"ಈಗೇನಂತೋ?" ಫೈಲುಗಳ ಅಭೇದ್ಯ ಕೋಟೆಯೊಳಗೆ ಹುದುಗಿಕೊಂಡಿದ್ದ ಈಶ್ವರ ನಾಯಕರು ತಮ್ಮ ಅಸಿಸ್ಟೆಂಟ್ ವಿಶ್ವನಾಥನ ಬಳಿ ಕೇಳಿದರು.
ಅವರ ಮಾತಿನಲ್ಲಿ ನಿರ್ಭಾವುಕತೆ, ಅಲಕ್ಷ , ನಿರ್ಲಿಪ್ತತೆ ಎಲ್ಲವೂ ಇತ್ತು. ತಹಶೀಲ್ದಾರ್ ಆಗಿದ್ದ ಹೊಸದರಲ್ಲಿ ಇಂತಹ ಸಣ್ಣ ಸಣ್ಣ ಪ್ರತಿಭಟನೆಗೂ ಅವರು ಹೋಗಿ ಅಹವಾಲು ಸ್ವೀಕರಿಸಿ, ಆಶ್ವಾಸನೆ ನೀಡುವ ಉಮೇದಿತ್ತು. ಸರ್ವಿಸಿನಲ್ಲಿ ಏಳು-ಬೀಳು ಕಂಡ ಮೇಲೆ ಪ್ರತಿಭಟನೆಗಳ ಒಳ ಮರ್ಮ ಅವರಿಗೆ ತಿಳಿಯಿತು. ದಿನಾ ಸಾಯುವವರಿಗೆ ಅಳುವವರ್ಯಾರು ಎಂಬ ಸಣ್ಣ ಅಲಕ್ಷವೂ ಬಂದಿದ್ದಿರಬಹುದು.
"ಅರ್ಜಿ ಅಲ್ಲಿಟ್ಟು ಹೋಗ್ರಿ" ಎಂದು ಅವರು ಎಷ್ಟು ಬಾರಿ ಹೇಳಿದ್ದರೋ ಏನೋ? ಪ್ರತಿಭಟನೆಗಳು ಕಷ್ಟ ಪರಿಹಾರದ ಬದಲಾಗಿ ವೋಟು ಸೆಳೆದುಕೊಳ್ಳುವ ದಾರಿಯಾಗಿದೆ. ಈಗಂತೂ ಅದು ಕೇವಲ ವಿರೋಧ ಪಕ್ಷದ ಪಿತೂರಿಯೇ ಆಗಿರುತ್ತದೆ. ಒಂದು ಅರ್ಧ ಗಂಟೆ ಕೂಗಿ ಪತ್ರಕರ್ತರು ವರದಿ ಮಾಡಿದ ಮೇಲೆ ಹೋಗುತ್ತಾರೆ ಎಂದು ತಿಳಿದಿದ್ದ ನಾಯಕರಿಗೆ ಆಶ್ಚರ್ಯವಾಗುವಂತೆ ಘಟನೆಗಳು ನಡೆದವು. ಎರಡು ತಾಸಾದರೂ ಯಾರೂ ಹೊರಡಲೊಲ್ಲರು!.
ನಂತರವೇ ನಾಯಕರು ಅವರ ಧಿಕ್ಕಾರದ ಕೂಗಿಗೆ ಕಿವಿ ಹಚ್ಚಿದ್ದು. ದಿಲ್ಲಿಯ ದೊರೆಗಳಿಂದ ಹಿಡಿದು ವಿಎ ವರೆಗೆ ಯಾರಿಗೂ ಭೇದ-ಭಾವ ತೋರದೆ ಜನರು ಧಿಕ್ಕಾರ ಕೂಗುತ್ತಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಆಗುವವರೆಗೂ ಪ್ರತಿಭಟನೆ ತಣ್ಣಗಾಗುವ ರೀತಿ ಕಾಣಲಿಲ್ಲ.
ನಾಯಕರು ಇಪ್ಪತ್ತು ವರ್ಷಗಳಿಂದ ಸಾಗರದ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇಡೀ ರಾಜ್ಯದ ಮೂವತ್ತು ಪರ್ಸೆಂಟ್ ವಿದ್ಯುತ್ ಒದಗಿಸುವ ಸಾಗರಕ್ಕೇ ಕುಡಿಯುವ ನೀರಿನ ಸಮಸ್ಯೆ ಬರಬಹುದು ಎಂದು ಯಾರೂ ತಿಳಿದಿರಲಿಲ್ಲ. ನಾಯಕರು ಮೊದಲು ಬಂದಾಗ ಮಳೆ ನೋಡಿ ಭಯಗೊಂಡಿದ್ದರು. "ಮಾರಾಯಾ ಈ ಊರಲ್ಲಿ ಮಳೆ 'ಬೀಳಲ್ಲ', ಕೊಡದಿಂದ ಸುರಿದಂಗೆ ಸುರಿಯುತ್ತೆ" ಎಂದು ಚಟಾಕಿಯನ್ನೂ ಹಾರಿಸಿದ್ದರು.
ಸಾಗರವನ್ನು ನಗರವೆಂದರೆ ತಪ್ಪಾದೀತು. ಯಾವುದೋ ರಾಜಾನೋ, ಸಂಸ್ಥಾನವೋ ಸರಿಯಾದ ಪ್ಲಾನು ಹಾಕಿ ಕಟ್ಟಿದಂತೆ ಅದು ಕಾಣುತ್ತಿರಲಿಲ್ಲ. ಜಾಗವಿದ್ದಲ್ಲಿ ಮನೆ ಕಟ್ಟಿ, ಅಂಗಡಿ ಮಾಡಿ, ನಂತರ ಶಾಲೆ ಅದೂ-ಇದೂ ಕಟ್ಟಿ ರೂಪುಗೊಂಡಂತಿತ್ತು. ನಾಯಕರೂ ಸಹ ಹಾಗೆಯೇ ತಿಳಿದಿದ್ದರು. ಆದರೆ ಆಫೀಸಿನಲ್ಲಿ ಹಳೆ ಫೈಲು ಸಿಕ್ಕಾಗ ನಾಯಕರು ದಿಗ್ಬ್ರಾಂತರಾಗಿ ಹೋಗಿದ್ದರು. ಸಾಗರಕ್ಕೆ ಸಾವಿರ ಸಾವಿರ ವರ್ಷಗಳ ಇತಿಹಾಸವಿದೆ. ಕೆಳದಿಯ ಸದಾಶಿವ ನಾಯಕ ದೊಡ್ಡ ಕೆರೆಯೊಂದನ್ನು ಕಟ್ಟಿಸಿದ್ದ. ಆಗಿನ ಕಾಲಕ್ಕೆ ಅದನ್ನು ಸದಾಶಿವ ಸಾಗರ ಎಂದು ಕರೆಯುತ್ತಿದ್ದರು. ಅದರ ಗಾತ್ರವನ್ನು ನೋಡಿ ಜನ ಅದನ್ನು 'ಸಾಗರ' ಎಂದು ಉದ್ಗರಿಸುತ್ತಿದ್ದರು. ಅನ್ವರ್ಥ ನಾಮವೇ ಊರಿನ ಹೆಸರಾಯಿತು. ಕ್ರಮೇಣ ಕೆರೆಯ ಗಾತ್ರ ಕುಗ್ಗುತ್ತಾ ಹೋಯಿತು ಈಗ ಕೇವಲ ಹೆಸರಿಗೆ ಒಂದು ಕೆರೆಯಿದೆ ಅಷ್ಟೇ. ಅದನ್ನು ಗಣಪತಿ ಕೆರೆ ಎಂದು ಗುರುತಿಸುತ್ತಾರೆ.
ಅಷ್ಟು ವೈಭವೋಪೇತವಾಗಿದ್ದ ಊರು ಈಗ ಹೀಗೇಕಾಗಿದೆ? ಎಂದು ನಾಯಕರು ಚಿಂತಿಸಿದ್ದರು. ಆದರೆ ಇದೇ ಕಾರಣ ಎಂಬ ಯಾವ ಉತ್ತರವೂ ಅವರಿಗೆ ಹೊಳೆದಿರಲಿಲ್ಲ. ಜನರ ಮನಸ್ಥಿತಿ ಇರಬಹುದು, ಆರ್ಥಿಕತೆಯಿರಬಹುದು, ಪರಕೀಯರ ದಾಳಿಯಿರಬಹುದು ಅಥವಾ ಇವೆಲ್ಲವೂ ಇರಬಹುದು.
ಖುದ್ದು ನಾಯಕರೇ ಹೋಗಿ ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿದರು. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಸಾಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಅರ್ಜಿಯಲ್ಲಿ ಬರೆಯಲಾಗಿತ್ತು . ಈ ಜನಕ್ಕೆ ಬುದ್ಧಿಯೇ ಇಲ್ಲವೇ ? ಎಂದುಕೊಂಡರು ನಾಯಕರು. ಡ್ಯಾಮ್ ಕಟ್ಟುವಾಗಲೇ ಅದರ ಉಪಯೋಗವನ್ನು ಪೂರ್ವ ನಿಗದಿ ಮಾಡಲಾಗುತ್ತದೆ. ಲಿಂಗನಮಕ್ಕಿಯ ನೀರನ್ನು ವಿದ್ಯುತ್ ಉತ್ಪಾದನೆಗೆ ಅಷ್ಟೇ ಬಳಸಬೇಕು. ಅದರ ನೀರನ್ನು ನೀರಾವರಿಗೋ, ಕುಡಿಯಲೋ ಅದನ್ನು ಬಳಸಿದರೆ ಅದು ಅಪರಾಧ. ತಾವೇ ಎಷ್ಟೋ ಬಾರಿ ನೀರಾವರಿಗೆ ಹಾಕಿಕೊಂಡ ಅಕ್ರಮ ಪಂಪುಗಳನ್ನು ತೆಗೆಸಿ ಬಂದಿದ್ದರು. ಈಗ ಆ ಅರ್ಜಿಯನ್ನು ನೋಡಿ 'ಥತ್!' ಎಂಬ ಉದ್ಗಾರವಷ್ಟೇ ಅವರ ಬಾಯಿಂದ ಬಂದದ್ದು.
"ಅಲ್ಲೋ ವಿಶ್ವನಾಥ ಈ ಜನಕ್ಕೆ ಏನು ಬಂದಿದೆ ಅಂತ? ಎಲ್ಲಿಂದಲೋ ನೀರು ತರಬೇಕಂತೆ. ಅದು ಆ ಊರವರ ಹಕ್ಕಲ್ಲವೇನೋ?. ಅವರ ನೀರು ಕಿತ್ತು ಇವರಿಗೆ ಕೊಡಬೇಕೆ? ಐದಾರು ವರ್ಷದ ಹಿಂದೆ ಈ ಅಕೇಶಿಯಾ ಪ್ಲಾಂಟೇಶನ್ ಬೇಡವೇ ಬೇಡ ಎಂದು ನಾನು ಗಂಟಲು ಹರಿಯುವ ಹಾಗೆ ಕೂಗಿದ್ರೂ ಡಿಸಿ ಹತ್ರ ಹೋಗಿ ನನ್ನ ಮೇಲೆ ಪುಕಾರು ಮಾಡಿದ್ರು ಅಲ್ವ ಈ ಜನ. ಈಗ ಅನುಭವಿಸ್ತಾ ಇದಾರೆ ನೋಡು", ಈಶ್ವರ ನಾಯಕರು ತಮ್ಮ ಕೋಪವನ್ನು ವಿಶ್ವನಾಥನ ಮೇಲೆ ತೀರಿಸಿಕೊಂಡರು.
"ಸಾರ್, ಪ್ಲಾಂಟೇಷನ್ನಿಗೂ ನೀರಿಗೂ ಎಂಥಾ ಸಂಬಂಧ ಸಾರ್?", ಡಿಗ್ರಿ ಪಾಸಾಗದ ವಿಶ್ವನಾಥ ತನ್ನ ದಡ್ಡತನ ಪ್ರದರ್ಶಿಸಿದ.
"ನಿಮ್ ತಲೇಲಿ ಏನಿದೆ? ಆ ಅಕೇಶಿಯಾ ನೋಡಿದೀಯಾ? ನಾಲ್ಕೇ ವರ್ಷದಲ್ಲಿ ಭೂತಾಕಾರಕ್ಕೆ ಬೆಳೆಯುತ್ತೆ. ನೀರು ನಿಮ್ಮಪ್ಪ ಹಾಕ್ತಾನಾ? ಅದರ ಬೇರು ಆಳಕ್ಕೆ ಇಳಿದು ಅಂತರ್ಜಲ ಎಲ್ಲಾ ಹೀರುತ್ತೆ. ನಮ್ಮ ಸರ್ಕಾರದವರೇನು ಬಂಜರು ಭೂಮಿಯಲ್ಲಿ ಪ್ಲಾಂಟೇಶನ್ ಹಾಕ್ತಾರೆ ಅನ್ಕೊಂಡಿದೀಯ? ಇರೋ ಕಾಡು ಕಡಿದು ಅಲ್ಲೇ ಪ್ಲಾಂಟೇಶನ್ ಮಾಡ್ತಾರೆ. ಅಷ್ಟು ವೈವೀದ್ಯ ಮರಗಳಿರೋ ಕಾಡು ಕಡಿದು ಒಂದೇ ಜಾತಿಯ ಮರ ಹಾಕಿದ್ರೆ ಇಕೋ ಸಿಸ್ಟಮ್ ಹಾಳಾಗಿ ಹೋಗುತ್ತೆ. ನಾನು ಇದ್ನೇಲ್ಲಾ ಎಷ್ಟು ಬಡಕೊಂಡ್ರು ಊರಿಗೊಂದು ಅರಣ್ಯ ಸಮಿತಿ ಮಾಡಿ ಸರ್ಕಾರದಿಂದ ಬರೋ ಫಂಡ್ ಎಲ್ಲಾ ನುಂಗಿ ಹಾಕಿದ್ರು." ಒಂದೇ ಉಸಿರಿಗೆ ನಾಯಕರು ಎಲ್ಲವನ್ನೂ ಹೇಳಿದರು.
"ನೀವ್ ಹೇಳಿದ್ದೆಲ್ಲಾ ಸರಿ ಸಾರ್. ಆದ್ರೆ ಜನ ಕೇಳ್ಬೇಕಲ್ಲ. ವೋಟು ಹಾಕಿಲ್ವ ನೀರು ಕೊಡಿ ಅಂತಾರೆ. ಎಲ್ಲಿಂದ ನೀರು ತಂದೆ ಎಂದು ಅವರಿಗ್ಯಾಕೆ ಬೇಕು ಸಾರ್ ?" ವಿಶ್ವನಾಥ ತನ್ನ ಚಾಟಿ ಬೀಸಿದ.
ನಾಯಕರು, "ತಡಿ ಅವರ ಹತ್ರ ಮಾತಾಡಣ" ಎಂದು ಹೊರಗೆ ಬಂದರು.....
Add caption |