21/7/15

ಗರತಿ

ಬೆಳಿಗ್ಗೆ ಬೇಗ ಎದ್ದು ಬಾಗಿಲು ಸಾರಿಸಿ ರಂಗೋಲಿ ಇಡುವ ಸಂಪ್ರದಾಯವನ್ನು ನಾನು ಎಂದೋ ಬಿಟ್ಟಾಗಿದೆ. ಅಲಾರಾಂ ಸದ್ದಿಗೂ ಎಚ್ಚರವಾಗದಂತಹ ನಿದ್ದೆ ನನ್ನದು. ಮಸೀದಿಯ 'ಅಲ್ಲಾ ಹೋ ಅಕ್ಬರ್ ' ನನ್ನನ್ನು ಎಬ್ಬಿಸಿಬಿಟ್ಟಿತು. ಮತ್ತೆಷ್ಟೆ ಕಷ್ಟ ಪಟ್ಟರೂ ನಿದ್ದೆಯೆ ಬರಲೊಲ್ಲದು. ಯಾರೋ ಕಾಲಿಂಗ್ ಬೆಲ್ ಮಾಡಿದ ಶಬ್ದವಾಯಿತು .ಅದು ನೀನೆ .....ನನ್ನ so called ಗಂಡ. ಅದ್ಯಾವುದೋ ಕಾಣದ ದೇಶದಿಂದ, ಮೀಟಿಂಗ್, ಈಟಿಂಗ್ ಎಲ್ಲಾ ಮುಗಿಸಿಕೊಂಡು ಬಂದು ನಿಂತಿದ್ದೆ. 
ನೀನು ಯಾವತ್ತೂ ನನ್ನ ಗಂಡನ ಸ್ಥಾನ ತುಂಬಲೇ ಇಲ್ಲ.........
ಗಂಟೆಗೊಂದು ಮಾತನಾಡುವ ನೀನೆಲ್ಲಿ, ಪಟಪಟನೆ ಮಾತಿನ ಮುತ್ತುದುರಿಸುವ ಅವನೆಲ್ಲಿ. ಇವತ್ತಿಗೂ ಅವನ ಮುಂದೆ ನೀನು ತೃಣಕ್ಕೆ ಸಮಾನ. ನನ್ನೆಲ್ಲಾ ಕಷ್ಟಗಳಿಗೆ ಕಿವಿಯಾಗುತ್ತಿದ್ದ, ನನ್ನ ನಗುವಿನಲ್ಲಿ ನಗುವಾಗಿ, ಅಳುವಿನಲ್ಲಿ ಅಳುವಾಗಿ ನನ್ನ ಜೊತೆಗೇ ಇರುತ್ತಿದ್ದ. ನಾನು ನಿನ್ನ ಬಿಟ್ಟು ಹೋಗದೇ ಇರುವುದಕ್ಕೂ ಅವನೇ ಕಾರಣ, ನೀನು ತೀರಾ ನನ್ನನ್ನು ರಾತ್ರಿ ಕೈ ಹಿಡಿದೆಳೆದಾಗ, ನೀನೆ ಅವನು ಎಂದು ನನ್ನೆಲ್ಲಾ ಭಾವನೆಗಳನ್ನು ಅದುಮಿಟ್ಟುಕೊಳ್ಳುತ್ತಿದ್ದೆ. ನಿಮ್ಮ ಭಾಷೆಯಲ್ಲಿ ಇದನ್ನೆ ಗರತಿ, ಮುತ್ತೈದೆ ಎನ್ನುತ್ತಾರೋ ಏನೋ ?...........
ಒಳ್ಳೆಯ ಗಂಡನಲ್ಲಿ ಅಪ್ಪ ಕಾಣುತ್ತಾರಂತೆ, ನೀನು ನನಗೆ ಮನುಷ್ಯನಾಗಿ ಕಂಡಿದ್ದೆ ನನಗೆ ಅನುಮಾನ. ನನ್ನ ಅಂತರಾಳಕ್ಕೆ ಇಳಿಯುವ ಪ್ರಯತ್ನವನ್ನೇ ನೀ ಮಾಡಲಿಲ್ಲ , ನನ್ನ ಸಮ್ಮತಿಯೇ ಇಲ್ಲದೇ ನನ್ನ ಮೇಲೆರಗಿದ ನೀನು ಅತ್ಯಾಚಾರಿಯಲ್ಲದೇ ಇನ್ನೇನು? ಮದುವೆ ಕೇವಲ ಕಾಮಕ್ಕೆ ಸಿಕ್ಕ ಲೈಸೆನ್ಸ್ ಅಲ್ಲ, ಅದು ಮನಸ್ಸುಗಳ ಹೊಂದಾಣಿಕೆ ಎಂದು ನಿನಗೆ ಅರ್ಥ ಮಾಡಿಸುವುದಾದರೂ ಹೇಗೆ ? ..........
ಇಲ್ಲ ನನ್ನ ದೇಹ ಮಾತ್ರ ನಿನಗೆ ,ನನ್ನ ಮನಸ್ಸು ಯಾವತ್ತೂ ನಿನಗೆ ಸಿಗುವುದಿಲ್ಲ, ಯಾವುದೇ ಕಾರಣಕ್ಕೂ ..........
ಬಾಗಿಲು ತೆಗೆದು, ಮತ್ತೆ ಮಲಗಿ ನನ್ನ ಗೆಳೆಯನ ಕನಸು ಕಾಣಲು ಯತ್ನಿಸಿದೆ. ಈಗ ನಾನು ನನ್ನ ಜೀವತಿಂಕೆ ಕಾಪಾಡಿಕೊಳ್ಳುವುದು ಕೇವಲ ಅವನ ನೆನಪುಗಳಿಂದ ಮಾತ್ರ .....................
ಮತ್ತೆ ಮಸೀದಿಯ 'ಅಲ್ಲಾ ಹೋ ಅಕ್ಬರ್ '..............
ಬಾಗಿಲು ತೆರೆದು ಬಂದು ಮಲಗಿದವಳಿಗೆ ಅವನ ನೆನಪು ಇವತ್ತು ಎಂದಿಗಿಂತಲೂ ಹೆಚ್ಚಾಗಿ ಕಾಡತೊಡಗಿದೆ. ಅವನ ಕುರಿತು ಏನೆಂದು ಹೇಳಲಿ? ನನ್ನ ಪತಿ ಅವನ ಪಾದದ ಧೂಳಿಗೆ ಸಮಾನ ಎಂದಷ್ಟೇ ಹೇಳಬಲ್ಲೆ. ಅಷ್ಟೇ ಮಾತು ಸಾಕು ಅವನ ವ್ಯಕ್ತಿತ್ವ ವಿಮರ್ಶೆಗೆ! ಅವನ ತುಂಟಕಣ್ಣುಗಳ ನೋಟವನ್ನು ಎದುರಿಸಲಾರದೆ ನಾಚಿದ್ದು ಎಷ್ಟು ಬಾರಿಯೋ ಲೆಕ್ಕವಿಲ್ಲ. ಅವನೂ ನನ್ನನ್ನು ಅಷ್ಟೇ ಹಚ್ಚಿಕೊಂಡಿದ್ದ ಎನಿಸುತ್ತದೆ. ನನ್ನ ಎಲ್ಲಾ ಭಾವನೆಗಳಿಗೆ ಸ್ಪಂದಿಸುತ್ತಿದ್ದ. ಆವತ್ತು ಕಾರಣ ಹೇಳದೆ ಅವನೆದುರು ಮುಖ ತಿರುಗಿಸಿ ಬಂದು, ಸ್ನೇಹದ ಕೊಂಡಿಯನ್ನು ಕಳಚಿ ಮದುವೆಯ ಸಪ್ತಪದಿ ತುಳಿದಿದ್ದೆ ನಾನು. ಇಂದಿಗೂ ಅವನ ಕುರಿತ ನೆನಪುಗಳೂ ಸಹ ಖುಷಿ ಕೊಡುವಷ್ಟು ಒಳ್ಳೆಯವನು ಆತ!
ಛೆ! ಅವನ ನೆನಪಿನಿಂದಲೋ ಅಥವಾ ಪತಿಯ ಹಿಂದಿರುವಿಕೆಯಿಂದಲೋ! ನಿದ್ರೆ ಹತ್ತದೆ ಎದ್ದು ಮುಖ ತೊಳೆದು ಅಡುಗೆಮನೆಗೆ ಬಂದೆ. ಎಲ್ಲೋ ದೂರದಲ್ಲಿ ಪುಟ್ಟ ಕಾಲ್ಗಳ ಗೆಜ್ಜೆಸದ್ದು, ತೊದಲುಮಾತು. "ಅಪ್ಪಾ, ಅಮ್ಮ ಯಾವಾಗ ಬರ್ತಾಳೆ? ದೇವರಿರುವ ಊರು ಇಲ್ಲಿಂದ ತುಂಬಾ ದೂರಾನಾ? ಅದ್ಕೇ ಅಮ್ಮಾ ಇನ್ನೂ ಬಂದಿಲ್ವಾ? ನಂಗೆ ಅಮ್ಮ ಬೇಕು" ಎಂದಿದ್ದನ್ನು ಕೇಳಿ ಕಿಟಕಿಯತ್ತ ಹೋದೆ. ಅಡುಗೆಮನೆಯ ಕಿಟಕಿಯಿಂದ ಎದುರುಮನೆಯ ಚಿತ್ರಣ ಸ್ಪಷ್ಟವಾಗಿ ಮೂಡಿತ್ತು. ಹೊಸದಾಗಿ ಬಂದವರಿರಬೇಕು. ಮಗಳ ಮಾತಿಗೆ ಉತ್ತರಿಸಲಾರದೆ ಅಪ್ಪ ತಬ್ಬಿಕೊಂಡು ಕಣ್ಣೀರಿಡುತ್ತಿದ್ದ. ಯಾರೆಂದು ನೋಡಿದೆ...... ಓಹ್!
ಅದೇ ನನ್ನ ತುಂಟಕಣ್ಣುಗಳ ಹುಡುಗ! ನನ್ನ ನೆನಪುಗಳಲ್ಲೇ ನನ್ನೊಡನೆ ಇರುತ್ತಿದ್ದ ಗೆಳೆಯ! ಆದರೀಗ ಅವನ ಕಂಗಳಲ್ಲಿ ಉತ್ಸಾಹವಿರಲಿಲ್ಲ. ಎಂದೂ ಕಾಣದಷ್ಟು ಆತಂಕವಿತ್ತು. "ಅದಿತಿ ಪುಟ್ಟಾ, ಅಮ್ಮ ಬೇಗ ಬಂದುಬಿಡ್ತಾಳೆ. ಆದರೆ ನೀ ಹಠಮಾಡದಿದ್ರೆ ಮಾತ್ರ. ಈಗ ಹಾಲು ಕುಡಿ ಬಾ" ಎನ್ನುತ್ತಾ ನನ್ನದೇ ಹೆಸರಿನ ಮಗುವನ್ನೆತ್ತಿಕೊಂಡು ಒಳಹೋದನವನನ್ನು ನೋಡಿ ಕಣ್ಣು ತೇವವಾಯಿತು.
ಮನಸ್ಸಲ್ಲೇನೋ ದ್ವಂದ್ವ. ಬಯಸಿದ್ದ ಹುಡುಗನನ್ನು ಕಣ್ಣೆದುರೇ ಕಂಡ ಖುಷಿ ಒಂದೆಡೆಯಾದರೆ, ಅವನ ಈಗಿನ ಸ್ಥಿತಿ ನೆನೆದು ಆಗುತ್ತಿರುವ ದುಃಖ ಇನ್ನೊಂದೆಡೆ. ಹಾಗೇ ಒಮ್ಮೆ ಯೋಚಿಸಿದೆ- ದುಸ್ತರವಾದ ನನ್ನ ಜೀವನವನ್ನು ನೆನೆದು ಅಳುತ್ತಾ ಕೂರುವ ಬದಲು ಒಂದೊಳ್ಳೆ ತಾಯಿಯಾಗೋಣ ಎನಿಸಿತು; ಆ ತಾಯಿಲ್ಲದ ಪುಟ್ಟ ಕಂದ ಹಾಗೂ ಅದರಪ್ಪ ಇಬ್ಬರಿಗೂ! ಮುಖದಲ್ಲಿ ಮಂದಹಾಸ ಮೂಡಿತು. ಏಕೋ ಮನೆಮುಂದೆ ರಂಗೋಲಿಯಿಡುವ ಮನಸ್ಸಾಯಿತು. ಬಾಗಿಲು ಸಾರಿಸಿ ಇಟ್ಟ ರಂಗೋಲಿಯಲ್ಲಿ ನವಿಲಿನ ಚಿತ್ತಾರ ಸೊಗಸಾಗಿ ಮೂಡಿಬಂದಿತ್ತು-ಮನಸ್ಸಿನಲ್ಲಿ ಮೂಡಿದ ಹೊಸಕನಸು-ಉತ್ಸಾಹಕ್ಕೆ ರಂಗುತುಂಬಿದಂತೆ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ