ಎರಡೆರಡು ಬಾರಿ ಸರಿಯಾಗಿ ಓದಿದ ಮೇಲೆ ಕಾರ್ತೀಕ ಪತ್ರವನ್ನು ಜೋಪಾನವಾಗಿ ಫೈಲಿನ ಮಧ್ಯೆ ಇಟ್ಟ . ಉಮ್ಮಳಿಸಿ ಬಂದ ಖುಷಿಯನ್ನು ಒತ್ತಿಟ್ಟುಕೊಳ್ಳಲು ಸೋತು ತನ್ನಮ್ಮನಿಗೆ ವಿಷಯ ತಿಳಿಸಿದ . ಪಾರ್ವತಮ್ಮನೂ ಸಹ ಹರಕು ಬಾಯಿಗೆ ಎಂ-ಸೀಲ್ ಸಿಗದೆ ಒಂದಿಬ್ಬರಿಗೆ ಹೇಳಿದಳು . ಅಮೇರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನಕ್ಕೆ ಒಂದು ಕೋಲಾಟದ ತಂಡವನ್ನು ಕಳುಹಿಸಬೇಕೆಂದು ಸಂಸ್ಕೃತಿ ಇಲಾಖೆಯವರು ಪತ್ರದಲ್ಲಿ ಸೂಚಿಸಿದ್ದರು . ಆ ಪತ್ರಕ್ಕೆ ರೆಕ್ಕೆ ಪುಕ್ಕ ಮೂಡಿ ಊರಿನ ತುಂಬೆಲ್ಲಾ ಸುದ್ದಿ ಹಾರಾಡತೊಡಗಿತು . ಶಾಲೆ ತಪ್ಪಿಸಿ ಕೋಲಾಟಕ್ಕೆ ಹೋದ ಕಾರ್ತೀಕನಿಗೆ ಮೊದಲ ಬಾರಿಗೆ ತಾನು ಮಾಡಿದ್ದು ಸರಿ ಎನಿಸಿತು . ಸರ್ಕಾರದ ಸ್ಕೀಮುಗಳ ಅಂದಾಜಿದ್ದ ಆತ ಅಧಿಕೃತ ಸುದ್ದಿ ತರಲು ಶಿಮೊಗ್ಗಕ್ಕೆ ಹೋಗಿ ಬಂದ . ಅಧಿಕೃತವಾಗಿ ಸುದ್ದಿಯಾದ ಮೇಲೆ ಊರಿನ ಗಣ್ಯ ವ್ಯಕ್ತಿಗಳ ಸಾಲಿಗೆ ಆತನೂ ಸೇರಿದ . ಯಾವುದೋ ದಾನಿಗಳು ಐನೂರು ರೂಪಾಯಿ ಖರ್ಚು ಮಾಡಿ ಬ್ಯಾನರ್ ಸಹ ಹಾಕಿಸಿದರು . ಹೆಚ್ಚು ಹಣ ಖರ್ಚಾದರೂ ಸರಿಯೇ ಎಂದುಕೊಂಡು ತತ್ಕಾಲ್ ನಲ್ಲಿ ಪಾಸ್ಪೋರ್ಟ್ ಮಾಡಿಸಿ , ವೀಸಾಗೆ ಅರ್ಜಿ ಗುಜರಾಯಿಸಿದ . ಆದರೆ ಮುಖ್ಯ ಸಮಸ್ಯೆ ಅದರ ನಂತರ ಎದುರಾಯಿತು . ಕಾರ್ತೀಕ ಹಾಗೂ ಆತನ ಸ್ನೇಹಿತರು ಕಟ್ಟಿ ಬೆಳೆಸಿದ ಕೋಲಾಟದ ತಂಡ ಯಾವಾಗಲೋ ನಾಮಾವಾಶೇಷವಾಗಿತ್ತು . ಹತ್ತು ವರ್ಷದ ಹಿಂದೆ ಯುವ ಜನ ಮೇಳದಲ್ಲಿ ಈ ತಂಡವನ್ನು ಗುರುತಿಸಿದ್ದ ಸಂಸ್ಕೃತಿ ಇಲಾಖೆ ಪೂರ್ವಾಪರಗಳನ್ನು ತಿಳಿದುಕೊಳ್ಳದೆ ಪತ್ರ ಕಳುಹಿಸಿತ್ತು . ಗಟ್ಟಿಯಾಗಿ ಹೇಳಬೇಕೆಂದರೆ ಇವರ ಕೋಲಾಟದ ತಂಡ ಪೇಪರಿನ ಮೇಲೆ ಜೀವಂತವಾಗಿತ್ತು . ಪ್ರತಿ ವರ್ಷವೂ ಸರ್ಕಾರದವರು ಯಾವ್ಯಾವುದೋ ಸ್ಕೀಮಿನ ಅಡಿಯಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ,ಉಳಿಸುವ ಸಲುವಾಗಿ ಗೆಜ್ಜೆ , ಡೊಳ್ಳು , ಡ್ರಮ್ಮು ಎಲ್ಲವನ್ನು ಕಳುಹಿಸುತಿತ್ತು . ಮೊದ ಮೊದಲು ಶೇಂದಿ ಕುಡಿಯಲು ಅದನ್ನು ಅಡವಿಟ್ಟದ್ದೂ ಇದೆ . ಎಲ್ಲರೂ ಅದನ್ನೇ ಚಾಳಿ ಮಾಡಿಕೊಂಡು ಶೇಂದಿ ಅಂಗಡಿ ಗತ ಕಾಲದ ನಮ್ಮ ಸಂಸ್ಕೃತಿಯನ್ನು ತೋರಿಸುವ ಮ್ಯೂಸಿಯಂ ಆಯಿತು . ಅಂಗಡಿಯಲ್ಲಿ ಜಾಗ ಖಾಲಿಯಾಗಿ ಮಾಲೀಕ ಅದನ್ನು ಅಡವಿಟ್ಟುಕೊಳ್ಳಲು ನಿರಾಕರಿಸಲು ಶುರುಮಾಡಿದ ಮೇಲೆ ಅದು ಮನೆ ಮನೆಯ ಟೀವಿ ಸ್ಟ್ಯಾಂಡಿನ ಹಿಂದೆ ಬೆಚ್ಚಗೆ ಕುಳಿತುಕೊಳ್ಳುತಿತ್ತು . ಈಗ ಅವೆಲ್ಲಕ್ಕೂ ಜೀವ ಬಂದು ಈಜಿಪ್ಟ್ ನ ಮಮ್ಮಿಗಳು ಎದ್ದು ಕುಳಿತಂತೆ ಕುಳಿತಿತು . ಒಂದಿಬ್ಬರು ಮುದುಕರು ಕಾರ್ತೀಕನ ಮನೆಗೆ ಬಂದು ಕೋಲಾಟದ ಹಾಡು ಹೇಳಿ , ಅವಲಕ್ಕಿ ತಿಂದು ಕಾಫಿ ಕುಡಿದು ಹೋದರು . ಸಂಜೆಯಾದರೆ ಸಾಕು ಊರಿನಲ್ಲಿ ಹಾಡು , ಕೋಲಿನ ಚಿಟಿಕೆಯ ಸದ್ದು ಮೊಳಗುತಿತ್ತು . ಇದ್ದಕಿದ್ದಂತೆ ಇಡೀ ಊರೂ ಐವತ್ತು ವರ್ಷ ಹಿಂದೆ ಹೋದಂತೆ ಭಾಸವಾಗುತಿತ್ತು . ಅಡಿಗೆ ಮಾಡಲು ತಂದಿದ್ದ ಕಟ್ಟಿಗೆಯಲ್ಲಿ ಕೋಲಾಟದ ಕೋಲು ಮಾಡಿಕೊಳ್ಳುವ ಆಸೆಯಿಂದ ಕೈ ಹಾಕಿದ ಒಂದಿಬ್ಬರು ಗಂಡಸರು ಹೆಂಡತಿಯ ಕೈಯಲ್ಲಿ ಬೈಸಿಕೊಂಡರು . ಒಂದಿಬ್ಬರು ಕಾಡಿನ ಮರ ಕಡಿದು ಸಿಕ್ಕಿಬಿದ್ದು , ಒಬ್ಬ ಫಾರೆಸ್ಟ್ ಗಾರ್ಡು ಪ್ರತಿ ದಿನ ಗಸ್ತು ತಿರುಗುವಂತಾಯಿತು .
ಕಾರ್ತೀಕನಿಗೆ ಮಾತ್ರ ಒಂದು ತಂಡ ಕಟ್ಟುವುದು ದೊಡ್ಡ ಸವಾಲಾಯಿತು . ಅದಕ್ಕೇ ಒಂದು ಉಪಾಯ ಮಾಡಿ ಊರಿನಲ್ಲಿ ಸ್ಫರ್ಧೆಯನ್ನು ಏರ್ಪಡಿಸಿದ . ಎರಡು ತಂಡ ನೋಡ ನೋಡುತ್ತಲೇ ಸೃಷ್ಟಿಯಾಯಿತು . ಮುದುಕರು ಚಳ್ಳೆ-ಪಿಳ್ಳೆಗಳು ಎಂಬ ಯಾವ ಮುಲಾಜೂ ಇಲ್ಲದೇ ಎಂಟೆಂಟು ಜನ ಎರಡೂ ತಂಡದಲ್ಲಿ ಇದ್ದರು . ಶಾಲೆಯ ಬಯಲಿನಲ್ಲಿ ರಾತ್ರಿ ಇಡೀ ಕೋಲಾಟ ಆಡುವುದು ಬೆಳಿಗ್ಗೆ ಆರು ಗಂಟೆಗೆ ಯಾವ ತಂಡ ಆಯ್ಕೆಯಾಗಿದೆ ಎಂದು ಅನೌನ್ಸ್ ಮಾಡುವುದು ಎಂದು ನಿರ್ಧರಿಸಲಾಯಿತು . ಪೋಷಕರ ಸಭೆಗೆ ಒಂದು ದಿನವೂ ಕಾಣಿಸಿಕೊಳ್ಳದ ಮುಖಗಳು ಒಮ್ಮೆಲೇ ಶಾಲೆಯ ಕಡೆ ಮುಖ ಮಾಡಿದವು . ಬಯಲನ್ನು ಗುಡಿಸಿ, ಸಾರಿಸಿ ಎರಡು ಕವರುಗಂಬ ಹುಗಿದು ಅದಕ್ಕೆ ಅಡಿಕೆ ಗಳುಗಳನ್ನು ಕೂರಿಸಲಾಯಿತು . ಸ್ಪರ್ಧೆಯ ಕಾವು ಹೆಚ್ಚಿಸಲು ಬೆಳ್ಳಿಯ ಕಡಗವನ್ನೂ ತರಲಾಯಿತು . ಗೆದ್ದ ತಂಡಕ್ಕೆ ಬೆಳ್ಳಿಯ ಕಡಗ ಕೊಡುವುದು ಎಂದು ಘೋಷಣೆ ಮಾಡಲಾಯಿತು .
ಸ್ಪರ್ಧೆಯ ದಿನ ಊರಿನಲ್ಲಿ ಎಲ್ಲಿ ನೋಡಿದರೂ ನವಿಲುಗರಿ ಹೊತ್ತ ತಲೆಗಳು . ' ಜಲ್ ಜಲ್ ' ಎಂಬ ಗೆಜ್ಜೆಯ ಸದ್ದು . ಮೈಕಿನ ಮುಂದೆ ನಿರೂಪಕ ಕ್ಯಾಕರಿಸಿ ಧ್ವನಿ ಸರಿ ಮಾಡಿಕೊಂಡು ಮತ್ತೊಮ್ಮೆ ಸ್ಪರ್ಧೆಯ ನಿಯಮಗಳನ್ನು ಹೇಳಿದ . ಎರಡೂ ತಂಡಗಳ ನಾಯಕನಿಗೆ ತೆಂಗಿನಕಾಯಿ ಮುಟ್ಟಿಸಿ ಆಟ ಶುರುಮಾಡಲಾಯಿತು .
ಪ್ರತಿ ತಂಡಕ್ಕೂ ಹತ್ತು ನಿಮಿಷಗಳ ಸಮಯ . ಒಂದರ ನಂತರ ಒಂದು ತಂಡ ಬಂದು ತಮ್ಮ ಆಟ ಪ್ರದರ್ಶಿಸಿದರು . ಒಂದು ತಂಡ ಜಡೆ ಹಾಕಿದರೆ ಮತ್ತೊಂದು ತಂಡ ಜಡೆ ಬಿಚ್ಚಿತು . ಒಂದು ತಂಡ ಕೋಲಾಟ ಆಡುತ್ತಾ ಹೂವಿನ ಮಾಲೆ ಕಟ್ಟಿದರೆ ಮತ್ತೊಂದು ತಂಡ ಬೆಂಕಿ ಕಚ್ಚಿಕೊಂಡು ಕೋಲಾಟವಾಡಿತು . ಜಡ್ಜ್ ಮೆಂಟಿಗೆ ಕುಳಿತಿದ್ದ ಶಾಲೆಯ ಹೆಡ್ ಮೇಷ್ಟ್ರಿಗೆ ಪೀಕಲಾಟಕ್ಕೆ ಬಂತು . ರಾತ್ರಿ ಕಳೆದು ಬೆಳಗಾದರೂ ಎರಡು ತಂಡಗಳ ಅಂಕಗಳು ಸಮನಾಗೇ ಇತ್ತು . ಮತ್ತೆ ನಿರೂಪಕ ಕ್ಯಾಕರಿಸಿ ಕೆಮ್ಮಿ ಅತೀ ಗಂಭೀರ ಧ್ವನಿಯಲ್ಲಿ ಕೊನೆ ಹತ್ತು ನಿಮಿಷ ಕೊಡುವುದೆಂದೂ ಅದರಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಆಯ್ಕೆ ಮಾಡಲಾಗುವುದು ಎಂದು ಘೋಷಿಸಿದ . ಪುರದ ತಂಡ ಆಕರ್ಷಕವಾಗಿ ಕೋಲಾಟ ಆಡಿತಾದರೂ ಒಮ್ಮೆ ಕೈಯಲ್ಲಿದ್ದ ಕೋಲು ಬಿದ್ದು ಹೋಯಿತು , ಶ್ರೀನಗರದ ತಂಡ ಕೋಲು ಬೀಳಿಸಿಕೊಳ್ಳದೆ ಸಾಧಾರಣವಾಗಿ ಕೋಲಾಟ ಆಡಿತು .
ಗಂಟೆ ಗಟ್ಟಲೆ ಅಳೆದು ತೂಗಿದ ಮೇಲೆ ಪುರದ ತಂಡ ಆಯ್ಕೆಯಾಗಿದೆ ಎಂದು ಘೋಷಿಸಲಾಯಿತು . ನಿರೂಪಕ ಇನ್ನೂ ಮೈಕು ಆರಿಸುವ ಮೊದಲೇ " ಯಾರಲೇ ಅವ ಜಡ್ಜು ? " ಎಂದದ್ದು ಮೈಕಿನಿಂದಲೇ ಕೇಳಿತು . ಹೆಡ್ ಮೇಷ್ಟ್ರು ಯಾವ ರೀತಿ ಸಮರ್ಥಿಸಿ ಕೊಂಡರೂ ಜಡ್ಜ್ಮೆಂಟು ಸರಿಯಿಲ್ಲ ಎಂದು ಶ್ರೀನಗರದ ತಂಡ ಗಲಭೆ ಎಬ್ಬಿಸಿತು . ಕಾರ್ತೀಕ ಕೊನೆಯ ಅಸ್ತ್ರವೆಂಬಂತೆ ತೆಂಗಿನ ಕಾಯಿ ಮುಟ್ಟಿದ್ದು ನೆನಪಿಸಿ ಜಗಳ ಮಾಡಿದರೆ ದೈವದ ಕೋಪಕ್ಕೆ ಗುರಿಯಾಗುತ್ತೀರಿ ಎಂದು ಹೆದರಿಸಿದ . " ನಾವು ಕಾಯಿ ಮುಟ್ಟಿಲ್ಲಲೇ ನಮ ನಾಯಕ ಅಷ್ಟೇ ಮುಟ್ಟಿದ್ದು ಅವ ಅದ್ಕೆ ಸುಮ್ನೆ ಕೂತಾನೇ " ಎಂದು ಗಲಾಟೆ ಮಾಡಿದರು . ಜಡ್ಜ್ಮೆಂಟು ಕೊಟ್ಟ ಮೇಷ್ಟ್ರು ಕಳ್ಳನಂತೆ ಸುಮ್ಮನೆ ಹಿಂದಿನಿಂದ ಹೊರಟು ಹೋದರು . ಜಗಳ ಬಿಡಿಸಲು ಹೋದ ಕಾರ್ತೀಕನಿಗೂ ಒಂದೆರಡು ಲಾತಾ ಬಿಗಿದು ಕಳುಹಿಸಿದರು . ಒಬ್ಬರಿಗೊಬ್ಬರು ಮುಖ ಮೂತಿ ನೋಡದೆ ಹೊಡೆದಾಡಿಕೊಂಡರು . ಯಾವ ತಂಡವೂ ಅಮೆರಿಕಾ ಇರಲಿ ಒಂದು ಎರಡಕ್ಕೂ ಹೋಗಲು ಸಾಧ್ಯವಾಗದಂತೆ ಕೈ ಕಾಲು ಮುರಿದು ಕೊಂಡರು .
ಮಾಡಿದ ಖರ್ಚನ್ನಾದರೂ ವಸೂಲಿ ಮಾಡಲು ಕಾರ್ತೀಕ ಶಿವಮೊಗ್ಗಕ್ಕೆ ಹೋದ . ಅಮೆರಿಕಾದ ಕನಸಿನ ಹೊಡೆತದಲ್ಲಿ ಆತ ಲೆಕ್ಕವನ್ನೂ ಸರಿಯಾಗಿ ಬರೆಯದೇ ಇದ್ದಿದ್ದರಿಂದ ಅದೂ ಆತನಿಗೆ ಸಿಗದೇ ಹೋಯಿತು . ಈಗ ಕವರು ಗಂಬದ ನಡುವೆ ತೂಗುಬಿಟ್ಟಿರುವ ಅಡಿಕೆಯ ಗಳು , ತಿಂದು ಬಿಸಾಡಿದ ಮಸಾಲಾ ಮಂಡಕ್ಕಿ ಪೊಟ್ಟಣಗಳು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾ ಅನಾಥವಾಗಿ ಬಿದ್ದಿವೆ .