15/6/16

ಒಂದೂರಲ್ಲೊಂದಿನ

ಪ್ರವಾಸ ಕಥನಗಳನ್ನು ನಮ್ಮ ಕೆಲವು ಬರಹಗಾರರು ಕೇವಲ ಎಲ್ಲಿಗೆ ಹೋದೆ ? ಹೇಗೆ ಹೋದೆ ? ಏನೇನು ತಿಂದೆ ? ಇಷ್ಟಕ್ಕೇ ಸೀಮಿತಗೊಳಿಸಿಬಿಡುತ್ತಾರೆ . ಎಲ್ಲರಿಗೂ ಕಾಣುವ ವಿಷಯಗಳನ್ನು ಬರೆಯುವುದು ಅನಗತ್ಯ ಎಂಬುದು ನನ್ನ ಅನಿಸಿಕೆ . ಯಾವ ವ್ಯಕ್ತಿಗೆ ತಾನಿರುವ ಜಾಗದಲ್ಲೇ ಕುತೂಹಲವಿಲ್ಲವೋ, ಆತ ಪ್ರವಾಸ ಮಾಡುವುದು ಸಂಪನ್ಮೂಲದ ಪೋಲು ಅಷ್ಟೇ . ನಾನು ಬರೆಯುತ್ತಿರುವ ಈ ಪ್ರವಾಸ ಕಥನ ಮೈಸೂರಿನಿಂದ ಶುರುವಾಗುವುದಿಲ್ಲ . 'ಮೈಸೂರು ಟು ಊಟಿ' ಎಂದು ಗೂಗಲ್ ಮಾಡಿದರೆ ಅದೇ ನಿಮಗೆ ನಂಜನಗೂಡು , ಗುಂಡ್ಲುಪೇಟೆ ಮಾರ್ಗ  ತೋರಿಸುತ್ತದೆ . ಗುಂಡ್ಲುಪೇಟೆಯವರೆಗೂ ಸುಗಮವಾಗಿ ಸಾಗಿಬಿಡಬಹುದು . ಗುಂಡ್ಲುಪೇಟೆಯಿಂದ ಬಲಕ್ಕೆ ತಿರುಗಿದರೆ ಕೇರಳದ ವಯ್ನಾಡಿನ ಕಡೆಗೆ ಹೋಗುತ್ತದೆ , ನೇರವಾಗಿ ಸಾಗಿದರೆ ತಮಿಳುನಾಡಿನ ನೀಲಗಿರಿ ಜಿಲ್ಲೆ ತಲುಪುತ್ತೇವೆ .
ನನಗೆ ಈ ದಾರಿಯಲ್ಲಿ ಸಾಗಿದರೆ ಮೊದಲು ನೆನಪಾಗುವುದೇ ' ವೀರಪ್ಪನ್ ' . ನಾನು ಚಿಕ್ಕವನಿದ್ದಾಗ ಅಲ್ಲ ಮೊನ್ನೆ ಮೊನ್ನೆಯ ತನಕ ಒಬ್ಬ ವೀರಪ್ಪನ್ ನ ಹಿಡಿಯೋಕೆ ಆಗಿಲ್ವ ? ಎಂದೇ ಅನಿಸುತಿತ್ತು . ಒಮ್ಮೆ ಆ ಜಾಗಗಳಲ್ಲಿ ಓಡಾಡಿ ಬಂದ ಮೇಲೆ ನನ್ನ ಅಜ್ಞಾನದ ಅರಿವಾಯಿತು . ಗುಂಡ್ಲುಪೇಟೆ ದಾಟಿದ ಮೇಲೆ ಬಂಡೀಪುರ ರಿಸರ್ವ್ ಫಾರೆಸ್ಟ್ ಮೂಲಕ ನಾವು ಸಾಗಬೇಕು . ಕರ್ನಾಟಕ ,ತಮಿಳುನಾಡು ಹಾಗೂ ಕೇರಳ ಈ ಮೂರೂ ರಾಜ್ಯಗಳು ಇಲ್ಲಿ ಬಂದು ಸಂಧಿಸುತ್ತವೆ . ಪೂರ್ವಘಟ್ಟಗಳು ಮುಗಿದು ಪಶ್ಚಿಮಘಟ್ಟದ ಸುಂದರ ಸಹ್ಯಾದ್ರಿ ಪರ್ವತ ಶ್ರೇಣಿಗಳು ಶುರುವಾಗುವುದು ಇಲ್ಲಿಂದಲೇ . ಪಾಲಾರ್ ನದಿಯೇ ಕರ್ನಾಟಕ ಹಾಗೂ ತಮಿಳುನಾಡಿನ ಗಡಿ . ಇದೇ ನದಿಯಲ್ಲೇ ವೀರಪ್ಪನ್ ತನ್ನ ರಕ್ತ-ಸಿಕ್ತ ಕೈಗಳನ್ನು ತೊಳೆದುಕೊಂಡಿದ್ದ . ಹದಿನೆಂಟು ಸಾವಿರ ಹೆಕ್ಟೇರು ಕಾಡಿಗೆ ರಾಜನಂತೆ ಮೂವತ್ತಾರು ವರ್ಷ ಇಡೀ ಕಾಡನ್ನೇ ನಡುಗಿಸಿದ . ಇಲ್ಲಿನ ವನ್ಯ ಸಂಪತ್ತು ಎಷ್ಟಿದೆ ಎಂದರೆ ಈಗಲೂ ಕಾಡು ಪ್ರಾಣಿಗಳನ್ನು ರಸ್ತೆ ಬದಿಯಲ್ಲೇ ನೋಡಬಹುದು . ವೀರಪ್ಪನ್ ಕಾಲಕ್ಕೆ ಇನ್ನೆಷ್ಟು ಸಂಪತ್ತು ಇದ್ದಿರಬೇಡ ? . ಆತ ಒಬ್ಬನೇ ಸುಮಾರು ಎರಡು ಸಾವಿರ ಆನೆಗಳನ್ನು ಬೇಟೆ ಆಡಿದ , ಸುಮಾರು ನೂರತೊಂಬತ್ತನಾಲ್ಕು ಜನರನ್ನು ಸಾಯಿಸಿದ . ಆತನನ್ನು ಬಗ್ಗು ಬಡಿಯಲು ನಮ್ಮ ಸರಕಾರಗಳು ಬರೋಬ್ಬರಿ ಏಳುನೂರಾ ಎಂಬತ್ತು ಕೋಟಿ ವ್ಯಯಿಸಿದರು . ಏಷಿಯಾದ ನಂಬರ್ ಒನ್ ನರಹಂತಕ ಹುಟ್ಟಿ ಬೆಳೆದಿದ್ದು ಇಲ್ಲೇ . ಮಹದೇಶ್ವರ ಬೆಟ್ಟ , ಸತ್ಯಮಂಗಲ , ಮಧುಮಲೈ ಕಾಡುಗಳೇ ಅವನ ರಾಜ್ಯ . ಅಷ್ಟಕ್ಕೇ ನನ್ನ ಯೋಚನೆ ನಿಂತಿದ್ದರೆ ಸರಿ ಇತ್ತೇನೋ , ಆದರೆ ಮನದ ಹುಚ್ಗುದುರೆಗೆ ಲಗಾಮೆಲ್ಲಿ ? . ವೀರಪ್ಪನ್ ಗು ಹಿಂದೆ ಮುಮ್ಮಟ್ಟಿವಾಯನ್ ಎಂಬ ವ್ಯಕ್ತಿ ಈ ಕಾಡನ್ನು ಆಳಿದ್ದಾನೆ . ಅವನದೇ ಮೀಸೆಯಿಂದ ವೀರಪ್ಪನ್ ಇನ್ಸ್ಪೈರ್ ಆಗಿದ್ದಿರಬಹುದು . 
ಬಂಡೀಪುರದಿಂದ ಮುಂದೆ ಮಧುಮಲೈಗೆ ನಾವು ಹೋಗಬೇಕು . ಮಧುಮಲೈ ತಮಿಳುನಾಡಿಗೆ ಸೇರಿದೆ , ಇದೊಂದು ಹುಲಿ ಸಂರಕ್ಷಿತ ಪ್ರದೇಶ .ಏಷಿಯಾದ ಆನೆಗಳ ತವರು ಇದು , ವಿಶ್ವಸಂಸ್ಥೆ ಇದನ್ನು ಎನ್ಡೇಂಜರ್ಡ್ ಎಂದು ಘೋಷಿಸಿದೆ . ಕಳೆದ ದಶಕದಿಂದ ಇಲ್ಲಿಯವರಿಗೆ ಸುಮಾರು ಅರ್ಧದಷ್ಟು ಸಂತತಿ ನಶಿಸಿಹೋಗಿದೆ . ಕಾರಣ , ನಮ್ಮ ಎಕಾಲಜಿಯ ಪದ ' ಹ್ಯಾಬಿಟ್ಯಾಟ್ ಲಾಸ್ ' ಹಾಗೂ ಅತಿಯಾದ ಬೇಟೆ .  ಬಂಡೀಪುರದಿಂದ ಮಧುಮಲೈ ದಾಟುವವರೆಗೂ ವಾಹನ ನಿಲ್ಲಿಸುವ ಹಾಗಿಲ್ಲ , ಚೆಕ್ ಪೋಸ್ಟ್ ಒಂದನ್ನು ಬಿಟ್ಟು . ಹಾಗೆಯೇ ರಿಸರ್ವ್ ಫಾರೆಸ್ಟ್ ಒಳಗೆ ಓಡಾಡುವುದು ಅಪರಾಧ . ರಾತ್ರಿ ಒಂಬತ್ತರಿಂದ ಬೆಳಿಗ್ಗೆ ಆರರವರೆಗೆ ವಾಹನ ಸಂಚಾರ ನಿಷಿದ್ಧ . ರಾತ್ರಿ ಕೇವಲ ಎರಡು ಕರ್ನಾಟಕ ಸಾರಿಗೆ ಬಸ್ಸನ್ನು ಮಾತ್ರ ಬಿಡುತ್ತಾರೆ . 
ಕೆನೆತ್ ಆಂಡರ್ಸನ್ ಅವರ ಬೇಟೆ ಪುಸ್ತಕ ಓದಿದರೆ ನಿಮಗೆ ಈ ಕಾಡಿನ ಪರಿಚಯ ಚೆನ್ನಾಗೇ ಇರುತ್ತದೆ . ಇದೇ ಕಾಡಿನಲ್ಲಿ ಕೆನೆತ್ ಬಹಳಷ್ಟು ನರಭಕ್ಷಕ ಹುಲಿಗಳನ್ನು ಹೊಡೆದಿದ್ದಾರೆ . ಅಷ್ಟಿದ್ದ ಹುಲಿಗಳ ಸಂಖ್ಯೆ ಈಗ ನಾವೇ ಅವುಗಳನ್ನು ರಕ್ಷಣೆ ಮಾಡುವ ಹಂತ ತಲುಪಿದೆ . ಪ್ಲಾಸ್ಟಿಕ್ ಎಸೆಯುವುದು ನಿಷಿದ್ಧವಾದರೂ ಅಲ್ಲಲ್ಲಿ ಪ್ಲಾಸ್ಟಿಕ್ ಕಾಣಬಹುದು . ಮಧಿಮಲೈ ನಂತರ ಎರಡು ದಾರಿಯಿಂದ ಊಟಿಗೆ ಹೋಗಬಹುದು . ಮಧುಮಲೈ ಇಂದ ಗುಡಲೂರಿಗೆ ತಲುಪಿ ಅಲ್ಲಿಂದ ಊಟಿಗೆ ಹೋಗಬಹುದು . ಭಾರಿ ವಾಹನಗಳು , ಬಸ್ಸು ಎಲ್ಲವೂ ಇದೆ ದಾರಿಯಲ್ಲಿ ಸಾಗುತ್ತವೆ . ಇನ್ನೊಂದು ದಾರಿ ತೆಪ್ಪಕಾಡಿನ ಮೂಲಕ ಊಟಿ ಸೇರುತ್ತದೆ . ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷಿದ್ಧ . ಸಿಂಗಲ್ ರೋಡ್ ಆದ್ದರಿಂದ ವಾಹನ ಚಾಲನೆ ಕಷ್ಟ , ಆದರೆ ಇದೇ ಊಟಿಗೆ ಹತ್ತಿರದ ದಾರಿ . ನೀವೇನಾದರೂ ಕಾರು ಅಥವಾ ಬೈಕಿನಲ್ಲಿ ಹೋದರೆ ಇದೇ ದಾರಿಯಲ್ಲಿ ಹೋಗಿ . ಅತ್ಯಂತ ಸುಂದರ ಹಾಗೂ ಅಪಾಯಕಾರಿ ರಸ್ತೆ . ಮೂವತ್ತಾರು ಹೇರ್ ಪಿನ್ ತಿರುವುಗಳು , ಸುಮಾರು ಎಂಟು ಸಾವಿರ ಅಡಿಯ ಬೆಟ್ಟ ಹತ್ತಬೇಕು . ಭಯ ಬೇಡ ಪ್ರತಿ ತಿರುವುಗಳಲ್ಲೂ ಆಂಬುಲೆನ್ಸ್ ನಂಬರ್ , ಫ್ರೀ ಶವದ ವಾಹನದ ಸೌಲಭ್ಯವಿದೆ . ಅಕ್ಷರಶಃ ಸ್ವರ್ಗಕ್ಕೆ ಮೂರೇ ಗೇಣು . ಪ್ರತಿ ವರ್ಷ ಹದಿನೈದಕ್ಕೂ ಹೆಚ್ಚು ಅಪಘಾತಗಳು ಇಲ್ಲಿ ಸಂಭವಿಸುತ್ತದೆ . ಬೆಟ್ಟವನ್ನು ಹತ್ತುತಿದ್ದಂತೆಯೇ ಕುಳಿರ್ಗಾಳಿ ನಿಮ್ಮನ್ನು ಸ್ವಾಗತಿಸುತ್ತದೆ . ಕಲ್ಹತ್ತಿ ಎಂಬ ಸಣ್ಣ ಊರು ಸಿಗುತ್ತದೆ , ಮತ್ತೆ ಸುಮಾರು ಇಪ್ಪತ್ತು ಕಿಲೋಮೀಟರ್ ಮೇಲೆ ಹತ್ತಿದರೆ ಊಟಿ ತಲುಪುತ್ತೇವೆ . 

ಊಟಿ ಅಥವಾ ಉದಕಮಂಡಲ ಭಾರತದ ಟಾಪ್ ಐದು ಹಿಲ್ ಸ್ಟೇಷನ್ ಗಳಲ್ಲಿ ಒಂದು . ಊಟಿಯ ಇತಿಹಾಸದ ಮೊದಲ ದಾಖಲೆ ಸಿಗುವುದು ಹೊಯ್ಸಳರ ಕಾಲದಿಂದ . ವಿಷ್ಣುವರ್ಧನ ಆಳಿದ ದಾಖಲೆಗಳು ಸಿಗುತ್ತವೆ . ತೋಡ ಮತ್ತು ಬಡಗ ಎಂಬ ಎರಡು ಬುಡಕಟ್ಟು ಜನರು ಇಲ್ಲಿ ವಾಸಿಸುತ್ತಿದರು . ಇಂದಿಗೂ ಇಲ್ಲಿ ಬಡಗ ಭಾಷೆಯನ್ನು ಕೇಳಬಹುದು . ನಂತರ ಟಿಪ್ಪು ಸುಲ್ತಾನ್ ಊಟಿಯನ್ನು ಆಳಿದ . ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಊಟಿಯನ್ನು ವಶಪಡಿಸಿಕೊಂಡರು . ' ಹಿಲ್ ಸ್ಟೇಷನ್ ' ಎಂಬ ಪದ ಬಳಕೆ ಬಂದದ್ದೇ ಬ್ರಿಟೀಷರಿಂದ . ಊಟಿ  ಮದ್ರಾಸ್ ಪ್ರೆಸಿಡೆನ್ಸಿಯ ಬೇಸಿಗೆಯ ರಾಜಧಾನಿ ಆಯಿತು . ಇಲ್ಲಿಗೆ ಬಂದ ಎಷ್ಟೋ ಬ್ರಿಟಿಷ್ ಅಧಿಕಾರಿಗಳು ಊಟಿಯನ್ನು ಸ್ವಿಟ್ಜರ್ಲ್ಯಾಂಡ್ ಗೆ ಹೋಲಿಕೆ ಮಾಡಿ ತಮ್ಮ ಪತ್ರ , ಡೈರಿಯಲ್ಲಿ ಬರೆದುಕೊಂಡಿದ್ದಾರೆ . 
ಊಟಿ ಸಮುದ್ರ ಮಟ್ಟದಿಂದ  ಸುಮಾರು ಎರಡುಸಾವಿರದ ಐನೂರು ಮೀಟರ್ ಎತ್ತರದಲ್ಲಿ ಇದೆ . ಚಳಿಗಾಲದಲ್ಲಿ ತಾಪಮಾನ ಸೊನ್ನೆ ಡಿಗ್ರಿ ತಲುಪುತ್ತದೆ , ಆದರೆ ವಿಶೇಷವೆಂದರೆ ಇಲ್ಲಿ ಹಿಮಪಾತ ಆಗುವುದಿಲ್ಲ . ಊಟಿಯ ಆರ್ಥಿಕತೆ ಸಂಪೂರ್ಣವಾಗಿ ಕೃಷಿ ಹಾಗೂ ಪ್ರವಾಸೋದ್ಯಮದ ಮೇಲೆ ನಿಂತಿದೆ . ಊಟಿಯ ಬೋರ್ಡಿಂಗ್ ಸ್ಕೂಲ್ ಬಹಳ ಪ್ರಸಿದ್ಧಿ . ಶಾಲೆಗಳೂ ಸಹ ಅರ್ಥ ವ್ಯವಸ್ಥೆಗೆ ಸ್ವಲ್ಪ ಮಟ್ಟಿನ ಕೊಡುಗೆ ನೀಡುತ್ತದೆ . 
ನಾವು ಮೊದಲು ತಲುಪಿದ್ದು ಗವರ್ನಮೆಂಟ್ ಬೊಟೋನಿಕಲ್ ಗಾರ್ಡನ್ ಗೆ , ಬ್ರಿಟಿಷರು ಕಟ್ಟಿದ ಹಿಲ್ ಸ್ಟೇಷನ್ ಎಂದರೆ ಬೊಟೋನಿಕಲ್ ಗಾರ್ಡನ್ ಇರಲೇಬೇಕು . ಇದು ಸುಮಾರು ಇಪ್ಪತ್ತೆರಡು ಎಕರೆ ವಿಸ್ತೀರ್ಣ ಹೊಂದಿದೆ . ಸಾವಿರಕ್ಕೂ ಹೆಚ್ಚು ಪ್ರಬೇಧದ ಗಿಡ-ಮರಗಳನ್ನು ಇಲ್ಲಿ ಕಾಣಬಹುದು . ಪ್ರತಿ ವರ್ಷ ಮೇ ತಿಂಗಳಲ್ಲಿ  ಪ್ರದರ್ಶನ ಸಹ ಇರುತ್ತದೆ . ಇಪ್ಪತ್ತು ಮಿಲಿಯನ್ ವರ್ಷ ಹಳೆಯ ಮರದ ಪಳಿಯುಳಿಕೆ ಇಲ್ಲಿನ ಸೆಂಟರ್ ಆಫ್ ಅಟ್ರಾಕ್ಷನ್ . 
ನಂತರ ನಾವು ಹೋಗಿದ್ದು ' ದೊಡ್ಡ ಬೆಟ್ಟ ಪೀಕ್ ' ಗೆ . ಈ ಹೆಸರು ಕನ್ನಡದಿಂದಲೇ ಬಂದಿದೆ . ದೊಡ್ಡಬೆಟ್ಟ ಸಮುದ್ರ ಮಟ್ಟದಿಂದ ಎಂಟು ಸಾವಿರದ ಆರುನೂರಾ ಐವತ್ತು ಅಡಿ ಎತ್ತರದಲ್ಲಿದೆ . ಇದರ ಸುತ್ತ ಕೂಡ ರಿಸರ್ವ್ ಫಾರೆಸ್ಟ್ ಇದೆ , ಸಂಜೆ ಐದು ಗಂಟೆಯ ನಂತರ ಪ್ರವೇಶ ನಿಷಿದ್ಧ . ದಕ್ಷಿಣ ಭಾರತದ ನಾಲ್ಕನೇ ಹಾಗೂ ನೀಲಗಿರಿ ಜಿಲ್ಲೆಯ ಮೊದಲನೇ ಪೀಕ್ ಪಾಯಿಂಟ್ . ಇದು ಎಷ್ಟು ಎತ್ತರದಲ್ಲಿ ಇದೆ ಎಂದರೆ , ಇದರ ಮೇಲೆ ಕಟ್ಟಿರುವ ಟೆಲಿಸ್ಕೋಪ್ ಟವರ್ ಹತ್ತಿದರೆ ನಮಗೆ ಮೈಸೂರಿನ ಚಾಮುಂಡಿ ಬೆಟ್ಟ ಕಾಣಿಸುತ್ತದೆ . ಸಂಜೆಯ ಹೊತ್ತಿಗೆ ಜಾಕೆಟ್ ಇಲ್ಲದೆ ಮೇಲೆ ಹೋದರೆ , ಮೇಲೇ ಹೋಗುವುದು ಖಂಡಿತ . 

ಊಟಿಯ ಪ್ರಮುಖ ಆಕರ್ಷಣೆ ನೀಲಗಿರಿ ರೈಲ್ವೇಸ್ . ಊಟಿ ಹಾಗೂ ಮೇಟುಪಾಳಿಯಂ ಮಧ್ಯೆ ನ್ಯಾರೋ ಗೆಜಿನ ರೈಲು ಓಡುತ್ತದೆ . ಇದನ್ನು ಯುನೆಸ್ಕೋ ' ವರ್ಲ್ಡ್ ಹೆರಿಟೇಜ್ ಸೈಟ್ ' ಎಂದು ಗುರುತಿಸಿದೆ . ಭಾರತದ ಅತಿ ಪ್ರಾಚೀನ ಮೌಂಟನ್ ರೈಲ್ವೆ ಇದು . ಸಾವಿರದ ಎಂಟುನೂರಾ ಎಂಬೆತ್ತರಡರಲ್ಲಿ ಆರ್ಥರ್ ಎಂಬ ಸ್ವಿಸ್ ಇಂಜಿನಿಯರ್ ಈ ರೈಲಿನ ನೀಲ ನಕ್ಷೆ ಸಿದ್ಧಪಡಿಸಿದ . ಕುನ್ನೂರು ಹಾಗೂ ಮೇಟುಪಾಳಿಯಂ  ಮಧ್ಯೆ ಸಾವಿರದ ಎಂಟುನೂರಾ ತೊಂಬತ್ತಒಂಬತ್ತರಲ್ಲಿ ರೈಲು ಓಡಾಡಲು ಶುರುವಾಯಿತು . ಸಾವಿರದ ಒಂಬೈನೂರ ಮೂರರಲ್ಲಿ ಭಾರತ ಸರ್ಕಾರ ಇದನ್ನು ಖರೀದಿಸಿ ಊಟಿಯವರೆಗೂ ಮುಂದುವರೆಸಲಾಯಿತು . ಇದಕ್ಕೆ ' ಟಾಯ್ ಟ್ರೈನ್ ' ಎಂಬ ಅಡ್ಡ ಹೆಸರಿದೆ . ಕೇವಲ ನಾಲ್ಕು ಭೋಗಿ ಇರುವ ಈ ರೈಲು ಮಕ್ಕಳ ಆಟಿಕೆಯಂತೆ ಕಾಣುತ್ತದೆ . ಊಟಿ ಹಾಗೂ ಕುನ್ನೂರಿನ ಮಧ್ಯೆ ಐದು ನಿಲ್ದಾಣಗಳಿಗೆ , ಎಲ್ಲಾ ನಿಲ್ದಾಣಗಳೂ ಸ್ವಚ್ಛ ಹಾಗೂ ನೀಲಿ ಬಣ್ಣದಿಂದ ಕಂಗೊಳಿಸುತ್ತದೆ . ಕೇವಲ ಹದಿನಾರು ಮೇಲಿನ ಈ ಪ್ರಯಾಣದಲ್ಲಿ ಹದಿನಾರು ಟನಲ್ ಗಳು , ಇನ್ನೂರ ಐವತ್ತು ಸೇತುವೆಗಳಿವೆ . ಸುಮಾರು ತೊಂಬತ್ತು ನಿಮಿಷಗಳಷ್ಟು ಪ್ರಯಾಣ ಇದು .  ಇದಕ್ಕೆ ನೀವು ಖರ್ಚು ಮಾಡಬೇಕಾಗಿರುವುದು ಕೇವಲ ಹತ್ತು ರೂಪಾಯಿ . ಪ್ರಯಾಣ ಮಾತ್ರ ಚಿರ ನೆನಪು . 'ಸ್ಪರ್ಶ' ಸಿನಿಮಾದಲ್ಲಿ ತೋರಿಸುವುದು ಇದೇ ರೈಲು .

ರೋಸ್ ಗಾರ್ಡನ್ ಹಾಗೂ ಪೈಕಾರ ಲೇಕ್ ಗಳಿಗೆ ಸಮಯದ ಅಭಾವದಿಂದ ಭೇಟಿ ನೀಡಲಾಗಲಿಲ್ಲ . ನೀವು ಹೋಗಬೇಕೆಂದರೆ ಬೇಸಿಗೆ ಹೇಳಿ ಮಾಡಿಸಿದ ಕಾಲ , ಚಳಿಗಾಲದಲ್ಲಿ ಹೋಗಬೇಕೆಂದರೆ ದಪ್ಪಗಿನ ವೂಲೆನ್ ಸ್ವೆಟರ್ ಬೇಕೇ ಬೇಕು  . ವೀಕ್ ಎಂಡ್ ಗಳಲ್ಲಿ ಹೋದರೆ ರೂಮು ಸಿಗುವುದು ಕಷ್ಟ . ಬೇಸಿಗೆಯ ವೀಕೆಂಡ್ ಗಳಲ್ಲಿ ಹತ್ತು ಸಾವಿರ ಕೊಟ್ಟರೂ ಒಂದೂ ರೂಂ ಸಿಗುವುದಿಲ್ಲ . ಹನಿಮೂನ್ ಗೆ ಆರ್ಡರ್ ಕೊಟ್ಟು ಮಾಡಿಸಿದ ಜಾಗ . ಮದುವೆ ಆಗಿರದಿದ್ದರೆ ಹನಿ ಜೊತೆ ಹೋಗಬಹುದು . 
ಹೋಂ ಮೇಡ್ ಚಾಕಲೇಟ್ ಕಡಿಮೆ ಬೆಲೆಗೆ ಸಿಗುತ್ತದೆ . ಜಾಕೆಟ್ , ಸ್ವೆಟರ್ ಗಳು ಚೀಪ್ ಅಂಡ್ ಬೆಸ್ಟ್ . ನೀಲಗಿರಿ ಟೀ ಜಗತ್ ಪ್ರಸಿದ್ಧ . ದೊಡ್ಡಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟೀ ಫ್ಯಾಕ್ಟರಿಗೆ ಭೇಟಿ ನೀಡಿ ಬಿಟ್ಟಿ ಚಹಾ ಕುಡಿದುಬರಬಹುದು . ಗ್ರೀನ್ ಟೀ , ಏಲಕ್ಕಿ ಟೀ , ಬ್ಲಾಕ್ ಟೀ ಯವುದನ್ನು ಬೇಕಿದ್ದರೂ ತೆಗೆದುಕೊಂಡು ಬರಬಹುದು . 

ಕಾರಿನಲ್ಲಿ ಅಥವಾ ಬಸ್ಸಿನಲ್ಲಿ ಹೋಗುವುದು ಉತ್ತಮ . ಬೈಕು ಅಷ್ಟು ಸೂಕ್ತವಲ್ಲ . ಹೋಗುವ ಮೊದಲು ವಾಹನವನ್ನು ಸರ್ವಿಸ್ ಮಾಡಿಸಿಕೊಳ್ಳಿ , ಇಲ್ಲದಿದ್ದರೆ ತೆಪ್ಪಕಾಡಿನ ಪ್ರಪಾತಕ್ಕೆ ನಿಮ್ಮ ಗಾಡಿಯನ್ನು ತಳ್ಳುವ ಪ್ರಮೇಯ ಬರಬಹುದು . ಸುಮಾರು ಐವತ್ತು ಅರವತ್ತು ಕಿಲೋಮೀಟರಷ್ಟು ದೂರ ಗ್ಯಾರೇಜು ಇರಲಿ ಮನೆ ಸಿಗುವುದೇ ಕಷ್ಟ . ಒಬ್ಬರೇ ಹೋದರೆ ಚಳಿ ಅಸಹನೀಯ , ಜೋಡಿ ಹಕ್ಕಿಗಳಾಗಿ ಹೋಗಿ . ಮುಂದೆ ನಿಮಗೆ ಬಿಟ್ಟಿದ್ದು . 

12/6/16

E=mc² (ಭಾಗ -2)

ವೈಜ್ಞಾನಿಕ ಲೇಖನಗಳಿಗೆ ಮುಖ್ಯ ತೊಡಕು ಭಾಷೆ .  ಎಲ್ಲಾ ಇಂಗ್ಲಿಷ್ ಪದಗಳನ್ನೂ ಕನ್ನಡಕ್ಕೆ ತರ್ಜುಮೆ ಮಾಡಿದರೆ ಓದುಗರಿಗೆ ಅರ್ಥವೇ ಆಗುವುದಿಲ್ಲ ಅದೇ ಕಾರಣದಿಂದ ಹಲವು ಪದಗಳನ್ನು ಹಾಗೆಯೇ ಬಿಟ್ಟಿದ್ದೇನೆ . ನನ್ನ ಮುಖ್ಯ ಉದ್ದೇಶ ಸಂಹವನ ಅಷ್ಟೇ . ನಿಮಗೆ ಈ ಲೇಖನ ಅರ್ಥವಾದರೆ ಅದೇ ನನ್ನ ಬರಹದ ಸಾರ್ಥಕ್ಯ .
E=mc² , ಇದರ ಅನ್ವೇಷಣೆ ಶುರುವಾಗಿದ್ದು ಐನ್ಸ್ಟೀನ್ ಹುಟ್ಟುವ ಎಷ್ಟೋ ಮೊದಲು . ಎನರ್ಜಿ ಎಂಬ ಅನ್ವೇಷಣೆಯಿಂದ . ಹತ್ತೊಂಬತ್ತೆನೆಯ ಶತಮಾನದ ವಿಜ್ಞಾನಿಗಳು ಎನರ್ಜಿ ಅಥವಾ ಶಕ್ತಿಯ ಬಗ್ಗೆ ಹೆಚ್ಚು ಮಾತನಾಡಿಲ್ಲ . ಆಗ ಕೇವಲ ಫೋರ್ಸ್ ಅಥವಾ ಪವರ್ ಎಂದಷ್ಟೇ ಮಾತನಾಡುತ್ತಿದರು . ಪವರ್ ಆಫ್ ವಿಂಡ್ , ವಸ್ತು ಕೆಳಗೆ ಬಿದ್ದ ಫೋರ್ಸ್ ಇಷ್ಟೇ . ಒಬ್ಬ ಹಸಿದ ಬಡ ಹುಡುಗ  ಇಡಿಯ ವಿಜ್ಞಾನದ ದಿಕ್ಕನ್ನೇ ಬದಲಾಯಿಸಿದ .
ಮೈಕಲ್ ಫ್ಯಾರಡೆಗೆ  ತನ್ನ ಕೆಲಸದ ಮೇಲೆ ಜಿಗುಪ್ಸೆ ಬಂದಿತ್ತು , ಆತ ಶಿಕ್ಷಣದಿಂದ ವಂಚಿತನಾಗಿದ್ದ . ಆತ ಬುಕ್ ಬೈಂಡಿಂಗ್ ಮಾಡುವ ಕೆಲಸ ಮಾಡುತಿದ್ದ , ಅದೇ ವರವಾಯಿತು . ಕೈಗೆ ಸಿಕ್ಕ ಎಲ್ಲಾ ಪುಸ್ತಕಗಳನ್ನೂ ಆತ ಓದುತ್ತಿದ್ದ . ವಿಜ್ಞಾನದ ಭಾಷಣಗಳನ್ನು ಕೇಳುತ್ತಿದ್ದ . ಒಮ್ಮೆ ಸರ್ ಹಂಫ್ರಿ ಡೇವಿ ಅವರ ಉಪನ್ಯಾಸ ಕೇಳಲು ಹೋಗಿದ್ದ . ಹತ್ತೊಂಬತ್ತನೆಯ ಶತಮಾನದ ವಿಜ್ಞಾನಿಗಳು ಸೆಲೆಬ್ರಿಟಿಯ ತರ ಇರುತ್ತಿದರು , ಅವರ ಉಪನ್ಯಾಸದ ಟಿಕೆಟುಗಳು ಬಿಸಿ ಬಿಸಿ ಬೋಂಡ ಮಾರಾಟವಾದಂತೆ ಬಿಕರಿಯಾಗುತಿತ್ತು . ಡೇವಿ ಅವ್ಯಾಹತವಾಗಿ ನೈಟ್ರಸ್ ಆಕ್ಸೈಡ್ ಸೇವಿಸುತ್ತಿದ್ದ , ಮದ್ಯ ಕೊಡುವ ಅದೇ ಕಿಕ್ ನೈಟ್ರಸ್ ಆಕ್ಸೈಡ್ ಕೊಡಬಲ್ಲದು , ಹ್ಯಾಂಗ್ ಓವರ್ ಇಲ್ಲದೆ ! . ಡೇವಿ ಮಾಡಿದ ಅತೀ ದೊಡ್ಡ ಅನ್ವೇಷಣೆ  ' ಫ್ಯಾರಡೆ ' .
ಫ್ಯಾರಡೆ ಸ್ವತಃ ತನ್ನ ನೋಟ್ಸ್ ಸಿದ್ಧ ಪಡಿಸಿ ತಾನೇ ಬೈಂಡಿಂಗ್ ಮಾಡಿಕೊಳ್ಳುತ್ತಿದ್ದ . ಅದೇ ನೋಟ್ಸ್ ಆತನಿಗೆ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಕೊಡಿಸಿತ್ತು . ಫ್ಯಾರಡೆ ಅತ್ಯಂತ ಶ್ರಧ್ಧೆಯಿಂದ ಎಲ್ಲವನ್ನೂ ಕಲಿಯುತ್ತಿದ್ದ . ಗುರುವನ್ನೂ ಮೀರಿಸುವ ಶಿಷ್ಯನಾಗಿ ಆತ ಬೆಳೆಯಲಿದ್ದ .
ಬ್ಯಾಟರಿ ಆಗಷ್ಟೇ ಅನ್ವೇಷಣೆಗೊಂಡಿತ್ತು . ಎಲೆಕ್ಟ್ರಿಸಿಟಿ ಕುತೂಹಲದ ಕೇಂದ್ರಬಿಂದುವಾಗಿತ್ತು . ಆದರೆ ಯಾರೊಬ್ಬರಿಗೂ ಎಲೆಕ್ಟ್ರಿಸಿಟಿ ಒಳಗಿನ ನಿಗೂಢ ಶಕ್ತಿ ಯಾವುದೆಂದು ತಿಳಿದಿರಲಿಲ್ಲ . ಎಲೆಕ್ಟ್ರಿಸಿಟಿ ಎಂದರೆ ದ್ರವ ಹರಿದಂತೆ ಎಂದು ನಂಬಲಾಗಿತ್ತು . ಡ್ಯಾನಿಷ್ ಅನ್ವೇಷಕನೊಬ್ಬ ಕರೆಂಟ್ ಹರಿಯುವ ವೈರ್ ಪಕ್ಕದಲ್ಲಿ ಇಟ್ಟ ಕಂಪಾಸು ಅದುರುವುದನ್ನು ಕಂಡುಹಿಡಿದ . ಮೊದಲ ಬಾರಿಗೆ ಎಲೆಕ್ಟ್ರಿಸಿಟಿ , ಮ್ಯಾಗ್ನೆಟ್  ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಾಯಿತು . ಎರಡು ಸಂಪೂರ್ಣ ಬೇರೆ ಎಂದು ತಿಳಿದಿದ್ದ ಎಂಟಿಟಿಗಳು ಒಂದರೊಳಗೊಂದು ಸಮ್ಮಿಳಿತ ಎಂದು ತಿಳಿಯುವ ಮೊದಲ ಹೆಜ್ಜೆ ಅದಾಗಿತ್ತು .
ಯಾವ ದಿಕ್ಕಿನಲ್ಲಿ ವಿದ್ಯುತ್ ಹರಿಯುತ್ತಿದೆಯೋ ಅದರ ವಿರುಧ್ಧ ದಿಕ್ಕಿನಲ್ಲಿ ಕಂಪಾಸು ತಿರುಗುತಿತ್ತು . ಬ್ಯಾಟರಿಯ ಟರ್ಮಿನಲ್ ಉಲ್ಟಾ ಮಾಡಲಾಯಿತು ಅಂದರೆ ಮೊದಲು ಹರಿಯುತ್ತಿದ್ದ ವಿದ್ಯುತ್ತಿನ ವಿರುಧ್ದ ದಿಕ್ಕಿನಲ್ಲಿ ವಿದ್ಯುತ್ ಹರಿಯುತಿತ್ತು . ಆಗ ಕಂಪಾಸು ಮೊದಲು ತಿರುಗಿದ್ದ ವಿರುಧ್ದ ದಿಕ್ಕಿಗೆ ತಿರುಗಿತು . ಫ್ಯಾರಡೆ ಹೊಸ ಕಲ್ಪನೆ ಮುಂದಿಟ್ಟ , ಕರೆಂಟ್ ಹರಿಯುವಾಗ ಅದು ತನ್ನ ಸುತ್ತ ಮ್ಯಾಗ್ನೆಟಿಕ್ ಫೀಲ್ಡ್ ಹೊರ ಸೂಸುತ್ತದೆ ಎಂದು . ಸಹ ವಿಜ್ಞಾನಿಗಳು ನಕ್ಕು ಬಿಟ್ಟಿದ್ದರು .
ಫ್ಯಾರಡೆಗೆ ಮದುವೆ ನಿಶ್ಚಯವಾಗಿತ್ತು , ಆತನಿಗೆ ಕಂಪಾಸಿನ ಸಮಸ್ಯೆ ಒಬ್ಸೆಶನ್ ಆಗಿತ್ತು . ಮದುವೆಯ ಉಂಗುರದಿಂದ ಹೊಸ ಐಡಿಯಾ ಹೊಳೆದಿತ್ತು . ನಿಮ್ಮ ಕೈ ಬೆರಳು ವೈರ್ ಎಂದುಕೊಂಡರೆ , ಅದರೊಳಗೆ ಕರೆಂಟ್ ಹಾಯಿಸಿದಾಗ ಉಂಗುರದಂತೆ , ಅಂದರೆ ಬೆರಳ ಸುತ್ತ ಮ್ಯಾಗ್ನೆಟಿಕ್ ಫೀಲ್ಡ್ ಹುಟ್ಟಿಕೊಳ್ಳುತ್ತದೆ . ಆ ಕಣ್ಣಿಗೆ ಕಾಣದ ಶಕ್ತಿ ಅಥವಾ ಈಗ ನಾವು ಕರೆಯುವ ಎಲೆಕ್ಟ್ರಿಕ್ ಫೀಲ್ಡ್ ಲೈನ್ಸ್ ವೃತ್ತಾಕಾರವಾಗಿರುತ್ತದೆ ಎಂದು ಇದರಿಂದ ತಿಳಿಯಿತು . ಅಂದು ಫ್ಯಾರಡೆ ಅಕ್ಷರಶಃ ಕುಣಿದಾಡಿದ್ದ . ನಂತರ ವೈರ್ ಒಂದನ್ನು ಸ್ಟಾಟಿಕ್ ಮ್ಯಾಗ್ನೆಟ್ ಮುಂದೆ ಇಟ್ಟ ಅದು ತಿರುಗತೊಡಗಿತು . ಶತಮಾನದ ಪ್ರಯೋಗ ಅದಾಗಿತ್ತು , ಎಲೆಕ್ಟ್ರಿಕ್ ಮೋಟಾರ್ ಕಂಡು ಹಿಡಿಯುವಲ್ಲಿ ಮೊದಲ ಹೆಜ್ಜೆ ! .
ಮೊದಲ ಬಾರಿಗೆ ಶಕ್ತಿ ಅಥವಾ ಎನರ್ಜಿಯ ಕಲ್ಪನೆ ಮೂಡಿತ್ತು . ಬ್ಯಾಟರಿ ಕೆಮಿಕಲ್ ಎನರ್ಜಿಯನ್ನು , ಎಲೆಕ್ಟ್ರಿಕ್ ಎನರ್ಜಿಯಾಗಿ ಪರಿವರ್ತಿಸುತ್ತದೆ , ಅದರಿಂದ ಬಂದ ಎಲೆಕ್ಟ್ರಿಸಿಟಿಯನ್ನು ಮ್ಯಾಗ್ನೆಟ್ ನೊಂದಿಗೆ  ಸೇರಿಸಿ ಮೋಶನ್ ಅಥವಾ ಚಲನೆಯನ್ನು ಉತ್ಪಾದಿಸಬಹುದು ಎಂಬುದು ಇದರಿಂದ ತಿಳಿಯಿತು . ಇದೆಲ್ಲದರ ಹಿಂದೆ ಇದ್ದದ್ದು ಒಂದೇ ಎನರ್ಜಿ ! .
ಡೇವಿ ಫ್ಯಾರಡೆ ಮೇಲೆ ಸುಳ್ಳು ಆರೋಪ ಹೊರಿಸಿದ . ಫ್ಯಾರಡೆ ಯಾರೋ ಬ್ರಿಟಿಷ್ ವಿಜ್ಞಾನಿಯ ಥಿಯರಿ ಕದ್ದಿದ್ದಾನೆ ಎಂದು ಸುದ್ದಿ ಹಬ್ಬಿಸಿದ . ಪಬ್ಲಿಶ್ ಮಾಡಿಸಿದ ಪೇಪರ್ ವಾಪಾಸು ತೆಗೆದುಕೊಳ್ಳುವಂತೆ ಆಜ್ಞಾಪಿಸಿದ . ಆದರೆ ಫ್ಯಾರಡೆ ಒಪ್ಪಲಿಲ್ಲ . ಡೇವಿ ತಾನೇ ಕಲಿತ ನೈಟ್ರಸ್ ಆಕ್ಸೈಡ್ ವಿದ್ಯೆಯ ದೆಸೆಯಿಂದ ಐದು ವರ್ಷದ ನಂತರ ಸತ್ತು ಹೋದ . ಫ್ಯಾರಡೆ ರಾಯಲ್ ಸೊಸೈಟಿಗೆ ಆಯ್ಕೆಯಾದ . ಅದೇ ಐನ್ಸ್ಟೀನ್ ಹೇಳುವ ಎನರ್ಜಿ , ಫ್ಯಾಕ್ಟರ್ E .

7/6/16

ಡಿಟೆಕ್ಟಿವ್ ಜಿಕೆ : ಕಲೆ ( ಮುಕ್ತಾಯ )

ನಿಧಾನವಾಗಿ ಕಣ್ಣು ತೆರೆದೆ , ಎದ್ದು ಕೂರಲು ಆಗದಷ್ಟು ಬೆನ್ನು ನೋಯುತ್ತಿತ್ತು . ಕೆಲ ಹೊತ್ತಿನಲ್ಲಿ ವಿಕ್ರಮ್ ಹಾಗೂ ಡಾಕ್ಟರ್ ನನ್ನೆದುರು ಬಂದು ಕುಳಿತರು . ಆ ನೋವಿನಲ್ಲೂ ನನಗೆ ಆತ ಯಾರು ? ಯಾಕೆ ಬಂದ ಎಂಬ ಪ್ರಶ್ನೆಗಳೇ ಕಾಡುತಿತ್ತು . ಆತನೂ ಅದೇ ಆಸ್ಪತ್ರೆಯಲ್ಲಿ ಇದ್ದಾನಂತೆ , ಇನ್ನೂ ಪ್ರಜ್ಞೆ ಬಂದಿರಲಿಲ್ಲ . ಎದ್ದು ಹೋಗಿ ಅವನನ್ನು ಎಬ್ಬಿಸಿಬಿಡುವ ಎನಿಸುತಿತ್ತು . ಔಪಚಾರಿಕ ಮಾತು-ಕತೆ ಮುಗಿಸಿ ವಿಕ್ರಮ್ ಹೊರಟು ಹೋದರು , ಮತ್ತೆ ಮೌನ ಆವರಿಸಿತು . ನನಗೆ ಮತ್ತೆ ನಿದ್ದೆ ಹತ್ತಿತು . 
ಹೀಗೆ ಎರಡು ದಿನ ಕಳೆದೆ , ಈಗ ನನಗೆ ನೋವು ಕಡಿಮೆಯಾಗಿತ್ತು . ಎದ್ದು ಓಡಾಡುತ್ತಿದ್ದೆ , ಹತ್ತೋ ಇಪ್ಪತ್ತೋ ಪುಶ್ ಅಪ್ಸ್ ಮಾಡಿದೆ . ಮೊದಲಿನಂತೆ ಆಗದಿದ್ದರೂ ಸ್ವಲ್ಪ ಚೈತನ್ಯ ಬಂತು . ಆತನಿಗೂ  ಪ್ರಜ್ಞೆ ಬಂತು ಎಂದು ವಿಕ್ರಮ್ ತಿಳಿಸಿದರು . ಇಬ್ಬರೂ ನನ್ನ ವಾರ್ಡಿನಿಂದ ಹೊರ ಬಿದ್ದೆವು . 
ಆತ ಎದ್ದು ಕುಳಿತಿದ್ದ , ವಿಕ್ರಮ್ ಇನ್ಟರಾಗೆಶನ್ ಶುರು ಮಾಡಿದರು . ನೇರ ಪ್ರಶ್ನೆಗಳು 
" ಯಾರು ನೀನು ? ಯಾಕೆ ಹೀಗ್ ಮಾಡ್ದೆ ? "
ಆತ ಕಿಟಕಿಯ ಆಚೆ ನೋಡುತ್ತಿದ್ದ , ಯಾವುದೇ ಪ್ರತಿಕ್ರಿಯೆ ನೀಡದೆ . ನಾನು ವಿಕ್ರಮ್ ಅವರ ಮುಖ ನೋಡಿದೆ . ಅವರಿಗೆ ಅರ್ಥವಾಯಿತು . ಅವರು ಆಚೆ ಎದ್ದು ಹೋದರು . ನಾನು ನನ್ನ ಪಿಸ್ಟಲ್ ಲೋಡ್ ಮಾಡಿಕೊಂಡೆ . ಸೀದಾ ಆತನ ಹಣೆಗೆ ಗುರಿಯಿಟ್ಟೆ . ಆತನಿಗೆ ಆಗಿದ್ದ ಗಾಯದ ಮೇಲೆ ಗುದ್ದಿದ್ದೆ , ಆತ ನೋವಿನಿಂದ ಚೀರಿದ . 
" ನನ್ ಮೇಲೆ ಯಾವ ಕೇಸು ನಡೆಯೋಲ್ಲ , 0.6mm ಬುಲೆಟ್ ಹತ್ತಿರದಿಂದ ಹೊಡೆದರೆ ನಿನ್ನ ಮೆದುಳು ಸೀಳಿ ಆಚೆ ಇಂದ ಹೊರಗ್ ಹೋಗುತ್ತೆ . ಪೋಸ್ಟ್ ಮಾಟಂ ಸಹ ಮಾಡಿಸ್ದೆ ದಫ಼ನ್ ಮಾಡ್ತೀನಿ " ಎಂದು ಘರ್ಜಿಸಿದೆ . ಆಗ ಬಾಯಿ ಬಿಟ್ಟ . 
ಆತನ ಹೆಸರು ವಿವೇಕ್ , ಆತನೂ ಸಹ ಬಳ್ಳಾರಿಯಲ್ಲಿ ಮೆಡಿಕಲ್ ಓದುತ್ತಿದವ . ಸ್ನೇಹಾಳ ಗೆಳೆಯ . ಬಾಲ್ಯ ಸ್ನೇಹಿತ . ಅದಾಗಲೇ ಸ್ನೇಹ ಪ್ರೀತಿಗೆ ತಿರುಗಿತ್ತು . ಆದರೆ ಮೆಡಿಕಲ್ ಸೇರಿದ ಮೇಲೆ ಸ್ನೇಹಾಳಿಗೆ ಚಿರಾಗ್ ಸಂಬಂಧ ಹೆಚ್ಚಾಗಿತ್ತು .ಬಡತನದಲ್ಲೇ ಬೆಳೆದ ಅವಳಿಗೆ ಸಹಜವಾಗೇ ಶ್ರೀಮಂತಿಕೆಯ ಮೇಲೆ ಮೋಹ ಶುರುವಾಗಿತ್ತು . ಚಿರಾಗ್ ಸಹ ಅವಳನ್ನು ಬಳಸಿಕೊಳ್ಳುತ್ತಿದ್ದ , ನಿಜವಾಗಿಯೂ ಪ್ರೀತಿಸುತ್ತಿದ್ದನಾ ಗೊತ್ತಿಲ್ಲ ? . ಆದರೆ ಆತನ ಡೈಮಂಡ್ ಸ್ಮಗ್ಲಿಂಗ್ ಗೆ ಒಂದು ಹುಡುಗಿ ಬೇಕಿತ್ತು . ಚಿರಾಗ್ ಆಕೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಳ್ಳುತ್ತಿದ್ದನಂತೆ . ಇದರಿಂದ ಆತನ ಮೇಲಿನ ಅನುಮಾನ ಕಡಿಮೆ ಆಗುತಿತ್ತು . ಫ್ಯಾಮಿಲಿ ಎಂದಾಗ ಪೊಲೀಸರು ಹೆಚ್ಚು ಅನುಮಾನಿಸುವುದಿಲ್ಲ . 
ಆದರೆ ವಿವೇಕ್ ವ್ಯಗ್ರನಾಗುತ್ತಾ ಹೋದ . ಹಿ ಹ್ಯಾಸ್ ದಿ ಮೊಟಿವೆಶನ್ . ಆತ ಬೆಂಗಳೂರಿಗೆ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ . ಅವಕಾಶವನ್ನು ಬಳಸಿಕೊಂಡಿದ್ದ , ಕಿಚನ್ ನೈಫ್ ಬಳಸಿ ಕೊಲೆ ಮಾಡಿದ್ದ . ನಂತರ  ನನ್ನ ಹೇಳಿಕೆಯಿಂದ ತಲೆ ಕೆಡಿಸಿಕೊಂಡಿದ್ದ . ನನ್ನನ್ನೇ ಮುಗಿಸುವುದು ಒಂದೇ ಅವನಿಗೆ ಉಳಿದದ್ದು . 
ವಿವೇಕ್ ಗೆ ವಜ್ರದ ವಿಷಯ ಗೊತ್ತೇ ಇರಲಿಲ್ಲ . ವಜ್ರದ ಬಗ್ಗೆ ಸವಿವರವಾಗಿ ರಾ ಸಂಸ್ಥೆಗೆ ಬರೆದೆ . ಕುರೇಷಿಯೊಂದಿಗೆ ನಾನು ಒಬ್ಬನೇ ಏನೂ ಮಾಡಲು ಸಾಧ್ಯವಿರಲಿಲ್ಲ . ಆತ ಭಾರತಕ್ಕೆ ಕಾಲಿಟ್ಟಿದ್ದು ಕಳವಳಕಾರಿ ಬೆಳವಣಿಗೆ . 
ಆಸ್ಪತ್ರೆಯಿಂದ ಹೊರಬಿದ್ದೆ ಪತ್ರಕರ್ತರ ಕ್ಯಾಮೆರಾ ಸದ್ದು ಮಾಡಿತು . ನಾನು ಗುಂಡು ಬಿದ್ದ ಜಾಗದಲ್ಲಿ ಆಗಿದ್ದ ಕಲೆಯನ್ನು ಮುಟ್ಟಿಕೊಂಡೆ . 

4/6/16

ಖಾರಾಬಾತು -4 (ಎಲ್ಲಿ ನನ್ನ ಮೇರಿ ?)

ಈಗೀನ ಶಿಕ್ಷಣ ಪದ್ಧತಿಯ ಕಟ್ಟಾ ವಿರೋಧಿ ನಾನು . ಪರೀಕ್ಷೆ ಸಮೀಪಿಸಿದಾಗ ನಾಲಕ್ಕು ಪಾಠ ಉರು ಹೊಡೆದು , ಪರೀಕ್ಷೆಯಲ್ಲಿ ವಾಂತಿ ಮಾಡಿ ಮೊದಲಿಗರಾಗುವ ನನ್ನ ಕೆಲವು ಸ್ನೇಹಿತರ ಪರಮ ವೈರಿ ನಾನು . ನನ್ನ ಎಷ್ಟೋ ಸ್ನೇಹಿತರು ಇನ್ನೂ ವಿವೇಕಾನಂದರ ಜೀವನ ಚರಿತ್ರೆಯನ್ನೇ ಓದಿಲ್ಲವಂತೆ . ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ನಿಕೋಲ ಟೆಸ್ಲಾ ಕೂಡ ವಿವೇಕಾನಂದರ ಪುಸ್ತಕಗಳನ್ನು ಓದುತ್ತಿದ್ದರು . ಕಲಿತ ಶಿಕ್ಷಣಕ್ಕೆ ಒಂದು ಅರ್ಥ ಬರುವುದು ನಮ್ಮ ಜೀವನ ದೃಷ್ಟಿ ಬದಲಾದಾಗ . ಶಿಕ್ಷಣದಿಂದ ಬಂದ ಜ್ಞಾನ ನಮ್ಮ ಯೋಚನಾ ಲಹರಿಗೆ ಆಹಾರವಿದ್ದಂತೆ . ವಿಧ್ಯಾರ್ಥಿಗಳನ್ನು ಬಿಡಿ , ಪಾಠ ಮಾಡುವವರಿಗೇ ಅದರ ಹಿಂದಿನ ಕಥೆ , ಯಾಕೆ ಈ ಥಿಯರಿ ಬಂತು ? ಎನ್ನುವಂತಹ ವಿಷಯಗಳು ಗೊತ್ತಿರುವುದಿಲ್ಲ . ಪ್ರತಿ ದಿನ ನಾನು ನನ್ನ ಕ್ಲಾಸಿನ ಬೋರ್ಡ್ ಮೇಲೆ 'ಕೋಟ್' ಬರೆಯುತ್ತೇನೆ . ಪರೀಕ್ಷೆಯ ಹಿಂದಿನ ದಿನ ಎಡಿಸನ್ ಹೇಳಿದ " Tomorrow is my exam but I won't study . Because a single sheet of paper can't determine my intelligence " ಎಂದು ಬರೆದಿದ್ದೆ . ಉಪನ್ಯಾಸಕರು ಅದನ್ನು ನೋಡಿ ಕೆಂಡಾಮಂಡಲವಾದರು . " ಇರೋದನ್ನ ಓದ್ಕೊಳ್ರಯ್ಯ ಸಾಕು " ಎಂದು ಬೈದರು . ಇರೋದನ್ನ ಅಷ್ಟೇ ಓದಿಕೊಂಡಿದ್ದಕ್ಕೆ ನೀವು ಇಲ್ಲೇ ಇರೋದು ಎಂದು ನಾನು ಮನಸ್ಸಿನಲ್ಲೇ ಬೈದುಕೊಂಡೆ . ನಾನು ಎಂಜಿನಿಯರಿಂಗ್ ಮಾಡುತ್ತಿದ್ದೇನೆ ಅಷ್ಟನ್ನೇ ಓದಿಕೊಳ್ಳುತ್ತೇನೆ ಎಂದರೆ ನಮಗಿಂತ ಮೂರ್ಖರು ಇನ್ನೊಬ್ಬರಿಲ್ಲ . ಯೋಚನೆ ಪ್ರಭುದ್ದತೆ ಪಡೆದುಕೊಳ್ಳಲು ಬರಿಯ ಥಿಯರಿ ಸಾಲುವುದಿಲ್ಲ . ಸರ್ ಸಿ.ವಿ ರಾಮನ್ ಅವರಿಗೆ ತತ್ವಶಾಸ್ತ್ರದ ಆಳ ಜ್ಞಾನವಿತ್ತು . ಐನ್ಸ್ಟೀನ್ ಸುಮಧುರವಾಗಿ ವಯೊಲಿನ್ ನುಡಿಸುತ್ತಿದ್ದರು . ಅವರು ತಮ್ಮ ಕಲ್ಪನೆಗೆ ವಿಜ್ಞಾನದ ರೂಪ ಕೊಟ್ಟವರು . ನಮ್ಮ ವಿಜ್ಞಾನ ಎಷ್ಟು ಮುಂದುವರೆದಿದೆಯೆಂದರೆ , 'ಗೂಗಲ್ ' ನಿಮ್ಮ ಮನೆಯ ಮುಂದಿನ ರಸ್ತೆಯ ಟ್ರಾಫಿಕ್ ಬಗ್ಗೆ ಕ್ಷಣಾರ್ಧದಲ್ಲಿ ತಿಳಿಸಬಲ್ಲದು . ಆದರೂ ಇಂದಿಗೂ ನಮ್ಮ ಬಹುತೇಕ ಶಾಲೆಗಳಲ್ಲಿ  ಚಾಕ್ ಪೀಸ್ ಹಿಡಿದು ಬರುತ್ತಾರೆ . " Imagine in 3-dimension " ಎಂದು ಬಡಿದುಕೊಂಡರೆ ನಮಗೆ ತಿಳಿಯುತ್ತದೆಯೇ ? . ವೀಡಿಯೊ ಅಥವಾ ಮಾಡೆಲ್ ತಂದು ತೋರಿಸಲು ಸಾಧ್ಯವಿಲ್ಲವೇ ? . ಪ್ರತಿಯೊಂದು ಆವಿಷ್ಕಾರದ ಹಿಂದೆಯೂ ಹಲವಾರು ಕಥೆ ಇದೆ , ವ್ಯಥೆ ಇದೆ , ಜೀವನ ಸಂಗ್ರಾಮವೇ ಇದೆ . ಮೇರಿ ಕ್ಯೂರಿ ರೇಡಿಯಂ ಕಂಡು ಹಿಡಿದಳು ಎಂದಷ್ಟೇ ನಾವು ಓದಿಕೊಂಡಿದ್ದೇವೆ . ಆದರೆ ಆಕೆಯ ಜೀವನ ಇವೆಲ್ಲವನ್ನೂ ಮೀರಿದ್ದು , ತರ್ಕಕ್ಕೆ ನಿಲುಕದ್ದು .
ಪರಾಡಳಿತದ ಪದತಳಕ್ಕೆ ತುಳಿಯಲ್ಪಟ್ಟ ಪೋಲೆಂಡ್ ನಲ್ಲಿ ಮೇರಿ ಹುಟ್ಟಿದಳು . ಆಕೆಯ ತಂದೆ ವಿಜ್ಞಾನದ ಶಿಕ್ಷಕರಾಗಿದ್ದರು , ಆದರೆ ಪೋಲಿಷ್ ಜನರಿಂದ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಯಿತು . ಆಗ ಶಾಲೆಯಲ್ಲಿದ್ದ ಉಪಕರಣಗಳನ್ನು ಮನೆಗೆ ತಂದು ಆತ ಮಕ್ಕಳಿಗೆ ಪಾಠ ಮಾಡುತ್ತಿದ್ದ . ಸಹಜವಾಗೇ ಮೇರಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿತು . ಒಮ್ಮೆ ಆಕೆ ಓದುತ್ತಾ ಕುಳಿತಿದ್ದಾಗ ಆಕೆಯ ಸಹಪಾಠಿಗಳು ಆಕೆಯ ಸುತ್ತ ಕುರ್ಚಿಗಳನ್ನು ಪೇರಿಸಿ ಇಟ್ಟಿದ್ದರಂತೆ . ಆಕೆ ಓದುತ್ತಲೇ ಇದ್ದಳಂತೆ ತಮಾಷೆ ನೋಡಲು ನಿಂತ ಸಹಪಾಠಿಗಳಿಗೆ ಬೇಸರ ಮೂಡಿ ಅವರು ಹೊರಟು ಹೋದರು . ಬಹಳ ಹೊತ್ತಿನ ನಂತರ ಈಕೆ ಎದ್ದಾಗ ಎಲ್ಲಾ ಕುರ್ಚಿಗಳು ಇವಳ ಮೇಲೆ ಬಿದ್ದವಂತೆ . ಈಕೆ ತಲೆ ಕೆಡಿಸಿಕೊಳ್ಳದೆ ಮತ್ತೆ ಓದುತ್ತಾ ಕುಳಿತಳು . ಸಾಯುವ ಕೊನೆ ಕ್ಷಣದವರೆಗೂ ಮೇರಿಗೆ ಈ ರೀತಿಯ ಶ್ರಧ್ಧೆ ಇತ್ತು .
ಪ್ರಾಥಮಿಕ ಶಿಕ್ಷಣ ಸಿಕ್ಕಿದಷ್ಟು ಸುಲಭವಾಗಿ ಮುಂದೆ ಆಕೆಗೆ ಶಿಕ್ಷಣ ಸಿಗಲಿಲ್ಲ . ಮನೆಯಲ್ಲಿ ಬಡತನ , ಪೋಲಿಷ್ ಜೊತೆಗೆ ಒಂದು ಹೆಣ್ಣು . ಶಿಕ್ಷಣ ಮರೀಚಿಕೆಯೇ ಆಗಿತ್ತು . ಮೇರಿಯ ಸಹೋದರಿ ಮೆಡಿಕಲ್ ಓದಬೇಕೆಂಬ ಆಸೆ ಇಟ್ಟುಕೊಂಡಿದ್ದಳು . ಮೇರಿ ಆಕೆಗೆ ಆರ್ಥಿಕವಾಗಿ ನೆರವಾದಳು . ವರ್ಷಗಳ ಕಾಲ ಬೇರೆಯವರ ಮನೆಯಲ್ಲಿ ಮೇಡ್ ಆಗಿ ಕೆಲಸ ಮಾಡಿದಳು . ಮಕ್ಕಳಿಗೆ ಟ್ಯೂಶನ್ ಮಾಡಿ ಹಣ ಕೂಡಿಟ್ಟು ಮೆಡಿಕಲ್ ಓದಲು ನೆರವಾದಳು . ಇಷ್ಟರ ಮಧ್ಯೆ ಪ್ರೇಮ ವೈಫಲ್ಯ ಕೂಡ ಆಕೆಯನ್ನು ಕಾಡುತಿತ್ತು . ಮೇರಿ ಕೆಲಸ ಮಾಡುವ ಮನೆಯ ಹುಡುಗ ಹಾಗೂ ಈಕೆ ಪ್ರೀತಿಸಿದ್ದರು ಆದರೆ ಕುಟುಂಬದ ಸಮಸ್ಯೆಯಿಂದ ಸಂಬಂಧ ಮುರಿದು ಬಿದ್ದಿತ್ತು .
ಮೇರಿಯ ಸಹೋದರಿ ಮೆಡಿಕಲ್ ಮುಗಿಸಿ ಮದುವೆಯಾಗಿ ಪ್ಯಾರಿಸ್ ಗೆ ಹೋದಳು . ಮೇರಿಯನ್ನು ಪ್ಯಾರಿಸ್ ಯೂನಿವರ್ಸಿಟಿ ಸೇರಲು ಕರೆದಳು , ಆದರೆ ಮೇರಿಯ ಕೈ ಖಾಲಿಯಾಗಿತ್ತು . ಆಕೆ ಮತ್ತೆ ಸೊನ್ನೆಯಿಂದ ಶುರುಮಾಡಿದಳು , ಮತ್ತೆ ಒಂದೂವರೆ ವರ್ಷ ದುಡಿದು ಹಣ ತೆಗೆದುಕೊಂಡು ಪ್ಯಾರಿಸ್ ಗೆ ಬಂದಳು . ಅಲ್ಲಿ ಆಕೆಯ ಹೋರಾಟದ ಬದುಕು ಶುರುವಾಯಿತು . ಊಟಕ್ಕೆ ದುಡ್ಡಿದ್ದರೆ ಪುಸ್ತಕಕ್ಕೆ ದುಡ್ಡಿಲ್ಲ , ಪುಸ್ತಕ ತೆಗೆದುಕೊಂಡರೆ ಊಟವಿಲ್ಲ . ದಿನಕ್ಕೆ ಕೇವಲ ಎರಡು ತುಂಡು ಬ್ರೆಡ್ಡು ತಿಂದು ಬದುಕಿತ್ತು ಆ ಜೀವ . ಯುರೋಪ್ ದೇಶಗಳಲ್ಲಿ ಚಳಿಗೆ ಮನೆಯ ಮಧ್ಯೆ ಬೆಂಕಿ ಉರಿಸುತ್ತಾರೆ , ಅದನ್ನೂ ಆಕೆಗೆ ಉರಿಸುವ ಆರ್ಥಿಕ ಶಕ್ತಿ ಇರಲಿಲ್ಲ . ರಾತ್ರಿಯೆಲ್ಲಾ ಚಳಿಯಲ್ಲಿ ನಡುಗುತ್ತಾ ಅಧ್ಯಯನ ಮಾಡುತ್ತಿದ್ದಳಂತೆ . ಒಬ್ಬ ಹೆಂಗಸು ತಮ್ಮ ಸಮಕ್ಕೆ ನಿಲ್ಲುವುದು ಕೆಲವರಿಗೆ ಹಿಡಿಸಲಿಲ್ಲ . ಇದೆಲ್ಲಾ ಗಲಾಟೆಯ ಮಧ್ಯವೇ ಆಕೆ ಓದಿದಳು , ಕೇವಲ ಓದಲಿಲ್ಲ ಮೊದಲಿಗಳಾದಳು . ಪಿಯರಿ ಆಕೆಯ ಜೀವನದಲ್ಲಿ ಕಾಲಿಟ್ಟ . ಅಲ್ಲಿಂದ ಮುಂದೆ ನಡೆದದ್ದು ಇತಿಹಾಸ .
ನಾನು ಯಾವಾಗಲೂ ಯೋಚಿಸಿರುತ್ತೇನೆ . Made for each other ಎನ್ನುವದಕ್ಕೆ ಅವರೇ ಉದಾಹರಣೆ . ಇಬ್ಬರೂ ಒಂದೇ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರು . ಹೆಂಡತಿಯ ಪಕ್ಕದಲ್ಲೇ ಗಂಡ . ಗಂಡ " ನಿಂಗೆ ಇದೆಲ್ಲ ಅರ್ಥ ಆಗೋಲ್ಲ " ಎಂದು ಸಿಡುಕುವುದಿಲ್ಲ . ಹೆಂಡತಿ " ನಿಮ್ದು ಯಾವಾಗ್ಲೂ ಇದಿದ್ದೆ " ಎಂದು ಗೊಣಗುವುದಿಲ್ಲ . ನಾನು ಕೆಲವೊಮ್ಮೆ ನಗೆಪಾಟಲಿಗೆ ತುತ್ತಾಗಿದ್ದೇನೆ , ಆದರೂ ಹೇಳುತ್ತೇನೆ ನನಗೆ ಮೇರಿಯಂತ ಸಂಗಾತಿ ಬೇಕು .  ಇಬ್ಬರೂ ಸೇರಿ ಹೊಸದೊಂದು ಮೂಲಧಾತುವನ್ನು ಕಂಡು ಹಿಡಿದರು . ಪಿಯರಿ ಕೇಳಿದ " ಏನೆಂದು ಹೆಸರಿಡೋಣ " ? .
" ಪೊಲೋನಿಯಂ " ಮೇರಿ ತಕ್ಷಣಕ್ಕೆ ಉತ್ತರ ನೀಡಿದಳು . ತನ್ನ ತಾಯ್ನಾಡು ಪೋಲೆಂಡ್ ಬಗ್ಗೆ ಆಕೆಗೆ ಅದಮ್ಯ ಭಕ್ತಿ , ಹೆಮ್ಮೆ ಇತ್ತು . ಪೋಲೆಂಡ್ ನೆನಪಿಗೆ ಪೊಲೋನಿಯಂ ಹೆಸರು ನೀಡಿದಳು . ನೋಬೆಲ್ ಬಹುಮಾನವನ್ನು ಗಂಡ ಹೆಂಡತಿ ಹಂಚಿಕೊಂಡರು .
ಮುಂದಿನ ಹಾದಿ ಇನ್ನೂ ಕಷ್ಟವಾಗಿತ್ತು . ಇಷ್ಟೆಲ್ಲಾ ಆದರೂ ಬಡತನ ಕಿತ್ತು ತಿನ್ನುತ್ತಿತ್ತು . ಮೇರಿಗೆ ರೇಡಿಯಂ ಎಂಬ ಮೂಲಧಾತು ಇರುವುದರ ಬಗ್ಗೆ ಸಂಶಯವಿತ್ತು . ಅದರ ಅನ್ವೇಷಣೆಗೆ ಆಕೆ ನಿಂತಳು . ಮುರುಕು ಕೊಟ್ಟಿಗೆಯಲ್ಲಿ ಟನ್ನುಗಟ್ಟಲೆ ಜಿಂಕ್ ಬ್ಲೆಂಡೆ ಎನ್ನುವ ವಸ್ತು ತಂದು ಬಾಣಲೆಯಲ್ಲಿ ಕಾಯಿಸಿ , ಸೋಸಿದಳು . ಆಕೆ ನೂರಕ್ಕೆ ಒಂದು ಕಣ ರೇಡಿಯಂ ಇರಬಹುದು ಎಂದು ಭಾವಿಸಿದ್ದಳು . ಆದರೆ ಹತ್ತು ಸಾವಿರಕ್ಕೆ ಒಂದು ಕಣ ರೇಡಿಯಂ ಅದರಲ್ಲಿತ್ತು , ಪಟ್ಟು ಬಿಡದೆ ತನ್ನ ಜೀವಮಾನವನ್ನೇ ಮುಡಿಪಿಟ್ಟು ಕಾಯಿಸಿ , ಸೋಸಲು ಮುದಿಪಿಟ್ಟಲು . ವಿಧಿ ತನ್ನ ಕ್ರೂರ ಕೈ ಚಾಚಿತ್ತು , ಪಿಯರಿ ಅಪಘಾತದಲ್ಲಿ ಮೃತನಾದ .
ಸಹಾಯ ಹಸ್ತವಿಲ್ಲದೆ , ಸ್ಪೂರ್ತಿ ಇಲ್ಲದೆ ಮೇರಿ ಹೈರಾಣಾಗಿ ಹೋದಳು . ಒಬ್ಬಳೇ ಕುಳಿತು ಬಿಕ್ಕಿದಳು , ಕಷ್ಟಪಟ್ಟು ಅನ್ವೇಷಣೆ ಮುಂದುವರಿಸಿದಳು . ಕೊನೆಗೂ ಹೊಳೆಯುವ ರೇಡಿಯಂ ಸಿಕ್ಕಿತು . ರೇಡಿಯೋ ಆಕ್ಟಿವಿಟಿ ಎಂಬ ಹೊಸ ವಿಭಾಗಕ್ಕೆ ನಾಂದಿ ಹಾಡಿದಳು . ಎರಡನೇ ಬಾರಿ ನೊಬೆಲ್ ಬಂದಿತ್ತು . ಆದರೆ ಹಂಚಿಕೊಳ್ಳಲು ಪಿಯರಿ ಇರಲಿಲ್ಲ .
ಯಾವ ಅನ್ವೇಷಣೆಗೂ ಮೇರಿ ಪೇಟೆಂಟ್ ಮಾಡಿಸಲಿಲ್ಲ . ಇಂದಿಗೂ ರೇಡಿಯೋ ಆಕ್ಟಿವಿಟಿ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗುತ್ತದೆ . ಆಕೆ ಸುಲಭವಾಗಿ ದುಡ್ಡು ಮಾಡಬಹುದಿತ್ತು . ಒಳಗೆ ಬರಲೇ ಎಂದು ಕೇಳಿದ ಬಿಲಿಯನ್ ಗಟ್ಟಲೆ ದುಡ್ಡನ್ನು ಒದ್ದು ಆಚೆ ಹಾಕಿದಳು .
ಮೊದಲ ವಿಶ್ವಯುಧ್ಧದಲ್ಲಿ  X-ray ವಾಹನವನ್ನು ತೆಗೆದುಕೊಂಡು ಸೈನಿಕರ ಆರೈಕೆಮಾಡಿದಳು . ಪ್ಯಾರಿಸ್ ನಲ್ಲಿ ರೇಡಿಯೋ ಆಕ್ಟಿವಿಟಿ ಬಳಸಿ ವೈದ್ಯಕೀಯ ಅನ್ವೇಷಣೆ ಮಾಡುವ ಕೇಂದ್ರವನ್ನು ಸ್ಥಾಪಿಸಿದಳು .  ಆಕೆಯ ವರ್ಕ್ ಶೀಟ್ ಗಳನ್ನು ಇಂದಿಗೂ ಪ್ಯಾರಿಸ್ ನ ಕ್ಯೂರಿ ಮ್ಯೂಸಿಯಂ ನಲ್ಲಿ ಕಾಣಬಹುದು . ಆ ಹಾಳೆಗಳೂ ಸಹ ವಿಕಿರಣ ಸೂಸುತ್ತವೆ . ವಿಕಿರಣದ ಮಧ್ಯೆಯೇ ಕೆಲಸ ಮಾಡಿದ ಮೇರಿಯ ದೇಹ ಕ್ಯಾನ್ಸರ್ ಗೆ ಒಳಗಾಗಿತ್ತು . ವಿಕಿರಣ ತನ್ನ ಕಬಂಧ ಬಾಹುಗಳಿಂದ ಮೇರಿಯನ್ನು ಅಪ್ಪಿಕೊಂಡಿತ್ತು . ಸಾವಿರದ ಒಂಬೈನೂರಾ ಮೂವತ್ತಾಲ್ಕರಲ್ಲಿ ಮೇರಿ ಅಸುನೀಗಿದಳು .
ಈಗಲೂ ನಾನು ಯೋಚಿಸುತ್ತೇನೆ , ಆಕೆಗೆ ತನ್ನ ಗಂಡನ ಜೊತೆ ನೊಬೆಲ್ ತೆಗೆದುಕೊಳ್ಳುವಾಗ ಎಷ್ಟು ಸಂತೋಷವಾಗಿದ್ದಿರಬಹುದು ? . ಹೊಳೆಯುವ ರೇಡಿಯಂ ಸಿಕ್ಕಿದಾಗ ? ಅದು ತನ್ನ ಹತ್ತಿರವಿದ್ದ ಎಲ್ಲ ವಸ್ತುಗಳನ್ನೂ ರೇಡಿಯೋ ಆಕ್ಟಿವ್ ಮಾಡುತಿತ್ತು . ಪಿಯರಿ ಸತ್ತಾಗ ಎಷ್ಟು ಅತ್ತಿದ್ದಳೋ ? . ಒಂದು ದಿನವೂ ನೆಟ್ಟಗೆ ಊಟ ಮಾಡದೆ ರಕ್ತ ಹೀನ ಆಕೆಯ ಕಣ್ಣುಗಳನ್ನು ನೋಡಿದರೆ ನನಗೆ ಅವಳ ಎಲ್ಲಾ ಕಥೆ ಕಣ್ಣೆದುರು ಬರುತ್ತದೆ . ಆಕೆಯ ಬಗ್ಗೆ ತಿಳಿದುಕೊಳ್ಳಲು ಇನ್ನೂ ಬಹಳಷ್ಟಿದೆ , ಬರೆಯಲು ಕುಳಿತರೆ ನನ್ನ ಜೀವನವೇ ಮುಗಿದೀತು . ಸಾಧ್ಯವಾದರೆ ಕೆಳಗಿನ ಪುಸ್ತಕಗಳನ್ನು ಓದಿ .
ಬೆಳಕಿನೊಂದು ಕಿರಣ ಮೇರಿ ಕ್ಯೂರಿ  - ನೇಮಿಚಂದ್ರ
Radiation and modern life-Alan Walter
Marie Curie-Philip steel
Obsessive genius-Barbara Goldsmith
Something out of nothing-Carla Killough