16/10/15

ನನ್ನ ದೇಶ ನನ್ನ ಜನ -೧ (ತಿರುಪತಿ ಕ್ಷೌರ )

"ಓಹ್  ಇವತ್ತು ಭಾನುವಾರ " ನನಗೆ ನಾನೇ ಹೇಳಿಕೊಂಡೆ . ನಮ್ಮೂರಿಗೆ ಕ್ಷೌರಿಕ ಬರುವುದು ಕೇವಲ ಭಾನುವಾರದಂದು ಮಾತ್ರ . ಜಗಳೂರು , ಗೊಂದಲಗೇರಿ , ಕೆಸರೂರು ,ನಾರ್ವೆ ಇವೆಲ್ಲ ಊರುಗಳಿಗೆ ಕೇವಲ ಒಬ್ಬನೇ ಕ್ಷೌರಿಕ . ಒಂಥರಾ ಅವನು ರಾಷ್ಟ್ರಪತಿಗಿಂತಲೂ ಬ್ಯುಸಿ ಮನುಷ್ಯ . ಅವನ ಶಾಪಿನಲ್ಲಿ ಬಹಳ ಹೊತ್ತು ಕಾಯುವುದು ಅನಿವಾರ್ಯ . ಇನ್ನು ತಡ ಮಾಡುವುದು ಸರಿಯಲ್ಲ ಎಂದು ಅನಿಸಿ ತಕ್ಷಣವೇ ಕಾರು ತೆಗೆದುಕೊಂಡು ಹೊರಟೆ .
ಮಳೆಗಾಲ ಆಗಷ್ಟೇ ಮುಗಿದಿತ್ತು . ರಸ್ತೆಯಲ್ಲಿನ ಕೆಸರು ಹಾಗೂ ಕಾಲ ಮೇಲಿನ ಕೆಸರು ಹುಣ್ಣುಗಳು ಇನ್ನೂ ಆರಿರಲಿಲ್ಲ . ಕಳಪೆ ರಸ್ತೆ ಮಾಡಿದ ಗುತ್ತಿಗೆದಾರನಿಗೆ  ಹಿಡಿ ಶಾಪ ಹಾಕುತ್ತಾ 'ರೊಯ್ಯೋ' ಎಂದು ಅಳುತ್ತಾ ಕಾರು ಮುಂದೆ ಸಾಗುತಿತ್ತು . ಭತ್ತದ ನಾಟಿ ಅದಾಗಲೇ ಮುಗಿದಿತ್ತು , ಗೊಬ್ಬರ ಹಾಕಲು ನಾರ್ವೆಯ ನಾಗನಿಗೆ ಹೇಳಿ ಕಳಿಸಿದ್ದೆ . ವಾರ ಕಳೆದರೂ ಅವನ ಸುಳಿವೇ ಇರಲಿಲ್ಲ . ನಾಗನ ಮನೆ ನಾನು ಹೋಗುವ ದಾರಿಯಲ್ಲೇ ಸಿಗುತ್ತದೆ . ಎಲ್ಲಾದರೂ ಅವನ ಮುಖ ನನಗೆ ಕಾಣಿಸುತ್ತದೆಯೇ ಎಂದು ಸುತ್ತಲೂ ಕಣ್ಣಾಡಿಸುತ್ತ ಕಾರು ಓಡಿಸುತ್ತಿದ್ದೆ .
ಬ್ರಿಟೀಷರು ಅಲಂಕಾರಕ್ಕಾಗಿ ತಂದು ನೆಟ್ಟ ಲಂಟಾನದ ಗಿಡಗಳು ಈಗ ನಮ್ಮ ಕಾಡಿನಲ್ಲಿ ಸರ್ವ ವ್ಯಾಪಿಯಾಗಿದೆ . ಇಡಿಯ ಕಾಡಿಗೆ ಕಾಡೇ ಲಂಟಾನದ ಪೊದೆಯೊಳಗೆ ಹುದುಗಿ ಹೋದಂತೆ ಗೋಚರಿಸುತ್ತದೆ . ಪೂರ್ತಿ ಕಾಡೇ ಲಂಟಾನ ಗಿಡಗಳಿಂದ ನಾಶವಾದ ಉದಾಹರಣೆಗಳಿವೆ . ನಾಗನ ಬಗ್ಗೆ ಶುರು ಮಾಡಿದ ಯೋಚನೆ ಜಾಗತೀಕರಣ ಪಡೆದುಕೊಳ್ಳುವ ಹೊತ್ತಿಗೆ ನಾನು ಮಂಜನ 'ಮಾಡ್ರನ್ ಹೇರ್ ಸಲೂನ್ ' ಗೆ ತಲುಪಿದ್ದೆ .
ನಮ್ಮೂರಿನ ಎಲ್ಲಾ ಗಂಡಸರ ತಲೆಯ ಶಿಲ್ಪಗಳ ಶಿಲ್ಪಿ ಈ ಮಂಜ . ಕೆಲಸ ಕಲಿತ ಹೊಸದರಲ್ಲಿ ನಾವು ಹೇಳಿದ ಸ್ಟೈಲ್ ನಲ್ಲೆ ಕ್ಷೌರ ಮಾಡುತ್ತಿದ್ದ . ಕ್ರಮೇಣ ಅದೇ ತಲೆಯ ಬೋಡು ನೋಡಿ ಅವನಿಗೂ ಬೇಸರವಾಗಿರಬೇಕು , ನಾವು ಯಾವುದೇ ಸ್ಟೈಲ್ ಕೇಳಿದರೂ ಎಲ್ಲಾರಿಗೂ ಒಂದೇ ತರ ಬೋಳಿಸಿ ಕಳಿಸುತ್ತಿದ್ದ . ಅವನು ಕೆತ್ತಿದ ಸ್ಟೈಲ್ ಗೆ ನಾವು ಹೊಂದಿಕೊಳ್ಳಬೇಕಿತ್ತು . ಅದೇನೇ ಇರಲಿ ಮಂಜನ ಲೆಕ್ಕಾಚಾರದಲ್ಲಿ ಅವನು ಮಾಡುತ್ತಿರುವುದು ಸಮಾಜ ಸೇವೆ . ಅವನಿಲ್ಲದಿದ್ದರೆ ನಮ್ಮೂರಿನವರು ಜಡೆ ಬಿಟ್ಟು ಸನ್ಯಾಸಿಗಳಂತೆ ಕಾಣುತ್ತಿದ್ದೆವು ಎನ್ನುವುದು ಅವನ ಭಾವನೆ .
ಗಂಟೆ ಹತ್ತಾದರೂ ಸಲೂನ್ ಬಾಗಿಲು ಹಾಕಿಯೇ ಇತ್ತು . ನಾನು ಪಕ್ಕದ ಮೋರಿ ಕಟ್ಟೆಯ ಮೇಲೆ ಕುಳಿತು ಮೇಲೆ ಕೆಳಗೆ ನೋಡುತ್ತಿದ್ದೆ . ಗೋಪಾಲ ತನ್ನ ಹೆಂಡತಿಯನ್ನು ಬಸ್ಸಿಗೆ ಹತ್ತಿಸಲು ಹೊರಟಿದ್ದ .
" ಇದೇನೋ ಮೊನ್ನೆ ತಾನೇ ಮದ್ವೆ ಆಗಿ ಅದಾಗ್ಲೇ ಹೆಂಡತಿನ ತವರಿಗೆ ಕಳಿಸ್ತ ಇದೀಯ " ಎಂದು ನಾನು ತಮಾಷೆ ಮಾಡಿದೆ .
" ಆಷಾಡ ಅಲ್ವ ಸೋಮಿ " ಎಂದು ಅವನು ನಾಚಿಕೆ ಮಿಶ್ರಿತ ನಗುವನ್ನು ನನ್ನೆಡೆ ಬೀರಿದ , ಬಾಯನ್ನು ಕಿವಿಯ ತನಕ ತೆಗೆದು .
" ಈ ಆಷಾಡ ಎಲ್ಲಾ ಏನೂ ಇಲ್ಲ , ಒಂದ್ ಎರಡ್ ದಿನ ತವರಲ್ಲಿ ಇದ್ದು ಬೇಗ ಬಾ "ಎಂದಿದ್ದು ಬರೀ ಕಂಡಕ್ಟರ್ ಗೆ  ಅಷ್ಟೇ ಕೇಳಿಸಿತಂತೆ .
ಮೋರಿಯ ನೀರಿನಲ್ಲಿ ಮೀನಿನ ಮರಿಗಳು ಈಜು ಕಲಿಯುತ್ತಿತ್ತು . ಮಂಜ ಪತ್ತೆಯೇ ಇರಲಿಲ್ಲ . ಅವ ಬರದಿದ್ದರೆ ನಾನು ಸಾಗರಕ್ಕೇ ಹೋಗಿ ಕ್ಷೌರ ಮಾಡಿಸಬೇಕಿತ್ತು . ಕ್ಷೌರದ ದಿನ ಮುಂದೂಡಿ ಮುಂದೂಡಿ ನನ್ನ ಕೂದಲು ಲಂಟಾನ ಪೊದೆಯಂತೆ ಆಗಿತ್ತು .
ಹನ್ನೊಂದು ಗಂಟೆಗೆ ಮಂಜನ ದರ್ಶನ ನನಗೆ ಸಿಕ್ಕಿತು .
" ಇವತ್ತು ಅಮಾವಾಸ್ಯೆ ಮಾರ್ರೆ , ನಿಮಗೆ ಮರ್ತ್ ಹೋತಾ ? , ನಾ ಇವತ್ತು ಕತ್ತರಿ ಮುಟ್ಟಾದಿಲ್ಲ " . ಎಂದು ಅವನ ತಗಾದೆ ತೆಗೆದ .
"ಮಾರಾಯ ನನ್ನ ತಲೆ ಏನು ಚಂದ್ರ ಅಲ್ಲ , ನನಗೆ ಆ ಶಾಸ್ತ್ರ ಎಲ್ಲಾ ಬ್ಯಾಡ , ಸುಮ್ಮನೆ  ಕತ್ತರ್ಸು " . ಎಂದು ಗದರಿದೆ .
" ಎಲ್ಲಾರೂ ಆಗ್ತದ ಸೋಮಿ ನಮ್ ಸಂಘದವ್ರು ನನ್ನ ಸಾಯ್ಸೆ ಬಿಡ್ತಾರೆ " ಎಂದು ಹೊಸ ರಾಗ ಶುರು ಮಾಡಿದ .
ಕೊನಿಗೂ ಇಪ್ಪತ್ತು ಹೆಚ್ಚಿಗೆ ಕೊಡ್ತೀನಿ ಎಂದ ಮೇಲೆ ನನ್ನ ಕೂದಲಿಗೆ ಮುಕ್ತಿ ಸಿಗಬಹುದೆಂಬ ಆಶಾವಾದ ನನಗೆ ಮೂಡಿತು .
" ಇದ್ಯಾಕೋ ಇಷ್ಟು ಕುಡಿತೀಯಾ , ಕಟಿಂಗ್ ಮಾಡೋವಾಗ್ಲಾದ್ರೂ ನೆಟ್ಟಗೆ ಬರೋಕೆ ಆಗಲ್ವ ನಿಂಗೆ ? ".
" ನಂಗೆ ಡಾಕ್ಟ್ರೆ ಹೇಳವ್ರೆ ಕುಡಿಯಕ್ಕೆ , ಒಂದ್ ಸ್ವಲ್ಪ ದಿನ ಚನಾಗಿ ಕುಡುದು ಆಮೇಲೆ ಬಿಟ್ ಬಿಡು ಅಂತ " .
ನಾನು ಪ್ರತಿ ಸಲ ಕೇಳಿದಾಗಲು ಅವನ ಬಳಿ ಸಿಧ್ಧ ಉತ್ತರವಿರುತ್ತಿತ್ತು .
" ಅಲ್ಲ ಮಾರಾಯ ನೀನು ಕುಡ್ಕೊಂಡ್ ಬಂದು ಕಟಿಂಗ್ ಮಾಡೋಕೆ ಹೋಗಿ ಯಾರದ್ದಾರೂ ಕಿವಿ ಕತ್ತರಿಸಿ ಬಿಟ್ಟೀಯ " ಎಂದೆ
" ಸೋಮಿ ಏನ್ ಹಿಂಗ್ ಅನ್ದ್ ಬಿಟ್ರಿ , ನಾ ಕೆಲ್ಸ ಕಲ್ತಿದ್ದು ಬಲೆಗಾರು ಹುಚ್ಚಪ್ಪನ ಹತ್ರ , ಬೇಕಾದ್ರೆ ಕಣ್ಣ್ ಕಟ್ಟ್ಕಂಡ್ ಕಟಿಂಗ್ ಮಾಡ್ತೀನಿ , ನೋಡ್ತೀರಾ " ಎಂದು ನನಗೇ ಸವಾಲೆಸೆದ .
" ಅದೆಲ್ಲಾ ಬ್ಯಾಡ ಮಾರಾಯ ನಿನ್ನ ಪಾಡಿಗೆ ನೀನು ಕೆತ್ತು " ಎಂದು ನಾನೇ ಸೋಲೋಪ್ಪಿಕೊಂಡೆ . ಅವನ ಕತ್ತರಿಗೆ ನನ್ನ ಕಿವಿ ಆಹುತಿಯಾಗುವುದು ನನಗೆ ಸುತಾರಾಂ ಇಷ್ಟವಿರಲಿಲ್ಲ .
" ಏಯ್ ಮಂಜ ಯಾದ್ಗಾರ್ ಹೋಟೆಲ್ ಅಲ್ಲಿ ಜಗಳ ಅಂತೆ " , ಬಸ್ಸಿನ ಹತ್ತಿರ ಹೋಗಿದ್ದ ಗೋಪಾಲ ಬಿಬಿಸಿ ವರದಿ ನೀಡಿದ .   
" ಹೌದಾ , ಈಗ್ಲೇ ಬಂದೇ ಇರು , ಸೋಮಿ ಒಂದ್ ಹತ್ತ್ ನಿಮಷ ಬಂದೆ " ಎನ್ನುತ್ತಾ ನನ್ನ ಉತ್ತರಕ್ಕೂ ಕಾಯದೇ ಹೊರಟೇ ಹೋದ .
ಯಾದ್ಗಾರ್ ಎನ್ನುವ ಹೋಟೆಲ್ ಒಂದನ್ನು ಫಾತಿಮಾ ನಡೆಸುತ್ತಿದಳು . ಹೋಟೆಲ್ ಎಂದರೆ ಎರಡು ಟೇಬಲ್ ನಾಲ್ಕು ಕುರ್ಚಿ ಅಷ್ಟೇ . ಮಂಜನಂತಹ ಸೋಮಾರಿಗಳು ಅಲ್ಲಿ ಹೋಗಿ ಜೊಲ್ಲು ಸುರಿಸುವುದು ಸಾಮಾನ್ಯ .
ಅಲ್ಲಿ ಪದೇ ಪದೇ ಜಗಳವಾಗುತಿತ್ತು . ಫಾತಿಮಾ ಬುರ್ಕಾ ಹಾಕುತ್ತಿಲ್ಲ ಎಂದು ಮೌಲ್ವಿಗಳು ಜಗಳ ಮಾಡುತ್ತಿದರು .
" ಅಲ್ಲ ನಾನು ಬುರ್ಕಾ ಹಾಕಿ ನನ್ ಜಾತಿನೇ ಮುಂದೆ ಮಾಡುದ್ರೆ ನಂಗೆ ವ್ಯಾಪಾರ ಆಯ್ತದ ನೀವೇ ಹೇಳಿ " ಎಂದು ಆಕೆ ಸರಿಯಾಗೇ ತಿರುಗಿ ಬೀಳುತ್ತಿದಳು . ಆಕೆಯೂ ಸಹ ಬಹಳ ಘಾಟಿ ಹೆಣ್ಣು . ಅವಳ ಹೋಟೆಲಿನ ಮೆಣಸಿನ ಕಾಯಿ ಬೋಂಡಕ್ಕೆ ಯಾವುದೇ ಶರಿಯತ್ ಕಾನೂನು ಇರಲಿಲ್ಲ .
ನಾನು ಅರ್ಧ ಕೆತ್ತಿದ ಕೂದಲು ಇಟ್ಟುಕೊಂಡು , ಮಂಜನಿಗೆ ಗಂಟೆಗಟ್ಟಲೆ ಕಾದು ವಾಪಾಸು ಮನೆ ಕಡೆ ತಿರುಗಿದೆ . ನನಗೆ ಅಂದು ಆತ ಮಾಡಿದ್ದು ತಿರುಪತಿ ಕ್ಷೌರ  .
ಬಡ್ಡೀ ಮಗ ಸಿಗಲಿ ಇನ್ನೊಂದ್ ದಿನ ಎಂದು ಮನಸಿನಲ್ಲೇ ಬೈದುಕೊಳ್ಳುತ್ತಾ ಮನೆ ತಲುಪಿದೆ .
                                                                                                                ( ಮುಂದುವರೆಯುವುದು....... )

5/10/15

ಹುಚ್ಗುದುರೆಯ ಬೆನ್ನತ್ತಿ - ವಿಮರ್ಶೆಯ ವಿಮರ್ಶೆ

ಮರು ದಿನ ಭಾರತ್ ಬಂದ್ ಇತ್ತು , ಹಿಂದಿನ ದಿನ ರಾತ್ರಿ ನಾನು ಮೈಸೂರಿನಿಂದ ಸಾಗರಕ್ಕೆ ಪ್ರಯಾಣಿಸುತ್ತಿದ್ದೆ . ಮೈಸೂರು ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿತ್ತು , ಲೆಕ್ಕ ಮಾಡುವಷ್ಟು ಜನ ಮಾತ್ರ ಇದ್ದ ಹಾಗೆ ನನ್ನ ನೆನಪು . ನನ್ನ ಪಕ್ಕದಲ್ಲಿ ಒಂದು ಹುಡುಗ ಹಾಗೂ ಹುಡುಗಿ ಬಸ್ ಕಾಯುತ್ತಾ ಕೂತಿದ್ದರು , ಬಹುಶಃ ಪ್ರೇಮಿಗಳು ಇದ್ದಿರಬಹುದು . ನನ್ನ Sherlock ಬುದ್ಧಿ ಹೇಳಿತ್ತು ಅವರು ಪ್ರೇಮಿಗಳೇ . ಒಬ್ಬರೊನ್ನಬ್ಬರು ಅಗಲುವ ಕ್ಷಣವದು , ಇಬ್ಬರ ಕಣ್ಣಲ್ಲೂ ನೀರಿತ್ತು . ನನ್ನ ಮನಸ್ಸು ಹಸಿಯಾಗಿತ್ತು , ನನ್ನ ಕನಸಿನ ಹುಡುಗಿ ಅನು ನನ್ನ ಮನದಲ್ಲಿ ತಲೆ ಎತ್ತಿದಳು . ಯಾವಾಗಲೋ  ನನ್ನ ಮನದಲ್ಲಿ ಬಿತ್ತಿದ್ದ ಕಥೆಯ ಬೀಜ ಮೊಳಕೆಯೊಡದಿತ್ತು .
ನಾವು ಯಾಕೆ ಪ್ರೀತಿಸಬೇಕು ? ಯಾಕೆ ಬೇರೆಯಾಗಬೇಕು ? ಮಿಲಿಯನ್ ಡಾಲರ್ ಪ್ರಶ್ನೆಯಿರಬಹುದು ಇದು . ಖಂಡಿತ ಇದಕ್ಕೆ ಉತ್ತರವಿಲ್ಲ , ಪ್ರೀತಿ ಹುಟ್ಟಲು ಅಥವಾ ಸಾಯಲು ಕಾರಣ ಬೇಕಿಲ್ಲ . ನಾವೆಲ್ಲಾ ಬೆಳ್ಳಿ ತೆರೆಯ ಮೇಲೆ ಸಿಳ್ಳೆ ಹೊಡೆಯುತ್ತಾ ಲವ್ ಸ್ಟೋರಿಗಳನ್ನು ನೋಡುತ್ತೇವೆ . ನೂರಕ್ಕೆ ತೊಂಬತ್ತೊಂಬತ್ತು ಸಿನಿಮಾಗಳಲ್ಲಿ ಹೀರೋಯಿನ್ ಹೀರೋಗೆ  ಸಿಕ್ಕಿ ಬಿಡುತ್ತಾಳೆ . ಆದರೆ ನಿಜ ಜೀವನದ ಲವ್ ಸ್ಟೋರಿಗಳು ಇದಕ್ಕಿಂತ ತೀರಾ ವಿಭಿನ್ನ ಹಾಗೂ ಕ್ಲಿಷ್ಟ . ಇಲ್ಲಿ ಹೀರೋ ಹೊಡೆದರೆ ನೆಲಕ್ಕುರುಳುವ ವಿಲನ್ ಇರುವುದಿಲ್ಲ , ಇಲ್ಲಿ ಹೆಜ್ಜೆಗೊಬ್ಬರು ವಿಲನ್ ಸಿಗುತ್ತಾರೆ . 
ಬದುಕಿನಲ್ಲಿ ನೂರಾರು ಆಯ್ಕೆಗಳು ನಮ್ಮ ಮುಂದೆ ಇರುತ್ತದೆ , ಅದರಲ್ಲಿ ಸರಿಯಾದುದನ್ನು ಆಯ್ಕೆ ಮಾಡುವಲ್ಲಿ ಬಹಳಷ್ಟು ಜನ ವಿಫಲರಾಗುತ್ತಾರೆ . ನಮ್ಮೆಲರ ಮನಸ್ಸು ಹುಚ್ಗುದುರೆಯೇ , ಅನುಮಾನವಿಲ್ಲ . ಇನ್ನು ಪ್ರೀತಿಯ ವಿಷಯದಲ್ಲಿ ಅಂತೂ ಮುಗಿದೇ ಹೋಯಿತು , ಆಯ್ಕೆ ಇನ್ನೂ ಕ್ಲಿಷ್ಟಕರ .
ಇನ್ನು Schizophrenia ವಿಚಾರಕ್ಕೆ ಬರೋಣ . ಮೊದಲೇ ಹೇಳಿದಂತೆ ಇಲ್ಲದ ವ್ಯಕ್ತಿ , ವಸ್ತು ಅಥವಾ ಏನನ್ನಾದರೂ ಸರಿಯೇ ಇದೆ ಎಂದು ಭಾವಿಸುವ ಒಂದು ವಿಚಿತ್ರ ಖಾಯಿಲೆ . ಇದರ ಬಗ್ಗೆ ನಾನು ಮೊದಲು ಕೇಳಿದ್ದು ವಿನ್ಸೆಂಟ್ ವ್ಯಾನ್ ಗೊಗ್ಹ್ ಜೀವನ ಚರಿತ್ರೆಯಲ್ಲಿ . ನಾನು ಕಲೆ ಹಾಕಿದ ಮಾಹಿತಿಯ ಪ್ರಕಾರ ಆತ paranoid schizophrenia ಖಾಯಿಲೆ ಇಂದ ಬಳಲುತ್ತಿದ್ದ . ಜೀವನವಿಡೀ ಬಡತನದಲ್ಲೇ ಕಳೆದ ಪ್ರಸಿದ್ಧ ಚಿತ್ರಕಾರ ಆತ . ಇಂದು ಮಿಲಿಯನ್ ಡಾಲರ್ ಗಳಿಗೆ ಬಿಕರಿಯಾಗುವ ಅವನ ಚಿತ್ರಗಳು , ಅವನು ಬದುಕ್ಕಿದ್ದಾಗ ಒಂದೊತ್ತಿನ ಊಟಕ್ಕೂ ಒದಗಿ ಬಂದಿರಲಿಲ್ಲ . ಬಣ್ಣ ಸಹ ತೆಗೆದು ಕೊಳ್ಳಲು ದುಡ್ಡಿಲ್ಲದೆ  ಆತ ಪರದಾಡುತ್ತಿದ್ದ . ವಿನ್ಸೆಂಟ್ ಎನ್ನುವುದು ಆತನ ಸತ್ತ ಅಣ್ಣನ ಹೆಸರು , ಸತ್ತ ಅಣ್ಣನ ಹೆಸರು ಹೊತ್ತು ಜೀವನ ಪೂರ್ತಿ ಪರಾವಲಂಬಿ ಬದುಕು ಸವೆಸಿದ . ಆತನ ನಿಸ್ವಾರ್ಥ ಪ್ರೇಮಕ್ಕೆ ಒಂದೂ ಹುಡುಗಿ ಮನಸೋಲಲಿಲ್ಲ . ಸಿಡುಬು ಹೊತ್ತ ವೇಶ್ಯೆ ಸಹ ಅವನನ್ನು ತೊರೆದು ಹೋಗುತ್ತಾಳೆ , ಇವನು ಅವಳನ್ನು ತಬ್ಬಿ ಹೇಳುತ್ತಾನೆ , ಅಳುತ್ತಾನೆ , ಇಲ್ಲ ದುಡ್ಡಿನ  ಮುಂದೆ ಎಲ್ಲವೂ ಸೋಲಲೇ ಬೇಕು . ಆತ  ಮತ್ತೆ ಹುಚ್ಚನಾದ .ನೂರಾರು ಚಿತ್ರಗಳ ಬಿಡಿಸಿದ , ಮೂಲ ಗೆರೆಗಳೇ ಇಲ್ಲದ ಚಿತ್ರಗಳವು , ಅದಕ್ಕೇ ಮಾರಾಟವೇ ಆಗಲಿಲ್ಲ . ಊಟಕ್ಕೂ ದುಡ್ಡಿಲದೇ ಕೇವಲ ಕಾಫಿ ಕುಡಿದು ಕೊಂಡು ಬದುಕಿದ್ದ . ಬಣ್ಣದ ಖರ್ಚು ಹೆಚ್ಚಾಗುತ್ತ ಹೋಗಿತ್ತು , ಊಟ ಸಿಗುತ್ತಿರಲಿಲ್ಲ , ಕಾಫಿಗೂ ಹೆಣಗಾಡುವ ಸ್ಥಿತಿ . ಆತನ ಬದುಕಿಗೆ ಊಟಕ್ಕಿಂತ ಹೆಚ್ಚಿಗೆ ಬಣ್ಣಗಳು ಬೇಕಿತ್ತು , ಅದರಿಂದಲೇ ಬದುಕಿ ಬಿಟ್ಟ . ತೀರಾ ಸಮಾಜ ಅಸಹನೀಯವಾಗಿತ್ತು , ಆತ್ಮಹತ್ಯೆಯೊಂದೆ ಉಳಿದ ಆಯ್ಕೆ ಆಗಿತ್ತು . ಬಣ್ಣಗಳು ಯಾತ್ರೆ ಮುಗಿಸಿತ್ತು . ಪ್ರಸಿದ್ಧ ಚಿತ್ರಕಾರ ಹೊಟ್ಟೆಗೆ ಅನ್ನವಿಲ್ಲದೆ , ಕೊರಗಿ , ಆತ್ಮಹತ್ಯೆಗೆ ಶರಣಾಗಿದ್ದ .
ಇಂದಿಗೂ ನನ್ನ ಇಷ್ಟದ ಪುಸ್ತಕ , ವ್ಯಾನ್ ಗೊಗ್ಹ್ ಜೀವನ ಚರಿತ್ರೆ . ಅದನ್ನೇ ಹಿಡಿದು ಎಷ್ಟೋ ದಿನ ನಿದ್ದೆಗೆ ಜಾರಿದ್ದೇನೆ , ನನ್ನ ಕಂಬನಿ ಆ ಪುಸ್ತಕ ನೋಡಿದೆ .
ಪ್ರಸಿಧ್ಧ ಗಣಿತಜ್ಞ ಜಾನ್ ನ್ಯಾಶ್ ಸಹ schizophrenia ಖಾಯಿಲೆ ಇಂದ ಬಳಲುತ್ತಿದರು . ಇಡೀ ಜಗತ್ತು ಅವರನ್ನು ಹುಚ್ಚ ಎಂದಿತ್ತು . ಅವರ ಗೇಮ್ ಥಿಯರಿ ಇಂದಿಗೂ ಬಹಳಷ್ಟು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ  , Nash equilibrium ಬಗ್ಗೆ ನೀವು ಓದಬಹುದು . ನೋಬಲ್ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು .
ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಗೂಗಲ್ ನಲ್ಲಿ ಸಿಗುತ್ತದೆ .
ನನ್ನ ಬರಹದ ಶೈಲಿಯಲ್ಲಿ ತೇಜಸ್ವಿ , ನೇಮಿಚಂದ್ರ, ಬೆಳಗೆರೆ ,ಕಾರಂತರ ಗಾಢ ಪ್ರಭಾವವಿದೆ . ಇದನ್ನು ಕಾಪಿ ಎನ್ನಬೇಕೋ ಎಂದು ನನ್ನೊಳಗೇ ಸಂದೇಹವಿದೆ .
ನಾನು ಕನ್ನಡದಲ್ಲಿ ಬಿ. ಎ , ಎಂ.ಎ ಮಾಡಿಲ್ಲ , ನಾನು ಓದುತ್ತಿರುವ ಎಲೆಕ್ಟ್ರಾನಿಕ್ಸ್ ಗು ,ಸಾಹಿತ್ಯಕ್ಕೂ ಯಾವುದೇ ಸಂಬಂಧವಿಲ್ಲ . ಸಿಕ್ಕ ಪುಸ್ತಕ ಓದುವ ಚಟ , ಅನಿಸಿದ್ದನ್ನು ಗೀಚುವ ಚಟವೇ ನನ್ನನು ಇಲ್ಲಿಗೆ ತಂದು ನಿಲ್ಲಿಸಿದೆ .ನಾನು ಮಾಡಿರುವ ತಪ್ಪನ್ನು ಮನ್ನಿಸಿ  ನನ್ನ ಕಥೆಯನ್ನು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು .
ಈ ಕಥೆಯನ್ನು ನಾನು ವ್ಯಾನ್ ಗೊಗ್ಹ್ , ಜಾನ್ ನ್ಯಾಶ್ ಹಾಗು ನನ್ನ ಕನಸಿನ ಹುಡುಗಿ ಅನುಗೆ ಅರ್ಪಿಸುತ್ತಿದ್ದೇನೆ  . ಇದು ಕೇವಲ ಕಾಲ್ಪನಿಕ ಕಥೆ , ನಾನೂ ಸಹ ಅನುಳ ಹುಡುಕಾಟದಲ್ಲಿದೇನೆ .
                                                                                        ಹೋಗಿ ಬರುವೆ ನಮಸ್ಕಾರ ...........
                                                                                             ನಿಮ್ಮವ
                                                                                         Gurukiran. S.D
                                                    (His last painting Crows of wheat field)
                                                          (Van Gogh self portrait)

2/10/15

ಹುಚ್ಗುದುರೆ - ಅಂತ್ಯ

ನಿಧಾನವಾಗಿ ವಿಶುವಿಗೆ ಮನನವಾಗತೊಡಗಿತ್ತು , ವಾಸ್ತವಕ್ಕೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದ .
ಆಕೆ ಸಿಗುವುದಿಲ್ಲ
ನನ್ನ ನಿಸ್ವಾರ್ಥ ಪ್ರೀತಿಗೆ ,
ನನ್ನ ಕಾಳಜಿಗೆ.
ಇನ್ನವಳು ಸಿಗುವುದು
ನನ್ನ ಕಲ್ಪನೆಯಲ್ಲಿ ಮಾತ್ರ
ಹುಸಿ ಮುನಿಸು, ಹಸಿ ಕನಸು
ನೆನಪುಗಳಷ್ಟೇ......
ಕಾಲಗರ್ಭದಲ್ಲಿ ಹುದುಗಿಸಡಬೇಕು
ನಿನ್ನ ನೆನಪುಗಳ .
ಆಗಾಗ ಆಸ್ಫೋಟಿಸುವ ಜ್ವಾಲಾಮುಖಿಯಂತೆ ಮತ್ತೆ ಬರದಿರು
ನನ್ನ ಕವಿತೆಯ ಅಕ್ಷರದ ಗೆರೆಗಳಲ್ಲಿ
ಸದಾ ನೀ ನನ್ನ ಗೆಳತಿ
ಅಲ್ಲಿ ಮಾತ್ರ ನೀ ಜೀವಂತ
ನನ್ನೆಲ್ಲಾ ಕನಸುಗಳ ಒಡತಿ
ಅದರಾಚೆಗೆ ಕರಿ ಕಪ್ಪ ಮೃತ್ಯು
ಮತ್ಯಾರದೋ ಕನಸಿನ ರಾಣಿ
ನನ್ನ ಹೆಜ್ಜೆಗಳಿಲ್ಲ ನಿನ್ನ ಹೃದಯದಲ್ಲಿ
ಇನ್ಯಾರದೋ ಕಪಟ ಪ್ರೀತಿಯ
ಹುಚ್ಚು ಪ್ರವಾಹಕ್ಕೆ ಅಳಿಸಿ ಹೋಗಿದೆ.
ನಿನ್ನ ಬಂಧನ ಬಿಡಿಸಿಕೊಂಡು
ಎಷ್ಟೋ ದೂರ ಬಂದಾಗಿದೆ
ಮತ್ತೆ ನಿನ್ನ ಹೃದಯದೊಳಗೆ
ಹೆಜ್ಜೆ ಇಡಲಾರದಷ್ಟು ದೂರ
ದೂರ ........ಇನ್ನಷ್ಟು ದೂರ ಹೋಗುವೆ ಗೆಳತಿ .......
ವಿಶು ವ್ಯಗ್ರನಾಗತೊಡಗಿದ , ಅವನ ಹೃದಯದಲ್ಲಿ ದ್ವೇಷ ತಲೆಯೆತ್ತುತ್ತಿತ್ತು . ಹಿಂದು-ಮುಂದು ನೋಡದೆ ಮಂಗಳೂರಿಗೆ ಹೊರಟು ನಿಂತ . ಬಾಚಿದ ತಲೆ , ಮಟ್ಟಸ ಶೇವ್ , ಇಂಪೋರ್ಟೆಡ್ ಬಟ್ಟೆಗಳು , ಮೂರ್ನಾಲ್ಕು ಸಾವಿರದ ಸನ್ ಗ್ಲಾಸ್ . ಅನು ಅವನನ್ನು ನೋಡಿ ಭಯಗೊಂಡಳು . ಪ್ರೀತಿಗಿಂತ ದ್ವೇಷ ಎಂಬ ಎರಡೂ ಮುಕ್ಕಾಲು ಪದಕ್ಕೇ ಜಾಸ್ತಿ ಶಕ್ತಿ ಇದೆಯೋ ಏನೋ ? . ಇಷ್ಟು ವರ್ಷಗಳಲ್ಲಿ ಆತ ತನಗಾಗಿ ಏನೆಂದರೆ ಏನನ್ನೂ ಮಾಡಿಕೊಂಡಿರಲಿಲ್ಲ ! . ಒಂದು ವ್ಯಕ್ತಿ ಇಷ್ಟೊಂದು ನಿಸ್ವಾರ್ಥಿ ಆಗಲು ಸಾಧ್ಯವಿದೆಯೇ ? . ಆತ ಒಂದು ಗಿಡ ನೆಡುವಾಗಲೂ , ಮುಂದೆ ಅನು ಇದರ ಹಣ್ಣು ತಿನ್ನುತ್ತಾಳೆ ಎಂದೇ ಭಾವಿಸಿಕೊಂಡು ನೆಡುತ್ತಿದ್ದ .
ಆದರೆ ಅನು ಮಾಡಿದ್ದು ಸರಿಯೇ ? . ಇಲ್ಲಿ ವಿಶು , ಅನುಗೆ ಚಿತ್ರಾನ್ನ ಇಷ್ಟ ಎಂದು ತಿನ್ನದೇ ಉಪವಾಸವಿದ್ದರೆ . ಅಲ್ಲಿ ಅವಳು ಆದಿಯ ಜೊತೆ ತಣ್ಣಗೆ ಕೂತು ರೋಟಿ-ದಾಲ್ ತಿನ್ನುತ್ತಿದಳು . ಅದು ವಿಶುವಿಗೆ ಮಾಡಿದ ಅನ್ಯಾಯವಲ್ಲವೇ ? .
ಅಥವಾ ತಪ್ಪು ವಿಶುವಿನದ ? . ಪ್ರೀತಿಯನ್ನು ಕೂಗಿ ಹೇಳಲು ಸೋತವನು . ಅವನ ಪ್ರಕಾರ ಪ್ರೀತಿ ಹೃದಯಗಳ ಪಿಸುಮಾತು , ಕೂಗಿ ಕರೆಯುವ ಹೆಸರಲ್ಲ . ವಿಶು ಮೂಗ , ಅನು ಕಿವುಡಿ . ಯಾರು ತಾನೇ ಸಹಾಯ ಮಾಡಿಯಾರು ? .
ಅಥವಾ ಇದೆಲ್ಲ ಕೇವಲ ಕಾಲದ , ಸಂಧರ್ಭದ ತಪ್ಪೇ ? .ಬದುಕಿನ ಆಯ್ಕೆಗಳಲ್ಲಿ , ಭಾವನೆಗಳ ಸುಳಿಯಲ್ಲಿ , ಮನಸ್ಸು ಅಂಕೆಗೆ ಸಿಗದೇ ಓಡುವ ಹುಚ್ಗುದುರೆ .  ತಪ್ಪು ಯಾರದೇ ಆಗಿರಲಿ ಮಾನಸಿಕವಾಗಿ ಎಲ್ಲರೂ ಸಾಯಲೇ ಬೇಕು , ಅದೇ ವಿಧಿ . ಒಂದು ನಿಸ್ವಾರ್ಥ ಪ್ರೀತಿ ಈ ರೀತಿ ದುರಂತ ಅಂತ್ಯ ಕಾಣಬಹುತ್ತದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ .
ವಿಶುವಿಗೆ ತಾಳ್ಮೆ ಹಾರಿ ಹೋಗುತ್ತಿತ್ತು . ಆದಿಯನ್ನು ಕೊಂದಾದರೂ ಸರಿಯೇ , ಅನುವನ್ನು ಪಡೆದುಕೊಳ್ಳಬೇಕು....... ತೀರ್ಮಾನ ಮಾಡಿಕೊಂಡ .
"ಅನು ನಾನು ಆದಿಯನ್ನು ಮೀಟ್ ಮಾಡ್ಬೇಕು "
"ಬೇಡ ವಿಶು , ನಾನು ಇದರಿಂದ ಹೊರಗೆ ಬರ್ತೀನಿ ಆದಷ್ಟು ಬೇಗ , ನೀನು ಸಮಾಧಾನ ಮಾಡ್ಕೋ ". ಸಂತೈಸುವಳು . ಇಲ್ಲ ವಿಶು ಕರಗುವುದಿಲ್ಲ ,ಕರಗುವುವವನಲ್ಲ .
ಅವಳ ಉತ್ತರಕ್ಕೂ ಕಾಯದೆ ವಿಶು ಅಲ್ಲಿಂದ ಹೊರಬಿದ್ದ ..........
"Adi from Kashmir , can you tell me where his room is ? ." ಸ್ಪಷ್ಟವಾಗಿ ವಿಶು ಕೇಳಿದ್ದ , ಬಾಯ್ಸ್ ಹಾಸ್ಟೆಲ್ ನ  ವಾರ್ಡನ್ ಬಳಿ .
"Such a person is not here Sir , thank you " . ಬಂದಿತ್ತು ಉತ್ತರ .
ಹಾಗಾದರೆ ಆದಿ ರೂಮು ಖಾಲಿ ಮಾಡಿದನೇ ? . ಕಾಲೇಜು ಬಿಟ್ಟು ಎಲ್ಲಿ ಹೋದಾನು ? . ಕೋರ್ಸು ಅರ್ಧಕ್ಕೆ ಬಿಟ್ಟು ಹೋದನೇ ? .
"Can you tell me his address please ? . " ಮತ್ತೆ ಮತ್ತೆ ವಿಚಾರಿಸಿದ
"Such person is not admitted at all Sir " .
ಇಡೀ ಕಾಲೇಜಿನಲ್ಲಿ ಎಲ್ಲಿ ಹುಡುಕಿದರೂ ಆದಿಯ ಪರಿಚಯಸ್ತರು ಯಾರೂ ಇಲ್ಲ , ಕೊನೆ ಪಕ್ಷ ಆತನನ್ನು ಕಂಡವರೂ ಇಲ್ಲ.................
**********************************************************************************************************************
ಸುತ್ತ ಬಿಳಿ ಬಣ್ಣ ಬಳಿದಿದ್ದಾರೆ , ಅದೂ ಸಹ ಮನಸ್ಸಿನ ಮೇಲೆ ಎಂತದೋ ಪ್ರಭಾವ ಬೀರುತ್ತದಂತೆ . ಎಲ್ಲವೂ ಬಿಳಿ ಬಿಳಿ , ಅದನ್ನು ನೋಡಿದರೇ ಯಾರಿಗಾದರು ಹುಚ್ಚು ಹಿಡಿದು ಬಿಡಬಹುದು . ಗಂಭೀರ ಧ್ವನಿಯಲ್ಲಿ ವೈದ್ಯರು ಮಾತನಾಡುತ್ತಿದ್ದರು .
"See she is schizophrenic , ಇಲ್ಲದನ್ನು ಅವಳ ಮನಸ್ಸು ಇದೆ ಎಂದು ಭಾವಿಸುತ್ತಿದೆ . ಆದಿ ಇರುವದು ಕೇವಲ ಅವಳ ಮನಸ್ಸಿನಲ್ಲಿ ಅಷ್ಟೇ . ವಾಸಿ ಮಾಡುವ ಸಂಪೂರ್ಣ ಪ್ರಯತ್ನವನ್ನೂ ನಾವು ಮಾಡುತ್ತೇವೆ . ಇದಕ್ಕೆ specific time ಎಂಬುದಿಲ್ಲ , ಕೆಲವೊಮ್ಮೆ ವಾಸಿಯಾಗದೇ ಇರಬಹುದು . "
" But why Anu ?."
" ಇದಕ್ಕೆ ಉತ್ತರವಿಲ್ಲ , ಮನೋವ್ಯಾಧಿಗಳು ಯಾರಿಗೆ ಬೇಕಾದರೂ ಆಗಬಹುದು " .
************************************************************************************************************************
"ಇಲ್ಲ ವಿಶು ನಾನು ಅವ್ನ ನೋಡ್ದೆ , ನನ್ನ ಜೊತೆಗೇ ಇದ್ದ ಇಷ್ಟು ದಿನ ". ವಾದಿಸುವಳು ಅನು
" ಇಲ್ಲಪ , ಇಲ್ಲ ಪುಟ್ಟ ". ಅವಳ ತಲೆ ನೇವರಿಸುವನು ವಿಶು .
ಚಿಕಿತ್ಸೆ ಶುರುವಾಗಿದೆ , ಎಷ್ಟು ದಿನ , ಎಷ್ಟು ವರ್ಷ ಹಿಡಿಯುತ್ತದೋ ಗೊತ್ತಿಲ್ಲ . ಎಷ್ಟಾದರೂ ಸರಿಯೇ ಅವರ ಪ್ರೀತಿಯ ಮುಂದೆ ಎಲ್ಲವೂ ಸೋಲಲೇ ಬೇಕು .
ಈಗಲೂ ಅನುಳಿಗೆ ಆದಿ ಕಾಣಿಸಿಕೊಳ್ಳುತ್ತಾನೆ , ಅವನಿಗೆ ವಯಸ್ಸಾಗುವುದಿಲ್ಲ , ಆತ ಚಿರ ಯೌವನಿ .ಏಕೆಂದರೆ ಅವನು ಇರುವುದು ಕೇವಲ ಅನುವಿನ ಮನಸಲ್ಲಿ ಮಾತ್ರ .  ಆದರೆ ಅನು ಅವನನ್ನು ಮಾತನಾಡಿಸುವುದಿಲ್ಲ , ಅವನೆಡೆಗೆ ನಗು ಬೀರುವುದಿಲ್ಲ
ವಿಶು ಹಾಗೂ ಅನು ಪ್ರೀತಿಯಲ್ಲಿ ಮತ್ತೆ ನಗು ಕಾಣಿಸಿಕೊಂಡಿದೆ .................................

(ಏನಿದು ಸ್ಚಿಜ್ನೋಫ್ರೆನಿಯಾ ? , ಈ ಕಥೆ ಹುಟ್ಟಿದ್ದು ಹೇಗೆ ? . ಈ ಕಥೆಯ ಹಿಂದೆ ಇರುವ ಉದ್ದೇಶವೇನು ?
ಇದನ್ನೆಲ್ಲಾ ಉಪಸಂಹಾರದಲ್ಲಿ ತಿಳಿಸುತ್ತೇನೆ . )