8/12/18

ಮುಳುಗಡೆ

ಮದುವೆಯಾದ ಮೇಲೆ ಮನೆಗೆ ಹೋಗುವುದೆಂದರೆ ಅದು ಒಂದು ದೊಡ್ಡ ಹೋರಾಟ. ನನ್ನ ರಜೆಯನ್ನು ನೋಡಿಕೊಳ್ಳಬೇಕು, ಮಗನ ರಜೆಯನ್ನು ನೋಡಿಕೊಳ್ಳಬೇಕು, ಹಾಲಿನವನಿಗೆ, ಪೇಪರಿನವನಿಗೆ ಹೇಳಬೇಕು. ಬಸ್ಸೋ, ರೈಲೋ ಒಟ್ಟಿನಲ್ಲಿ ಸ್ಲೀಪರ್ ಕೋಚೇ ಆಗಬೇಕು. ಸೀಟು ಸಿಗಲಿಲ್ಲವೆಂದರೆ ಕಾರು ತೆಗೆದಕೊಂಡು ಹೋಗಬೇಕು. ಬ್ರಹ್ಮಚಾರಿ ಜೀವನದಲ್ಲಿ ಹಾಗಿರಲಿಲ್ಲ, ವೀಕೆಂಡ್ ಬಂದರೆ ಸಾಕಿತ್ತು. ಬ್ಯಾಗು ಹೆಗಲಿಗೇರಿಸಿ, ಸಿಕ್ಕ ಬಸ್ಸು ಅಥವಾ ರೈಲು ಹತ್ತಿ ಹೋಗಿಬಿಡುತ್ತಿದ್ದೆ. ಈಗ ಕಾಲ ಬದಲಾಗಿ, ಜವಾಬ್ದಾರಿಗಳು ಹೆಗಲಿಗೇರಿವೆ. ಆದ್ದರಿಂದ ಊರಿಗೆ ಹೋಗುವುದು ಕಡಿಮೆಯಾಗಿದೆ.
ನಾಗರಪಂಚಮಿ ಸೋಮವಾರ ಬಂದಿದ್ದರಿಂದ ಗೋಜಲುಗಳು ಕಡಿಮೆಯಾಗಿ ಊರಿಗೆ ಹೋಗುವ ಅವಕಾಶ ಸಿಕ್ಕಿತು. ಅಪ್ಪನಿಗೆ ಫೋನ್ ಮಾಡಿ ಬರುವುದನ್ನು ತಿಳಿಸಿದೆ. "ಬನ್ನಿ, ಎಲ್ಲರೂ ಸೇರಿ ಹಬ್ಬ ಮಾಡೋಣ" ಎಂದು ಹೇಳಿ ಸಂತೋಷದಿಂದಲೇ ಫೋನಿಟ್ಟ . ದಾರಿಯಲ್ಲಿ ಕಾರು ಕೆಟ್ಟುಹೋಗಿ ಊರು ತಲುಪುವುದು ಮಧ್ಯಾಹ್ನವಾಗಿ ಹೋಯಿತು. ಎಷ್ಟೇ ತಡವಾದರೂ ಅಪ್ಪ ಖುಷಿಯಿಂದಲೇ ಬರಮಾಡಿಕೊಂಡ.  ಖಾಲಿ ಖಾಲಿಯಾಗಿದ್ದ ಮನೆ ತುಂಬಿದ್ದರಿಂದ ಅಮ್ಮನಿಗೂ ಖುಷಿಯಾಯಿತು. ಹಲಸಿನ ಹಪ್ಪಳ, ಮಾವಿನಕಾಯಿ ತಂಬುಳಿ, ಪತ್ರೊಡೆ ಹೀಗೆ ಪ್ರಮುಖ ಐಟಮ್ಮುಗಳೇ ಮೆನುವಿನಲ್ಲಿತ್ತು. ನಮ್ಮೆಲ್ಲರಿಗೂ ಬಡಿಸಿ, ನಂತರ ಅಮ್ಮನೂ ಊಟಮಾಡಿ ಅಂಗಳದಲ್ಲಿ ಕಾಯುತ್ತಿದ್ದ ಯಲ್ಲನಿಗೂ ಬಡಿಸಿದಳು. ಯಲ್ಲನನ್ನು ಮಾತನಾಡಿಸುವ ಮನಸ್ಸಾದರೂ ಅವನಿಗೆ ಊಟ ಆಗುವವರೆಗೆ  ಕಾದೆ. ಅವನಿಗೆ ವಿಪರೀತ ನಾಚಿಕೆ.  ನಾನು ಹೋದರೆ ಊಟ ಮಾಡಲೂ ಸಂಕೋಚಪಟ್ಟುಕೊಂಡು ಅರೆಬರೆ ಊಟಮಾಡಿ ಬಿಡುತ್ತಾನೆ. ನಾನು ಚಿಕ್ಕವನಿದ್ದಾಗ ಸ್ನೇಹಿತರ ಜೊತೆ ಆಟವಾಡುವಾಗ ಇವನು ಅಲ್ಲೇನಾದರು ಬಂದಿದ್ದರೆ ನಾನೂ ಹಾಗೆಯೇ ಸಂಕೋಚದಿಂದ ಅಡಗಿ ಬಿಡುತ್ತಿದ್ದೆ .  ಎಲ್ಲರ ಮುಂದೂ ಅವನು ನನ್ನನ್ನು 'ಸಣ್ಣ ಹೆಗಡೇರೆ' ಎಂದು ಸಂಬೋಧಿಸುವುದು ನನಗೆ ವಿಪರೀತ ನಾಚಿಕೆ ಉಂಟುಮಾಡುತ್ತಿತ್ತು. ನನ್ನಪ್ಪನ ವಾರಿಗೆಯ ಅವನು ಇವತ್ತಿಗೂ ನನ್ನನ್ನು 'ಸಣ್ಣ  ಹೆಗಡೇರೆ' ಎಂದು ಸಂಬೋಧಿಸುತ್ತಾನೆ.  ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಅವನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನ ಅಪ್ಪ ಕಲ್ಲಮೆಟ್ಲು ಎಂಬ ಊರಿನಲ್ಲಿ ಜಮೀನು ಮಾಡಿಕೊಂಡು ಇದ್ದನಂತೆ. ನಂತರ ಸರ್ಕಾರ ಡ್ಯಾಮು ಕಟ್ಟಿ ಜಮೀನು ಮುಳುಗಡೆಯಾಯಿತು. ಪರಿಹಾರದ ಹಣವೂ ಸರಿಯಾಗಿ ಸಿಗದೇ ಯಲ್ಲನ ಅಪ್ಪ ಅದೇ ನೀರಿಗೆ ಹಾರಿ ಪ್ರಾಣ ಬಿಟ್ಟರಂತೆ. ಅವನ ತಾಯಿಯೂ ಅದೇ ಕೊರಗಿನಲ್ಲಿ ಕಣ್ಣು ಮುಚ್ಚಿದಳು.
ಅನಾಥನಾದ ಯಲ್ಲ ಹೊಟ್ಟೆಪಾಡಿಗೆ ಕೆಲಸ ಹುಡುಕಿಕೊಂಡು ಊರೂರು ಅಲೆಯುತ್ತಿರುವಾಗ , ನನ್ನ ಅಜ್ಜ ಅವನಿಗೆ ಕೆಲಸ ಕೊಟ್ಟಿದ್ದರಂತೆ . ಇನ್ನೂ ರಟ್ಟೆ ಬಲಿಯದ ಹುಡುಗ ಏನು ಕೆಲಸ ತಾನೇ ಮಾಡಿಯಾನು ? ಮೂರು ಹೊತ್ತು ಊಟ ಮಾಡಿಕೊಂಡು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದನಂತೆ . ಆದರೆ ಯೌವನಕ್ಕೆ ಕಾಲಿಟ್ಟಾಗ ಮೈ ಮುರಿದು ಕೆಲಸ ಮಾಡುತ್ತಿದ್ದ . ನಂತರ ಅಪ್ಪನೇ ಘಟ್ಟದ ಕೆಳಗಿನ ಹೆಣ್ಣೊಂದನ್ನು ಹುಡುಕಿ ಅವನ ಮದುವೆ ಮಾಡಿದ್ದರು . ಈಗ ಅವನಿಗೆ ಮುಪ್ಪು ಆವರಿಸಿದೆ . ಇದ್ದೊಬ್ಬ ಮಗಳನ್ನು ಘಟ್ಟದ ಕೆಳಗೆ ಮದುವೆ ಮಾಡಿಕೊಟ್ಟಿದ್ದಾನೆ . ಹೆಂಡತಿ ಕಾಲವಾಗಿದ್ದಾಳೆ . ಈಗ ಮತ್ತೆ ಅವನು ಯಾವ ಕೆಲಸವನ್ನೂ ಮಾಡಲಾರ . ನಮ್ಮ ಮನೆಗೂ ಅವನಿಗೂ ಯಾವುದೋ ಪೂರ್ವ ಜನ್ಮದ ಸಂಬಂಧವಿರಬೇಕು . ಆತನ ಜೀವನ ಎಷ್ಟೇ ಕವಲೊಡೆದು ಎಲ್ಲೇ ಹೋದರೂ ನಮ್ಮ ಮನೆಗೇ ಬಂದು ತಲುಪುತ್ತದೆ . ನನಗೆ ಇಷ್ಟೇ ಸಂಬಳ ಬೇಕು ಎಂದು ಅವನೆಂದೂ ಕೇಳಿಲ್ಲ . ನಮ್ಮ ಮನೆಯಲ್ಲೇ ಊಟ ಮಾಡುತ್ತಾ , ಕೊಟ್ಟಷ್ಟು ಸಂಬಳ ಪಡೆದು ನಮ್ಮ ಮನೆಯ ಸದಸ್ಯನೇ ಆಗಿದ್ದಾನೆ .
ನನಗೂ ಯಲ್ಲನಿಗೂ ಬಹಳ ದೋಸ್ತಿ . ನಾನು ಬಾಲ್ಯಾವಸ್ಥೆಯಲ್ಲಿದ್ದಾಗ ಅವನು ಮಧ್ಯ ವಯಸ್ಕ . ನಮ್ಮೂರಿನ ಕಾಡು ,ಬೆಟ್ಟ ,ಗುಡ್ಡ,ಝರಿ-ತೊರೆಗಳು ಅವನಿಗೆ ಚಿರಪರಿಚಿತ . ನನ್ನನ್ನು ಕಟ್ಟಿಕೊಂಡು ಕಾಡು ಅಲೆಯುತ್ತಿದ್ದ .ನಾನು ಸುಸ್ತು ಎಂದಾಗ ,ಉಂಬಳ ನೋಡಿ ಹೆದರಿದಾಗ ನನ್ನನ್ನು ಅನಾಮತ್ತು ಹೆಗಲ ಮೇಲೆ ಎತ್ತಿಕೊಂಡು ಹೋಗಿಬಿಡುತ್ತಿದ್ದ . ನೆಲ್ಲಿಕಾಯಿ ಕೊಯ್ಯುವುದು ,ಹೊಳೆ ದಾಸವಾಳದ ಹಣ್ಣು ಹೆಕ್ಕುವುದು ,ಈಜುವುದು ಇದನ್ನೆಲ್ಲಾ ಅವನಿಂದಲೇ ನಾನು ಕಲಿತದ್ದು . ಶರಾವತಿಯ ಹಿನ್ನೀರಿನ ಆಳದ ಗುಂಡಿಗಳಲ್ಲಿ ಅವನು ಈಜು ಕಲಿಸುವಾಗ "ಇಲ್ಲೇ ಹೆಗಡೇರೆ ನನ್ನಪ್ಪ ಮುಳುಗಿದ್ದು " ಎಂದು ಹೇಳುತ್ತಿದ್ದದ್ದು ನನಗೆ ಸ್ಪಷ್ಟವಾಗಿ ನೆನಪಿದೆ . ಅದರ ಹಿಂದಿನ ದುಃಖವನ್ನು ಅರ್ಥ ಮಾಡಿಕೊಳ್ಳುವಷ್ಟು ನಾನು ಬೆಳದಿಲ್ಲದಿದ್ದರಿಂದ "ಹಾಗಿದ್ರೆ ಹುಡ್ಕು ಸಿಕ್ಕಿದ್ರೂ ಸಿಗ್ಬೋದು " ಎನ್ನುತ್ತಿದ್ದೆ .ಆದರೆ ಅವನು ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ " ಶರಾವತಿ ಯಾರ್ನೂ ಬಿಡ್ಲ , ನಮ್ನ ಮುಳುಗುಸ್ಬುಟ್ಲು" ಎನ್ನುತ್ತಿದ್ದ . ಈಗ ಅವನ ಮಾತುಗಳನ್ನು ನೆನಿಸಿಕೊಂಡರೆ ಅದರ ಹಿಂದಿನ ದುಃಖ , ಆಧ್ಯಾತ್ಮಿಕತೆ ಎಲ್ಲವೂ ಅರ್ಥವಾಗುತ್ತದೆ . ನಮ್ಮೆಲ್ಲರ ಒಳಿತಿಗಾಗಿ ತಮ್ಮ ಜೀವನವನ್ನೇ ಮುಳುಗಿಸಿಕೊಂಡ ಸಾವಿರಾರು 'ಯಲ್ಲ'ರ ಧ್ವನಿ ನನ್ನ ಆಂತರ್ಯವನ್ನು ತಟ್ಟುತ್ತದೆ . ಜೀವನದ ಹಲವು ವರ್ಷಗಳನ್ನು ಒಂಟಿಯಾಗಿ ಕಳೆದ ಯಲ್ಲ ಒಬ್ಬ ಸಂತನಾಗಿ  ನನಗೆ ಕಾಣುತ್ತಾನೆ .
"ಏನೋ ಯಲ್ಲ ಕೂದಲೆಲ್ಲಾ ಹಣ್ಣಾಯ್ತಲ್ಲೋ ಅಂತೂ ಮುದುಕ ಆದೆ " ಎಂದು ನಾನು ಕಿಚಾಯಿಸಿದೆ . "ಹಂಗೇನಿಲ್ರ ಬೇಕಾರೆ ಇವತ್ತೂ ಪಂಡರಿಕೊಪ್ಪ ಗುಡ್ಡದ ನೆತ್ತಿ ಹತ್ನಿ" ಎಂದು ತನ್ನ ಶಕ್ತಿ ಪ್ರದರ್ಶನದ ಸವಾಲೆಸೆದ . ನನಗೂ ಅದೇ ಬೇಕಾಗಿತ್ತು . ಟ್ರಾಫಿಕ್ಕಿನ 'ಪೀಮ್-ಪಾಮ್' ,ಝಗಮಗಿಸುವ ಲೈಟುಗಳಿಂದ ದೂರ ಹೋಗಬೇಕಿತ್ತು . ಕುರುಕಲು ತಿಂಡಿ ತಿನ್ನುತ್ತಾ , ಆಟವೆಂದರೆ ಕೇವಲ ಕಂಪ್ಯೂಟರಿನೊಳಗೆ ಎಂದು ತಿಳಿದು ಬೆಳೆಯುತ್ತಿರುವ ನನ್ನ ಮಗ ಸುಮಂತನಿಗೆ ಒಂದಷ್ಟು ಕಾಡು ಸುತ್ತಿಸಬೇಕಿತ್ತು . ಅವನ ಹದಿನಾರನೇ ವರ್ಷಕ್ಕೆ ಬಂದ ಬೊಜ್ಜು ಸ್ವಲ್ಪ ಕರಗಬೇಕಿತ್ತು.
ಮೂವರೂ ನಮ್ಮ ನಾಗರೀಕತೆಯನ್ನು ಹಿಂದೆ ಬಿಟ್ಟು ಗುಡ್ಡ ಹತ್ತತೊಡಗಿದೆವು . ಕಾಲು ದಾರಿಯೆಲ್ಲವೂ ಗಿಡಗಳಿಂದ ಕಮಿದು ಹೋಗಿತ್ತು . ಹಿಂದೆಲ್ಲಾ ದನ ಕಾಯುವವರು , ಕೆಲ ಊರಿನ ಜನ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರಿಂದ ದಾರಿ ಚೊಕ್ಕಟವಾಗಿತ್ತು . ಯಲ್ಲ ಕತ್ತಿ ಹಿಡಿದು ದಾರಿ ಸ್ವಚ್ಛ ಮಾಡುತ್ತಾ ಮುಂದೆ ಸಾಗುತ್ತಿದ್ದರೆ , ನಾವು ಅವನನ್ನೇ ಹಿಂಬಾಲಿಸುತ್ತಾ ಹೋಗುತ್ತಿದ್ದೆವು . ಯಾವ್ಯಾವುದೋ ಬೇರುಗಳನ್ನು ,ಬಳ್ಳಿಗಳನ್ನು "ಇದು ಔಷಧಿಗೆ ಬತೈತಿ " ಎಂದು ಯಲ್ಲ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ . ವಯಸ್ಸಿನಲ್ಲಿ ಹಿರಿಯವನಾದ ಅವನು ಚಿಗರೆ ಮರಿಯಂತೆ ಮುಂದೆ ಸಾಗುತ್ತಿದ್ದರೆ ,ಕಿರಿಯವನಾದ ಸುಮಂತ ಮಾರು-ಮಾರಿಗೆ "ಡ್ಯಾಡಿ ಸುಸ್ತು" ಎಂದು ಕುಳಿತು ಬಿಡುತ್ತಿದ್ದ . ಒಮ್ಮೆ ಕಾಲ ಬಳಿಯಿದ್ದ ಪೊದೆಯಿಂದ ಮೊಲವೊಂದು ಮಿಂಚಿನಂತೆ ಓಡಿ ಕಾಡಿನ ಅಗಾಧ ಮೌನವನ್ನು ಸೀಳಿಕೊಂಡು ಅಂತರ್ಧಾನವಾಯಿತು . "ಒಹ್ , ಸೀ  ರ್ಯಾಬಿಟ್" ಎಂದು ಉದ್ಗರಿಸಿದ ನನ್ನ ಮಗನ ಮೂರ್ಖತನಕ್ಕೆ ನಾನು ನಕ್ಕೆ . ಮೊಲ , ಕಾಡು ಕೋಳಿಗಳನ್ನು ಹಿಡಿಯುವ ಉರುಳನ್ನು ಯಲ್ಲ ನಮಗೆ ತೋರಿಸಿ ಅವನದೇ ಭಾಷೆಯಲ್ಲಿ ಅದರ ಬಗ್ಗೆ ವಿವರಿಸಿದ .
ಮೂವರೂ ಘಟ್ಟದ ಚೌಕಕ್ಕೆ ಬಂದೆವು .ನನ್ನ ಇಷ್ಟದ ಜಾಗದಲ್ಲಿ ಘಟ್ಟದ ಚೌಕವೂ ಒಂದು . ಅದು ನಮ್ಮೂರಿನ ಎತ್ತರದ ಗುಡ್ಡದ ತುತ್ತ ತುದಿ . ಅದನ್ನು ಹತ್ತಿ ಆಚೆ ನೋಡಿದರೆ ಶರಾವತಿಯ ಹಿನ್ನೀರಿನ ನೀಲಿ ಬಣ್ಣ ಕಣ್ಣಿಗೆ ರಾಚುತ್ತದೆ . ಅಲ್ಲಿ ಸಿಗುವ ಅಲೌಖಿಕ ಸುಖವನ್ನು ನಾನು ಬಹವಳೇ ಅನುಭವಿಸಿದ್ದೇನೆ . ಕೆಲವೊಮ್ಮೆ ಬಯಲು ಸೀಮೆಯ ಬಾಳು ಬೇಸರವೆನಿಸಿದಾಗ ಮನದಲ್ಲಿಯೇ ಘಟ್ಟದ ಚೌಕ ನೆನೆಸಿಕೊಂಡು ಖುಷಿಪಟ್ಟಿದ್ದೇನೆ . ಚೌಕದ ಒಂದು ಮೂಲೆಯಲ್ಲಿ ಕಲ್ಲು ಮಂಟಪವಿದೆ . ಯಾರು ಕಟ್ಟಿಸಿದ್ದು ? ಎಷ್ಟು ವರ್ಷದ ಹಿಂದೆ ? ಮುಂತಾದ ಪ್ರಶೆಗಳಿಗೆ ಯಾರಲ್ಲೂ ಉತ್ತರವಿಲ್ಲ . ನಮ್ಮೆಲ್ಲರ ಹುಟ್ಟಿನ ಬಗ್ಗೆ ,ಇರುವಿಕೆಯ ಬಗ್ಗೆ ಹೇಗೆ ಉತ್ತರಗಳು ಸಿಗುವುದಿಲ್ಲವೋ ಹಾಗೆಯೇ ಅದರ ಹುಟ್ಟಿನ ಬಗ್ಗೆ ಉತ್ತರಗಳಿಲ್ಲ . ಯಲ್ಲನೂ ಸೇರಿದಂತೆ ಹಲವರು ಅದರ ಮೇಲೆ ಕಥೆ ಹೇಳುತ್ತಾರೆ .ಸೀತೆಯನ್ನು ಕಳೆದುಕೊಂಡ ರಾಮ ಇದೇ ಕಲ್ಲು ಮಂಟಪದ ಮೇಲೆ ಕುಳಿತು ತನ್ನ ಪತ್ನಿಗಾಗಿ ಪರಿತಪಿಸುತ್ತಾ ಕಣ್ಣೀರು ಸುರಿಸುತ್ತಿದ್ದನಂತೆ .ಇಂದಿಗೂ ಮಂಟಪದ ಪಕ್ಕವೇ ಒಂದು ಹೆಸರಿಲ್ಲದ ತೊರೆ ಹುಟ್ಟಿ ಶರಾವತಿಯನ್ನು ಸೇರುತ್ತದೆನ್ನುವುದು ನಿಜವಾದರೂ ,ಆ ಕಥೆಯ ಸತ್ಯಾಸತ್ಯತೆಯ ಬಗ್ಗೆ ನನಗೆ ತಿಳಿದಿಲ್ಲ . ನನ್ನ ಹಿರಿಯರಿಂದ ಬಂದ ಕಥೆಯನ್ನು ನಾನು ಯಥಾವತ್ತು ಕಿರಿಯರಿಗೆ ದಾಟಿಸುತ್ತಿದ್ದೇನೆ ಅಷ್ಟೇ .
ಮೊದಲಿದ್ದ ಚೈತನ್ಯ ಯಲ್ಲನಲ್ಲಿ ಕಾಣಲಿಲ್ಲ . ಸುಮಂತ ಮಾತ್ರ ಬಹಳ ಖುಷಿಯಲ್ಲಿದ್ದ.ಗುಡ್ಡದಲ್ಲಿ  ಮಳೆಯ ನೀರು ಸೃಷ್ಟಿಸಿದ ಅಸಂಖ್ಯ ಜಲಪಾತಗಳಲ್ಲಿ ಕಾಲಿಟ್ಟುಕೊಂಡು ಕುಣಿದಾಡುತ್ತಿದ್ದ .
"ಅಲ್ನೋಡು ಡ್ಯಾಮು ಎಷ್ಟು ಚೆನ್ನಾಗಿದೆ " ಎಂದು ಆಶ್ಚರ್ಯ ಸೂಚಿಸುತ್ತಿದ್ದ . "ನಮ್ಮ ಪಶ್ಚಿಮ ಘಟ್ಟ ಹಿಮಾಲಯಕ್ಕಿಂತಲೂ ಹಳೆಯದು . ಮನುಷ್ಯ ಮೊದಲು ಕಾಲಿಟ್ಟಿದ್ದು ಪಶ್ಚಿಮ ಘಟ್ಟದಲ್ಲೇ. ಇಲ್ಲಿ ಲಕ್ಷಾಂತರ ಜೀವ ಪ್ರಭೇದಗಳಿವೆ . ಇಂಥಾ ಕಾಡನ್ನ , ಇಲ್ಲಿನ ಜನರ ಬದುಕನ್ನು ಡ್ಯಾಮು ಮುಳ್ಗ್ಸಿದೆ " ಎಂದೆ . ಅದೊಂದೂ ಅವನಿಗೆ ಅರ್ಥವಾಗದೆ ಹೌದೆಂಬಂತೆ ತಲೆಯಾಡಿಸಿದೆ .
ಸುಮಂತನಿಗೂ ,ಯಲ್ಲನಿಗೂ ಅಜಗಜಾಂತರ ವ್ಯತ್ಯಾಸವಿತ್ತು . ಯಲ್ಲ ನನ್ನ ಜೊತೆ ಇದ್ದಷ್ಟು ಸಲುಗೆಯಿಂದ ,ಸುಮಂತನ ಜೊತೆ ಇರಲಿಲ್ಲ . ಸುಮಂತನ ಕನ್ನಡ ಮಿಶ್ರಿತ ಇಂಗ್ಲಿಷಿಗೂ , ಯಲ್ಲನ ಗ್ರಾಮ್ಯ ಕನ್ನಡಕ್ಕೂ ತಾಳಮೇಳವೇ ಇರಲಿಲ್ಲ . ನಾನೂ ಊರು ಬಿಟ್ಟು ,ನನ್ನ ಮಗವನ್ನು ಅವನದೇ ಊರಿನಲ್ಲಿ ಪರಕೀಯನಾಗುವಂತೆ ನಾನು ಮಾಡಿದ್ದೆ . ಸುಮಂತ ನಗರದ ಪ್ರತಿನಿಧಿಯಾದರೆ ,ಯಲ್ಲ ಗ್ರಾಮದ ಪ್ರತಿನಿಧಿಯಾಗಿದ್ದ . ನಾನು ಗ್ರಾಮದಲ್ಲೂ ಇರದೇ , ನಗರದಲ್ಲೂ ತೊಳಲಾಟ ಅನುಭವಿಸುತ್ತಾ ಅತಂತ್ರವಾಗಿದ್ದೆ . ನಾವು ಭಾರತದ ನಿನ್ನೆ , ಇಂದು ಮತ್ತು ನಾಳೆಗಳ ಪ್ರತಿನಿಧಿಯಾಗಿದ್ದೆವು . ಸೂರ್ಯ ನಿಧಾನವಾಗಿ ಕೆಳಗಿಳಿಯುತ್ತಿದ್ದ . ದಿಗಂತದವರೆಗೂ ಶರಾವತಿಯೇ ಕಾಣುತ್ತಿದ್ದಳು . ಕೆಂಪಗಿನ ಸೂರ್ಯನನ್ನೂ ಶರಾವತಿ ಮುಳುಗಿಸುತ್ತಿರುವಂತೆ ನನಗೆ ಅನಿಸತೊಡಗಿತು . "ಆಮೇಲೆ ಕಾಡೆಮ್ಮೆ ,ಹಂದಿ ಬತೈತೆ ಹೊಂಟೋಗನ ಬನ್ನಿ " ಎಂದು ಯಲ್ಲ ಗಡಿಬಿಡಿ ಮಾಡಿದ .
ನಾಗರ ಪಂಚಮಿ ಮುಗಿದೇ ಹೋಯಿತು . ನಾನು ,ಅಪ್ಪ ,ನನ್ನ ಮಗ ಮೂವರೂ ಮಡಿಯುಟ್ಟುಕೊಂಡು ನಮ್ಮ ತೋಟದ ಸುತ್ತಲೂ ಇರುವ ಹಲವು ನಾಗರ ಕಲ್ಲುಗಳಿಗೆ ಹಾಲೆರೆದು ,ಪಾಯಸ ನೈವೇದ್ಯ ಮಾಡಿ ಬಂದೆವು .ರಾತ್ರಿ ಮದರಂಗಿ ಹಚ್ಚಿಕೊಂಡು ಅದು ಕೆಂಪಗಾಗುವ ಮೊದಲೇ ನಾವು ಹೊರಟು ನಿಂತೆವು . ಯಾವಾಗಲೋ ಸಂರಕ್ಷಿಸಿ , ಬೆಳೆಸಿದ ಸಣ್ಣ ಹುಳಿ ಮುರುಗಲಿನ ಗಿಡವನ್ನು ಯಲ್ಲ ಕಾರಿನೊಳಗೆ ತುಂಬಿದ .
"ಅದ್ನ ನೆಡೋಕೆ ಅಲ್ಲಿ ಜಾಗ ಎಲ್ಲಿದ್ಯೋ ?" ಎಂದು ಚಿಂತೆಯಿಂದಲೇ ಢಿಕ್ಕಿ ಮುಚ್ಚಿದೆ . ತುಂಬಿದ ಮನೆ ಮತ್ತೆ ಖಾಲಿಯಾಯಿತು . ಎಲ್ಲರಿಗೂ ವಿದಾಯ ಹೇಳಿ ನಾವು ಹೊರಟೆವು . ಯಲ್ಲನನ್ನು ನಾನು ನೋಡಿದ್ದು ಅದೇ ಕೊನೆ ಬಾರಿ ನಂತರದ ದಿನಗಳಲ್ಲಿ ಅವನಿಗೆ ಹುಷಾರು ತಪ್ಪಿ ,ಘಟ್ಟದ ಕೆಳಗಿನ ಅವನ ಮಗಳ ಮನೆಗೆ ಹೋದ . ಅದಾಗಿ ಕೆಲ ತಿಂಗಳುಗಳ ನಂತರ ಅವನು ಸತ್ತ ಸುದ್ದಿ ಬಂತು . ನಮ್ಮ ಒಂದು ಋಣ ತೀರಿತ್ತು , ಭೂತಕಾಲದ ಒಂದು ಕೊಂಡಿ ಕಳಚಿತ್ತು . ಒಂದು ಕ್ಷಣ ನಾನು ಮೌನವಾದೆ . ಅವನು ಕೊಟ್ಟ ಹುಲಿ ಮುರುಗಲಿನ ಗಿಡ ಆಗಷ್ಟೇ ಹಣ್ಣು ಬಿಡತೊಡಗಿತ್ತು .














2 ಕಾಮೆಂಟ್‌ಗಳು: