6/2/16

ವೈದ್ಯೋ ನಾರಾಯಣೋ ಹರಿ

'ಆರೋಗ್ಯವೇ ಭಾಗ್ಯ ' ಈ ಮಾತು ನೂರಕ್ಕೆ ನೂರು ನಿಜ . ಅಲ್ಲಲ್ಲ ನೂರಕ್ಕೆ ತೊಂಬತೊಂಬತ್ತರಷ್ಟು ನಿಜ . ಯಾಕೆ ಅಂತ ಕೇಳ್ತಾ ಇದೀರಾ ? . ' ಅನಾರೋಗ್ಯವೇ ಭಾಗ್ಯ ' ವೈದ್ಯ ವೃತ್ತಿಯಲ್ಲಿರುವವರಿಗೆ . ಹಳೆಯದೊಂದು ಜೋಕ್ ಇದೆ . ಲಾಯರ್ ಯಾವಾಗಲೂ ನಾವು ತಪ್ಪು ಮಾಡಲಿ ಎಂದು ಬಯಸುತ್ತಾನೆ , ವೈದ್ಯ ಯಾವಾಗಲೂ ನಮಗೆ ಖಾಯಿಲೆ ಬರಲಿ ಎಂದು ಬಯಸುತ್ತಾನೆ . ಆದರೆ ನಾವು ಶ್ರೀಮಂತರಾಗಲಿ ಎಂದು ಬಯಸುವುದು ಕಳ್ಳ ಮಾತ್ರ . 
ನಾನು ಮೊದಲಿಂದಲೂ ಹಾಗೆಯೇ , ಸಣ್ಣ ಖಾಯಿಲೆ ಬಂದರೂ ತಲೆ ಕೆಡಿಸಿಕೊಂಡು ಕುಳಿತುಕೊಳ್ಳುತ್ತೇನೆ . ಈ ಸಲವೂ ಆಗಿದ್ದು ಹಾಗೆಯೇ . ಬೆಳಿಗ್ಗೆ ಏಳುವ ಹೊತ್ತಿಗೆ ಕಣ್ಣುಗಳು ಆಶೀರ್ವಾದ್ ಗೋಧಿ ಹಿಟ್ಟಿನ ಜಾಹೀರಾತಿನಲ್ಲಿ ತೋರಿಸುವ ಚಪಾತಿಯಂತೆ ಊದಿಕೊಂಡಿತ್ತು . ಇದ್ಯಾವ ಹೊಸ ಖಾಯಿಲೆ ? . ಕಣ್ಣು ಸರಿಯಾಗೇ ಕಾಣುತಿತ್ತು , ಸ್ವಲ್ಪ ನಿರಾಳ . ಮುಖ ತೊಳೆಯಲೂ ಬಾರದು ಅಸಾಧ್ಯ ನೋವು . ಊರಿನಲ್ಲಿ ಆಗಿದ್ದರೆ ಅಪ್ಪನ ಎದುರಿಗೆ ಹೋಗುತ್ತಿದಂತೆ " ಬಾ ಡಾಕ್ಟರ್ ಹತ್ರ ಹೋಪನ " ಎಂದು ತಕ್ಷಣವೇ ಹೊರಟಾಗುತಿತ್ತು . ಈಗ ಕಡಿಮೆಯಾಗಬಹುದು , ಇನ್ನೊಂದು ಸ್ವಲ್ಪ ಹೊತ್ತು ಕಾಯೋಣ ಎಂದು ಸಮಯವನ್ನು ಸಾಯಿಸತೊಡಗಿದೆ . ನನ್ನ ನಿರೀಕ್ಷೆ ಸುಳ್ಳು ಮಾಡುತ್ತಾ ಕಣ್ಣು ಊದಿಕೊಳ್ಳುತ್ತಲೇ ಹೋಯಿತು . ಇನ್ನು ಹಳೆ ಗಂಡನ ಪಾದವೇ ಗತಿ , ಡಾಕ್ಟರ್ ಹತ್ತಿರ ತೋರಿಸಲೇ ಬೇಕು . 
ಸಾಗರದಲ್ಲಿ ಆಗಿದ್ದರೆ ಮತ್ತೊಂದು ಆಯ್ಕೆಯೇ ಇಲ್ಲದೆ ಹೆಗಡೆ ಡಾಕ್ಟರ್ ಹತ್ತಿರ ಓಡುತ್ತಿದ್ದೆ . ಆ ನಿಧಾನದ ಮಾತು , ಗಂಟೆಗಟ್ಟಲೆ ಕಥೆ ಹೊಡೆಯುತ್ತಾ ಹಾಯಾಗಿ ಚಿಕಿತ್ಸೆ ನೀಡುವುದು ಅವರ ಸ್ಟೈಲ್ . ನಾನು ಹುಟ್ಟುವ ಹೊತ್ತಿಗೆ ಮಂಜಪ್ಪ ಡಾಕ್ಟರ್ ಸ್ವಲ್ಪ ನೇಪತ್ಯಕ್ಕೆ ಸರಿದಿದ್ದರು . ಅವರು M.B.B.S ಮಾಡಿದ ವೈದ್ಯರೇನಲ್ಲ , ಆದರೆ ಖಾಯಿಲೆ ಬಂದರೆ ಅವರೇ ಔಷದಿ ಕೊಡಬೇಕು ಎಂಬ ಅಲಿಖಿತ ನಿಯಮವೊಂದು ಸಾಗರದಲ್ಲಿ ಇತ್ತು . ಈಗ ಅವರು ಕ್ಲಿನಿಕ್ ಗೆ ಬರದೇ ಹೋದರೂ ಮನೆಗೇ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಎಷ್ಟೋ ಜನರು ಈಗಲೂ ಇದ್ದಾರೆ . ಅವರ ಕ್ಲಿನಿಕ್ ಬಗ್ಗೆ ಹೇಳದಿದ್ದರೆ ತಪ್ಪಾದೀತು . ಬಹುಶಃ ಅದರ ಕಸ ಹೊಡೆದು ದಶಕಗಳೇ ಕಳೆಯಿಯೇನೋ ? . ಸುಮ್ಮನೆ ತಮಾಷೆಯಾಗಿ ಹೇಳಬೇಕೆಂದರೆ ಕಾಶಿಯ ಘಾಟ್ ನ ಬೆಂಕಿ ಆರುವುದೂ ಒಂದೇ , ಮಂಜಪ್ಪ ಡಾಕ್ಟರ್ ಹತ್ತಿರ ಇರುವ ಥರ್ಮಾಮೀಟರ್ ಖಾಲಿ ಕೂರುವುದೂ ಒಂದೇ . ಅಷ್ಟರ ಮಟ್ಟಿಗೆ ಅವರ ಶಾಪ್ ತುಂಬಿರುತ್ತಿತ್ತು . ಬಾಲ್ಯದಲ್ಲಿ ಒಮ್ಮೆ ನನಗೆ ಜ್ವರ ಬಂದಿತ್ತು , ಯಾರ ಔಷದಿಗೂ ಬಗ್ಗಿರಲಿಲ್ಲ , ಮಂಜಪ್ಪ ಡಾಕ್ಟರ್ ಅವರ ಸುಣ್ಣದ ಬಣ್ಣದ ಮಾತ್ರೆಗೆ ಜ್ವರ ವಾಸಿಯಾಗಿತ್ತು . 
ಮತ್ತೊಬ್ಬ ಡಾಕ್ಟರ್ , ತಾಳಗುಪ್ಪದ ಹೆಗಡೆ . ಒಂತರ ವಿಚಿತ್ರ ಮನುಷ್ಯ . ಸಂಜೆಯ ಮೇಲೆ ಪೇಷಂಟ್ ನೋಡುತ್ತಿರಲಿಲ್ಲ . ನೀವು ಬೇಕಿದ್ದರೆ ಜೀವವೇ ಹೋಗುವ ಸ್ಥಿತಿಯಲ್ಲೇ ಇರಿ , ಉಹುಂ ಚಿಕಿತ್ಸೆ ಸಿಗುವುದಿಲ್ಲ . ಎಷ್ಟೋ ಬಾರಿ ಅವರೇ ಹೊರಬಂದು ," ಮುಂದೆ ಹೋಗ್ರಿ "ಎಂದದ್ದಿದೆ . 
ಹೇಳಲು ಹೊರಟ್ಟಿದ್ದು ಇಷ್ಟೇ , ಚಿಕಿತ್ಸೆ ಬೇಕು ಎಂದರೆ ಕಾಯಲೇ ಬೇಕು . ಡಾಕ್ಟರ್ ಹತ್ತಿರ ಹೋಗುವುದು ಖಂಡಿತ , ಎಲ್ಲಿಗೆ ? . ಸಣ್ಣ ಪುಟ್ಟ ಅಳಲೆಕಾಯಿ ಪಂಡಿತರ ಹತ್ತಿರ ಹೋಗಲಾದೀತೆ ? ಪ್ರತಿಷ್ಠಿತ ಆಸ್ಪತ್ರೆಗೆ ಹೋದೆ . ಹೆಸರು ಅನವಶ್ಯಕ . ಹತ್ತು ಗಂಟೆಗೇ ಅಲ್ಲಿದ್ದೆವು . ಹನ್ನೊಂದುವರೆಗೆ ಡಾಕ್ಟರ್ ಬರುವುದು ಎಂದು ತಿಳಿಯಿತು . ಕುಳಿತ್ತಿದ್ದಾಯಿತು . ಆಗಷ್ಟೇ ಅವರು M.B.B.S ಸೇರಿ ಮುಗಿಸಿ ಬರುವರಿದ್ದರೆನೋ ? . ಸೀರಿಯಸ್ ಖಾಯಿಲೆ ಇದ್ದಿದ್ದರೆ ಸತ್ತೇ ಹೋಗುತ್ತಿದ್ದೆ . ಮೊದಲೇ ನಾನು ಪುಕ್ಕಲ.  ಎಬೋಲ , ಕ್ಯಾನ್ಸರ್ ಇದೆಲ್ಲದರ ಬಗ್ಗೆ ಅದಾಗಲೇ ಗೂಗಲ್ ನಲ್ಲಿ ಎರಡು ಬಾರಿ ಓದಿ ಮುಗಿಸಿದ್ದೆ . ಯಾವ ಖಾಯಿಲೆಯ ಬಗ್ಗೆ ಓದಿದರೂ ಇದೇ ನನಗೆ ಆಗಿರುವುದು ಅನಿಸುತಿತ್ತು . 
ಹನ್ನೆರಡೂವರೆಗೆ ಡಾಕ್ಟರ್ ಬಂದರು . ಎಂತಹ ಸಮಯ ಪ್ರಜ್ಞೆ ..... . 
" ಏನಯ್ಯ ಸಮಸ್ಯೆ ? "
" ನನಗೆ ಗೊತ್ತಿದ್ದರೆ ನಾನ್ಯಾಕೆ ನಿನ್ನ ಹತ್ರ ಬರ್ತಿದ್ದೆ ? " (ಮನಸ್ಸಿನಲ್ಲೇ ಅಂದುಕೊಂಡೆ. )
" ಗೊತ್ತಿಲ್ಲ "
" ಏನಾದ್ರೂ ಹೊರಗಡೆ ಫುಡ್ ತಿಂದ್ರ ? ಅಥವಾ ಆಚೆ ಎಲ್ಲಾದ್ರು ಹೋಗಿದ್ರ ? "
" ಇಲ್ಲ "
ಮೊದಲು ಈ ರೀತಿ ಆಗಿತ್ತಾ ? "
" ಇಲ್ಲ " 
ಟಾರ್ಚ್ ತೆಗೆದು ಕೊಂಡು ತಲ್ಲೀನತೆಯಿಂದ ಪರೀಕ್ಷಿಸ ತೊಡಗಿದರು . ಗಂಭೀರ ಮುಖ ಭಾವ . ಖಂಡಿತ ನಾನು ಬದುಕುವುದಿಲ್ಲ , ನಿರ್ಧರಿಸಿಕೊಂಡುಬಿಟ್ಟೆ . 
" ಅಯ್ಯೋ ನನಗಿನ್ನೂ ಓದು ಮುಗಿದಿಲ್ಲ , ಮದುವೆ ಆಗಿಲ್ಲ , ಜೀವನದಲ್ಲಿ ಏನೇನೋ ಸಾಧಿಸಬೇಕು........ " ( ಎಕೋ ಎಫೆಕ್ಟ್ ಅಲ್ಲಿ ಮನಸ್ಸು ಕೂಗುತಿತ್ತು . ) 
" ಅಲರ್ಜಿ ಆಗಿದೆ ಅಷ್ಟೇ , ಪಾರ್ಥೇನಿಯಂ ಇಂದ ಆಗಿರಬಹುದು "
ಜೀವ ಬಂದಿತ್ತು " ಹಾಂ ಹೌದು ಮೊನ್ನೆ ಕ್ರಿಕೆಟ್ ಆಡಿದ್ದೆ , ಬಾಲು ಪೊದೆಯೊಳಗೆ ಹೋಗಿತ್ತು ....... " 
ನನಗೆ ಅರ್ಥವಾಗದ ಲಿಪಿಯಲ್ಲಿ ಪ್ರಿಸ್ಕ್ರಿಪ್ಷನ್ ಬರೆದು ಕೈಗಿಟ್ಟರು . ಮಾತ್ರೆ ತಿಂದು , ಲೋಷನ್ ಹಚ್ಚಿ , ಕೋಳಿ ನಿದ್ದೆ ಮಾಡಿ ಎದ್ದೆ . ಆಶಿರ್ವಾದ್ ಚಪಾತಿ , ನಮ್ಮ ಹಾಸ್ಟೆಲ್ ನ ಒಣಕಲು ಚಪಾತಿಯಾಗಿತ್ತು . ಅಂತೂ ಇಂತೂ ಸಾವಿನ ದವಡೆಯಿಂದ ಪಾರಾದೆ . ಬದುಕಿದೆಯಾ ಬಡ ಜೀವವೇ ಎಂದುಕೊಂಡೆ . ಯಾವ ಜನ್ಮದಲ್ಲಿ ಅದೇನು ಪಾಪ ಮಾಡಿದ್ದೇನೋ ಏನೋ ? ಆ ಡಾಕ್ಟರ್ ನ ಮುನ್ನೂರು ರೂಪಾಯಿಯ ಋಣ ನನ್ನ ಮೇಲೆ ಇತ್ತು . ಈ ರೀತಿ ತೀರಿಸಿದೆ . 
ಎಷ್ಟೋ ಬಾರಿ ನಾನು ಕಣ್ಣಾರೆ ಕಂಡಿದ್ದೇನೆ . ಕೆಲ ಡಾಕ್ಟರ್ ಸತ್ತು ಹೋದಾಗ , ನಮ್ಮ ಪಾಲಿನ ದೇವರೇ ಸತ್ತ ಎಂದು ಗೋಳಾಡಿದ ಉದಾಹರಣೆಗಳಿವೆ . Appointment ತೆಗೆದುಕೊಂಡು  ಕಾಯುವ ಬದಲು ನನ್ನ ಬಳಿ ಒಳ್ಳೆಯ ಐಡಿಯಾ ಇದೆ , ನೀವೇ M.B.B.S ಮಾಡಿ ಬಿಡಿ . 
ದಿನವಿಡೀ ಪ್ರಿಸ್ಕ್ರಿಪ್ಷನ್ ಹರಿಯುವುದು ಸುಲಭದ ಕೆಲಸವಲ್ಲ . ಅಷ್ಟಲ್ಲದೇ ಹೇಳಿದ್ದಾರೆಯೇ ?
ವೈದ್ಯೋ ನಾರಾಯಣೋ ' ಹರಿ ' .......