16/12/15

ನನ್ನ ದೇಶ ನನ್ನ ಜನ -ಅಂತ್ಯ (ಕಾಪಾಡಿ....... ಕಾಪಾಡಿ )

ನಾಗ , ಮಂಜ ಹಾಗೂ ಮಲೆನಾಡಿನ ಕಾಡು  ಈ ಮೂರೂ ಸಹ ಅವನತಿಯ ಅಂಚಿನಲ್ಲಿದೆ . ನಾಗ , ಮಂಜ ಎಂದರೆ ಇಲ್ಲಿ ನಾನು ವ್ಯಕ್ತಿಯ ಬಗ್ಗೆ ಮಾತನಾಡುತ್ತಿಲ್ಲ , ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಿದ್ದೇನೆ . ನಾಗ ಗಿಡ ಮೂಲಿಕೆ ಔಷಧಿಯ ಭಂಡಾರ , ನನಗೇ ಗೊತ್ತಿಲ್ಲದ ಎಷ್ಟೋ ಗಿಡ ಮರಗಳ ಬಗ್ಗೆ ಅವನಿಗೆ ಗೊತ್ತಿತ್ತು . ಆದರೆ ಆತ ಅದನ್ನು ಯಾರಿಗೂ ಹೇಳಿ ಕೊಟ್ಟಿರಲಿಲ್ಲ . ನಮ್ಮ ಸಾಂಪ್ರದಾಯಿಕ ಔಷಧೀಯ ಪದ್ಧತಿ ನಶಿಸಿ ಹೋಗುತ್ತಿರುವುದಕ್ಕೆ ಇದೇ ಕಾರಣ . ನೀವೇನಾದರೂ ಪಂಡಿತರ ಬಳಿ ಔಷಧಿ ತೆಗೆದುಕೊಂಡಿದ್ದರೆ ನಿಮಗೆ ಈ ಮಾತು ಅರ್ಥವಾಗುತ್ತದೆ , ಅವರು ಔಷಧಿಯನ್ನು ಕುಟ್ಟಿಯೋ , ರುಬ್ಬಿಯೋ ಇಲ್ಲ ಎಲೆಯನ್ನು ಮುದುರಿ ಕೊಡುತ್ತಾರೆ . ಕೆಲವೊಮ್ಮೆ ವಾಸನೆ ತಿಳಿಯಬಾರದೆಂದು ಜೀರಿಗೆ ಸೇರಿಸಿ ಕೊಡುವುದೂ ಇದೆ .
ಅವರ ಕುಟುಂಬದವರಿಗೆ ಮಾತ್ರ ಆ ಔಷಧಿಯ ಬಗ್ಗೆ ಗೊತ್ತಿರುತ್ತದೆ . ಒಂದೊಮ್ಮೆ ಪಂಡಿತರಿಗೆ ಅಕಾಲಿಕ ಸಾವು ಬಂದರೆ ಆ ಔಷಧಿ ಅಲ್ಲಿಗೇ ನಶಿಸಿ ಹೋಗುತ್ತದೆ .
ನಾಗನ ಚೇಷ್ಟೆಯೇ ಅವನ ಪ್ರಾಣಕ್ಕೆ ಅಪಾಯ ತಂದಿಡುತ್ತದೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ . ಅಡಿಕೆ ಮರ ಹತ್ತಲು ಅವನಿಗೆ ಬರುತ್ತಿರಲಿಲ್ಲ , ಆದರೂ ಮೊಂಡು ಧೈರ್ಯದಿಂದ ಹತ್ತಿದ್ದನಂತೆ . ಸುಮಾರು ನಲವತ್ತು ಅಡಿ ಎತ್ತರದಿಂದ ಕೆಳಕ್ಕೆ ಬಿದ್ದನಂತೆ . ಅವನಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ . ಕೆಲವೇ ದಿನಗಳಲ್ಲಿ ಅವನು ಸತ್ತು ಹೋದ . ಅದಾಗುವ ಕೆಲ ತಿಂಗಳ ಹಿಂದೆ ನಮ್ಮ ಮನೆಯ ಅಂಗಳದಲ್ಲಿ ಅವನು ಮಾವಿನ ಮರ ನೆಟ್ಟು ಹೋಗಿದ್ದ . ಅದನ್ನು ನೋಡಿದಾಗಲೆಲ್ಲ ನನಗೆ ನಾಗನ ನೆನಪಾಗುತ್ತದೆ . ಆತ ನಮ್ಮ ಮನೆಯ ಆಳಾಗಿರಲಿಲ್ಲ , ಅವನಿಗೆ ಯಾವ ಕೆಲಸವನ್ನೂ ಮಾಡಲು ಬರುತ್ತಿರಲಿಲ್ಲ . ನಾವಿಬ್ಬರೂ ಸ್ನೇಹಿತರು ಎಂದರೆ ಸುಳ್ಳಲ್ಲ . ಅವನಿಗೆ ನಾನು ಸಂಬಳ ಕೊಡುತ್ತಿದ್ದದ್ದೂ ಕಡಿಮೆಯೇ .
ಮಂಜನ ಅಂತ್ಯ ಇನ್ನೂ ವಿಚಿತ್ರ ಅನಿಸುತ್ತದೆ . ಆಧುನಿಕತೆ ನಮ್ಮೂರಿಗೂ ಬಡಿದಿತ್ತು , ಜಾಗತೀಕರಣ ತನ್ನ ಕಬಂಧ ಬಾಹುಗಳನ್ನು ಚಾಚಿತ್ತು . ನಮ್ಮೂರಿನ ಯುವಕರು ತರ ತರದ ಸ್ಟೈಲ್ ಕೇಳತೊಡಗಿದರು , ಕ್ರಮೇಣ ಅವನಿಗೆ ಗ್ರಾಹಕರು ಕಡಿಮೆಯಾಗತೊಡಗಿದರು . ಊರೂರು ಸುತ್ತ ತೊಡಗಿದ , ಕುಡಿತ ಜಾಸ್ತಿಯಾಗತೊಡಗಿತು . ಕೊನೆಗೆ ಅರೆ ಹುಚ್ಚನಾಗಿ ಓಡಿ ಹೋದನಂತೆ .
ಇನ್ನು ಮಲೆನಾಡಿನ ಕಾಡು , ಅದು ' ನ ಭೂತೋ ನ ಭವಿಷ್ಯತಿ ' . ಕಾರಂತರ ' ಬೆಟ್ಟದ ಜೀವ ' ಕಾಲದಲ್ಲಿ ಕಾಡು ಮನುಷ್ಯನಿಗೆ ಸವಾಲಾಗಿ ಪರಿಣಮಿಸಿತ್ತು . ನಂತರ ಕುವೆಂಪುರವರ ಕಾನೂರು ಹೆಗ್ಗಡತಿ ಅಥವಾ ಮಲೆಗಳಲ್ಲಿ ಮದುಮಗಳು ಕಾಲದಲ್ಲಿ ಕಾಡು ನಮ್ಮೆಲ್ಲರ ಪೊರೆಯುವ ತಾಯಿಯಾಗಿ ಕಂಡುಬರುತ್ತಿತ್ತು . ಆದರೆ ನಮ್ಮ ಈಗೀನ ಕಾಲದಲ್ಲಿ ನಾವೇ ಕಾಡನ್ನು ಉಳಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ . ನಮ್ಮ ಬಜೆಟ್ನಲ್ಲಿ ದುಡ್ಡನ್ನು ಎತ್ತಿಟ್ಟು ಅಭಯಾರಣ್ಯಗಳನ್ನು ಸೃಷ್ಟಿಸಿ , ಕಾನೂನುಗಳನ್ನು ಮಾಡಿ ಕಾಡು ಉಳಿಸಿಕೊಳ್ಳುವ ವಿಪರ್ಯಾಸ ನಮ್ಮದು . ನಮ್ಮ ನಾಡು ಈಗ ಗಂಧದ ಗುಡಿ ಅಲ್ಲ , ಯಾವಾಗಲೋ ನಾವು ಗಂಧದ ಮರಗಳನ್ನು ತಿಂದು ತೇಗಿ ಮುಗಿದಿದೆ . ಒಂದೊಂದು ಮರ ಐದು - ಆರು ಲಕ್ಷ ಬೆಲೆಬಾಳುತ್ತದೆ ಎಂದಾದರೆ , ಲಕ್ಷ ಲಕ್ಷ ಹೆಕ್ಟೇರು ಇರುವ ನಮ್ಮ ಕಾಡಿನ ಮೌಲ್ಯ ನಿಮಗೆ ಅರ್ಥವಾಗಬಹುದು . ಯಾವಾಗ ನಾವು ಕಾಡನ್ನು ದುಡ್ಡಿನಿಂದ ಅಳೆಯಲು ಶುರುಮಾಡುತ್ತೀವೋ ಅಂದಿನಿಂದ ನಮ್ಮ ಅವನತಿ ಪ್ರಾರಂಭವಾಗುತ್ತದೆ . Forest is an unimaginable treasure . ಅದನ್ನು ಉಳಿಸಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ .
ಮಲೆನಾಡಿನ ಸಂಸ್ಕೃತಿ ಕವಲು ದಾರಿಯಲ್ಲಿದೆ . ಮಲೆನಾಡಿಗರು ಭವಿಷ್ಯ ಅರಸಿ ಸಿಟಿಗಳತ್ತ ಮುಖಮಾಡುತ್ತಿದ್ದಾರೆ . ದಾರ್ಶನಿಕರು ಹುಟ್ಟಿದ ನಮ್ಮ ಮಲೆನಾಡು ಈಗ ಕೋಮು ವಾದದ , ಜಾತಿ ಕಲಹಗಳ ಗೂಡಾಗಿದೆ .
ನನ್ನ ದೇಶ ನನ್ನ ಜನ , ನಾನು ಹುಟ್ಟಿ ಬೆಳೆದ ಊರಿನ ಕಥೆ . ಇದು ತೇಜಸ್ವಿ ಅವರ ಕೃತಿಗಳ ಅನುಕರಣೆ ಅಲ್ಲ . ಅವರ ಬರಹಗಳ ಮುಂದೆ ನಾನು ಸೊನ್ನೆಗಿಂತಲೂ ಕಡಿಮೆ . ಕರ್ವಾಲೋ ಒಂದು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಬರೆದ ಅಧ್ಭುತ ಕೃತಿ , ಅದಕ್ಕೆ ಇದನ್ನು ಹೋಲಿಸಿದರೆ ಮೂರ್ಖತನವಾಗುತ್ತದೆ .
ನಾನು ಜಾಸ್ತಿ ಸುತ್ತಾಡುತ್ತಿದ್ದದ್ದು ನಮ್ಮ ಮನೆಯ ಆಳುಗಳ ಜೊತೆ . ಕೊನೆಗೌಡನ ಜೊತೆಗೆ ಊಟಕ್ಕೆ ಕೂತು ಬಿಡುತ್ತಿದ್ದೆ , ಗೊಬ್ಬರ ಹಾಕಲು ಬಂದವರ ಜೊತೆ ಗಂಟೆಗಟ್ಟಲೆ ಮಾತಾಡುತ್ತಿದ್ದೆ . ಅವರ ಜೊತೆಗೆ ಕಳೆದ ಕೆಲವು ಅಮೂಲ್ಯ ಹಾಸ್ಯ ಪ್ರಸಂಗಗಳ ಹೊತ್ತಿಗೆಯೇ ' ನನ್ನ ದೇಶ ನನ್ನ ಜನ ' . 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ