26/11/18

ಗಾಲಿ

 ಚಳಿಗಾಲದಲ್ಲಿ ಬೆಳ್ಳಂ-ಬೆಳ್ಳಿಗೆ ಗಾಂಧೀ ಬಜಾರಿನ ಕಡೆ ಹೋಗುವುದು ಮಜಬೂತು ಅನುಭವ . ಇಬ್ಬನಿಯ ಮಧ್ಯದಲ್ಲಿ ಮಫ್ಲರ್ , ಸ್ವಟ್ಟರ್ ಧರಿಸಿ ವ್ಯಾಪಾರ ಶುರು ಮಾಡುವ ಗೂಡಂಗಡಿಯವರು . ಚಳಿಯನ್ನೂ ಲೆಕ್ಕಿಸದೆ ಬಜಾರಿನ ತುಂಬೆಲ್ಲ ಓಡಾಡಿ ಸುವಾಸನೆ ಹರಡುವ ಹೂ ಮಾರುವವರು . ಇದನ್ನು  ತನ್ನ ಜೀವಮಾನವೆಲ್ಲಾ ರಾಚಯ್ಯ ನೋಡಿದ್ದಾನೆ . ಐದು ಗಂಟೆಗೇ ಕೆ ಆರ್ ಮಾರ್ಕೆಟ್ನ ಡಿಪೋ ತಲುಪಿ , ತನ್ನ ಬಸ್ಸನ್ನು ತೊಳೆದು ,ಎಂಜಿನ್ ಹೀಟ್ ಆಗಲೆಂದು ಎರಡು ಬಾರಿ ಗುರುಗುಟ್ಟಿಸಿ ಗಾಂಧೀ ಬಜಾರಿನ ಕಡೆಗೆ ಹೊರಡುತ್ತಾನೆ . ಅಲ್ಲೇ ವಿದ್ಯಾರ್ಥಿ ಭವನದ ಎದುರಿನ ಹೂವಿನ ಅಂಗಡಿಯಲ್ಲಿ ಎರಡು ಮೊಳ ಹೂವು ಖರೀದಿಸಿ ಬಸ್ಸಿನ ಡ್ಯಾಶ್ ಬೋರ್ಡಿನ ಮೇಲಿನ ಧರ್ಮಸ್ಥಳದ ಮಂಜುನಾಥನಿಗೂ , ಗ್ಲಾಸ್ ಮೇಲಿನ ಸಿಗಂದೂರು ಚೌಡೇಶ್ವರಿಗೂ ಸಮನಾಗಿ ಒಂದೊಂದು ಮೊಳ ಮುಡಿಸುತ್ತಾನೆ . ನಂತರ ವಾಡಿಯಾ ರಸ್ತೆಯಲ್ಲಿ ಎರಡು ಬಾಳೆಹಣ್ಣು ತೆಗೆದುಕೊಂಡು ಇಬ್ಬರಿಗೂ ನೈವೇದ್ಯ ಮಾಡಿ ತಾನೊಂದು ತಿಂದು ಕಂಡಕ್ಟರ್ ಗೆ  ಇನ್ನೊಂದು ಕೊಡುತ್ತಾನೆ . ಸುಮಾರು ಮೂವತ್ತು ವರ್ಷ ಇದು ಹೀಗೆ ನಡೆದಿದೆ . ರಾಚಯ್ಯನಿಗೂ ತನ್ನ ಜೀವನ ಬಸ್ಸಿನ ಗಾಲಿಯಂತೆ ಸುಲಲಿತವಾಗಿ ಸಾಗುತ್ತಿದೆ ಅನಿಸುತ್ತದೆ .
ನಲವತ್ತು ವರ್ಷಗಳ ಕೆಳಗೆ ಡಿಪ್ಲೋಮ ಸೇರಿ ಎರಡೇ ತಿಂಗಳಿಗೆ ಅವನಿಗೆ ಡ್ರೈವರ್ ಕೆಲಸ ಸಿಕ್ಕಿತ್ತು . "ಓದೋದೇ ಕೆಲಸ ಸಿಗ್ಲಿ ಅಂತ , ನಿಂಗೆ ಕೆಲಸ ಸಿಕ್ಕಿದ್ರು ಸುಮ್ನೆ ಯಾಕೆ ಓದ್ತಿಯ ?" ಎಂಬ ಊರಿನವರ ದೇಶಾವರಿ ಸಲಹೆಗೆ ಒಪ್ಪಿ ರಾಚಯ್ಯ ಕೆಲಸಕ್ಕೆ ಸೇರಿದ್ದ . ಮೊದಲಿಗೆ ಬೆಂಗಳೂರು ಹಾಗೂ ಚಿಕ್ಕಮಗಳೂರು ರೂಟಿಗೆ ಆತನನ್ನು ಡ್ರೈವರ್ ಆಗಿ ನೇಮಿಸಿದ್ದರು . ಹಗಲು ನಿದ್ದೆ , ರಾತ್ರಿ ಡ್ರೈವಿಂಗ್ . ಚಿಕ್ಕಮಗಳೂರಿನ ಘಾಟ್ ಸೆಕ್ಷನ್ ಗಳಲ್ಲಿ ಮಳೆಗಾಲದ ರಾತ್ರಿಯಲ್ಲಿ ಬಸ್ ಚಾಲನೆ ಮಾಡುವುದು ಸುಲಭದ್ದಾಗಿರಲಿಲ್ಲ . ಹಲವು ಸಲ ಕಾಡೆಮ್ಮೆ , ಆನೆ ಅಷ್ಟೇ ಏಕೆ ಕೆಲವೊಮ್ಮೆ ಹುಲಿ , ಚಿರತೆ ಕಂಡಿದ್ದೂ ಇದೆ . ಕಡಿದಾದ ತಿರುವುಗಳು , ಜಾರುವ ಕಾಂಕ್ರೀಟ್ ರಸ್ತೆ . ಮೂರ್ನಾಲ್ಕು ವರ್ಷವೇ ಆ ರೂಟಿಗೆ ಹೋಗಿದ್ದನೇನೋ . ನಂತರ ಬಿಟಿಎಸ್ ಗೆ ವರ್ಗವಾಗಿ ಮಾರ್ಕೆಟ್ಟಿನ ಡಿಪೋ ಸೇರಿದ್ದ . ನಂತರದ ವರ್ಷಗಳಲ್ಲಿ ಬೇರೆ ಬೇರೆ ರೂಟು ಸಿಕ್ಕಿದೆ . ಆದರೂ ರಾಚಯ್ಯ ಓಡಿಸಿದ್ದು ಆತನಿಗೆ ಮೊದಲು ಸಿಕ್ಕಿದ್ದ ಬಸ್ಸು ಮಾತ್ರ . ನಲವತ್ತು ವರ್ಷಗಳ ಕಾಲ ಒಂದೇ ಬಸ್ಸು ಓಡಿಸಿದ್ದರಿಂದ ಆತನಿಗೂ ಬಸ್ಸಿಗೂ ಒಂದು ವಿಶೇಷ ಸಂಬಂಧ ಏರ್ಪಟ್ಟಿತ್ತು . ಬೆಂಗಳೂರು ಸೇರಿದ ಮೇಲಂತೂ ಬಸ್ಸು ತಾನಾಗೇ ಚಲಿಸುತ್ತಿದೆ ಎಂದು ಅವನಿಗೆ ಅನಿಸುತಿತ್ತು . ಆತನ ವೃತ್ತಿ ಜೀವನದಲ್ಲಿ ಒಂದೂ ಅಪಘಾತ , ಯದ್ವಾ ತದ್ವ ಓಡಿಸುವುದು ಇಲ್ಲ . ಇದಕ್ಕೆಲ್ಲಾ ಆ ಬಸ್ಸೇ ಕಾರಣ ಎಂದು ಆತ ನಂಬಿದ್ದಾನೆ . ಒಂದು ತಿಂಗಳಿಗೇ ಆಯಿಲ್ ಚೇಂಜ್ ಮಾಡಿರೆಂದು ಡಿಪೋಗೆ ಬಿಟ್ಟಾಗ ಅವರು ಬೈದು ಕಳಿಸಿದ್ದಿದೆ . ಆಗ ರಾಚಯ್ಯ ತನ್ನ ಸ್ವಂತ ದುಡ್ಡು ಖರ್ಚು ಮಾಡಿ ರಿಪೇರಿ ಮಾಡಿಸಿದ್ದಾನೆ .
ಈಗ ಇದ್ದಕಿದ್ದಂತೆ ನಿವೃತ್ತಿ ಎಂಬ ಪೆಡಂಭೂತ ಅವನ ಎದುರಿಗೆ ನಿತ್ತಿತ್ತು . ಆತನಿಗೆ ಈಗ ದುಡ್ಡಿನ ಚಿಂತೆ ಇಲ್ಲದಿದ್ದರೂ ತನ್ನ ಬಸ್ಸನ್ನು ಬೇರೆಯವರು ಯದ್ವಾ-ತದ್ವಾ ಓಡಿಸಿಬಿಟ್ಟರೆ ಎಂಬ ಭಯ ಕಾಡುತಿತ್ತು . ಕೊನೆಯ ದಿನವಾದ್ದರಿಂದ ಎರಡು ರೂಪಾಯಿ ಹೆಚ್ಛೇ ಖರ್ಚು ಮಾಡಿ ಅದಕ್ಕೆ ಮೂರು ರೂಪಾಯಿ ಭಕ್ಷೀಸು ಕೊಟ್ಟು ಹೂವು ಖರೀದಿಸಿದ . ತನ್ನ ಬಸ್ಸಿನ ಖಾಯಂ ಪ್ರಯಾಣಿಕರಿಗೆ ಎಂದು ಹೆಚ್ಚು ಬಾಳೆಹಣ್ಣು ಖರೀದಿಸಿದ .
ಮಾರ್ಕೆಟ್ಟಿನಿಂದ ಕುವೆಂಪು ನಗರದ ತನಕವೂ ಪ್ರತಿಯೊಂದು ಸ್ಟಾಪಿನಲ್ಲೂ ಅವನಿಗೆ ಪರಿಚಯದವರಿದ್ದಾರೆ . ಹಾಗೆ ಹತ್ತಿದ ಎಲ್ಲರಿಗೂ ಒಂದೊಂದು ಹಣ್ಣು ಕೊಟ್ಟು ಹಣ್ಣು ಖಾಲಿಯಾಯಿತು . ಬೆಳಿಗ್ಗೆಯೆಲ್ಲಾ ಖುಷಿಯಿಂದ ಇದ್ದ ಅವನು ಸಂಜೆ ಹೊತ್ತಿಗೆ ಮಂಕಾಗಿದ್ದ . ಬಸ್ಸನ್ನು ಡಿಪೋಗೆ ಬಿಟ್ಟು ಬರುವಾಗಲಂತೂ ಕಣ್ಣೀರು ಇನ್ನೇನು ಬಿದ್ದೇ ಹೋಯಿತು ಎಂಬಷ್ಟು ಕಣ್ಣು ತೇವವಾಗಿತ್ತು . ಯಾರಿಗೂ ಅದನ್ನು ತೋರಗೊಡದೆ ಬಸ್ಸು ಹತ್ತಿ ಮನೆಗೆ ಬಂದು ಬಿಟ್ಟ . ಸಿಬ್ಬಂದಿಗಳಿಗೆ ಯಾವಾಗಲೂ ಟಿಕೆಟ್ ಕೊಳ್ಳುವ ಅಗತ್ಯವಿರಲಿಲ್ಲ , ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು . ಆ ರೀತಿ ಉಚಿತವಾಗಿ ಪ್ರಯಾಣಿಸಿವುದು ಇದೇ ಕೊನೆ ಎಂದು ಯೋಚಿಸಿ ಮತ್ತೆ ದುಃಖ ಉಮ್ಮಳಿಸಿ ಬಂತು . ಮನೆಗೆ ಬಂದು ಊಟ ಮಾಡದೆ ಹಾಗೆಯೇ ಹಾಸಿಗೆಯ ಮೇಲೆ ಅಡ್ಡಾದ . ಮರುದಿನ ಯಥಾ ಪ್ರಕಾರ ನಾಲ್ಕು ಗಂಟೆಗೆ ಎಚ್ಚರವಾಯಿತು . ಮತ್ತೆ ಎಷ್ಟೇ ಪ್ರಯತ್ನಪಟ್ಟರೂ ನಿದ್ದೆ ಬರಲೇ ಇಲ್ಲ . ಕೊನೆಗೆ ಬೇರೆ ದಾರಿಯೇ ಕಾಣದೆ ತನ್ನ ಬಸ್ಸನ್ನು ನೋಡಿ ಬರಲು ಡಿಪೋ ಕಡೆ ಹೊರಟ . ಮಾರ್ಕೆಟ್ಟಿನ ಬಸ್ಸು ಹತ್ತುತ್ತಿದ್ದಂತೆ ನಿರ್ವಾಹಕ ಬಂದು "ಎಲ್ಲಿಗ್ರಿ ? ಟಿಕೆಟ್ ತಗೋಳಿ " ಎಂದಿದ್ದದನ್ನು ಅರಗಿಸಿಕೊಳ್ಳುತ್ತಾ ದುಡ್ಡು ತೆಗೆದುಕೊಟ್ಟ . ಡಿಪೋದ ಮೂಲೆಯಲ್ಲಿ ಅನಾಥವಾಗಿ ಇವನ ಬಸ್ಸು ನಿತ್ತಿತ್ತು . ಜಾತ್ರೆಯಲ್ಲಿ ಅಪ್ಪನನ್ನು ಕಳೆದಕೊಂಡ ಮಗುವಿನಂತೆ ಅವನ ಬಸ್ಸು ನಿಂತಿರುವುದು ಅವನಿಗೆ ದಯನೀಯವಾಗಿ ಕಂಡಿತು . ಅಷ್ಟರಲ್ಲಿಯೇ ತಡವಾಗಿ ಹೋಯಿತೆಂದು  ಗಡಿಬಿಡಿಯಲ್ಲೇ  ಬಂದ ಶೇಖರ ಬಸ್ಸನ್ನು ಹತ್ತಿ ಸ್ಟಾರ್ಟ್ ಮಾಡಿದ .
"ಎರಡು ನಿಮಿಷ ತಾಳು ಎಂಜಿನ್ ಹೀಟ್ ಆಗ್ಲಿ " ಎಂದು ರಾಚಯ್ಯ ಕೊಟ್ಟ ಸಲಹೆಯನ್ನು ತಿರಸ್ಕೃತ ಭಾವನೆಯಿಂದಲೇ  ಶೇಖರ ಸ್ವೀಕರಿಸಿದ . ಮುಂದೇನು ಮಾಡಬೇಕೆಂದು ತಿಳಿಯದೆ ರಾಚಯ್ಯ ಬಸ್ಸು ಹತ್ತಿಬಿಟ್ಟ . ನೂರು ರೂಪಾಯಿಯ ದಿನದ ಪಾಸು ಖರೀದಿಸಿ ಮುಂದಿನ ಸೀಟಿನಲ್ಲಿಯೇ ಕುಳಿತ . ವರುಷಗಟ್ಟಲೇ ಪರಿಚಯವಿದ್ದ ಬೆಂಗಳೂರಿನ ರೋಡುಗಳು ಅಂದು ಅವನಿಗೆ ಅಪರಿಚಿತವೆನಿಸಿತು . ಡ್ಯಾಷ್ ಬೋರ್ಡಿನ ಮೇಲಿನ ಮಂಜುನಾಥ , ಸಿಗಂದೂರು ಚೌಡೇಶ್ವರಿಯನ್ನು  ಶೇಖರ ಉಪವಾಸ ಕೆಡವಿದ್ದು ನೋಡಿ ಸಿಟ್ಟು ನೆತ್ತಿಗೇರಿತು . ಶೇಖರ ಯಾವ ಮುಲಾಜೂ ಇಲ್ಲದೆ ಧಡ-ಧಡನೆ ಗೇರು ಬದಲಿಸುವ ರೀತಿ , ಒಂದೇ ಏಟಿಗೆ ಬ್ರೇಕು ಹಾಕುವುದನ್ನು ನೋಡಿ ಅವನಿಗೆ ತನ್ನ ಮಗುವಿಗೆ ಬೇರೆಯವರು ಹೊಡೆದಂತ ಭಾವನೆ ಬರತೊಡಗಿತು . ಒಂದು ಕ್ಷಣವೂ ಬಸ್ಸಿನಲ್ಲಿ ಕೂರಲಾಗದೆ ಶೇಖರ ಬಸ್ಸನ್ನು ನಿಲ್ಲಿಸಲು ನಿಧಾನ ಮಾಡುತ್ತಿದ್ದಾಗಲೇ ರಾಚಯ್ಯ ಹಾರಿಕೊಂಡ . ಇನ್ನೆಂದೂ ಅವನಿಗೆ ತನ್ನ ಬಸ್ಸನ್ನು ತಿರುಗಿ ನೋಡಬಾರದು ಎನಿಸಿತು .
ತಿಂಗಳುಗಳೇ ಉರುಳಿದವು  , ನಿಧಾನವಾಗಿ ರಾಚಯ್ಯನಿಗೆ ನಿವೃತ್ತಿ ಜೀವನ ಒಗ್ಗತೊಡಗಿತ್ತು . ಈಗ ಆತ ಕಷ್ಟಪಟ್ಟು ಐದು ಗಂಟೆಯವರೆಗೂ ಮಲಗಬಲ್ಲವನಾಗಿದ್ದ. ನಂತರ ಕಾಫಿ ಕುಡಿದು ವಾಕಿಂಗು , ಪೇಪರ್ ಓದುವುದು ಇತ್ಯಾದಿ . ಮಗನೂ ಅಷ್ಟಿಟ್ಟು ಓದಿ ಕೆಲಸಕ್ಕೆ ಸೇರಿದ್ದರಿಂದ ಸಂಸಾರ ಸುಲಭವಾಗಿ ಸಾಗುತಿತ್ತು . ಬೆಳಿಗ್ಗೆ ಆರು ಗಂಟೆಗೆ ಮಾಧವನ್ ಪಾರ್ಕಿನ ಬೆಂಚಿನ ಮೇಲೆ ಕುಳಿತು ಪೇಪರ್ ಓದುತ್ತಾ ಅವನ ಬಸ್ಸು ಹೋಗುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದ. ಸರಿಯಾಗಿ ಆರೂ ಐದಕ್ಕೆ ಶೇಖರ ಸುಯ್ಯನೆ ಬಸ್ಸು ಓಡಿಸಿಕೊಂಡು ಹೋಗುವುದನ್ನು ಕುತೂಹಲ ಮಿಶ್ರಿತ ಸಿಟ್ಟಿನಲ್ಲಿ ನೋಡುತ್ತಿದ್ದ . ಬೆಂಗಳೂರಿನ ಜೀವನ ಯಾಂತ್ರಿಕ ಎಂದು ಅನಿಸತೊಡಗಿತು . ಯಾವ ಪಾರ್ಕುಗಳು , ಶಾಪಿಂಗ್ ಕಾಂಪ್ಲೆಕ್ಸುಗಳು ಅವನನ್ನು ಒಂದು ಕಾಲಕ್ಕೆ ಆಕರ್ಷಿಸಿತ್ತೋ , ಇಂದು ಅವೇ ಅವನ ಬೇಸರಕ್ಕೆ, ಏಕತಾನತೆಗೆ ಕಾರಣವಾಗಿತ್ತು .  ದಿನವೂ ಬಸ್ಸನ್ನು ನೋಡುವುದು ಅವನಿಗೆ ಚಾಳಿ ಆಗಿಹೋಯಿತು . ಏಕತಾನತೆಯನ್ನು ಸೀಳಿಕೊಂಡು ಬರುತ್ತಿದ್ದ ಅವನ ಬಸ್ಸು ಒಂದೇ ರಾಚಯ್ಯನ ಜೀವನದಲ್ಲಿ ಆಶಾಕಿರಣವಾಗಿತ್ತು . ತನ್ನ ಬಸ್ಸು ಆರೋಗ್ಯವಾಗಿದೆ ಎಂಬ ಸಮಾಧಾನ !
ಹೀಗಿರುವಾಗ ಒಂದು ದಿನ ಎಷ್ಟು ಹೊತ್ತಾದರೂ ಬಸ್ಸು ಕಾಣಲೇ ಇಲ್ಲ . ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಕಾದರೂ ಬಸ್ಸು ಬರಲೇ ಇಲ್ಲ . ಅವನಿಗೆ ಆದ ಚಡಪಡಿಕೆ ಹೇಳತೀರದು . ಸತ್ಯಜಿತ್ ರೇ ಸಿನಿಮಾದ ಹೀರೋನಂತೆ ಈ ಜಗತ್ತೇ ನಶ್ವರ ಎಂದು ಚಿಂತಿಸತೊಡಗಿದ . ಚಡಪಡಿಕೆ ತಾಳಲಾರದೆ ಸಂಜೆ ಡಿಪೋಗೆ ಹೋದ. ಸ್ಕ್ರ್ಯಾಪು ವಾಹನಗಳ ಪಕ್ಕದಲ್ಲಿ ಇವನ ಬಸ್ಸು ಗ್ಲಾಸು ಒಡೆದುಕೊಂಡು ನಜ್ಜು ಗುಜ್ಜಾಗಿ ಬಿದ್ದಿತ್ತು . ತನ್ನ ತಂದೆ ಸತ್ತಾಗಲೂ ಅಳದ ರಾಚಯ್ಯ ಅಂದು ಗಳಗಳನೆ ಅತ್ತ .  ಡಿಪೋ ಮ್ಯಾನೇಜರ್ ಬಳಿ ಆದದ್ದನ್ನೆಲ್ಲಾ ಕೇಳಿ ತಿಳಿದುಕೊಂಡ .
"ಇನ್ ಏನ್ರಿ ಸರಿ ಮಾಡ್ಸೋದು ಅದ್ನ , ಬಾಳ ವರ್ಷ ಆಗಿದೆ ಅದುಕ್ಕೆ ಗುಜುರಿಗೆ ಹಾಕ್ತೀವಿ " ಎಂದದ್ದನ್ನು ಕೇಳಿ ಅವನಿಗೆ  ಜಂಗಾಬಲವೇ ಉಡುಗಿಹೋಯಿತು . ತಕ್ಷಣ ಸಾವರಿಸಿಕೊಂಡು
"ಸಾರ್  ಸ್ವಲ್ಪ ದಿನ ತಡೀರಿ ನಾನೇ ಅದನ್ನ ತಗೋತೀನಿ " ಎಂದು ಹೇಳಿ ಎದ್ದು ಬಂದ . ರಾಚಯ್ಯ ಒಂದು ರೀತಿ ಸ್ಥಿಮಿತ ತಪ್ಪಿದವರಂತೆ ವರ್ತಿಸತೊಡಗಿದ . ಮನೆಯ ಜಗುಲಿಯಲ್ಲಿ ಶತ-ಪಥ ತಿರುಗಿ ಯೋಚಿಸತೊಡಗಿದ . ಬಸ್ಸು ಖರೀದಿಸಲು ಸುಮಾರು ಮೂರ್ನಾಲ್ಕು ಲಕ್ಷವಾದರೂ ಬೇಕಿತ್ತು . ಎಲ್ಲಿಂದ ತರುವುದು ? . ಇರುವ ಎಲ್ಲಾ ಉಳಿವಿಕೆಯನ್ನು ಬಾಚಿ ಬಳಿದರೆ ಎರಡು ಲಕ್ಷವೂ ಆಗುವುದಿಲ್ಲ .
ಮರುದಿನವೇ ಬ್ಯಾಂಕಿಗೆ ಹೊರಟ . ತಾನು ಗುಜುರಿ ವ್ಯಾಪಾರ ಮಾಡುತ್ತೇನೆಂದು ಅದಕ್ಕೆ ಸಾಲ ಬೇಕು ಎಂದು ಅರ್ಜಿ ಗುಜಾರಿಯಿಸಿದ . ಅರವತ್ತು ದಾಟಿದ ಅವನಿಗೆ ಯಾವ ಸ್ಕೀಮಿನಲ್ಲೂ ಸಾಲ ಕೊಡುವುದು ಅಸಾಧ್ಯ ಎಂದು ಮ್ಯಾನೇಜರ್ ಅಲ್ಲಗೆಳೆದು ಬಿಟ್ಟರು . ನಂತರ ರಾಚಯ್ಯ ಯೋಚಿಸಿ , ತನ್ನ ಮನೆಯನ್ನು ಅಡವಿಟ್ಟು ಪರ್ಸನಲ್ ಲೋನ್ ಎತ್ತಿದ . ಇಪ್ಪತ್ತು ಬೈ ಮೂವತ್ತರ ಮನೆಗೆ ನಾಲ್ಕು ಲಕ್ಷದ ಮೇಲೆ ಒಂದು ಬಿಡಿಗಾಸೂ ಹುಟ್ಟಲಿಲ್ಲ .
ಹರಾಜಿನ ದಿನ ಬಂದೇ ಬಿಟ್ಟಿತು . ಡಿಪೋದ ಗ್ಯಾರೇಜಿನಲ್ಲಿ ದೊಡ್ಡ ಸಭೆ , ನೂರಾರು ಉದ್ದಿಮೆದಾರರು . ಅವರ ಮಧ್ಯೆ ರಾಚಯ್ಯ ಗುಲಗಂಜಿಯಂತೆ ಕಂಡ . ನೋಡನೋಡುತ್ತಲೇ ಹರಾಜಿನ ದರ ಐದು ಲಕ್ಷ ದಾಟಿ ಬಿಟ್ಟಿತು . ಅದಾಗಿ ಎರಡು ದಿನ ರಾಚಯ್ಯ ಮಲಗಲೇ ಇಲ್ಲ .
ಅವನ ಬಸ್ಸನ್ನು ಡಿಪೋದಿಂದ ಗುಜುರಿ ಅಂಗಡಿಗೆ ಸಾಗಿಸುವ ದಿನ ದೂರದಲ್ಲಿ ನಿಂತು ನೋಡುತ್ತಿದ್ದ . ಸಾಲು ಸಾಲು ಬಸ್ಸುಗಳು ಕ್ರಷರಿನ ಬೆಲ್ಟಿನ ಮೇಲೆ ಸಾಗಿ , ಒಂದು ಚೇಂಬರ್ ಒಳಗೆ ಹೋಗುತಿತ್ತು . ಹೋಗುತ್ತಿದ್ದಂತೆ ದೊಪ್ಪೆಂದು ಕ್ರಷರ್ ಅದನ್ನು ಒತ್ತಿ ಅಪ್ಪಚ್ಚಿ ಮಾಡುತಿತ್ತು . ತನ್ನ ಬಸ್ಸಿನ ಸಾವನ್ನು ನೋಡಲು ಧೈರ್ಯ ಸಾಲದೇ ರಾಚಯ್ಯ ಅಲ್ಲಿಂದ ಹೊರಟು ಬಿಟ್ಟ . ತನ್ನ ಬದುಕಿನ ಗಾಲಿಯ ಗಾಳಿ ಹೋದಂತೆ ಅವನಿಗೆ ಭಾಸವಾಯಿತು . ಆತ  ಹತ್ತಿದ ಸಿಟಿ ಬಸ್ಸು ಟ್ರಾಫಿಕ್ಕಿನಲ್ಲಿ ಲೀನವಾಯಿತು ........  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ