ಮೈಸೂರಿನ ಮೂಲೆಯ ಕಾಲೇಜ್ ಒಂದರಲ್ಲಿ ಸಾಮಾನ್ಯ ಎಂಜಿನಿಯರಿಂಗ್ ವಿಧ್ಯಾರ್ಥಿ ಆಗಿದ್ದ ನನ್ನನ್ನು ಕನ್ನಡ ಸಾಹಿತ್ಯ ಲೋಕದ ಬಾಗಿಲಿಗೆ ತಂದು ನಿಲ್ಲಿಸಿದ್ದೀರಿ . ನಿಮ್ಮ ಅಭಿಮಾನ , ಪ್ರೀತಿಗೆ ಏನು ಹೇಳಬೇಕೋ ನನಗೆ ತಿಳಿಯುತ್ತಿಲ್ಲ . ನನಗೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಸಂತೋಷವೇನು ಇಲ್ಲ . ಮೂಲತಃ ವಿಜ್ಞಾನದ ವಿಧ್ಯಾರ್ಥಿಯಾಗಿರುವ ನಾನು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದು , ಕನ್ನಡ ಸಾಹಿತ್ಯಕ್ಕೆ ಒದಗಿರುವ ದುರಂತವೇ ಸರಿ .ಅಸಾಹಿತ್ಯ ವಿಷಯಗಳನ್ನು ಸಾಹಿತ್ಯ ರೂಪದಲ್ಲಿ ಕೊಡುವುದು ನನ್ನ ಕನಸು . ಬರಿಯ ' ಮುಟ್ಟು ಒಬ್ಬಟ್ಟು ' ಸಾಹಿತ್ಯವನ್ನು ಕೊಡಬಾರದೆಂಬುದು ನನ್ನ ಇರಾದೆ .
ನವ್ಯ ಸಾಹಿತ್ಯದಲ್ಲಿ ಕುವೆಂಪು , ಕಾರಂತ ಹಾಗೂ ತೇಜಸ್ವಿಯವರನ್ನು ಬಿಟ್ಟರೆ ಅಧ್ಯಯನ ಮಾಡಬಹುದಾದ ಸಾಹಿತ್ಯವನ್ನು ಯಾರೂ ಕೊಡಲಿಲ್ಲ ಎನ್ನುವುದು ನಿಜ . ಸಾಹಿತ್ಯವನ್ನು ಅಭ್ಯಸಿಸಿ ಒಂದು ಉತ್ತಮ ಬರಹವನ್ನು ಕೊಡುವ ಲೇಖಕರ ಕೊರತೆ ಕನ್ನಡವನ್ನು ಕಾಡುತ್ತಿದೆ . ಅಧ್ಯಯನ ಯೋಗ್ಯ ಕೃತಿಗಳು ಇಲ್ಲವೆಂದಾದ ಮೇಲೆ ನಾನೇಕೆ ಓದಬೇಕು ? ಆಧುನಿಕ ಕವಿ ಪುಂಗವರ ಸಾಹಿತ್ಯದ ಕಗ್ಗಗಳನ್ನು ಓದುವುದನ್ನು ನಾನು ನಿಲ್ಲಿಸಿದ್ದೇನೆ . ಕೆಲವೊಂದು ವಿಚಾರಗಳನ್ನು ನಿಮ್ಮೊಡನೆ ನಾನು ಹಂಚಿಕೊಳ್ಳಲೇ ಬೇಕು . ನನ್ನ ಬರಹಗಳನ್ನು ಯಾರೋ ಓದುತ್ತಾರೆ ಎಂದು ನಾನು ಬರೆಯುವುದಿಲ್ಲ ಅಥವಾ ಹಟಕ್ಕೆ ಬಿದ್ದು ಇಂದು ಈ ಕಥೆಯನ್ನು ಮುಗಿಸಲೇ ಬೇಕು ಎಂದು ಬರೆಯುವುದಿಲ್ಲ .ಏನೋ ಒಂದು ವಿಷಯ ಮನದೊಳಗೆ ಕೊರೆಯಲು ಶುರು ಮಾಡಿ , ಬರೆಯದೇ ಬೇರೆ ದಾರಿಯೇ ಇಲ್ಲ ಅನಿಸಿದ ಮೇಲೆ ಲೇಖನಿ ಕೈಗೆತ್ತಿಕೊಳ್ಳುತ್ತೇನೆ . ಸಮಯದ ಕೊರತೆ ಯಾರಿಗೆ ಇಲ್ಲ ಹೇಳಿ ? . ಆದರೆ ಬರೆಯುವ ಹಂಬಲ ಗಟ್ಟಿಯಾಗಿ ಕುಳಿತುಬಿಟ್ಟರೆ ಸಮಯ ಅದು ಹೇಗೋ ಹೊಂದಿಕೆಯಾಗುತ್ತದೆ .
ನನ್ನ ಯಾವುದೋ ಬರಹವನ್ನು ಒಬ್ಬರು ಓದುತ್ತಾರೆ ಎಂದಿಟ್ಟುಕೊಳ್ಳಿ . ಆತ ನನಗೆ ಗೊತ್ತಿಲ್ಲ , ಆದರೂ ಆತನಿಗೆ ನನ್ನ ಮನಸ್ಥಿತಿ , ಚಿಂತನಾ ಶೈಲಿ ಅರ್ಥವಾಗುತ್ತದೆ . ಅದೇ ಸಾಹಿತ್ಯದ ಶಕ್ತಿ . ಸಾಹಿತ್ಯವೆಂಬುದು ಕೇವಲ ಪದಗಳ ಜಾಲವಲ್ಲ . ಒಂದು ಸಾಹಿತ್ಯ ಸೃಷ್ಟಿಯಾಗುವುದು ಜೀವನದ ಅನುಭವದಿಂದ ಮಾತ್ರ . ನನಗೆ ಎಷ್ಟೋ ಜನ ತಾವು ಬರೆದ ಕಥೆ , ಕವನ ಕಳುಹಿಸಿ ಇದನ್ನು ತಿದ್ದಿ ಕೊಡಿ ಎಂದು ಕೇಳುತ್ತಾರೆ . ಕೇವಲ ಕಾಮಾ , ಫುಲ್ ಸ್ಟಾಪ್ ಗಳನ್ನು ಸರಿ ಮಾಡುವುದರಿಂದ ಒಳ್ಳೆಯ ಸಾಹಿತ್ಯ ಸಿಗಲಾರದು . ಕನ್ನಡದ ಮಟ್ಟಿಗೆ ವಿಮರ್ಶಕರ ಕೊರತೆ ಬಹಳವೇ ಇದೆ . ಜಿ.ಹೆಚ್. ನಾಯಕರು , ಟಿ.ಪಿ. ಅಶೋಕ ಇಂತಹ ಕೆಲವೇ ಕೆಲವು ವಿಮರ್ಶಕರು ನಮಗೆ ಸಿಗಬಹುದು . ಪುಂಡ ಪುಡಾರಿಗಳು ಬರಹಗಾರರಾಗುತ್ತಿದ್ದರೆ , ವಿಮರ್ಶೆ ರಾಜಕೀಯ ಬಣ್ಣ ಪಡೆಯುತ್ತಿದೆ . ಅದ್ಭುತ ಸಾಹಿತ್ಯ ಸೃಷ್ಟಿಯಾಗುವಲ್ಲಿ ವಿಮರ್ಶೆಯ ಪಾತ್ರ ಬಹಳ ದೊಡ್ಡದು . ವಸ್ತು ನಿಷ್ಠ ವಿಮರ್ಶೆಯ ಅವಶ್ಯಕತೆ ಬಹಳವೇ ಇದೆ , ವಿಮರ್ಶೆ ಓದಿದ ನಂತರ ಮೂಗನಿಗೆ ಮಾತು ಬಂದಂತ ಅನುಭವ ಓದುಗನಿಗೆ ಆಗಬೇಕು . ವಿಮರ್ಶೆ ಎಂದರೆ ಅದು ಲೇಖಕನೋರ್ವನ ಜೀವನದ ವಿಮರ್ಶಯೇ ಸರಿ . ಒಬ್ಬ ವಿಮರ್ಶಕ ಯಾವುದೊ ಒಂದು ಕೃತಿಯನ್ನು ವಿಮರ್ಶಿಸಿ ಇದು ಸರಿಯಿಲ್ಲ ಎಂದು ಬೊಟ್ಟು ಮಾಡಿ ತೋರಿಸಿದಾಗ ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತು ಲೇಖಕನಿಗೆ ಇರಬೇಕು . ಕೆಲವರು ತಮ್ಮ ಬರಹದ ಶೈಲಿಯನ್ನು ಬದಲಿಸಿಕೊಳ್ಳಲು ಹೆಣಗುತ್ತಾರೆ . ನಮ್ಮ ಜೀವನದ ಶೈಲಿಯನ್ನು ಬದಲಾಯಿಸಿಕೊಂಡರೆ ನಮ್ಮ ಬರಹದ ಶೈಲಿ ತಾನಾಗಿಯೇ ಬದಲಾಗುತ್ತಾ ಹೋಗುತ್ತದೆ .
ಇನ್ನು ಕನ್ನಡ ಭಾಷೆಯ ವಿಷಯಕ್ಕೆ ಬರೋಣ . ಹಿಂದಿ ನಮ್ಮ ರಾಷ್ಟ್ರ ಭಾಷೆಯೆಂದು ಎಲ್ಲೂ ಅಧಿಕೃತ ಲಿಖಿತ ದಾಖಲೆಯಿಲ್ಲ . ಆದರೂ ನಮ್ಮನ್ನು ಎರಡನೆಯ ದರ್ಜೆಯ ಪ್ರಜೆಗಳಾಗಿ ನೋಡುತ್ತಿದ್ದಾರೆ . ಹಾಗೆ ನೋಡಿದರೆ ಹಿಂದಿಗಿಂತ ಪ್ರಾಚೀನವಾದ , ಅತ್ಯಂತ ಸಮರ್ಥವಾದ ಭಾಷೆಗಳು ದಕ್ಷಿಣ ಭಾರತದಲ್ಲಿ ಇದೆ . ಹಿಂದಿ ತನ್ನ ಲಿಪಿಯನ್ನು ಸಂಸ್ಕೃತದಿಂದ ಪಡೆದಿದೆ , ತನ್ನದೇ ಆದ ಸ್ವಂತ ಲಿಪಿ ಅದಕ್ಕಿಲ್ಲ . ಹಾಗೂ ಎಷ್ಟೋ ಪದಗಳನ್ನು ಸಂಸ್ಕೃತದಿಂದಲೇ ಎರವಲು ಪಡೆದಿದೆ . ಪಂಪ ಕಾವ್ಯ ರಚನೆ ಮಾಡುವಾಗ ಹಿಂದಿ ಇನ್ನೂ ತೊಟ್ಟಿಲಲ್ಲಿ ಇತ್ತು . ಇಷ್ಟು ಸಮರ್ಥ ಭಾಷೆಯಾದ ಕನ್ನಡ ಇಂದು ಶೋಚನೀಯ ಸ್ಥಿತಿಯಲ್ಲಿದೆ . ಎಲ್ಲ ಸಾಮರ್ಥ್ಯವನ್ನು ಹೊಂದಿದ್ದ ಸಂಸ್ಕೃತವೇ ಉಳಿಯಲಿಲ್ಲ , ಕನ್ನಡದ ಬಗ್ಗೆ ಒಮ್ಮೊಮ್ಮೆ ಕಳವಳವಾಗುತ್ತದೆ . ಸಂಸ್ಕೃತ ಬ್ರಾಹ್ಮಣರ ಭಾಷೆಯಾಗಿತ್ತು ಅದಕ್ಕೇ ನಶಿಸಿ ಹೋಯಿತು ಎನ್ನುವ ವಾದ ಸುಳ್ಳು . ಅದರ ಬಳಕೆ ಕಡಿಮೆಯಾಗುತ್ತಾ ಹೋಯಿತು. ಒಂದು ಭಾಷೆ ಜೀವಂತವಾಗಿರಬೇಕಾದರೆ ಬೇರೆ ಭಾಷೆಯ ಜೊತೆ ಕೊಳು-ಕೊಡುವಿಕೆ ಅತ್ಯಗತ್ಯ . ಇಂಗ್ಲೀಷಿನಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೆ ಪದಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತದೆ . ಅದು ಸಜೀವ ಭಾಷೆಯ ಲಕ್ಷಣ . ಕನ್ನಡ ಉಳಿಯಬೇಕೆಂದರೆ ಯಾವ ಮಹಾ ಹೋರಾಟವೂ ಬೇಕಿಲ್ಲ , ಬಳಕೆಯನ್ನು ಹೆಚ್ಚು ಮಾಡಿದರೆ ಸಾಕು . ಈಗೀನ ಸರ್ಕಾರಗಳ ಫಂಡ್ ಗಳು ಕನ್ನಡವನ್ನು ಉಳಿಸಲಾರವು . ಈ ರೀತಿಯ ಫಂಡ್ ಗಳಿಂದ ಯಾವ್ಯಾವುದೋ ಪುಸ್ತಕಗಳನ್ನು ತರಿಸಿ ನಮ್ಮ ಗ್ರಂಥಾಲಯಗಳನ್ನು ಗೊಬ್ಬರಗುಂಡಿ ಮಾಡಿದ್ದಾರೆ .
ನನಗೆ ಒದಗಿದ ದೊಡ್ಡ ಸವಾಲೆಂದರೆ ವೈದಿಕ ಹಿನ್ನಲೆಯಿಂದ ಬಂದ ನನಗೆ ಬಂಡಾಯ , ದಲಿತ ಕಾವ್ಯಗಳನ್ನು ಅರ್ಥ ಮಾಡಿಕೊಳ್ಳುವುದು . ನನಗೆ ಇನ್ನೂ ಅರ್ಥವಾಗದ ವಿಷಯವೆಂದರೆ ಅಡಿಗರು , ಮಾಸ್ತಿ ಇವರೆಲ್ಲಾ ಬರೆದದ್ದು ' ಬ್ರಾಹ್ಮಣ ಸಾಹಿತ್ಯ ' ಅಲ್ಲವೆಂದಾದ ಮೇಲೆ , ಒಬ್ಬ ದಲಿತ ಬರೆದದ್ದು ಮಾತ್ರ ಹೇಗೆ ' ದಲಿತ ಕಾವ್ಯ ' ಎಂದಾಗುತ್ತದೆ ? .ಪಂಪ ನನಗೆ ಮಹಾನ್ ಎನಿಸುವುದು ಇದೇ ಕಾರಣಕ್ಕೆ . ಒಂದು ಕಡೆ ಭಾಷೆಯ ಉಳಿವಿಗೆ ಹೋರಾಡುತ್ತಾ , ಸಮಾನತೆಯನ್ನು ಪ್ರತಿಪಾದಿಸುತ್ತಾನೆ . ಒಂದು ಭಾಷೆಯಲ್ಲಿ ಆದಿಕವಿ ಬಹಳ ಮುಖ್ಯ ಪಾತ್ರ ವಹಿಸುತ್ತಾನೆ . ಆತ ತನ್ನರ್ಧ ಭಾಗವನ್ನು ಭಾಷೆಗೆ ಕೊಟ್ಟು , ಭಾಷೆಯ ಅರ್ಧ ಭಾಗವನ್ನು ತಾನು ಪಡೆಯುತ್ತಾನೆ . ಆತ ' ಮನುಷ್ಯ ಜಾತಿ ತಾನೊಂದೆ ವಲಂ ' ಎಂದು ಹೇಳಿ , ಕುವೆಂಪುರವರಂತಹ ಶೂದ್ರ ಕಾವ್ಯ ರಚನೆ ಮಾಡಲು ಸಹಸ್ರಾರು ವರ್ಷಗಳೇ ಹಿಡಿಯಿತು . ಅದು ಈ ಸಮಾಜದ ಕ್ರೂರ ಮುಖ . ಸಾಹಿತ್ಯವೆನ್ನುವುದು ಧರ್ಮ , ಜಾತಿಗಳನ್ನು ಮೀರಬೇಕು . ಇಂದಿಗೂ ಕುವೆಂಪುರವರ ಕಾವ್ಯ ಪ್ರಸ್ತುತ ಅನಿಸಲು ಇದೇ ಕಾರಣ . ಅವರು ಬರೆದಿರುವುದು ಕೇವಲ ಒಕ್ಕಲಿಗ ಸಾಹಿತ್ಯವಲ್ಲ .
ನನ್ನನ್ನು ಈಗಲೂ ಬರೆಯುವಂತೆ ಪ್ರೇರೆಪಿಸುತ್ತಿರುವುದು ಕುವೆಂಪುರವರ ಕಲಾ ಸೃಷ್ಟಿ , ಕಾರಂತರ ಚಿಂತನಾ ಲಹರಿ , ತೇಜಸ್ವಿಯವರ ಜೀವನ ಶೈಲಿ ಹಾಗೂ ಲೋಹಿಯಾರವರ ತತ್ವ ಚಿಂತನೆ . ಯುರೋಪ್ ನಲ್ಲಿ ತತ್ವಚಿಂತನೆ ಬೆಳೆದಷ್ಟು ಭಾರತದಲ್ಲಿ ಬೆಳೆಯಲಿಲ್ಲ . ಕೆಲವು ಕೃತಿಗಳು ಬಂದರೂ ಅದು ಯುರೋಪ್ ನ ತತ್ವ ಚಿಂತಕರ ಪ್ರಭಾವ ಹೊಂದಿತ್ತು . ಇದಕ್ಕೆ ಕಾರಣ ನಮ್ಮಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದು ಬ್ರಾಹ್ಮಣರು . ಅದು ತಪ್ಪಲ್ಲ ಆದರೆ ವೈದಿಕ ಸಂಪ್ರದಾಯದಲ್ಲೂ ಸತಿ ಸಹಗಮನ , ಸ್ತ್ರೀ ಅಸಮಾನತೆ , ಬಾಲ್ಯ ವಿವಾಹ ಇಂತಹ ಕೊಳಕು ಆಚರಣೆಗಳಿವೆ . ಅದನ್ನು ಎತ್ತಿ ಹಿಡಿಯುವ ಕೆಲಸ ಅಥವಾ ಧೈರ್ಯವನ್ನು ಬ್ರಾಹ್ಮಣರು ಮಾಡಲಿಲ್ಲ . ಸಾಮಾಜಿಕ ಒತ್ತಡಗಳು ಇರಬಹುದು . ರಾಜಾ ರಾಮ್ ಮೋಹನ್ ರಾಯ್ ಕೂಡ ಬ್ರಾಹ್ಮಣರು ಅವರೇ ಕೆಲವು ಸುಧಾರಣೆಗಳನ್ನು ತಂದರು . ಮೊದಲಿಗೆ ಶೂದ್ರರನ್ನು ಮೇಲುತ್ತುವ ಕೆಲಸ ಮಾಡಿದ್ದು ಬ್ರಾಹ್ಮಣರೇ ಎಂಬುದನ್ನು ನಾವು ಮರೆಯಬಾರದು .
ಮೊದಲಿಂದಲೂ ನನಗೆ ಗಾಂಧೀಜಿಯವರ ತತ್ವಗಳ ಮೇಲೆ ಆಸಕ್ತಿಯಿರಲಿಲ್ಲ . ಆದರೆ ರಾಮ ಮನೋಹರ ಲೋಹಿಯಾ ಅವರ ತತ್ವ ಚಿಂತನೆ ಅದ್ಭುತವಾದದ್ದು . ಅವರ ಕೃತಿಗಳನ್ನು ಓದಿದ ಮೇಲೆ ನನಗೆ ಗಾಂಧೀಜಿಯವರ ಮೇಲೆ ಅಭಿಮಾನ ಮೂಡಿತು . ಆದರೆ ಈಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಇಕಾಲಜಿಯನ್ನು ನಂಬುತ್ತೇನೆ . ಲೋಹಿಯಾರವರು ಎಲ್ಲ ಮನುಷ್ಯರು ಸಮಾನರು ಎಂದರೆ , ಇಕಾಲಜಿ ಸಮಸ್ತ ಜೀವ ಜಾಲವೇ ಸಮಾನ ಎನ್ನುತ್ತದೆ . ಇಕಾಲಜಿಯಾ ಧರ್ಮ ಸೂಕ್ಷ್ಮಗಳನ್ನು ಅರಿತುಕೊಳ್ಳಲು ಮತ್ತೆ ನನಗೆ ಸವಾಲಾಗಿದ್ದು ವೈದಿಕ ಹಿನ್ನಲೆ . ನನ್ನ ಕುಟುಂಬದವರು ಕೃಷಿಯ ಹಿನ್ನಲೆಯವರಾದರೂ ಕೆಲವು ವಿಷಯಗಳು ನಮಗೆ ಅರ್ಥವಾಗುವುದಿಲ್ಲ . ಉದಾಹರಣೆಗೆ ' ಮಲೆಗಳಲ್ಲಿ ಮಧುಮಗಳು ' ಕೃತಿಯಲ್ಲಿ ಬರುವ ನಾಯಿ ಗುತ್ತಿಯ ಪಾತ್ರ . ಗುತ್ತಿ ಮತ್ತು ಹಾಗೂ ಹುಲಿಯನ ಮಧ್ಯೆ ಇದ್ದ ಆ ಸಂಬಂಧ ನನಗೆ ಅರ್ಥವಾಗಿರಲಿಲ್ಲ . ಕೊನೆಯಲ್ಲಿ ಗುತ್ತಿ ತೆಪ್ಪದಲ್ಲಿ ಮುಂದೆ ಹೋಗುತ್ತಾನೆ , ನಾಯಿ ಪ್ರವಾಹದಲ್ಲಿ ತೇಲಿ ಹೋಗುತ್ತದೆ . ಈ ಘಟನೆಯನ್ನು ನಾನು ನನ್ನ ಬ್ರಾಹ್ಮಣ್ಯವನ್ನು ಮರೆತು ಓದಬೇಕಾಯಿತು . ಈಗಲೂ ನನಗೆ ಪ್ರವಾಹ ನೋಡಿದರೆ ನಾಯಿ ಗುತ್ತಿ ನೆನಪಾಗುತ್ತಾನೆ .
ಕುವೆಂಪುರವರ ' ಶೂದ್ರ ತಪಸ್ವಿ ' ಕೃತಿಯೂ ಅಷ್ಟೇ , ನನ್ನ ಬ್ರಾಹ್ಮಣ್ಯಕ್ಕೆ ಸವಾಲು ಒಡ್ಡಿತು . ಮೂಲ ರಾಮಾಯಣದ ಕಥೆ ಈ ರೀತಿ ಇದೆ . ಶಂಬೂಕ ಎನ್ನುವ ಶೂದ್ರ ತಪಸ್ಸನ್ನು ಆಚರಿಸುತ್ತಿರುತ್ತಾನೆ , ಇದರಿಂದ ಒಬ್ಬ ಬ್ರಾಹ್ಮಣನ ಮಗ ಸತ್ತು ಹೋಗುತ್ತಾನೆ . ಆಗ ಬ್ರಾಹ್ಮಣ ಶ್ರೀರಾಮನನ್ನು ಬೇಡಿಕೊಳ್ಳುತ್ತಾನೆ . ರಾಮ ಶಂಬೂಕನನ್ನು ವಧಿಸುತ್ತಾನೆ , ಬ್ರಾಹ್ಮಣನ ಪ್ರಾಣ ವಾಪಸು ಬರುತ್ತದೆ . ಆದರೆ ಕುವೆಂಪು ಅವರ ಕೃತಿಯಲ್ಲಿ ರಾಮ ಬಿಟ್ಟ ಬಾಣ ಶಂಬೂಕನನ್ನು ಪ್ರದಕ್ಷಿಣೆ ಹಾಕುತ್ತದೆ , ಬ್ರಾಹ್ಮಣನ ಪ್ರಾಣವನ್ನೇ ತೆಗೆಯಲು ಮುನ್ನುಗ್ಗಿ ಬರುತ್ತದೆ . ಈ ರೀತಿ ಮೂಲ ಕಥೆಯನ್ನು ತಿರುಚಿದ್ದು ಎಷ್ಟು ಸರಿ ? . ಅಡಿಗರು , ಮಾಸ್ತಿ ಇದರ ಬಗ್ಗೆ ವಿಮರ್ಶಿಸಿ ಪುರಾಣ ಕಥೆಗಳನ್ನು ತಿರುಚುವುದು ತಪ್ಪು , ಅದರ ಬದಲು ಕುವೆಂಪುರವರು ಬೇರೆ ಕಥೆ ಬರೆಯಲಿ ಎಂದು ಹೇಳಿದ್ದರು . ಈ ವಾದ ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನಗೆ ಗೊತ್ತಿಲ್ಲ . ಏಕೆಂದರೆ ರನ್ನ , ಕುಮಾರವ್ಯಾಸ ಇವರೂ ಸಹ ತಾವು ಬರೆಯುವಾಗ ಕಥೆಗಳನ್ನು ಬದಲಾಯಿಸಿಕೊಂಡಿದ್ದಾರೆ . ರನ್ನನ ' ಗಧಾಯುಧ್ಧ್ದ'ದಲ್ಲಿ ಭೀಮನೇ ನಾಯಕನಾಗಿ ಮಿಂಚುತ್ತಾನೆ .
ಕುವೆಂಪುರವರು ಜಾತೀಯತೆಯನ್ನು ಬಹಳವೇ ದ್ವೇಷಿಸುತ್ತಿದರು . ಆದರೆ ಅವರಿಗೂ ಅದನ್ನು ಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಲಿಲ್ಲ . ಕೊನೆ ಕೊನೆಗೆ ಅವರು ಎಷ್ಟರ ಮಟ್ಟಿಗೆ ಬೇಸರ ಪಟ್ಟುಕೊಂಡರೆ ಎಂದರೆ , " ನನ್ನೆಲ್ಲ ಕೃತಿಗಳನ್ನು ಒಲೆಗೆ ಹಾಕಿ , ವಿಶ್ವಮಾನವ ಸಂದೇಶವನ್ನು ಮಾತ್ರ ಇಟ್ಟುಕೊಳ್ಳಿ ಸಾಕು " ಎನ್ನುತ್ತಿದ್ದರು . ಒಂದನ್ನು ನೆನಪಿಡಿ ಭಾರತೀಯ ಸಂಸ್ಕೃತಿಯೂ ಪರಿಪೂರ್ಣವಲ್ಲ . ಯಾವ ಧರ್ಮವೂ ಮಾದರಿಯುತ ಧರ್ಮವಲ್ಲ . ಧರ್ಮದ ಅನಗತ್ಯ ಕಟ್ಟುಪಾಡುಗಳಿಗೆ ಜೋತು ಬೀಳದೆ , ನಮ್ಮ ಅನುಭವಗಳಿಂದ ಜೀವನ ಸಾಗಿಸಬೇಕು . ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ , ಅಷ್ಟು ಧರ್ಮ ಹುಟ್ಟಿಕೊಳ್ಳಬೇಕು . ಆಗ ಮಾತ್ರ ಮಾನವೀಯತೆ ಎದ್ದು ನಿಲ್ಲಲು ಸಾಧ್ಯ . ನಾನೂ ಸಹ ಮೀಸಲಾತಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತೇನೆ . ಮೀಸಲಾತಿ ಎನ್ನುವುದು ವೋಟ್ ಬ್ಯಾಂಕ್ ರಾಜಕಾರಣದ ಕೀಲಿ ಕೈ ಆಗುತ್ತಿದ್ದೆ . ಹಿಂದೆದ್ದೋ ತಪ್ಪು ಮಾಡಿದ್ದಾರೆ ಎಂದು ಈಗ ಬ್ರಾಹ್ಮಣರನ್ನು ತುಳಿಯುವುದು ದೊಡ್ಡ ಮೂರ್ಖತನ .
ನಾನು ಬ್ರಾಹ್ಮಣ ದ್ವೇಷಿಯೂ ಹೌದು , ದಲಿತ ವಿರೋಧಿಯೂ ಹೌದು . ಯಾವುದೊ ಒಂದು ಜಾತಿಗೋ ಅಥವಾ ಧರ್ಮಕ್ಕೋ ಕಟ್ಟಿ ಹಾಕಿಕೊಂಡು ಬರೆಯುವುದು ಅತಿ ಕೆಳ ಮಟ್ಟದ ಸಾಹಿತ್ಯ . ನಮ್ಮಲ್ಲಿ ಈ ರೀತಿಯ ಬಹಳ ದೊಡ್ಡ ಗುಂಪೇ ಇದೆ , ಈ ಲೋಫರ್ ಬಳಗಕ್ಕೆ ಸೇರುವ ಬದಲು ನಾನು ಹಸ್ತ ಸಾಮುದ್ರಿಕ , ಜ್ಯೋತಿಷ್ಯದ ಪುಸ್ತಕ ಬರೆದು ಜೀವನ ಸಾಗಿಸುವುದು ಲೇಸು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ