28/5/21

ಭರವಸೆ 

ಮುಂದೆ ಒಂದು ಮಾರು ಸಹ ಕಾಣದಷ್ಟು ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಗಾಯತ್ರಿ ಒಬ್ಬಳೇ ನಡೆದುಕೊಂಡು ಬರುತ್ತಿದ್ದಳು. ಆದರೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದ ಮಳೆ, ಮನೆ ತಲುಪುವ ಅವಳ ನಂಬಿಕೆಯನ್ನು ಕಡಿಮೆ ಮಾಡುತಿತ್ತು. ಮನೆಯ ಬಳಿ ಬಂದರೂ ಬಾಗಿಲು ದಾಟದೇ ಮಳೆಯಲ್ಲಿ ನೆನೆಯುತ್ತಾ ಬಾಗಿಲಲ್ಲೇ ನಿಂತು ಕಣ್ಮುಚ್ಚಿದಳು. ಒಳಗೆ ಅಡಿಗೆ ಮಾಡುತ್ತಿದ್ದ ಸಾವಿತ್ರಕ್ಕ ಏನೋ ಶಬ್ಧ ಎಂದು ಬಂದವಳು, ಬಾಗಿಲಲ್ಲೇ ತೋಯುತ್ತ ನಿಂತಿದ್ದ ಗಾಯತ್ರಿಯನ್ನು "ಏಯ್ ಒಳಗೆ ಬಾರೆ" ಎಂದು ಬೈದು ಒಳಗೆ ಕರೆದು ಕೂರಿಸಿದಳು. ಇಷ್ಟಾದರೂ ಒಂದೇ ಒಂದು ಮಾತೂ ಸಹ ಗಾಯತ್ರಿಯ ಬಾಯಿಂದ ಹೊರ ಬರಲಿಲ್ಲ. ಜಗುಲಿಯ ಮೇಲೆ ಕೂತಿದ್ದ ಜಾಗದಲ್ಲೇ ಕೂತಿದ್ದಳು. ಸಾವಿತ್ರಕ್ಕನೇ ಒಳಗಿನಿಂದ ಒಣ ಟವೆಲ್ ತಂದು ಅವಳ ತಲೆ ಒರೆಸಿ " ಹುಂ, ಈಗ ಸ್ನಾನಕ್ಕೆ ಹೋಪಲೆ ಅಡ್ಡಿಲ್ಲೆ" ಎಂದಳು. ಅದಕ್ಕೂ ಸಹ ಅವಳು ತುಟಿಕ್ ಪಿಟಿಕ್ ಎನ್ನದೆ ಬಚ್ಚಲ ಮನೆಯ ಕಡೆ ನಡೆದು ಹೋದಳು. ಜಗುಲಿಯಲ್ಲೇ ಕೂತಿದ್ದ ಸಾವಿತ್ರಕ್ಕನ ಗಂಡ ಚಂದ್ರಯ್ಯ ಏನು ಮಾಡುವುದೆಂದು ತಿಳಿಯದೆ ಕತ್ತರಿಸಿದ ಅಡಿಕೆ ಹೋಳನ್ನು ಬಾಯಿಗೆ ಎಸೆದುಕೊಂಡು ವೀಳ್ಯದೆಲೆ ಸುತ್ತಿದರು. " ಎಂತಾರು ಮಾಣಿ ಹತ್ರ, ಗಣಪತಿ ಮಾವಂಗೆ ಹೇಳಿ ಒಂದು ಹೋಮ ಮಾಡಿಸದೇ ಸೈ " ಎಂದು ಸಾವಿತ್ರಕ್ಕ ಮತ್ತೆ ಅಡುಗೆ ಮನೆ ಸೇರಿದಳು. 

ಸ್ನಾನ ಮಾಡಿ ಸೀರೆಯುಟ್ಟು ಬಂದ ಗಾಯತ್ರಿ ಏನೂ ಆಗೇ ಇಲ್ಲವೆಂಬಂತೆ ಸಿದ್ಧವಾಗಿದ್ದ ಅನ್ನ ಹುಳಿ ಪ್ಲೇಟಿಗೆ ಹಾಕಿಕೊಂಡು ಟಿವಿ ನೋಡುತ್ತಾ ಕುಳಿತಳು. ಅಷ್ಟರಲ್ಲಿ ವೈದೀಕದ ಮನೆಗೆ ಹೋಗಿದ್ದ ಅವಳ ಗಂಡ ರವಿ ಮನೆಗೆ ಬಂದ. ಅಪ್ಪ ಅಮ್ಮನ ಮುಖದ ಮೇಲೆ ಇದ್ದ ಪ್ರಶ್ನಾರ್ಥಕ ಚಿನ್ಹೆ ಅವನಿಗೆ ಅರ್ಥವಾಯಿತು. ಮೂವರೂ ರೂಮು ಸೇರಿ ಬಾಗಿಲು ಹಾಕಿಕೊಂಡರು. 

ಚಂದ್ರಯ್ಯನೇ  ಮಾತು ಶುರು ಮಾಡಿದ, "ಅಲ್ದೊ ನಮ್ಮ ಕಡೆ ಹೆಣ್ಣು ಸಿಗದಿಲ್ಲೆ ಅಂತ ಬಯಲು ಸೀಮೆ ಕಡೆ ಇಂದ ಹೆಣ್ಣು ತಂದ್ರೆ ಇದೆಂತ ಕಥೆ ಆತೋ". ರವಿಗೆ ಈ ಮಾತು ಹಿಡಿಸಿತಾದರೂ, ಹೆಂಡತಿಯ ಮೋಹವೇನೂ ಕಡಿಮೆ ಇರಲಿಲ್ಲ. ಐವತ್ತರ ಆಸುಪಾಸಿನ ಅವನಿಗೆ ಪುರೋಹಿತನೆಂಬ ಕಾರಣಕ್ಕೆ ಮದುವೆ ವಿಳಂಬವಾಗಿತ್ತು. ಕೊನೆಗೂ ಯಾರೂ ಸಿಗದೇ ದಲ್ಲಾಳಿಯೊಬ್ಬನನ್ನು ಹಿಡಿದು ಗುರುತು ಪರಿಚಯವಿಲ್ಲದ ದೂರದ ಬಯಲು ಸೀಮೆಯಿಂದ ಹೆಣ್ಣು ತಂದು ಮದುವೆ ನೆರವೇರಿತ್ತು. ಇಪ್ಪತ್ತರ ಗಾಯತ್ರಿಯ ತುಂಟತನ ಅವನಿಗೆ ಹಿಡಿಸಿತ್ತು. ಆದರೆ ಸಂಪ್ರದಾಯದಲ್ಲಿ ಬಿಗುವಿದ್ದ ಸಾವಿತ್ರಕ್ಕನಿಗೆ ಸೊಸೆ ಹಿಡಿಸಿರಲಿಲ್ಲ. ಅಡಿಗೆಗೆ ಹೆಚ್ಚು ಬಳಸುವ ಈರುಳ್ಳಿ, ಬೆಳ್ಳುಳ್ಳಿ ಕೋಪ ತರಿಸುತ್ತಿತ್ತು. ಭಾಷೆಯಲ್ಲೂ ವ್ಯತ್ಯಾಸ, ಸಂಸ್ಕೃತ ಜ್ಞಾನ ಸೊನ್ನೆ. ದಂಪತಿ ಸಮೇತ ಪೂಜೆಗೆ ಕುಳಿತಾಗ ಗಾಯತ್ರಿಗೆ ಪಂಚಪಾತ್ರೆಯಿಂದ ಗಂಡನ ಕೈಗೆ ನೀರು ಹಾಕಲೂ ಬರುತ್ತಿರಲಿಲ್ಲ. ಆರತಿ ಮಾಡುವಾಗ ಗಂಟೆಯೂ ಆರತಿಯೊಂದಿಗೆ ಸುತ್ತು ಹೊಡೆಯುತಿತ್ತು. ಯಲ್ಲವ್ವನಿಂದ ಗಾಯತ್ರಿ ಎಂದು ಹೆಸರು ಬದಲಾಗಿತ್ತೆ ಹೊರತು, ದೇಹದೊಳಗಿನ ರಕ್ತ ಮಾಂಸ, ಮಜ್ಜೆಯಲ್ಲ. 

ಇವೆಲ್ಲವನ್ನೂ ಹೇಗೋ ಸಹಿಸಿಕೊಂಡಿದ್ದ ಸಾವಿತ್ರಕ್ಕನಿಗೆ ಈಗ ನಡೆಯುತ್ತಿರುವ ಘಟನೆಗಳು ನುಂಗಲಾರದ ತುತ್ತಾಗಿತ್ತು. ಗಾಯತ್ರಿ ಹೇಳದೆ ಕೇಳದೆ ಮನೆಯಿಂದ ಹೊರಟು ಬಿಡುತ್ತಿದ್ದಳು. ಕಾಡು, ಗುಡ್ಡ, ಬೆಟ್ಟ ಹೀಗೆ ಎಲ್ಲೆಲ್ಲೂ ಒಬ್ಬಳೇ ಸುತ್ತುತ್ತಿದ್ದಳು. ರಸ್ತೆ ಕೆಲಸ ಮಾಡುವ ಬೋಯಿಗಳ ಜೊತೆ ಹೋಗಿದ್ದಾಗ ಊರಿನವರು ಯಾರೋ ಇವಳನ್ನು ಗುರುತಿಸಿ ಕರೆದುಕೊಂಡು ಬಂದಿದ್ದರು. ಕೇಳಿದರೆ, "ಅಲ್ಲೊಂದು ಅವ್ವಾರು ತಲೀಗೆ ಮಾಲಿಶ್ ಮಾಡ್ತಾರಾ. ಅದ್ಕೆ ಹೋಗಿದ್ನಿ" ಎನ್ನುತ್ತಿದ್ದಳು. ಈ 'ಅವ್ವಾರು' ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವುದು ಅವಳಿಗೆ ಮಾತ್ರ ಕಾಣಿಸುತಿತ್ತು. ಅಲ್ಲೆಲ್ಲೋ ಜೋಡು ರಸ್ತೆಯ ಜಂಕ್ಷನ್ ಬಳಿ, ಅರಳೀ ಕಟ್ಟೆಯ ಬುಡದಲ್ಲಿ, ಬಸ್ ಸ್ಟ್ಯಾಂಡಿನಲ್ಲಿ ಹೀಗೆ ಹಲವು ಕಡೆ ಅವಳು 'ಮಾಲಿಶ್' ಮಾಡಿಸಿಕೊಂಡಿದ್ದಳಾದರೂ ಊರವರ ಕಣ್ಣಿಗೆ ಯಾವ 'ಅವ್ವಾರೂ' ಕಾಣಿಸಿಕೊಂಡಿರಲಿಲ್ಲ. 

ಕೆಲವರು ಇದು ಮನೋರೋಗ ಎಂದರೆ, ಮತ್ತೆ ಕೆಲವರು "ಅದೇ ರಸ್ತೆ ಮಾಡ್ವಾಗ ಒಬ್ಬಳು ಗುಂಡಿಗೆ ಬಿದ್ದು ಸತೋಗಿದ್ದ ಅವಳೇ ಇದ್ದಿಕ್ಕ?" ಎಂದು ಸಂಶಯ ಮೂಡಿಸಿದರು. ರವಿ, ಅಪ್ಪ ಅಮ್ಮನ ಮಾತಿಗೆ ಮಣಿದು ಒಂದು ಹೋಮ ಮಾಡಿಸಲು ನಿರ್ಧರಿಸಿದ. ಮರುದಿನ ರವಿಯ ಸೋದರ ಮಾವನಾದ ಗಣಪತಿ ಭಟ್ಟರೇ ಮನೆಗೆ ಬಂದರು. ಚಿತ್ರ ವಿಚಿತ್ರ ರಂಗೋಲಿ ಬಿಡಿಸಿ, ಅದರ ಮೇಲೆ ಕಲಶಗಳನ್ನಿಟ್ಟು ಹೋಮ ಮಾಡಿದರು. ಪೂರ್ಣಾಹುತಿಯ ವೇಳೆ, ಗಾಯತ್ರಿ ಹ್ಞೂಕರಿಸುತ್ತಾ "ಸರಿ ನಾನಿನ್ನು ಹೋಗ್ತೀನಿ" ಎಂದು ಕೂಗಿದಳು. ಗಣಪತಿ ಭಟ್ಟರು ಎಲ್ಲವೂ ಸರಿಯಾಯಿತೆಂದು ಆಕಾಶ ನೋಡಿ ಕೈ ಮುಗಿದು ಕೃತಾರ್ಥರಾದರು. ಆದರೆ ಆ ತೃಪ್ತಿ ಕೆಲ ದಿನಗಳಿಗಷ್ಟೇ ಸೀಮಿತವಾಯಿತು. ಮತ್ತೆ ನಾಲ್ಕೇ ದಿನದಲ್ಲಿ ಅವಳು 'ಅವ್ವಾರನ್ನು' ಹುಡಿಕಿಕೊಂಡು ಗುಡ್ಡ, ಬೆಟ್ಟ ಅಲೆಯತೊಡಗಿದಳು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಊರೂರು ತಿರುಗತೊಡಗಿದಳು. 

ಆದರೆ ಈ ಬಾರಿ ಸಾವಿತ್ರಕ್ಕನ ಇನ್ನೊಂದು ಹೋಮ ಮಾಡಿಸುವ ಬೇಡಿಕೆಗೆ ರವಿ ಒಪ್ಪಿಗೆ ನೀಡಲಿಲ್ಲ. "ಶಿವಮೊಗ್ಗದಲ್ಲಿ ಸೈಕ್ಯಾಟ್ರಿಸ್ಟ್  ಹತ್ರ ಒಂದ್ಸಲ ತೋರ್ಸನ" ಎಂದು ಪಟ್ಟು ಹಿಡಿದ. ಶಿವಮೊಗ್ಗದ ಶ್ರೀಧರ ಡಾಕ್ಟರು ದೆವ್ವ ಭೂತ ಪಿಶಾಚಿಗಳೆಲ್ಲವನ್ನೂ ಒಂದೇ ಮಾತಿನಲ್ಲಿ ತೆಗೆದು ಹಾಕಿದರು. "ಛೆ ಈ ಕಾಲದಲ್ಲೂ ಇದನ್ನೆಲ್ಲಾ ನಂಬುತೀರಲ್ರಿ. ಒಂದೇ ಸಲ ಮನೆ, ಪರಿಸರ, ಸಂಸ್ಕ್ರತಿ ಎಲ್ಲ ಬದಲಾಗಿದೆ. ಹೊಸದಾಗಿ ಮದುವೆ ಆದ  ಹುಡುಗಿ ಬೇರೆ. ಒಂದಷ್ಟು ದಿನ ತವರು ಮನೆಗೆ ಕಳಿಸ್ರಿ " ಎಂದು ಬೈದರು. 

ಆಕೆ ಹೋದರೆ ಮತ್ತೆ ಬರುತ್ತಾಳೋ? ಇಲ್ಲೇನೋ ತೊಂದರೆ ಆಗಿ ವಾಪಾಸು ಹೋಗಲು ಈ ರೀತಿ ನಾಟಕ  ಮಾಡುತ್ತಿದ್ದಾಳೋ? ಎನ್ನುವ ಸಂಶಯದಲ್ಲೇ ರವಿ, ಗಾಯತ್ರಿಯ ಅಪ್ಪ ಅಮ್ಮನಿಗೆ ಹೇಳಿ ಕಳಿಸಿದ. ಮಗಳಿಗಾದ  ತೊಂದರೆ ಕೇಳಿ ಅವರು ಒಂದೇ ಉಸಿರಿನಲ್ಲಿ ಬಂದರು. "ಮೊದ್ಲು ಹೀಂಗೆ ಆಗಿಲ್ರಿ, ಇದಾ ಮೊದ್ಲು" ಎಂದು ಸಮಜಾಯಿಷಿ ನೀಡಿ ಮಗಳ ವೈವಾಹಿಕ ಜೀವನದ ತೊಂದರೆ ಸರಿಪಡಿಸಲು ಹೆಣಗಾಡಿದರು. ಬಡತನದಲ್ಲೇ ಹುಟ್ಟಿ ಬೆಳೆದ ಮಗಳು ಇಂಥತೊಂದು ಮನೆಗೆ ಸೇರಿರುವುದು ಅವರಿಗೂ  ಖುಷಿಯ ಸಂಗತಿಯಾಗಿತ್ತು. ಮಗಳನ್ನು ಊರಿಗೆ ಕರೆದುಕೊಂಡು ಹೋಗದೆ ಅಲ್ಲಿದ್ದೇ ಸಮಸ್ಯೆ ಪರಿಹರಿಸುವ ಯೋಚನೆಮಾಡಿದರಾದರೂ, ಗಾಯತ್ರಿಯೇ ಉಳಿಯುವ ಮನಸ್ಸು ಮಾಡಲಿಲ್ಲ. ಕೈ ಚೀಲ ಹಿಡಿದು ಹೊರಟ ಅಪ್ಪ ಅಮ್ಮನ ದಾರಿಹಿಡಿದು ಅವಳೂ ಮೆಟ್ಟಿಲು ಇಳಿಯತೊಡಗಿದಳು. ದಣಪೆ ತೆಗೆದು, ಏರು ಹತ್ತಿ ತಿರುವಿನಲ್ಲಿ ಮಾಯವಾಗುವವರೆಗೂ  ರವಿ ಅವಳನ್ನೇ ನೋಡುತ್ತಿದ್ದ....



29/6/20

ಮಳೆ - 1

"ಈಗೇನಂತೋ?" ಫೈಲುಗಳ ಅಭೇದ್ಯ ಕೋಟೆಯೊಳಗೆ ಹುದುಗಿಕೊಂಡಿದ್ದ ಈಶ್ವರ ನಾಯಕರು ತಮ್ಮ ಅಸಿಸ್ಟೆಂಟ್ ವಿಶ್ವನಾಥನ ಬಳಿ ಕೇಳಿದರು.

ಅವರ ಮಾತಿನಲ್ಲಿ ನಿರ್ಭಾವುಕತೆ, ಅಲಕ್ಷ , ನಿರ್ಲಿಪ್ತತೆ ಎಲ್ಲವೂ ಇತ್ತು. ತಹಶೀಲ್ದಾರ್ ಆಗಿದ್ದ ಹೊಸದರಲ್ಲಿ ಇಂತಹ ಸಣ್ಣ ಸಣ್ಣ ಪ್ರತಿಭಟನೆಗೂ ಅವರು ಹೋಗಿ ಅಹವಾಲು ಸ್ವೀಕರಿಸಿ, ಆಶ್ವಾಸನೆ ನೀಡುವ ಉಮೇದಿತ್ತು. ಸರ್ವಿಸಿನಲ್ಲಿ ಏಳು-ಬೀಳು ಕಂಡ ಮೇಲೆ ಪ್ರತಿಭಟನೆಗಳ ಒಳ ಮರ್ಮ ಅವರಿಗೆ ತಿಳಿಯಿತು. ದಿನಾ ಸಾಯುವವರಿಗೆ ಅಳುವವರ್ಯಾರು ಎಂಬ ಸಣ್ಣ ಅಲಕ್ಷವೂ ಬಂದಿದ್ದಿರಬಹುದು. 

"ಅರ್ಜಿ ಅಲ್ಲಿಟ್ಟು ಹೋಗ್ರಿ" ಎಂದು ಅವರು ಎಷ್ಟು ಬಾರಿ ಹೇಳಿದ್ದರೋ ಏನೋ? ಪ್ರತಿಭಟನೆಗಳು ಕಷ್ಟ ಪರಿಹಾರದ ಬದಲಾಗಿ ವೋಟು ಸೆಳೆದುಕೊಳ್ಳುವ ದಾರಿಯಾಗಿದೆ. ಈಗಂತೂ ಅದು ಕೇವಲ ವಿರೋಧ ಪಕ್ಷದ ಪಿತೂರಿಯೇ ಆಗಿರುತ್ತದೆ. ಒಂದು ಅರ್ಧ ಗಂಟೆ ಕೂಗಿ ಪತ್ರಕರ್ತರು ವರದಿ ಮಾಡಿದ ಮೇಲೆ ಹೋಗುತ್ತಾರೆ ಎಂದು ತಿಳಿದಿದ್ದ ನಾಯಕರಿಗೆ ಆಶ್ಚರ್ಯವಾಗುವಂತೆ ಘಟನೆಗಳು ನಡೆದವು. ಎರಡು ತಾಸಾದರೂ ಯಾರೂ ಹೊರಡಲೊಲ್ಲರು!.

ನಂತರವೇ ನಾಯಕರು ಅವರ ಧಿಕ್ಕಾರದ ಕೂಗಿಗೆ ಕಿವಿ ಹಚ್ಚಿದ್ದು. ದಿಲ್ಲಿಯ ದೊರೆಗಳಿಂದ ಹಿಡಿದು ವಿಎ ವರೆಗೆ ಯಾರಿಗೂ ಭೇದ-ಭಾವ ತೋರದೆ ಜನರು ಧಿಕ್ಕಾರ ಕೂಗುತ್ತಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಆಗುವವರೆಗೂ ಪ್ರತಿಭಟನೆ ತಣ್ಣಗಾಗುವ ರೀತಿ ಕಾಣಲಿಲ್ಲ.

ನಾಯಕರು ಇಪ್ಪತ್ತು ವರ್ಷಗಳಿಂದ ಸಾಗರದ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇಡೀ ರಾಜ್ಯದ ಮೂವತ್ತು ಪರ್ಸೆಂಟ್ ವಿದ್ಯುತ್ ಒದಗಿಸುವ ಸಾಗರಕ್ಕೇ ಕುಡಿಯುವ ನೀರಿನ ಸಮಸ್ಯೆ ಬರಬಹುದು ಎಂದು ಯಾರೂ ತಿಳಿದಿರಲಿಲ್ಲ. ನಾಯಕರು ಮೊದಲು ಬಂದಾಗ ಮಳೆ ನೋಡಿ ಭಯಗೊಂಡಿದ್ದರು. "ಮಾರಾಯಾ ಈ ಊರಲ್ಲಿ ಮಳೆ 'ಬೀಳಲ್ಲ', ಕೊಡದಿಂದ ಸುರಿದಂಗೆ ಸುರಿಯುತ್ತೆ" ಎಂದು ಚಟಾಕಿಯನ್ನೂ ಹಾರಿಸಿದ್ದರು.

ಸಾಗರವನ್ನು ನಗರವೆಂದರೆ ತಪ್ಪಾದೀತು. ಯಾವುದೋ ರಾಜಾನೋ, ಸಂಸ್ಥಾನವೋ ಸರಿಯಾದ ಪ್ಲಾನು ಹಾಕಿ ಕಟ್ಟಿದಂತೆ ಅದು ಕಾಣುತ್ತಿರಲಿಲ್ಲ. ಜಾಗವಿದ್ದಲ್ಲಿ ಮನೆ ಕಟ್ಟಿ, ಅಂಗಡಿ ಮಾಡಿ, ನಂತರ ಶಾಲೆ ಅದೂ-ಇದೂ ಕಟ್ಟಿ ರೂಪುಗೊಂಡಂತಿತ್ತು. ನಾಯಕರೂ ಸಹ ಹಾಗೆಯೇ ತಿಳಿದಿದ್ದರು. ಆದರೆ ಆಫೀಸಿನಲ್ಲಿ ಹಳೆ ಫೈಲು ಸಿಕ್ಕಾಗ ನಾಯಕರು ದಿಗ್ಬ್ರಾಂತರಾಗಿ ಹೋಗಿದ್ದರು. ಸಾಗರಕ್ಕೆ ಸಾವಿರ ಸಾವಿರ ವರ್ಷಗಳ ಇತಿಹಾಸವಿದೆ. ಕೆಳದಿಯ ಸದಾಶಿವ ನಾಯಕ ದೊಡ್ಡ ಕೆರೆಯೊಂದನ್ನು ಕಟ್ಟಿಸಿದ್ದ. ಆಗಿನ ಕಾಲಕ್ಕೆ ಅದನ್ನು ಸದಾಶಿವ ಸಾಗರ ಎಂದು ಕರೆಯುತ್ತಿದ್ದರು. ಅದರ ಗಾತ್ರವನ್ನು ನೋಡಿ ಜನ ಅದನ್ನು 'ಸಾಗರ' ಎಂದು ಉದ್ಗರಿಸುತ್ತಿದ್ದರು. ಅನ್ವರ್ಥ ನಾಮವೇ ಊರಿನ ಹೆಸರಾಯಿತು. ಕ್ರಮೇಣ ಕೆರೆಯ ಗಾತ್ರ ಕುಗ್ಗುತ್ತಾ ಹೋಯಿತು ಈಗ ಕೇವಲ ಹೆಸರಿಗೆ ಒಂದು ಕೆರೆಯಿದೆ ಅಷ್ಟೇ. ಅದನ್ನು ಗಣಪತಿ ಕೆರೆ ಎಂದು ಗುರುತಿಸುತ್ತಾರೆ.

ಅಷ್ಟು ವೈಭವೋಪೇತವಾಗಿದ್ದ  ಊರು ಈಗ ಹೀಗೇಕಾಗಿದೆ? ಎಂದು ನಾಯಕರು ಚಿಂತಿಸಿದ್ದರು. ಆದರೆ ಇದೇ ಕಾರಣ ಎಂಬ ಯಾವ ಉತ್ತರವೂ ಅವರಿಗೆ ಹೊಳೆದಿರಲಿಲ್ಲ. ಜನರ ಮನಸ್ಥಿತಿ ಇರಬಹುದು, ಆರ್ಥಿಕತೆಯಿರಬಹುದು, ಪರಕೀಯರ ದಾಳಿಯಿರಬಹುದು ಅಥವಾ ಇವೆಲ್ಲವೂ ಇರಬಹುದು. 

ಖುದ್ದು ನಾಯಕರೇ ಹೋಗಿ ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿದರು. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಸಾಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಅರ್ಜಿಯಲ್ಲಿ ಬರೆಯಲಾಗಿತ್ತು . ಈ ಜನಕ್ಕೆ ಬುದ್ಧಿಯೇ ಇಲ್ಲವೇ ? ಎಂದುಕೊಂಡರು ನಾಯಕರು. ಡ್ಯಾಮ್ ಕಟ್ಟುವಾಗಲೇ ಅದರ ಉಪಯೋಗವನ್ನು ಪೂರ್ವ ನಿಗದಿ ಮಾಡಲಾಗುತ್ತದೆ. ಲಿಂಗನಮಕ್ಕಿಯ ನೀರನ್ನು ವಿದ್ಯುತ್ ಉತ್ಪಾದನೆಗೆ ಅಷ್ಟೇ ಬಳಸಬೇಕು. ಅದರ ನೀರನ್ನು ನೀರಾವರಿಗೋ, ಕುಡಿಯಲೋ ಅದನ್ನು ಬಳಸಿದರೆ ಅದು ಅಪರಾಧ. ತಾವೇ ಎಷ್ಟೋ ಬಾರಿ ನೀರಾವರಿಗೆ ಹಾಕಿಕೊಂಡ ಅಕ್ರಮ ಪಂಪುಗಳನ್ನು ತೆಗೆಸಿ ಬಂದಿದ್ದರು. ಈಗ ಆ ಅರ್ಜಿಯನ್ನು ನೋಡಿ 'ಥತ್!' ಎಂಬ ಉದ್ಗಾರವಷ್ಟೇ ಅವರ ಬಾಯಿಂದ ಬಂದದ್ದು. 

"ಅಲ್ಲೋ ವಿಶ್ವನಾಥ ಈ ಜನಕ್ಕೆ ಏನು ಬಂದಿದೆ ಅಂತ? ಎಲ್ಲಿಂದಲೋ ನೀರು ತರಬೇಕಂತೆ. ಅದು ಆ ಊರವರ  ಹಕ್ಕಲ್ಲವೇನೋ?. ಅವರ ನೀರು ಕಿತ್ತು ಇವರಿಗೆ ಕೊಡಬೇಕೆ? ಐದಾರು ವರ್ಷದ ಹಿಂದೆ ಈ ಅಕೇಶಿಯಾ ಪ್ಲಾಂಟೇಶನ್ ಬೇಡವೇ ಬೇಡ ಎಂದು ನಾನು ಗಂಟಲು ಹರಿಯುವ ಹಾಗೆ ಕೂಗಿದ್ರೂ ಡಿಸಿ ಹತ್ರ ಹೋಗಿ ನನ್ನ ಮೇಲೆ ಪುಕಾರು ಮಾಡಿದ್ರು ಅಲ್ವ ಈ ಜನ. ಈಗ ಅನುಭವಿಸ್ತಾ ಇದಾರೆ ನೋಡು", ಈಶ್ವರ ನಾಯಕರು ತಮ್ಮ ಕೋಪವನ್ನು ವಿಶ್ವನಾಥನ ಮೇಲೆ ತೀರಿಸಿಕೊಂಡರು.

"ಸಾರ್, ಪ್ಲಾಂಟೇಷನ್ನಿಗೂ ನೀರಿಗೂ ಎಂಥಾ ಸಂಬಂಧ ಸಾರ್?", ಡಿಗ್ರಿ ಪಾಸಾಗದ ವಿಶ್ವನಾಥ ತನ್ನ ದಡ್ಡತನ ಪ್ರದರ್ಶಿಸಿದ. 

"ನಿಮ್ ತಲೇಲಿ ಏನಿದೆ? ಆ ಅಕೇಶಿಯಾ ನೋಡಿದೀಯಾ? ನಾಲ್ಕೇ ವರ್ಷದಲ್ಲಿ ಭೂತಾಕಾರಕ್ಕೆ ಬೆಳೆಯುತ್ತೆ. ನೀರು  ನಿಮ್ಮಪ್ಪ ಹಾಕ್ತಾನಾ? ಅದರ ಬೇರು ಆಳಕ್ಕೆ ಇಳಿದು ಅಂತರ್ಜಲ ಎಲ್ಲಾ ಹೀರುತ್ತೆ. ನಮ್ಮ ಸರ್ಕಾರದವರೇನು ಬಂಜರು ಭೂಮಿಯಲ್ಲಿ ಪ್ಲಾಂಟೇಶನ್ ಹಾಕ್ತಾರೆ ಅನ್ಕೊಂಡಿದೀಯ? ಇರೋ ಕಾಡು ಕಡಿದು ಅಲ್ಲೇ ಪ್ಲಾಂಟೇಶನ್ ಮಾಡ್ತಾರೆ.  ಅಷ್ಟು ವೈವೀದ್ಯ ಮರಗಳಿರೋ ಕಾಡು ಕಡಿದು ಒಂದೇ ಜಾತಿಯ ಮರ ಹಾಕಿದ್ರೆ ಇಕೋ ಸಿಸ್ಟಮ್ ಹಾಳಾಗಿ ಹೋಗುತ್ತೆ. ನಾನು ಇದ್ನೇಲ್ಲಾ ಎಷ್ಟು ಬಡಕೊಂಡ್ರು ಊರಿಗೊಂದು ಅರಣ್ಯ ಸಮಿತಿ ಮಾಡಿ ಸರ್ಕಾರದಿಂದ ಬರೋ ಫಂಡ್ ಎಲ್ಲಾ ನುಂಗಿ ಹಾಕಿದ್ರು." ಒಂದೇ ಉಸಿರಿಗೆ ನಾಯಕರು ಎಲ್ಲವನ್ನೂ ಹೇಳಿದರು.

"ನೀವ್ ಹೇಳಿದ್ದೆಲ್ಲಾ ಸರಿ ಸಾರ್. ಆದ್ರೆ ಜನ ಕೇಳ್ಬೇಕಲ್ಲ. ವೋಟು ಹಾಕಿಲ್ವ ನೀರು ಕೊಡಿ ಅಂತಾರೆ. ಎಲ್ಲಿಂದ ನೀರು  ತಂದೆ ಎಂದು ಅವರಿಗ್ಯಾಕೆ ಬೇಕು ಸಾರ್ ?" ವಿಶ್ವನಾಥ ತನ್ನ ಚಾಟಿ ಬೀಸಿದ.

ನಾಯಕರು, "ತಡಿ ಅವರ ಹತ್ರ ಮಾತಾಡಣ" ಎಂದು ಹೊರಗೆ ಬಂದರು.....

Add caption

8/12/18

ಮುಳುಗಡೆ

ಮದುವೆಯಾದ ಮೇಲೆ ಮನೆಗೆ ಹೋಗುವುದೆಂದರೆ ಅದು ಒಂದು ದೊಡ್ಡ ಹೋರಾಟ. ನನ್ನ ರಜೆಯನ್ನು ನೋಡಿಕೊಳ್ಳಬೇಕು, ಮಗನ ರಜೆಯನ್ನು ನೋಡಿಕೊಳ್ಳಬೇಕು, ಹಾಲಿನವನಿಗೆ, ಪೇಪರಿನವನಿಗೆ ಹೇಳಬೇಕು. ಬಸ್ಸೋ, ರೈಲೋ ಒಟ್ಟಿನಲ್ಲಿ ಸ್ಲೀಪರ್ ಕೋಚೇ ಆಗಬೇಕು. ಸೀಟು ಸಿಗಲಿಲ್ಲವೆಂದರೆ ಕಾರು ತೆಗೆದಕೊಂಡು ಹೋಗಬೇಕು. ಬ್ರಹ್ಮಚಾರಿ ಜೀವನದಲ್ಲಿ ಹಾಗಿರಲಿಲ್ಲ, ವೀಕೆಂಡ್ ಬಂದರೆ ಸಾಕಿತ್ತು. ಬ್ಯಾಗು ಹೆಗಲಿಗೇರಿಸಿ, ಸಿಕ್ಕ ಬಸ್ಸು ಅಥವಾ ರೈಲು ಹತ್ತಿ ಹೋಗಿಬಿಡುತ್ತಿದ್ದೆ. ಈಗ ಕಾಲ ಬದಲಾಗಿ, ಜವಾಬ್ದಾರಿಗಳು ಹೆಗಲಿಗೇರಿವೆ. ಆದ್ದರಿಂದ ಊರಿಗೆ ಹೋಗುವುದು ಕಡಿಮೆಯಾಗಿದೆ.
ನಾಗರಪಂಚಮಿ ಸೋಮವಾರ ಬಂದಿದ್ದರಿಂದ ಗೋಜಲುಗಳು ಕಡಿಮೆಯಾಗಿ ಊರಿಗೆ ಹೋಗುವ ಅವಕಾಶ ಸಿಕ್ಕಿತು. ಅಪ್ಪನಿಗೆ ಫೋನ್ ಮಾಡಿ ಬರುವುದನ್ನು ತಿಳಿಸಿದೆ. "ಬನ್ನಿ, ಎಲ್ಲರೂ ಸೇರಿ ಹಬ್ಬ ಮಾಡೋಣ" ಎಂದು ಹೇಳಿ ಸಂತೋಷದಿಂದಲೇ ಫೋನಿಟ್ಟ . ದಾರಿಯಲ್ಲಿ ಕಾರು ಕೆಟ್ಟುಹೋಗಿ ಊರು ತಲುಪುವುದು ಮಧ್ಯಾಹ್ನವಾಗಿ ಹೋಯಿತು. ಎಷ್ಟೇ ತಡವಾದರೂ ಅಪ್ಪ ಖುಷಿಯಿಂದಲೇ ಬರಮಾಡಿಕೊಂಡ.  ಖಾಲಿ ಖಾಲಿಯಾಗಿದ್ದ ಮನೆ ತುಂಬಿದ್ದರಿಂದ ಅಮ್ಮನಿಗೂ ಖುಷಿಯಾಯಿತು. ಹಲಸಿನ ಹಪ್ಪಳ, ಮಾವಿನಕಾಯಿ ತಂಬುಳಿ, ಪತ್ರೊಡೆ ಹೀಗೆ ಪ್ರಮುಖ ಐಟಮ್ಮುಗಳೇ ಮೆನುವಿನಲ್ಲಿತ್ತು. ನಮ್ಮೆಲ್ಲರಿಗೂ ಬಡಿಸಿ, ನಂತರ ಅಮ್ಮನೂ ಊಟಮಾಡಿ ಅಂಗಳದಲ್ಲಿ ಕಾಯುತ್ತಿದ್ದ ಯಲ್ಲನಿಗೂ ಬಡಿಸಿದಳು. ಯಲ್ಲನನ್ನು ಮಾತನಾಡಿಸುವ ಮನಸ್ಸಾದರೂ ಅವನಿಗೆ ಊಟ ಆಗುವವರೆಗೆ  ಕಾದೆ. ಅವನಿಗೆ ವಿಪರೀತ ನಾಚಿಕೆ.  ನಾನು ಹೋದರೆ ಊಟ ಮಾಡಲೂ ಸಂಕೋಚಪಟ್ಟುಕೊಂಡು ಅರೆಬರೆ ಊಟಮಾಡಿ ಬಿಡುತ್ತಾನೆ. ನಾನು ಚಿಕ್ಕವನಿದ್ದಾಗ ಸ್ನೇಹಿತರ ಜೊತೆ ಆಟವಾಡುವಾಗ ಇವನು ಅಲ್ಲೇನಾದರು ಬಂದಿದ್ದರೆ ನಾನೂ ಹಾಗೆಯೇ ಸಂಕೋಚದಿಂದ ಅಡಗಿ ಬಿಡುತ್ತಿದ್ದೆ .  ಎಲ್ಲರ ಮುಂದೂ ಅವನು ನನ್ನನ್ನು 'ಸಣ್ಣ ಹೆಗಡೇರೆ' ಎಂದು ಸಂಬೋಧಿಸುವುದು ನನಗೆ ವಿಪರೀತ ನಾಚಿಕೆ ಉಂಟುಮಾಡುತ್ತಿತ್ತು. ನನ್ನಪ್ಪನ ವಾರಿಗೆಯ ಅವನು ಇವತ್ತಿಗೂ ನನ್ನನ್ನು 'ಸಣ್ಣ  ಹೆಗಡೇರೆ' ಎಂದು ಸಂಬೋಧಿಸುತ್ತಾನೆ.  ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಅವನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನ ಅಪ್ಪ ಕಲ್ಲಮೆಟ್ಲು ಎಂಬ ಊರಿನಲ್ಲಿ ಜಮೀನು ಮಾಡಿಕೊಂಡು ಇದ್ದನಂತೆ. ನಂತರ ಸರ್ಕಾರ ಡ್ಯಾಮು ಕಟ್ಟಿ ಜಮೀನು ಮುಳುಗಡೆಯಾಯಿತು. ಪರಿಹಾರದ ಹಣವೂ ಸರಿಯಾಗಿ ಸಿಗದೇ ಯಲ್ಲನ ಅಪ್ಪ ಅದೇ ನೀರಿಗೆ ಹಾರಿ ಪ್ರಾಣ ಬಿಟ್ಟರಂತೆ. ಅವನ ತಾಯಿಯೂ ಅದೇ ಕೊರಗಿನಲ್ಲಿ ಕಣ್ಣು ಮುಚ್ಚಿದಳು.
ಅನಾಥನಾದ ಯಲ್ಲ ಹೊಟ್ಟೆಪಾಡಿಗೆ ಕೆಲಸ ಹುಡುಕಿಕೊಂಡು ಊರೂರು ಅಲೆಯುತ್ತಿರುವಾಗ , ನನ್ನ ಅಜ್ಜ ಅವನಿಗೆ ಕೆಲಸ ಕೊಟ್ಟಿದ್ದರಂತೆ . ಇನ್ನೂ ರಟ್ಟೆ ಬಲಿಯದ ಹುಡುಗ ಏನು ಕೆಲಸ ತಾನೇ ಮಾಡಿಯಾನು ? ಮೂರು ಹೊತ್ತು ಊಟ ಮಾಡಿಕೊಂಡು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದನಂತೆ . ಆದರೆ ಯೌವನಕ್ಕೆ ಕಾಲಿಟ್ಟಾಗ ಮೈ ಮುರಿದು ಕೆಲಸ ಮಾಡುತ್ತಿದ್ದ . ನಂತರ ಅಪ್ಪನೇ ಘಟ್ಟದ ಕೆಳಗಿನ ಹೆಣ್ಣೊಂದನ್ನು ಹುಡುಕಿ ಅವನ ಮದುವೆ ಮಾಡಿದ್ದರು . ಈಗ ಅವನಿಗೆ ಮುಪ್ಪು ಆವರಿಸಿದೆ . ಇದ್ದೊಬ್ಬ ಮಗಳನ್ನು ಘಟ್ಟದ ಕೆಳಗೆ ಮದುವೆ ಮಾಡಿಕೊಟ್ಟಿದ್ದಾನೆ . ಹೆಂಡತಿ ಕಾಲವಾಗಿದ್ದಾಳೆ . ಈಗ ಮತ್ತೆ ಅವನು ಯಾವ ಕೆಲಸವನ್ನೂ ಮಾಡಲಾರ . ನಮ್ಮ ಮನೆಗೂ ಅವನಿಗೂ ಯಾವುದೋ ಪೂರ್ವ ಜನ್ಮದ ಸಂಬಂಧವಿರಬೇಕು . ಆತನ ಜೀವನ ಎಷ್ಟೇ ಕವಲೊಡೆದು ಎಲ್ಲೇ ಹೋದರೂ ನಮ್ಮ ಮನೆಗೇ ಬಂದು ತಲುಪುತ್ತದೆ . ನನಗೆ ಇಷ್ಟೇ ಸಂಬಳ ಬೇಕು ಎಂದು ಅವನೆಂದೂ ಕೇಳಿಲ್ಲ . ನಮ್ಮ ಮನೆಯಲ್ಲೇ ಊಟ ಮಾಡುತ್ತಾ , ಕೊಟ್ಟಷ್ಟು ಸಂಬಳ ಪಡೆದು ನಮ್ಮ ಮನೆಯ ಸದಸ್ಯನೇ ಆಗಿದ್ದಾನೆ .
ನನಗೂ ಯಲ್ಲನಿಗೂ ಬಹಳ ದೋಸ್ತಿ . ನಾನು ಬಾಲ್ಯಾವಸ್ಥೆಯಲ್ಲಿದ್ದಾಗ ಅವನು ಮಧ್ಯ ವಯಸ್ಕ . ನಮ್ಮೂರಿನ ಕಾಡು ,ಬೆಟ್ಟ ,ಗುಡ್ಡ,ಝರಿ-ತೊರೆಗಳು ಅವನಿಗೆ ಚಿರಪರಿಚಿತ . ನನ್ನನ್ನು ಕಟ್ಟಿಕೊಂಡು ಕಾಡು ಅಲೆಯುತ್ತಿದ್ದ .ನಾನು ಸುಸ್ತು ಎಂದಾಗ ,ಉಂಬಳ ನೋಡಿ ಹೆದರಿದಾಗ ನನ್ನನ್ನು ಅನಾಮತ್ತು ಹೆಗಲ ಮೇಲೆ ಎತ್ತಿಕೊಂಡು ಹೋಗಿಬಿಡುತ್ತಿದ್ದ . ನೆಲ್ಲಿಕಾಯಿ ಕೊಯ್ಯುವುದು ,ಹೊಳೆ ದಾಸವಾಳದ ಹಣ್ಣು ಹೆಕ್ಕುವುದು ,ಈಜುವುದು ಇದನ್ನೆಲ್ಲಾ ಅವನಿಂದಲೇ ನಾನು ಕಲಿತದ್ದು . ಶರಾವತಿಯ ಹಿನ್ನೀರಿನ ಆಳದ ಗುಂಡಿಗಳಲ್ಲಿ ಅವನು ಈಜು ಕಲಿಸುವಾಗ "ಇಲ್ಲೇ ಹೆಗಡೇರೆ ನನ್ನಪ್ಪ ಮುಳುಗಿದ್ದು " ಎಂದು ಹೇಳುತ್ತಿದ್ದದ್ದು ನನಗೆ ಸ್ಪಷ್ಟವಾಗಿ ನೆನಪಿದೆ . ಅದರ ಹಿಂದಿನ ದುಃಖವನ್ನು ಅರ್ಥ ಮಾಡಿಕೊಳ್ಳುವಷ್ಟು ನಾನು ಬೆಳದಿಲ್ಲದಿದ್ದರಿಂದ "ಹಾಗಿದ್ರೆ ಹುಡ್ಕು ಸಿಕ್ಕಿದ್ರೂ ಸಿಗ್ಬೋದು " ಎನ್ನುತ್ತಿದ್ದೆ .ಆದರೆ ಅವನು ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ " ಶರಾವತಿ ಯಾರ್ನೂ ಬಿಡ್ಲ , ನಮ್ನ ಮುಳುಗುಸ್ಬುಟ್ಲು" ಎನ್ನುತ್ತಿದ್ದ . ಈಗ ಅವನ ಮಾತುಗಳನ್ನು ನೆನಿಸಿಕೊಂಡರೆ ಅದರ ಹಿಂದಿನ ದುಃಖ , ಆಧ್ಯಾತ್ಮಿಕತೆ ಎಲ್ಲವೂ ಅರ್ಥವಾಗುತ್ತದೆ . ನಮ್ಮೆಲ್ಲರ ಒಳಿತಿಗಾಗಿ ತಮ್ಮ ಜೀವನವನ್ನೇ ಮುಳುಗಿಸಿಕೊಂಡ ಸಾವಿರಾರು 'ಯಲ್ಲ'ರ ಧ್ವನಿ ನನ್ನ ಆಂತರ್ಯವನ್ನು ತಟ್ಟುತ್ತದೆ . ಜೀವನದ ಹಲವು ವರ್ಷಗಳನ್ನು ಒಂಟಿಯಾಗಿ ಕಳೆದ ಯಲ್ಲ ಒಬ್ಬ ಸಂತನಾಗಿ  ನನಗೆ ಕಾಣುತ್ತಾನೆ .
"ಏನೋ ಯಲ್ಲ ಕೂದಲೆಲ್ಲಾ ಹಣ್ಣಾಯ್ತಲ್ಲೋ ಅಂತೂ ಮುದುಕ ಆದೆ " ಎಂದು ನಾನು ಕಿಚಾಯಿಸಿದೆ . "ಹಂಗೇನಿಲ್ರ ಬೇಕಾರೆ ಇವತ್ತೂ ಪಂಡರಿಕೊಪ್ಪ ಗುಡ್ಡದ ನೆತ್ತಿ ಹತ್ನಿ" ಎಂದು ತನ್ನ ಶಕ್ತಿ ಪ್ರದರ್ಶನದ ಸವಾಲೆಸೆದ . ನನಗೂ ಅದೇ ಬೇಕಾಗಿತ್ತು . ಟ್ರಾಫಿಕ್ಕಿನ 'ಪೀಮ್-ಪಾಮ್' ,ಝಗಮಗಿಸುವ ಲೈಟುಗಳಿಂದ ದೂರ ಹೋಗಬೇಕಿತ್ತು . ಕುರುಕಲು ತಿಂಡಿ ತಿನ್ನುತ್ತಾ , ಆಟವೆಂದರೆ ಕೇವಲ ಕಂಪ್ಯೂಟರಿನೊಳಗೆ ಎಂದು ತಿಳಿದು ಬೆಳೆಯುತ್ತಿರುವ ನನ್ನ ಮಗ ಸುಮಂತನಿಗೆ ಒಂದಷ್ಟು ಕಾಡು ಸುತ್ತಿಸಬೇಕಿತ್ತು . ಅವನ ಹದಿನಾರನೇ ವರ್ಷಕ್ಕೆ ಬಂದ ಬೊಜ್ಜು ಸ್ವಲ್ಪ ಕರಗಬೇಕಿತ್ತು.
ಮೂವರೂ ನಮ್ಮ ನಾಗರೀಕತೆಯನ್ನು ಹಿಂದೆ ಬಿಟ್ಟು ಗುಡ್ಡ ಹತ್ತತೊಡಗಿದೆವು . ಕಾಲು ದಾರಿಯೆಲ್ಲವೂ ಗಿಡಗಳಿಂದ ಕಮಿದು ಹೋಗಿತ್ತು . ಹಿಂದೆಲ್ಲಾ ದನ ಕಾಯುವವರು , ಕೆಲ ಊರಿನ ಜನ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರಿಂದ ದಾರಿ ಚೊಕ್ಕಟವಾಗಿತ್ತು . ಯಲ್ಲ ಕತ್ತಿ ಹಿಡಿದು ದಾರಿ ಸ್ವಚ್ಛ ಮಾಡುತ್ತಾ ಮುಂದೆ ಸಾಗುತ್ತಿದ್ದರೆ , ನಾವು ಅವನನ್ನೇ ಹಿಂಬಾಲಿಸುತ್ತಾ ಹೋಗುತ್ತಿದ್ದೆವು . ಯಾವ್ಯಾವುದೋ ಬೇರುಗಳನ್ನು ,ಬಳ್ಳಿಗಳನ್ನು "ಇದು ಔಷಧಿಗೆ ಬತೈತಿ " ಎಂದು ಯಲ್ಲ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ . ವಯಸ್ಸಿನಲ್ಲಿ ಹಿರಿಯವನಾದ ಅವನು ಚಿಗರೆ ಮರಿಯಂತೆ ಮುಂದೆ ಸಾಗುತ್ತಿದ್ದರೆ ,ಕಿರಿಯವನಾದ ಸುಮಂತ ಮಾರು-ಮಾರಿಗೆ "ಡ್ಯಾಡಿ ಸುಸ್ತು" ಎಂದು ಕುಳಿತು ಬಿಡುತ್ತಿದ್ದ . ಒಮ್ಮೆ ಕಾಲ ಬಳಿಯಿದ್ದ ಪೊದೆಯಿಂದ ಮೊಲವೊಂದು ಮಿಂಚಿನಂತೆ ಓಡಿ ಕಾಡಿನ ಅಗಾಧ ಮೌನವನ್ನು ಸೀಳಿಕೊಂಡು ಅಂತರ್ಧಾನವಾಯಿತು . "ಒಹ್ , ಸೀ  ರ್ಯಾಬಿಟ್" ಎಂದು ಉದ್ಗರಿಸಿದ ನನ್ನ ಮಗನ ಮೂರ್ಖತನಕ್ಕೆ ನಾನು ನಕ್ಕೆ . ಮೊಲ , ಕಾಡು ಕೋಳಿಗಳನ್ನು ಹಿಡಿಯುವ ಉರುಳನ್ನು ಯಲ್ಲ ನಮಗೆ ತೋರಿಸಿ ಅವನದೇ ಭಾಷೆಯಲ್ಲಿ ಅದರ ಬಗ್ಗೆ ವಿವರಿಸಿದ .
ಮೂವರೂ ಘಟ್ಟದ ಚೌಕಕ್ಕೆ ಬಂದೆವು .ನನ್ನ ಇಷ್ಟದ ಜಾಗದಲ್ಲಿ ಘಟ್ಟದ ಚೌಕವೂ ಒಂದು . ಅದು ನಮ್ಮೂರಿನ ಎತ್ತರದ ಗುಡ್ಡದ ತುತ್ತ ತುದಿ . ಅದನ್ನು ಹತ್ತಿ ಆಚೆ ನೋಡಿದರೆ ಶರಾವತಿಯ ಹಿನ್ನೀರಿನ ನೀಲಿ ಬಣ್ಣ ಕಣ್ಣಿಗೆ ರಾಚುತ್ತದೆ . ಅಲ್ಲಿ ಸಿಗುವ ಅಲೌಖಿಕ ಸುಖವನ್ನು ನಾನು ಬಹವಳೇ ಅನುಭವಿಸಿದ್ದೇನೆ . ಕೆಲವೊಮ್ಮೆ ಬಯಲು ಸೀಮೆಯ ಬಾಳು ಬೇಸರವೆನಿಸಿದಾಗ ಮನದಲ್ಲಿಯೇ ಘಟ್ಟದ ಚೌಕ ನೆನೆಸಿಕೊಂಡು ಖುಷಿಪಟ್ಟಿದ್ದೇನೆ . ಚೌಕದ ಒಂದು ಮೂಲೆಯಲ್ಲಿ ಕಲ್ಲು ಮಂಟಪವಿದೆ . ಯಾರು ಕಟ್ಟಿಸಿದ್ದು ? ಎಷ್ಟು ವರ್ಷದ ಹಿಂದೆ ? ಮುಂತಾದ ಪ್ರಶೆಗಳಿಗೆ ಯಾರಲ್ಲೂ ಉತ್ತರವಿಲ್ಲ . ನಮ್ಮೆಲ್ಲರ ಹುಟ್ಟಿನ ಬಗ್ಗೆ ,ಇರುವಿಕೆಯ ಬಗ್ಗೆ ಹೇಗೆ ಉತ್ತರಗಳು ಸಿಗುವುದಿಲ್ಲವೋ ಹಾಗೆಯೇ ಅದರ ಹುಟ್ಟಿನ ಬಗ್ಗೆ ಉತ್ತರಗಳಿಲ್ಲ . ಯಲ್ಲನೂ ಸೇರಿದಂತೆ ಹಲವರು ಅದರ ಮೇಲೆ ಕಥೆ ಹೇಳುತ್ತಾರೆ .ಸೀತೆಯನ್ನು ಕಳೆದುಕೊಂಡ ರಾಮ ಇದೇ ಕಲ್ಲು ಮಂಟಪದ ಮೇಲೆ ಕುಳಿತು ತನ್ನ ಪತ್ನಿಗಾಗಿ ಪರಿತಪಿಸುತ್ತಾ ಕಣ್ಣೀರು ಸುರಿಸುತ್ತಿದ್ದನಂತೆ .ಇಂದಿಗೂ ಮಂಟಪದ ಪಕ್ಕವೇ ಒಂದು ಹೆಸರಿಲ್ಲದ ತೊರೆ ಹುಟ್ಟಿ ಶರಾವತಿಯನ್ನು ಸೇರುತ್ತದೆನ್ನುವುದು ನಿಜವಾದರೂ ,ಆ ಕಥೆಯ ಸತ್ಯಾಸತ್ಯತೆಯ ಬಗ್ಗೆ ನನಗೆ ತಿಳಿದಿಲ್ಲ . ನನ್ನ ಹಿರಿಯರಿಂದ ಬಂದ ಕಥೆಯನ್ನು ನಾನು ಯಥಾವತ್ತು ಕಿರಿಯರಿಗೆ ದಾಟಿಸುತ್ತಿದ್ದೇನೆ ಅಷ್ಟೇ .
ಮೊದಲಿದ್ದ ಚೈತನ್ಯ ಯಲ್ಲನಲ್ಲಿ ಕಾಣಲಿಲ್ಲ . ಸುಮಂತ ಮಾತ್ರ ಬಹಳ ಖುಷಿಯಲ್ಲಿದ್ದ.ಗುಡ್ಡದಲ್ಲಿ  ಮಳೆಯ ನೀರು ಸೃಷ್ಟಿಸಿದ ಅಸಂಖ್ಯ ಜಲಪಾತಗಳಲ್ಲಿ ಕಾಲಿಟ್ಟುಕೊಂಡು ಕುಣಿದಾಡುತ್ತಿದ್ದ .
"ಅಲ್ನೋಡು ಡ್ಯಾಮು ಎಷ್ಟು ಚೆನ್ನಾಗಿದೆ " ಎಂದು ಆಶ್ಚರ್ಯ ಸೂಚಿಸುತ್ತಿದ್ದ . "ನಮ್ಮ ಪಶ್ಚಿಮ ಘಟ್ಟ ಹಿಮಾಲಯಕ್ಕಿಂತಲೂ ಹಳೆಯದು . ಮನುಷ್ಯ ಮೊದಲು ಕಾಲಿಟ್ಟಿದ್ದು ಪಶ್ಚಿಮ ಘಟ್ಟದಲ್ಲೇ. ಇಲ್ಲಿ ಲಕ್ಷಾಂತರ ಜೀವ ಪ್ರಭೇದಗಳಿವೆ . ಇಂಥಾ ಕಾಡನ್ನ , ಇಲ್ಲಿನ ಜನರ ಬದುಕನ್ನು ಡ್ಯಾಮು ಮುಳ್ಗ್ಸಿದೆ " ಎಂದೆ . ಅದೊಂದೂ ಅವನಿಗೆ ಅರ್ಥವಾಗದೆ ಹೌದೆಂಬಂತೆ ತಲೆಯಾಡಿಸಿದೆ .
ಸುಮಂತನಿಗೂ ,ಯಲ್ಲನಿಗೂ ಅಜಗಜಾಂತರ ವ್ಯತ್ಯಾಸವಿತ್ತು . ಯಲ್ಲ ನನ್ನ ಜೊತೆ ಇದ್ದಷ್ಟು ಸಲುಗೆಯಿಂದ ,ಸುಮಂತನ ಜೊತೆ ಇರಲಿಲ್ಲ . ಸುಮಂತನ ಕನ್ನಡ ಮಿಶ್ರಿತ ಇಂಗ್ಲಿಷಿಗೂ , ಯಲ್ಲನ ಗ್ರಾಮ್ಯ ಕನ್ನಡಕ್ಕೂ ತಾಳಮೇಳವೇ ಇರಲಿಲ್ಲ . ನಾನೂ ಊರು ಬಿಟ್ಟು ,ನನ್ನ ಮಗವನ್ನು ಅವನದೇ ಊರಿನಲ್ಲಿ ಪರಕೀಯನಾಗುವಂತೆ ನಾನು ಮಾಡಿದ್ದೆ . ಸುಮಂತ ನಗರದ ಪ್ರತಿನಿಧಿಯಾದರೆ ,ಯಲ್ಲ ಗ್ರಾಮದ ಪ್ರತಿನಿಧಿಯಾಗಿದ್ದ . ನಾನು ಗ್ರಾಮದಲ್ಲೂ ಇರದೇ , ನಗರದಲ್ಲೂ ತೊಳಲಾಟ ಅನುಭವಿಸುತ್ತಾ ಅತಂತ್ರವಾಗಿದ್ದೆ . ನಾವು ಭಾರತದ ನಿನ್ನೆ , ಇಂದು ಮತ್ತು ನಾಳೆಗಳ ಪ್ರತಿನಿಧಿಯಾಗಿದ್ದೆವು . ಸೂರ್ಯ ನಿಧಾನವಾಗಿ ಕೆಳಗಿಳಿಯುತ್ತಿದ್ದ . ದಿಗಂತದವರೆಗೂ ಶರಾವತಿಯೇ ಕಾಣುತ್ತಿದ್ದಳು . ಕೆಂಪಗಿನ ಸೂರ್ಯನನ್ನೂ ಶರಾವತಿ ಮುಳುಗಿಸುತ್ತಿರುವಂತೆ ನನಗೆ ಅನಿಸತೊಡಗಿತು . "ಆಮೇಲೆ ಕಾಡೆಮ್ಮೆ ,ಹಂದಿ ಬತೈತೆ ಹೊಂಟೋಗನ ಬನ್ನಿ " ಎಂದು ಯಲ್ಲ ಗಡಿಬಿಡಿ ಮಾಡಿದ .
ನಾಗರ ಪಂಚಮಿ ಮುಗಿದೇ ಹೋಯಿತು . ನಾನು ,ಅಪ್ಪ ,ನನ್ನ ಮಗ ಮೂವರೂ ಮಡಿಯುಟ್ಟುಕೊಂಡು ನಮ್ಮ ತೋಟದ ಸುತ್ತಲೂ ಇರುವ ಹಲವು ನಾಗರ ಕಲ್ಲುಗಳಿಗೆ ಹಾಲೆರೆದು ,ಪಾಯಸ ನೈವೇದ್ಯ ಮಾಡಿ ಬಂದೆವು .ರಾತ್ರಿ ಮದರಂಗಿ ಹಚ್ಚಿಕೊಂಡು ಅದು ಕೆಂಪಗಾಗುವ ಮೊದಲೇ ನಾವು ಹೊರಟು ನಿಂತೆವು . ಯಾವಾಗಲೋ ಸಂರಕ್ಷಿಸಿ , ಬೆಳೆಸಿದ ಸಣ್ಣ ಹುಳಿ ಮುರುಗಲಿನ ಗಿಡವನ್ನು ಯಲ್ಲ ಕಾರಿನೊಳಗೆ ತುಂಬಿದ .
"ಅದ್ನ ನೆಡೋಕೆ ಅಲ್ಲಿ ಜಾಗ ಎಲ್ಲಿದ್ಯೋ ?" ಎಂದು ಚಿಂತೆಯಿಂದಲೇ ಢಿಕ್ಕಿ ಮುಚ್ಚಿದೆ . ತುಂಬಿದ ಮನೆ ಮತ್ತೆ ಖಾಲಿಯಾಯಿತು . ಎಲ್ಲರಿಗೂ ವಿದಾಯ ಹೇಳಿ ನಾವು ಹೊರಟೆವು . ಯಲ್ಲನನ್ನು ನಾನು ನೋಡಿದ್ದು ಅದೇ ಕೊನೆ ಬಾರಿ ನಂತರದ ದಿನಗಳಲ್ಲಿ ಅವನಿಗೆ ಹುಷಾರು ತಪ್ಪಿ ,ಘಟ್ಟದ ಕೆಳಗಿನ ಅವನ ಮಗಳ ಮನೆಗೆ ಹೋದ . ಅದಾಗಿ ಕೆಲ ತಿಂಗಳುಗಳ ನಂತರ ಅವನು ಸತ್ತ ಸುದ್ದಿ ಬಂತು . ನಮ್ಮ ಒಂದು ಋಣ ತೀರಿತ್ತು , ಭೂತಕಾಲದ ಒಂದು ಕೊಂಡಿ ಕಳಚಿತ್ತು . ಒಂದು ಕ್ಷಣ ನಾನು ಮೌನವಾದೆ . ಅವನು ಕೊಟ್ಟ ಹುಲಿ ಮುರುಗಲಿನ ಗಿಡ ಆಗಷ್ಟೇ ಹಣ್ಣು ಬಿಡತೊಡಗಿತ್ತು .














26/11/18

ಗಾಲಿ

 ಚಳಿಗಾಲದಲ್ಲಿ ಬೆಳ್ಳಂ-ಬೆಳ್ಳಿಗೆ ಗಾಂಧೀ ಬಜಾರಿನ ಕಡೆ ಹೋಗುವುದು ಮಜಬೂತು ಅನುಭವ . ಇಬ್ಬನಿಯ ಮಧ್ಯದಲ್ಲಿ ಮಫ್ಲರ್ , ಸ್ವಟ್ಟರ್ ಧರಿಸಿ ವ್ಯಾಪಾರ ಶುರು ಮಾಡುವ ಗೂಡಂಗಡಿಯವರು . ಚಳಿಯನ್ನೂ ಲೆಕ್ಕಿಸದೆ ಬಜಾರಿನ ತುಂಬೆಲ್ಲ ಓಡಾಡಿ ಸುವಾಸನೆ ಹರಡುವ ಹೂ ಮಾರುವವರು . ಇದನ್ನು  ತನ್ನ ಜೀವಮಾನವೆಲ್ಲಾ ರಾಚಯ್ಯ ನೋಡಿದ್ದಾನೆ . ಐದು ಗಂಟೆಗೇ ಕೆ ಆರ್ ಮಾರ್ಕೆಟ್ನ ಡಿಪೋ ತಲುಪಿ , ತನ್ನ ಬಸ್ಸನ್ನು ತೊಳೆದು ,ಎಂಜಿನ್ ಹೀಟ್ ಆಗಲೆಂದು ಎರಡು ಬಾರಿ ಗುರುಗುಟ್ಟಿಸಿ ಗಾಂಧೀ ಬಜಾರಿನ ಕಡೆಗೆ ಹೊರಡುತ್ತಾನೆ . ಅಲ್ಲೇ ವಿದ್ಯಾರ್ಥಿ ಭವನದ ಎದುರಿನ ಹೂವಿನ ಅಂಗಡಿಯಲ್ಲಿ ಎರಡು ಮೊಳ ಹೂವು ಖರೀದಿಸಿ ಬಸ್ಸಿನ ಡ್ಯಾಶ್ ಬೋರ್ಡಿನ ಮೇಲಿನ ಧರ್ಮಸ್ಥಳದ ಮಂಜುನಾಥನಿಗೂ , ಗ್ಲಾಸ್ ಮೇಲಿನ ಸಿಗಂದೂರು ಚೌಡೇಶ್ವರಿಗೂ ಸಮನಾಗಿ ಒಂದೊಂದು ಮೊಳ ಮುಡಿಸುತ್ತಾನೆ . ನಂತರ ವಾಡಿಯಾ ರಸ್ತೆಯಲ್ಲಿ ಎರಡು ಬಾಳೆಹಣ್ಣು ತೆಗೆದುಕೊಂಡು ಇಬ್ಬರಿಗೂ ನೈವೇದ್ಯ ಮಾಡಿ ತಾನೊಂದು ತಿಂದು ಕಂಡಕ್ಟರ್ ಗೆ  ಇನ್ನೊಂದು ಕೊಡುತ್ತಾನೆ . ಸುಮಾರು ಮೂವತ್ತು ವರ್ಷ ಇದು ಹೀಗೆ ನಡೆದಿದೆ . ರಾಚಯ್ಯನಿಗೂ ತನ್ನ ಜೀವನ ಬಸ್ಸಿನ ಗಾಲಿಯಂತೆ ಸುಲಲಿತವಾಗಿ ಸಾಗುತ್ತಿದೆ ಅನಿಸುತ್ತದೆ .
ನಲವತ್ತು ವರ್ಷಗಳ ಕೆಳಗೆ ಡಿಪ್ಲೋಮ ಸೇರಿ ಎರಡೇ ತಿಂಗಳಿಗೆ ಅವನಿಗೆ ಡ್ರೈವರ್ ಕೆಲಸ ಸಿಕ್ಕಿತ್ತು . "ಓದೋದೇ ಕೆಲಸ ಸಿಗ್ಲಿ ಅಂತ , ನಿಂಗೆ ಕೆಲಸ ಸಿಕ್ಕಿದ್ರು ಸುಮ್ನೆ ಯಾಕೆ ಓದ್ತಿಯ ?" ಎಂಬ ಊರಿನವರ ದೇಶಾವರಿ ಸಲಹೆಗೆ ಒಪ್ಪಿ ರಾಚಯ್ಯ ಕೆಲಸಕ್ಕೆ ಸೇರಿದ್ದ . ಮೊದಲಿಗೆ ಬೆಂಗಳೂರು ಹಾಗೂ ಚಿಕ್ಕಮಗಳೂರು ರೂಟಿಗೆ ಆತನನ್ನು ಡ್ರೈವರ್ ಆಗಿ ನೇಮಿಸಿದ್ದರು . ಹಗಲು ನಿದ್ದೆ , ರಾತ್ರಿ ಡ್ರೈವಿಂಗ್ . ಚಿಕ್ಕಮಗಳೂರಿನ ಘಾಟ್ ಸೆಕ್ಷನ್ ಗಳಲ್ಲಿ ಮಳೆಗಾಲದ ರಾತ್ರಿಯಲ್ಲಿ ಬಸ್ ಚಾಲನೆ ಮಾಡುವುದು ಸುಲಭದ್ದಾಗಿರಲಿಲ್ಲ . ಹಲವು ಸಲ ಕಾಡೆಮ್ಮೆ , ಆನೆ ಅಷ್ಟೇ ಏಕೆ ಕೆಲವೊಮ್ಮೆ ಹುಲಿ , ಚಿರತೆ ಕಂಡಿದ್ದೂ ಇದೆ . ಕಡಿದಾದ ತಿರುವುಗಳು , ಜಾರುವ ಕಾಂಕ್ರೀಟ್ ರಸ್ತೆ . ಮೂರ್ನಾಲ್ಕು ವರ್ಷವೇ ಆ ರೂಟಿಗೆ ಹೋಗಿದ್ದನೇನೋ . ನಂತರ ಬಿಟಿಎಸ್ ಗೆ ವರ್ಗವಾಗಿ ಮಾರ್ಕೆಟ್ಟಿನ ಡಿಪೋ ಸೇರಿದ್ದ . ನಂತರದ ವರ್ಷಗಳಲ್ಲಿ ಬೇರೆ ಬೇರೆ ರೂಟು ಸಿಕ್ಕಿದೆ . ಆದರೂ ರಾಚಯ್ಯ ಓಡಿಸಿದ್ದು ಆತನಿಗೆ ಮೊದಲು ಸಿಕ್ಕಿದ್ದ ಬಸ್ಸು ಮಾತ್ರ . ನಲವತ್ತು ವರ್ಷಗಳ ಕಾಲ ಒಂದೇ ಬಸ್ಸು ಓಡಿಸಿದ್ದರಿಂದ ಆತನಿಗೂ ಬಸ್ಸಿಗೂ ಒಂದು ವಿಶೇಷ ಸಂಬಂಧ ಏರ್ಪಟ್ಟಿತ್ತು . ಬೆಂಗಳೂರು ಸೇರಿದ ಮೇಲಂತೂ ಬಸ್ಸು ತಾನಾಗೇ ಚಲಿಸುತ್ತಿದೆ ಎಂದು ಅವನಿಗೆ ಅನಿಸುತಿತ್ತು . ಆತನ ವೃತ್ತಿ ಜೀವನದಲ್ಲಿ ಒಂದೂ ಅಪಘಾತ , ಯದ್ವಾ ತದ್ವ ಓಡಿಸುವುದು ಇಲ್ಲ . ಇದಕ್ಕೆಲ್ಲಾ ಆ ಬಸ್ಸೇ ಕಾರಣ ಎಂದು ಆತ ನಂಬಿದ್ದಾನೆ . ಒಂದು ತಿಂಗಳಿಗೇ ಆಯಿಲ್ ಚೇಂಜ್ ಮಾಡಿರೆಂದು ಡಿಪೋಗೆ ಬಿಟ್ಟಾಗ ಅವರು ಬೈದು ಕಳಿಸಿದ್ದಿದೆ . ಆಗ ರಾಚಯ್ಯ ತನ್ನ ಸ್ವಂತ ದುಡ್ಡು ಖರ್ಚು ಮಾಡಿ ರಿಪೇರಿ ಮಾಡಿಸಿದ್ದಾನೆ .
ಈಗ ಇದ್ದಕಿದ್ದಂತೆ ನಿವೃತ್ತಿ ಎಂಬ ಪೆಡಂಭೂತ ಅವನ ಎದುರಿಗೆ ನಿತ್ತಿತ್ತು . ಆತನಿಗೆ ಈಗ ದುಡ್ಡಿನ ಚಿಂತೆ ಇಲ್ಲದಿದ್ದರೂ ತನ್ನ ಬಸ್ಸನ್ನು ಬೇರೆಯವರು ಯದ್ವಾ-ತದ್ವಾ ಓಡಿಸಿಬಿಟ್ಟರೆ ಎಂಬ ಭಯ ಕಾಡುತಿತ್ತು . ಕೊನೆಯ ದಿನವಾದ್ದರಿಂದ ಎರಡು ರೂಪಾಯಿ ಹೆಚ್ಛೇ ಖರ್ಚು ಮಾಡಿ ಅದಕ್ಕೆ ಮೂರು ರೂಪಾಯಿ ಭಕ್ಷೀಸು ಕೊಟ್ಟು ಹೂವು ಖರೀದಿಸಿದ . ತನ್ನ ಬಸ್ಸಿನ ಖಾಯಂ ಪ್ರಯಾಣಿಕರಿಗೆ ಎಂದು ಹೆಚ್ಚು ಬಾಳೆಹಣ್ಣು ಖರೀದಿಸಿದ .
ಮಾರ್ಕೆಟ್ಟಿನಿಂದ ಕುವೆಂಪು ನಗರದ ತನಕವೂ ಪ್ರತಿಯೊಂದು ಸ್ಟಾಪಿನಲ್ಲೂ ಅವನಿಗೆ ಪರಿಚಯದವರಿದ್ದಾರೆ . ಹಾಗೆ ಹತ್ತಿದ ಎಲ್ಲರಿಗೂ ಒಂದೊಂದು ಹಣ್ಣು ಕೊಟ್ಟು ಹಣ್ಣು ಖಾಲಿಯಾಯಿತು . ಬೆಳಿಗ್ಗೆಯೆಲ್ಲಾ ಖುಷಿಯಿಂದ ಇದ್ದ ಅವನು ಸಂಜೆ ಹೊತ್ತಿಗೆ ಮಂಕಾಗಿದ್ದ . ಬಸ್ಸನ್ನು ಡಿಪೋಗೆ ಬಿಟ್ಟು ಬರುವಾಗಲಂತೂ ಕಣ್ಣೀರು ಇನ್ನೇನು ಬಿದ್ದೇ ಹೋಯಿತು ಎಂಬಷ್ಟು ಕಣ್ಣು ತೇವವಾಗಿತ್ತು . ಯಾರಿಗೂ ಅದನ್ನು ತೋರಗೊಡದೆ ಬಸ್ಸು ಹತ್ತಿ ಮನೆಗೆ ಬಂದು ಬಿಟ್ಟ . ಸಿಬ್ಬಂದಿಗಳಿಗೆ ಯಾವಾಗಲೂ ಟಿಕೆಟ್ ಕೊಳ್ಳುವ ಅಗತ್ಯವಿರಲಿಲ್ಲ , ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು . ಆ ರೀತಿ ಉಚಿತವಾಗಿ ಪ್ರಯಾಣಿಸಿವುದು ಇದೇ ಕೊನೆ ಎಂದು ಯೋಚಿಸಿ ಮತ್ತೆ ದುಃಖ ಉಮ್ಮಳಿಸಿ ಬಂತು . ಮನೆಗೆ ಬಂದು ಊಟ ಮಾಡದೆ ಹಾಗೆಯೇ ಹಾಸಿಗೆಯ ಮೇಲೆ ಅಡ್ಡಾದ . ಮರುದಿನ ಯಥಾ ಪ್ರಕಾರ ನಾಲ್ಕು ಗಂಟೆಗೆ ಎಚ್ಚರವಾಯಿತು . ಮತ್ತೆ ಎಷ್ಟೇ ಪ್ರಯತ್ನಪಟ್ಟರೂ ನಿದ್ದೆ ಬರಲೇ ಇಲ್ಲ . ಕೊನೆಗೆ ಬೇರೆ ದಾರಿಯೇ ಕಾಣದೆ ತನ್ನ ಬಸ್ಸನ್ನು ನೋಡಿ ಬರಲು ಡಿಪೋ ಕಡೆ ಹೊರಟ . ಮಾರ್ಕೆಟ್ಟಿನ ಬಸ್ಸು ಹತ್ತುತ್ತಿದ್ದಂತೆ ನಿರ್ವಾಹಕ ಬಂದು "ಎಲ್ಲಿಗ್ರಿ ? ಟಿಕೆಟ್ ತಗೋಳಿ " ಎಂದಿದ್ದದನ್ನು ಅರಗಿಸಿಕೊಳ್ಳುತ್ತಾ ದುಡ್ಡು ತೆಗೆದುಕೊಟ್ಟ . ಡಿಪೋದ ಮೂಲೆಯಲ್ಲಿ ಅನಾಥವಾಗಿ ಇವನ ಬಸ್ಸು ನಿತ್ತಿತ್ತು . ಜಾತ್ರೆಯಲ್ಲಿ ಅಪ್ಪನನ್ನು ಕಳೆದಕೊಂಡ ಮಗುವಿನಂತೆ ಅವನ ಬಸ್ಸು ನಿಂತಿರುವುದು ಅವನಿಗೆ ದಯನೀಯವಾಗಿ ಕಂಡಿತು . ಅಷ್ಟರಲ್ಲಿಯೇ ತಡವಾಗಿ ಹೋಯಿತೆಂದು  ಗಡಿಬಿಡಿಯಲ್ಲೇ  ಬಂದ ಶೇಖರ ಬಸ್ಸನ್ನು ಹತ್ತಿ ಸ್ಟಾರ್ಟ್ ಮಾಡಿದ .
"ಎರಡು ನಿಮಿಷ ತಾಳು ಎಂಜಿನ್ ಹೀಟ್ ಆಗ್ಲಿ " ಎಂದು ರಾಚಯ್ಯ ಕೊಟ್ಟ ಸಲಹೆಯನ್ನು ತಿರಸ್ಕೃತ ಭಾವನೆಯಿಂದಲೇ  ಶೇಖರ ಸ್ವೀಕರಿಸಿದ . ಮುಂದೇನು ಮಾಡಬೇಕೆಂದು ತಿಳಿಯದೆ ರಾಚಯ್ಯ ಬಸ್ಸು ಹತ್ತಿಬಿಟ್ಟ . ನೂರು ರೂಪಾಯಿಯ ದಿನದ ಪಾಸು ಖರೀದಿಸಿ ಮುಂದಿನ ಸೀಟಿನಲ್ಲಿಯೇ ಕುಳಿತ . ವರುಷಗಟ್ಟಲೇ ಪರಿಚಯವಿದ್ದ ಬೆಂಗಳೂರಿನ ರೋಡುಗಳು ಅಂದು ಅವನಿಗೆ ಅಪರಿಚಿತವೆನಿಸಿತು . ಡ್ಯಾಷ್ ಬೋರ್ಡಿನ ಮೇಲಿನ ಮಂಜುನಾಥ , ಸಿಗಂದೂರು ಚೌಡೇಶ್ವರಿಯನ್ನು  ಶೇಖರ ಉಪವಾಸ ಕೆಡವಿದ್ದು ನೋಡಿ ಸಿಟ್ಟು ನೆತ್ತಿಗೇರಿತು . ಶೇಖರ ಯಾವ ಮುಲಾಜೂ ಇಲ್ಲದೆ ಧಡ-ಧಡನೆ ಗೇರು ಬದಲಿಸುವ ರೀತಿ , ಒಂದೇ ಏಟಿಗೆ ಬ್ರೇಕು ಹಾಕುವುದನ್ನು ನೋಡಿ ಅವನಿಗೆ ತನ್ನ ಮಗುವಿಗೆ ಬೇರೆಯವರು ಹೊಡೆದಂತ ಭಾವನೆ ಬರತೊಡಗಿತು . ಒಂದು ಕ್ಷಣವೂ ಬಸ್ಸಿನಲ್ಲಿ ಕೂರಲಾಗದೆ ಶೇಖರ ಬಸ್ಸನ್ನು ನಿಲ್ಲಿಸಲು ನಿಧಾನ ಮಾಡುತ್ತಿದ್ದಾಗಲೇ ರಾಚಯ್ಯ ಹಾರಿಕೊಂಡ . ಇನ್ನೆಂದೂ ಅವನಿಗೆ ತನ್ನ ಬಸ್ಸನ್ನು ತಿರುಗಿ ನೋಡಬಾರದು ಎನಿಸಿತು .
ತಿಂಗಳುಗಳೇ ಉರುಳಿದವು  , ನಿಧಾನವಾಗಿ ರಾಚಯ್ಯನಿಗೆ ನಿವೃತ್ತಿ ಜೀವನ ಒಗ್ಗತೊಡಗಿತ್ತು . ಈಗ ಆತ ಕಷ್ಟಪಟ್ಟು ಐದು ಗಂಟೆಯವರೆಗೂ ಮಲಗಬಲ್ಲವನಾಗಿದ್ದ. ನಂತರ ಕಾಫಿ ಕುಡಿದು ವಾಕಿಂಗು , ಪೇಪರ್ ಓದುವುದು ಇತ್ಯಾದಿ . ಮಗನೂ ಅಷ್ಟಿಟ್ಟು ಓದಿ ಕೆಲಸಕ್ಕೆ ಸೇರಿದ್ದರಿಂದ ಸಂಸಾರ ಸುಲಭವಾಗಿ ಸಾಗುತಿತ್ತು . ಬೆಳಿಗ್ಗೆ ಆರು ಗಂಟೆಗೆ ಮಾಧವನ್ ಪಾರ್ಕಿನ ಬೆಂಚಿನ ಮೇಲೆ ಕುಳಿತು ಪೇಪರ್ ಓದುತ್ತಾ ಅವನ ಬಸ್ಸು ಹೋಗುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದ. ಸರಿಯಾಗಿ ಆರೂ ಐದಕ್ಕೆ ಶೇಖರ ಸುಯ್ಯನೆ ಬಸ್ಸು ಓಡಿಸಿಕೊಂಡು ಹೋಗುವುದನ್ನು ಕುತೂಹಲ ಮಿಶ್ರಿತ ಸಿಟ್ಟಿನಲ್ಲಿ ನೋಡುತ್ತಿದ್ದ . ಬೆಂಗಳೂರಿನ ಜೀವನ ಯಾಂತ್ರಿಕ ಎಂದು ಅನಿಸತೊಡಗಿತು . ಯಾವ ಪಾರ್ಕುಗಳು , ಶಾಪಿಂಗ್ ಕಾಂಪ್ಲೆಕ್ಸುಗಳು ಅವನನ್ನು ಒಂದು ಕಾಲಕ್ಕೆ ಆಕರ್ಷಿಸಿತ್ತೋ , ಇಂದು ಅವೇ ಅವನ ಬೇಸರಕ್ಕೆ, ಏಕತಾನತೆಗೆ ಕಾರಣವಾಗಿತ್ತು .  ದಿನವೂ ಬಸ್ಸನ್ನು ನೋಡುವುದು ಅವನಿಗೆ ಚಾಳಿ ಆಗಿಹೋಯಿತು . ಏಕತಾನತೆಯನ್ನು ಸೀಳಿಕೊಂಡು ಬರುತ್ತಿದ್ದ ಅವನ ಬಸ್ಸು ಒಂದೇ ರಾಚಯ್ಯನ ಜೀವನದಲ್ಲಿ ಆಶಾಕಿರಣವಾಗಿತ್ತು . ತನ್ನ ಬಸ್ಸು ಆರೋಗ್ಯವಾಗಿದೆ ಎಂಬ ಸಮಾಧಾನ !
ಹೀಗಿರುವಾಗ ಒಂದು ದಿನ ಎಷ್ಟು ಹೊತ್ತಾದರೂ ಬಸ್ಸು ಕಾಣಲೇ ಇಲ್ಲ . ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಕಾದರೂ ಬಸ್ಸು ಬರಲೇ ಇಲ್ಲ . ಅವನಿಗೆ ಆದ ಚಡಪಡಿಕೆ ಹೇಳತೀರದು . ಸತ್ಯಜಿತ್ ರೇ ಸಿನಿಮಾದ ಹೀರೋನಂತೆ ಈ ಜಗತ್ತೇ ನಶ್ವರ ಎಂದು ಚಿಂತಿಸತೊಡಗಿದ . ಚಡಪಡಿಕೆ ತಾಳಲಾರದೆ ಸಂಜೆ ಡಿಪೋಗೆ ಹೋದ. ಸ್ಕ್ರ್ಯಾಪು ವಾಹನಗಳ ಪಕ್ಕದಲ್ಲಿ ಇವನ ಬಸ್ಸು ಗ್ಲಾಸು ಒಡೆದುಕೊಂಡು ನಜ್ಜು ಗುಜ್ಜಾಗಿ ಬಿದ್ದಿತ್ತು . ತನ್ನ ತಂದೆ ಸತ್ತಾಗಲೂ ಅಳದ ರಾಚಯ್ಯ ಅಂದು ಗಳಗಳನೆ ಅತ್ತ .  ಡಿಪೋ ಮ್ಯಾನೇಜರ್ ಬಳಿ ಆದದ್ದನ್ನೆಲ್ಲಾ ಕೇಳಿ ತಿಳಿದುಕೊಂಡ .
"ಇನ್ ಏನ್ರಿ ಸರಿ ಮಾಡ್ಸೋದು ಅದ್ನ , ಬಾಳ ವರ್ಷ ಆಗಿದೆ ಅದುಕ್ಕೆ ಗುಜುರಿಗೆ ಹಾಕ್ತೀವಿ " ಎಂದದ್ದನ್ನು ಕೇಳಿ ಅವನಿಗೆ  ಜಂಗಾಬಲವೇ ಉಡುಗಿಹೋಯಿತು . ತಕ್ಷಣ ಸಾವರಿಸಿಕೊಂಡು
"ಸಾರ್  ಸ್ವಲ್ಪ ದಿನ ತಡೀರಿ ನಾನೇ ಅದನ್ನ ತಗೋತೀನಿ " ಎಂದು ಹೇಳಿ ಎದ್ದು ಬಂದ . ರಾಚಯ್ಯ ಒಂದು ರೀತಿ ಸ್ಥಿಮಿತ ತಪ್ಪಿದವರಂತೆ ವರ್ತಿಸತೊಡಗಿದ . ಮನೆಯ ಜಗುಲಿಯಲ್ಲಿ ಶತ-ಪಥ ತಿರುಗಿ ಯೋಚಿಸತೊಡಗಿದ . ಬಸ್ಸು ಖರೀದಿಸಲು ಸುಮಾರು ಮೂರ್ನಾಲ್ಕು ಲಕ್ಷವಾದರೂ ಬೇಕಿತ್ತು . ಎಲ್ಲಿಂದ ತರುವುದು ? . ಇರುವ ಎಲ್ಲಾ ಉಳಿವಿಕೆಯನ್ನು ಬಾಚಿ ಬಳಿದರೆ ಎರಡು ಲಕ್ಷವೂ ಆಗುವುದಿಲ್ಲ .
ಮರುದಿನವೇ ಬ್ಯಾಂಕಿಗೆ ಹೊರಟ . ತಾನು ಗುಜುರಿ ವ್ಯಾಪಾರ ಮಾಡುತ್ತೇನೆಂದು ಅದಕ್ಕೆ ಸಾಲ ಬೇಕು ಎಂದು ಅರ್ಜಿ ಗುಜಾರಿಯಿಸಿದ . ಅರವತ್ತು ದಾಟಿದ ಅವನಿಗೆ ಯಾವ ಸ್ಕೀಮಿನಲ್ಲೂ ಸಾಲ ಕೊಡುವುದು ಅಸಾಧ್ಯ ಎಂದು ಮ್ಯಾನೇಜರ್ ಅಲ್ಲಗೆಳೆದು ಬಿಟ್ಟರು . ನಂತರ ರಾಚಯ್ಯ ಯೋಚಿಸಿ , ತನ್ನ ಮನೆಯನ್ನು ಅಡವಿಟ್ಟು ಪರ್ಸನಲ್ ಲೋನ್ ಎತ್ತಿದ . ಇಪ್ಪತ್ತು ಬೈ ಮೂವತ್ತರ ಮನೆಗೆ ನಾಲ್ಕು ಲಕ್ಷದ ಮೇಲೆ ಒಂದು ಬಿಡಿಗಾಸೂ ಹುಟ್ಟಲಿಲ್ಲ .
ಹರಾಜಿನ ದಿನ ಬಂದೇ ಬಿಟ್ಟಿತು . ಡಿಪೋದ ಗ್ಯಾರೇಜಿನಲ್ಲಿ ದೊಡ್ಡ ಸಭೆ , ನೂರಾರು ಉದ್ದಿಮೆದಾರರು . ಅವರ ಮಧ್ಯೆ ರಾಚಯ್ಯ ಗುಲಗಂಜಿಯಂತೆ ಕಂಡ . ನೋಡನೋಡುತ್ತಲೇ ಹರಾಜಿನ ದರ ಐದು ಲಕ್ಷ ದಾಟಿ ಬಿಟ್ಟಿತು . ಅದಾಗಿ ಎರಡು ದಿನ ರಾಚಯ್ಯ ಮಲಗಲೇ ಇಲ್ಲ .
ಅವನ ಬಸ್ಸನ್ನು ಡಿಪೋದಿಂದ ಗುಜುರಿ ಅಂಗಡಿಗೆ ಸಾಗಿಸುವ ದಿನ ದೂರದಲ್ಲಿ ನಿಂತು ನೋಡುತ್ತಿದ್ದ . ಸಾಲು ಸಾಲು ಬಸ್ಸುಗಳು ಕ್ರಷರಿನ ಬೆಲ್ಟಿನ ಮೇಲೆ ಸಾಗಿ , ಒಂದು ಚೇಂಬರ್ ಒಳಗೆ ಹೋಗುತಿತ್ತು . ಹೋಗುತ್ತಿದ್ದಂತೆ ದೊಪ್ಪೆಂದು ಕ್ರಷರ್ ಅದನ್ನು ಒತ್ತಿ ಅಪ್ಪಚ್ಚಿ ಮಾಡುತಿತ್ತು . ತನ್ನ ಬಸ್ಸಿನ ಸಾವನ್ನು ನೋಡಲು ಧೈರ್ಯ ಸಾಲದೇ ರಾಚಯ್ಯ ಅಲ್ಲಿಂದ ಹೊರಟು ಬಿಟ್ಟ . ತನ್ನ ಬದುಕಿನ ಗಾಲಿಯ ಗಾಳಿ ಹೋದಂತೆ ಅವನಿಗೆ ಭಾಸವಾಯಿತು . ಆತ  ಹತ್ತಿದ ಸಿಟಿ ಬಸ್ಸು ಟ್ರಾಫಿಕ್ಕಿನಲ್ಲಿ ಲೀನವಾಯಿತು ........  

25/5/18

ಸುಬ್ಬಣ್ಣನ ಕವಳ

 ಮಲೆನಾಡಿನ ಮಳೆಗೆ ಎಲೆಕ್ಟ್ರಾನಿಕ್ ಉಪಕರಣಗಳು ಪತರುಗುಟ್ಟಿ ಹೋಗುತ್ತವೆ . ವಿದ್ಯುತ್ ತಂತಿಯ ಮೇಲೆ ಮರ ಬಿದ್ದೋ , ಟ್ರಾನ್ಸ್ ಫಾರ್ಮರ್ ಗೆ ಸಿಡಿಲು ಬಡಿದೋ , ಬಾವಲಿಗಳು ಸಿಕ್ಕಿ ಸತ್ತೋ ಕರೆಂಟು ಕೈ ಕೊಡುವುದರ ಜೊತೆಗೆ ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತದೆ . ಈ ಕಾರಣಗಳಿಂದಲೇ ಪ್ರತಿ ಮನೆಯಲ್ಲೂ ಹಾಳಾದ ಟಿವಿ , ಮಿಕ್ಸಿ ,ಫ್ರಿಡ್ಜು ಇರುವುದು ಸಾಮಾನ್ಯ . ಆದ್ದರಿಂದ ಮಲೆನಾಡಿನಲ್ಲಿ  ರಿಪೇರಿ ಕೆಲಸ ಮಾಡುವವರಿಗೆ ವಿಪರೀತ ಬೇಡಿಕೆ ಇದೆ . ಇದಕ್ಕೆ ತದ್ವಿರುದ್ಧವಾಗಿ ನಮ್ಮೂರಿನಲ್ಲಿ ರಿಪೇರಿಯವರು ಸಿಗುವುದು ಬಹಳವೇ ಕಷ್ಟ . ಸಿಕ್ಕಿದರೂ ಅವರು ತಲೆ ಬುಡ ತಿಳಿಯದ ಹವ್ಯಾಸಿ ರಿಪೇರಿಯವರೇ ಆಗಿರುತ್ತಾರೆ .
ಇದನ್ನೇ ಬಂಡವಾಳ ಮಾಡಿಕೊಂಡು ಕಳೆದ ಮೂವತ್ತು ವರುಷಗಳಿಂದ ಸುಬ್ಬಣ್ಣ ತನ್ನ ಅಂಗಡಿ ನಡೆಸುತ್ತಿದ್ದಾನೆ . ಆತನ ಅಂಗಡಿಯಲ್ಲಿ ಮರ್ಫಿ ರೇಡಿಯೋದಿಂದ ಹಿಡಿದು ಒನಿಡಾ ಓವೆನ್ ತನಕ ಎಲ್ಲವೂ  ಬೆಚ್ಚಗೆ ಮಲಗಿರುತ್ತದೆ . ಸುಬ್ಬಣ್ಣನೂ ಸಹ ಹವ್ಯಾಸದಿಂದಲೇ ಕೆಲಸ ಕಲಿತವನು . ಅವನ ಮಡಿಲಲ್ಲೇ ಎಷ್ಟೋ ರೇಡಿಯೋಗಳು ಪರಲೋಕ ಸೇರಿದೆ , ಅದೆಷ್ಟೂ ಟಿವಿಗಳಿಗೆ ಸುಬ್ಬಣ್ಣ ಮುಕ್ತಿ ಪ್ರಾಪ್ತಿ ಮಾಡಿದ್ದಾನೆ . ಗಿರಾಕಿಗಳು ಜಗಳ ಮಾಡಿ ಸುಬ್ಬಣ್ಣ ದಂಡವನ್ನೂ ಎಷ್ಟೋ ಬಾರಿ ತೆತ್ತಿದ್ದಾನೆ . ಆತನೇ ಹೇಳುವಂತೆ ಅವನು ಲಾಭಕ್ಕಾಗಿ ಆಗಲಿ , ದುಡ್ಡಿನ ಆಸೆಗೆ ಆಗಲಿ ಕೆಲಸ ಮಾಡುವುದಿಲ್ಲ . ಅವನ ಮಟ್ಟಿಗೆ ಆತ ಮಾಡುತ್ತಿರುವುದು ಸಮಾಜ ಸೇವೆ . ಅವನಿಲ್ಲದಿದ್ದರೆ ನಾವೆಲ್ಲರೂ ಶಿವಮೊಗ್ಗಕ್ಕೆ ಓಡಾಡಿ ಸುಸ್ತಾಗುತ್ತಿದ್ದೆವು ಎಂಬುದಂತೂ ನಿಜ .
ಈಗ ಕೆಲವು ವರ್ಷಗಳ ಹಿಂದೆ ನಾನು ಒಂದು ಕಾರ್ಡ್ಲೆಸ್ ಫೋನು ಖರೀದಿ ಮಾಡಿದ್ದೆ . ಮಳೆಗಾಲದಲ್ಲಿ ಮಳೆ ನೋಡುತ್ತಾ ಕೆನೋಪಿಯಲ್ಲಿ ಕುಳಿತು ಫೋನಿನಲ್ಲಿ ಮಾತಾಡುವುದು ನನ್ನ ಹವ್ಯಾಸ . ಇದೆ ಕಾರಣಕ್ಕೆ ಸ್ವಲ್ಪ ಹೆಚ್ಛೇ ಖರ್ಚಾದರೂ ಸರಿ ಎಂದು ಕಾರ್ಡ್ಲೆಸ್ ಫೋನು ಖರೀದಿಸಿದ್ದೆ . ಮೊನ್ನೆ ಮೊನ್ನೆ ಆಕಾಶವೇ ತೂತು ಬಿದ್ದಂತೆ ಜೋರು ಮಳೆ . ಜೊತೆಗೆ ಗುಡುಗು , ಸಿಡಿಲು . ಫೋನಿನ ಕನೆಕ್ಷನ್ನು ತಪ್ಪಿಸಿ ಇಟ್ಟಿದ್ದೆನಾದರೂ ರಿಸೀವರನ್ನು ಆಫ್ ಮಾಡಲು ಮರೆತಿದ್ದೆ . ಮರುದಿನ ಬೆಳಿಗ್ಗೆಯಿಂದ ರಿಸೀವರ್ ಕೆಲಸ ಮಾಡುತ್ತಿರಲಿಲ್ಲ . ನಾನೇ ಬಿಚ್ಚಿ ಸರಿ ಮಾಡಬಹುದಿತ್ತು ಆದರೆ ಅದಕ್ಕೆ ಬೇಕಾದ ಹತಾರಗಳು ಯಾವುವೂ ನನ್ನಲ್ಲಿ ಇರಲಿಲ್ಲ . ಮೇಲಾಗಿ ಬಿಚ್ಚಿ ತೊಂದರೆ ಹುಡುಕಿ ಕ್ಯಾಪಾಸಿಟರನ್ನೋ , ರೆಸಿಸ್ಟರನ್ನೋ ಹುಡುಕಿಕೊಂಡು ಬೀದಿ ಬೀದಿ ಅಲೆಯುವುದು ಇಷ್ಟವಿರಲಿಲ್ಲ . ಹಾಗಾಗಿ ವಿಧಿಯಿಲ್ಲದೆ ನಾನು ಸುಬ್ಬಣ್ಣನ ಅಂಗಡಿಗೆ ಹೋಗಬೇಕಾಯ್ತು .
ಹಾಗೆ ನೋಡಿದರೆ ನನಗೆ ಸುಬ್ಬಣ್ಣನ ಅಂಗಡಿಗೆ ಹೋಗುವುದು ಖುಷಿ . ಉಳಿದ ಅಂಗಡಿ ಮಾಲಿಕರಂತೆ ಸುಬ್ಬಣ್ಣ ಹೆಚ್ಚು ಮಾತನಾಡಿ ತಲೆ ತಿನ್ನುವುದಿಲ್ಲ . ಯಾವಾಗಲೂ ಕವಳ ಹಾಕಿಕೊಂಡು ಸುಮ್ಮನೆ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿರುತ್ತಾನೆ . ಆತ ಕವಳ ಉಗಿದು ಬಂದನೆಂದರೆ ನಾನು ಅಲ್ಲಿಂದ ಜಾಗ ಖಾಲಿ ಮಾಡುತ್ತೇನೆ . ಶಾಸ್ತ್ರೀಯವಾಗಿ ಎಲೆಕ್ಟ್ರಾನಿಕ್ಸ್ ಕಲಿಯದ ಸುಬ್ಬಣ್ಣ ಅವನ ಡೌಟ್ ಗಳನ್ನು  ನನ್ನ ಬಳಿಯೇ ಕೇಳುತ್ತಾನೆ . ಎಸ್ಸೆಸ್ಸೆಲ್ಸಿ ಪಾಸಾಗದ ಆತನಿಗೆ ಎಲೆಕ್ಟ್ರಾನಿಕ್ಸ್ ಹೇಳಿಕೊಡುವುದು ನನಗೆ ಅತಿ ತ್ರಾಸದಾಯಕ . ಇಡೀ ಸಾಗರದ ಪ್ರತಿ ಮನೆಯ ಆರ್ಥಿಕ ಸ್ಥಿತಿ ಗತಿ ಸುಬ್ಬಣ್ಣನ ಅಂಗಡಿಯಲ್ಲಿ ಕುಳಿತು ಲೆಕ್ಕ ಹಾಕಬಹುದು . ಹಳೆಯ ಡೂಮು ಟಿವಿಯನ್ನು ರಿಪೇರಿಗೆ ಕೊಟ್ಟಿದ್ದಾರೆ ಎಂದರೆ ಬಡವರೆಂದೂ , ಲ್ಯಾಪ್ಟಾಪು , ಓವೆನ್ ಕೊಟ್ಟಿದ್ದರೆ ಶ್ರೀಮಂತರೆಂದೂ ನಾನು ಲೆಕ್ಕ ಹಾಕುತ್ತಿದ್ದೆ . ನನಗೆ ತಿಳಿದ ಮಟ್ಟಿಗೆ ಸುಬ್ಬಣ್ಣನಿಗೆ ಕವಳ ಬಿಟ್ಟರೆ ಬೇರೆ ಕೆಟ್ಟ ಚಾಳಿ ಇಲ್ಲ . ಅದೂ ಕವಳ ಎಂದರೆ ಈಗೀನ ಗುಟ್ಕಾ ,ಜರದ ಅಲ್ಲ ತಾನೇ ಸ್ವತಃ ವೀಳ್ಯದೆಲೆ ಬೆಳೆದು ಅದನ್ನು ತಾನೇ ಕೊಯ್ದು , ಸುಣ್ಣವನ್ನೂ ,ತಂಬಾಕನ್ನೂ ತಾನೇ ಹದಮಾಡಿ ಕವಳ ಮಾಡಿಕೊಳ್ಳುತ್ತಾನೆ . ಆತನದು ಪಕ್ಕಾ 'ಮೇಕ್ ಇನ್ ಇಂಡಿಯಾ' ಕವಳ . ಒಮ್ಮೆ ತಂಬಾಕಿನ ಎಸಳನ್ನು ತೊಳೆದು ಒಣಗಿಸಲು ಹಗ್ಗದ ಮೇಲೆ ಹಾಕಿದ್ದನಂತೆ . ಸಂಜೆ ಸಂಧ್ಯಾವಂದನೆಗೆ ಹೋಗುವಾಗ ಅವನ ಅಜ್ಜ ಸ್ನಾನ ಮಾಡಿ ತನ್ನ ಲಂಗೋಟಿಯನ್ನೂ ತಂಬಾಕಿನ ಪಕ್ಕಕ್ಕೇ ಒಣಗಿಸಿದ್ದನಂತೆ . ಅಂಗಡಿಯಿಂದ ಬಂದ ಸುಬ್ಬಣ್ಣ ನಸುಗತ್ತಲಲ್ಲೇ ಲಂಗೋಟಿಯನ್ನು ತಂಬಾಕೆಂದು ತಿಳಿದು ತೆಗೆದುಕೊಂಡು ಹೋಗಿ ಅದನ್ನು ಕೊಚ್ಚಿ , ಕವಳ ಮಾಡಿಕೊಂಡು ತಿಂದಿದ್ದನಂತೆ . ಅಜ್ಜ ಬಂದು ತನ್ನ ಲಂಗೋಟಿ ಹುಡುಕಿ ಹುಡುಕಿ ಸುಸ್ತಾಗಿ ವಿಚಾರಿಸಿದ ಮೇಲೆಯೇ ಈ ವಿಷಯ ಬೆಳಕಿಗೆ ಬಂದಿತ್ತು . ಇಂತಹ ಹಲವು ವೃತ್ತಾಂತಗಳಿಂದ  ಸುಬ್ಬಣ್ಣನ ಕವಳ ಒಂದು ದಂತ ಕಥೆಯಾಗಿತ್ತು .
ಹೀಗೇ ಲೋಕಾಭಿರಾಮವಾಗಿ ಕುಳಿತು ಕಥೆ ಹೇಳಿ ನನ್ನ ಫೋನು ಸರಿ ಮಾಡೆಂದು ಹೇಳಿ ಕೊಟ್ಟು ಬಂದಿದ್ದೆ . ಎರಡು ವಾರವಾದರೂ ಆಸಾಮಿಯ ಸುದ್ದಿ ಇಲ್ಲ !!!
ನಾನೇ ವಿಚಾರಿಸಲು ಹೋದರೆ ಮೊನ್ನೆಯೇ ಆಯ್ತು ಮಾರಾಯ ಎಂದು ತೆಗೆದು ಕೊಟ್ಟ . ಗಡಿಬಿಡಿಯಲ್ಲಿದ್ದ ನಾನು ಹೆಚ್ಚು ಯೋಚಿಸದೆ ತೆಗೆದುಕೊಂಡು ಬಂದೆ . ಮನೆಗೆ ಬಂದು ಬ್ಯಾಟರಿ ಹಾಕಿ ಆನ್ ಮಾಡಿದರೆ ರಿಸೀವರ್ ಆನ್ ಆಗಬೇಕೇ ? ಉಹುಂ . ಕುಟ್ಟಿದೆ , ತಲೆ ಕೆಳಗು ಮಾಡಿದರೂ ಆನ್ ಆಗುತ್ತಿಲ್ಲ . ನಂತರ ಆದದ್ದು ಆಗಲಿ ಎಂದು ನಾನೇ ಬಿಚ್ಚಿದೆ . ಎಲ್ಲಾ ಐಸಿ ಗಳೂ ಕೆಂಪು ಬಣ್ಣಕ್ಕೆ ತಿರುಗಿತ್ತು . ನನಗೆ ಆದ ಅನಾಹುತ ಅರ್ಥ ಆಗಿತ್ತು .
ಬಗ್ಗಿ ಕೆಲಸ ಮಾಡುತ್ತಿದ್ದ ಸುಬ್ಬಣ್ಣನ ಕವಳ ನನ್ನ ಫೋನಿನ ರಿಸೀವರ್ ಒಳಗೆ ಬಿದ್ದಿತ್ತು . ಅದನ್ನು ಸರಿ ಮಾಡಲು ಆತ ಹಾರ ಸಾಹಸ ಪಟ್ಟಿದ್ದು ನನಗೆ ಸರಿಯಾಗಿ ಗೊತ್ತಾಗುತಿತ್ತು . ಏನೇ ಮಾಡಿದರೂ ಅದು ಸರಿಯಾಗುವ ಸಂಭವವೇ ಇಲ್ಲ ಎಂಬುದು ನನಗೆ ಗೊತ್ತಿದೆ . ಇರುವ ಒಂದೇ ದಾರಿ ಎಂದರೆ ಪೂರ್ತಿ ಸರ್ಕ್ಯೂಟ್ ಬದಲಿಸಬೇಕಿತ್ತು . ಇದು ತಕ್ಷಣಕ್ಕೆ ಆಗುವ ಕೆಲಸವಾಗಿರಲಿಲ್ಲ . ಒಟ್ಟಿನಲ್ಲಿ ಸುಬ್ಬಣನ ಕವಳ ನನ್ನ ಫೋನಿಗೆ ಮುಕ್ತಿ ಕೊಟ್ಟಿತ್ತು .
ಹೀಗೆ ಮಜಬೂತು ವ್ಯಕ್ತಿತ್ವ ಹೊಂದಿದ್ದ ಸುಬ್ಬಣ್ಣ ಈಗ ಅಂಗಡಿ ಮುಚ್ಚಿದ್ದಾನೆ . ಪ್ರತಿಯೊಂದು ಕಂಪನಿಯವರು ತಮ್ಮದೇ ಟೆಕ್ನೀಷಿಯನ್ನು ಇಟ್ಟು ಕೊಂಡಿದ್ದಾರೆ . ಮೇಲಾಗಿ ಈಗೀನ ಸ್ಮಾರ್ಟ್ ಉಪಕರಣಗಳನ್ನು ರಿಪೇರಿ ಮಾಡುವಷ್ಟು ಚಾಣಾಕ್ಷತೆ ಅವನಿಗಿಲ್ಲ . ಎಲ್ಲಾದರೂ ಅವನ ಊರಿನ ಕಡೆ ನಾನು ಹೋದಾಗ ಜಗಲಿಯ ಮೇಲೆ ಆತ ಕವಳ ಹಾಕಿಕೊಂಡು ಕೂತಿರುವುದು ಕಾಣುತ್ತದೆ . ಮಲೆನಾಡಿನ ಕಾಡು , ಪರಿಸರದಂತೆ ಆತನೂ ತನ್ನ ಅವಸಾನಕ್ಕೆ ಕಾದು ಕುಳಿತಿರುವಂತೆ ನನಗೆ ಭಾಸವಾಗುತ್ತದೆ .  

22/8/17

ವಿಕಾಸವಾದ - 4 ( KA 12 )

ಎಲ್ಲಾ ಪ್ರವಾಸ ಕಥನಗಳೂ ಶುರುವಿಗೆ ಮುಂಚೆ ಡೋಲಾಯಮಾನ ಯೋಜನೆಗಳೇ ಆಗಿರುತ್ತವೆ . ಅದೂ ಈಗೀನ ಕಾಲದ ಕೂಲಿ ಕೆಲಸಮಾಡುವ ಗೆಳೆಯ ಬಳಗವನ್ನು ಕಟ್ಟಿಕೊಂಡು ಹೋಗುವುದು ಕಪ್ಪೆ ಹಿಡಿದು ಕೊಳಗ ತುಂಬಿದಂತೆ . ನಮ್ಮ ಯೋಜನೆಗಳು ಬಾಸಿನ ಹೆಂಡತಿ ಮಾಡಿದ ಅಡಿಗೆಯ ರುಚಿಯೋ , ಮನೆಯಲ್ಲಿ ಮಾಡಿದ ಜಗಳದ ಮೇಲೋ ನಿಂತಿರುವುದು ವಿಪರ್ಯಾಸ . ಅದನ್ನೆಲ್ಲಾ ಮೆಟ್ಟಿ ನಾವು ಯೋಜನೆ ಸಿದ್ಧಗೊಳಿಸಬೇಕಾಗುತ್ತದೆ . ಸರಿ , ಎಲ್ಲಿಗೆ ಹೋಗುವುದು ? . ಚೀಪ್ ಅಂಡ್ ಬೆಸ್ಟ್ ಸ್ಥಳ ಯಾವುದಿದೆ ? . ಗೋವಾದಿಂದ ಚರ್ಚೆ ಶುರುಮಾಡುವುದು ನಮ್ಮ ಸಂಸ್ಕೃತಿ . ಗೋವಾದಿಂದ ಶುರುವಾಗಿ ಕೊನೆಗೆ ಮಡಿಕೇರಿಗೆ ಬಂದು ನಿಲ್ಲುತ್ತೇವೆ . ಇದೆಲ್ಲಾ ಗೊತ್ತಿದ್ದೇ ನಾವು ಸೀದಾ ಮಡಿಕೇರಿ ಯೋಜನೆ ಮಾಡಿದ್ದೆವು .  ನಾಲ್ಕು ವರ್ಷ ನಾನು ಮೈಸೂರಿನಲ್ಲಿ ಇದ್ದರೂ ನಾನು ಕೊಡಗು ನೋಡಿಲ್ಲ . ಗೆಳೆಯರ ಬಳಗವೂ ಹೆಚ್ಚು ಕೊಡಗು ನೋಡಿದವರಲ್ಲ .  ಈಗ ಹೊರಡುವುದೊಂದೇ ಬಾಕಿ ಉಳಿದಿತ್ತು .
'ಜೂಮ್ ' ಕಾರು ತೆಗೆದುಕೊಂಡು ಹೋಗುವುದು ಎನ್ನುವುದು ನಮ್ಮ ಆಸೆ , ಆದರೆ ಸಾಲು ಸಾಲು ರಜದ ಕಾರಣ ಜೂಮ್ ಕಾರುಗಳು ಎಲ್ಲವೂ ಬಿಕರಿ ಆಗಿ ಹೋಗಿತ್ತು . ಬೇರೆ ಆಯ್ಕೆ ಇಲ್ಲದೆ 'ರೆಂಟೆಡ್ ಕಾರ್ ' ತೆಗೆದುಕೊಂಡು ಹೊರಟೆವು .  ಹೊರಡುವ ವೇಳೆ ಇದು ನಮ್ಮ ಜೀವನದಲ್ಲಿ ಮರೆಯಲಾರದ ನೆನಪುಗಳ ಸಂತೆ ಆಗಬಹುದೆಂಬ ಕಲ್ಪನೆಯೂ ನಮಗಿರಲಿಲ್ಲ ಬಿಡಿ . ಬೆಳಿಗ್ಗೆ  ನಾಲ್ಕು ಗಂಟೆಗೆ ನಾವು ಬೆಂಗಳೂರು ಬಿಟ್ಟಾಗಿತ್ತು . ಮೈಸೂರು -ಬೆಂಗಳೂರು ಹೈವೇ ಸೂರ್ಯನ ಆಗಮನಕ್ಕೆ ಇನ್ನೂ ಕಾಯುತಿತ್ತು , ಕರಗಿರದ ಇಬ್ಬನಿ ನಡುವೆ ' ಸೊಯ್ಯನೆ ' ಹೋಗುವ ಮಜಾ ಅನುಭವಿಸಿದವರಿಗೇ ಗೊತ್ತು .  ಗ್ಲಾಸು ತೆಗೆದರಂತೂ ಸೀದಾ ಸ್ವರ್ಗ ! .
ಹೈವೇ ದಾಟಿದ ಮೇಲೆ ಹುಣಸೂರು ಎಂಬ ಅತ್ತ ಸಿಟಿಯೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಊರೊಂದು ಸಿಗುತ್ತದೆ . ಬಹುಶಃ ಪ್ರವಾಸೋದ್ಯಮ ಹಾಗೂ ಕೃಷಿ ಎರಡೇ ಆ ಊರಿನ ಜೀವಾಳ . ಥೇಟು ಕೊಡಗಿನಂತೆ , ಆದರೆ ಹುಣಸೂರು ಸಮತಟ್ಟು ಪ್ರದೇಶದಂತೆ ಕಾಣಿಸುತ್ತದೆ ಅಷ್ಟೇ . ತಾಳ ಹಾಕುತ್ತಿದ್ದ ಹೊಟ್ಟೆಗೆ ಶ್ರುತಿ ಪೆಟ್ಟಿಗೆ ಸಿಕ್ಕಿದ್ದು ಹುಣಸೂರಿನ ಸಣ್ಣ ಹೋಟೆಲ್ ಅಲ್ಲಿ . ಗಡದ್ದು ಮಸಾಲೆ ದೋಸೆ ಬಾರಿಸಿ ತಲಾ ಒಂದೊಂದು ಫೋಟೋ ತೆಗೆಸಿಕೊಂಡು ಹೊರಟಿದ್ದಾಯ್ತು .
ದಾರಿಯುದ್ದಕ್ಕೂ ಬುಲ್ಲೆಟ್ಟು , ಜೂಮ್ ಕಾರುಗಳು , ಟೂರಿಸ್ಟ್ ವೆಹಿಕಲ್ ಗಳು ಸಾಥ್ ಕೊಡುತ್ತಲೇ ಇತ್ತು . ಈ ಬೆಂಗಳೂರಿಗರ ಹುಚ್ಚಾಟಕ್ಕೆ ಪಾರವೇ ಇಲ್ಲವೇನೋ ? ವೀಕೆಂಡ್ ಮಸ್ತಿಯಲ್ಲಿ ಸಿದ್ಧ ಹಸ್ತರು . ಮೈಸೂರು  ಹಾಗೂ ಕೊಡಗಿನ ಗಡಿಯಲ್ಲಿ ಬೈಲುಕುಪ್ಪೆ ಎಂಬ ಹಳ್ಳಿ ಸಿಗುತ್ತದೆ . ಬೈಲುಕುಪ್ಪೆ ನಮ್ಮ ರಾಜ್ಯದಲ್ಲಿರುವ ಅತಿ ದೊಡ್ಡ ಟಿಬೆಟಿಯನ್ ಕ್ಯಾಂಪ್ . ೧೯೬೧ ರಲ್ಲಿ ಆಗಿನ ಮೈಸೂರು ರಾಜ್ಯ ಸರ್ಕಾರ ಒಂದಿಷ್ಟು ಜಾಗ ಮಂಜೂರು ಮಾಡಿ ನಿರಾಶ್ರಿತರ ಶಿಬಿರ ಶುರು ಮಾಡಿತು . ಇಂದು ಇಲ್ಲಿ ಸುಮಾರು ಎಪ್ಪತ್ತು ಸಾವಿರ ಟಿಬೆಟಿಯನ್ನರು ಇರಬಹುದು . ಸರ್ಕಾರವೇ ಅವರಿಗೆ ಶಾಲೆ , ಕಾಲೇಜು , ಆಸ್ಪತ್ರೆಯನ್ನು ತೆರೆದಿದೆ . ಮೀಸಲಾತಿಯನ್ನೂ ಕೊಡುತ್ತದೆ . ಹದಿನಾರು ವರ್ಷ ಮೇಲ್ಪಟ್ಟ ಪ್ರತಿ ಟಿಬೆಟಿಯನ್ ಸಹ ' ಆರ್ ಸಿ ' ಸರ್ಟಿಫಿಕೇಟ್ ಮಾಡಿಸಿಕೊಳ್ಳುವುದು ಕಡ್ಡಾಯ . ಹಾಗೂ ಅದನ್ನು ಪ್ರತಿ ವರ್ಷವೂ ರಿನಿವಲ್ ಮಾಡಿಸುವುದು ಕಡ್ಡಾಯ . ಬೈಲುಕುಪ್ಪೆಯಲ್ಲಿ ' ನಾಮ್ ಡ್ರೋಲಿಂಗ್ ' ಎಂಬ ದೇವಾಲಯವಿದೆ . ಆಳೆತ್ತರದ ಚಿನ್ನದ ಬುಧ್ದನ ಮೂರ್ತಿಯನ್ನು ಇಲ್ಲಿ ಪ್ರತಿಷ್ಟಾಪಿಸಿದ್ದಾರೆ . ಇಲ್ಲಿ ಇನ್ನೂ ನಾಲಗೆ ಹೊರಳದ ಹೆಸರಿನ ಲೆಕ್ಕವಿಲ್ಲದಷ್ಟು ದೇವಾಲಯಗಳು , ಶಾಲೆಗಳು ಇವೆ . ಅದನ್ನೆಲ್ಲ ನೋಡುತ್ತಾ ಕುಳಿತರೆ ಎರಡು ವಾರ ಅದಕ್ಕೆ ಹಿಡಿಸುತ್ತದೆ . ನಮಗೆ ಎಲ್ಲರೂ ದಲೈ ಲಾಮಾರಂತೆ ಕಾಣಿಸುತ್ತಾರೆ .  ನಮ್ಮ ತೆರಿಗೆಯ ಹಣವನ್ನೇ ಬಳಸಿಕೊಂಡು ನಮಗಿಂತ ಸುಖವಾದ ಬದುಕು ಅವರು ಬದುಕುತ್ತಿದ್ದಾರೆ ಎನ್ನುವುದೇ ಸಣ್ಣ ವಿಷಾದ . ಆದರೂ ಛಲ ಬಿಡದ ಬದುಕು , ಸ್ವಚ್ಛ ಪುಟ್ಟ ಪುಟ್ಟ ಹಳ್ಳಿಗಳು . ಸಾಫು ಸಪಾಟು ರಸ್ತೆಗಳು ಭಾರತೀಯರಿಗೆ ಪಾಠವಾಗಬಲ್ಲವು . ಪುಟ್ಟ ಕಣ್ಣುಗಳನ್ನು ಇಷ್ಟೇ ಇಷ್ಟು ಅಗಲಕ್ಕೆ ತೆರೆದುಕೊಂಡು ಪುಟ -ಪುಟನೆ ಓಡಾಡುವ ಟಿಬೆಟಿಯರನ್ನು ನೋಡುವುದು ಚೆಂದ .
ಸದ್ಯಕ್ಕೆ ರಿಪೇರಿ ಕಾರ್ಯಗಳಿಗೆ ಗೋಲ್ಡನ್ ಟೆಂಪಲ್ಲಿನ ಬಾಗಿಲು ಮುಚ್ಚಿದೆ . ಬೈಲುಕುಪ್ಪೆ ಊರು ಒಂದು ರೌಂಡ್ ಹಾಕಿ ಬರಬಹುದು . ಅರ್ಚನೆ ಮಾಡಿಸಲು ಹಣ್ಣು ಕಾಯಿ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ ಎಂದು ಒತ್ತಿ ಹೇಳುತ್ತಿದ್ದೇನೆ .
                                        
ಬೈಲುಕುಪ್ಪೆಯಿಂದ ಹಾರಂಗಿ ಜಲಾಶಯ ಕೇವಲ ಎರಡು-ಮೂರು ಮೈಲುಗಳ ಹಾದಿ ಅಷ್ಟೇ . ಸಮಯ ಸಿಕ್ಕರೆ ಹೋಗಬಹುದು . ನಾವು ಸೀದಾ 'ದುಬಾರೆ' ಕ್ಯಾಂಪಿಗೆ ಹೋದೆವು . ದುಬಾರೆ ಕಾವೇರಿ ನದಿಯ ಮಧ್ಯೆ ಇರುವ ಒಂದು ದ್ವೀಪ . ಆನೆ ಸಫಾರಿ , ಆನೆಯ ಜೀವನ ನೋಡಲು  ಹೋಗಬೇಕು . ಇದಿಷ್ಟು ಬಿಟ್ಟರೆ ಬೇರಾವ ರೀತಿಯಿಂದಲೂ ಹೋಗುವ ಜಾಗವಲ್ಲ . ಒಂದೇ ಕಾರು ಹೋಗುವ ರೋಡು , ಪ್ರವಾಸಿಗರ ಗಿಜಿ ಗಿಜಿ . ಬನ್ನೇರುಘಟ್ಟ ರಸ್ತೆಯಲ್ಲಿ ಇದ್ದಷ್ಟೇ ಟ್ರಾಫಿಕ್ಕು ಇಲ್ಲೂ ಇರುತ್ತದೆ . ರಜಾ ದಿನಗಳನ್ನು ಬಿಟ್ಟು ಉಳಿದ ದಿನ ಹೋಗಬಹುದೇನೋ , ನನಗೆ ಗೊತ್ತಿಲ್ಲ . ನಾವು ದುಬಾರೆ ತಲುಪುವ ಹೊತ್ತಿಗಾಗಲೇ ತಲೆ ಗಿರ್ರ್ ಎನ್ನಲು ಶುರುವಾಗಿತ್ತು . ನಾವು ಕಾಯ್ದಿರಿಸಿದ್ದ ರೂಮು ಸಹ ಕ್ಯಾನ್ಸಲ್ ಆದ ವಿಷಯ ತಿಳಿಯಿತು . ಪ್ರವಾಸದ ಮಜಾ ಹೋಗಿ , ರೂಮು ಹುಡುಕುವ ತಲೆನೋವು ನಮಗೆ ಹಿಡಿಯಿತು . ಕೊಡಗಿನ ಪ್ರವಾಸೋದ್ಯಮದ ವಿಶ್ವರೂಪ ನಮಗೆ ತಿಳಿದದ್ದೇ ಆಗ . ದಿನವೊಂದಕ್ಕೆ ಒಬ್ಬರಿಗೆ  ಒಂದೂವರೆ ಸಾವಿರ ಕೊಡುತ್ತೇನೆಂದರೂ ರೂಮು , ಹೋಂ ಸ್ಟೇಗಳು ಸಿಗುವುದು ಕಷ್ಟ .  ಮಡಿಕೇರಿಯ ಆಸುಪಾಸಿನಲ್ಲೇ ರೂಮು ಮಾಡಿದರೆ ಅನುಕೂಲ ಜಾಸ್ತಿ . ಆದರೆ ಎಲ್ಲೂ ಸಿಗದ ಕಾರಣ ನಾವು ಸಿದ್ಧಾಪುರದ ಹತ್ತಿರ ' ಮರಗೋಡು ' ಎಂಬ ಹಳ್ಳಿಯಲ್ಲಿ ರೂಮು ಮಾಡಬೇಕಾಯಿತು . ಆ ಹಳ್ಳಿಯಲ್ಲೂ ಸಹ ಒಬ್ಬರಿಗೆ ದಿನವೊಂದಕ್ಕೆ ಒಂದೂವರೆ ಸಾವಿರ !
                                        
ಕೊಡಗಿನ ಆರ್ಥಿಕತೆ ನಿಂತಿರುವುದು ಕೇವಲ ಪ್ರವಾಸೋದ್ಯಮ ಹಾಗು ಕಾಫಿಯ ಮೇಲೆ .  ಪ್ರವಾಸೋದ್ಯಮ ಅದೆಷ್ಟರ ಮಟ್ಟಿಗೆ ಕೊಡಗಿನ ಮಣ್ಣಿನಲ್ಲಿ ಹೊಕ್ಕಿದೆ ಎಂದರೆ , ಇಲ್ಲಿನ ಪ್ರತಿ ಹಳ್ಳಿಯಲ್ಲೂ ಹೋಂ ಸ್ಟೇ ಗಳು , ರೆಸ್ಟೋರೆಂಟುಗಳು , ರೂಮುಗಳು , ರೆಸಾರ್ಟ್ಗಳು ಕಾಣುತ್ತವೆ . ಆದರೆ ಹೇಳಲಾರದ ಅವ್ಯಕ್ತ ಆನಂದ ಕೊಡುವ ಜಾಗಗಳಿವು . ೧೯೫೦ ರ ತನಕ ಕೊಡಗು ಪ್ರತ್ಯೇಕ ರಾಜ್ಯವಾಗೇ ಇತ್ತು , ನಂತರ ಕರ್ನಾಟಕದೊಡನೆ ವಿಲೀನವಾದರೂ ಈಗಲೂ ಸಹ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳಿಸುತ್ತದೆ . ಕೊಡವರು ಜಾಲಿ ಮನುಷ್ಯರು , ಶ್ರೀಮಂತ ಸಂಸ್ಕೃತಿಯ ಮತ್ತು ಶ್ರೀಮಂತ ಆಸ್ತಿಯ ಒಡೆಯರು . ನನಗೆ ಕೊಡವರಲ್ಲಿ ಬಹಳ ಹಿಡಿಸುವ ವಿಷಯ ಸ್ತ್ರೀ ಸ್ವಾತಂತ್ರ್ಯ . ಕೊಡವರಲ್ಲಿ ಇರುವ ಸ್ತ್ರೀ ಸ್ವಾತಂತ್ರ್ಯ ನಮಗೆ ಮಾದರಿ . ನಮ್ಮ ಕಾಲೇಜಿನಲ್ಲೇ ಎಷ್ಟೋ ಕೊಡವ ಹುಡುಗಿಯರನ್ನು ನಾನು ಹತ್ತಿರದಿಂದ ಬಲ್ಲೆ . ಹಾಯಾಗಿ ಜೀಪು ಓಡಿಸಿಕೊಂಡು , ಮದುವೆಮನೆಗಳಲ್ಲಿ ಹುಡುಗರೊಟ್ಟಿಗೆ ಕೂತು ವೈನು ಕುಡಿಯುತ್ತಾ ಎಂಜಾಯ್ ಮಾಡುತ್ತಾರೆ . ಇವರ ಭಾಷೆಯೂ ವಿಚಿತ್ರ , ಕೊಡಗು ಸಣ್ಣ ಜಿಲ್ಲೆಯಾದರೂ ಎರಡು ರೀತಿಯ ಕೊಡವ ಭಾಷೆ ಇದೆ . ಆದರೂ ಕೊಡವ ಒಂದು ಭಾಷೆ ಎಂದು ಹೇಳುವುದು ಕಷ್ಟ , ಕನ್ನಡ ಹಾಗೂ ತುಳುವಿನ ಮಧ್ಯದ ಉಪ ಭಾಷೆ ಎಂದು ಹೇಳಬಹುದು . 'ಕಟ್ಟೆಮನೆ ಪ್ರಕಾಶ್' ಆಪಾಧ್ಭಾಂದವರಂತೆ ಬಂದು ನಮಗೆ ಹೋಂ ಸ್ಟೇ ನೀಡಿದರು . ( ದುಡ್ಡು ಕೊಟ್ಟಿದ್ದೇವೆ ಅದು ಬೇರೆ ವಿಷಯ ಬಿಡಿ ) .
ಅಡ್ವಾನ್ಸ್ ಕೊಟ್ಟು , ಮಡಿಕೇರಿಗೆ ಬಂದು ಊಟ ಮಾಡಿ ಮಾಂದಾಲ್ ಪಟ್ಟಿಯ ಕಡೆ ಸ್ಟಿಯರಿಂಗ್ ತಿರುಗಿಸಿದೆವು . ಮಾಂದಾಲ್ ಪಟ್ಟಿ ಎಂದರೆ ತಿಳಿಯುವುದು ಕಷ್ಟ ಮುಗಿಲ್ಪೇಟೆ ಎಂದರೆ ತಿಳಿದೀತು . ಕೊಡಗು ಪೂರ್ತಿ ಜಿಲ್ಲೆಯಲ್ಲಿ ಮೊದಲ ತಾಪತ್ರಯ ಎಂದರೆ ಸರಿಯಾದ ಸೈನ್ ಬೋರ್ಡ್ ಇಲ್ಲದಿರುವುದು . ದಾರಿ ಹುಡುಕುವುದರಲ್ಲೇ ಅರ್ಧ ಪ್ರವಾಸ ಮುಗಿದು ಹೋಗುತ್ತದೆ .
                                         
ಮಡಿಕೇರಿಯಿಂದ ಇಪ್ಪತ್ತು ಕಿಲೋಮೀಟರ್ ಅಷ್ಟು ದೂರದಲ್ಲಿ ಮಾಂದಾಲ್ ಪಟ್ಟಿಯಿದೆ . ಹೋಗುವ ಮಾರ್ಗದಲ್ಲಿ ಕಾಣುವ ದೃಶ್ಯಗಳು ಅಪೂರ್ವ . ತಿರುವು ಮುರುವಿನ ಸಣ್ಣ ರಸ್ತೆ , ಎದುರಿನಿಂದ ಮತ್ತೊಂದು ಕಾರು ಬಂದರೆ ಎತ್ತಿಯೇ ಇಡಬೇಕು . ಈ ರೋಡೂ ಸಹ ಪ್ರವಾಸಿಗಳಿಂದ ಕಿಕ್ಕಿರಿದಿರುತ್ತದೆ . ನಾವು ಪಾರ್ಕಿಂಗ್ ಗೆ ಕೊಡುವ ದುಡ್ಡನ್ನು ಸರಿಯಾಗಿ ಉಪಯೋಗಿಸಿದ್ದರೆ ಸಾಕಿತ್ತು . ಮಾಂದಾಲ್ ಪಟ್ಟಿ ಒಳ್ಳೆಯ ಪ್ರವಾಸಿ ತಾಣವಾಗುತಿತ್ತು . ಮಾಂದಾಲ್ ಪಟ್ಟಿಯ ಬೆಟ್ಟದ ತುದಿ ಏರಿದರೆ ಪುಷ್ಪಗಿರಿ ರಿಸೆರ್ವ್ ಫಾರೆಸ್ಟ್ ಕಾಣಿಸುತ್ತದೆ . ಆಗುಂಬೆ ಬಿಟ್ಟರೆ ಅತೀ ಹೆಚ್ಚು ಕಾಳಿಂಗ ಸರ್ಪ ಕಾಣಿಸುವುದು ಇಲ್ಲೇ . ಆಗಾಗ ಹುಲಿ ಬಂದ ಕಥೆಗಳನ್ನೂ ಗ್ರಾಮಸ್ಥರಿಂದ ತಿಳಿದುಕೊಳ್ಳಬಹುದು . ರೊಯ್ಯನೆ ಹೋಗುವ ಜೀಪುಗಳಿಂದ ತಪ್ಪಿಸಿಕೊಂಡು ಬದುಕಿ ಬರುವುದು ಕಷ್ಟ . ಕಾರು ಮುಂದೆ ಹೋಗುವುದಿಲ್ಲ ಎಂದು ವ್ಯಾಪಾರ ಕುದುರಿಸಲು ನೋಡುತ್ತಾರೆ , ತಲೆ ಕೆಡಿಸಿಕೊಳ್ಳದೆ ಓಡಿಸಿ . ಮಾಂದಾಲ್ ಪಟ್ಟಿಯ ಮಜಾ ಸವಿಯುತ್ತಾ ಸಂಜೆ ಆದದ್ದೇ ನಮಗೆ ತಿಳಿಯಲಿಲ್ಲ .
ನಿಜವಾದ ಕೊಡಗು ತೆರೆದುಕೊಂಡಿದ್ದು ಆಗ . ನಮ್ಮ ಹೋಂ ಸ್ಟೇ ಇದ್ದದ್ದು ಮರಗೋಡು ಎಂಬ ಹಳ್ಳಿಯಲ್ಲಿ . ಪ್ರಸಿದ್ಧ ಜಾಗಗಳಿಗೇ ಸೈನ್ ಬೋರ್ಡ್ ಇಲ್ಲವೆಂದಾದಮೇಲೆ ಆ ಕಗ್ಗಾಡಿನ ಮೂಲೆಗೆ ಸೈನ್ ಬೋರ್ಡ್ ಇರಬಹುದೆಂದು ನಾವು ಬಯಸುವುದು ಮೂರ್ಖತನವಾಗಿತ್ತು . ಕೊಡವರಿಗೆ ದಾರಿ ಹೇಳುವ ಕ್ಲಾಸು ಮಾಡಬೇಕೆಂದು ನನಗೆ ಅನಿಸಿದ್ದು ಆಗಲೇ . " ಹೀಗೆ ಮೂರು ಮೈಲಿ ಹೋಗಿ ಅಲ್ಲಿ ಒಂದು ಜಂಕ್ಷನ್ ಸಿಕ್ತದೆ ಅಲ್ಲಿಂದ ರೈಟ್ , ಶಾಲೆ ಸಿಕ್ತದೆ , ಒಂದು ಏರು , ಒಂದು ಸೇತುವೆ ಆಮೇಲೆ ಲೆಫ್ಟ್ " - ಈ ರೀತಿ ಹೇಳಿದರೆ ನಮ್ಮ ಕಥೆ ಏನಾಗಬೇಡ . ಅದೂ ಕೊಡಗಿನ ಹಳ್ಳಿ ಎಂದರೆ ನಾಲ್ಕು ಮನೆಗಳಿಗಿಂತ ಹೆಚ್ಚು ಇರುವುದಿಲ್ಲ . ಕಣ್ಣು ಹಾಯಿಸಿದಷ್ಟೂ ಕಾಫಿ ತೋಟಗಳು , ಅರ್ಧ ಅಡಿಯ ರಸ್ತೆ ಅಷ್ಟೇ . ಅವರು ಹೇಳುವ ಜಂಕ್ಷನ್ ಯಾವಾಗ ಸಿಗುತ್ತದೋ ಎಂಬುದೇ ತಿಳಿಯುವುದಿಲ್ಲ . ಅರ್ಧ ವಿರಾಜಪೇಟೆ ತಾಲೂಕು ಸುತ್ತಿದರೂ ಮರಗೋಡು ಸಿಗಲೊಲ್ಲದು . ಕೊನೆಗೆ ಬೇಸತ್ತು ಮನೆ ಮನೆ ಬಾಗಿಲು ತಟ್ಟಿ ದಾರಿ ಕೇಳಲು ಶುರು ಮಾಡಿದೆವು . ಬಹುಶಃ ಮುಂದೆ ಎಂದಾದರೂ ನಾವು ಚೆಟ್ಟಳ್ಳಿ ಸಮೀಪ ಚುನಾವಣೆಗೆ ನಿತ್ತರೆ ಸ್ಪಷ್ಟ ಬಹುಮತ ಗ್ಯಾರಂಟಿ .
ಯಾವುದೊ ಹೆಸರಿಲ್ಲದ ಊರಿನ ತೋಟದೊಳಗೆ ನಾವು ಹೋಗುತ್ತಿದೆವು , ಅಲ್ಲಿ ದಾರಿ ಇದೆ ಎಂದು ತಿಳಿದದ್ದು ಗ್ರಾಮಸ್ಥನೊಬ್ಬ ಟಾರ್ಚು ಹೊಡೆದು ತೋರಿಸಿದ ಮೇಲೆಯೇ . ಅದೇ ದಾರಿಯಲ್ಲಿ ಮತ್ತೊಂದು ಕಾರು ಬಂದು ನಾವು ಅರ್ಧ ಫರ್ಲಾಂಗು ಹಿಂದೆ ಬರಬೇಕಾಯಿತು . ಪುಣ್ಯಕ್ಕೆ ಅವರು ಪ್ರಕಾಶರ ನೆಂಟರೇ ಆಗಿದ್ದರು . ಮತ್ತೂ ಕೇಳುತ್ತಾ ಹೋದ ನಮಗೆ ದೇವರೇ ಸಿಕ್ಕಿದ , ಆಟೋ ಡ್ರೈವರ್ ಭರತನ ರೂಪದಲ್ಲಿ . ಆದರೆ ದೇವರು ವಾಲಾಡುತ್ತಿದ್ದ ಎಂಬುದೇ ವ್ಯತ್ಯಾಸ . ಆತನ ಮನೆಯೂ ಮರಗೋಡು , ಆತನ ಆಟೋ ಹೋದಂತೆ ನಾವು ಹೋಗಿ ರಾತ್ರಿ ಒಂಬತ್ತೂ ವರೆಗೆ ಹೋಂ ಸ್ಟೇ ತಲುಪಿದ್ದು ನಮ್ಮ ಜೀವನದ ಮರೆಯಲಾರದ ಘಟನೆ . ನಾವು ಮಡಿಕೇರಿಯಲ್ಲೇ ಉಳಿದಿದ್ದರೆ ಕೊಡಗನ್ನು ಇಷ್ಟು ಸಮೀಪದಿಂದ ನೋಡಲು ಸಾಧ್ಯವಾಗುತ್ತಿರಲಿಲ್ಲ .
ಕೊಡಗು ಸಹ ನಮ್ಮೂರು ಸಾಗರದಂತೆಯೇ . ಅಲ್ಲೊಂದು ಇಲ್ಲೊಂದು ಮನೆ . ದಟ್ಟ ಕಾಡು , ಬೆಟ್ಟ , ಗುಡ್ಡ , ಅಸಂಖ್ಯ ಹೊಳೆಗಳು . ಅಡಿಕೆ , ಕಾಫಿ ತೋಟಗಳು . ಮುಖ್ಯ ವ್ಯತ್ಯಾಸ ಎಂದರೆ ನಮ್ಮವರು ಕೊಡವರಂತೆ ವ್ಯವಹಾರಕ್ಕೆ ಇಳಿದಿಲ್ಲ , ತಮ್ಮನ್ನು ತಾವು ಮಾರಿಕೊಂಡಿಲ್ಲ . ನಾವಿದ್ದ ಹೋಂ ಸ್ಟೇ ಮಾಲೀಕ ನಾವು ಹೊರಡುವಾಗ ತಣ್ಣಗೆ ಬಂದು " ಇಲ್ಲಿ ಡ್ರಿಂಕ್ಸ್ ಸಿಗುದಿಲ್ಲ , ಮಡಿಕೇರಿ ಇಂದಾನೆ ತಂದ್ಬಿಡಿ " ಎಂದ . ಅವನ ಮನೆಯೊಳಗೇ ಕರೆದು ಊಟ ಹಾಕಿದ . ವರ್ಷಪೂರ್ತಿ ಇದೆ ಹಾಡಾದರೆ ಪ್ರೈವಸಿ ಕಥೆ ಏನು ? . ಕೇವಲ ದುಡ್ಡು ಮಾಡುವ ಮನೋಭಾವ ಅಷ್ಟೇ ! . ಆದರೆ ಆತಿಥ್ಯ ನೀಡುವುದನ್ನು ಕೊಡವರಿಂದ ಕಲಿಯಬೇಕು . ಬೇಗನೆ ಆತ್ಮೀಯರಾಗುತ್ತಾರೆ .
ಮರುದಿನ ರೂಮು ಖಾಲಿ ಮಾಡಿ ನಾವು ಚೆಲುವರ ಫಾಲ್ಸ್ ಕಡೆ ಹೊರೆಟೆವು . ಎತ್ತರ, ಗಾತ್ರದಲ್ಲಿ ಇದು ಜೋಗದ ಮೊಮ್ಮಗ ಅಷ್ಟೇ . ಅದೇ ಮಜಾ ! . ವಿರಾಜಪೇಟೆ ತಾಲೂಕಿನಲ್ಲೇ ಹೆಸರಿಲ್ಲದ ಹೊಳೆಯಿಂದ ಈ ಜಲಪಾತ ಸೃಷ್ಟಿಯಾಗಿದೆ . ಇದು ನಂತರ ಕಾವೇರಿಯನ್ನು ಸೇರುತ್ತದೆ . ಮಾರ್ಗದಲ್ಲಿ ನೀವು ಇಗ್ಗುತ್ತಪ್ಪ ದೇವಾಲಯ ನೋಡಬಹುದು . ಚೆಲುವರ ನೋಡಲು ಚೆಲುವಾಗಿ ಕಂಡರೂ ಬಹಳ ಅಪಾಯಕಾರಿ ಸ್ಥಳ . ಈ ಮಳೆಗಾಲ ಒಂದರಲ್ಲೇ ಸುಮಾರು ಮೂವತ್ತು ಜನ ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ . ಈಗ ಇಬ್ಬರು ಗಾರ್ಡುಗಳನ್ನು ಸರ್ಕಾರ ನೇಮಿಸಿದೆ .                                                                                               
ಕೊಡಗಿನಲ್ಲಿ ಇಂತಹ ಜಲಪಾತಗಳು ಹೆಜ್ಜೆಗೊಂದು ಸಿಗುತ್ತವೆ . ನಂತರ ನಾವು ಹೋಗಿದ್ದು ಭಾಗಮಂಡಲಕ್ಕೆ . ಭಗಂಡೇಶ್ವರ ದೇವಾಲಯಕ್ಕೆ . ಇಲ್ಲಿ ಕಾವೇರಿ ನದಿ ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಜೊತೆ ಸೇರಿಕೊಳ್ಳುತ್ತದೆ . ಭಗಂಡೇಶ್ವರ ಮುನಿಗಳು ತಪಸ್ಸು ಮಾಡಿದ ಜಾಗ . ನೀರು ಬಹಳ ಸ್ವಚ್ಛ . ಇಲ್ಲಿಂದ ಸುಮಾರು ಹತ್ತು ಕಿಲೋಮೀಟರು ಹತ್ತಿದರೆ ತಲಕಾವೇರಿ ಸಿಗುತ್ತದೆ .
                                                      
ಕಾವೇರಿ ನದಿ ಹುಟ್ಟುವ ಸ್ಥಳ ತಲಕಾವೇರಿ . ಭಾಗಮಂಡಲದಿಂದ ಸಿಂಗಲ್ ರೋಡಿನ ದಾರಿ . ಎಡಗಡೆ ತಲಕಾವೇರಿ ರಿಸೆರ್ವ್ ಫಾರೆಸ್ಟ್ , ಬಲಗಡೆ ಕಡಿದಾದ ಬೆಟ್ಟ . ಎದುರಿನಿಂದ ಬ್ರೇಕ್ ಒತ್ತದೇ ನುಗ್ಗುವ ವಾಹನಗಳು . ಮ್ಯಾಗಿ ನಿಷೇಧವಾಗಿದ್ದ ಕಾಲಕ್ಕೆ ಅತೀ ಹೆಚ್ಚು ನಷ್ಟವಾಗಿದ್ದು ತಲಕಾವೇರಿಯ ಗೂಡಂಗಡಿಗಳಿಗೆ . ಪ್ರತಿ ಅಂಗಡಿಯಲ್ಲೂ ಸರಗಟ್ಟಲೆ ಮ್ಯಾಗಿ ಪ್ಯಾಕೆಟ್ ನೇತು ಹಾಕಿ ಮಾರುತ್ತಾರೆ . ಕಾವೇರಿಯ ಉಗಮ ಸ್ಥಾನದಲ್ಲಿ ಪವಿತ್ರ ಸ್ನಾನ ಮಾಡಬಹುದು . ' ಕನ್ನಡ ನಾಡಿನ ಜೀವನದಿ ಕಾವೇರಿ ' ಹಾಡಿಗೆ ತಮಿಳಿನ ಖುಷ್ಬೂ ಕುಣಿದಿದ್ದೂ ಇದೇ ಜಾಗದಲ್ಲಿ . ಉಗಮಸ್ಥಾನದಿಂದ ಬೆಟ್ಟದ


ತುದಿಯವರೆಗೂ ಹೋಗಬಹುದು . ತಲಕಾವೇರಿಯಿಂದ ಸೀದಾ ನಾವು ಹೊರಟಿದ್ದು ಬೆಂಗಳೂರಿಗೆ . ಹುಣಸೂರಿನಿಂದ ಶುರುವಾದ ಮಳೆ ಬೆಂಗಳೂರಿನ ತನಕ ಬಿಟ್ಟೂ ಬಿಡದೆ ಕಾಡಿತು . ಬೆಂಗಳೂರು ತಲುಪಿದ್ದು ಹನ್ನೆರಡೂ ವರೆಗೆ . ಉಳಿದಂತೆ ನಾವು ತಿಂದಿದ್ದು , ಕುಡಿದಿದ್ದು ಎಲ್ಲವೂ ಅನ್-ಇಂಟೆರೆಸ್ಟಿಂಗ್ .
 ದುಡ್ಡಿನ ವ್ಯಾಮೋಹಕ್ಕೆ , ಮೋಜು , ಮಸ್ತಿಗೆ ನಾವು ಕೊಡಗನ್ನು ಹಾಳು ಮಾಡುತ್ತಿದ್ದೇವೆ . ಕೊಡವರು ಅದರಿಂದ ಬರುವ ಆದಾಯದ ಮುಖ ನೋಡಿ ಸುಮ್ಮನೆ ಕುಳಿತಿದ್ದಾರೆ . ಖಂಡಿತವಾಗಿ ಇದಕ್ಕೊಂದು ಕಡಿವಾಣದ ಅಗತ್ಯತೆ ಇದೆ . ಮಾಂದಾಲ್ ಪಟ್ಟಿಗೆ ಹೋಗುವಾಗ ಎದುರಿನಿಂದ ಬಂದ ಇಂಡಿಕಾ ಕಾರಿನ ಡ್ರೈವರ್ ಕಂಠ ಪೂರ್ತಿ ಕುಡಿದಿದ್ದ . ಆ ರಸ್ತೆಯಲ್ಲಿ ಕುಡಿದು ಓಡಿಸಿದರೆ ಏನಾಗಬಹುದು ? . ಕಠಿಣ ಕಾನೂನಿನ ಅಗತ್ಯತೆ ಬಹಳವೇ ಇದೆ .
ಉಳಿದಂತೆ ಕೊಡಗಿನ ಸಂಬಾರ ಪದಾರ್ಥ , ಕೆಎ ೧೨ ಜೀಪು , ಸುಂದರ ಕೊಡವ ಹುಡುಗಿಯರು , ಶುಧ್ದ ಜೇನು ತುಪ್ಪ , ಹೋಂ ಮೇಡ್ ವೈನ್ ಹಾಗು ಚಾಕೊಲೇಟ್ ಫೇಮಸ್ಸು . ಅದನ್ನು ಮರೆಯದಿರಿ ಮರೆತು ನಿರಾಶರಾಗದಿರಿ . ಸಾಧ್ಯವಾದಷ್ಟು ವೀಕ್ ಡೇಸ್ ನಲ್ಲಿ ಹೋದರೆ ಉತ್ತಮ .
ಹ್ಯಾಪಿ ಜರ್ನಿ ....... 

15/3/17

ಸಂಸ್ಕೃತಿ

ಎರಡೆರಡು ಬಾರಿ ಸರಿಯಾಗಿ ಓದಿದ ಮೇಲೆ ಕಾರ್ತೀಕ ಪತ್ರವನ್ನು ಜೋಪಾನವಾಗಿ ಫೈಲಿನ ಮಧ್ಯೆ  ಇಟ್ಟ . ಉಮ್ಮಳಿಸಿ ಬಂದ ಖುಷಿಯನ್ನು ಒತ್ತಿಟ್ಟುಕೊಳ್ಳಲು ಸೋತು ತನ್ನಮ್ಮನಿಗೆ ವಿಷಯ ತಿಳಿಸಿದ . ಪಾರ್ವತಮ್ಮನೂ ಸಹ ಹರಕು ಬಾಯಿಗೆ ಎಂ-ಸೀಲ್ ಸಿಗದೆ ಒಂದಿಬ್ಬರಿಗೆ ಹೇಳಿದಳು . ಅಮೇರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನಕ್ಕೆ ಒಂದು ಕೋಲಾಟದ ತಂಡವನ್ನು ಕಳುಹಿಸಬೇಕೆಂದು ಸಂಸ್ಕೃತಿ ಇಲಾಖೆಯವರು ಪತ್ರದಲ್ಲಿ ಸೂಚಿಸಿದ್ದರು  .  ಆ ಪತ್ರಕ್ಕೆ ರೆಕ್ಕೆ ಪುಕ್ಕ ಮೂಡಿ ಊರಿನ ತುಂಬೆಲ್ಲಾ ಸುದ್ದಿ ಹಾರಾಡತೊಡಗಿತು . ಶಾಲೆ ತಪ್ಪಿಸಿ ಕೋಲಾಟಕ್ಕೆ ಹೋದ ಕಾರ್ತೀಕನಿಗೆ ಮೊದಲ ಬಾರಿಗೆ ತಾನು ಮಾಡಿದ್ದು ಸರಿ ಎನಿಸಿತು . ಸರ್ಕಾರದ ಸ್ಕೀಮುಗಳ ಅಂದಾಜಿದ್ದ ಆತ ಅಧಿಕೃತ ಸುದ್ದಿ ತರಲು ಶಿಮೊಗ್ಗಕ್ಕೆ ಹೋಗಿ ಬಂದ . ಅಧಿಕೃತವಾಗಿ ಸುದ್ದಿಯಾದ ಮೇಲೆ ಊರಿನ  ಗಣ್ಯ ವ್ಯಕ್ತಿಗಳ ಸಾಲಿಗೆ ಆತನೂ ಸೇರಿದ . ಯಾವುದೋ ದಾನಿಗಳು ಐನೂರು ರೂಪಾಯಿ ಖರ್ಚು ಮಾಡಿ ಬ್ಯಾನರ್ ಸಹ ಹಾಕಿಸಿದರು . ಹೆಚ್ಚು ಹಣ ಖರ್ಚಾದರೂ ಸರಿಯೇ ಎಂದುಕೊಂಡು ತತ್ಕಾಲ್ ನಲ್ಲಿ ಪಾಸ್ಪೋರ್ಟ್ ಮಾಡಿಸಿ , ವೀಸಾಗೆ ಅರ್ಜಿ ಗುಜರಾಯಿಸಿದ . ಆದರೆ ಮುಖ್ಯ ಸಮಸ್ಯೆ ಅದರ ನಂತರ ಎದುರಾಯಿತು . ಕಾರ್ತೀಕ ಹಾಗೂ ಆತನ ಸ್ನೇಹಿತರು ಕಟ್ಟಿ ಬೆಳೆಸಿದ ಕೋಲಾಟದ ತಂಡ ಯಾವಾಗಲೋ ನಾಮಾವಾಶೇಷವಾಗಿತ್ತು . ಹತ್ತು ವರ್ಷದ ಹಿಂದೆ ಯುವ ಜನ ಮೇಳದಲ್ಲಿ ಈ ತಂಡವನ್ನು ಗುರುತಿಸಿದ್ದ ಸಂಸ್ಕೃತಿ ಇಲಾಖೆ ಪೂರ್ವಾಪರಗಳನ್ನು ತಿಳಿದುಕೊಳ್ಳದೆ ಪತ್ರ ಕಳುಹಿಸಿತ್ತು . ಗಟ್ಟಿಯಾಗಿ ಹೇಳಬೇಕೆಂದರೆ ಇವರ ಕೋಲಾಟದ ತಂಡ ಪೇಪರಿನ ಮೇಲೆ ಜೀವಂತವಾಗಿತ್ತು . ಪ್ರತಿ ವರ್ಷವೂ ಸರ್ಕಾರದವರು ಯಾವ್ಯಾವುದೋ ಸ್ಕೀಮಿನ ಅಡಿಯಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ,ಉಳಿಸುವ  ಸಲುವಾಗಿ ಗೆಜ್ಜೆ , ಡೊಳ್ಳು , ಡ್ರಮ್ಮು ಎಲ್ಲವನ್ನು ಕಳುಹಿಸುತಿತ್ತು .  ಮೊದ ಮೊದಲು  ಶೇಂದಿ ಕುಡಿಯಲು ಅದನ್ನು ಅಡವಿಟ್ಟದ್ದೂ ಇದೆ .  ಎಲ್ಲರೂ ಅದನ್ನೇ ಚಾಳಿ ಮಾಡಿಕೊಂಡು ಶೇಂದಿ ಅಂಗಡಿ ಗತ ಕಾಲದ ನಮ್ಮ ಸಂಸ್ಕೃತಿಯನ್ನು ತೋರಿಸುವ ಮ್ಯೂಸಿಯಂ ಆಯಿತು . ಅಂಗಡಿಯಲ್ಲಿ ಜಾಗ ಖಾಲಿಯಾಗಿ  ಮಾಲೀಕ ಅದನ್ನು ಅಡವಿಟ್ಟುಕೊಳ್ಳಲು ನಿರಾಕರಿಸಲು ಶುರುಮಾಡಿದ ಮೇಲೆ ಅದು ಮನೆ ಮನೆಯ ಟೀವಿ ಸ್ಟ್ಯಾಂಡಿನ ಹಿಂದೆ ಬೆಚ್ಚಗೆ ಕುಳಿತುಕೊಳ್ಳುತಿತ್ತು . ಈಗ ಅವೆಲ್ಲಕ್ಕೂ ಜೀವ ಬಂದು ಈಜಿಪ್ಟ್ ನ ಮಮ್ಮಿಗಳು ಎದ್ದು ಕುಳಿತಂತೆ ಕುಳಿತಿತು . ಒಂದಿಬ್ಬರು ಮುದುಕರು ಕಾರ್ತೀಕನ ಮನೆಗೆ ಬಂದು ಕೋಲಾಟದ ಹಾಡು ಹೇಳಿ , ಅವಲಕ್ಕಿ  ತಿಂದು ಕಾಫಿ ಕುಡಿದು ಹೋದರು .  ಸಂಜೆಯಾದರೆ ಸಾಕು ಊರಿನಲ್ಲಿ ಹಾಡು , ಕೋಲಿನ ಚಿಟಿಕೆಯ ಸದ್ದು ಮೊಳಗುತಿತ್ತು . ಇದ್ದಕಿದ್ದಂತೆ ಇಡೀ ಊರೂ ಐವತ್ತು ವರ್ಷ ಹಿಂದೆ ಹೋದಂತೆ ಭಾಸವಾಗುತಿತ್ತು . ಅಡಿಗೆ ಮಾಡಲು ತಂದಿದ್ದ ಕಟ್ಟಿಗೆಯಲ್ಲಿ ಕೋಲಾಟದ ಕೋಲು ಮಾಡಿಕೊಳ್ಳುವ ಆಸೆಯಿಂದ  ಕೈ ಹಾಕಿದ  ಒಂದಿಬ್ಬರು ಗಂಡಸರು ಹೆಂಡತಿಯ ಕೈಯಲ್ಲಿ ಬೈಸಿಕೊಂಡರು . ಒಂದಿಬ್ಬರು ಕಾಡಿನ ಮರ ಕಡಿದು ಸಿಕ್ಕಿಬಿದ್ದು , ಒಬ್ಬ ಫಾರೆಸ್ಟ್ ಗಾರ್ಡು ಪ್ರತಿ ದಿನ ಗಸ್ತು ತಿರುಗುವಂತಾಯಿತು .
ಕಾರ್ತೀಕನಿಗೆ ಮಾತ್ರ ಒಂದು ತಂಡ ಕಟ್ಟುವುದು ದೊಡ್ಡ ಸವಾಲಾಯಿತು . ಅದಕ್ಕೇ ಒಂದು ಉಪಾಯ ಮಾಡಿ ಊರಿನಲ್ಲಿ ಸ್ಫರ್ಧೆಯನ್ನು ಏರ್ಪಡಿಸಿದ . ಎರಡು ತಂಡ ನೋಡ ನೋಡುತ್ತಲೇ ಸೃಷ್ಟಿಯಾಯಿತು . ಮುದುಕರು ಚಳ್ಳೆ-ಪಿಳ್ಳೆಗಳು ಎಂಬ ಯಾವ ಮುಲಾಜೂ ಇಲ್ಲದೇ ಎಂಟೆಂಟು ಜನ ಎರಡೂ ತಂಡದಲ್ಲಿ ಇದ್ದರು . ಶಾಲೆಯ ಬಯಲಿನಲ್ಲಿ ರಾತ್ರಿ ಇಡೀ ಕೋಲಾಟ ಆಡುವುದು ಬೆಳಿಗ್ಗೆ ಆರು ಗಂಟೆಗೆ ಯಾವ ತಂಡ ಆಯ್ಕೆಯಾಗಿದೆ ಎಂದು ಅನೌನ್ಸ್ ಮಾಡುವುದು ಎಂದು ನಿರ್ಧರಿಸಲಾಯಿತು . ಪೋಷಕರ ಸಭೆಗೆ ಒಂದು ದಿನವೂ ಕಾಣಿಸಿಕೊಳ್ಳದ ಮುಖಗಳು ಒಮ್ಮೆಲೇ ಶಾಲೆಯ ಕಡೆ ಮುಖ ಮಾಡಿದವು . ಬಯಲನ್ನು ಗುಡಿಸಿ,  ಸಾರಿಸಿ ಎರಡು ಕವರುಗಂಬ ಹುಗಿದು ಅದಕ್ಕೆ ಅಡಿಕೆ ಗಳುಗಳನ್ನು ಕೂರಿಸಲಾಯಿತು . ಸ್ಪರ್ಧೆಯ ಕಾವು ಹೆಚ್ಚಿಸಲು ಬೆಳ್ಳಿಯ ಕಡಗವನ್ನೂ ತರಲಾಯಿತು . ಗೆದ್ದ ತಂಡಕ್ಕೆ ಬೆಳ್ಳಿಯ ಕಡಗ ಕೊಡುವುದು ಎಂದು ಘೋಷಣೆ ಮಾಡಲಾಯಿತು .
ಸ್ಪರ್ಧೆಯ ದಿನ ಊರಿನಲ್ಲಿ ಎಲ್ಲಿ ನೋಡಿದರೂ ನವಿಲುಗರಿ ಹೊತ್ತ ತಲೆಗಳು . ' ಜಲ್ ಜಲ್ ' ಎಂಬ ಗೆಜ್ಜೆಯ ಸದ್ದು . ಮೈಕಿನ ಮುಂದೆ ನಿರೂಪಕ ಕ್ಯಾಕರಿಸಿ ಧ್ವನಿ ಸರಿ ಮಾಡಿಕೊಂಡು ಮತ್ತೊಮ್ಮೆ ಸ್ಪರ್ಧೆಯ ನಿಯಮಗಳನ್ನು ಹೇಳಿದ . ಎರಡೂ ತಂಡಗಳ ನಾಯಕನಿಗೆ ತೆಂಗಿನಕಾಯಿ ಮುಟ್ಟಿಸಿ ಆಟ ಶುರುಮಾಡಲಾಯಿತು .
ಪ್ರತಿ ತಂಡಕ್ಕೂ ಹತ್ತು ನಿಮಿಷಗಳ ಸಮಯ . ಒಂದರ ನಂತರ ಒಂದು ತಂಡ ಬಂದು ತಮ್ಮ ಆಟ ಪ್ರದರ್ಶಿಸಿದರು . ಒಂದು ತಂಡ ಜಡೆ ಹಾಕಿದರೆ ಮತ್ತೊಂದು ತಂಡ ಜಡೆ ಬಿಚ್ಚಿತು . ಒಂದು ತಂಡ ಕೋಲಾಟ ಆಡುತ್ತಾ ಹೂವಿನ ಮಾಲೆ ಕಟ್ಟಿದರೆ ಮತ್ತೊಂದು ತಂಡ ಬೆಂಕಿ ಕಚ್ಚಿಕೊಂಡು ಕೋಲಾಟವಾಡಿತು . ಜಡ್ಜ್ ಮೆಂಟಿಗೆ ಕುಳಿತಿದ್ದ ಶಾಲೆಯ ಹೆಡ್ ಮೇಷ್ಟ್ರಿಗೆ ಪೀಕಲಾಟಕ್ಕೆ ಬಂತು . ರಾತ್ರಿ ಕಳೆದು ಬೆಳಗಾದರೂ ಎರಡು ತಂಡಗಳ ಅಂಕಗಳು ಸಮನಾಗೇ ಇತ್ತು . ಮತ್ತೆ ನಿರೂಪಕ ಕ್ಯಾಕರಿಸಿ ಕೆಮ್ಮಿ ಅತೀ ಗಂಭೀರ ಧ್ವನಿಯಲ್ಲಿ ಕೊನೆ ಹತ್ತು ನಿಮಿಷ ಕೊಡುವುದೆಂದೂ ಅದರಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಆಯ್ಕೆ ಮಾಡಲಾಗುವುದು ಎಂದು ಘೋಷಿಸಿದ . ಪುರದ ತಂಡ ಆಕರ್ಷಕವಾಗಿ ಕೋಲಾಟ ಆಡಿತಾದರೂ ಒಮ್ಮೆ ಕೈಯಲ್ಲಿದ್ದ ಕೋಲು ಬಿದ್ದು ಹೋಯಿತು , ಶ್ರೀನಗರದ ತಂಡ ಕೋಲು ಬೀಳಿಸಿಕೊಳ್ಳದೆ ಸಾಧಾರಣವಾಗಿ ಕೋಲಾಟ ಆಡಿತು .
ಗಂಟೆ ಗಟ್ಟಲೆ ಅಳೆದು ತೂಗಿದ ಮೇಲೆ ಪುರದ ತಂಡ ಆಯ್ಕೆಯಾಗಿದೆ ಎಂದು ಘೋಷಿಸಲಾಯಿತು . ನಿರೂಪಕ ಇನ್ನೂ ಮೈಕು ಆರಿಸುವ ಮೊದಲೇ " ಯಾರಲೇ ಅವ ಜಡ್ಜು ? " ಎಂದದ್ದು ಮೈಕಿನಿಂದಲೇ ಕೇಳಿತು . ಹೆಡ್ ಮೇಷ್ಟ್ರು ಯಾವ ರೀತಿ ಸಮರ್ಥಿಸಿ ಕೊಂಡರೂ ಜಡ್ಜ್ಮೆಂಟು ಸರಿಯಿಲ್ಲ ಎಂದು ಶ್ರೀನಗರದ ತಂಡ ಗಲಭೆ ಎಬ್ಬಿಸಿತು . ಕಾರ್ತೀಕ ಕೊನೆಯ ಅಸ್ತ್ರವೆಂಬಂತೆ ತೆಂಗಿನ ಕಾಯಿ ಮುಟ್ಟಿದ್ದು ನೆನಪಿಸಿ ಜಗಳ ಮಾಡಿದರೆ ದೈವದ ಕೋಪಕ್ಕೆ ಗುರಿಯಾಗುತ್ತೀರಿ ಎಂದು ಹೆದರಿಸಿದ . " ನಾವು ಕಾಯಿ ಮುಟ್ಟಿಲ್ಲಲೇ ನಮ ನಾಯಕ ಅಷ್ಟೇ ಮುಟ್ಟಿದ್ದು ಅವ  ಅದ್ಕೆ ಸುಮ್ನೆ ಕೂತಾನೇ " ಎಂದು ಗಲಾಟೆ ಮಾಡಿದರು . ಜಡ್ಜ್ಮೆಂಟು ಕೊಟ್ಟ ಮೇಷ್ಟ್ರು ಕಳ್ಳನಂತೆ ಸುಮ್ಮನೆ ಹಿಂದಿನಿಂದ ಹೊರಟು ಹೋದರು . ಜಗಳ ಬಿಡಿಸಲು ಹೋದ ಕಾರ್ತೀಕನಿಗೂ ಒಂದೆರಡು ಲಾತಾ ಬಿಗಿದು ಕಳುಹಿಸಿದರು . ಒಬ್ಬರಿಗೊಬ್ಬರು ಮುಖ ಮೂತಿ ನೋಡದೆ ಹೊಡೆದಾಡಿಕೊಂಡರು . ಯಾವ ತಂಡವೂ ಅಮೆರಿಕಾ ಇರಲಿ ಒಂದು ಎರಡಕ್ಕೂ ಹೋಗಲು ಸಾಧ್ಯವಾಗದಂತೆ ಕೈ ಕಾಲು ಮುರಿದು ಕೊಂಡರು .
ಮಾಡಿದ ಖರ್ಚನ್ನಾದರೂ ವಸೂಲಿ ಮಾಡಲು ಕಾರ್ತೀಕ ಶಿವಮೊಗ್ಗಕ್ಕೆ ಹೋದ . ಅಮೆರಿಕಾದ ಕನಸಿನ ಹೊಡೆತದಲ್ಲಿ ಆತ ಲೆಕ್ಕವನ್ನೂ ಸರಿಯಾಗಿ ಬರೆಯದೇ ಇದ್ದಿದ್ದರಿಂದ ಅದೂ ಆತನಿಗೆ ಸಿಗದೇ ಹೋಯಿತು . ಈಗ ಕವರು ಗಂಬದ ನಡುವೆ ತೂಗುಬಿಟ್ಟಿರುವ ಅಡಿಕೆಯ ಗಳು , ತಿಂದು ಬಿಸಾಡಿದ  ಮಸಾಲಾ ಮಂಡಕ್ಕಿ ಪೊಟ್ಟಣಗಳು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾ  ಅನಾಥವಾಗಿ ಬಿದ್ದಿವೆ .