2/11/15

ನನ್ನ ದೇಶ ನನ್ನ ಜನ -೨(ನಾಗ ನೃತ್ಯ )

ಭತ್ತದ ಗದ್ದೆಯಲ್ಲಿ ತೋಟ ಮಾಡಿದ್ದರಿಂದ ದಿನಕ್ಕೊಂದು ಸಮಸ್ಯೆ ತಲೆದೋರುತಿತ್ತು . ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು , ತಕ್ಷಣವೇ ಅಡಿಕೆಗೆ ಔಷಧಿ ಸಿಂಪಡಿಸಬೇಕಿತ್ತು . ನಾರ್ವೆಯ ನಾಗನಿಗೆ ಹೇಳಿ ಕಳಿಸಿ ಹದಿನೈದು ದಿನವೇ ಆಗಿ ಹೋಗಿತ್ತು ,ಅದ್ಯಾವ ಹುತ್ತದಲ್ಲಿ ಅವನು ಅಡಗುತ್ತಾನೋ ದೇವರೇ ಬಲ್ಲ . ಅವ ಅಡಗಿದನೆಂದರೆ ದೇವರಿಗೂ ಅವನು ಸಿಗುವ ಆಸಾಮಿಯಲ್ಲ . ನನ್ನ ತೋಟ ದಿನದಿಂದ ದಿನಕ್ಕೆ  ಶೋಚನೀಯ ಸ್ಥಿತಿ ತಲುಪುತ್ತಿತ್ತು . ಎಲ್ಲಿ ಏನೇನು ಆಗಿದೆ ಎಂದು ನೋಡಲು ದಿನವೂ ತೋಟ ಸುತ್ತುವುದು ನನ್ನ ಹವ್ಯಾಸ . ನಿಜ ಹೇಳಬೇಕು ಎಂದರೆ ಅದು ನೆಪ ಮಾತ್ರ , ನಾನು ಪೇಟೆ ಬಿಟ್ಟು ಮಲೆನಾಡಿಗೆ ಬಂದಿದ್ದೇ ಹೇಗೆ ಬೇಕೋ ಹಾಗೆ ಕಾಡು ಅಲೆದುಕೊಂಡು ಯಾವುದೇ ಚಿಂತೆ ಇಲ್ಲದೆ ಬದುಕಬಹುದೆಂದು . 30X40 ಸೈಟಿನಲ್ಲಿ ಮನೆ ಕಟ್ಟಿ ಕಿಟಕಿಗಳನ್ನು ರಸ್ತೆಗೇ ತೆರೆದು ಕುಳಿತುಕೊಳ್ಳುವ ಸಿಟಿಯ ಆ ಯಾಂತ್ರಿಕ ಜೀವನ ನನ್ನಿಂದ ಆಗದು .
ಇಲ್ಲಿ ನನ್ನೆಲ್ಲಾ ಇಂತಹ ಹುಚ್ಚುತನಕ್ಕೆ ಜೊತೆಯಾಗುತ್ತಿದ್ದವನು ನಾಗ . ಅವನ ಬಗ್ಗೆ 'ಇದಂ ಇತ್ತಂ ' ಎಂದು ಹೇಳುವುದು ಕಷ್ಟ . ಆತ ಹೇಳುವ ಪ್ರಕಾರ ಆತನ ವಯಸ್ಸು ನೂರೈವತ್ತು ವರ್ಷ ಇರಬಹುದು , ನನ್ನಜ್ಜ ಮಗುವಾಗಿದ್ದಾಗಲೇ ಅವನಿಗೆ ಗಡ್ಡ ಬಂದಿತ್ತಂತೆ .ಆದರೆ ಆತ ಗಿಡ-ಮೂಲಿಕೆ ಔಷಧಗಳ ಭಂಡಾರ . ಅವನ ಕೆಲವೊಂದು ಪ್ರಸಂಗಗಳು ನನ್ನ ಮನಸ್ಸಿನಲ್ಲಿ ಇನ್ನೂ ನಗು ತರಿಸುತ್ತವೆ .
ಒಮ್ಮೆ ಅವನು ಕೆಲಸಕ್ಕೆ  ಬಂದವನೇ ಬಾಲ ಸುಟ್ಟ  ಬೆಕ್ಕಿನಂತೆ ಆಡುತ್ತಿದ್ದ . ಯಾವಾಗಲೂ ಕಾಪಿ ಎಂದು ಕುಣಿಯುವವನು ಅವತ್ತು ಕಾಪಿಯೇ ಬೇಡ ಎನ್ನುವುದೇ ! .
"ಏನಾಯ್ತೋ ನಾಗ " ಎಂದರೂ ಬಾಯಿ ಬಿಡುತ್ತಿಲ್ಲ . ನಂತರ ನಿಧಾನವಾಗಿ ಬಾಯಿ ಬಿಡಿಸಿದೆ .
ಪ್ರತಿ ದಿನ ಅವನು ಬೂದಿಯಲ್ಲಿ ಹಲ್ಲು ತಿಕ್ಕುವುದಂತೆ , ಅಂದೂ ಸಹ ಬೆಳಿಗ್ಗೆ ಎದ್ದವನೇ ನಿದ್ದೆಗಣ್ಣಿನಲ್ಲಿ ಬೂದಿಗೆ ಕೈ ಹಾಕಿದನಂತೆ . ಬೂದಿ ಮೇಣ ಮೇಣವಾಗಿ ಅನಿಸಿತಂತೆ . ಮಗಳಿಗೆ ಕೇಳಿದಾಗ
" ಹೊನ್ನೆ ಮರದ್ ಕಟ್ಗೆ ಕಾಣ್ತಿತೆ , ಸುಮ್ನೆ ಹಲ್ ತಿಕ್ಕು " ಎಂದಳಂತೆ . ಹಲ್ಲು ತಿಕ್ಕಿದ ಮೇಲೆ ಬೆಕ್ಕು ಒಲೆಯೊಳಗೆ ಹೇತಿದ್ದು ಕಾಣಿಸಿತಂತೆ . ಆಸಾಮಿ ಎರಡು ದಿನ ಊಟ ಮುಟ್ಟಲಿಲ್ಲ .
ಇನ್ನು ಅವನ ಭಾಷೆಯೋ ? ಅದನ್ನು ಪದಗಳಲ್ಲಿ ವಿವರಿಸುವುದು ಕಷ್ಟ ಬಿಡಿ . ಒಮ್ಮೆ ಆತ ಅಡಿಕೆ ಮರ ಹತ್ತಿದ್ದ , ಮೇಲಿನಿಂದ
" ಪಿಂಗ ಕೊಡಿ ಸೋಮಿ " ಎಂದು ಬಡಿದುಕೊಳ್ಳತೊಡಗಿದ . ಅದ್ಯಾವ ಭಾಷೆ ಎಂದು ನನಗೂ ಅರ್ಥವಾಗಲಿಲ್ಲ . ಬಹುಷಃ ಗೂಗಲ್ ಟ್ರಾನ್ಸ್ಲೇಟರ್ ಸಹ ಇದಕ್ಕೆ ಉತ್ತರ ನೀಡಲಾರದು . ಸಿಟ್ಟಿನಿಂದ ಆತ ಮರದಿಂದ ಇಳಿದು ಬಂದು
" ಏ ಅವಾಗಿಂದ ಕೂಗ್ತಾ ಇದೀನಿ ಪಿಂಗ ಕೊಡಿ " ಎಂದು ನನ್ನ ಕೈಲಿದ್ದ ಪ್ಲಾಸ್ಟಿಕ್ ಪ್ಯಾಕೆಟ್ ತೆಗೆದುಕೊಂಡು ಹೋದ . ಅವತ್ತೇ ನನ್ನ ಡೈರಿಯಲ್ಲಿ ಬರೆದುಕೊಂಡೆ
ಪಿಂಗ=ಪ್ಯಾಕೆಟ್ .
ತೋಟದ ಬೇಲಿಗಳಲ್ಲಿ ಅಲ್ಲಲ್ಲಿ ನೇಣಿನ ಕುಣಿಕೆಗಳು ನನಗೆ ಕಾಣಿಸಿತು . ಚಿಟ್ಟು ಕೋಳಿಗಳನ್ನು ಹಿಡಿಯಲು ಆದಿವಾಸಿಗಳು ಈ ನೇಣಿನ ಕುಣಿಕೆ ಹಾಕುತ್ತಾರೆ . ನಾನು ಅದರ ಬಗ್ಗೆ ಕಂಪ್ಲೇಂಟ್ ಕೊಟ್ಟೂ ಕೊಟ್ಟು ಸುಸ್ತಾಗಿದ್ದೆ . ಕೊನೆ ಕೊನೆಗೆ ಪೋಲಿಸರೇ ನನಗೆ ಸಲಹೆ ನೀಡುತ್ತಿದ್ದರು .
" ಬಿಡ್ರಿ ಪಾಪ ಏನೋ ಹೊಟ್ಟೆ ಪಾಡು ಅವ್ರುದ್ದು " ಎಂದು .
ಆದರೂ ಅವರು ಎಷ್ಟರ ಮಟ್ಟಿಗೆ ಬೇಟೆ ಆಡುತ್ತಾರೆ ಎಂದರೆ ನಮ್ಮೂರಿನಲ್ಲಿ ಈಗ ಚಿಟ್ಟು ಕೋಳಿಗಳು  ಅಪರೂಪವೇ ಆಗಿ ಹೋಗಿದೆ . ನಮ್ಮ ಚಿಟ್ಟು ಕೋಳಿಗಳು , ಡೋಡೋ ಪಕ್ಷಿಗಳ ಹಾದಿ ಹಿಡಿಯದೆ ಹೋದರೆ ಅಷ್ಟೇ ಸಾಕು .
ನನ್ನ ತೋಟದ ಅಂಚಿನಲ್ಲೇ ಮಂಜನ ಮನೆ , ಅವನ ಹೆಂಡತಿ  ರಸ್ತೆಯಲ್ಲಿ ಹೋಗುತ್ತಿದ್ದಳು ,
" ಎಲ್ಲಮ್ಮ ನಿನ್ನ ಗಂಡ ಅವತ್ತು ನನಗೆ ತಿರುಪತಿ ಕ್ಷೌರ ಮಾಡಿದ ಮೇಲೆ ಪತ್ತೆ ಇಲ್ಲ " ಎಂದು ಕೇಳಿದೆ . ಧಾರಾಕಾರವಾಗಿ ಅವಳು ಅಳಲು ಶುರುಮಾಡಿದಳು .
" ಅವತ್ತಿನ ಜಗಳದಲ್ಲಿ ಹೊಡ್ದಾಡ್ಕಂಡು ,ಜೈಲಿನಾಗೆ ಹಾಕಿದಾರೆ ಸೋಮಿ ಅವನ್ನ " , ಎಂದು ಕಣ್ಣೊರಸಿ ಕೊಂಡಳು .
" ಒಂದ್ ತಿಂಗಳು ಒಳಗೆ ಇಟ್ಗಂಡು ಆಮೇಲೆ ಬಿಟ್ಟ್ ಕಳಿಸ್ತಾರೆ ,  ಚಿಂತೆ ಮಾಡ್ಬೇಡ " ಎಂದು  ಸಮಾಧಾನಿಸಿದೆ .
" ಆ ಶನಿ ಮುಂಡೆಗಂಡಂಗೆ ನೀವೇ ಸ್ವಲ್ಪ ಬುಧ್ಧಿ ಹೇಳಿ ಒಡೆಯ " ಎಂದು ದುಂಬಾಲು ಬಿದ್ದಳು . ಗಂಡನಿಗೆ ಮುಂಡೆಗಂಡ ಎಂದು     ಬೈದರೆ ತನಗೆ ತಾನೇ ಬೈದು ಕೊಂಡಂತೆ ಆಯಿತು ಅಲ್ಲವೇ ? . ಅದೆಲ್ಲಾ ಸೂಕ್ಷ್ಮಗಳು ಇವರಿಗೆ ತಿಳಿಯದು , ಇವರು ಕನ್ನಡದ ಕೊರಳು ಪಟ್ಟಿ ಹಿಡಿದುಕೊಂಡು ದುಡಿಸಿಕೊಳ್ಳುತ್ತಾರೆ . ಅವನು ನನ್ನ ಮಾತು ಕೇಳುತ್ತಾನೆಯೇ ? . ಉಹುಂ ಸಾಧ್ಯವೇ ಇಲ್ಲ . ಅದೂ ಅಲ್ಲದೇ ಅವನ ಸಂಸಾರದಲ್ಲಿ ವಿನಾಕಾರಣ ಮೂಗು ತೂರಿಸುವುದು ನನಗೆ ಇಷ್ಟವಿರಲಿಲ್ಲ . ಸುಮ್ಮನೆ ಬಾಯಿ ಮಾತಿಗೆ , " ಆಯ್ತಮ್ಮ ಹೇಳಿ ನೋಡ್ತೀನಿ " ಎಂದು ಮನೆ ಕಡೆ ತಿರುಗಿದೆ .
ಮನೆಯ ಜಗುಲಿಯಲ್ಲಿ ನಾಗ ಕಾಫಿ 'ಚೊರ್' ಎಂದು ಹೀರುತ್ತ್ತಾ ಕುಳಿತಿದ್ದ , ಕೊನೆಗೂ ನಾಗ ಹುತ್ತದಿಂದ ಮೇಲೆದ್ದು ಬಂದಿದ್ದ .
                                                                                                 ( ಮುಂದುವರೆಯುವುದು.....................)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ