12/1/15

ಕಾಲನ ಕಾಲಂನೊಳಗೆ

ರಾತ್ರಿ ಎರಡೂವರೆ ,ಕಣ್ಣಿಗೆ ನಿದ್ದೆಯಿಲ್ಲ ದೇಹಕ್ಕೆ ದಣಿವಿಲ್ಲ . ಮನಸ್ಸಿನ ಸ್ಲೇಟಿನ ಮೇಲೆ ಏನೇನೋ ಬರೆದು ಅಳಿಸುತ್ತಿದ್ದೆ . ಬಾತ್ರೂಮ್ ಬಚ್ಚಲ ಮನೆ ಆಗಿದ್ದ ಕಾಲವದು . ಡ್ರಾಯಿಂಗ್ ರೂಂ ಜಗುಲಿ ಆಗಿತ್ತು . ಶಾಲೆಯ ಬಳಿ ಎರಡು ರೂಪಾಯಿ ಬಟಾಣಿ ತಗೊಂಡು ತಿಂದರೆ ಎಂತಹ ಹೆಮ್ಮೆ . ಆದರೆ ಈಗ ಗರಿ ಗರಿ ನೋಟು ಕೊಟ್ಟು ತಿಂದ ಫ್ರೆಂಚ್ ಫ್ರೈಸ್ ಮಜಾನೆ ಕೊಡುತ್ತಿಲ್ಲ . ರಸ್ತೆಯಲ್ಲಿ ಆಡಿದ 'ಗಲ್ಲಿ ಕ್ರಿಕೆಟ್ ' ನನಗೆ ಇನ್ನೂ ನೆನಪಿದೆ . ಈಗ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವುದಕ್ಕಿಂತ ಎವರೆಸ್ಟ್ ಏರುವುದು ಸುಲಭವೆನಿಸುತ್ತದೆ .
ಮೂವತ್ತು ರೂಪಾಯಿಯ 'ಕಾಮತ್' ಹೋಟೆಲ್ ಊಟ ಹೊಟ್ಟೆ ತುಂಬಿಸುತ್ತಿತ್ತು . ಐನೂರು ರೂಪಾಯಿಯ 'ಪಿಜ್ಜಾ ಹಟ್ ' ಪಿಜ್ಜಾ ಹೊಟ್ಟೆ ತುಂಬಿಸುತ್ತಿಲ್ಲ . ಜೀವನದಲ್ಲಿ ರೇಸ್ ಗೆಲ್ಲಲೇಬೇಕೆಂಬ ಬಯಕೆ ನಮ್ಮನ್ನೆಲ್ಲ ಓಡುವಂತೆ ಮಾಡಿದೆ . ಆದರೆ ಟ್ರಾಫಿಕ್ ಸಿಗ್ನಲ್ ನಮ್ಮನ್ನು ಬಂಧಿಸಿಟ್ಟಿದೆ . ನಮ್ಮ ಮನೆಯ ಪಕ್ಕದಲ್ಲಿದ್ದ ಮರ ನೆಲಸಮವಾಗಿ ಆರು ಮಹಡಿ ಕಟ್ಟಡ ಎದ್ದು ನಿಂತಿದೆ , ನನ್ನ ಬೆಡ್ರೂಮ್ ಕತ್ತಲಾಗಿಸಿದೆ  .
ಕಳೆದ ಸುಮಾರು ಹತ್ತು ವರ್ಷಗಳಲ್ಲಿ ಅತಿ ಎನಿಸುವಷ್ಟು rapid ಬದಲಾವಣೆಗಳಾಗಿವೆ . ಮನೆಯ ನಾಯಿಗಳೂ ಫೇಸ್ಬುಕ್ ಅಕೌಂಟ್ ಓಪನ್ ಮಾಡಿಕೊಂಡು ಕುಳಿತಿವೆ . ಇದೇ ಜಗತ್ತೇ ನಿಮ್ಮ ಕೈಯಲ್ಲಿನ ಸ್ಮಾರ್ಟ್ ಫೋನ್ ನಲ್ಲಿದೆ . ನ್ಯೂಯಾರ್ಕ್ ನಲ್ಲಿ ಕೊಳಗಿಬೀಸ್ ನ ಮಂಜು ಭಟ್ರು ಸಿಕ್ಕಿದಂತೆ ನಮ್ಮ ನೆರೆ ಮನೆಯಲ್ಲಿ ಜಾನ್ ,ಪೀಟರ್ ಸಿಗುತ್ತಿದ್ದಾರೆ . ಸಿಡ್ನಿಯ ಶೇರ್ ಮಾರ್ಕೆಟ್ ಸೆನ್ಸೆಕ್ಸ್ ,ತಾಳಗುಪ್ಪದ ಗುಡ್ಡೆರಂಗಪ್ಪ ಸಂತೆಯ ತರಕಾರಿ ರೇಟ್ ಏರು-ಪೇರಾಗಿಸಬಲ್ಲದು. ಇಟಲಿಯಲ್ಲಿ ಶಿರಸಿಯ 'ತೊಡೆದೇವು' ಸಿಗುವಂತೆ ನಮ್ಮ ಬೀದಿಯ ಕೊನೆಯಲ್ಲಿ ಇಟಾಲಿಯನ್ ಪಿಜ್ಜಾ ಸಿಗುತ್ತದೆ .'ಯೋ-ಯೋ ಹನಿಸಿಂಗ್' ಸೀನಿದ ಸೀನು ಬೆಂಗಳೂರಿನ ಪಾರ್ಟಿಯಲ್ಲಿ ಡಾನ್ಸ್ ಮಾಡುತ್ತಿರುವ ಹುಡುಗಿಯರ ಸೊಂಟ ಉಳುಕಲು ಕಾರಣವಾಗಬಹುದು. ನಮ್ಮ ಜೀವನ ಶೈಲಿ ಸಂಪೂರ್ಣ ಬದಲಾಗಿದೆ . MTR ಮಸಾಲದೋಸೆ ತಿನ್ನುವವರು ಮಾಯವಾಗಿದ್ದರೆ . ಬರಿಸ್ತದಲ್ಲಿ ಶುರುವಾಗುವ ನಮ್ಮ ವೀಕೆಂಡ್ ಮಲ್ಟಿಪ್ಲೆಕ್ಸ್ ನಲ್ಲಿ ಮುಕ್ತಾಯಗೊಳ್ಳುತ್ತದೆ .
ಈ ಬದಲಾವಣೆ ಬೇಕಿತ್ತೋ ಬೇಡವೋ ಒಟ್ಟಿನಲ್ಲಿ ಬದಲಾವಣೆ ಅಂತೂ ಆಗಿದೆ . ಪ್ರವಾಹದ ವಿರುಧ್ಧ ಈಜುವುದು ಕಷ್ಟ ,ಪ್ರವಾಹದ ದಿಕ್ಕಿನಲ್ಲೇ ತೇಲೋಣ . ನಾನು ಆರ್ಡರ್ ಮಾಡಿದ ಪಿಜ್ಜಾ ಬಂತು ಅನಿಸುತ್ತೆ , ಆಮೇಲೆ ಸಿನೆಮಾಗೆ ಬೇರೆ ಹೋಗಬೇಕು . ನಾನು ಹೊರಡುತ್ತೇನೆ .
ಮತ್ತೆ ಮತ್ತೆ ಈ ರೀತಿಯ ರಗಳೆ ನಿಮಗೆ ಬೇಕು ಅನಿಸಿದ್ದಲ್ಲಿ ನನ್ನ ಬ್ಲಾಗ್ ಫಾಲೋ ಮಾಡಿ . ನಿಮ್ಮ ಕಾಮೆಂಟ್ ,ಲೈಕ್ ಗಳಿಂದ ನನ್ನ ತಲೆ ಕೂಡ ತಿನ್ನಬಹುದು .   

8/1/15

ಪಯಣ :ಸ್ನೇಹದ ಕಡೆಗೆ

ಈ ಟ್ರಿಪ್ ,ಪಿಕ್ನಿಕ್ ಇಂತಹುಗಳಿಂದ ನಾನು ದೂರವೇ ಎಂದರೆ ತಪ್ಪಲ್ಲ . ಈ ಸಲವೂ ಕ್ಲಾಸ್ ನಲ್ಲಿ ಟ್ರಿಪ್ ಬಗ್ಗೆ ಅನೌನ್ಸ್ ಮಾಡಿದಾಗ ನಾನು ಅಷ್ಟೊಂದು ಆಸಕ್ತಿ ವಹಿಸಿರಲಿಲ್ಲ . ಸುಮ್ಮನೆ ಯಾವುದೋ ಕುಂಟು ನೆಪವೊಡ್ಡಿ  ಸಾಗುಹಾಕಿಯಾಗಿತ್ತು . ಕೊನೆಯ ಕ್ಷಣದಲ್ಲಿ ಅಂತೂ ಸ್ನೇಹಿತರ ಒತ್ತಾಯಕ್ಕೆ ಹೊರಟು ನಿಂತಿದ್ದೆ . ಕೇರಳದ ವಯ್ನಾಡಿಗೆ ನಮ್ಮ ಪಯಣ ನಿಗದಿ  ಪಡಿಸಲಾಗಿತ್ತು . ಅಂದು ನವೆಂಬರ್ ಒಂದನೇ ತಾರೀಖು ಬೇರೆ .  ಕನ್ನಡ ರಾಜ್ಯೋತ್ಸವವನ್ನು ಕೇರಳದಲ್ಲಿ ಆಚರಿಸುವ ಯೋಚನೆ ನನಗಿತ್ತು.
ಬೆಳಿಗ್ಗೆ ನಾಲ್ಕೂ ವರೆಗೆ ನನ್ನ ಅಲಾರಂ ಬಡಿದು ಕೊಳ್ಳುತ್ತಿತ್ತು ,ಜೊತೆಗೆ ನನ್ನ ಫ್ರೆಂಡ್ ನ ಬೈಕ್ ಹಾರನ್ ಕೂಡ . ಒಂದೇ ಏಟಿಗೆ ಎದ್ದು   ಕುಳಿತು ,ಐದೇ ನಿಮಿಷದಲ್ಲಿ ಪ್ಯಾಂಟ್-ಶರ್ಟ್  ಸಿಕ್ಕಿಸಿಕೊಂಡು ಓಡಿದೆ . ಐದು ಗಂಟೆಗೆಲ್ಲ ನಾನು ಮೈಸೂರು ಬಸ್ ಸ್ಟಾಂಡ್ ಬಳಿ ಇದ್ದೆ . ಅಲ್ಲಿ ನಾವು ನಾಲ್ಕು ಜನ ಬಿಟ್ಟರೆ ಯಾರೂ ಇರಲಿಲ್ಲ . ಟ್ರಿಪ್ ಗೆ ಬರುತ್ತೇನೆ ಎಂದು ಹೇಳಿದ್ದ lectures ಕೈ ಕೊಟ್ಟು ಬಿಟ್ಟಿದ್ದರು . ನಮ್ಮ ಟ್ರಿಪ್ ಕ್ಯಾನ್ಸಲ್ ಆಗುವ ಮಟ್ಟಕ್ಕೆ ಬಂದು ಬಿಟ್ಟಿತ್ತು . ಕೊನೆಗೂ ಹೇಗೇಗೋ ಕಾಗೆ ಹಾರಿಸಿ ಎಲ್ಲರ ಜವಾಬ್ದಾರಿಯನ್ನೂ ನಾವೇ ಹೊತ್ತು ಶತ ಪ್ರಯತ್ನ ಮಾಡಿ 5.30ಕ್ಕೆ ಹೊರಟು ಬಿಟ್ಟೆವು . ಕಿವಿ ಗಡಚಿಕ್ಕುವಂತೆ ಹಾಡು ಹಾಕಿದ್ದು ನನಗೆ ಕಿರಿ ಕಿರಿ ಉಂಟುಮಾಡುತ್ತಿತ್ತು . ಅಂತೂ-ಇಂತೂ ಎಂಟೂ ವರೆಯ ಹೊತ್ತಿಗೆ ಕೇರಳ ಬಾರ್ಡರ್ ದಾಟಿದೆವು . ಹನ್ನೆರಡು ಸಾವಿರ ರೂಪಾಯಿಯನ್ನು ಟ್ಯಾಕ್ಸ್ ಎಂದು ಕಟ್ಟಿದೆವು . ನಮಗೆ ಇದು ಬಹಳ ಹೊರೆ ಎನಿಸಿತು . ಒಂಬತ್ತು ಗಂಟೆಯ ಸುಮಾರಿಗೆ ಯಾವುದೋ ದೇವಸ್ಥಾನದ ಮುಂದೆ ಬಸ್ ನಿಲ್ಲಿಸಿ ತಿಂಡಿ ತಿಂದೆವು . ಒಬ್ಬ ಗಾರ್ಡ್ ಇದ್ದಕಿದ್ದಂತೆ ಬಂದು "ಪ್ಲಾಸ್ಟಿಕ್ ಮಲಿನ್ ಯಾನ್ಗಲ್ ಇವಡೆ ಇದರುತ್ " ಎಂದು ಪದೇ ಪದೇ ಹೇಳತೊಡಗಿದ . ಕಾರಣ ಇಷ್ಟೇ ಈಗ ಕೇರಳ ಸಂಪೂರ್ಣ ಪ್ಲಾಸ್ಟಿಕ್ ಹಾಗು ಮದ್ಯ ಮುಕ್ತ ರಾಜ್ಯ . ಅತೀ ಹೆಚ್ಚು ಮದ್ಯ ಮಾರಾಟವಾಗುತ್ತಿದ್ದ ಕೇರಳದಲ್ಲೀಗ ಕಾಣಲೂ ಒಂದು ಬಾರೂ ಇಲ್ಲ . ನಾವು ನಮ್ಮ ಪ್ಲಾಸ್ಟಿಕ್ ಪ್ಲೇಟ್ ಹಾಗು ಲೋಟಗಳನ್ನು ಮತ್ತೆ ಬಸ್ಸಿನಲ್ಲಿ ತುಂಬಿ ಹೊರಟೆವು . ಸುಲ್ತಾನ್ ಬತೇರಿ ಇಂದ ನಮ್ಮ ಬಸ್ ತಿರುಗಿದ್ದು ಮೆಪ್ಪಾಡಿ ಫಾರೆಸ್ಟ್ ಕಡೆಗೆ . ನಮ್ಮ ಗುರಿ ಮೆಪ್ಪಾಡಿ ಟಿಪ್-ಪಾಯಿಂಟ್ ಹಾಗು ಸೂಚಿಪರ ಫಾಲ್ಸ್ ಆಗಿತ್ತು . ನಮ್ಮ ಬಸ್ ಬೆಟ್ಟ ಏರುತ್ತಿದ್ದಂತೆ ರಸ್ತೆ ಕಿರಿದಾಗುತ್ತಾ ಹೋಗುತ್ತಿತ್ತು . ಬಸ್ ತಿರುವು-ಮುರುವುಗಳನ್ನು ಹಿಂದಿಕ್ಕುತ್ತಾ ಬಾಗಿ ಬಳುಕಿ ಸಾಗುತ್ತಿದ್ದರೆ, ಕೆಲವರು ಗಾಳಿಯಲ್ಲಿ ದೋಸೆ ಹಾಕಲು ರೆಡಿ ಆಗುತ್ತಿದ್ದರು . ಕೆಲವರಂತೂ ವಾಂತಿ ಮಾಡಿ ಮಾಡಿ ಸುಸ್ತಾದಿದ್ದರು . ರಸ್ತೆಯ ಇಕ್ಕೆಲಗಳಲ್ಲೂ ಟೀ ಎಸ್ಟೇಟ್ ನಮಗೆ ಸಾಥ್ ಕೊಡುತ್ತಿತ್ತು . ಒಂದು ಕಡೆ ನಮ್ಮ ಬಸ್ ನಿಂತೇ ಬಿಟ್ಟಿತು . ಸ್ಥಳೀಯರೊಬ್ಬರು ಮುಂದೆ ಜೀಪಿನಲ್ಲಿ ಮಾತ್ರ ಹೋಗಬಹುದು , ಬಸ್ ಹೋಗುವುದಿಲ್ಲ ಎಂದರು . ಎಲ್ಲರೂ ಜೀಪಿನಲ್ಲಿ ಹೋದರೆ ನಮ್ಮ ಹಣವೆಲ್ಲ ಅಲ್ಲೇ ಖಾಲಿಯಾಗಿ ಬಿಡುತ್ತಿತ್ತು . ಮೆಪ್ಪಾಡಿಯ ಕನಸು ಕನಸಾಗೆ ಉಳಿಯಿತು . ಮುಂದೆ ನಾವು ಸೂಚಿಪರದ ಕಡೆಗೆ ಹೊರಟೆವು . ಸುಮಾರು 12.30ಕ್ಕೆ ಸೂಚಿಪರ ತಲುಪಿದೆವು . ಐವತ್ತು ರೂಪಾಯಿ ಎಂಟ್ರಿ ಫಿ ತೆತ್ತು ಫಾಲ್ಸ್ ಕಡೆ ಹೆಜ್ಜೆ ಹಾಕಿದೆವು . ಸೂಚಿಪರ ಪದದ ಅನುಭವವಾಗಿದ್ದು ನನಗೆ ಫೋಟೋಗೆ ಪೋಸ್ ಕೊಡುವಾಗಲೇ . ಸೂಚಿ ಎಂದರೆ ಸೂಜಿ ಎಂದರ್ಥ ಪರ ಎಂದರೆ ಬಂಡೆ . ನಾನು ನಗು ನಗುತ್ತಲೇ ಪೋಸ್ ಕೊಟ್ಟರೂ ಹಿಂದಿನಿಂದ ನೀರು ಸೂಜಿಯಂತೆ ಹೊಡೆಯುತ್ತಿತ್ತು . ಸೂಚಿಪರ ,ಮೆಪ್ಪಾಡಿಯಿಂದ ಸುಮಾರು ಇಪ್ಪತ್ತು ನಿಮಿಷದ ಹಾದಿ . 200mts(656ft) ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ . ಜೋಗದಲ್ಲಿ ಹುಟ್ಟಿ ಬೆಳೆದ ನನಗೆ ಇದು ಆಶ್ಚರ್ಯವೇನೂ ಅಲ್ಲ . ಆದರೆ ಸ್ನೇಹಿತರ ಕಂಪನಿ ಹೊಸತು . ಚುಲಿಕ ನದಿಯೇ ಇಲ್ಲಿ ರಮಣೀಯ ಫಾಲ್ಸ್ಸ್ ಸೃಷ್ಟಿಸಿದೆ . ಕೆಲ ಹೊತ್ತು ನೀರಿನಲ್ಲಿ ಆಟವಾಡಿ ವಾಪಾಸ್ ಆದೆವು . ಮುಂದೆ ನಾವು ಪೂಕೊಡ್ ಲೇಕ್ ಹೊರಟಿದ್ದೆವು . ನಾಲ್ಕು ಗಂಟೆಗೆ ಲೇಕ್ ತಲುಪಿದೆವು . ರೋಡ್ ಸೈಡ್ ಗಾಡಿ ನಿಲ್ಲಿಸಿ ಊಟದ ಶಾಸ್ತ್ರ ಮುಗಿಸಿ ಕೊಂಡೆವು . ಪೂಕೊಡ್ ಲೇಕ್ ಸಮುದ್ರ ಮಟ್ಟದಿಂದ 770ft ಎತ್ತರದಲ್ಲಿದೆ . ಕುಲ್ಪೆಟ್ಟದಿಂದ ಹದಿನೈದು ಕಿಲೋಮೀಟರ್  ದೂರವಿದೆ . ಸುಮಾರು 8.5 ಹೆಕ್ಟೇರು ವಿಸ್ತೀರ್ಣವಿದೆ . ಗರಿಷ್ಟ ಆಳ 6.5mts. ಇದರ ವಿಶೇಷತೆ ಎಂದರೆ ಇದು ಆಕಾರದಲ್ಲಿ ಇಂಡಿಯಾ ಮ್ಯಾಪ್ ಅನ್ನು ಹೋಲುತ್ತದೆ ಹಾಗು ಪೆಥಿಯ ಪೂಕೊಡೆನಿಸ್ ಎಂಬ ವಿಶೇಷ ಜಾತಿಯ ಮೀನಿನ ತವರು . ನಾನು ತಲೆ ಕೆಳಗು ಮಾಡಿ ಹುಡುಕಿದರೂ ಒಂದೂ ಮೀನು ಕಾಣಲಿಲ್ಲ . ಆದರೆ ಒಂದನ್ನು ಮಾತ್ರ ಗಮನಿಸಿದೆ ಎಲ್ಲ ಕಡೆಯಲ್ಲೂ ಮಲಯಾಳಂನಲ್ಲಿ ದೊಡ್ಡ ದೊಡ್ಡ ಬೋರ್ಡ್ ಹಾಕಿದ್ದರು . ನಾನು ಬಹುಶಃ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಏನೋ ಹಾಕಿರಬೇಕೆಂದು ಒಳಗೊಳಗೇ ಖುಷಿಪಟ್ಟೆ . ಒಂದೇ ಬೋರ್ಡ್ ನಲ್ಲಿ ಇಂಗ್ಲಿಷ್ ನಲ್ಲಿ ಚಿಕ್ಕದಾಗಿ ಹಾಕಿದ್ದರು 'Beware of leeches '!.ಓಹ್ ,ಕಾಶಿಗೆ ಹೋದರೂ ಶನಿ ಬಿಡಲಿಲ್ಲವೆಂದು ಕಾಲು ನೋಡಿಕೊಂಡೆ ಅದಾಗಲೇ ಮೂರು ಜಿಗಣೆಗಳು ನನ್ನ ಕಾಲಿನಲ್ಲಿ ಸ್ಟ್ರಾ ಬಿಟ್ಟು ರಕ್ತ ಕುಡಿಯುತ್ತ ಕುಳಿತ್ತಿದ್ದವು . ಮುಂದೇನಾಯಿತು ಎಂದು ಹೇಳಬೇಕಿಲ್ಲ ತಾನೇ ?.
ಮುಂದೆ ನಾವು ಲಕ್ಕಿಡಿ ವ್ಯೂ ಪಾಯಿಂಟ್ ಗೆ ಹೋದೆವು . ಇದು ಸಮುದ್ರ ಮಟ್ಟದಿಂದ 700m ಎತ್ತರದಲ್ಲಿದೆ . ವರ್ಷಕ್ಕೆ 600-650cm ಮಳೆ ಬೀಳುತ್ತದೆ . ಇದು ಅತಿ ಹೆಚ್ಚು ಮಳೆ ಬೀಳುವ ವಿಶ್ವದ ಎರಡನೇ ಪ್ರದೇಶ . ವಿಶೇಷತೆ ಎಂದರೆ lion tailed macque ,indian shag ,pond heron ಹಾಗು ಅತ್ಯಂತ ರೇರ್ ಎನಿಸುವ ಪಕ್ಷಿ ಪ್ರಭೇಧಗಳ ತವರುಮನೆ ಈ ಲಕ್ಕಿಡಿ ಪ್ರದೇಶ   . ಜೀವನದಲ್ಲಿ ಒಮ್ಮೆ ನೋಡಬೇಕಾದ ಜಾಗವೆನಿಸಿ ಬಿಡುತ್ತದೆ .
ನಂತರ ನಮ್ಮ ಬಸ್ ಸೀದಾ ಬಂದಿದ್ದು ಮೈಸೂರಿಗೆ . ದಾರಿ ಮಧ್ಯೆ ಅಂತ್ಯಾಕ್ಷರಿ ಆಡಿದ್ದು ಅತ್ಯಂತ ಕಾಮನ್ ವಿಷಯವೆಂದು ಇಲ್ಲಿ ಅದರ ಉಲ್ಲೇಖ ಮಾಡಿಲ್ಲ .
ಹನ್ನೊಂದು ಗಂಟೆಗೆ ರೂಂ ತಲುಪಿ ದಿಂಬಿಗೆ ತಲೆ ಕೊಡುತ್ತಿದ್ದಂತೆ 'ಗೋರ್ರೋ ' ಎಂದು ನಿದ್ದೆ ಹತ್ತಿತ್ತು . ಅಲ್ಲಿಗೆ ನನ್ನ ಪ್ರಯಾಣ ಪ್ರಯಾಸ ಎರಡೂ ಅಂತ್ಯವಾಗಿತ್ತು .