22/9/14

ಅಮೂರ್ತ

ಒಂಬತ್ತು ವರೆಗೆ ಕಾಲೇಜ್ ಇದ್ದರೂ ಅಂದು ಏಕೋ ಅಜಿತ್ ಎಂಟುವರೆಗೆ ಬಂದಿದ್ದ . ಬಂದವನೇ ಸೀದಾ ಸ್ಟಾಫ್ರೂಮ್ ಒಳಹೊಕ್ಕು ಅವನ ಜಾಗದಲ್ಲಿದ್ದ ಧೂಳು ಕೊಡವಿದ . ಹಾಗೇ ಒಮ್ಮೆ ಟೈಮ್ ಟೇಬಲ್ ತೆಗೆದು ನೋಡಿದ . "ಅರೆ ಇವತ್ತು ನನಗೆ ಬರೀ ಎರಡೇ ಪಿರಿಯಡ್ ಅಷ್ಟೇ ". ಬಹುಶಃ ಸಂತೋಷಗೊಂಡ . ಮೊದಲ ಪಿರಿಯಡ್ ಸಿಕ್ಸ್ತ್ ಎ  ಕ್ಲಾಸ್ ಗೆ ಇತ್ತು . ಮೊದಲ ತಿಂಗಳ ಸಂಬಳ ಪಡೆಯುವ ಖುಷಿಯಲ್ಲಿ ಅವನಿಗೆ ಪಾಠವೇ ಮರೆತು ಹೋದಂತಿತ್ತು . ಕ್ಲಾಸಿನಲ್ಲಿ ಏನೇನೋ ಹೇಳಿ ಹತ್ತು ನಿಮಿಷ ಬೇಗನೆ ವಾಪಾಸ್ ಬಂದಿದ್ದ .
ಕ್ಯಾಂಟೀನ್ ನಲ್ಲಿ ಕಾಫೀ ಹೀರುತ್ತಾ "ಇವತ್ತು ಯಾವುದಾದರೂ ಬುಕ್ಕು ತಗೊಳ್ಳಲೇಬೇಕು ,ಅಮ್ಮನಿಗೆ ಸೀರೆ ಇಷ್ಟ ಆಗಬಹುದೇನೋ ". ಹೀಗೆ ಸಂಬಳ ಖಾಲಿ ಮಾಡುವ ಎಲ್ಲ ಸಾಮಾನ್ಯ ಯೋಚನೆಗಳನ್ನು ಮಾಡುತ್ತಿದ್ದ . 
ನೆಕ್ಸ್ಟ್ ಕೂಡ ಅವನು ಮಾಡಿದ ಪಿರಿಯಡ್ ಅಷ್ಟ -ಕಷ್ಟೇ . ಅಂತೂ ಇಂತೂ ಮಧ್ಯಾನ್ಹದ ಹೊತ್ತಿಗೆ ಸಂಬಳ ಕೈ ಸೇರಿತ್ತು . ಕೈ ತುಂಬದಿದ್ದರು ಮನಸ್ಸು ತುಂಬಿತ್ತು . 
"ಅಣ್ಣಾ " ಇದ್ದಕ್ಕಿದ್ದಂತೆ ಬಂದ ಸದ್ದಿನಿಂದ ಅಜಿತ್ ಬೆಚ್ಚಿ ಬಿದ್ದ . ತಿರುಗಿ ನೋಡಿದ . "ನನ್ನ ಹೆಸರು ಲಕ್ಷ್ಮಿ ,ಇವಳು ನನ್ನ ಮಗಳು ಸರೂ ,ಇವಳಿಗೆ ಹಾರ್ಟ್ ನಲ್ಲಿ ಹೋಲ್ ಇದೆ . ಅಣ್ಣ ಆಪರೇಷನ್ ಗೆ ಸ್ವಲ್ಪ ದುಡ್ಡು ಕೊಟ್ರೆ ಸಹಾಯ ಆಗ್ತಿತ್ತು "ಎಂದು ಏನೇನೋ ಫೈಲ್ ಹರವಿದಳು . ಇದೆಲ್ಲದರಲ್ಲಿ ಆಸಕ್ತಿಯೇ ಇಲ್ಲದ ಆತ "ಏ ಹೋಗಮ್ಮ ಪ್ರಿನ್ಸಿಪಾಲ್ ಹತ್ರ ಪರ್ಮಿಷನ್ ತೊಗೊ ಬಾ "ಅಂತ ಕೂಗಿದ . 
"ಅಣ್ಣಾ ದಯವಿಟ್ಟು ಹಾಗನ್ನಬೇಡಿ ". ಬಹುಶಃ ಆ ಮಾತು ಅವನಿಗೆ ತಟ್ಟಿತ್ತು . ಕೈಯಲ್ಲಿದ್ದ ಅಷ್ಟೂ ಸಂಬಳವನ್ನು ಅವಳ ಕೈಯಲ್ಲಿಟ್ಟು ಸೀದಾ ಮನೆ ಹಾದಿ ಹಿಡಿದ . 
ಮನೆಯಲ್ಲಿ ತುಪ್ಪದ ವಾಸನೆ ಮೂಗಿಗೆ ಬಡಿಯುತ್ತಿತ್ತು . ಮನೆಯಲ್ಲಿ ಸಿಹಿಯ ವಾತಾವರಣ ." ಅಮ್ಮ ಬಂದು ಸಂಬಳ ಎಲ್ಲೋ ಹರಕೆ ಒಪ್ಪಿಸಬೇಕು" ಎಂದರು. ಸುಮ್ಮನೆ ಟಿವಿ ಹಾಕಿದ ಅದೇ ನ್ಯೂಸ್ ಚಾನೆಲ್ . ಸುದ್ದಿ ಮಾತ್ರ ವಿಚಿತ್ರವಾಗಿತ್ತು . ಈತ ದುಡ್ಡು ಕೊಟ್ಟ ಹೆಂಗಸನ್ನು ಪೊಲೀಸರು ಹಿಡಿದಿದ್ದರು . ಸುಳ್ಳು ಕಾರಣ ಹೇಳಿ ಜನರಿಂದ ದುಡ್ಡು ಪಡೆದುಕೊಳ್ಳುತ್ತಿದ್ದಳು. 
ಒಂದು ಕ್ಷಣ ಮಂಕಾದ ಅಜಿತ್ ತಕ್ಷಣ ಎಚ್ಚೆತ್ತುಕೊಂಡ ಸದ್ಯ ಆ ಮಗುವಿಗೆ ಏನೂ ಖಾಯಿಲೆ ಇಲ್ಲವಲ್ಲ ಎಂದು ಅಂದುಕೊಂಡು . ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡ . 

15/9/14

ನೆನಪಿನ ಬುತ್ತಿಯಿಂದ

ಅಂದು ಶನಿವಾರವಾಗಿತ್ತು .ಈ ಶಾಲೆ ,ಪಾಠ ರಗಳೆಗಳಿಂದ ಮುಕ್ತಿ ಯಾವಾಗ ಸಿಗುತ್ತೋ ಎಂದು ನಾನು  ಲಾಸ್ಟ್ ಪಿರಿಯಡ್ನಲ್ಲಿ
ಕೂತಿದ್ದೆ . ಅಂತೂ -ಇಂತೂ ನೂರೆಂಟು ಸಲ ವಾಚ್ ನೋಡಿ ೧೨ ಗಂಟೆ  ಆಗಿತ್ತು. ಶಾಲೆ ಬಿಟ್ಟ ತಕ್ಷಣ  ಒಂದೇ ಓಟಕ್ಕೆ ಮನೆ ಸೇರಿದ್ದೆ .ಬೇಗ ಬೇಗ ಊಟ ಮುಗಿಸಿ ಕ್ರಿಕೆಟ್ ಆಡಲೆಬೇಕೆಂಬ ಪಣ ತೊಟ್ಟಿದ್ದೆ . ಮಳೆ ೩ ತಿಂಗಳಿನಿಂದ  ನಮ್ಮ ಆಟಕ್ಕೆ ಕಲ್ಲು ಹಾಕುತಿತ್ತು . ಮಲೆನಾಡಿನ ಮಳೆಯೇ  ಹಾಗೆ ಸಾಕಪ್ಪ ಅನಿಸುವಷ್ಟು ಬೇಸರ ತರಿಸುತ್ತದೆ .ಈ ಮಳೆಯಿಂದ ಮಲೆನಾಡಿಗರು ಅನುಭವಿಸುವ ಕಷ್ಟ ಒಂದೆರಡಲ್ಲ. ಕರೆಂಟ್ ಹೋದರೆ ವಾರಗಟ್ಟಲೆ ನಾಪತ್ತೆಯಾಗಿ ಬಿಡುತ್ತದೆ. ಎಲ್ಲಾದರೂ ಸುತ್ತಾಡೋಣ ಎಂದು ಹೊರಟರೆ ,ಎಂತಾ ಬ್ರಾಂಡೆಡ್ ಛತ್ರಿ ಹಿಡಿದು ಹೊರಟರು ಅರ್ಧ ಮೈ ಒದ್ದೆಯಾಗುವುದು ಖಂಡಿತ . ಇನ್ನು ಜಿಗಣೆಗಳ ಕಾಟ ಬೇರೆ . ಹತ್ತತ್ತು ನಿಮಿಷಕ್ಕೊಮ್ಮೆ  ಕಾಲು ನೋಡಿಕೊಳ್ಳುತ್ತಿರಬೇಕು . ಇಲ್ಲದಿದ್ದರೆ ಜಿಗಣೆಗಳು ಹಾಯಾಗಿ ಹತ್ತಿ ಕುಳಿತು ಕಾಲಿಗೆ ಮುತ್ತುಕೊಡುತ್ತಿರುತ್ತದೆ. ಆದರೆ ಅಂದು ಮಳೆ ಸ್ವಲ್ಪ ತಗ್ಗಿತ್ತು. ಮೂರು ತಿಂಗಳ ಕ್ರಿಕೆಟ್ ಹಾಗೂ ಮಳೆಯ ನಡುವಿನ ಮ್ಯಾಚ್ ಸುಖಾಂತ್ಯ ಕಂಡಿತ್ತು . ಆದ್ದರಿಂದಲೇ ನಮ್ಮ ಸೈನ್ಯ ಊಟ ಮುಗಿಸಿ ಮೈದಾನದ ಕಡೆ ದಾಪುಗಾಲಿಡುತ್ತಿತ್ತು. ನಾನು ಮನಸ್ಸಿನಲ್ಲೇ  ಎಷ್ಟು ಸಿಕ್ಸರ್ ಹೊಡೆಯ ಬೇಕು ,ಎಷ್ಟು ವಿಕೆಟ್ ತೆಗೆಯಬೇಕು ಎಂದು ಕೂಡಿಕಳೆಯುತ್ತಿದ್ದೆ . ನಾವು ಆಟವಾಡುವ ಮೈದಾನ ನಮ್ಮ ಮನೆಯಿಂದ ಒಂದೆರಡು ಕಿಲೋಮೀಟರು ದೂರವಿತ್ತು . ಅದನ್ನು ಸೇರಲು ನಾವು ಕಾಡಿನ ಹಾದಿ ಸವೆಸಬೇಕಿತ್ತು .
ಆದರೆ ಅಲ್ಲಿ ಒಂದು ಕಾರು ಭರ್ರೆಂದು ನಮ್ಮನ್ನು  ಹಿಂದಿಕ್ಕಿ  ದಿಣ್ಣೆಗಳನ್ನು ಹತ್ತಿಳಿಯುತ್ತಾ ,ಹಾರನ್ ಮಾಡುತ್ತಾ  ಆತುರಾತುರವಾಗಿ ಹೋಯಿತು . 
ಆ ದಾರಿಯಲ್ಲಿ ಮೋಟಾರು ವಾಹನಗಳು ಅಪರೂಪವೆಂದೇ ಹೇಳಬಹುದು. ಅಲ್ಲಿ ವಾಹನಗಳು ಓಡಾಡುವುದು ಕೇವಲ ಯಾರಿಗಾದರೂ ಹುಷಾರಿಲ್ಲದ್ದಿದ್ದಾಗ  ಮಾತ್ರ . ಆದ್ದರಿಂದ ನಾವು ಯಾರಿಗೋ ಹುಷಾರಿಲ್ಲ ಎಂದು ಸರ್ವ ಸಮ್ಮತ ವ್ಯಕ್ತಪಡಿಸಿದೆವು . 
"ಆ ದಾರಿಯಲ್ಲಿ ಹೋಗಬೇಡ್ರಣ್ಣ ಅಲ್ಲಿ ಜೇನು ಐತೆ !"ಎಂದು ನನಗೆ ನಮ್ಮ ಮನೆಯ ಆಳು ಮಾರ ಹೇಳಿದ್ದು ನೆನಪಿಗೆ ಬಂತು . ಬಹುಶಃ ಯಾರಿಗೋ ಜೇನು ಕಚ್ಚಿದೆ ಎಂದು ನಾನು ಅನುಮಾನ ವ್ಯಕ್ತಪಡಿಸಿದೆ . ಅದೇ ದಾರಿಯಿಂದ ಬಂದ ನನ್ನ ಚಿಕ್ಕಪ್ಪ "ಏ ಅಲ್ಲಿ ಹೋಗಬೇಡ್ರೋ ಅಲ್ಲಿ ಜೇನು ಎದ್ದಿದೆ " ಎಂದು ಎಚ್ಚರಿಕೆ ನೀಡಿದರು . ನಮ್ಮ ಕ್ರಿಕೆಟ್ ಆಡುವ ಕನಸಿಗೆ ತಣ್ಣೀರು ಬಿದ್ದಿತ್ತು . ಆದರೆ ನನ್ನ ಸ್ನೇಹಿತನೊಬ್ಬ ಒಂದು ಉಪಾಯಮಾಡಿದ ,ಅದರಂತೆ ನಾವು ಬೇರೆ ದಾರಿ ಹಿಡಿದೆವು . ಆದರೆ ನನ್ನ ಮನಸ್ಸಿನಲ್ಲಿ ಭಯ ತಾಂಡವಾಡುತ್ತಿತ್ತು . ತಕ್ಷಣ ನನಗೆ ತೇಜಸ್ವಿ  ಕರ್ವಾಲೋ ಕೃತಿಯಲ್ಲಿ ಓದಿದ 'ಮೌ ಮೌ ' ಬೀ ಗಳು ಜ್ಞಾಪಕವಾಯಿತು . ಸಾಮಾನ್ಯವಾಗಿ ಅವು ನೆಲ ಮಟ್ಟದ್ದಲ್ಲೇ ಗೂಡು ಕಟ್ಟುತ್ತವೆ ,ಆದ್ದರಿಂದಲೇ ಗೂಡಿನ ರಕ್ಷಣೆ ಸ್ವಲ್ಪ ಕಷ್ಟ . ಅದರ ಗೂಡಿನ ಬಳಿ ಸುಳಿದಾಡಿದರೂ ಸಾಕು ರಪರಪ ಒಂದೊರ ಹಿಂದೊಂದು ಬಂದು ಹೊಡೆಯತೊಡಗುತ್ತವೆ . ಆದರೆ ಮೌ ಮೌ ಬೀ ಗಳನ್ನು ನಾನು ಮಲೆನಾಡಿನಲ್ಲಿ ಎಲ್ಲೂ ನೋಡಿರಲಿಲ್ಲ ಅದು ಸೌತ್ ಆಫ್ರಿಕಾ ಭಾಗದಲ್ಲಿ ಮಾತ್ರ ಇವೆ ಎಂದು ವಿಜ್ಞಾನಿಗಳು ಧೃಡಪಡಿಸಿದ್ದರು . ಆದರೆ ಯಾರಿಗೆ ಗೊತ್ತು ,ಈ ಕಗ್ಗಾಡಿನ ಮೂಲೆಯನ್ನು ಅವರು ನೋಡಿದ್ದಾರೆಯೇ ? ನನ್ನ ಆತಂಕ ಹೆಚ್ಚಾಗುತ್ತಿತ್ತು . ನಾನು ವಾಪಸ್ಸು ಹೋಗುವ ಮನಸ್ಸು ಮಾಡಿದೆ ,ಆದರೆ ಗೆಳೆಯರ ಒತ್ತಾಯಕ್ಕೆ ಮುಂದುವರೆಯಬೇಕಾಯಿತು . ಇನ್ನೇನು ಮೈದಾನ ಬಂದಿತು ಎನ್ನುವಾಗ ಇದ್ದಕ್ಕಿದ್ದಂತೆ 'ಗುಂಯ್ ' ಎಂಬ ಶಬ್ದ ಮಾರ್ದನಿಸಿತು . ನಾವು ಒಬ್ಬರನ್ನೊಬರು ಲೆಕ್ಕಿಸದೆ ತಳ್ಳಾಡಿ ಹೊಳೆ,ಸೇತುವೆ ,ರೋಡ್ ಎಲ್ಲ ಒಂದೇ ನೆಗೆತಕ್ಕೆ ಹಾರಿ ಓಡತೊಡಗಿದೆವು . ಅಂತು ಜೇನು ನೊಣಗಳಿಂದ ತಪ್ಪಿಸಿಕೊಂಡು ಒಂದು ಮರದ ಕೆಳಗೆ  ನಿಂತುಕೊಂಡೆವು . ಜೇನಿನ ಕೊಂಬು ಬಹಳ ಆಳಕ್ಕೆ ಇಳಿದಿದ್ದರಿಂದ ನನಗೆ ಅಸಾಧ್ಯ ನೋವು ಶುರುವಾಗಿತ್ತು . ನನಗೆ ಜೇನಿನ ಮೇಲೆ ನಖಶಿಖಾಂತ ಕೋಪ ಬಂದಿತು . ಜೇನನ್ನು ಈ ಭೂಮಿಯಿಂದಲೇ ನಿರ್ನಾಮ ಮಾಡಿಬಿಡಬೇಕೆಂದು  ಅನಿಸುತ್ತಿತ್ತು . ಅದಕ್ಕೋಸ್ಕರ ಜೇನಿನ ಸವಿಯನ್ನು ತ್ಯಜಿಸಲು ಸಿದ್ದವಿದ್ದೆ  ಆದರೆ ನಿಧಾನವಾಗಿ ಮನವರಿಕೆಯಾಯಿತು ,ಅವು ನಮ್ಮ ಜಾಗಕ್ಕೆ ಬಂದಿಲ್ಲ ,ನಾವೇ ಅವುಗಳ ಜಾಗ ಆಕ್ರಮಿಸಿಕೊಂಡಿದ್ದೇವೆ . 'ಇರುವುದೊಂದೇ ಭೂಮಿ ಸಹಬಾಳ್ವೆ ಅನಿವಾರ್ಯ '.                    
    

13/9/14

ನಿರ್ಗಮನ

(ಚಿ ರ  ನಿದ್ರೆಗೆ  ಜಾರಿದ ನನ್ನ   ಸ್ನೇಹಿತನಿಗೆ)

ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ
ಸ್ನೇಹದ ಒರತೆ  ಬರಿದಾಗುವಷ್ಟು  ಸುರಿಯುವೆ  ಸ್ನೇಹವನ್ನು  ಆ ಸಂಜೆ
ನನ್ನ ಮನದ ಅರಮನೆಯಿಂದ ಬಿಡುಗಡೆ ನೀಡುತ್ತಿರುವೆ, ಎಂದಿಗೂ ನನ್ನ ಕಾಡದಿರು
ಎಂದೋ ಬಿದ್ದ ಕನಸಿನಲ್ಲಿ, ಧುತ್ತನೆ ಎದುರಾಗುವ ನೆನಪಿನಲ್ಲಿ
ನಿನ್ನ ಜೀವ ಹಿಡಿದಿಡಲು ನಾನು ಸಾವಿತ್ರಿ, ಅನುಸೂಯೆಯಲ್ಲ
ನೀನೆ  ಒಮ್ಮೆ ಬಂದು ತಬ್ಬಿಬಿಡು,ಆವರಿಸಿಬಿಡು
ಕಾಲ್ತೊಳೆದು ಬೀಳ್ಕೊಡುವೆ, ದಯವಿಟ್ಟು ಹೋಗದಿರು