿದಂತೆ ಅನಿಸಿತು , ಎದ್ದು ಲೈಟು ಹಾಕಿ ನೋಡಿದೆ . ಗೋಡೆಯ ಮೇಲೆ , ಹಾಸಿಗೆಯ ಮೇಲೆಲ್ಲಾ ತಿಗಣೆಗಳು ಹರಿದಾಡುತ್ತಿತ್ತು . ಆ ರಾತ್ರಿಯಂತೂ ಯಮ ಯಾತನೆ ಅನುಭವಿಸಿದೆ . ನನ್ನ ಪ್ರೇಯಸಿಯೂ ನನ್ನನ್ನು ಅಷ್ಟು ನಿದ್ದೆಗೆಡಿಸಿರಲಿಲ್ಲ . ನನಗಂತೂ ತಿಗಣೆಗಳ ಬಗ್ಗೆ ಎಳ್ಳಿನಷ್ಟೂ ಗೊತ್ತಿರಲಿಲ್ಲ . ನನ್ನ ಅಜ್ಞಾನ ಎಷ್ಟರ ಮಟ್ಟಿಗೆ ಇತ್ತೆಂದರೆ ಮಂಚ ಆಚೆ ಹಾಕಿ , ಹಾಸಿಗೆಯನ್ನು ಒಂದು ದಿನ ಬಿಸಿಲಿಗೆ ಹಾಕಿ ತಿಗಣೆಗಳನ್ನು ಓಡಿಸಿಬಿಟ್ಟೆ ಎಂದು ಹಿರಿ-ಹಿರಿ ಹಿಗ್ಗಿದ್ದೆ . ನನ್ನ ಅಜ್ಞಾನದ ಅರಿವು ನನಗಾಗಿದ್ದು ಮಧ್ಯ ರಾತ್ರಿ ಮತ್ತೆ ತಿಗಣೆಗಳು ನನಗೆ ಮುತ್ತಿಕ್ಕಿದಾಗ . ಕೇವಲ ಎರಡೇ ದಿನಕ್ಕೆ ನಾನು ಹೈರಾಣಾಗಿ ಹೋದೆ . ಈ ಕಾಲೇಜು , ಊರು , ರೂಮು ಎಲ್ಲಾ ಬಿಟ್ಟು ರಾತ್ರೋ ರಾತ್ರಿ ಊರಿಗೆ ಓಡಿ ಬಿಡೋಣ ಅನಿಸುತಿತ್ತು . ಆರಡಿಯ ದೇಹ ಯಕಶ್ಚಿತ್ ಹುಳಕ್ಕೆ ಹೆದರುವುದೇ ? , ಹೆದರಿತ್ತು . ಒಂದೆರಡು ದಿನ ನಿದ್ದೆ ಬಿಟ್ಟು ನೋಡಿ . ರಾತ್ರಿಯಿಡಿ ತಲೆ ಕೆದರಿಕೊಂಡು ತಿಗಣೆಗಳ ಬೇಟೆಯಾಡುತ್ತಿದ್ದೆ ,ಮಾರನೇ ದಿನ ಕ್ಲಾಸಿನಲ್ಲಿ ನಿದ್ದೆ ಹೊಡೆಯುತ್ತಿದ್ದೆ . ಯಾವ ಮಟ್ಟಕ್ಕೆ ನಾನು ಡೆಸ್ಪರೇಟ್ ಆಗಿದ್ದೆನೆಂದರೆ ಹಾಸಿಗೆಯನ್ನೇ ಸಂಪೂರ್ಣ ತ್ಯಜಿಸಿ ಚಾಪೆಯ ಮೇಲೆ ಮಲಗುವ ಜೈನ ಮುನಿಯಾದೆ . ನಂತರದ ದಿನಗಳಲ್ಲಿ ತಿಗಣೆಗಳ ಬಗ್ಗೆ ಓದತೊಡಗಿದೆ ,ಕೇವಲ ಅಂತಿತ್ತಾ ಓದಲ್ಲ . ಬರೋಬ್ಬರಿ ಒಂದು ವರ್ಷದಿಂದ ಓದುತ್ತಿದ್ದೇನೆ . ಈಗ ತಿಗಣೆಗಳು ನನ್ನ ಪ್ರಯೋಗದ ಗಿನ್ನಿ ಪಿಗ್ ಆಗಿವೆ .
ನಾವು ಓಡಾಡುವ ಸಿಟಿ ಬಸ್ಸಿನಿಂದ ಹಿಡಿದು , ವಿಮಾನದ ಕಾಕ್ಪಿಟ್ ನ ವರೆಗೆ ಇವು ಸರ್ವವ್ಯಾಪಿ . ಇವುಗಳು ನಮಗಿಂತ ಮೊದಲೇ ಭೂಮಿಯಲ್ಲಿ ಅವತರಿಸಿದೆ . ನನಗಿದ್ದ ದೊಡ್ಡ ಪ್ರಶ್ನೆಯೆಂದರೆ ಇವುಗಳು ಮನುಷ್ಯನ ರಕ್ತ ಹೀರಿ ಬದುಕುತ್ತವೆ ಎಂದಾದರೆ ಮನುಷ್ಯ ಅವತರಿಸುವ ಮೊದಲು ಇವುಗಳ ಆಹಾರ ಏನಾಗಿತ್ತು ? . ಸದ್ಯದ ಮಟ್ಟಿಗೆ ಪ್ರಾಣಿಗಳ ರಕ್ತ ಹೀರುತಿತ್ತು ಎಂದುಕೊಳ್ಳೋಣ . ಆದರೆ ಮನುಷ್ಯನನ್ನು ಬಿಟ್ಟರೆ ಬೇರ್ಯಾವ ಪ್ರಾಣಿಯೂ ಅಷ್ಟು ದೀರ್ಘವಾದ ನಿದ್ದೆ ಮಾಡುವುದಿಲ್ಲ . ಹಾಗಾದರೆ ಇವುಗಳು ಜೀವನ ಸಂಗ್ರಾಮದಲ್ಲಿ ಉಳಿದದ್ದು ಹೇಗೆ ? . ಮೊಗೆದಷ್ಟೂ ಕುತೂಹಲ ನನಗೆ ಕಾದಿತ್ತು . ಮೊದಲು ಡಾರ್ವಿನ್ ಬರೆದ ' ಆರಿಜಿನ್ ಆಫ್ ಸ್ಪಿಶೀಸ್ ' ಪುಸ್ತಕ ಕೊಂಡುತಂದೆ .
ನನಗೆ ಈಗಲೂ ಹೈಸ್ಕೂಲಿನಲ್ಲಿ ಬಯಾಲಜಿ ಪಾಠ ಮಾಡಿದ ಶಿಕ್ಷಕರ ಮೇಲೆ ಕೋಪವಿದೆ . ಅಂತಹ ಅದ್ಭುತ ವಿಷಯವನ್ನೂ ಬಹಳ ಬೋರ್ ಎನಿಸುವಂತೆ ಮಾಡಿಬಿಟ್ಟಿದ್ದರು .  ನಮ್ಮ ಶಿಕ್ಷಣ ಪದ್ಧತಿಯೇ ಸರಿಯಿಲ್ಲ ಎಂದು ನಂಬುವವನು ನಾನು . ಜಗತ್ತನ್ನೇ ನಮ್ಮ ತರಗತಿ ಮಾಡಿ ನಮಗೆ ಸ್ಪೂರ್ತಿ ತುಂಬುವ ಶಿಕ್ಷಕರು ಇಲ್ಲಿಲ್ಲ . ಪುಸ್ತಕದಲ್ಲಿ ಇರುವುದನ್ನು ಪಾಠ ಮಾಡಿ ,ಸಂಜೆ ಸೈನು ಹಾಕಿ ಮನೆಗೆ ಓಡುತ್ತಾರೆ .  ಇಂತಹ ಪದ್ಧತಿಯಿಂದ ಮಕ್ಕಳಿಗೆ ಅಕ್ಷರವೆಂದರೇ ಅಲರ್ಜಿ ಬರುವ ಹಾಗೆ ಮಾಡಿದ್ದಾರೆ . ಈಗಂದು ಏನು ಪ್ರಯೋಜನ ಬಿಡಿ ......
ತಿಗಣೆಗಳಲ್ಲಿ ಇರುವಷ್ಟು ಪ್ರಬೇಧಗಳು ಮತ್ಯಾವ ಪ್ರಾಣಿಗಳಲ್ಲೂ ನಿಮಗೆ ಸಿಗಲಾರದು . ವಿಕಾಸವಾದದ ತಿರುವುಗಳಲ್ಲಿ ತಿಗಣೆಗಳದ್ದು ಬಹಳ ದೊಡ್ಡ ಪಾತ್ರ . ಮನುಷ್ಯ ಇತಿಹಾಸದಲ್ಲಿ ತಿಗಣೆಗಳ ಮೊದಲ ಉಲ್ಲೇಖ ಸಿಗುವುದು ಗ್ರೀಸ್ ನಾಗರೀಕತೆಯಲ್ಲಿ , ಅರಿಸ್ಟಾಟಲ್ ಸಹ ಇದರ ಬಗ್ಗೆ ಮಾತನಾಡುತ್ತಿದ್ದ ಎಂದರೆ ನಿಮಗೆ ಆಶ್ಚರ್ಯವಾಗಬಹುದು . ರೋಮನ್ನರು ಕಿವಿಯ ಸೋಂಕಿಗೆ ತಿಗಣೆಗಳನ್ನು ಔಷಧವಾಗಿ ಕಂಡುಕೊಂಡಿದ್ದರು . ಆದರೂ ತಿಗಣೆಗಳು ಸರ್ವವ್ಯಾಪಿಯಾಗಿರಲಿಲ್ಲ . ಇಂಗ್ಲೆಂಡಿನಲ್ಲಿ ಮೊದಲ ತಿಗಣೆ ವರದಿಯಾಗಿದ್ದು ಸಾವಿರದ ಆರುನೂರರ ಆಸುಪಾಸಿನಲ್ಲಿ , ಹೊರದೇಶಗಳಿಂದ ತಂದ ಮರ-ಮುಟ್ಟುಗಳಿಂದ  ಇಂಗ್ಲೆಂಡಿಗೆ ಕಾಲಿಟ್ಟಿತು ಎಂದು ನಂಬಲಾಗಿದೆ .
ಡಾರ್ವಿನ್ ಹೇಳುವ  ಪ್ರಕಾರ ತಿಗಣೆಗಳು ಸೊಳ್ಳೆಯಿಂದ ವಿಕಾಸವಾಗಿವೆ . ನೀವು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ , ತಿಗಣೆಗಳ ಕೆಲವು ಪ್ರಬೇಧಗಳಲ್ಲಿ ಇನ್ನೂ ರೆಕ್ಕೆಗಳನ್ನು ಕಾಣಬಹುದು. ಆದರೆ ರೆಕ್ಕೆಗಳು ದುರ್ಬಲ , ತಿಗಣೆಗಳು ಹಾರಲಾರವು . ತಿಗಣೆಗಳು ಆರು ಹಂತಗಳಲ್ಲಿ ಬೆಳೆಯುತ್ತವೆ , ಪ್ರತಿ ಹಂತದಲ್ಲೂ ತನ್ನ ದೇಹದ ಹೊರ ಪದರವನ್ನು ಕಳಚಿ ಹೊಸ ಪದರ ಬೆಳೆಸಿಕೊಳ್ಳುತ್ತದೆ .ಇವುಗಳು ಹೆಚ್ಚಾಗಿ  ರಾತ್ರಿಯ ಹೊತ್ತೇ ಕಾಣಿಸಿಕೊಂಡರೂ ಇವು ನಿಶಾಚರಿಗಳಲ್ಲ .,ಕೆಲವೊಮ್ಮೆ ಹಗಲು ಹೊತ್ತಿನಲ್ಲಿಯೂ ಕಾಣಿಸಿಕೊಳ್ಳುತ್ತವೆ .
ಒಮ್ಮೆ ಇವು ಬಂದು ಸೇರಿಕೊಂಡರೆ ನಿರ್ಮೂಲನೆ ಮಾಡುವುದು ಅಸಾಧ್ಯ . ಯಾವುದಾದರೂ ಸಂಧಿಯಲ್ಲಿ ಅಡಗಿ ಕುಳಿತಿರುತ್ತದೆ . ಇದರ  ಚಪ್ಪಟೆ ದೇಹ ಅಡಗಲು ಸಹಾಯಕಾರಿ , ಹಾಗೂ ಮೈ ಮೇಲೆ ಹರಿದಾಡಿದರೆ ಗೊತ್ತೇ ಆಗುವುದಿಲ್ಲ .ನಾನಂತೂ ಒಮ್ಮೆ ಸ್ವಿಚ್ ಬೋರ್ಡೆಲ್ಲಾ ಬಿಚ್ಚಿ ಮರಿಗಳನ್ನು ಸುಟ್ಟುಹಾಕಿದ್ದೇನೆ . ನಾನು ಅಂಟಿಸಿದ್ದ ಪೇಂಟಿಂಗ್ ಹಿಂದೆ ಎಲ್ಲಾ ಮೊಟ್ಟೆಗಳು ಸಿಕ್ಕಿದ್ದವು . ಅಷ್ಟರ ಮಟ್ಟಿಗೆ ಇವು ಸರ್ವವ್ಯಾಪಿ .  ಇವು ರಕ್ತ  ಹೀರುವುದು ಐದಾರು ದಿನಗಳಿಗೊಮ್ಮೆ . ಒಮ್ಮೆ ಹೊರಬಂದು ರಕ್ತ ಹೀರಿ ಮತ್ತೆ ಅಡಗಿಬಿಡುತ್ತದೆ . ಮರಿಗಳ ದೇಹ ಪಾರದರ್ಶಕವಾಗಿರುತ್ತದೆ , ರಕ್ತ ಹೀರಿದಾಗ ದೇಹ ಕೆಂಪಗೆ ಕಾಣುತ್ತದೆ ಹಾಗೂ ಅದನ್ನು ಜೀರ್ಣಿಸಿಕೊಂಡಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ .
ಬಹಳ ಕುತೂಹಲಕಾರಿ ಅಂಶವೆಂದರೆ ಒಮ್ಮೆ ತಿಗಣೆಗಳು ಸಂಪೂರ್ಣ ಅವಸಾನದ ಅಂಚಿಗೆ ಹೋಗಿತ್ತು . ಡಿಡಿಟಿ ಯ ಅತಿಯಾದ ಬಳಕೆ ಇದರ ಮೇಲೆ ದುಷ್ಪರಿಣಾಮ ಬೀರಿತ್ತು . ಸಾವಿರದ ಒಂಬೈನೂರ ನಲವತ್ತರ ಈಚೆಗೆ ಮತ್ತೆ ತಿಗಣೆಗಳು ಕಾಣಿಸಿಕೊಂಡವು . ಈಗ ಕಾಣಸಿಗುವ ತಿಗಣೆಗಳು ಡಿಡಿಟಿ ಗೆ ಪ್ರತಿರೋಧಕ ಶಕ್ತಿ ಹೊಂದಿದೆ . ಡಿಡಿಟಿ ಸ್ಪ್ರೇ ಮಾಡುವುದರಿಂದ ತಿಗಣೆಗಳು ಸಾಯಲಾರವು .
ತಿಗಣೆ ಕಚ್ಚುವುದರಿಂದ ಚರ್ಮದ ಅಲರ್ಜಿಯ ಜೊತೆಗೆ ಮನೋರೋಗಗಳು ಕಾಣಿಸಿಕೊಳ್ಳಬಹುದು . ವಿಶೇಷವೆಂದರೆ ಶೇಖಡಾ ಇಪ್ಪತ್ತರಷ್ಟು ಜನಗಳಿಗೆ ಏನೂ ಆಗುವುದಿಲ್ಲ . ಕಚ್ಚುವ ಸಮಯದಲ್ಲಿ ಹೆಪಾರಿನ್ ಎನ್ನುವ ಕೆಮಿಕಲ್ ಉತ್ಪತ್ತಿ ಮಾಡುವುದರಿಂದ ನಮಗೆ ಗೊತ್ತೂ ಆಗುವುದಿಲ್ಲ ಹಾಗೂ ಆ ಭಾಗದಲ್ಲಿ ರಕ್ತದ ಚಲನೆ ಹೆಚ್ಚಿಸಿ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ . ನನಗಂತೂ ಇವುಗಳು ಮೈ ಮೇಲೆ ಹರಿದಾಡಿದರೂ ಸಾಕು ಚರ್ಮ ಕೆಂಪಗಾಗಿ ಬಿಡುತ್ತದೆ. ಮನೋರೋಗ ಇನ್ನೂ ಕಾಣಿಸಿಕೊಂಡಿಲ್ಲ ಬಿಡಿ .
ಬ್ಯಾಟ್ ಬಗ್ ಎಂಬ ಇನ್ನೊಂದು ಪ್ರಬೇಧ ಇದೆ . ಅವುಗಳು ಗುಹೆಯಲ್ಲಿರುವ  ಬಾವಲಿಗಳ ರಕ್ತ ಹೀರುತ್ತವೆ . ಮುಖ್ಯ ವ್ಯತ್ಯಾಸವೆಂದರೆ ಬ್ಯಾಟ್ ಬಗ್ ರಾತ್ರಿ ಕಾಣಿಸಿಕೊಳ್ಳುವುದಿಲ್ಲ ಕಾರಣ ಬಾವಲಿಗಳು ಹಗಲು ಹೊತ್ತು ಮಲಗುತ್ತವೆ . ಬ್ಯಾಟ್ ಬಗ್ ಗೂ ಹಾಗೂ ತಿಗಣೆಗೂ ಯಾವ ರೀತಿಯ ಸಂಬಂಧ ಎಂದು ಸಂಶೋಧನೆಗಳು ನಡೆಯುತ್ತಿವೆ . ಇವೆರಡರ ಗ್ಯಾಮೆಟ್ಗಳು ಸೇರುವುದಿಲ್ಲ . ಸಾವಿರಾರು ವರ್ಷಗಳ ಕಾಲ ಇವೆರಡೂ ಬೇರ್ಪಟ್ಟಿತ್ತು ಎಂಬುದನ್ನು ಇದು ಸೂಚಿಸುತ್ತದೆ .
ಐವತ್ತು ಡಿಗ್ರಿಗಿಂತ ಹೆಚ್ಚು ತಾಪಮಾನದಲ್ಲಿ ತಿಗಣೆಗಳು ಕೇವಲ ಎರಡು ದಿನ ಬದುಕಬಲ್ಲವು . ಮೈನಸ್ ಮೂವತ್ತೆರಡು ಡಿಗ್ರಿಯಲ್ಲಿ ಕೇವಲ ಎರಡು ನಿಮಿಷ ಬದುಕಬಲ್ಲವು . ಸದ್ಯದ ಮಟ್ಟಿಗೆ ಯಾವ ಕೆಮಿಕಲ್ ಗಳೂ ತಿಗಣೆಯನ್ನು ನಿರ್ಮೂಲನೆ ಮಾಡಲಾರವು . ಕೆಲವು ಫ಼ಂಗೈ ಇವುಗಳನ್ನು ನಾಶಪಡಿಸುತ್ತದಾದರೂ ಇನ್ನೂ ಸಂಶೋಧನೆಗಳು ನಡೆಯಬೇಕಾಗಿದೆ .
ನಾವು ಒಂದು ಚೌಕಟ್ಟು ಹಾಕಿಕೊಂಡು ಅದರೊಳಗೇ ಇದ್ದು ಬಿಡುತ್ತೇವೆ . ನಮ್ಮ ಸುತ್ತಲೂ ಕಾಣುವ ವಿಷಯಗಳನ್ನು ವೈಜ್ಞಾನಿಕವಾಗಿ ನೋಡುವ ಗೋಜಿಗೇ ನಾವು ಹೋಗುವುದಿಲ್ಲ . ಇಡೀ ಭೂಮಿಯೇ ಒಂದು ಪ್ರಯೋಗಶಾಲೆ , ಭೂಮಿ ಸದಾ ಪ್ರಯೋಗ ಮಾಡುತ್ತಲೇ ಇರುತ್ತದೆ . ಇಲ್ಲಿ ಬದುಕುಳಿಯುವುದು ಬಲಿಷ್ಟಶಾಲಿಗಳಲ್ಲ , ಪ್ರಕೃತಿಗೆ ಹೊಂದಿಕೊಳ್ಳುವವರು ಮಾತ್ರ . ನೆನಪಿಡಿ ಭೂಮಿಯ ಪ್ರಯೋಗಶಾಲೆಯ ಒಳಗೆ ನಾವೆಲ್ಲಾ ಗಿನ್ನಿ ಪಿಗ್ ಗಳು .