21/7/15

ಮತ್ತದೇ ಬೇಸರ ...................

ಮತ್ತದೇ ಬೇಸರ ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ ಮನ ವಿಭ್ರಾಂತ........
ನಾನು ಮೈಸೂರು ಸೇರಿ ಮೂರು ವರ್ಷಗಳೇ ಕಳೆದು ಹೋಗಿದೆ. ನೋಡ ನೋಡುತ್ತಲೇ ನನ್ನ ಸೀನಿಯರ್ ಗಳು ರೂಮು ಖಾಲಿ ಮಾಡತೊಡಗಿದ್ದಾರೆ. ಎಲ್ಲೋ ಹುಟ್ಟಿ, ಇನ್ನೆಲ್ಲೋ ಬೆಳೆದ ನಮ್ಮನ್ನು ಕಾಲವೇ ಒಂದು ಮಾಡಿತ್ತು. ಜಾತಿ, ಧರ್ಮ ,ಭಾಷೆಗಳು ನಮ್ಮಲ್ಲಿ ಒಡಕು ಮೂಡಿಸುವಲ್ಲಿ ಸೋತಿದೆ. ಮತ್ತೆ ನನ್ನ ರೂಮು, ಮನ ಎರಡೂ ಖಾಲಿಯಾಗಿದೆ . ಬರುವಾಗ ಅಳುತ್ತಲೇ ಬಂದ ನಾನು, ಮತ್ತೆ ಅಳಬೇಕಾಗಿದೆ. ಇವತ್ತು ಹೆವ್ವಿ ಸೆಂಟಿಮೆಂಟಲ್ ಸೀನ್ ಗಳಿಗೆ ಸಾಕ್ಷಿಯಾಗಬೇಕಾಯಿತು. ಕಣ್ಣೀರು ಕೆನ್ನೆಗೆ ಇಳಿಯುವ ಮೊದಲೇ ಲೇಖನಿ ಕೈ ಸೇರಿತ್ತು, ಮತ್ತವೇ ಸಾಲುಗಳ ಬರೆದೆ .ನನ್ನ ಆಂತರ್ಯದ ಸಾಲುಗಳು 'ಭೇಟಿ ಆಕಸ್ಮಿಕ ಅಗಲಿಕೆ ಅನಿವಾರ್ಯ ,ಪರಿವರ್ತನೆ ಜಗದ ನಿಯಮ ' '.......
ಒಟ್ಟಿನಲ್ಲಿ ನನ್ನ ಗೆಳೆಯ ನನ್ನ ತಬ್ಬಿಕೊಂಡು ಅತ್ತಾಗ ,ನನ್ನ ಕಣ್ಣುಗಳು ತೇವವಾಗಿದ್ದು ಸುಳ್ಳಲ್ಲ.

ವಾಪಾಸ್ಸು

ಮುನಿಸಿಕೊಂಡಿದೆ ನನ್ನ ಮನಸು
ನನ್ನ ಜೊತೆಗೇ
ಕ್ಷಣವೂ ಬಿಡದೆ ನನ್ನೊಡನೆ ಮಾತನಾಡುತ್ತಿದ್ದ
ಮನಸಿನ ಗಿಳಿ ಮೌನವಾಗಿದೆ
ಕಳೆದು ಹೋಗಿದೆ ನನ್ನ ಹೃದಯ
ಅದರಲ್ಲಿದೆ ನೂರೆಂಟು
ವಾಟ್ಸಪ್ಪು ಕಾಂಟ್ಯಾಕ್ಟು
ಲೈಕೊತ್ತದೆ ಬಿಟ್ಟ ಅದೆಷ್ಟೋ ಕಮೆಂಟು
ನನ್ನೆದೆಯ ಪ್ರೊಫೈಲ್ ಗೆ ಅವಳ ಫ್ರೆಂಡ್ ರಿಕ್ವೆಷ್ಟು
ಮರೆತೇ ಹೋಯಿತೆ ನನ್ನ ಪಾಸ್ವರ್ಡು
ಸಿಗಬಹುದೇ ಮತ್ತೆ ವಾಪಾಸ್ಸು
ಅಷ್ಟರಲ್ಲಿ ಅವಳೇ ಸೋಲ್ಡ್ ಅವ್ಟು
ಓಪನ್ ಮಾಡಬೇಕು OLX ಅಲ್ಲಿ ಒಂದು ಅಕೌಂಟು
ಅಲ್ಲಾದರೂ ಅವಳನ್ನು ಹುಡುಕಬೇಕು
ಮತ್ತದೇ ಪ್ರಶ್ನೆ ರಿಪೀಟು
ಸಿಗಬಹುದೇ ಅವಳು ವಾಪಾಸ್ಸು.

ನ್ಯಾನೋ ಕಥೆಗಳು

ಅವನೊಬ್ಬ ಲೇಖಕ, ಹೊರಗಿನಿಂದ ತುಂಬಾ ಫನ್ನಿ ,ಒಳ್ಳೆ ಸೆನ್ಸ್ ಆಫ್ ಹ್ಯೂಮರ್ ಇತ್ತು. ನನಗೆ ತಿಳಿದ ಮಟ್ಟಿಗೆ ಅವನು ತುಂಬಾ ಒಳ್ಳೆಯವ. ಆದ್ರೆ ಬಹಳ ಅಂರ್ತಮುಖಿ, ಏಕಾಂಗಿ .
ಏಕಾಂಗಿ ಅದಕ್ಕೇ ಬರಹಗಾರನಾದನೋ ಅಥವಾ ಬರಹಗಾರ ಅದಕ್ಕೇ ಏಕಾಂಗಿಯೋ ? ನನಗಂತೂ ಗೊತ್ತಿಲ್ಲ. ಅವನ ಜೀವನದಲ್ಲಿ ಬಂದವರೆಲ್ಲಾ ಅವನಿಗೆ ನೋವು ಕೊಟ್ಟವರೇ ..... ಬಹುಶಃ ಅದಕ್ಕೇ ಅವನು ಒಳ್ಳೆಯ ಲೇಖಕನಾದ. ಒಬ್ಬ ಲೇಖಕನಿಗೆ ಯಾವುದೂ ನಷ್ಟವಲ್ಲ, ಕೊನೆಗೆ ಮನಸ್ಸಿಗಾದ ನೋವು ಕೂಡ. ನೋವಿನಲ್ಲರಳುವ ಕಥೆಗಳವು, ಮನಸ್ಸಿನಲ್ಲಿ ಬಹಳಕಾಲ ಉಳಿದುಬಿಡುತ್ತವೆ ..............
ಅವನಿನ್ನೂ ಪ್ರಾಣ ಸ್ನೇಹಿತರ ಹುಡುಕಾಟದಲ್ಲಿದ್ದಾನೆ, ಸಿಕ್ಕ ತಕ್ಷಣ ಈ ಕಥೆ ಅಂತ್ಯ ......
*********************************************************************************************************************************
ಕಡಲ ತೀರದಲ್ಲಿ ನಿಂತಿದ್ದ ಅವನಿಗೆ ಸಮುದ್ರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿತ್ತು .ಆದರೆ ಅವನು ಕ್ಷಮಿಸಲಾರ ,ಕೆಲವು ವರ್ಷಗಳ ಹಿಂದೆ ಅದೇ ಸಮುದ್ರ ಸುನಾಮಿಯ ರೂಪದಲ್ಲಿ ಅವನ ಇಡೀ ಕುಟುಂಬವನ್ನೇ ನಾಶಗೊಳಿಸಿತ್ತು.
**********************************************************************************************************************************
‪#‎ನಿಜವಾದಕಟ್ಟುಕತೆ‬ 
"ಚಿಲ್ಟೂ ನಾಳೆ ತಿಂಡಿಗೆ ಅವಲಕ್ಕಿ ಮಾಡೇ ". ನನಗೆ ಏಕೋ ಭಯ ಶುರುವಾಯಿತು .ಏಕಿರಬಹುದು ?..........
ನನಗಾಗ ಹನ್ನೆರಡು, ನನಗಿನ್ನೂ ಕುಂಟೆಬಿಲ್ಲೆಯೇ ಇಷ್ಟದ ಆಟವಾಗಿತ್ತು . ಕೆಲವು ಕಾರಣಗಳಿಂದ ನಾನು ಹಾಸ್ಟೆಲ್ ನಲ್ಲಿ ಇರಬೇಕಾದ ಸ್ಥಿತಿ ಬಂದಿತ್ತು. ಅದ್ಯಾವ ಪುಸ್ತಕ ಹಾಂ... ದಿನಕ್ಕೊಂದು ಕತೆ, ಅದು ನನ್ನ ನೆಚ್ಚಿನ ಪುಸ್ತಕವಾಗಿತ್ತು. ದಿನವಿಡೀ ಕ್ಲಾಸ್ ಇರುತ್ತಿದ್ದರಿಂದ ರಾತ್ರಿ ಲೈಬ್ರರಿಯಲ್ಲಿ ಕುಳಿತು ಪುಸ್ತಕ ಓದುತ್ತಿದ್ದೆ .ಒಂದು ದಿನ ಲೈಬ್ರರಿಯನ್ ನನ್ನ ಪಕ್ಕದಲ್ಲಿ ಬಂದು ಕುಳಿತ, ನನಗೆ ಭಯವಾಗುತ್ತಿತ್ತು . ಬಂದವನೇ ಸೀದಾ "ನಾ ನಿನ್ನ ಮದ್ವೆಯಾಗ್ತೀನಿ " ಅಂದು ಬಿಡೋದೆ. ನಾನು ಮಾತನಾಡದೆ ಎದ್ದು ಬಂದೆ. ಅದಾದ ನಂತರ ಕುಂತಲ್ಲಿ ನಿಂತಲ್ಲಿ ಬಂದು ಕಾಟಕೊಡುತ್ತಿದ್ದ. ಒಂದು ದಿನ ಬೆಳಿಗ್ಗೆ ಅವಲಕ್ಕಿ ತಿನ್ನುತ್ತಾ ಕೂತಿದ್ದೆ, ನನ್ನ ಪಕ್ಕ ಬಂದು ಕೂತ ಅವನು ಅವನ ಪ್ಲೇಟಿನಿಂದ ಅವಲಕ್ಕಿಯನ್ನು ತೆಗೆದು ನನ್ನ ಪ್ಲೇಟಿಗೆ ಹಾಕಿ " ಹೇಗಿದ್ರು ನೀನು ನನ್ ಹೆಂಡ್ತಿ ಆಗೋಳಲ್ವ ತಿನ್ನು " ಅಂದ. ನನ್ನ ಅಮ್ಮನ ಎಂಜಲನ್ನೇ ತಿನ್ನದ ನನಗೆ ವಾಕರಿಕೆ ಬಂದು ಬಿಟ್ಟಿತು. ಆಗ ತುಂಬಾ ಬೇಸರವಾಗಿತ್ತು ,ಬಹಳ ಅತ್ತಿದ್ದೆ. ಹನ್ನೆರಡು ವರ್ಷದ ಹುಡುಗಿ ಏನು ತಾನೆ ಮಾಡಿಯಾಳು. ಅವನನ್ನು ಈಗಲೂ ಹುಡುಕುತ್ತಿದ್ದೇನೆ. ಅವನ ನಸೀಬು ಹಾಳಾದ ದಿನ ನನಗೆ ಸಿಕ್ಕೇ ಸಿಗುತ್ತಾನೆ. Axe forgets but tree remembers.
ನನ್ನ ಗಂಡ ಅವಲಕ್ಕಿ ಮಾಡೆ ಎಂದಾಗ ಏಕೋ ಹಳೆಯದೆಲ್ಲ ನೆನಪಾಗಿ ಕಣ್ಣು ಒದ್ದೆಯಾಯಿತು.
ಇನ್ನಾದರು ಈ ಸಮಾಜ ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಲಿ.......

**********************************************************************************************************************************
‪#‎modernಕುಟುಂಬ‬
ಒಂದೂರಲ್ಲಿ ಒಂದು ಮನೆ, ಆ ಮನೆಯಲ್ಲಿ ಹಲವು ಪಾತ್ರಗಳು ಅಪ್ಪ, ಮಗ, ಸೊಸೆ,ಮೊಮ್ಮಗ. ಸಂಬಧಗಳು ಹಳಸಿದ ವಾಸನೆ ಗೇಟಿನ ಆಚೆಗೆ ಬಡಿಯುತ್ತಿದೆ. ಮಾವನಿಗೆ ಸೊಫೆಸ್ಟಿಕೇಟೆಡ್ ವೃದ್ಧಾಶ್ರಮ ನೋಡಿದ್ದಾಳೆ ಸೊಸೆ. ಸೊಸೆಯ ಮೇಲೆ ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಮಾವ. ಈ ಸುದ್ದಿ ಪೋಲಿಸ್ ತನಕ ಹೋಗದಿದ್ದರೂ ಪಕ್ಕದ ಮನೆಯ ತನಕ ಹೋಗಿದೆ, ಮಗ ದುಡ್ಡು ಮಾಡುವುದೇ ಗುರಿಯಾಗಿ ಇಟ್ಟುಕೊಂಡಿದ್ದಾನೆ. ಮೊಮ್ಮಗ ಪ್ರತಿಷ್ಠಿತ ಕಾಲೇಜಿನ ಗೇಟ್ ಪರೀಕ್ಷೆಗೆ ಇಹ-ಪರದ ಯೋಚನೆ ಇಲ್ಲದೆ ಓದುತ್ತಿದ್ದಾನೆ .ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ಗೊಂದಲದಲ್ಲಿ ಅಂಗಳದಲ್ಲಿ ತುಳಸಿಯ ಮುಂದೆ ಹಚ್ಚಿಟ್ಟ ದೀಪ ನಿರಂತರವಾಗಿ ಉರಿಯುತ್ತಿದೆ.

**********************************************************************************************************************************
‪#‎ಏನೋಪಗೊತ್ತಿಲ್ಲ‬ 
ಅವಳ ಹೆಜ್ಜೆಯ ಹಿಂದೆಯೆ ಇವನ ಹೆಜ್ಜೆ ಸಾಗಿತ್ತು. ಅವಳ ಪಯಣ ಮಸಣದ ಆಚೆಗಿನ ಮದುವೆ ಛತ್ರದ ಕಡೆಗೆ ಸಾಗಿತ್ತು, ಇವನ ಪಯಣ ಮಸಣದಲ್ಲೇ ಅಂತ್ಯಗೊಂಡಿತ್ತು.

**********************************************************************************************************************************
‪#‎ಇದೆಲ್ಲಾಬೇಕಿತ್ತಾ‬
ಅಂದು ಅವಳಿಗೆ ಪ್ರಪೋಸ್ ಮಾಡಲೇಬೇಕು ಅಂತ ನಿರ್ಧಾರ ಮಾಡಿಬಿಟ್ಟಿದ್ದೆ. ಎಂತ ಗಟ್ಟಿಗನಾದರೂ ಹುಡುಗಿಯ ಮುಂದೆ ಪ್ರೇಮ ನಿವೇದನೆಗೆ ನಿಂತಾಗ ಹೆದರಲೇಬೇಕು. ನಾನು ಕವನ ಬರೆದು, ಕನ್ನಡಿ ಮುಂದೆ ನಿಂತು ರಿರ್ಹಸಲ್ ಎಲ್ಲಾ ಮಾಡಿಕೊಂಡಿದ್ದೆ. ಕೈಯಲ್ಲಿ ಕಾಸಿಲ್ಲದಿದ್ದರೂ ಫೈವ್ ಸ್ಟಾರ್ ಹೋಟೆಲ್ನಲ್ಲಿ ಟೇಬಲ್ ಬುಕ್ ಮಾಡಿದ್ದೆ. ಅವಳು ಬಂದಳು ವೈಟ್ ಸಲ್ವಾರ್ ತೊಟ್ಟು ,ನನಗೆ ಎರಡನೇ ಸಲ ಲವ್ವಾಗಿ ನಾಚಿಗೆಯಿಂದ ಅವಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪಕ್ಕಕ್ಕೆ ನೋಡಿದೆ, ಅವಳ ಬಾಯ್ ಫ್ರೆಂಡ್ ನಿಂತಿದ್ದ ......................
ಎಲ್ಲಾ ಹುಡ್ಗೀರು ಹೀಗೆನಾ?

**********************************************************************************************************************************

ಶಬ್ಧದಾರಿದ್ರ್ಯ

ನಮ್ಮ ಕೈಯಲ್ಲಿರುವ ಮೊಬೈಲ್, ಪಿಸಿ, ಟ್ಯಾಬ್ಲೆಟ್ಗಳು ಸ್ಮಾರ್ಟ್ ಆಗಿದೆಯೇ ಹೊರತು, ನಮ್ಮ ತಲೆ ಸ್ಮಾರ್ಟ್ ಆಗಿಲ್ಲ .
ನಾವು ಮಾತನಾಡುವ ಭಾಷೆಯ ಅಲ್ಪಜ್ಞಾನವೂ ನಮಗೆ ಇಲ್ಲ. ನನ್ನ ಹುಟ್ಟೂರು ಸಾಗರದ ಒಂದು ಹಾಲಿನ ಡೈರಿ ಮುಂದೆ ನಾಮಫಲಕವಿತ್ತು 'ಮಹಿಳೆಯರ ಹಾಲು ಉತ್ಪಾದನಾ ಕೇಂದ್ರ '..............
'ಹ'ಕಾರಕ್ಕೆ 'ಅ'ಕಾರ ಅಥವಾ 'ಅ'ಕಾರಕ್ಕೆ 'ಹ'ಕಾರ ಉಚ್ಚರಿಸಿ ನಾವು ಬಹಳ ತಪ್ಪು ಮಾಡುತ್ತೇವೆ. ಒಂದು ಕಡೆ ಬೋರ್ಡ್ ನೋಡಿದೆ 
'ನಿಮಗೆ ಹಾದರದ ಸ್ವಾಗತ '.........
ಬರೀ ಕನ್ನಡ ಅಷ್ಟೇ ಇಲ್ಲ, ಇಂಗ್ಲಿಷ್ ನಲ್ಲೂ ಇದೇ ಸ್ಥಿತಿ, ಬಸ್ಸೊಂದರಲ್ಲಿ ಹಾಕಿದ್ದರು
'No smoking is prohibited '.....
ಪ್ರತಿ ದಿನ ಕನ್ನಡದ ಕಗ್ಗೊಲೆ, ಇಂಗ್ಲೀಷ್ ನ ಪ್ರಾಣಹರಣ. ಒಬ್ಬ ತನ್ನ ಆಟೋದ ಮೇಲೆ ತನ್ನ ಹೆಂಡತಿಯ ಹೆಸರು ಬರೆಸಿ ಕೆಳಗಡೆ 'ಬಾಡಿಗೆಗೆ ' ಎಂದು ಬರೆಸಿದ್ದ.
ಇನ್ನೂ ಬಹಳ ಕಿರಿ ಕಿರಿ ಎನಿಸುವುದು ಮಾತನಾಡುವಾಗ ಕಂಡ ಕಂಡಲ್ಲಿ 'ಬಂದು' ಎಂದು ಸೇರಿಸುವುದು. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬೇರೆ ಭಾಷೆಯವರು ಸೊಪ್ಪು ಕಟ್ಟಿಕೊಂಡು ಮರದಿಂದ ಮರಕ್ಕೆ ಹಾರುತ್ತಿರುವಾಗ ಕಾವೇರಿಯಿಂದ ಗೋದಾವರಿಯವರೆಗೆ ಹರಡಿದ್ದ ನಮ್ಮ ಜನ 'ಕುರಿತೋದಯೆಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ' ಆಗಿದ್ದರು . ಅಂತಹ ಸುಂದರ ಭಾಷೆಯ ಕೊರಳು ಪಟ್ಟಿ ಹಿಡಿದುಕೊಂಡು ದುಡಿಸಿ ಕೊಳ್ಳುತ್ತಿದ್ದೇವೆ .ಇನ್ನಾದರು ನಮ್ಮ ಮಾತೃಭಾಷೆಯ ಬಗ್ಗೆ ತಿಳಿದುಕೊಳ್ಳೋಣ.

ಗರತಿ

ಬೆಳಿಗ್ಗೆ ಬೇಗ ಎದ್ದು ಬಾಗಿಲು ಸಾರಿಸಿ ರಂಗೋಲಿ ಇಡುವ ಸಂಪ್ರದಾಯವನ್ನು ನಾನು ಎಂದೋ ಬಿಟ್ಟಾಗಿದೆ. ಅಲಾರಾಂ ಸದ್ದಿಗೂ ಎಚ್ಚರವಾಗದಂತಹ ನಿದ್ದೆ ನನ್ನದು. ಮಸೀದಿಯ 'ಅಲ್ಲಾ ಹೋ ಅಕ್ಬರ್ ' ನನ್ನನ್ನು ಎಬ್ಬಿಸಿಬಿಟ್ಟಿತು. ಮತ್ತೆಷ್ಟೆ ಕಷ್ಟ ಪಟ್ಟರೂ ನಿದ್ದೆಯೆ ಬರಲೊಲ್ಲದು. ಯಾರೋ ಕಾಲಿಂಗ್ ಬೆಲ್ ಮಾಡಿದ ಶಬ್ದವಾಯಿತು .ಅದು ನೀನೆ .....ನನ್ನ so called ಗಂಡ. ಅದ್ಯಾವುದೋ ಕಾಣದ ದೇಶದಿಂದ, ಮೀಟಿಂಗ್, ಈಟಿಂಗ್ ಎಲ್ಲಾ ಮುಗಿಸಿಕೊಂಡು ಬಂದು ನಿಂತಿದ್ದೆ. 
ನೀನು ಯಾವತ್ತೂ ನನ್ನ ಗಂಡನ ಸ್ಥಾನ ತುಂಬಲೇ ಇಲ್ಲ.........
ಗಂಟೆಗೊಂದು ಮಾತನಾಡುವ ನೀನೆಲ್ಲಿ, ಪಟಪಟನೆ ಮಾತಿನ ಮುತ್ತುದುರಿಸುವ ಅವನೆಲ್ಲಿ. ಇವತ್ತಿಗೂ ಅವನ ಮುಂದೆ ನೀನು ತೃಣಕ್ಕೆ ಸಮಾನ. ನನ್ನೆಲ್ಲಾ ಕಷ್ಟಗಳಿಗೆ ಕಿವಿಯಾಗುತ್ತಿದ್ದ, ನನ್ನ ನಗುವಿನಲ್ಲಿ ನಗುವಾಗಿ, ಅಳುವಿನಲ್ಲಿ ಅಳುವಾಗಿ ನನ್ನ ಜೊತೆಗೇ ಇರುತ್ತಿದ್ದ. ನಾನು ನಿನ್ನ ಬಿಟ್ಟು ಹೋಗದೇ ಇರುವುದಕ್ಕೂ ಅವನೇ ಕಾರಣ, ನೀನು ತೀರಾ ನನ್ನನ್ನು ರಾತ್ರಿ ಕೈ ಹಿಡಿದೆಳೆದಾಗ, ನೀನೆ ಅವನು ಎಂದು ನನ್ನೆಲ್ಲಾ ಭಾವನೆಗಳನ್ನು ಅದುಮಿಟ್ಟುಕೊಳ್ಳುತ್ತಿದ್ದೆ. ನಿಮ್ಮ ಭಾಷೆಯಲ್ಲಿ ಇದನ್ನೆ ಗರತಿ, ಮುತ್ತೈದೆ ಎನ್ನುತ್ತಾರೋ ಏನೋ ?...........
ಒಳ್ಳೆಯ ಗಂಡನಲ್ಲಿ ಅಪ್ಪ ಕಾಣುತ್ತಾರಂತೆ, ನೀನು ನನಗೆ ಮನುಷ್ಯನಾಗಿ ಕಂಡಿದ್ದೆ ನನಗೆ ಅನುಮಾನ. ನನ್ನ ಅಂತರಾಳಕ್ಕೆ ಇಳಿಯುವ ಪ್ರಯತ್ನವನ್ನೇ ನೀ ಮಾಡಲಿಲ್ಲ , ನನ್ನ ಸಮ್ಮತಿಯೇ ಇಲ್ಲದೇ ನನ್ನ ಮೇಲೆರಗಿದ ನೀನು ಅತ್ಯಾಚಾರಿಯಲ್ಲದೇ ಇನ್ನೇನು? ಮದುವೆ ಕೇವಲ ಕಾಮಕ್ಕೆ ಸಿಕ್ಕ ಲೈಸೆನ್ಸ್ ಅಲ್ಲ, ಅದು ಮನಸ್ಸುಗಳ ಹೊಂದಾಣಿಕೆ ಎಂದು ನಿನಗೆ ಅರ್ಥ ಮಾಡಿಸುವುದಾದರೂ ಹೇಗೆ ? ..........
ಇಲ್ಲ ನನ್ನ ದೇಹ ಮಾತ್ರ ನಿನಗೆ ,ನನ್ನ ಮನಸ್ಸು ಯಾವತ್ತೂ ನಿನಗೆ ಸಿಗುವುದಿಲ್ಲ, ಯಾವುದೇ ಕಾರಣಕ್ಕೂ ..........
ಬಾಗಿಲು ತೆಗೆದು, ಮತ್ತೆ ಮಲಗಿ ನನ್ನ ಗೆಳೆಯನ ಕನಸು ಕಾಣಲು ಯತ್ನಿಸಿದೆ. ಈಗ ನಾನು ನನ್ನ ಜೀವತಿಂಕೆ ಕಾಪಾಡಿಕೊಳ್ಳುವುದು ಕೇವಲ ಅವನ ನೆನಪುಗಳಿಂದ ಮಾತ್ರ .....................
ಮತ್ತೆ ಮಸೀದಿಯ 'ಅಲ್ಲಾ ಹೋ ಅಕ್ಬರ್ '..............
ಬಾಗಿಲು ತೆರೆದು ಬಂದು ಮಲಗಿದವಳಿಗೆ ಅವನ ನೆನಪು ಇವತ್ತು ಎಂದಿಗಿಂತಲೂ ಹೆಚ್ಚಾಗಿ ಕಾಡತೊಡಗಿದೆ. ಅವನ ಕುರಿತು ಏನೆಂದು ಹೇಳಲಿ? ನನ್ನ ಪತಿ ಅವನ ಪಾದದ ಧೂಳಿಗೆ ಸಮಾನ ಎಂದಷ್ಟೇ ಹೇಳಬಲ್ಲೆ. ಅಷ್ಟೇ ಮಾತು ಸಾಕು ಅವನ ವ್ಯಕ್ತಿತ್ವ ವಿಮರ್ಶೆಗೆ! ಅವನ ತುಂಟಕಣ್ಣುಗಳ ನೋಟವನ್ನು ಎದುರಿಸಲಾರದೆ ನಾಚಿದ್ದು ಎಷ್ಟು ಬಾರಿಯೋ ಲೆಕ್ಕವಿಲ್ಲ. ಅವನೂ ನನ್ನನ್ನು ಅಷ್ಟೇ ಹಚ್ಚಿಕೊಂಡಿದ್ದ ಎನಿಸುತ್ತದೆ. ನನ್ನ ಎಲ್ಲಾ ಭಾವನೆಗಳಿಗೆ ಸ್ಪಂದಿಸುತ್ತಿದ್ದ. ಆವತ್ತು ಕಾರಣ ಹೇಳದೆ ಅವನೆದುರು ಮುಖ ತಿರುಗಿಸಿ ಬಂದು, ಸ್ನೇಹದ ಕೊಂಡಿಯನ್ನು ಕಳಚಿ ಮದುವೆಯ ಸಪ್ತಪದಿ ತುಳಿದಿದ್ದೆ ನಾನು. ಇಂದಿಗೂ ಅವನ ಕುರಿತ ನೆನಪುಗಳೂ ಸಹ ಖುಷಿ ಕೊಡುವಷ್ಟು ಒಳ್ಳೆಯವನು ಆತ!
ಛೆ! ಅವನ ನೆನಪಿನಿಂದಲೋ ಅಥವಾ ಪತಿಯ ಹಿಂದಿರುವಿಕೆಯಿಂದಲೋ! ನಿದ್ರೆ ಹತ್ತದೆ ಎದ್ದು ಮುಖ ತೊಳೆದು ಅಡುಗೆಮನೆಗೆ ಬಂದೆ. ಎಲ್ಲೋ ದೂರದಲ್ಲಿ ಪುಟ್ಟ ಕಾಲ್ಗಳ ಗೆಜ್ಜೆಸದ್ದು, ತೊದಲುಮಾತು. "ಅಪ್ಪಾ, ಅಮ್ಮ ಯಾವಾಗ ಬರ್ತಾಳೆ? ದೇವರಿರುವ ಊರು ಇಲ್ಲಿಂದ ತುಂಬಾ ದೂರಾನಾ? ಅದ್ಕೇ ಅಮ್ಮಾ ಇನ್ನೂ ಬಂದಿಲ್ವಾ? ನಂಗೆ ಅಮ್ಮ ಬೇಕು" ಎಂದಿದ್ದನ್ನು ಕೇಳಿ ಕಿಟಕಿಯತ್ತ ಹೋದೆ. ಅಡುಗೆಮನೆಯ ಕಿಟಕಿಯಿಂದ ಎದುರುಮನೆಯ ಚಿತ್ರಣ ಸ್ಪಷ್ಟವಾಗಿ ಮೂಡಿತ್ತು. ಹೊಸದಾಗಿ ಬಂದವರಿರಬೇಕು. ಮಗಳ ಮಾತಿಗೆ ಉತ್ತರಿಸಲಾರದೆ ಅಪ್ಪ ತಬ್ಬಿಕೊಂಡು ಕಣ್ಣೀರಿಡುತ್ತಿದ್ದ. ಯಾರೆಂದು ನೋಡಿದೆ...... ಓಹ್!
ಅದೇ ನನ್ನ ತುಂಟಕಣ್ಣುಗಳ ಹುಡುಗ! ನನ್ನ ನೆನಪುಗಳಲ್ಲೇ ನನ್ನೊಡನೆ ಇರುತ್ತಿದ್ದ ಗೆಳೆಯ! ಆದರೀಗ ಅವನ ಕಂಗಳಲ್ಲಿ ಉತ್ಸಾಹವಿರಲಿಲ್ಲ. ಎಂದೂ ಕಾಣದಷ್ಟು ಆತಂಕವಿತ್ತು. "ಅದಿತಿ ಪುಟ್ಟಾ, ಅಮ್ಮ ಬೇಗ ಬಂದುಬಿಡ್ತಾಳೆ. ಆದರೆ ನೀ ಹಠಮಾಡದಿದ್ರೆ ಮಾತ್ರ. ಈಗ ಹಾಲು ಕುಡಿ ಬಾ" ಎನ್ನುತ್ತಾ ನನ್ನದೇ ಹೆಸರಿನ ಮಗುವನ್ನೆತ್ತಿಕೊಂಡು ಒಳಹೋದನವನನ್ನು ನೋಡಿ ಕಣ್ಣು ತೇವವಾಯಿತು.
ಮನಸ್ಸಲ್ಲೇನೋ ದ್ವಂದ್ವ. ಬಯಸಿದ್ದ ಹುಡುಗನನ್ನು ಕಣ್ಣೆದುರೇ ಕಂಡ ಖುಷಿ ಒಂದೆಡೆಯಾದರೆ, ಅವನ ಈಗಿನ ಸ್ಥಿತಿ ನೆನೆದು ಆಗುತ್ತಿರುವ ದುಃಖ ಇನ್ನೊಂದೆಡೆ. ಹಾಗೇ ಒಮ್ಮೆ ಯೋಚಿಸಿದೆ- ದುಸ್ತರವಾದ ನನ್ನ ಜೀವನವನ್ನು ನೆನೆದು ಅಳುತ್ತಾ ಕೂರುವ ಬದಲು ಒಂದೊಳ್ಳೆ ತಾಯಿಯಾಗೋಣ ಎನಿಸಿತು; ಆ ತಾಯಿಲ್ಲದ ಪುಟ್ಟ ಕಂದ ಹಾಗೂ ಅದರಪ್ಪ ಇಬ್ಬರಿಗೂ! ಮುಖದಲ್ಲಿ ಮಂದಹಾಸ ಮೂಡಿತು. ಏಕೋ ಮನೆಮುಂದೆ ರಂಗೋಲಿಯಿಡುವ ಮನಸ್ಸಾಯಿತು. ಬಾಗಿಲು ಸಾರಿಸಿ ಇಟ್ಟ ರಂಗೋಲಿಯಲ್ಲಿ ನವಿಲಿನ ಚಿತ್ತಾರ ಸೊಗಸಾಗಿ ಮೂಡಿಬಂದಿತ್ತು-ಮನಸ್ಸಿನಲ್ಲಿ ಮೂಡಿದ ಹೊಸಕನಸು-ಉತ್ಸಾಹಕ್ಕೆ ರಂಗುತುಂಬಿದಂತೆ!!

Y-ಜ್ಞಾನಿಕ

ನನಗೆ ಕೆಮಿಸ್ಟ್ರಿ ಬಹಳ ಇಷ್ಟ. ನನ್ನ ಮನೆಯಲ್ಲೇ ಪುಟ್ಟ ಲ್ಯಾಬ್ ಮಾಡಿಕೊಂಡಿದ್ದೇನೆ. ಮಧ್ಯಾನ್ಹ ಯಾವುದೋ ಗ್ರಾಫ್ ಹಿಡಿದುಕೊಂಡು ಅದಕ್ಕೆ equations ಡೆವಲಪ್ ಮಾಡುತ್ತಾ ಕೂತಿದ್ದೆ. ತಲೆ -ಬುಡ ಹರಿಯದೆ ಕಿಟಕಿಯಿಂದ ಆಚೆ ನೋಡಿದೆ. ನನ್ನ ಸ್ನೇಹಿತೆ ಅವರ ಮನೆ ಅಂಗಳದಲ್ಲಿ ಏನೋ ಚೇಷ್ಟೆ ಮಾಡುತ್ತಾ ಕುಳಿತಿದ್ದಳು ."ಹೆಲೋ ಡಾರ್ಲಿಂಗ್ "ಅಂದೆ. ಅವಳಿಗೆ ಅದೆಷ್ಟು ಬಾರಿ ಪ್ರಪೋಸ್ ಮಾಡಿದ್ದೇನೋ ನನಗೆ ಗೊತ್ತಿಲ್ಲ, ಅವಳು ಅದೆಷ್ಟು ಬಾರಿ ನಾಚಿ ನೀರಾಗಿದ್ದಳೋ?. ಏನಿಲ್ಲವೆಂದರೂ ಇಪ್ಪತ್ತು ವರ್ಷದ ಸ್ನೇಹ ನಮ್ಮದು. 
"ಏಯ್ ಏನೋ ಮಾಡ್ತಾ ಇದೀಯಾ ಹಂದಿ? " ಎಂದು ಕಿಚಾಯಿಸುತ್ತಾ ಒಳಬಂದಳು. "ನಿಂಗೆ ಪ್ರಪೋಸ್ ಮಾಡೋಕೆ ಕವನ ಬರೀತಾ ಇದೀನಿ ಕುನ್ನಿ "ಎಂದು ನಾನು ತಿರುಗೇಟು ನೀಡಿದೆ.
"ಮಂಕು ನಾನು sold out ಕಣೋ. "ಎಂದಳು . "ಬಿಡೆ ಮತ್ತೆ OLX ಅಲ್ಲಿ ಸಿಕ್ತೀಯಾ " ಎಂದೆ.
ನನ್ನ ಕೈ ಹಿಡಿದುಕೊಂಡು ಕಣ್ಣೀರು ಹಾಕತೊಡಗಿದಳು. ಅದೇ ಹಳೆಯ ಬಿಹೇವಿಯರಲ್ ಸೈಕಾಲಜಿಯ ಪಾಠ tears never lie. ಇವಳು ಹೊರಡಲು ರೆಡಿ!!.
ನನಗೆ ಕಳೆದುಕೊಳ್ಳುವುದು ಹೊಸದೇನೂ ಅಲ್ಲ. ದಿನದ ಮುಕ್ಕಾಲು ಹೊತ್ತು ಪುಸ್ತಕದ ಮುಂದೆ ಕುಳಿತುಕೊಳ್ಳುವ ನಾನು ಇನ್ನೊಂದೆರಡು ಗಂಟೆ ಜಾಸ್ತಿ ಕುಳಿತರೆ ಆಯಿತು .ಇನ್ನೆರಡು ಕವನ ಜಾಸ್ತಿ ಬರೆದರೆ ಮುಗಿಯಿತು.
ಆದರೆ ಅವಳು ಅತ್ತಿದ್ದೇಕೆ ಎಂಬುದು ಇನ್ನೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ನಾನೂ ಅಳಬೇಕಿತ್ತಾ?.....
ನಾನು ಜೋರಾಗಿ ನಗಲು ಶುರು ಮಾಡಿದೆ. ಕಣ್ಣೆಲ್ಲಾ ಉರಿ ಉರಿ. ನೈಟ್ರಸ್ ಆಕ್ಸೈಡಿನ ಕಮಟು ವಾಸನೆ ನನ್ನ ರೂಮೆಲ್ಲ ಹರಡಿತ್ತು

ಮಳ್ಗವಿತೆ-1

ಆಕೆ ಸಿಗುವುದಿಲ್ಲ
ನನ್ನ ನಿಸ್ವಾರ್ಥ ಪ್ರೀತಿಗೆ
ನನ್ನ ಕಾಳಜಿಗೆ
ಪ್ರೀತಿಸಿದ್ದಳು ಒಮ್ಮೆ
ನನ್ನ ಚಿನ್ನದ ಚೈನು, ವಾಚು
ಇನ್ನವಳು ಸಿಗುವುದು
ನನ್ನ ಕಲ್ಪನೆಯಲ್ಲಿ ಮಾತ್ರ
ಹುಸಿ ಮುನಿಸು, ಹಸಿ ಕನಸು
ನೆನಪುಗಳಷ್ಟೇ
ಕಾಲಗರ್ಭದಲ್ಲಿ ಹುದುಗಿಸಡಬೇಕು
ನಿನ್ನ ನೆನಪುಗಳ
ಆಗಾಗ ಆಸ್ಫೋಟಿಸುವ ಜ್ವಾಲಾಮುಖಿಯಂತೆ ಮತ್ತೆ ಬರದಿರು
ನನ್ನ ಕವಿತೆಯ ಅಕ್ಷರದ ಗೆರೆಗಳಲ್ಲಿ
ಸದಾ ನೀ ನನ್ನ ಗೆಳತಿ
ಅಲ್ಲಿ ಮಾತ್ರ ನೀ ಜೀವಂತ
ನನ್ನೆಲ್ಲಾ ಕನಸುಗಳ ಒಡತಿ
ಅದರಾಚೆಗೆ ಕರಿ ಕಪ್ಪ ಮೃತ್ಯು
ಮತ್ಯಾರದೋ ಕನಸಿನ ರಾಣಿ
ನನ್ನ ಹೆಜ್ಜೆಗಳಿಲ್ಲ ನಿನ್ನ ಹೃದಯದಲ್ಲಿ
ಇನ್ಯಾರದೋ ಕಪಟ ಪ್ರೀತಿಯ
ಹುಚ್ಚು ಪ್ರವಾಹಕ್ಕೆ ಅಳಿಸಿ ಹೋಗಿದೆ.
ನಿನ್ನ ಬಂಧನ ಬಿಡಿಸಿಕೊಂಡು
ಎಷ್ಟೋ ದೂರ ಬಂದಾಗಿದೆ
ಮತ್ತೆ ನಿನ್ನ ಹೃದಯದೊಳಗೆ
ಹೆಜ್ಜೆ ಇಡಲಾರದಷ್ಟು ದೂರ
ದೂರ ........ಇನ್ನಷ್ಟು ದೂರ ಹೋಗುವೆ ಗೆಳತಿ .......

ಮಳ್ಗವಿತೆ-2

ನಿಂತಿದ್ದಳವಳು ನಗರ ಸಾರಿಗೆ
ಬಸ್ಸಿನಲ್ಲಿ
ಮಜವಾಗಿ ಹಾಡು ಕೇಳುತ್ತಾ
ಕೂತಿದ್ದೆ ನನ್ನ ಪಾಡಿಗೆ ನಾನು
ಕೊನೆ ಸೀಟಲ್ಲಿ
ನನ್ನ ನೋಡಿ ನಕ್ಕಳು, ತುಸು
ನಾಚಿಕೆ
ನನ್ನೊಳಗೆ ಪ್ರಶ್ನೆ ನಾನೆ ಏಕೆ ?
ಹಾರಿತ್ತು ಮನದೊಳಗೆ ಬಣ್ಣದ ಚಿಟ್ಟೆ
ಕಳಿಸಿದೆ ನನ್ನವಳಿಗೆ ನಾ ನಿನ್ನ ಬಿಟ್ಟೆ
ಕೈಯಲ್ಲಿ ಐ ಫೋನು ಸಿಕ್ಸು
ನಾನಂದುಕೊಂಡೆ ಇವಳೇ ನನಗೆ ಫಿಕ್ಸು
ಅವಳ ತುಟಿಯ ಪಕದ್ಕ ಮಚ್ಚೆ
ನನ್ನ ಕೈಯಿಲಿರುವ ಹಚ್ಚೆ, ಎರಡೂ ಒಂದೇ ಬಣ್ಣ ...
ಹತ್ತಿರ ಬಂದಳು
ಕೇಳೆ ಬಿಟ್ಟಳು, ಕಾಲು ನೋವು ಸ್ವಲ್ಪ ಸೀಟು ಬಿಟ್ಕೊಡಿ ಅಣ್ಣ? ?
ಹೊಸ ಸೀರೆ ಬಂತೆಂದು
ಹಳೆ ಸೀರೆ ಬಿಚ್ಚೆಸೆದು ನಿಂತಿದ್ದೆ
ಅದೇ ನಗರ ಸಾರಿಗೆ ಬಸ್ಸಲ್ಲಿ ....

ತಿಗಣೆ ಪುರಾಣ

ನಿದ್ದೆ ಮಾಡುವವರಿಗೆ ತೊಂದರೆ ಕೊಟ್ಟರೆ ನೀನು ಮುಂದಿನ ಜನ್ಮದಲ್ಲಿ ತಿಗಣೆ ಆಗ್ತೀಯಾ ಅನ್ನೋ ಅರ್ಥದಲ್ಲಿ ನನ್ನ ಅಮ್ಮ ನನಗೆ ಬೈಯುತ್ತಿದ್ದರು. ನಿಜವಾಗಿಯೂ ಅದು ಅರ್ಥವಾಗಿದ್ದು ರಾತ್ರಿ ಪ್ರಯಾಣ ಮಾಡುವಾಗ, ಹಾಸ್ಟೆಲ್ ಸೇರಿದಾಗ. ನನ್ನ ಪ್ರೇಯಸಿಯೂ ನನ್ನ ಅಷ್ಟು ನಿದ್ದೆಗೆಡುವಂತೆ ಮಾಡಿರಲಿಲ್ಲ. ಮಧ್ಯರಾತ್ರಿ ನಿದ್ದೆ ಶತಾಬ್ದಿ ಎಕ್ಸ್‌ಪ್ರೆಸ್ ಕಿಂತ ಜೋರಾಗಿ ಬರುವ ಸಮಯದಲ್ಲಿ ಈ ತಿಗಣೆಗಳು ಮೊಹಮ್ಮದ್ ಘಜ್ನಿಯಂತೆ ದಂಡೆತ್ತಿ ಬರುತ್ತವೆ. ಮಾನವೀಯತೆಯಲ್ಲಿ ಮಲೆನಾಡಿನ ಉಂಬಳಗಳೇ ತಿಗಣೆಗಿಂತ ಮೇಲು. ಕೊನೇ ಪಕ್ಷ ಅವುಗಳು ಕಚ್ಚಿದ್ದು ಗೊತ್ತೇ ಆಗುವುದಿಲ್ಲ .ಪುರಾಣದಲ್ಲಿ ಬರುವ ರಕ್ತ ಬೀಜಾಸುರನಂತೆ ಈ ತಿಗಣೆಗಳು, ಒಂದು ಸಾಯಿಸಿದರೆ ಇನ್ನೊಂದು, ಮತ್ತೊಂದು ಹುಟ್ಟಿಕೊಳ್ಳುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಯಾವ ಕೆಮಿಕಲ್ ಗಳು ಇದರ ಮೇಲೆ ಪರಿಣಾಮ ಬೀರುವುದಿಲ್ಲ. ಮಾನವ ಭೂಮಿಯ ಮೇಲೆ ಕಾಲಿಡುವುದಕ್ಕೂ ಕೋಟಿ ಕೋಟಿ ವರ್ಷಗಳ ಮೊದಲೇ ಇವು ಜನಿಸಿವೆ .ಹಾಗಾದರೆ ಇವು ಮೊದಲಿಗೆ ಏನು ಕುಡಿದು ಅಥವಾ ತಿಂದು ಬದುಕುತ್ತಿತ್ತು? ಮಾನವನ ರಕ್ತ ಕುಡಿಯಲಿಕ್ಕೆ ಮಾನವ ಹುಟ್ಟಿರಲೇ ಇಲ್ಲವಲ್ಲ ? . ನಾನು Darwin's theory ಪಾಠ ಮಾಡುವಾಗ ಕ್ಲಾಸ್ ಬಂಕ್ ಮಾಡಿದ್ದೆ ,ತಪ್ಪು ಮಾಡಿ ಬಿಟ್ಟೆನಾ?
ಆದರೂ ಕೆಲವೊಂದು ಪರಿಹಾರ ಕಂಡುಕೊಂಡಿದ್ದೇನೆ. ತಿಗಣೆ ಸಂಪೂರ್ಣವಾಗಿ ಹೋಗಬೇಕು ಎಂದಾದರೆ :
1.ಪೂರ್ತಿ ಮನೆಗೆ ಬೆಂಕಿ ಹಾಕಬೇಕು
2.ಇಡೀ ಮನೆಯನ್ನು ನೀರಿನಲ್ಲಿ ಮುಳುಗಿಸಿಡಬೇಕು.
3.ನಾವೇ ವಿಷ ಕುಡಿದು ಮಲಗಬೇಕು, ನಮ್ಮ ರಕ್ತ ಕುಡಿದ ಅವು ಸಾಯುತ್ತವೆ.
ಒಟ್ಟಿನಲ್ಲಿ ಕೆರೆದು ಕೆರೆದು ಮುಖ-ಮೂತಿ ಕೆಂಪು ಮಾಡಿಕೊಂಡಿದ್ದೆ ಬಂತು, ತಿಗಣೆ ಮಾತ್ರ ಹೋಗಲಿಲ್ಲ

ಸಂಯಮ


ನನ್ನೆಲ್ಲಾ ನಿದ್ರಾಹೀನ ರಾತ್ರಿಗಳಿಗೆ ಅದೊಂದೆ ಘಟನೆ ಕಾರಣ ,ಕೇವಲ ಅದೊಂದೆ ಘಟನೆಯಾ ? .........
ಅಂದು ರಾತ್ರಿ ನಾನು ಭೋರ್ಗರೆದು ಬಿಡಬಿಹುದಿತ್ತು. ಸುತ್ತಲೂ ಕಾಡು, ನೀರವ ಮೌನ, ನೀರಿನ ಜುಳು ಜುಳು ನಿನಾದ, ಪಕ್ಕದಲ್ಲಿ ಹರೆಯ ಉಕ್ಕಿ ಹರಿಯುತ್ತಿದ್ದ ಹುಡುಗಿ. ಅವತ್ತೇ ಅವಳ ಮೇಲೆ ಭೋರ್ಗರೆದು ನನ್ನ ಗಂಡಸುತನ ಪ್ರದರ್ಶನ ಮಾಡಿಬಿಡಬಹುದಿತ್ತು. ಕಂಠದವರೆಗೆ ವೈನ್ ಕುಡಿದಿದ್ದ ಅವಳಿಗೆ ಮೈಮೇಲಿನ ಪರಿವೇ ಇರಲಿಲ್ಲ. ಎಲ್ಲ ಪ್ರೀತಿಯ ತಾಯಿ ಬೇರು ವಾಂಛೆ. ನಾನು ಅವಳನ್ನು ಪ್ರೀತಿಸಿದ್ದು ಕೂಡ ಕೇವಲ ದೈಹಿಕ ಆಕರ್ಷಣೆಯ ?.....ಇಲ್ಲ ಖಂಡಿತ ಅಲ್ಲ, ನನ್ನ ಕನಸುಗಳ ಒಟ್ಟು ಮೊತ್ತವೇ 'ಅಂಕಿತ ' . ಬಹುಶಃ ನನ್ನ ಜೀವನದಲ್ಲಿ ನಾನು ಊಹಿಸಿಕೊಂಡ ಹುಡುಗಿ ಅವಳೊಬ್ಬಳೇ. ಮನೆಯಲ್ಲಿ ಆಸ್ತಿ , ವಿದ್ಯೆ, ,ಸಂಸ್ಕಾರವಿದ್ದ ನನಗೆ ಅಹಂ ಬಂದಿತ್ತು ಅಥವಾ ಇನ್ನೂ ಇದೆ. ಆದರೆ ಅವತ್ತು ನನ್ನೆಲ್ಲಾ ಹಮ್ಮು ಬಿಟ್ಟು ಕೇವಲ 'ಆದಿ ' ಆಗಿದ್ದೆ . ಜಾವದ ಚಳಿ ತಾಕದೇ ಇರಲಿ ಎಂದು ಅವಳಿಗೆ ಬೆಡ್ ಶೀಟ್ ಹೊದಿಸಿ , ಅವಳ ಮುಂಗುರುಳು ಸರಿಪಡಿಸಿ ಕುರ್ಚಿಗೆ ತಲೆಯಾನಿಸಿ ಕುಳಿತೆ.