28/1/16

ರಾಧೆಗೊಬ್ಬ ಕೃಷ್ಣ

ನಿಮಗೊಂದು ಗುಟ್ಟು ಹೇಳಬೇಕು , ಸ್ವಲ್ಪ ಹತ್ತಿರ ಬನ್ನಿ . ವೀಕೆಂಡ್ ನಲ್ಲಿ ಸಿನೆಮಾಗೆ ಹೋಗುವ ಬದಲು , ಸಾಧ್ಯವಾದರೆ ವೀಕ್ ಡೇಸ್ ನಲ್ಲಿ ಹೋಗಿ . ವೀಕೆಂಡ್ ನಲ್ಲಿ ಟಿಕೆಟ್ ದರ ಜಾಸ್ತಿ ಎನ್ನುವ ಕಾರಣಕ್ಕಲ್ಲ , ವೀಕೆಂಡ್ನಲ್ಲಿ ಗಜಿ-ಬಿಜಿ ಜಾಸ್ತಿ . ಕೆಲವರಿಗೆ  ಕೆಟ್ಟ ಚಾಳಿ ಇದೆ , ಥೀಯೇಟರ್ ನಲ್ಲಿ ಕುಳಿತು ಮೊಬೈಲ್ ಉಪಯೋಗಿಸುವುದು . ಎಂದೂ ಬರದ ಮುಖ್ಯ ಕರೆಗಳು ಅವರಿಗೆ ಥೀಯೇಟರ್ ನಲ್ಲಿ ಇದ್ದಾಗಲೇ ಬರುತ್ತದೆ . ಅಥವಾ ಅವರು ಮೆಸೇಜ್ ಕುಟ್ಟುತ್ತಿದ್ದರೆ ಮೊಬೈಲ್ ಸ್ಕ್ರೀನಿನ ಬೆಳಕು ನಮ್ಮ ಕಣ್ಣಿಗೆ ರಾಚುತ್ತಿರುತ್ತದೆ . ಚಿಳ್ಳೆ-ಪಿಳ್ಳೆಗಳನ್ನು ಕರೆದು ಕೊಂಡು ಬಂದಿದ್ದರಂತೂ ಕಥೆ ಮುಗಿದೇ ಹೋಯ್ತು ಬಿಡಿ . ಅವರ ಚೇಷ್ಟೆ , ರಂಪದ ಮಧ್ಯೆ  ನಾವು ಸಿನಿಮಾ ನೋಡಿದ ಹಾಗೆಯೇ ? ....
ವೀಕ್ ಡೇಸ್ ಅಲ್ಲಿ ಹೋಗಿ . ಪೂರ್ತಿ ಥೀಯೇಟರ್ ನಮ್ಮದೇ . ಕೆಲವೊಮ್ಮೆ ನಮ್ಮೊಬ್ಬರಿಗೇ ಸಿನಿಮಾ ತೋರಿಸುತ್ತಾರೆ . ನೆನ್ನೆಯೂ ಹಾಗೇ ಆಯಿತು . ಇಡೀ ಥೀಯೇಟರ್ನಲ್ಲಿ ಇಪ್ಪತ್ತು , ಮೂವತ್ತು ಜನ ಇದ್ದಿರಬಹುದು ಅಷ್ಟೇ . ಒಳ್ಳೆ ರಾಜನ ತರಹ ಸಿನಿಮಾ ನೋಡಿ ಬರಬಹುದು . ಇನ್ನೂ ಒಂದು ಮುಖ್ಯ ಅಂಶ ಎಂದರೆ ನಮ್ಮ ಕಂಪನಿ , ಯಾವ್ಯಾವ ಸಿನೆಮಾಗೆ ಯಾರ್ಯಾರನ್ನು ಕರೆದು ಕೊಂಡು ಹೋಗಬೇಕೋ ಅವರನ್ನೇ ಕರೆದು ಕೊಂಡು ಹೋಗಿ .
( ಸಭ್ಯ ಗೆಳೆಯನನ್ನು ಪೋಲಿ ಸಿನೆಮಾಗೆ ಕರೆದು ಕೊಂಡು ಹೋದರೆ ಪ್ರತಿಯೊಂದು ದೃಶ್ಯವನ್ನು ಅವನಿಗೆ ಅರ್ಥ ಮಾಡಿಸುವ ಹೊಣೆ ನಿಮ್ಮದಾಗುತ್ತದೆ . ಅಥವಾ ಪೋಲಿ ಗೆಳೆಯನ ಜೊತೆ " ಆಡಿಸಿ ನೋಡು , ಬೀಳಿಸಿ ನೋಡು " ಹಾಡು ಕೇಳಿದರೂ ಅದು ಡಬಲ್ ಮೀನಿಂಗ್ ಆಗೇ ಕಾಣಿಸುತ್ತದೆ . )
ಅಯ್ಯೋ ವಿಷಯಾಂತರವಾಗುತ್ತಿದೆ ........ ಸೀದಾ ವಿಷಯಕ್ಕೆ ಬರೋಣ . ಎಲ್ಲಾ ಸಿನಿಮಾಗಳನ್ನು ಈ ರೀತಿ ನೋಡುವ ಅಗತ್ಯವಿಲ್ಲ . ಕೆಲವು ಸಿನಿಮಾಗಳನ್ನು ಟಿವಿಯಲ್ಲಿ ನೋಡಿದರೂ ಸಾಕು .
" ಬರಡಾದ ಆಗಸಕೆ ಕಾಡಿಹುದು ನಿನ ನೆನಪು , ಹುಡುಕಾಟದ ನೆಪದಲಿ ಭುವಿಗೆ ಬಂದಿಳಿದ್ಲು " .........  ಟ್ರೈಲರ್ ಮೊದಲ ಸಾಲಿನಲ್ಲೇ ರಿಕ್ಕಿ ಭರವಸೆ ಮೂಡಿಸಿತ್ತು . ಲಾಲ್ ಸಲಾಂ ಎನ್ನುತ್ತಾ ಹವಾ ಹುಟ್ಟುಹಾಕಿತ್ತು .
" ನೆತ್ತರ ಹನಿ ಮಣ್ಣಿಗೆ ಬಿದ್ದು , ಆಕಾಶ ಕೆಂಪಾಗಿ , ನೋವಿಗೆ ಹೊಸ ಅರ್ಥ ಬಂದು , ಮನದಲ್ಲೀಗ ಕ್ರಾಂತಿಯ ಬೆಂಕಿ . ಸೂರಿನ ಸುಖವಿಲ್ಲ , ನಿದ್ದೆಯ ಕನಸಿಲ್ಲ , ಬಾ ಸಾಥಿ ಈಗ ಗುರಿಯೊಂದೆ . ಹಲ್ಲಿಗೆ ಹಲ್ಲು , ಕಣ್ಣಿಗೆ ಕಣ್ಣು , ರಕ್ತಕ್ಕೆ ರಕ್ತ . " ಸುದೀಪ್ ಅವರ ಬೇಸ್ ಧ್ವನಿಯಲ್ಲಿ ಈ ಡೈಲಾಗ್ ಕೇಳಿದರೆ ಮೈ ಜುಮ್ಮ್ ಎನಿಸುತ್ತದೆ .
ನಕ್ಸಲ್ ಎಂಬ ವಿಷಯ ಇಟ್ಟುಕೊಂಡು ಸಿನಿಮಾ ಮಾಡುವುದು ಕಷ್ಟ . ಮಾಡಿದರೂ ಆ ಸಿನಿಮಾ ನಕ್ಸಲ್ ಪರವೋ ? ಅಥವಾ ವಿರೋಧವೋ ? ಎಂಬ ವಿಮರ್ಶೆಗೆ ಒಳಪಡಬೇಕಾಗುತ್ತದೆ . ಎರಡರ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟ ಸಾಧ್ಯ . ರಿಷಬ್ ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ . ರಿಕ್ಕಿ ನಕ್ಸಲಿಸಂ ಸಿನಿಮಾ ಎನ್ನುವುದಕ್ಕಿಂತ ರಾಧಾ ಕೃಷ್ಣರ ನವಿರಾದ ಪ್ರೇಮ ಕಥೆ . ಯಾವೊಂದು ದೃಶ್ಯಗಳೂ ಬೇಸರ ತರಿಸುವುದಿಲ್ಲ . ಡೈಲಾಗ್ ಬಗ್ಗೆಯಂತೂ ಎರಡು ಮಾತಿಲ್ಲ , ಅರ್ಥಪೂರ್ಣ , ಕಾವ್ಯಮಯ ಹಾಗೂ ಚಿಂತನೆಗೆ ಎಡೆ ಮಾಡಿಕೊಡುತ್ತದೆ .
ಮನೋಜ್ಞ ನಟನೆ ಕಾಣಬಹುದು . ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯ ಕೆಮಿಸ್ಟ್ರಿಗೆ ಫುಲ್ ಮಾರ್ಕ್ಸ್ . ನಕ್ಸಲಿಸಂ ಒಂದು ಕಾವ್ಯವಾಗಿ ತೆರೆಯ ಮೇಲೆ ಅಧ್ಭುತವಾಗಿ ಮೂಡಿಬಂದಿದೆ . ಕಥೆ ಎಲ್ಲೂ ಆಮೆಯಷ್ಟು ನಿಧಾನವಾಗಿ ಹೋಗುವುದಿಲ್ಲ ಅಥವಾ ಬುಲೆಟ್ ಟ್ರೈನಿನಂತೆ ಓಡುವುದಿಲ್ಲ .
ಅಳುವ ದೃಶ್ಯಗಳಿಗೆ ರಕ್ಷಿತ್ ಸೂಟ್ ಆಗುತ್ತಾರೋ ಇಲ್ಲವೋ ಎಂಬ ಅನುಮಾನ ನನಗಿತ್ತು , ಆದರೆ ತಾವು ಅಳುವ ಜೊತೆಗೆ ನಮ್ಮನ್ನೂ ಅಳಿಸುವ ತಾಕತ್ತು ಅವರಿಗಿದೆ . ಉಳಿದವರು ಕಂಡಂತೆ ಸಿನೆಮಾಗೆ ಪ್ರಶಸ್ತಿಗಳು ಬಂದಾಗ ರಕ್ಷಿತ್ ಅವರನ್ನು ಶಂಕರ್ ನಾಗ್ ಅವರ ಜೊತೆ ಹೋಲಿಕೆ ಮಾಡುತಿದ್ದರು . ಅದು ಉತ್ಪ್ರೇಕ್ಷೆಯಲ್ಲ ಬಿಡಿ . ಮೊದಲ ಸಿನಿಮಾ ತುಘಲಕ್ ಸೋತಾಗ ಕಣ್ಣೀರಿಟ್ತಿದ್ದ ರಕ್ಷಿತ್, ರಿಕ್ಕಿ ಸಿನಿಮಾದಲ್ಲಿ ನಮಗೆ ಕಣ್ಣೀರು ತರಿಸುತ್ತಾರೆ .
ಬೇಸರದ ಸಂಗತಿ ಎಂದರೆ ನಾನು ನೋಡಿದ ಥೀಯೇಟರ್ ನಲ್ಲಿ ರಿಕ್ಕಿಯದು ಕೊನೆ ಶೋ . ನಾಳೆ ಅದು ಅಲ್ಲಿಂದ ಎತ್ತಂಗಡಿ . ಹೇಳುವುದಿಷ್ಟೇ ಕೆಲ ಸಿನೆಮಾಗಳು ಥೀಯೇಟರ್ ನಿಂದ ಬೇಗ ಎತ್ತಂಗಡಿಯಾದರೂ ನಮ್ಮ ಮನಸ್ಸಿಂದ ಎತ್ತಂಗಡಿಯಾಗುವುದಿಲ್ಲ . ರಿಕ್ಕಿಯನ್ನು ಬಿಡುವು ಮಾಡಿಕೊಂಡು ಹೋಗಿ ನೋಡಿ , ಸಾಧ್ಯವಾದರೆ ವೀಕ್ ಡೇಸ್ ಅಲ್ಲೇ ಹೋಗಿ . ಇಂತಹ ಸಿನಿಮಾಗಳು ಕನ್ನಡಕ್ಕೆ ಸ್ವಾಗತಾರ್ಹ .
ಕೊನೆಗೆ ಒಂದು ಮಾತು , ಸಮಾಜವನ್ನು ಬದಲು ಮಾಡಲು ಹಿಂಸೆಯೊಂದೆ ಮಾರ್ಗವಲ್ಲ . ನಾವೊಬ್ಬ ಕೊಲೆಗಾರನನ್ನು ಸಾಯಿಸಿದರೆ ಈ ಜಗತ್ತಿನಲ್ಲಿ ಮೊದಲ್ಲಿದ್ದಷ್ಟೇ ಕೊಲೆಗಾರರು ಇರುತ್ತಾರೆ ಎಂಬುದು ಐರನಿ . ಪ್ರೀತಿಯ ಸಂಕೇತವೂ ಕೆಂಪು , ರಕ್ತದ ಸಂಕೇತವೂ ಕೆಂಪು , ಆಯ್ಕೆ ನಮ್ಮದು .
( ನಮ್ಮ ಡೈಲಾಗ್ ಕದ್ದಿರೋದು ನಿಜ . ನಾವು ರೋಡ್ ಮೇಲೆ ಕ್ರಿಕೆಟ್ ಆಡ್ತಾ ಇದ್ವಿ . ಯಾರಾದ್ರೂ ಬಂದು ಬೈದರೆ ನಾವು ಏನು ಹೇಳ್ತಾ ಇದ್ವಿ ಗೊತ್ತ ?
" ಈ ರೋಡ್ ಏನು ನಿಮ್ಮ್ ಅಪ್ಪನ್ ಮನೆ ಆಸ್ತಿನಾ ? .......... ....... ". )

20/1/16

ಕಟ್ ಮಾಡಿದ್ರೆ - ಸ್ವಮೇಕ್ ಸ್ವಗತ

ಹೀಗೊಂದು ಸಂಭಾಷಣೆ
ಅಪ್ಪ : ಎಲ್ಲರಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದೇ ಸರ್ವ ಶಿಕ್ಷಣ ಅಭಿಯಾನದ ಗುರಿ.
ಮುನ್ನಿ : ಎಲ್ಲರೂ ಅಕ್ಷರ ಕಲ್ತು ಕತೆ - ಕವನ ಬರಿಯೋಕೇ ಶುರು ಮಾಡಿದ್ರೆ ಏನಪ್ಪ ಮಾಡೋದು?
********* ಕಟ್ ಮಾಡಿದ್ರೆ ****************
ಅವನು ಪ್ರಸಿದ್ಧ ಲೇಖಕ. ಎಂತೆಂತದೋ ಪ್ರಶಸ್ತಿ ಎಲ್ಲಾ ಬಂದಿದೆ.
" ನೀನು ಏನ್ ಬರ್ದೆ? "
" ನೀನು ಏನ್ ಬರ್ದೆ? " ( ಎಕೋ ಎಫೆಕ್ಟ್)
ಒಳಗಿಂದ ಬಡಕೊಳ್ತಾ ಇದೆ.
*********** ಕಟ್ ಮಾಡಿದ್ರೆ **************
ಪ್ರಶಸ್ತಿ ಪ್ರಧಾನ ಸಮಾರಂಭ. ಅವರ ಪುಸ್ತಕಗಳು ಎಷ್ಟೋ ಜನರಿಗೆ ದಾರಿದೀಪವಾಗಿದೆಯಂತೆ, ಕತ್ತಲಲ್ಲಿ ಮೊಬೈಲ್ ಸಹ ಇಲ್ಲದಿದ್ದಾಗ ಅವರ ಪುಸ್ತಕ ತನ್ನನ್ನೇ ತಾನು ಸುಟ್ಟುಕೊಂಡು ದಾರಿದೀಪವಾಯಿತಂತೆ. ಸಮಾರಂಭದಲ್ಲಿ ಜನರಿಗಿಂತ ಪೋಲಿಸರೇ ಜಾಸ್ತಿ.
***********ಕಟ್ ಮಾಡಿದ್ರೆ ***************
ಅವನೊಬ್ಬ ಸೆಲೆಬ್ರಿಟಿ , ಅವನ ಹೆಸರು ಹೇಳಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಚುಕ್ಕಿ ಇಟ್ಟರೂ ಸಾವಿರಾರು ಲೈಕ್, ನೂರಾರು ಕಮೆಂಟ್ ಗ್ಯಾರಂಟಿ.
" ಸಮಾಜಕ್ಕೆ ನೀನೇನು ಕೊಟ್ಟೆ ? "
" ಸಮಾಜಕ್ಕೆ ನೀನೇನು ಕೊಟ್ಟೆ? " ( ಎಕೋ ಎಫೆಕ್ಟ್)
ಅವನ ಮನಸ್ಸಾಕ್ಷಿ
********** ಕಟ್ ಮಾಡಿದ್ರೆ ****************
ಇಪ್ಪತ್ನಾಲ್ಕು ತಾಸಿನ ಟಿವಿ ಚಾನೆಲ್
" ನಗರದಲ್ಲಿ ಗ್ಯಾಂಗ್ ರೇಪ್, ಬನ್ನಿ ಹೆಚ್ಚಿನ ಮಾಹಿತಿ ತಿಳಿಯೋಣ ನಮ್ಮ ಪ್ರತಿನಿಧಿಯಿಂದ ,
ಈ ರೇಪ್ ಹೇಗಾಯ್ತು? ಯಾಕಾಯ್ತು? ಇದರ ಬಗ್ಗೆ ಮಾಹಿತಿ ನೀಡಿ. " ........ ಅಡಚಣೆಗೆ ಕ್ಷಮೆ ಇರಲಿ
ಇದೀಗ ಬಂದ ಸುದ್ದಿ , ಬ್ರೇಕಿಂಗ್ ನ್ಯೂಸ್
" ದೊಡ್ಮನೆಯಿಂದ ಹುಚ್ಚ ಸಂಕಟ್ ಔಟ್ , ನಿರೀಕ್ಷಿಸಿ ಬಿಗ್ ಡಿಬೇಟ್ " .
*********** ಕಟ್ ಮಾಡಿದ್ರೆ *****************
ಕೈಯಲ್ಲಿ ದಿನಪತ್ರಿಕೆ. ಕಲರ್ ಮುಖಪುಟ. ಎರಡು ದೊಡ್ಡ ಚಪ್ಪಲಿಗಳು
" ಸಾರಾಗಾನ್ ಚಪ್ಪಲಿಗಳು, ಸವೆಸಿದಷ್ಟೂ ಉತ್ಕೃಷ್ಟ "
ಎರಡನೇ ಪುಟದಲ್ಲಿ ಸಣ್ಣಗೆ ಹೆಡ್ ಲೈನ್ಸ್.
******* ಕಟ್ ಮಾಡಿದ್ರೆ ********************
ಐದು ಸಾವಿರ ಜನ ಇರೋ ಫೇಸ್ಬುಕ್ ಗ್ರೂಪು.
ಬೆಳಿಗ್ಗೆ ಆರು ಗಂಟೆಗೆ ಹೂವಿನ ಫೋಟೋ ಇರೋ ಪೋಸ್ಟ್ " Good morning have a nice
day " .
ನೂರು ಜನ ಇರೋ ವಾಟ್ಸಪ್ ಗ್ರೂಪು
" ಈ ಮೆಸೇಜ್ ಐವತ್ತು ಗ್ರೂಪ್ ಗೆ ಫಾರ್ವಡ್ ಮಾಡಿ ಎರಡೇ ದಿನದಲ್ಲಿ ಒಳ್ಳೆಯ ಸುದ್ದಿ ಸಿಗುತ್ತದೆ " .
*********** ಕಟ್ ಮಾಡಿದ್ರೆ ***************
ಪಾದಚಾರಿಗಳಿಗೆ ಹೆಲ್ಮೆಟ್ ಕಡ್ಡಾಯ . ಬುದ್ಧಿ ಹೇಳಿ ಪೋಲೀಸರಿಂದ ಫೀ ಕಲೆಕ್ಷನ್
************* ಕಟ್ ಮಾಡಿದ್ರೆ ************
ಈಗ ವಿಷಯಕ್ಕೆ ಬರೋಣ ( ಮೇಲಿನದು ಪೀಠಿಕೆನಾ ???? ಅಂತ ಗೊಣಗಬೇಡಿ) . ಈ ಬರವಣಿಗೆ ಎಲ್ಲರಿಗೂ ಬರೋ ಅಂತದ್ದಲ್ಲ ,ಕೆಲವೇ ಕೆಲವರಿಗೆ ಸಿದ್ಧಿಸುವಂತದ್ದು ಎನ್ನುವ ಒಂದು ಕಾಲವಿತ್ತು. ಬರವಣಿಗೆಯ ಗುಣಮಟ್ಟವೂ ಸಾಕಷ್ಟು ಚೆಂದವೇ ಇತ್ತು. ಸೋಷಿಯಲ್ ಮೀಡಿಯಾಗಳು ಬಂದ ಮೇಲೆ ಹಾಗಲ್ಲ. ಪೆನ್ ಇದ್ದವರೆಲ್ಲಾ ಬರಹಗಾರರು, ಕ್ಯಾಮೆರಾ ಇದ್ದವರೆಲ್ಲಾ ಫೋಟೋಗ್ರಫರ್ಸ್ . DSLR ಕೈಯಲ್ಲಿದ್ದರೆ ಮಂಗನೂ ತನ್ನನ್ನು ತಾನು ಫೋಟೋಗ್ರಫರ್ ಅಂದುಕೊಳ್ಳುತ್ತಂತೆ. ಇದರ ಮಧ್ಯವೇ ಒಳ್ಳೆಯ ಬರಹಗಾರರು, ಫೋಟೋಗ್ರಫರ್ ಗಳು ಸಿಗುತ್ತಿದ್ದಾರೆ. ಆದರೆ ಅಂತಹ ಮುತ್ತುಗಳನ್ನು ಹೆಕ್ಕುವುದೇ ಕಷ್ಟವಾಗಿದೆ.
ಸುಮ್ಮನೆ ಮನಸ್ಸಿಗೆ ಬಂದಿದ್ದೆಲ್ಲಾ ಗೀಚುವುದರಲ್ಲಿ ಅರ್ಥವಿಲ್ಲ. ಲೈಬ್ರರಿಯ ಒಂದಾದರೂ ಪುಸ್ತಕ ಜೀರ್ಣಿಸಿಕೊಳ್ಳದೆ ಹೇಗೆ ಬರೆಯಲು ಸಾಧ್ಯ ? . ಎಷ್ಟೋ ಜನ ರೈಟರ್ ಆಗಬೇಕೆಂಬ ಕನಸು ಕಟ್ಟಿಕೊಂಡಿದ್ದಾರೆ. ನನ್ನ ಕಿವಿ ಮಾತು ಇಷ್ಟೇ ಹೆಚ್ಚು ಹೆಚ್ಚು ಓದಿ .ಕೀರ್ತಿಯು ಉತ್ತುಂಗಕ್ಕೆ ಏರಿದಂತೆಲ್ಲಾ ನಾವು ಆಳಕ್ಕೆ ಆಳಕ್ಕೆ ಇಳಿಯಬೇಕು.
ನಮ್ಮೆಲ್ಲರ ಬ್ರೈನಿನ ರೈಟ್ ಹೆಮಿಸ್ಪಿಯರ್ ಸತ್ತು ಹೋಗಿದೆ .ಕ್ರಿಯೇಟಿವಿಟಿಯ ಕೊರತೆ ಎಲ್ಲರಿಗೂ.
ಸದಾ ಹೊಸತು ಹುಡುಕೋಣ. ಈ ಬದುಕಲ್ಲಿ ನಮಗೆ ಅರ್ಥವಾಗದ್ದು ಏನೋ ಇದೆ. ಅದನ್ನು ಅರಿಯೋಣ.
ಸೋಷಿಯಲ್ ಮೀಡಿಯಾವಿರಬಹುದು ಅಥವಾ ಮೀಡಿಯಾಗಳಿರಬಹುದು ಅದು ನಮ್ಮ ಕ್ರಿಯೇಟಿವಿಟಿಗೆ ಹಿಡಿದ ಕೈಗನ್ನಡಿಯಾಗಿರಬೇಕು. ಪಕ್ಕದ ಮನೆ ಮಗುಗಿಂತ ನಮ್ಮನೆ ಮಗು ಚೆಂದವಲ್ಲವೇ? ಸ್ವಮೇಕ್ ಗೆ ಆದ್ಯತೆ ಕೊಡೋಣ ( ಸುದೀಪ್ ನೆನಪಾಗ್ತಾ ಇದಾನಾ ? 😜) .
ಇನ್ನೊಂದು ವಿಷಯ ಬರೀ 'ಅವನು ', 'ಅವಳು ' ಸಾಹಿತ್ಯ ಓದಿ ಓದಿ ಬೋರ್ ಆಗೋಗಿದೆ .
ಏನು ಉಪಸಂಹಾರ ಬೇಕಾ ? ಕೊಡೋಣ ಅದ್ಕೇನಂತೆ.
Empty mind is devil's workshop ಅಂತ ಒಂದು ಮಾತಿದೆ. ಸೆಮಿಸ್ಟರ್ ಹಾಲಿಡೇಸ್ ನಂಗೆ ಈಗ . ಮೈಂಡ್ ಖಾಲಿ . ಸೋಷಿಯಲ್ ಮೀಡಿಯಾಗಳಲ್ಲಿ ಅದೇ ಮುಖ, ಅದದೇ ಪೋಸ್ಟು ನೋಡಿ ನೋಡಿ ಸಾಕಾಗಿದೆ. ರಾತ್ರಿ ಆದ್ರೆ ಸೀರಿಯಲ್ ಕಾಟ , ಲ್ಯಾಪ್ಟಾಪ್ ಹಾರ್ಟ್ ಡಿಸ್ಕ್ ಫುಲ್ಲು ಅದ್ರಲ್ಲಿರೋ ಸಿನೆಮಾ , ಟಿವಿ ಸೀರೀಸ್ ಎಲ್ಲಾ ನೋಡಿ ಆಯ್ತು .
ಯಾರಾದ್ರೂ ಹೊಸಾ ತರದ್ದು ಪೋಸ್ಟ್ ಹಾಕ್ರಪ ಕಾಯ್ತಾ ಇರ್ತೀನಿ.

10/1/16

ಮಳ್ಗವಿತೆ

ನಾನು ಹುಟ್ಟಿದಾಗ ಮನೆಯಲ್ಲಿ ಸಂಭ್ರಮವಿರಲಿಲ್ಲ
ಪಟಾಕಿಯ ಸದ್ದಿರಲಿಲ್ಲ, ಸೂಲಗಿತ್ತಿ ಹೇಳುವಳು
ಥತ್ ಇದೂ ಹೆಣ್ಣು

ಪೇಟೆಯಲ್ಲಿ ಮಿಠಾಯಿ ತುಟ್ಟಿಯಾಗಿದೆಯಂತೆ ಗೊಣಗುವರು ಅಪ್ಪ, ಹೆಣ್ಣಾಗಿ ಹುಟ್ಟಿದ್ದು ತಪ್ಪಾ?
ನಾಮಕರಣವೇಕೆ ಅನ್ವರ್ಥನಾಮ ಇರುವಾಗ
ಅಜ್ಜಿ ಚೀರಿದ್ದರು ' ಸಾಕು ' , ಸಾವಿತ್ರಿಯಾಯಿತು

ನಾನು ಮಾತ್ರ ಹೋಮ್ ವರ್ಕ್ ಮಾಡಿದ್ದೆ
ಹುಡುಗರಿಗೆ ಬೈದರು , ಹುಡುಗಿನೇ ಮಾಡಿದೆ ನಿಮಗೇನ್ರೋ?
ಪ್ರಶಂಸೆಯೋ? ತೆಗಳಿಕೆಯೋ?

ಹನ್ನೆರಡು ತುಂಬಿತ್ತು, ಮನೆ ತುಂಬಾ ಕಾವಲಿತ್ತು
ಕಾವಲಿಯ ಸುತ್ತ ನನ್ನ ಬದುಕು ಬೇಯುತಿತ್ತು
ಟಿನೇಜು, ಕಾಲೇಜು ಒಟ್ಟಿಗೆ ಕುಳಿತಿತ್ತು
ಒಂದೆರಡು ಹುಡುಗರ ಪಕ್ಕಕ್ಕಿಟ್ಟಿದ್ದೆ

ಚಿಲಕ ಜಡಿದ ಬಾಗಿಲು ದಾಟಿಕೊಂಡು ಒಳಗೇ
ಬಂದುಬಿಟ್ಟನೊಬ್ಬ, ನಿಟ್ಟುಸಿರು ಬಿಟ್ಟಿದ್ದೆ
ಕೊನೆಗೂ ಪ್ರೀತಿಸುವ ಜೀವ ಸಿಕ್ಕಿತೆಂದು
ಬಿಟ್ಟ ನಿಟ್ಟುಸಿರಿನ ಶಾಖಕ್ಕೆ ಹೆದರಿ ಓಡಿಹೋದನವ

ಮತ್ತೆ ನಾನು ಒಂಟಿ, ಮದುವೆಯಾದರೂ
ಇನ್ಯಾರದೋ ಹೆಸರಿನ ಅರ್ಧ ಭಾಗ ಹೊತ್ತು
ಮತ್ಯಾರದೋ ನೆನಪುಗಳ ಮೂಟೆ ಹೊತ್ತು
ನನಗೆ ನಾನೇ ಕರೆದುಕೊಂಡೆ 'ಸೂಳೆ '......