25/5/18

ಸುಬ್ಬಣ್ಣನ ಕವಳ

 ಮಲೆನಾಡಿನ ಮಳೆಗೆ ಎಲೆಕ್ಟ್ರಾನಿಕ್ ಉಪಕರಣಗಳು ಪತರುಗುಟ್ಟಿ ಹೋಗುತ್ತವೆ . ವಿದ್ಯುತ್ ತಂತಿಯ ಮೇಲೆ ಮರ ಬಿದ್ದೋ , ಟ್ರಾನ್ಸ್ ಫಾರ್ಮರ್ ಗೆ ಸಿಡಿಲು ಬಡಿದೋ , ಬಾವಲಿಗಳು ಸಿಕ್ಕಿ ಸತ್ತೋ ಕರೆಂಟು ಕೈ ಕೊಡುವುದರ ಜೊತೆಗೆ ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತದೆ . ಈ ಕಾರಣಗಳಿಂದಲೇ ಪ್ರತಿ ಮನೆಯಲ್ಲೂ ಹಾಳಾದ ಟಿವಿ , ಮಿಕ್ಸಿ ,ಫ್ರಿಡ್ಜು ಇರುವುದು ಸಾಮಾನ್ಯ . ಆದ್ದರಿಂದ ಮಲೆನಾಡಿನಲ್ಲಿ  ರಿಪೇರಿ ಕೆಲಸ ಮಾಡುವವರಿಗೆ ವಿಪರೀತ ಬೇಡಿಕೆ ಇದೆ . ಇದಕ್ಕೆ ತದ್ವಿರುದ್ಧವಾಗಿ ನಮ್ಮೂರಿನಲ್ಲಿ ರಿಪೇರಿಯವರು ಸಿಗುವುದು ಬಹಳವೇ ಕಷ್ಟ . ಸಿಕ್ಕಿದರೂ ಅವರು ತಲೆ ಬುಡ ತಿಳಿಯದ ಹವ್ಯಾಸಿ ರಿಪೇರಿಯವರೇ ಆಗಿರುತ್ತಾರೆ .
ಇದನ್ನೇ ಬಂಡವಾಳ ಮಾಡಿಕೊಂಡು ಕಳೆದ ಮೂವತ್ತು ವರುಷಗಳಿಂದ ಸುಬ್ಬಣ್ಣ ತನ್ನ ಅಂಗಡಿ ನಡೆಸುತ್ತಿದ್ದಾನೆ . ಆತನ ಅಂಗಡಿಯಲ್ಲಿ ಮರ್ಫಿ ರೇಡಿಯೋದಿಂದ ಹಿಡಿದು ಒನಿಡಾ ಓವೆನ್ ತನಕ ಎಲ್ಲವೂ  ಬೆಚ್ಚಗೆ ಮಲಗಿರುತ್ತದೆ . ಸುಬ್ಬಣ್ಣನೂ ಸಹ ಹವ್ಯಾಸದಿಂದಲೇ ಕೆಲಸ ಕಲಿತವನು . ಅವನ ಮಡಿಲಲ್ಲೇ ಎಷ್ಟೋ ರೇಡಿಯೋಗಳು ಪರಲೋಕ ಸೇರಿದೆ , ಅದೆಷ್ಟೂ ಟಿವಿಗಳಿಗೆ ಸುಬ್ಬಣ್ಣ ಮುಕ್ತಿ ಪ್ರಾಪ್ತಿ ಮಾಡಿದ್ದಾನೆ . ಗಿರಾಕಿಗಳು ಜಗಳ ಮಾಡಿ ಸುಬ್ಬಣ್ಣ ದಂಡವನ್ನೂ ಎಷ್ಟೋ ಬಾರಿ ತೆತ್ತಿದ್ದಾನೆ . ಆತನೇ ಹೇಳುವಂತೆ ಅವನು ಲಾಭಕ್ಕಾಗಿ ಆಗಲಿ , ದುಡ್ಡಿನ ಆಸೆಗೆ ಆಗಲಿ ಕೆಲಸ ಮಾಡುವುದಿಲ್ಲ . ಅವನ ಮಟ್ಟಿಗೆ ಆತ ಮಾಡುತ್ತಿರುವುದು ಸಮಾಜ ಸೇವೆ . ಅವನಿಲ್ಲದಿದ್ದರೆ ನಾವೆಲ್ಲರೂ ಶಿವಮೊಗ್ಗಕ್ಕೆ ಓಡಾಡಿ ಸುಸ್ತಾಗುತ್ತಿದ್ದೆವು ಎಂಬುದಂತೂ ನಿಜ .
ಈಗ ಕೆಲವು ವರ್ಷಗಳ ಹಿಂದೆ ನಾನು ಒಂದು ಕಾರ್ಡ್ಲೆಸ್ ಫೋನು ಖರೀದಿ ಮಾಡಿದ್ದೆ . ಮಳೆಗಾಲದಲ್ಲಿ ಮಳೆ ನೋಡುತ್ತಾ ಕೆನೋಪಿಯಲ್ಲಿ ಕುಳಿತು ಫೋನಿನಲ್ಲಿ ಮಾತಾಡುವುದು ನನ್ನ ಹವ್ಯಾಸ . ಇದೆ ಕಾರಣಕ್ಕೆ ಸ್ವಲ್ಪ ಹೆಚ್ಛೇ ಖರ್ಚಾದರೂ ಸರಿ ಎಂದು ಕಾರ್ಡ್ಲೆಸ್ ಫೋನು ಖರೀದಿಸಿದ್ದೆ . ಮೊನ್ನೆ ಮೊನ್ನೆ ಆಕಾಶವೇ ತೂತು ಬಿದ್ದಂತೆ ಜೋರು ಮಳೆ . ಜೊತೆಗೆ ಗುಡುಗು , ಸಿಡಿಲು . ಫೋನಿನ ಕನೆಕ್ಷನ್ನು ತಪ್ಪಿಸಿ ಇಟ್ಟಿದ್ದೆನಾದರೂ ರಿಸೀವರನ್ನು ಆಫ್ ಮಾಡಲು ಮರೆತಿದ್ದೆ . ಮರುದಿನ ಬೆಳಿಗ್ಗೆಯಿಂದ ರಿಸೀವರ್ ಕೆಲಸ ಮಾಡುತ್ತಿರಲಿಲ್ಲ . ನಾನೇ ಬಿಚ್ಚಿ ಸರಿ ಮಾಡಬಹುದಿತ್ತು ಆದರೆ ಅದಕ್ಕೆ ಬೇಕಾದ ಹತಾರಗಳು ಯಾವುವೂ ನನ್ನಲ್ಲಿ ಇರಲಿಲ್ಲ . ಮೇಲಾಗಿ ಬಿಚ್ಚಿ ತೊಂದರೆ ಹುಡುಕಿ ಕ್ಯಾಪಾಸಿಟರನ್ನೋ , ರೆಸಿಸ್ಟರನ್ನೋ ಹುಡುಕಿಕೊಂಡು ಬೀದಿ ಬೀದಿ ಅಲೆಯುವುದು ಇಷ್ಟವಿರಲಿಲ್ಲ . ಹಾಗಾಗಿ ವಿಧಿಯಿಲ್ಲದೆ ನಾನು ಸುಬ್ಬಣ್ಣನ ಅಂಗಡಿಗೆ ಹೋಗಬೇಕಾಯ್ತು .
ಹಾಗೆ ನೋಡಿದರೆ ನನಗೆ ಸುಬ್ಬಣ್ಣನ ಅಂಗಡಿಗೆ ಹೋಗುವುದು ಖುಷಿ . ಉಳಿದ ಅಂಗಡಿ ಮಾಲಿಕರಂತೆ ಸುಬ್ಬಣ್ಣ ಹೆಚ್ಚು ಮಾತನಾಡಿ ತಲೆ ತಿನ್ನುವುದಿಲ್ಲ . ಯಾವಾಗಲೂ ಕವಳ ಹಾಕಿಕೊಂಡು ಸುಮ್ಮನೆ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿರುತ್ತಾನೆ . ಆತ ಕವಳ ಉಗಿದು ಬಂದನೆಂದರೆ ನಾನು ಅಲ್ಲಿಂದ ಜಾಗ ಖಾಲಿ ಮಾಡುತ್ತೇನೆ . ಶಾಸ್ತ್ರೀಯವಾಗಿ ಎಲೆಕ್ಟ್ರಾನಿಕ್ಸ್ ಕಲಿಯದ ಸುಬ್ಬಣ್ಣ ಅವನ ಡೌಟ್ ಗಳನ್ನು  ನನ್ನ ಬಳಿಯೇ ಕೇಳುತ್ತಾನೆ . ಎಸ್ಸೆಸ್ಸೆಲ್ಸಿ ಪಾಸಾಗದ ಆತನಿಗೆ ಎಲೆಕ್ಟ್ರಾನಿಕ್ಸ್ ಹೇಳಿಕೊಡುವುದು ನನಗೆ ಅತಿ ತ್ರಾಸದಾಯಕ . ಇಡೀ ಸಾಗರದ ಪ್ರತಿ ಮನೆಯ ಆರ್ಥಿಕ ಸ್ಥಿತಿ ಗತಿ ಸುಬ್ಬಣ್ಣನ ಅಂಗಡಿಯಲ್ಲಿ ಕುಳಿತು ಲೆಕ್ಕ ಹಾಕಬಹುದು . ಹಳೆಯ ಡೂಮು ಟಿವಿಯನ್ನು ರಿಪೇರಿಗೆ ಕೊಟ್ಟಿದ್ದಾರೆ ಎಂದರೆ ಬಡವರೆಂದೂ , ಲ್ಯಾಪ್ಟಾಪು , ಓವೆನ್ ಕೊಟ್ಟಿದ್ದರೆ ಶ್ರೀಮಂತರೆಂದೂ ನಾನು ಲೆಕ್ಕ ಹಾಕುತ್ತಿದ್ದೆ . ನನಗೆ ತಿಳಿದ ಮಟ್ಟಿಗೆ ಸುಬ್ಬಣ್ಣನಿಗೆ ಕವಳ ಬಿಟ್ಟರೆ ಬೇರೆ ಕೆಟ್ಟ ಚಾಳಿ ಇಲ್ಲ . ಅದೂ ಕವಳ ಎಂದರೆ ಈಗೀನ ಗುಟ್ಕಾ ,ಜರದ ಅಲ್ಲ ತಾನೇ ಸ್ವತಃ ವೀಳ್ಯದೆಲೆ ಬೆಳೆದು ಅದನ್ನು ತಾನೇ ಕೊಯ್ದು , ಸುಣ್ಣವನ್ನೂ ,ತಂಬಾಕನ್ನೂ ತಾನೇ ಹದಮಾಡಿ ಕವಳ ಮಾಡಿಕೊಳ್ಳುತ್ತಾನೆ . ಆತನದು ಪಕ್ಕಾ 'ಮೇಕ್ ಇನ್ ಇಂಡಿಯಾ' ಕವಳ . ಒಮ್ಮೆ ತಂಬಾಕಿನ ಎಸಳನ್ನು ತೊಳೆದು ಒಣಗಿಸಲು ಹಗ್ಗದ ಮೇಲೆ ಹಾಕಿದ್ದನಂತೆ . ಸಂಜೆ ಸಂಧ್ಯಾವಂದನೆಗೆ ಹೋಗುವಾಗ ಅವನ ಅಜ್ಜ ಸ್ನಾನ ಮಾಡಿ ತನ್ನ ಲಂಗೋಟಿಯನ್ನೂ ತಂಬಾಕಿನ ಪಕ್ಕಕ್ಕೇ ಒಣಗಿಸಿದ್ದನಂತೆ . ಅಂಗಡಿಯಿಂದ ಬಂದ ಸುಬ್ಬಣ್ಣ ನಸುಗತ್ತಲಲ್ಲೇ ಲಂಗೋಟಿಯನ್ನು ತಂಬಾಕೆಂದು ತಿಳಿದು ತೆಗೆದುಕೊಂಡು ಹೋಗಿ ಅದನ್ನು ಕೊಚ್ಚಿ , ಕವಳ ಮಾಡಿಕೊಂಡು ತಿಂದಿದ್ದನಂತೆ . ಅಜ್ಜ ಬಂದು ತನ್ನ ಲಂಗೋಟಿ ಹುಡುಕಿ ಹುಡುಕಿ ಸುಸ್ತಾಗಿ ವಿಚಾರಿಸಿದ ಮೇಲೆಯೇ ಈ ವಿಷಯ ಬೆಳಕಿಗೆ ಬಂದಿತ್ತು . ಇಂತಹ ಹಲವು ವೃತ್ತಾಂತಗಳಿಂದ  ಸುಬ್ಬಣ್ಣನ ಕವಳ ಒಂದು ದಂತ ಕಥೆಯಾಗಿತ್ತು .
ಹೀಗೇ ಲೋಕಾಭಿರಾಮವಾಗಿ ಕುಳಿತು ಕಥೆ ಹೇಳಿ ನನ್ನ ಫೋನು ಸರಿ ಮಾಡೆಂದು ಹೇಳಿ ಕೊಟ್ಟು ಬಂದಿದ್ದೆ . ಎರಡು ವಾರವಾದರೂ ಆಸಾಮಿಯ ಸುದ್ದಿ ಇಲ್ಲ !!!
ನಾನೇ ವಿಚಾರಿಸಲು ಹೋದರೆ ಮೊನ್ನೆಯೇ ಆಯ್ತು ಮಾರಾಯ ಎಂದು ತೆಗೆದು ಕೊಟ್ಟ . ಗಡಿಬಿಡಿಯಲ್ಲಿದ್ದ ನಾನು ಹೆಚ್ಚು ಯೋಚಿಸದೆ ತೆಗೆದುಕೊಂಡು ಬಂದೆ . ಮನೆಗೆ ಬಂದು ಬ್ಯಾಟರಿ ಹಾಕಿ ಆನ್ ಮಾಡಿದರೆ ರಿಸೀವರ್ ಆನ್ ಆಗಬೇಕೇ ? ಉಹುಂ . ಕುಟ್ಟಿದೆ , ತಲೆ ಕೆಳಗು ಮಾಡಿದರೂ ಆನ್ ಆಗುತ್ತಿಲ್ಲ . ನಂತರ ಆದದ್ದು ಆಗಲಿ ಎಂದು ನಾನೇ ಬಿಚ್ಚಿದೆ . ಎಲ್ಲಾ ಐಸಿ ಗಳೂ ಕೆಂಪು ಬಣ್ಣಕ್ಕೆ ತಿರುಗಿತ್ತು . ನನಗೆ ಆದ ಅನಾಹುತ ಅರ್ಥ ಆಗಿತ್ತು .
ಬಗ್ಗಿ ಕೆಲಸ ಮಾಡುತ್ತಿದ್ದ ಸುಬ್ಬಣ್ಣನ ಕವಳ ನನ್ನ ಫೋನಿನ ರಿಸೀವರ್ ಒಳಗೆ ಬಿದ್ದಿತ್ತು . ಅದನ್ನು ಸರಿ ಮಾಡಲು ಆತ ಹಾರ ಸಾಹಸ ಪಟ್ಟಿದ್ದು ನನಗೆ ಸರಿಯಾಗಿ ಗೊತ್ತಾಗುತಿತ್ತು . ಏನೇ ಮಾಡಿದರೂ ಅದು ಸರಿಯಾಗುವ ಸಂಭವವೇ ಇಲ್ಲ ಎಂಬುದು ನನಗೆ ಗೊತ್ತಿದೆ . ಇರುವ ಒಂದೇ ದಾರಿ ಎಂದರೆ ಪೂರ್ತಿ ಸರ್ಕ್ಯೂಟ್ ಬದಲಿಸಬೇಕಿತ್ತು . ಇದು ತಕ್ಷಣಕ್ಕೆ ಆಗುವ ಕೆಲಸವಾಗಿರಲಿಲ್ಲ . ಒಟ್ಟಿನಲ್ಲಿ ಸುಬ್ಬಣನ ಕವಳ ನನ್ನ ಫೋನಿಗೆ ಮುಕ್ತಿ ಕೊಟ್ಟಿತ್ತು .
ಹೀಗೆ ಮಜಬೂತು ವ್ಯಕ್ತಿತ್ವ ಹೊಂದಿದ್ದ ಸುಬ್ಬಣ್ಣ ಈಗ ಅಂಗಡಿ ಮುಚ್ಚಿದ್ದಾನೆ . ಪ್ರತಿಯೊಂದು ಕಂಪನಿಯವರು ತಮ್ಮದೇ ಟೆಕ್ನೀಷಿಯನ್ನು ಇಟ್ಟು ಕೊಂಡಿದ್ದಾರೆ . ಮೇಲಾಗಿ ಈಗೀನ ಸ್ಮಾರ್ಟ್ ಉಪಕರಣಗಳನ್ನು ರಿಪೇರಿ ಮಾಡುವಷ್ಟು ಚಾಣಾಕ್ಷತೆ ಅವನಿಗಿಲ್ಲ . ಎಲ್ಲಾದರೂ ಅವನ ಊರಿನ ಕಡೆ ನಾನು ಹೋದಾಗ ಜಗಲಿಯ ಮೇಲೆ ಆತ ಕವಳ ಹಾಕಿಕೊಂಡು ಕೂತಿರುವುದು ಕಾಣುತ್ತದೆ . ಮಲೆನಾಡಿನ ಕಾಡು , ಪರಿಸರದಂತೆ ಆತನೂ ತನ್ನ ಅವಸಾನಕ್ಕೆ ಕಾದು ಕುಳಿತಿರುವಂತೆ ನನಗೆ ಭಾಸವಾಗುತ್ತದೆ .  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ