ಪರೀಕ್ಷೆ ಇದ್ದ ಕಾರಣ ಬೆಳಿಗ್ಗೆ ಬೇಗ ಎದ್ದು ಒಂದಿಷ್ಟು ಓದೋಣ ಎಂದು ಆರು ಗಂಟೆಗೆ ಅಲಾರ್ಮ್ ಇಟ್ಟು ಮಲಗಿದ್ದೆ . ಆದರೆ ಐದು ಗಂಟೆಗೆ ಎಚ್ಚರವಾಯಿತು . ನನ್ನ ರೂಮಿನ ಕೆಳಗೇ ಇದ್ದ ನಂದಿನಿ ಬೂತಿಗೆ ವ್ಯಾನ್ ಬಂದಿತ್ತು . ಬಾಗಿಲು ಮುಚ್ಚಿದ್ದ ಬೂತಿನ ಬಾಗಿಲು ತೆಗೆಸಲು ಡ್ರೈವರ್ ಹಾರ್ನ್ ಮೇಲೆ ಹತ್ತಿ ಕುಳಿತಿದ್ದ . ಕಿರಿ ಕಿರಿ ತಾಳಲಾರದೆ ಎದ್ದು ಹೊರ ಬಂದೆ . ಬಂದಷ್ಟೇ ಗಡಿ-ಬಿಡಿಯಲ್ಲಿ ವ್ಯಾನಿನವ ಹಾಲಿನ ಟ್ರೇ ಇಳಿಸಿ ಹೊರಟು ಹೋದ . ಮತ್ತೆ ಮಲಗಲು ನನಗೆ ಮನಸಾಗಲಿಲ್ಲ . ದೂರದಲ್ಲೆಲ್ಲೋ ಆಟೋ ತನ್ನ ಕಾರ್ಯ ಪ್ರಾರಂಬಿಸುತಿತ್ತು . ಮುಂದಿನ ಮನೆಯಲ್ಲಿದ್ದ ಕಾರು ರಿವರ್ಸ್ ಗೇರಿನ ಶಬ್ದ ಮಾಡುತಿತ್ತು . ಹರಿದ ಮೋಡದ ಮಧ್ಯದಿಂದ ಸೂರ್ಯ ಉದಯಿಸಲು ಶುರುಮಾಡಿದ . ಥತ್! ಎಂದು ಗಾಳಿಗೆ ಉಗಿದು ರೂಮಿನೊಳಗೆ ಬಂದೆ . ಚರಂಡಿ ನೀರಿನಂತೆ ನಿತ್ತ ನನ್ನ ಬದುಕಿನ ಮೇಲೆ ನನಗೇ ಅಸಹ್ಯ ಮೂಡಿತು . ಅದ್ಯಾವ ಸುಖ ಹುಡುಕಿ ನಾನು ಹೊರಟಿದ್ದೇನೆ ? .
ಮನೆಯಲ್ಲಿಯೂ ಓದಲು ಬೇಗ ಏಳುವ ಹವ್ಯಾಸ ನನಗಿತ್ತು . ಏಳದಿದ್ದರೂ ಮುಖದ ಮೇಲೆ ನೀರು ಸುರಿದು ನನ್ನಮ್ಮ ಕೈಗೆ ಪುಸ್ತಕ ಹಿಡಿಸುತ್ತಿದ್ದಳು . ನಿದ್ದೆಗಣ್ಣಿನಲ್ಲಿಯೇ ಎದ್ದು ಹಲ್ಲು ತಿಕ್ಕಲು ಹೋಗುತ್ತಿದ್ದ ಹಾಗೆ ಮನೆಯ ಹಿಂದಿನ ಮಾವಿನ ಮರದ ಮೇಲೆ ಕೂತ ಗೋಪಿ ಹಕ್ಕಿ ತನ್ನ ವಿಶಿಷ್ಟ ಕಂಠದಿಂದ ಸುಪ್ರಭಾತ ಹಾಡುತಿತ್ತು . ಮನುಷ್ಯ ಸೀಟಿ ಹೊಡೆದ ಹಾಗೆ ಹಾಡುವ ಗೋಪಿ ಹಕ್ಕಿಯ ಬಗ್ಗೆ ನನಗೆ ಏನೇನೂ ತಿಳಿದಿರಲಿಲ್ಲ . ಈಗಲೂ ತಿಳಿದಿಲ್ಲ ಬಿಡಿ . ಬೆಳಕು ಬಂದ ಮೇಲೆ ಎಷ್ಟೋ ಬಾರಿ ಆ ಹಕ್ಕಿಯನ್ನು ನೋಡಲು ಮರದ ಸಮೀಪ ಸುಳಿದಾಡಿದ್ದಿದೆ . ಉಹುಂ , ಒಂದು ದಿನವೂ ನೋಡಲು ಸಿಗಲೇ ಇಲ್ಲ . ವಿವಿಧ್ ಭಾರತಿಯಲ್ಲಿ ಸಂಸ್ಕೃತ ವಾರ್ತೆ ಓದುತ್ತಿದ್ದ ವಾಚಕರಂತೆ ಈ ಹಕ್ಕಿಯೂ ನನ್ನ ಕಣ್ಣಿಗೆ ಕಾಣಿಸಲೇ ಇಲ್ಲ .
ಗೋಪಿ ಹಕ್ಕಿ ಕೂಗಿ ಸರಿಯಾಗಿ ಹತ್ತು ನಿಮಿಷಕ್ಕೆ ನಮ್ಮೂರಿನ ಬಸ್ಸು ಹೊರಡುತ್ತಿತ್ತು . ಈಗ ಕೆಲವೊಮ್ಮೆ ಆ ಬಸ್ಸಿನ ಬಗ್ಗೆ ಯೋಚಿಸುತ್ತೇನೆ . ಅದು ಕೇವಲ ಜಡ ವಸ್ತುವಾಗಿರಲಿಲ್ಲ . ನಮ್ಮೂರಿನ ಜನರ ಮನಸ್ಥಿತಿಯೇ ಆಗಿತ್ತು ಅದು . ನಮ್ಮೂರಿನಲ್ಲಿಯೇ ಉಳಿದುಕೊಳ್ಳುತ್ತಿದ್ದ ಆ ಬಸ್ಸು ಸಾಗರದಿಂದ ರಾತ್ರಿ ಹೊರಡುತಿತ್ತು . ಕಗ್ಗಾಡಿನ ಮೂಲೆಯ ನಮ್ಮೂರಿಗೆ ನಾಗರೀಕತೆಯ ಕೊನೆ ಕೊಂಡಿ ಆ ಬಸ್ಸು . ಯಾರೊಬ್ಬರೂ ಆ ಬಸ್ಸಿಗೆ ಬರುತ್ತಿರಲಿಲ್ಲ ಆದರೂ ಅದು ಬರಲಿಲ್ಲ ಎಂದರೆ ಏನೋ ಕಸಿವಿಸಿ . " ಅಯ್ಯೋ ಬಸ್ಸು ಬಂದಿಲ್ಲ " ಎಂದು ಕನಿಷ್ಠ ಇಪ್ಪತ್ತು ಸಲವಾದರೂ ಎಲ್ಲರೂ ಗೋಳಿಡುತ್ತಿದ್ದರು . ಸ್ವಲ್ಪ ತಡವಾಗಿ ಬಂದರೆ ಅಬ್ಬಾ ಬಂತು! ನಾಳೆ ಶಾಲೆಗೆ ಹೋಗಬಹುದು ಎಂಬ ನಿರಾಳತೆಯಿಂದ ಎಲ್ಲಾ ಮಕ್ಕಳು ಮಲಗುತ್ತಿದ್ದರು .
ಇಷ್ಟು ವರ್ಷವಾದರೂ ಬೆಳಗಿನ ಜಾವ ಎಂದರೆ ನನಗೆ ನೆನಪಾಗುವುದು ಗೋಪಿ ಹಕ್ಕಿ ಹಾಗೂ ಹಾಲ್ಟಿನ್ಗ್ ಬಸ್ಸು .
ನಿಜವಾಗಿಯೂ ಈ ಹಕ್ಕಿಗಳು ವಿಸ್ಮಯದ ಕಿಂಡಿಗಳು . ಅಂಗಳದಲ್ಲಿ ಒಣಗಿಸಿದ ಬೇಳೆ ಕಾಳುಗಳನ್ನು ತಿನ್ನುವ ಕಳ್ಳ ಯುರೋಪ್ ನಿಂದ ಬರುತ್ತಾನೆ ಎಂದು ತಿಳಿದಾಗ ನಾನು ನಿಬ್ಬೆರಗಾಗಿದ್ದೇನೆ . ಪ್ರಕೃತಿಯಲ್ಲಾಗುವ ಬದಲಾವಣೆಗಳ ದಿಕ್ಸ್ಸೂಚಿಗಳು ಈ ಹಕ್ಕಿಗಳು . ನಮ್ಮದೇ ಸ್ವಯಂ ಕೃತ ಅಪರಾಧದಿಂದ ಗೋಪಿ ಹಕ್ಕಿ ಶಾಶ್ವತವಾಗಿ ಮರೆಯಾಯಿತು .
ಅದು ಕೂರುತ್ತಿದ್ದ ಮಾವಿನ ಮರ ಹಲವು ವರ್ಷಗಳಿಂದ ಹಣ್ಣು ಬಿಡುತ್ತಿರಲಿಲ್ಲ . ಹೂವು ಬಂದರೂ ಅದು ನಿಲ್ಲುತ್ತಿರಲಿಲ್ಲ . ಮನೆಗೆ ಬಂದ ಯಾರೋ ಒಬ್ಬರು ಮರಕ್ಕೆ ಹೊಗೆ ಹಾಕಿದರೆ ಹೂವು ನಿಲ್ಲುತ್ತದೆ ಎಂಬ ಸಲಹೆ ನೀಡಿದರು . ಅದನ್ನು ಕೇಳಿ ಬಚ್ಚಲು ಮನೆಯ ಒಲೆಯ ಚಿಮಣಿಯನ್ನು ಮಾವಿನ ಮರದ ಕಡೆಗೆ ತಿರುಗಿಸಿದೆವು . ಕೆಲವೇ ಕೆಲವು ದಿನಗಳಲ್ಲಿ ಗೋಪಿ ಹಕ್ಕಿ ಕಣ್ಮರೆಯಾಯಿತು .
ಈಗಲೂ ಬೆಳಗಿನ ಜಾವ ಎದ್ದಾಗ ಗೋಪಿ ಹಕ್ಕಿ ಕೂಗುತ್ತದೆಯೇ ಎಂದು ಆಲೈಸುತ್ತೇನೆ . ಗೋಪಿ ಹಕ್ಕಿ ಹೇಗಿರಬಹುದು ಎಂದು ನೋಡಲು ಸುಮ್ಮನೆ ಗೋಪಿ ಹಕ್ಕಿ ಎಂದು ಗೂಗಲ್ ಮಾಡಿದೆ . ಅದಕ್ಕೂ ಸರಿಯಾದ ಮಾಹಿತಿ ಇಲ್ಲ , ನನಗೆ ಗೋಪಿ ಹಕ್ಕಿಯ ಇಂಗ್ಲಿಷ್ ಹೆಸರು ತಿಳಿದಿಲ್ಲ . ಸಲೀಂ ಅಲಿ ಅವರ ಪುಸ್ತಕ ತಡಕಿದೆ , ಅದನ್ನು ತಂದಿಟ್ಟು ಕೊಂಡವರು ಯಾರು ? . ಪುಸ್ತಕವೇ ಸಿಗಲಿಲ್ಲ . ನನ್ನ ಕಲ್ಪನೆಯಲ್ಲಷ್ಟೇ ಗೋಪಿ ಹಕ್ಕಿ ಜೀವಂತ . ಸೋನು ನಿಗಮ್ ಅನ್ನು ನಿವಾಳಿಸಿ ಒಗೆಯುವಂತೆ ಹಾಡುವ ಗೋಪಿ ಹಕ್ಕಿಗೆ ನಾನು ಮನಸ್ಸಿನಲ್ಲಿಯೇ ಗ್ರಾಮಿ ಅವಾರ್ಡ್ ನೀಡಿದ್ದೇನೆ .
ನಾನೇನು ಮಹಾ ಪಕ್ಷಿ ವೀಕ್ಷಕನಲ್ಲ , ವಿಶ್ವವಿದ್ಯಾನಿಲಯಗಳಿಂದ ಆರ್ನಿಥಾಲಜಿಯ ಪದವಿ ನಾನು ಪಡೆದಿಲ್ಲ . ಸುತ್ತಲಿನ ಜಗತ್ತನ್ನು ನೋಡುವ ' ವಂಡರ್ ಕಣ್ಣು ' ಅಷ್ಟೇ ವಿಕಾಸವಾದ ಸರಣಿಯ ಬಂಡವಾಳ . ಇದನ್ನು ಡಾಕ್ಟ್ರೇಟ್ ಪಡೆಯಲು ಸಲ್ಲಿಸಿದ ಥೀಸಿಸ್ ಎಂದೋ , ವೈಜ್ಞಾನಿಕ ಲೇಖನ ಎಂದು ಭಾವಿಸುವುದಕ್ಕಿಂತ ಒಂದು ಕಥೆಯೆಂದೋ ಅಥವಾ ಕೆಲಸವಿಲ್ಲದೆ ಬರೆದ ಲೇಖನವೆಂದು ತಿಳಿಯಬಹುದು . ಅಥವಾ ಇದು ಏನೋ ಒಂದು ಎಂದು ಭಾವಿಸುವ ಅಗತ್ಯವಾದರೂ ಏನಿದೆ ? .
( ಚಿತ್ರ ಕೃಪೆ : ಹಕ್ಕಿ ಪುಕ್ಕ . ಗೋಪಿ ಹಕ್ಕಿ ಹೀಗಿರಬಹುದೆಂಬ ಊಹೆ ಅಷ್ಟೇ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ